ಮಾಹಿತಿ ಇರುವಲ್ಲಿ ಹೋಗಲು

ಬೈಬಲ್‌ ವಚನಗಳ ವಿವರಣೆ

ಆದಿಕಾಂಡ 1:1—“ಆರಂಭದಲ್ಲಿ ದೇವರು ಆಕಾಶ, ಭೂಮಿ ಸೃಷ್ಟಿ ಮಾಡಿದನು”

ಆದಿಕಾಂಡ 1:1—“ಆರಂಭದಲ್ಲಿ ದೇವರು ಆಕಾಶ, ಭೂಮಿ ಸೃಷ್ಟಿ ಮಾಡಿದನು”

 “ಆರಂಭದಲ್ಲಿ ದೇವರು ಆಕಾಶ, ಭೂಮಿ ಸೃಷ್ಟಿ ಮಾಡಿದನು.”—ಆದಿಕಾಂಡ 1:1, ಹೊಸ ಲೋಕ ಭಾಷಾಂತರ.

 “ಆದಿಯಲ್ಲಿ ದೇವರು ಆಕಾಶವನ್ನೂ, ಭೂಮಿಯನ್ನೂ ಸೃಷ್ಟಿಸಿದನು.”—ಆದಿಕಾಂಡ 1:1, ಪವಿತ್ರ ಗ್ರಂಥ.

ಆದಿಕಾಂಡ 1:1—ಅರ್ಥ

 ಬೈಬಲಿನ ಈ ಮೊದಲನೇ ವಾಕ್ಯ ಎರಡು ಪ್ರಾಮುಖ್ಯ ಸತ್ಯಗಳನ್ನು ತಿಳಿಸುತ್ತದೆ. ಒಂದು, ‘ಆಕಾಶ ಭೂಮಿ’ ಅಂದರೆ ವಿಶ್ವಕ್ಕೆ ಆರಂಭ ಇತ್ತು. ಇನ್ನೊಂದು, ಅವುಗಳನ್ನು ಸೃಷ್ಟಿಸಿದ್ದು ದೇವರು.—ಪ್ರಕಟನೆ 4:11.

 ಎಷ್ಟು ವರ್ಷಗಳ ಹಿಂದೆ ದೇವರು ಈ ವಿಶ್ವವನ್ನು ಸೃಷ್ಟಿಸಿದನು, ಹೇಗೆ ಸೃಷ್ಟಿಸಿದನು ಅಂತ ಬೈಬಲ್‌ ಹೇಳಲ್ಲ. ಆದರೆ ‘ಆತನ ಅಪಾರ ಶಕ್ತಿಯಿಂದ, ಭಯವಿಸ್ಮಯ ಹುಟ್ಟಿಸೋ ಆತನ ಬಲದಿಂದ’ ಈ ವಿಶ್ವವನ್ನು ದೇವರು ಸೃಷ್ಟಿ ಮಾಡಿದನು ಎಂದು ಬೈಬಲ್‌ ಹೇಳುತ್ತೆ.—ಯೆಶಾಯ 40:26.

 “ಸೃಷ್ಟಿ ಮಾಡಿದನು” ಅನ್ನೋದಕ್ಕೆ ಇರುವ ಹೀಬ್ರು ಪದವನ್ನು ದೇವರು ಮಾಡುವ ಕೆಲಸಕ್ಕೆ a ಮಾತ್ರ ಬಳಸಲಾಗಿದೆ. ಯೆಹೋವ b ದೇವರು ಮಾತ್ರ ಸೃಷ್ಟಿಕರ್ತ ಅಂತ ಬೈಬಲ್‌ ಹೇಳುತ್ತೆ.—ಯೆಶಾಯ 42:5; 45:18.

ಆದಿಕಾಂಡ 1:1—ಸಂದರ್ಭ

 ಆದಿಕಾಂಡ 1:1 ರಲ್ಲಿರುವ ಮಾತು ಸೃಷ್ಟಿ ಹೇಗಾಯ್ತು ಅನ್ನೋ ವಿವರವನ್ನು (ಆದಿಕಾಂಡ 1 ಮತ್ತು 2 ನೇ ಅಧ್ಯಾಯ) ಪರಿಚಯಿಸುತ್ತದೆ. ಭೂಮಿ, ಅದರಲ್ಲಿರೋ ಎಲ್ಲ ಜೀವಿಗಳು, ಮೊದಲ ಗಂಡು-ಹೆಣ್ಣನ್ನು ದೇವರು ಹೇಗೆ ಸೃಷ್ಟಿಮಾಡಿದನು ಅಂತ ಆದಿಕಾಂಡ 1:1 ರಿಂದ 2:4 ಚುಟುಕಾಗಿ ವಿವರಿಸುತ್ತೆ. ನಂತರದ ವಚನಗಳಲ್ಲಿ ಗಂಡು-ಹೆಣ್ಣಿನ ಸೃಷ್ಟಿಯ ಬಗ್ಗೆ ಬೈಬಲ್‌ ಹೆಚ್ಚು ವಿವರ ಕೊಡುತ್ತೆ.—ಆದಿಕಾಂಡ 2:7-25.

 ಆರು ‘ದಿನಗಳಲ್ಲಿ’ ದೇವರು ಸೃಷ್ಟಿ ಕೆಲಸ ಮಾಡಿದನು ಅಂತ ಆದಿಕಾಂಡ ತಿಳಿಸುತ್ತೆ. ಇಲ್ಲಿ ದಿನ ಅಂತ ಹೇಳುವಾಗ 24 ಗಂಟೆಗಳ ದಿನ ಅಲ್ಲ, ಬದಲಿಗೆ ಒಂದು ಸಮಯಾವಧಿ ಆಗಿದೆ. ಇಷ್ಟು ಸಮಯ ಅಂತ ಹೇಳಲಿಕ್ಕೆ ಆಗಲ್ಲ. “ದಿನ” ಅನ್ನುವ ಪದವನ್ನು 24 ಗಂಟೆಗೆ ಮಾತ್ರವಲ್ಲ ಸಮಯಾವಧಿಗೂ ಉಪಯೋಗಿಸಬಹುದು. ಇದಕ್ಕೊಂದು ಉದಾಹರಣೆ ಆದಿಕಾಂಡ 2:4. ಈ ವಚನದಲ್ಲಿ ಆರು ದಿನಗಳಲ್ಲಿ ದೇವರು ಮಾಡಿದ ಸೃಷ್ಟಿ ಕೆಲಸಗಳನ್ನು ಒಂದೇ ‘ದಿನದಲ್ಲಿ’ ಆಗಿರುವ ಹಾಗೆ ಚುಟುಕಾಗಿ ಹೇಳಿದೆ.

ಆದಿಕಾಂಡ 1:1—ತಪ್ಪು ಕಲ್ಪನೆ

 ತಪ್ಪು: ಕೆಲವು ಸಾವಿರ ವರ್ಷಗಳ ಹಿಂದೆ ದೇವರು ವಿಶ್ವವನ್ನು ಸೃಷ್ಟಿ ಮಾಡಿದ್ದಾನೆ.

 ಸರಿ: ವಿಶ್ವವನ್ನು ದೇವರು ಯಾವಾಗ ಸೃಷ್ಟಿ ಮಾಡಿದನು ಅಂತ ಬೈಬಲ್‌ ಹೇಳಲ್ಲ. ವಿಶ್ವ ನೂರು ಕೋಟಿ ವರ್ಷಗಳಷ್ಟು ಹಳೇದು ಅಂತ ವಿಜ್ಞಾನಿಗಳು ನಂಬುವುದನ್ನು ಆದಿಕಾಂಡ 1:1 ತಪ್ಪು ಅಂತ ಹೇಳಲ್ಲ. c

 ತಪ್ಪು: ಹೀಬ್ರುವಿನಲ್ಲಿ ಆದಿಕಾಂಡ 1:1 ರಲ್ಲಿರೋ “ದೇವರು” ಪದ ಬಹುವಚನದಲ್ಲಿದೆ. ಹಾಗಾಗಿ ಇದು ತ್ರಿಯೇಕ ದೇವರು ಅಂತ ಜನ ಹೇಳ್ತಾರೆ.

 ಸರಿ: ಈ ವಚನದಲ್ಲಿ “ದೇವರು” ಅನ್ನುವುದಕ್ಕಿರುವ ಹೀಬ್ರು ಪದ ‘ಎಲೋಹಿಮ್‌.’ ಇದು ಬಹುವಚನದಲ್ಲಿದೆ. ಆದ್ರೆ ಇದು ಮಹಿಮೆ ಮತ್ತು ಶ್ರೇಷ್ಠತೆಯನ್ನು ಸೂಚಿಸುತ್ತದೆಯೇ ವಿನಃ ಒಬ್ಬರಿಗಿಂತ ಹೆಚ್ಚು ಮಂದಿ ಇದ್ದಾರೆ ಅಂತ ಸೂಚಿಸಲ್ಲ. ಇದರ ಬಗ್ಗೆ ನ್ಯೂ ಕ್ಯಾಥೊಲಿಕ್‌ ಎನ್‌ಸೈಕ್ಲಪೀಡಿಯ ಹೀಗೆ ಹೇಳುತ್ತೆ: ಆದಿಕಾಂಡ 1:1 ರಲ್ಲಿರೋ ‘ಎಲೋಹಿಮ್‌’ ಅನ್ನುವ ಬಹುವಚನದ ಜೊತೆಗೆ ಬರುವ “ಕ್ರಿಯಾಪದ ಯಾವಾಗಲೂ ಏಕವಚನದಲ್ಲಿದೆ. ಶ್ರೇಷ್ಠತೆಯನ್ನು ಸೂಚಿಸಲು ಆ ಬಹುವಚನವನ್ನು ಉಪಯೋಗಿಸಲಾಗಿದೆ. ಉದಾಹರಣೆಗೆ, ಒಬ್ಬ ರಾಜ ತನ್ನ ಬಗ್ಗೆ ಹೇಳುವಾಗ ‘ನಾವು’ ಅಂತ ಹೇಗೆ ಬಹುವಚನ ಉಪಯೋಗಿಸ್ತಾನೋ ಹಾಗೆ. ಆದರೆ ಆ ಪದ ಒಬ್ಬರಿಗಿಂತ ಹೆಚ್ಚು ಜನರನ್ನು ಸೂಚಿಸಲ್ಲ.”—ಎರಡನೇ ಆವೃತ್ತಿ, ಸಂಪುಟ 6, ಪುಟ 272.

ಆದಿಕಾಂಡ ಅಧ್ಯಾಯ 1 ಓದಿ. ಜೊತೆಗೆ ಪಾದಟಿಪ್ಪಣಿಗಳನ್ನು ಮತ್ತು ಅಡ್ಡ ಉಲ್ಲೇಖಗಳನ್ನು ಸಹ ಓದಿ.

a ಈ ಪದದ ಬಗ್ಗೆ HCSB ಸ್ಟಡಿ ಬೈಬಲಿನ ಪುಟ 7 ರಲ್ಲಿ ಹೀಗಿದೆ: ‘ಸೃಷ್ಟಿ ಮಾಡು’ ಅನ್ನೋದಕ್ಕೆ ಹೀಬ್ರು ಕ್ರಿಯಾಪದ ಬಾರಾ ಎಂದಾಗಿದೆ. ದೇವರು ಮಾತ್ರ ಮಾಡಿರುವ ಕೆಲಸಕ್ಕೆ ಬಾರಾ ಪದವನ್ನು ಬಳಸಲಾಗಿದೆ. ಆದ್ರೆ ಮನುಷ್ಯ ಮಾಡಿರುವ ಕೆಲಸಕ್ಕೆ ಸೂಚಿಸೋ ಯಾವ ವಾಕ್ಯದಲ್ಲೂ ಬಾರಾ ಪದವನ್ನ ಉಪಯೋಗಿಸಿಲ್ಲ.

b ಯೆಹೋವ ಅನ್ನೋದು ದೇವರ ಹೆಸರು.—ಕೀರ್ತನೆ 83:18.

c “ಆರಂಭದಲ್ಲಿ” ಅನ್ನುವುದಕ್ಕಿರುವ ಹೀಬ್ರು ಪದದ ಬಗ್ಗೆ ದಿ ಎಕ್ಸ್‌ಪೊಸಿಟರ್ಸ್‌ ಬೈಬಲ್‌ ಕಾಮೆಂಟರಿ ಹೀಗೆ ಹೇಳುತ್ತೆ: “‘ಆರಂಭದಲ್ಲಿ’ ಅನ್ನೋ ಪದ ಇಷ್ಟೇ ಸಮಯ, ಇಷ್ಟೇ ವರ್ಷ ಅಂತ ಹೇಳಲ್ಲ.”—ಪರಿಷ್ಕೃತ ಆವೃತ್ತಿ, ಸಂಪುಟ 1, ಪುಟ 51.