ಮಾಹಿತಿ ಇರುವಲ್ಲಿ ಹೋಗಲು

ಮಗ್ದಲದ ಮರಿಯ ಯಾರು?

ಮಗ್ದಲದ ಮರಿಯ ಯಾರು?

ಬೈಬಲ್‌ ಕೊಡೋ ಉತ್ತರ

 ಮಗ್ದಲದವಳೆಂಬ ಮರಿಯ ಯೇಸು ಕ್ರಿಸ್ತನ ನಂಬಿಗಸ್ತ ಹಿಂಬಾಲಕರಲ್ಲಿ ಒಬ್ಬಳು. ಮಗ್ದಲ (ಬಹುಶಃ ಮಗದನ್‌) ಅನ್ನೋ ಪಟ್ಟಣದ ಹೆಸರಿಂದ ಅವಳಿಗೆ ಮಗ್ದಲ ಅನ್ನೋ ಹೆಸರು ಬಂದಿರಬಹುದು. ಆ ಪಟ್ಟಣ ಗಲಿಲಾಯ ಸಮುದ್ರದ ಹತ್ರ ಇತ್ತು. ಮರಿಯಳು ಮೊದಲು ಅಲ್ಲಿ ವಾಸ ಮಾಡ್ತಿದ್ದಳು ಅನ್ಸುತ್ತೆ.

 ಯೇಸು ಮತ್ತು ಆತನ ಶಿಷ್ಯರ ಜೊತೆ ಪ್ರಯಾಣ ಮಾಡಿದ ತುಂಬ ಸ್ತ್ರೀಯರಲ್ಲಿ ಮಗ್ದಲ ಮರಿಯಳೂ ಒಬ್ಬಳು. ಅವಳು ಅವರಿಗೆ ಬೇಕಾದದ್ದನ್ನ ಕೊಟ್ಟಳು. (ಲೂಕ 8:1-3) ಯೇಸುವನ್ನ ಸಾಯಿಸಿದ್ದನ್ನ ಅವಳು ಕಣ್ಣಾರೆ ನೋಡಿದಳು. ಯೇಸು ಪುನರುತ್ಥಾನ ಆದಾಗ ಅವನನ್ನ ಮೊದಲು ನೋಡಿದವರಲ್ಲಿ ಇವಳೂ ಒಬ್ಬಳು.—ಮಾರ್ಕ 15:40; ಯೋಹಾನ 20:11-18.

 ಮಗ್ದಲದ ಮರಿಯ ವೇಶ್ಯೆ ಆಗಿದ್ದಳಾ?

 ಮಗ್ದಲದ ಮರಿಯ ವೇಶ್ಯೆ ಆಗಿದ್ದಳು ಅಂತ ಬೈಬಲ್‌ ಹೇಳಲ್ಲ. ಅವಳ ಹಿನ್ನಲೆ ಬಗ್ಗೆ ಬೈಬಲ್‌ ಹೇಳೋ ಒಂದೇ ಒಂದು ವಿಷ್ಯ ಏನಂದ್ರೆ, ಯೇಸು ಅವಳಿಗೆ ಹಿಡಿದಿದ್ದ ಏಳು ದೆವ್ವಗಳನ್ನ ಬಿಡಿಸಿದನು.—ಲೂಕ 8:2.

 ಮಗ್ದಲದ ಮರಿಯ ವೇಶ್ಯೆ ಆಗಿದ್ದಳು ಅಂತ ಜನ ಯಾಕೆ ನಂಬ್ತಾರೆ? ಅವಳು ಸತ್ತು ನೂರಾರು ವರ್ಷ ಆದ ಮೇಲೆ ಕೆಲವರು ಹಾಗೆ ಹೇಳಿದ್ರು. ಒಂದ್ಸಲ ಒಬ್ಬ ಸ್ತ್ರೀ ತನ್ನ ಕಣ್ಣೀರಿಂದ ಯೇಸುವಿನ ಪಾದಗಳನ್ನ ತೊಳೆದು ತನ್ನ ಕೂದಲಿಂದ ಒರೆಸಿದಳು. ಬಹುಶಃ ವೇಶ್ಯೆಯಾಗಿದ್ದ ಇವಳೇ ಮಗ್ದಲದ ಮರಿಯ ಆಗಿರಬಹುದು ಅಂತ ಜನ ಹೇಳಿದ್ರು. (ಲೂಕ 7:36-38) ಆದರೆ ಇದನ್ನ ನಂಬಲು ಬೈಬಲಲ್ಲಿ ಯಾವುದೇ ಆಧಾರ ಇಲ್ಲ.

 ಮಗ್ದಲದ ಮರಿಯ “ಅಪೊಸ್ತಲರಿಗೆ ಅಪೊಸ್ತಲ” ಆಗಿದ್ದಳಾ?

 ಇಲ್ಲ. ಕ್ಯಾಥೊಲಿಕ್‌ ಚರ್ಚ್‌ ಮರಿಯಳನ್ನ ಸಂತ “ಮಗ್ದಲದ ಮರಿಯ” ಅಂತ ಕರಿತದೆ. ಯಾಕಂದ್ರೆ ಯೇಸು ಜೀವಂತವಾಗಿ ಎದ್ದಿದ್ದಾನೆ ಅಂತ ಅಪೊಸ್ತಲರಿಗೆ ಮೊದಲು ಸುದ್ದಿ ಮುಟ್ಟಿಸಿದವ್ರಲ್ಲಿ ಇವಳೂ ಒಬ್ಬಳು. (ಯೋಹಾನ 20:18) ಆದ್ರೆ ಈ ವಿಷ್ಯಕ್ಕೆ ಅವಳನ್ನ ಅಪೊಸ್ತಲ ಅಂತ ಕರೀಲಿಕ್ಕಾಗಲ್ಲ. ಅಲ್ಲದೆ, ಅವಳು ಅಪೊಸ್ತಲ ಆಗಿದ್ದಳು ಅಂತ ಬೈಬಲ್‌ ಹೇಳಲ್ಲ.—ಲೂಕ 6:12-16.

 ಬೈಬಲ್‌ ಬರೆದು ಮುಗಿಸಿದ್ದು ಒಂದನೇ ಶತಮಾನದ ಕೊನೆಯಲ್ಲಿ. ಆದರೆ ಕ್ಯಾಥೊಲಿಕ್‌ ಅಧಿಕಾರಿಗಳು ಮಗ್ದಲದ ಮರಿಯಳನ್ನ “ಸಂತ” ಅಂತ ಕರಿಯಲಿಕ್ಕೆ ಶುರುಮಾಡಿದ್ದು ಆರನೇ ಶತಮಾನದಲ್ಲೇ. ಎರಡನೇ ಮತ್ತು ಮೂರನೇ ಶತಮಾನದ ಕೆಲವು ಬರಹಗಳಲ್ಲಿ ಯೇಸುವಿನ ಅಪೊಸ್ತಲರು ಮಗ್ದಲದ ಮರಿಯಳನ್ನ ನೋಡಿ ಹೊಟ್ಟೆಕಿಟ್ಟು ಪಟ್ಟರು ಅಂತಿದೆ. ಆದರೆ ಈ ಬರಹಗಳು ದೇವ ಪ್ರೇರಣೆಯಿಂದ ಬರೆದ ಬೈಬಲಿನ ಭಾಗವಾಗಿಲ್ಲ. ಇದು ಹುಟ್ಟು ಹಾಕಿರೋ ಕಥೆ.

 ಮಗ್ದಲದ ಮರಿಯಳು ಯೇಸುವಿನ ಹೆಂಡ್ತಿನಾ?

 ಇಲ್ಲ. ನಿಜ ಹೇಳಬೇಕಂದ್ರೆ ಯೇಸು ಮದುವೆ ಆಗಲೇ ಇಲ್ಲ ಅಂತ ಬೈಬಲ್‌ ಸ್ಪಷ್ಟವಾಗಿ ತಿಳಿಸುತ್ತೆ. a

a “ಯೇಸುಗೆ ಮದ್ವೆ ಆಗಿತ್ತಾ? ಯೇಸುಗೆ ಒಡಹುಟ್ಟಿದವರು ಇದ್ರಾ?”