ಮಾಹಿತಿ ಇರುವಲ್ಲಿ ಹೋಗಲು

ವಯಸ್ಸಾದ ಅಪ್ಪ-ಅಮ್ಮನನ್ನ ನೋಡ್ಕೊಳ್ಳೋದ್ರ ಬಗ್ಗೆ ಬೈಬಲ್‌ ಏನ್‌ ಹೇಳುತ್ತೆ?

ವಯಸ್ಸಾದ ಅಪ್ಪ-ಅಮ್ಮನನ್ನ ನೋಡ್ಕೊಳ್ಳೋದ್ರ ಬಗ್ಗೆ ಬೈಬಲ್‌ ಏನ್‌ ಹೇಳುತ್ತೆ?

ಬೈಬಲ್‌ ಉತ್ತರ

 ಮಕ್ಕಳು ದೊಡ್ಡವರಾದ ಮೇಲೆ ವಯಸ್ಸಾದ ಹೆತ್ತವರನ್ನ ನೋಡ್ಕೊಬೇಕು ಅಂತ ಬೈಬಲ್‌ ಹೇಳುತ್ತೆ. “ಮೊದಲಾಗಿ ಅವರು ತಮ್ಮ ಸ್ವಂತ ಮನೆವಾರ್ತೆಯಲ್ಲಿ ದೇವಭಕ್ತಿಯನ್ನು ಅಭ್ಯಾಸಿಸಿ ತಮ್ಮ ಹೆತ್ತವರಿಗೂ ಅಜ್ಜಅಜ್ಜಿಯರಿಗೂ ಸಲ್ಲತಕ್ಕದ್ದನ್ನು ಸಲ್ಲಿಸುತ್ತಾ ಇರಲು ಕಲಿಯಲಿ; ಇದು ದೇವರ ದೃಷ್ಟಿಯಲ್ಲಿ ಸ್ವೀಕಾರಾರ್ಹವಾಗಿದೆ” ಅಂತ ಬೈಬಲ್‌ ಹೇಳುತ್ತೆ. (1 ತಿಮೊತಿ 5:4) ಮಕ್ಕಳು ದೊಡ್ಡವರಾದ ಮೇಲೆ ವಯಸ್ಸಾದ ಹೆತ್ತವರನ್ನ ನೋಡ್ಕೊಂಡ್ರೆ ತಂದೆತಾಯಿಗಳನ್ನ ಸನ್ಮಾನಿಸಿ ಅನ್ನೋ ಬೈಬಲಲ್ಲಿ ಹೇಳಿದ ಆಜ್ಞೆಯನ್ನ ಪಾಲಿಸಿದ ಹಾಗೆ ಆಗುತ್ತೆ.—ಎಫೆಸ 6:2, 3.

 ಬೈಬಲಲ್ಲಿ ವಯಸ್ಸಾದ ಹೆತ್ತವರನ್ನ ಹೇಗೆ ನೋಡ್ಕೊಬೇಕು ಅಂತ ಇಂಚಿಂಚು ಮಾಹಿತಿ ಕೊಡಲಿಲ್ಲ. ಆದ್ರೆ ಅದ್ರಲ್ಲಿ ಅಪ್ಪ-ಅಮ್ಮನ ಚೆನ್ನಾಗಿ ನೋಡ್ಕೊಂಡ ನಂಬಿಗಸ್ತರ ಉದಾಹರಣೆಗಳನ್ನ ಕೊಡಲಾಗಿದೆ. ಹೆತ್ತವರನ್ನ ನೋಡ್ಕೊಳ್ಳೋಕೆ ಸಹಾಯ ಆಗುವಂತ ಸಲಹೆಗಳೂ ಅದ್ರಲ್ಲಿ ಇದೆ.

 ಬೈಬಲ್‌ ಸಮಯದಲ್ಲಿ ವಯಸ್ಸಾದ ಅಪ್ಪ-ಅಮ್ಮನನ್ನ ಹೇಗೆ ನೋಡ್ಕೊಳ್ತಿದ್ರು?

 ಅವ್ರು ತಮ್ಮ ಪರಿಸ್ಥಿತಿಗನುಸಾರ ಬೇರೆ-ಬೇರೆ ರೀತಿಯಲ್ಲಿ ತಮ್ಮ ಅಪ್ಪ-ಅಮ್ಮನನ್ನ ನೋಡ್ಕೊಂಡ್ರು.

  •   ಯೋಸೇಫ ಇದ್ದಲ್ಲಿಂದ ಅವನ ತಂದೆ ಯಾಕೋಬ ತುಂಬಾ ದೂರದಲ್ಲಿದ್ದ. ಯೋಸೇಫನಿಗೆ ಅನುಕೂಲ ಆದಾಗ ತಂದೆಯನ್ನ ತನ್ನ ಬಳಿ ಕರೆಸ್ಕೊಂಡ. ಯೋಸೇಫ ತನ್ನ ತಂದೆಗೆ ಮನೆ ಮತ್ತು ಊಟದ ವ್ಯವಸ್ಥೆ ಮಾಡಿಕೊಟ್ಟ. ಸುರಕ್ಷತೆ ಕೂಡ ಕೊಟ್ಟಿದ್ದ.—ಆದಿಕಾಂಡ 45:9-11; 47:11, 12.

  •   ರೂತಳು ತನ್ನ ಅತ್ತೆಯ ದೇಶಕ್ಕೆ ಬಂದು ವಾಸಿಸಿದಳು. ಅಲ್ಲಿ ತನ್ನ ಅತ್ತೆಯನ್ನ ಚೆನ್ನಾಗಿ ನೋಡ್ಕೊಂಡಳು.—ರೂತ್‌ 1:16; 2:2, 17, 18, 23.

  •   ಯೇಸು ತನ್ನ ಮರಣಕ್ಕೆ ಮುಂಚೆ ತನ್ನ ವಿಧವೆ ತಾಯಿಯನ್ನ ನೋಡಕೊಳ್ಳಲು ಒಬ್ಬ ಶಿಷ್ಯನನ್ನ ಆರಿಸ್ಕೊಂಡ.—ಯೋಹಾನ 19:26, 27. a

 ವಯಸ್ಸಾದ ಹೆತ್ತವರನ್ನ ನೋಡ್ಕೊಳ್ಳೋಕೆ ಸಹಾಯವಾಗುವಂಥ ಯಾವ ಸಲಹೆ ಬೈಬಲಿನಲ್ಲಿ ಇದೆ?

 ವಯಸ್ಸಾದ ಹೆತ್ತವರನ್ನ ನೋಡ್ಕೊಳ್ಳೋದು ಅಷ್ಟು ಸುಲಭ ಅಲ್ಲ. ನಾವು ಶಾರೀರಿಕವಾಗಿ ಮತ್ತು ಭಾವನಾತ್ಮಕವಾಗಿ ಒತ್ತಡಕ್ಕೆ ಒಳಗಾಗುತ್ತೇವೆ. ಇದಕ್ಕೆ ಬೈಬಲ್‌ ತತ್ವ ನಮ್ಗೆ ಸಹಾಯ ಮಾಡುತ್ತೆ.

  •   ತಂದೆತಾಯಿಗಳನ್ನು ಸನ್ಮಾನಿಸಿ.

     ಬೈಬಲಲ್ಲಿ ಹೀಗಿದೆ: “ನಿನ್ನ ತಂದೆತಾಯಿಗಳನ್ನು ಸನ್ಮಾನಿಸಬೇಕು.”—ವಿಮೋಚನಕಾಂಡ 20:12.

     ಈ ತತ್ವವನ್ನ ಹೇಗೆ ಅನ್ವಯಿಸೋದು? ನೀವು ಅವ್ರನ್ನ ನೋಡ್ಕೊಳ್ಳುವಾಗ ಅವ್ರಿಗೆ ಎಷ್ಟು ಆಗುತ್ತೋ ಅಷ್ಟು ಮಾಡೋಕೆ ಬಿಡಿ. ಇದ್ರ ಮೂಲಕ ಅವ್ರನ್ನ ಸನ್ಮಾನಿಸ್ತೀರಿ ಅಂತ ತೋರಿಸ್ಕೊಡ್ತೀರ. ಅವ್ರನ್ನ ಹೇಗೆ ನೋಡ್ಕೊಳ್ಳಬೇಕು ಅನ್ನೋದ್ರ ಬಗ್ಗೆ ಆದಷ್ಟು ಅವ್ರಿಗೇ ನಿರ್ಣಯ ಮಾಡೋಕೆ ಬಿಟ್ಟುಬಿಡಿ. ಅದ್ರ ಜೊತೆಗೆ ನಿಮ್ಮಿಂದ ಆಗುವಷ್ಟು ಅವ್ರನ್ನ ನೋಡ್ಕೊಳ್ಳಿ. ಇದ್ರ ಮೂಲಕನೂ ಅವ್ರನ್ನ ಸನ್ಮಾನಿಸ್ತೀರಿ.

  •   ಪರಿಸ್ಥಿತಿಯನ್ನ ಅರ್ಥ ಮಾಡ್ಕೊಳ್ಳಿ ಮತ್ತು ಕ್ಷಮಿಸಿ.

     ಬೈಬಲಲ್ಲಿ ಹೀಗಿದೆ: “ಮನುಷ್ಯನ ವಿವೇಕವು ಅವನ ಸಿಟ್ಟಿಗೆ ಅಡ್ಡಿ; [ಪರರ] ದೋಷವನ್ನು ಲಕ್ಷಿಸದಿರುವದು ಅವನಿಗೆ ಭೂಷಣ.”—ಜ್ಞಾನೋಕ್ತಿ 19:11.

     ಈ ತತ್ವವನ್ನ ಹೇಗೆ ಅನ್ವಯಿಸೋದು? ನಿಮ್ಮ ವಯಸ್ಸಾದ ಅಪ್ಪ-ಅಮ್ಮ ನಿಮ್ಗೆ ನೋವು ಆಗೋ ರೀತಿಯಲ್ಲಿ ಮಾತಾಡಿದ್ರೆ ಅಥವಾ ನೀವು ಮಾಡೋ ಕೆಲಸಕ್ಕೆ ಬೆಲೆ ಕೊಡ್ತಿಲ್ಲ ಅಂದ್ರೆ ಅವ್ರು ಯಾಕೆ ಹೀಗೆ ಮಾಡ್ತಿದ್ದಾರೆ ಅಂತ ಅರ್ಥ ಮಾಡ್ಕೊಳ್ಳೋಕೆ ಪ್ರಯತ್ನಿಸಿ. ನಿಮ್ಮನ್ನೇ ಹೀಗೆ ಕೇಳ್ಕೊಳ್ಳಿ, ‘ಅವ್ರಿರೋ ಸ್ಥಿತಿಯಲ್ಲೇ ನಾನು ಇದ್ದಿದ್ರೆ ಮತ್ತು ಅವ್ರಿಗಿರೋ ಟೆನ್ಶನ್‌ ನನಗಿದ್ದಿದ್ರೆ ನನ್ಗೆ ಹೇಗೆ ಅನಿಸ್ತಿತ್ತು?’ ಈ ತರ ಯೋಚನೆ ಮಾಡೋದ್ರಿಂದ ಅವ್ರ ಪರಿಸ್ಥಿತಿಯನ್ನ ಒಳ್ಳೇ ರೀತಿಯಲ್ಲಿ ಅರ್ಥ ಮಾಡ್ಕೊಳ್ಳೋಕಾಗುತ್ತೆ. ಅಲ್ಲದೆ ಅವ್ರ ಮಾತನ್ನ ನೀವು ಮನಸ್ಸಿಗೆ ತಗೊಳ್ಳಲ್ಲ. ಇದ್ರಿಂದ ನಿಮ್ಮ ಮಧ್ಯೆ ಭಿನ್ನಾಭಿಪ್ರಾಯ ಕಡಿಮೆ ಆಗುತ್ತೆ.

  •   ಬೇರೆಯವರ ಸಲಹೆ ಕೇಳಿ

     ಬೈಬಲಲ್ಲಿ ಹೀಗಿದೆ: “ಯೋಚನೆ ಹೇಳುವವರಿಲ್ಲದೆ ಉದ್ದೇಶಗಳು ನೆರವೇರವು, ಬಹು ಮಂದಿ ಆಲೋಚನಾಪರರಿರುವಲ್ಲಿ ಈಡೇರುವವು.”—ಜ್ಞಾನೋಕ್ತಿ 15:22.

     ಈ ತತ್ವವನ್ನ ಹೇಗೆ ಅನ್ವಯಿಸೋದು? ವಯಸ್ಸಾದ ನಿಮ್ಮ ಅಪ್ಪ-ಅಮ್ಮನನ್ನ ಚೆನ್ನಾಗಿ ನೋಡ್ಕೊಳ್ಳೋಕೆ ಅವ್ರ ಆರೋಗ್ಯ ಸಮಸ್ಯೆಯ ಬಗ್ಗೆ ಸಂಶೋಧನೆ ಮಾಡಿ ತಿಳ್ಕೊಳ್ಳಿ. ವೃದ್ಧರನ್ನ ನೋಡ್ಕೊಳ್ಳಿಕ್ಕಾಗಿ ಸರಕಾರದಿಂದ ಯಾವೆಲ್ಲ ಸೇವಾ-ಸೌಲಭ್ಯ ಲಭ್ಯವಿದೆ ಅಂತ ತಿಳ್ಕೊಳ್ಳಿ. ಈಗಾಗಲೇ ವಯಸ್ಸಾದ ಹೆತ್ತವರನ್ನ ನೋಡ್ಕೊಳ್ತಿದ್ದವ್ರ ಜೊತೆ ಮಾತಾಡಿ. ಮಕ್ಕಳೆಲ್ಲ ಸೇರಿ ಅಪ್ಪ-ಅಮ್ಮನಿಗೆ ಯಾವ ರೀತಿಯ ಸಹಾಯ ಬೇಕಿದೆ? ಅದನ್ನ ಹೇಗೆ ಕೊಡೋದು? ಪ್ರತಿಯೊಬ್ಬರು ಇದ್ರಲ್ಲಿ ಹೇಗೆ ಕೈಜೋಡಿಸಬಹುದು? ಅಂತ ಮಾತಾಡ್ಕೊಂಡ್ರೆ ಚೆನ್ನಾಗಿರುತ್ತೆ.

    ಕುಟುಂಬದವರೆಲ್ಲರು ಸೇರಿ ವಯಸ್ಸಾದ ಅಪ್ಪ-ಅಮ್ಮನ ನೋಡ್ಕೊಳ್ಳೋದ್ರ ಬಗ್ಗೆ ಮಾತಾಡಿ

  •   ದೀನರಾಗಿರಿ

     ಬೈಬಲಲ್ಲಿ ಹೀಗಿದೆ: “ದೀನರಲ್ಲಿ ಜ್ಞಾನ.”—ಜ್ಞಾನೋಕ್ತಿ 11:2.

     ಈ ತತ್ವವನ್ನ ಹೇಗೆ ಅನ್ವಯಿಸೋದು? ನಿಮಗಿರೋ ಸಾಮರ್ಥ್ಯವನ್ನ ಅರ್ಥ ಮಾಡ್ಕೊಳ್ಳಿ. ಪ್ರತಿಯೊಬ್ಬರಿಗೂ ಒಂದೇ ತರ ಸಮಯ ಇರಲ್ಲ, ಒಂದೇ ತರ ಶಕ್ತಿ ಇರಲ್ಲ. ಹಾಗಾಗಿ ನಿಮಗೂ ಸಹ ನಿಮ್ಮ ಅಪ್ಪ-ಅಮ್ಮನ ನೋಡ್ಕೊಳ್ಳೋಕೆ ಅಷ್ಟೊಂದು ಸಮಯ, ಶಕ್ತಿ ಇಲ್ಲದೆ ಇರಬಹುದು. ಒಂದುವೇಳೆ ನೀವು ನಿಮ್ಮ ವಯಸ್ಸಾದ ಅಪ್ಪ-ಅಮ್ಮನನ್ನ ನೋಡ್ಕೊಂಡು ನಿಮ್ಗೆ ಸುಸ್ತಾಗಿ ಹೋಗಿದ್ರೆ ಕುಟುಂಬದಲ್ಲಿರೋ ಬೇರೆಯವರ ಸಹಾಯ ಪಡ್ಕೊಳ್ಳಿ ಅಥವಾ ಇಂಥವರನ್ನ ನೋಡ್ಕೊಳ್ಳೋಕೆ ತರಬೇತಿ ಪಡೆದವರ ಸಹಾಯ ಪಡ್ಕೊಳ್ಳಿ.

  •   ನಿಮ್ಮ ಆರೋಗ್ಯವನ್ನೂ ನೋಡ್ಕೊಳ್ಳಿ.

     ಬೈಬಲಲ್ಲಿ ಹೀಗಿದೆ: “ಯಾವನೂ ಎಂದೂ ಸ್ವಶರೀರವನ್ನು ದ್ವೇಷಿಸಿದ್ದಿಲ್ಲ, ಅವನು ಅದನ್ನು ಪೋಷಿಸಿ ಸಂರಕ್ಷಿಸುತ್ತಾನೆ.”—ಎಫೆಸ 5:29.

     ಈ ತತ್ವವನ್ನ ಹೇಗೆ ಅನ್ವಯಿಸೋದು? ವಯಸ್ಸಾದ ಅಪ್ಪ-ಅಮ್ಮನನ್ನ ನೋಡ್ಕೊಳ್ಳೋ ಜವಾಬ್ದಾರಿ ನಿಮ್ಗೆ ಇರಬಹುದು, ಆದ್ರೆ ಅದೇ ಸಮಯದಲ್ಲಿ ನಿಮಗೇನು ಬೇಕೋ ಅದ್ರ ಬಗ್ಗೆನೂ ಗಮನ ಕೊಡಿ. ನೀವು ಮದುವೆ ಆಗಿದ್ರೆ ನಿಮ್ಮ ಕುಟುಂಬಕ್ಕೆ ಬೇಕಾದದ್ದನ್ನ ಪೂರೈಸೋಕೂ ಗಮನಕೊಡಿ. ನೀವು ಚೆನ್ನಾಗಿ ಊಟ ಮಾಡಬೇಕು, ಚೆನ್ನಾಗಿ ನಿದ್ರೆ ಮಾಡಬೇಕು, ವಿಶ್ರಾಂತಿ ತಗೊಬೇಕು. (ಪ್ರಸಂಗಿ 4:6) ಇದಕ್ಕಾಗಿ ಆಗೋದಾದ್ರೆ ನಿಮಗೋಸ್ಕರ ಸ್ವಲ್ಪ ಸಮಯ ಮಾಡ್ಕೊಳ್ಳಿ. ಹೀಗೆ ಮಾಡಿದ್ರೆ ನೀವು ಶಾರೀರಿಕವಾಗಿ, ಮಾನಸಿಕವಾಗಿ ಚೆನ್ನಾಗಿ ಇರ್ತೀರ ಮತ್ತು ನಿಮ್ಮ ಅಪ್ಪ-ಅಮ್ಮನ ಚೆನ್ನಾಗಿ ನೋಡ್ಕೊಳ್ಳೋಕೂ ಆಗುತ್ತೆ.

 ವಯಸ್ಸಾದ ಹೆತ್ತವರನ್ನ ಮನೆಯಲ್ಲಿಟ್ಟೇ ನೋಡ್ಕೊಳ್ಳಬೇಕು ಅಂತ ಬೈಬಲ್‌ ಹೇಳುತ್ತಾ?

 ವಯಸ್ಸಾದ ಅಪ್ಪ-ಅಮ್ಮನನ್ನ ಮನೆಯಲ್ಲಿಟ್ಟು ನೋಡ್ಕೊಳ್ಳಬೇಕಾ ಬೇಡ್ವಾ ಅಂತ ಬೈಬಲ್‌ನಲ್ಲಿ ಯಾವುದೇ ನೇರ ನಿರ್ದೇಶನ ಇಲ್ಲ. ಸಾಮಾನ್ಯವಾಗಿ ಜನ ವಯಸ್ಸಾದ ಹೆತ್ತವರನ್ನ ತಮ್ಮೊಟ್ಟಿಗೆ ಇಟ್ಟು ನೋಡ್ಕೊಳ್ತಾರೆ. ಕೆಲವು ಸಂದರ್ಭಗಳಲ್ಲಿ, ಕೆಲವು ಕುಟುಂಬದವರು ತಮ್ಮ ಅಪ್ಪ-ಅಮ್ಮನ ಚೆನ್ನಾಗಿ ನೋಡ್ಕೊಳ್ಳೋ ಕಡೆ ಇಡುವ ನಿರ್ಧಾರ ಮಾಡ್ತಾರೆ. ಒಂದುವೇಳೆ ನಿಮಗೆ ಇಂಥ ಸನ್ನಿವೇಶ ಎದುರಾದ್ರೆ ನಿಮ್ಮ ಅಪ್ಪ-ಅಮ್ಮನಿಗೆ ಯಾವುದು ಒಳ್ಳೇದು ಅಂತ ಕುಟುಂಬದವರೆಲ್ಲ ಸೇರಿ ನಿರ್ಧಾರ ಮಾಡಬಹುದು.—ಗಲಾತ್ಯ 6:4, 5.

a ಈ ವೃತ್ತಾಂತದ ಬಗ್ಗೆ ಬೈಬಲ್‌ ವಿಷ್ಯಗಳನ್ನ ವಿವರಿಸೋ ಒಂದು ಪುಸ್ತಕ ಹೀಗೆ ಹೇಳುತ್ತೆ, “ಬಹುಶಃ ಯೋಸೇಫ (ಮರಿಯಳ ಗಂಡ) ತೀರಿಹೋಗಿ ಬಹಳ ವರ್ಷಗಳು ಆಗಿರಬಹುದು. ಈ ಸಮಯದಲ್ಲಿ ಯೇಸು ತನ್ನ ತಾಯಿಯನ್ನ ನೋಡ್ಕೊಂಡಿರಬೇಕು ಅಂತ ಅನಿಸ್ತದೆ. ಯೇಸು ಸತ್ತರೆ ಅವನ ತಾಯಿಯನ್ನ ಯಾರು ನೋಡ್ಕೊಳ್ಳೋದು? . . . ಯೇಸು ಕಲಿಸಿದ ಈ ಪಾಠದಿಂದ ಮಕ್ಕಳು ತಮ್ಮ ಹೆತ್ತವರನ್ನ ನೋಡ್ಕೊಳ್ಳಬೇಕು ಅಂತ ಗೊತ್ತಾಗುತ್ತೆ.”—ದಿ ಎನ್‌ಐವಿ ಮ್ಯಾಥ್ಯೂ ಹೆನ್ರಿ ಕಾಮೆಂಟರಿ ಇನ್‌ ವನ್‌ ವಾಲ್ಯೂಮ್‌, ಪುಟ 428-429.