ಮಾಹಿತಿ ಇರುವಲ್ಲಿ ಹೋಗಲು

ಅವರ ನಂಬಿಕೆಯನ್ನು ಅನುಕರಿಸಿ | ಮಗ್ದಲದ ಮರಿಯ

“ನಾನು ಕರ್ತನನ್ನು ನೋಡಿದೆ!”

“ನಾನು ಕರ್ತನನ್ನು ನೋಡಿದೆ!”

ಮಗ್ದಲದ ಮರಿಯಳ ಕಣ್ಗಳು ಆಕಾಶವನ್ನೇ ನೋಡ್ತಿದ್ವು. ಅವಳು ತನ್ನ ಕೆನ್ನೆಯ ಮೇಲೆ ಹರಿಯುತ್ತಿದ್ದ ಕಣ್ಣೀರನ್ನು ಒರೆಸಿಕೊಳ್ತಿದ್ದಳು. ಅವಳ ಪ್ರೀತಿಯ ಕರ್ತನನ್ನು ಕಂಬದ ಮೇಲೆ ನೇತುಹಾಕಲಾಗಿತ್ತು. ಅದು ವಸಂತಕಾಲದ ಒಂದು ಮಧ್ಯಾಹ್ನ. ‘ಆದರೂ ಭೂಮಿಯಲ್ಲೆಲ್ಲಾ ಕತ್ತಲೆ ಕವಿಯಿತು.’ (ಲೂಕ 23:44, 45) ಅವಳು ಹೆಗಲ ಮೇಲಿದ್ದ ಬಟ್ಟೆಯನ್ನು ಸರಿಮಾಡ್ಕೊಂಡು ಅಲ್ಲೇ ಸ್ತ್ರೀಯರ ಹತ್ರ ಹೋಗಿ ನಿಂತಳು. ಆಗ ಕವಿದ ಕತ್ತಲೆ ಕೆಲವೇ ನಿಮಿಷಗಳಲ್ಲಿ ಕಣ್ಮರೆಯಾಗುವ ಸೂರ್ಯಗ್ರಹಣ ಅಂತು ಅಲ್ಲವೇ ಅಲ್ಲ. ಏಕೆಂದ್ರೆ ಆ ಕತ್ತಲೆ ಮೂರು ಗಂಟೆ ಇತ್ತು. ಯೇಸು ಪಕ್ಕ ನಿಂತಿದ್ದ ಮರಿಯಳಿಗೆ, ಅವಳ ಜೊತೆಗಿದ್ದವರಿಗೆ ಪ್ರಾಣಿಗಳು ಕೂಗಿಡುವ ಶಬ್ಧ ಕೇಳಿಸಿತ್ತೇನೋ. ರಾತ್ರಿ ಆಯ್ತು ಅಂತ ನೆನಸಿ ಪ್ರಾಣಿಗಳು ಈ ತರ ಶಬ್ಧ ಮಾಡ್ತೇನೋ. ನಡೆದ ವಿಷ್ಯ ನೋಡಿ ಅಲ್ಲಿದ್ದ ಕೆಲವರು “ತುಂಬ ಭಯಪಟ್ಟು, ‘ಖಂಡಿತವಾಗಿಯೂ ಇವನು ದೇವಕುಮಾರ’” ಅಂದರು. (ಮತ್ತಾಯ 27:54) ಇನ್ನೂ ಕೆಲವರಿಗೆ ಮತ್ತು ಯೇಸುವಿನ ಹಿಂಬಾಲಕರಿಗೆ ಏನು ಅನ್ಸಿರಬಹುದು? ತನ್ನ ಮಗನಿಗೆ ಜನ ಕೊಟ್ಟ ಚಿತ್ರಹಿಂಸೆನ ನೋಡಿ ಯೆಹೋವನು ತನಗೆ ಬರ್ತಿರೋ ದುಃಖ ಕೋಪನ ತೋರಿಸ್ತಿದ್ದಾನೆ ಅಂತ ಅನ್ಸಿರಬಹುದು.

ಯೇಸು ಅನುಭವಿಸ್ತಿದ್ದ ನೋವನ್ನು ಮಗ್ದಲದ ಮರಿಯಳಿಗೆ ನೋಡಲಿಕ್ಕೆ ಆಗಲಿಲ್ಲ. ಹಾಗಂತ ಅಲ್ಲಿಂದ ಹೋಗಲಿಕ್ಕೂ ಮನಸ್ಸು ಬರಲಿಲ್ಲ. (ಯೋಹಾನ 19:25, 26) ಊಹಿಸಲಿಕ್ಕೂ ಆಗದೇ ಇರುವಷ್ಟು ನೋವು ಯೇಸುಗೆ ಆಗ್ತಿತ್ತು. ಯೇಸುವಿನ ತಾಯಿಗೂ ಜೊತೆಗಿದ್ದು ಸಮಾಧಾನ ಹೇಳಿ ಸಹಾಯ ಮಾಡಲಿಕ್ಕೆ ಯಾರಾದ್ರು ಬೇಕಿತ್ತು.

ಯೇಸು ತನಗೆಷ್ಟು ಸಹಾಯ ಮಾಡಿದ್ದಾನೆ ಅಂತ ಮರಿಯ ನೆನಸಿಕೊಂಡಾಗ ಆತನಿಗೋಸ್ಕರ ಏನು ಬೇಕಾದ್ರೂ ಮಾಡ್ತೀನಿ ಅಂತ ಅಂದ್ಕೊಂಡಳು. ಒಂದು ಕಾಲದಲ್ಲಿ ಮರಿಯ ಯಾರಿಗೂ ಬೇಡವಾಗಿದ್ದಳು. ಅವಳನ್ನು ನೋಡಿದ್ರೆ ಅಯ್ಯೋ ಪಾಪ ಅನಿಸ್ತಿತ್ತು. ಆದ್ರೆ ಯೇಸು ಅವಳಿಗೆ ಸಹಾಯ ಮಾಡಿದ್ದ. ಅವಳಿಗೆ ಗೌರವ ಸಿಗೋ ಹಾಗೆ, ಅವಳ ಜೀವನ ಸಾರ್ಥಕ ಆಗೋ ಹಾಗೆ ಮಾಡಿದ. ಅವಳಿಗೆ ಅಪಾರ ನಂಬಿಕೆ ಇತ್ತು. ಇಂಥ ನಂಬಿಕೆ ಹೇಗೆ ಬೆಳೆಸಿಕೊಂಡಳು? ಅವಳಿಂದ ನಾವು ಏನು ಕಲಿಯಬಹುದು?

“ತಮ್ಮ ಸ್ವತ್ತುಗಳಿಂದ ಅವರಿಗೆ ಉಪಚಾರಮಾಡುತ್ತಿದ್ದರು”

ಮಗ್ದಲದ ಮರಿಯಳ ಬಗ್ಗೆ ಬೈಬಲ್‌ ಮೊದಲನೇ ಸಲ ಹೇಳುವಾಗ ಯೇಸು ಅವಳಿಗೆ ಮಾಡಿದ ಒಂದು ದೊಡ್ಡ ಸಹಾಯದ ಬಗ್ಗೆ ತಿಳಿಸುತ್ತೆ. ಅದೇನಂದ್ರೆ ಯೇಸು ಅವಳನ್ನು ಭಯನಾಕ ಸ್ಥಿತಿಯಿಂದ ಬಿಡುಗಡೆ ಮಾಡಿದನು. ಕೆಟ್ಟ ಕನಸು ಬಿದ್ದು ನಿದ್ದೆಯಿಂದ ಎಚ್ಚೆತ್ತುಕೂಳ್ಳೋ ತರ ಅವಳಿಗೆ ಅನಿಸಿರಬಹುದು. ಆ ಕಾಲದಲ್ಲಿ ದೆವ್ವಗಳ ಕಾಟ ತುಂಬ ಜಾಸ್ತಿ ಇತ್ತು. ಆ ದುಷ್ಟಾತ್ಮಗಳು ತುಂಬ ಜನರನ್ನು ಕೈಗೊಂಬೆಯಾಗಿ ಮಾಡಿಕೊಂಡು ಬೇಕಾದ ಹಾಗೆ ಆಡಿಸುತ್ತಾ ಇತ್ತು. ಕೆಲವರಿಗೆ ದೆವ್ವ ಹಿಡಿದಿತ್ತು. ಪಾಪ ಮಗ್ದಲದ ಮರಿಯ ಆ ದೆವ್ವಗಳ ಕಾಟದಿಂದ ಎಷ್ಟೆಲ್ಲ ಕಷ್ಟಪಡಬೇಕಾಯ್ತು ಅಂತ ಗೊತ್ತಿಲ್ಲ. ಆದ್ರೆ ಅವಳಿಗೆ ದುಷ್ಟ ಭ್ರಷ್ಟ ಏಳು ದೆವ್ವಗಳು ಹಿಡಿದಿತ್ತು ಅಂತಷ್ಟೇ ನಮಗೆ ಗೊತ್ತು. ಆದ್ರೆ ಸಂತೋಷದ ವಿಷ್ಯ ಏನಂದ್ರೆ ಯೇಸು ಆ ದೆವ್ವಗಳನ್ನೆಲ್ಲ ಬಿಡಿಸಿದನು!—ಲೂಕ 8:2.

ಕೊನೆಗೂ ಮರಿಯಳಿಗೆ ಬಿಡುಗಡೆ ಸಿಕ್ತು. ಇದ್ರಿಂದ ಅವಳಿಗೆ ಎಷ್ಟು ನೆಮ್ಮದಿ ಸಮಾಧಾನ ಆಯ್ತು ಅಂತ ನಮ್ಮಿಂದ ಊಹಿಸಲಿಕ್ಕೂ ಆಗಲ್ಲ. ಹೊಸದೊಂದು ಜೀವನಕ್ಕೆ ಅವಳೀಗ ಕಾಲಿಟ್ಟಳು. ಇದಕ್ಕಾಗಿ ಅವಳು ಯೇಸುಗೆ ಹೇಗೆ ಕೃತಜ್ಞತೆ ತೋರಿಸಿದಳು? ಅವಳು ನಿಷ್ಠೆಯಿಂದ ಯೇಸುವನ್ನ ಹಿಂಬಾಲಿಸಿದಳು. ಯೇಸು ಮತ್ತು ಆತನ ಅಪೊಸ್ತಲರು ಶ್ರೀಮಂತರೆನ್ನಲ್ಲ. ಸಾರುವ ಮತ್ತು ಬೋಧಿಸುವ ಕೆಲಸಕ್ಕೆ ಹೆಚ್ಚು ಗಮನ ಕೊಡಬೇಕು ಅಂತ ಅವರು ಬೇರೆ ಯಾವ ಕೆಲಸನೂ ಮಾಡ್ತಿರಲಿಲ್ಲ. ಹಾಗಾಗಿ ಅವರಿಗೆ ಊಟ, ಬಟ್ಟೆ, ರಾತ್ರಿಯಲ್ಲಿ ಉಳ್ಕೊಳೋಕೆ ಜಾಗ ಬೇಕಿತ್ತು. ಇದನ್ನ ನೋಡಿದ ಮರಿಯ ಅವರಿಗೆ ಸಹಾಯ ಮಾಡಲಿಕ್ಕೆ ಮುಂದೆ ಬಂದಳು.

ಮರಿಯಳ ಜೊತೆ ಬೇರೆ ಸ್ತ್ರೀಯರು ಸಹ ಯೇಸುಗೆ ಸಹಾಯ ಮಾಡಿದ್ರು. ಅವರೆಲ್ಲ ತಮ್ಮ ಸ್ವತ್ತುಗಳನ್ನು ಉಪಯೋಗಿಸಿ ಯೇಸುವಿಗೂ ಆತನ ಅಪೊಸ್ತಲರಿಗೂ ಉಪಚಾರ ಮಾಡಿದ್ರು. (ಲೂಕ 8:1, 3) ಕೆಲವು ಸ್ತ್ರೀಯರು ತುಂಬ ಶ್ರೀಮಂತರಾಗಿದ್ರು. ಯೇಸು ಮತ್ತು ಆತನ ಶಿಷ್ಯರು ಒಂದೊಂದು ಹಳ್ಳಿಗೆ ಹೋದಾಗಲೂ ಈ ಸ್ತ್ರೀಯರು ಊಟ ಕೊಟ್ರು, ಬಟ್ಟೆ ಒಗೆದ್ರು, ಉಳ್ಕೊಳೋಕ್ಕೆ ಜಾಗ ಕೊಟ್ರು ಅಂತ ಬೈಬಲ್‌ ಹೇಳಲ್ಲ. ಆದ್ರೆ ಯೇಸು, ಆತನ ಶಿಷ್ಯರು ಎಲ್ಲ ಸೇರಿ ಒಟ್ಟು 20 ಜನ ಇದ್ದಿರಬಹುದಾದ ಗುಂಪು ಊರಿಂದ ಊರಿಗೆ ಹೋಗುವಾಗ ಆ ಸ್ತ್ರೀಯರು ಸಂತೋಷದಿಂದ ಸಹಾಯ ಮಾಡಿದರು. ಇದ್ರಿಂದ ಯೇಸು ಮತ್ತು ಆತನ ಅಪೊಸ್ತಲರು ಸಾರುವ ಕೆಲಸಕ್ಕೆ ಪೂರ್ತಿ ಗಮನ ಕೊಡಲಿಕ್ಕೆ ಆಯಿತು. ಯೇಸುವಿನ ಋಣ ತೀರಿಸೋಕ ಆಗೋದೇ ಇಲ್ಲ ಅಂತ ಮರಿಯಳಿಗೆ ಗೊತ್ತಿತ್ತು. ಆದ್ರೆ ತನ್ನಿಂದಾದಷ್ಟು ಯೇಸುವಿಗೆ ಸಹಾಯ ಮಾಡಲಿಕ್ಕೆ ಅವಳಿಗೆ ತುಂಬ ಖುಷಿ ಆಯಿತು.

ಬೇರೆಯವರಿಗೆ ಸಹಾಯ ಆಗಲಿ ಅಂತ ಕೆಲಸ ಮಾಡುವವರನ್ನ ಜನ ಇವತ್ತು ಕೀಳಾಗಿ ನೋಡ್ತಾರೆ. ಆದ್ರೆ ದೇವರು ಅವರನ್ನ ಕೀಳಾಗಿ ನೋಡಲ್ಲ. ಯೇಸು ಮತ್ತು ಆತನ ಅಪೊಸ್ತಲರಿಗೆ ಮರಿಯ ತನ್ನ ಜೀವನವನ್ನೇ ಧಾರೆ ಎರೆದಳು. ಇದನ್ನು ನೋಡಿ ದೇವರಿಗೆ ಎಷ್ಟು ಸಂತೋಷ ಆಗಿರಬೇಕು ಅಂತ ನೆನಸಿ. ಇವತ್ತು ಕೂಡ ಅನೇಕ ನಂಬಿಗಸ್ತ ಕ್ರೈಸ್ತರು ಬೇರೆಯವರಿಗೆ ಸಹಾಯ ಆಗಲಿ ಅಂತ ಸಂತೋಷದಿಂದ ಕೆಲಸ ಮಾಡಿಕೊಡ್ತಾರೆ. ಬೇಕಾದ ಸಹಾಯ ಕೊಟ್ಟಾಗ, ಪ್ರೀತಿಯ ಮಾತನ್ನು ಆಡಿದಾಗ ಕೆಲವೊಮ್ಮೆ ಬೇರೆಯವರಿಗೆ ತುಂಬ ಪ್ರಯೋಜನ ಆಗುತ್ತೆ. ಈ ತರ ಧಾರಾಳ ಮನಸ್ಸು ಇರುವವರನ್ನು ಯೆಹೋವನು ತುಂಬ ಅಮೂಲ್ಯವಾಗಿ ನೋಡ್ತಾನೆ.—ಜ್ಞಾನೋಕ್ತಿ 19:17; ಇಬ್ರಿಯ 13:16.

“ಯೇಸುವಿನ ಯಾತನಾ ಕಂಬದ ಬಳಿಯಲ್ಲಿ”

ಕ್ರಿ. ಶ. 33 ರ ಪಸ್ಕಹಬ್ಬಕ್ಕೆ ಯೇಸು ಜೊತೆ ಯೆರೂಸಲೇಮಿಗೆ ಹೋದ ಅನೇಕ ಸ್ತ್ರೀಯರಲ್ಲಿ ಮಗ್ದಲದ ಮರಿಯಳು ಒಬ್ಬಳು. (ಮತ್ತಾಯ 27:55, 56) ಅವಳಿಗೆ ಯೇಸುವನ್ನು ಹಿಡ್ಕೊಂಡು ಹೋಗಿದ್ದಾರೆ, ರಾತ್ರಿ ವಿಚಾರಣೆ ಮಾಡಿದ್ದಾರೆ ಅನ್ನೋ ಸುದ್ದಿ ಸಿಕ್ಕಿದಾಗ ಖಂಡಿತ ದುಃಖ ಆಯ್ತು. ಅವಳ ಹೃದಯ ಛಿದ್ರ ಮಾಡುವ ಇನ್ನೆಷ್ಟೋ ವಿಷ್ಯ ನಡೆಯಿತು. ಯೆಹೂದಿ ಧರ್ಮ ಮುಖಂಡರ ಮತ್ತು ಅವರು ಕುಮ್ಮಕ್ಕು ಕೊಟ್ಟ ಜನರ ಗುಂಪಿನ ಒತ್ತಡಕ್ಕೆ ರಾಜ್ಯಪಾಲ ಪೊಂತ ಪಿಲಾತ ಮಣಿದು ಯೇಸುವನ್ನು ಕಂಬದ ಮೇಲೆ ಕ್ರೂರವಾಗಿ ಸಾಯಲು ಬಿಟ್ಟ. ತನ್ನ ಸ್ವಾಮಿಗೆ ರಕ್ತ ಸುರಿತಾ ಇರೋದನ್ನು, ಉದ್ದವಾದ ಮರದ ಕಂಬ ಹೊತ್ಕೊಂಡು ಬೀದಿಬೀದಿಗಳಲ್ಲಿ ನಡೆಯಲು ಒದ್ದಾಡುತ್ತಿರೋದನ್ನು, ತುಂಬ ಸುಸ್ತಾಗಿರೋದನ್ನು ಮರಿಯ ನೋಡಿರಬೇಕು.—ಯೋಹಾನ 19:6, 12, 15-17.

ಯೇಸುವನ್ನು ಮರದ ಕಂಬಕ್ಕೆ ಜಡಿದಾಗ, ಮಧ್ಯಾಹ್ನದ ಹೊತ್ತಲ್ಲೇ ಎಲ್ಲ ಕಡೆ ಕತ್ತಲು ಕವಿದಾಗ ಮಗ್ದಲದ ಮರಿಯ ಅಲ್ಲೇ ಇದ್ದಳು. “ಯೇಸುವಿನ ಯಾತನಾ ಕಂಬದ ಬಳಿಯಲ್ಲಿ” ಅವಳು ಮತ್ತು ಬೇರೆ ಸ್ತ್ರೀಯರು ನಿಂತಿದ್ದರು. (ಯೋಹಾನ 19:25) ಯೇಸು ತನ್ನ ಅಮ್ಮನನ್ನು ನೋಡಿಕೊಳ್ಳುವ ಜವಾಬ್ದಾರಿನ ಆಪ್ತ ಅಪೊಸ್ತಲ ಯೋಹಾನನಿಗೆ ಒಪ್ಪಿಸಿದಾಗ ಹೇಳಿದ ಮಾತನ್ನ ಮರಿಯ ಕಿವಿಯಾರೆ ಕೇಳಿಸಿಕೊಂಡಳು, ಅದನ್ನ ಕಣ್ಣಾರೆ ನೋಡಿದಳು. ಯೇಸು ತುಂಬ ನರಳುತ್ತಾ ತಂದೆಗೆ ಮೊರೆ ಇಟ್ಟದ್ದನ್ನು ಕೇಳಿಸಿಕೊಂಡಳು. ಜೀವ ಹೋಗೋದಕ್ಕಿಂತ ಮುಂಚೆ ಯೇಸು “ನೆರವೇರಿತು” ಅಂತ ಹೇಳಿದ ಗೆಲುವಿನ ಮಾತನ್ನು ಕೇಳಿಸಿಕೊಂಡಳು. ನೋವಿನಿಂದ ಅವಳ ಹೃದಯ ಕಿವುಚಿದಂತೆ ಆಯ್ತು. ಕೊನೆ ತನಕ ಮರಿಯ ಅಲ್ಲೇ ಇದ್ದಳು, ಯೇಸು ಸತ್ತ ಮೇಲೂ ಇದ್ದಳು. ಅರಿಮಥಾಯದಲ್ಲಿ ದೊಡ್ಡ ಶ್ರೀಮಂತನಾಗಿದ್ದ ಯೋಸೇಫನು ಯೇಸುವಿನ ದೇಹವನ್ನು ಒಂದು ಹೊಸ ಸಮಾಧಿಯಲ್ಲಿ ಇಟ್ಟಾಗಲೂ ಅವಳು ಅಲ್ಲೇ ಇದ್ದಳು.—ಯೋಹಾನ 19:30; ಮತ್ತಾಯ 27:45, 46, 57-61.

ನಮ್ಮ ಸಹೋದರ ಸಹೋದರಿಯರು ತುಂಬ ಕಷ್ಟದಲ್ಲಿರುವಾಗ ನಾವೇನು ಮಾಡಬೇಕು ಅಂತ ಮರಿಯಳಿಂದ ಕಲಿಯುತ್ತೇವೆ. ಆ ಕಷ್ಟ ಬರದೇ ಇರೋ ಹಾಗೆ ಮಾಡಲಿಕ್ಕೋ ಅದನ್ನು ತೆಗೆದುಹಾಕಲಿಕ್ಕೋ ನಮ್ಮ ಕೈಯಿಂದ ಆಗಲ್ಲ. ಆದ್ರೆ ಕನಿಕರ ತೋರಿಸಲಿಕ್ಕೆ, ಧೈರ್ಯದಿಂದ ಇರಲಿಕ್ಕೆ ನಮ್ಮಿಂದ ಆಗುತ್ತೆ. ಕಷ್ಟದ ಸಮಯದಲ್ಲಿ ಆಪ್ತ ಸ್ನೇಹಿತ ಜೊತೆಗಿರುವುದೇ ದೊಡ್ಡ ಸಹಾಯ. ಆಪತ್ತಿಗೆ ಆದವನೇ ನಿಜವಾದ ಸ್ನೇಹಿತ ಅಲ್ವಾ? ಅಂಥಾ ಸ್ನೇಹಿತರಾಗಿ ಇರಲಿಕ್ಕೆ ತುಂಬ ನಂಬಿಕೆ ಬೇಕು. ಇದ್ರಿಂದ ಕಷ್ಟದಲ್ಲಿ ಇರುವವರಿಗೆ ತುಂಬ ಸಾಂತ್ವನ ಸಿಗುತ್ತೆ.—ಜ್ಞಾನೋಕ್ತಿ 17:17.

ಮಗ್ದಲದ ಮರಿಯ ಜೊತೆಯಲ್ಲಿ ಇದ್ದದ್ದರಿಂದ ಯೇಸುವಿನ ತಾಯಿಗೆ ಖಂಡಿತ ಸಾಂತ್ವನ ಸಿಕ್ತು

“ನಾನು ಅವನನ್ನು ತೆಗೆದುಕೊಂಡು ಹೋಗುವೆನು”

ಯೇಸುವಿನ ಶರೀರವನ್ನು ಸಮಾಧಿಯಲ್ಲಿಟ್ಟ ಮೇಲೆ ಕೆಲವು ಸ್ತ್ರೀಯರು ಆತನ ಶರೀರದ ಮೇಲೆ ಹಚ್ಚಲು ತೈಲವನ್ನು ತೆಗೆದುಕೊಂಡು ಹೋದರು. ಅವರಲ್ಲಿ ಮರಿಯಳು ಒಬ್ಬಳು. (ಮಾರ್ಕ 16:1, 2; ಲೂಕ 23:54-56) ಸಬ್ಬತ್‌ ಆದ್ಮೇಲೆ ಅವಳು ಬೆಳ್ಳಗೆ ಬೇಗ ಎದ್ದು ಅಲ್ಲಿಗೆ ಹೋಗ್ತಾಳೆ. ಇನ್ನೂ ಕತ್ತಲೆ ಇರುವಾಗಲೇ ಮರಿಯ ಬೇರೆ ಸ್ತ್ರೀಯರ ಜೊತೆ ಬೀದಿಯಲ್ಲಿ ಯೇಸುವಿನ ಸಮಾಧಿ ಹತ್ರ ನಡ್ಕೊಂಡು ಹೋಗೋದನ್ನು ಸ್ವಲ್ಪ ಚಿತ್ರಿಸಿಕೊಳ್ಳಿ. ದಾರಿಯಲ್ಲಿ ಹೋಗ್ತಾ ಇರುವಾಗ ಸಮಾಧಿ ಮುಂದಿರೋ ದೊಡ್ಡ ಕಲ್ಲನ್ನು ಹೇಗಪ್ಪಾ ಸರಿಸೋದು ಅನ್ನೋ ಯೋಚನೆ ಅವರ ಮನಸ್ಸಿಗೆ ಬಂದಿರಬಹುದು. (ಮತ್ತಾಯ 28:1; ಮಾರ್ಕ 16:1-3) ಆದ್ರೂ ಅವರು ಮುಂದೆ ಇಟ್ಟ ಹೆಜ್ಜೆನ ಹಿಂದೆ ಇಡಲಿಲ್ಲ. ಅವರಿಂದ ಏನು ಮಾಡೋಕೆ ಆಗುತ್ತೋ ಅದನ್ನು ಮಾಡಿದ್ರು, ಉಳಿದದ್ದನ್ನ ಯೆಹೋವನಿಗೆ ಬಿಟ್ರು. ಏಕೆಂದ್ರೆ ಅವರಿಗೆ ಅಷ್ಟು ನಂಬಿಕೆ!

ಸಮಾಧಿಗೆ ಹತ್ರಹತ್ರ ಬರ್ತಿದ್ದ ಹಾಗೆ ಮರಿಯಳೇ ಬೇರೆಯವರಿಗಿಂತ ಮುಂದಿದ್ದಳು. ಇದ್ದಕ್ಕಿದ್ದ ಹಾಗೆ ಅವಳು ದಂಗು ಬಡಿದ ಹಾಗೆ ನಿಂತುಬಿಟ್ಟಳು. ಏಕೆಂದ್ರೆ ಸಮಾಧಿ ಮುಂದಿದ್ದ ಕಲ್ಲನ್ನು ಯಾರೋ ಈಗಾಗಲೇ ಉರುಳಿಸಿದ್ರು, ಒಳಗೆ ಖಾಲಿ! ಕೂಡಲೇ ಅವಳು ಪೇತ್ರ ಮತ್ತು ಯೋಹಾನನಿಗೆ ವಿಷ್ಯ ತಿಳಿಸಲು ಓಡಿ ಹೋದಳು. ಅವರ ಹತ್ರ ಹೋಗಿ ಒಂದೇ ಉಸಿರಲ್ಲಿ ಬಡಬಡ ಅಂತ, “ಕರ್ತನನ್ನು ಅವರು ಸ್ಮರಣೆಯ ಸಮಾಧಿಯಿಂದ ತೆಗೆದುಕೊಂಡು ಹೋಗಿದ್ದಾರೆ; ಅವನನ್ನು ಎಲ್ಲಿ ಇಟ್ಟಿದ್ದಾರೋ ನಮಗೆ ಗೊತ್ತಿಲ್ಲ” ಅಂದಳು. ತಕ್ಷಣ ಪೇತ್ರ ಯೋಹಾನ ಸಮಾಧಿ ಹತ್ರ ಓಡಿ ಹೋಗಿ ನೋಡಿದ್ರು. ಮರಿಯ ಹೇಳಿದ್ದು ನಿಜ ಅಂತ ಗೊತ್ತಾದಾಗ ಅವರು ಮನೆಗೆ ಹೋದ್ರು. *ಯೋಹಾನ 20:1-10.

ಪುನಃ ಸಮಾಧಿ ಹತ್ತಿರ ಬಂದು ಮರಿಯ ಅಲ್ಲೇ ಇದ್ದಳು. ಸೂರ್ಯೋದಯ ಆಗ್ತಿತ್ತು. ಎಲ್ಲೆಲ್ಲೂ ಬಿಕೋ ಅಂತಿತ್ತು. ಮರಿಯಗೆ ಅಳು ತಡೆಯಲಿಕ್ಕೆ ಆಗಲಿಲ್ಲ. ಕರ್ತನ ದೇಹ ಸಮಾಧಿಯಲ್ಲಿ ಇಲ್ಲ ಅನ್ನೋದು ಅವಳಿಗೆ ಅರಗಿಸಿಕೊಳ್ಳಲಿಕ್ಕೇ ಆಗಲಿಲ್ಲ. ಹಾಗಾಗಿ ಅವಳು ಸಮಾಧಿ ಒಳಗೆ ಇಣುಕಿ ನೋಡಿದಳು. ಅವಳಿಗೊಂದು ಶಾಕ್‌ ಕಾದಿತ್ತು. ಇಬ್ಬರು ದೇವದೂತರು ಕೂತಿದ್ರು. “ಸ್ತ್ರೀಯೇ, ಏಕೆ ಅಳುತ್ತಿದ್ದೀ?” ಅಂತ ಕೇಳಿದ್ರು. ಕಕ್ಕಾಬಿಕ್ಕಿಯಾಗಿ ಅವಳು ಅಪೊಸ್ತಲರಿಗೆ ಹೇಳಿದ್ದನ್ನೇ ಅವರಿಗೂ ಹೇಳಿದಳು: “ಅವರು ನನ್ನ ಕರ್ತನನ್ನು ತೆಗೆದುಕೊಂಡು ಹೋಗಿದ್ದಾರೆ; ಅವನನ್ನು ಎಲ್ಲಿ ಇಟ್ಟಿದ್ದಾರೋ ನನಗೆ ಗೊತ್ತಿಲ್ಲ.”—ಯೋಹಾನ 20:11-13.

ಅವಳು ತಿರುಗಿ ನೋಡಿದಾಗ ಅವಳ ಹಿಂದೆ ಒಬ್ಬ ನಿಂತಿದ್ದ. ಅವನು ಯಾರು ಅಂತ ಅವಳಿಗೆ ಗೊತ್ತಾಗಲಿಲ್ಲ. ಯಾರೋ ತೋಟದಲ್ಲಿ ಕೆಲಸ ಮಾಡುವವನು ಅಂದ್ಕೊಂಡಳು. ಆ ವ್ಯಕ್ತಿ ಪ್ರೀತಿಯಿಂದ “ಸ್ತ್ರೀಯೇ, ಏಕೆ ಅಳುತ್ತಿದ್ದೀ? ಯಾರನ್ನು ಹುಡುಕುತ್ತಿದ್ದೀ?” ಅಂತ ಕೇಳ್ದ. ಅದಕ್ಕೆ ಮರಿಯ, “ಸ್ವಾಮಿ, ನೀನು ಅವನನ್ನು ಎತ್ತಿಕೊಂಡು ಹೋಗಿರುವುದಾದರೆ ಅವನನ್ನು ಎಲ್ಲಿಟ್ಟಿದ್ದೀ ಎಂದು ನನಗೆ ಹೇಳು. ನಾನು ಅವನನ್ನು ತೆಗೆದುಕೊಂಡು ಹೋಗುವೆನು” ಅಂದಳು. (ಯೋಹಾನ 20:14, 15) ಅವಳು ಏನ್‌ ಹೇಳಿದಳು ಅಂತ ಸ್ವಲ್ಪ ಯೋಚನೆ ಮಾಡಿ. ‘ನಾನು ಅವನನ್ನು ತೆಗೆದುಕೊಂಡು ಹೋಗ್ತೀನಿ’ ಅಂತ ಹೇಳಿದಳಲ್ಲಾ . . . ಯೇಸು ಕ್ರಿಸ್ತನು ತುಂಬ ಗಟ್ಟಿಮುಟ್ಟಾಗಿದ್ದ. ಆತನ ಶರೀರನ ತಕ್ಕೊಂಡು ಹೋಗಲಿಕ್ಕೆ ಇವಳೊಬ್ಬಳಿಂದ ಆಗುತ್ತಾ? ಅದರ ಬಗ್ಗೆಯೆಲ್ಲ ಮರಿಯ ತಲೆಕೆಡಿಸಿಕೊಳ್ಳಲಿಲ್ಲ. ಅವಳಿಂದ ಏನು ಮಾಡಲಿಕ್ಕೆ ಆಗುತ್ತೋ ಅದನ್ನ ಮಾಡಬೇಕು, ಅದೊಂದೇ ಅವಳ ತಲೆಯಲ್ಲಿ ಇದದ್ದು.

“ನಾನು ಅವನನ್ನು ತೆಗೆದುಕೊಂಡು ಹೋಗುವೆನು”

ನಮ್ಮಿಂದ ಸಹಿಸಲಿಕ್ಕೆ ಆಗದೇ ಇರುವಷ್ಟು ಕಷ್ಟ ದುಃಖ ಅನುಭವಿಸುವಾಗ ನಾವು ಮಗ್ದಲದ ಮರಿಯಳನ್ನು ಅನುಕರಿಸಬೇಕು. ನಮ್ಮಲ್ಲಿರೋ ಕುಂದುಕೊರತೆಗಳ ಬಗ್ಗೆ, ನಮ್ಮಿಂದ ಏನು ಮಾಡಲಿಕ್ಕೆ ಆಗಲ್ವೋ ಅದರ ಬಗ್ಗೆ ಮಾತ್ರ ಯೋಚಿಸ್ತಿದ್ರೆ ಭಯದಲ್ಲಿ ಮುಳುಗಿ ಹೋಗ್ತೀವಿ, ಕುಗ್ಗಿ ಹೋಗ್ತೀವಿ. ಆಗ ನಮ್ಮಿಂದ ಏನೂ ಮಾಡಲಿಕ್ಕೆ ಆಗಲ್ಲ. ಹಾಗಾಗಿ ನಾವು ನಮ್ಮಿಂದ ಏನು ಮಾಡಲಿಕ್ಕೆ ಆಗುತ್ತೋ ಅದನ್ನು ಮಾಡಿ, ಉಳಿದದ್ದನ್ನು ಯೆಹೋವನಿಗೆ ಬಿಡಬೇಕು. ಆಗ ನಮ್ಮಿಂದ ನೆನಸದೇ ಇರುವಷ್ಟು ವಿಷ್ಯಗಳನ್ನು ನಾವು ಮಾಡಿರುತ್ತೀವಿ. (2 ಕೊರಿಂಥ 12:10; ಫಿಲಿಪ್ಪಿ 4:13) ಎಲ್ಲದಕ್ಕಿಂತ ಮುಖ್ಯವಾಗಿ ನಮ್ಮ ದೇವರಾದ ಯೆಹೋವನನ್ನು ಖುಷಿಪಡಿಸ್ತೀವಿ. ಇದನ್ನೇ ಮರಿಯಳು ಮಾಡಿದಳು. ಹಾಗಾಗಿ ಅವಳಿಗೆ ತುಂಬ ಅಪರೂಪವಾದ ಆಶೀರ್ವಾದ ಸಿಕ್ಕಿತು.

“ನಾನು ಕರ್ತನನ್ನು ನೋಡಿದೆ!”

ಮರಿಯಳ ಮುಂದಿದ್ದ ವ್ಯಕ್ತಿ ತೋಟದಲ್ಲಿ ಕೆಲಸ ಮಾಡುವವನಲ್ಲ. ಹಿಂದೆ ಆತನು ಬಡಗಿಯಾಗಿದ್ದ, ಬೋಧಕನಾಗಿದ್ದ, ಮರಿಯಳ ಪ್ರೀತಿಯ ಕರ್ತನಾಗಿದ್ದ. ಆದ್ರೆ ಅವಳಿಗೆ ಆತನ ಗುರುತು ಸಿಕ್ಕಲಿಲ್ಲ. ಹಾಗಾಗಿ ಅವಳು ಪಕ್ಕಕ್ಕೆ ತಿರುಗಿದಳು. ದೇವರು ಯೇಸುವನ್ನು ಬಲಿಷ್ಠ ಆತ್ಮಜೀವಿಯಾಗಿ ಎಬ್ಬಿಸಿದ್ದಾನೆ ಅನ್ನೋದನ್ನ ಅವಳು ಊಹಿಸಿರಲಿಕ್ಕಿಲ್ಲ. ಯೇಸು ಮನುಷ್ಯ ರೂಪದಲ್ಲಿ ಮರಿಯಳಿಗೆ ಕಾಣಿಸಿಕೊಂಡಿದ್ದನು. ಆದ್ರೆ ಮುಂಚೆ ಇದ್ದ ದೇಹ ಆತನಿಗೆ ಇರಲಿಲ್ಲ. ಆತನ ಪರಿಚಯವಿದ್ದ ಎಷ್ಟೋ ಜನ ಕೂಡ ಆತನನ್ನು ಗುರುತಿಸಲಿಲ್ಲ.—ಲೂಕ 24:13-16; ಯೋಹಾನ 21:4.

ಯೇಸು ತಾನು ಯಾರು ಅಂತ ಮರಿಯಳಿಗೆ ಹೇಳಿದ್ದು ಹೇಗೆ? ಆತನು “ಮರಿಯಳೇ” ಅಂತ ಒಂದೇ ಒಂದು ಪದ ಹೇಳಿ ಕರೆದ ಅಷ್ಟೇ. ಆತನು ಕರೆದ ವಿಧದಲ್ಲಿ ಅವಳಿಗೆ ಆತನೇ ತನ್ನ ಪ್ರೀತಿಯ ಬೋಧಕ ಅಂತ ಗೊತ್ತಾಯ್ತು. ಕೂಡಲೇ ಅವಳು ತಿರುಗಿ “ರಬ್ಬೋನಿ!” ಅಂತ ಕಿರುಚಿದಳು. ಇದೊಂದು ಹೀಬ್ರು ಪದ. ಯೇಸುವನ್ನು ಕರೆಯಲು ಅವಳು ಆ ಪದವನ್ನು ಲೆಕ್ಕ ಇಲ್ಲದಷ್ಟು ಸಲ ಉಪಯೋಗಿಸಿದ್ದಳು. ಅವಳು ಯೇಸುವನ್ನು ಹಿಡ್ಕೊಂಡು ಬಿಟ್ಟಳು, ಬಿಡಲೇ ಇಲ್ಲ.—ಯೋಹಾನ 20:16.

ಅವಳ ಭಾವನೆ ಏನು ಅಂತ ಯೇಸುಗೆ ಗೊತ್ತಿತ್ತು. “ನನ್ನನ್ನು ಅಪ್ಪಿಕೊಳ್ಳುವುದನ್ನು ನಿಲ್ಲಿಸು” ಅಂತ ಹೇಳಿದನು. ಯೇಸು ನಗುಮುಖದಿಂದ ಮೆಲ್ಲ ಅವಳ ಕೈ ಬಿಡಿಸಿ ಪ್ರೀತಿಯಿಂದ ಆ ಮಾತು ಹೇಳಿದ್ದನ್ನು ಸ್ವಲ್ಪ ಮನಸ್ಸಲ್ಲಿ ಚಿತ್ರಿಸಿಕೊಳ್ಳಿ. “ನಾನು ಇನ್ನೂ ತಂದೆಯ ಬಳಿಗೆ ಏರಿಹೋಗಲಿಲ್ಲ” ಅಂತನೂ ಭರವಸೆ ತುಂಬಿದ. ಸ್ವರ್ಗಕ್ಕೆ ಹೋಗುವ ಸಮಯ ಯೇಸುಗೆ ಇನ್ನೂ ಬಂದಿರಲಿಲ್ಲ. ಭೂಮಿಯಲ್ಲಿ ಆತನಿಗೆ ಮಾಡಲಿಕ್ಕೆ ಇನ್ನೂ ಕೆಲಸ ಇತ್ತು. ಅದನ್ನು ಮಾಡಲಿಕ್ಕೆ ಮರಿಯಳ ಸಹಾಯನೂ ಯೇಸುಗೆ ಬೇಕಿತ್ತು. ಯೇಸು ಹೇಳ್ತಿದ್ದ ಒಂದೊಂದು ಮಾತನ್ನೂ ಮರಿಯ ತುಂಬ ಗಮನ ಕೊಟ್ಟು ಕೇಳ್ತಿದ್ದಳು. ಆತನು ಅವಳಿಗೆ, “ನೀನು ನನ್ನ ಸಹೋದರರ ಬಳಿಗೆ ಹೋಗಿ ‘ನಾನು ನನ್ನ ತಂದೆಯೂ ನಿಮ್ಮ ತಂದೆಯೂ ನನ್ನ ದೇವರೂ ನಿಮ್ಮ ದೇವರೂ ಆಗಿರುವಾತನ ಬಳಿಗೆ ಏರಿಹೋಗಲಿದ್ದೇನೆ’” ಅಂತ ಹೇಳು ಅಂದ.—ಯೋಹಾನ 20:17.

ಎಷ್ಟು ದೊಡ್ಡ ಕೆಲಸ ಇದು? ಪುನರುತ್ಥಾನ ಆಗಿದ್ದ ಯೇಸುವನ್ನು ಮೊದಲು ನೋಡುವ ಸೌಭಾಗ್ಯ ಕೆಲವರಿಗೆ ಸಿಕ್ಕಿತು. ಅವರಲ್ಲಿ ಮರಿಯ ಒಬ್ಬಳು. ಈ ಸಂತೋಷದ ವಿಷ್ಯನ ಬೇರೆಯವರಿಗೆ ಹೇಳುವ ಅವಕಾಶವನ್ನು ಯೇಸು ಅವಳಿಗೆ ಕೊಟ್ಟ. ಅವಳಿಗೆ ಎಷ್ಟು ಖುಷಿ ಆಗಿರಬೇಕು ಅಂತ ನೆನಸಿ. ಆಗ ಏನು ನಡೀತು ಅಂತ ಊಹಿಸಿ: ಶಿಷ್ಯರನ್ನು ಹುಡುಕಲಿಕ್ಕೆ ಮರಿಯ ಸಂತೋಷದಿಂದ ಓಡಿಹೋದಳು. ಅವರಿಗೆ ವಿಷ್ಯ ತಿಳಿಸಲು ಅವಳ ಮನಸ್ಸು ತುಡಿಯುತ್ತಿತ್ತು. ಅವರನ್ನು ನೋಡಿದ ತಕ್ಷಣ ಎದುಸಿರು ಬಿಡುತ್ತಾ “ನಾನು ಕರ್ತನನ್ನು ನೋಡಿದೆ!” ಅಂತ ಹೇಳಿದ ಮಾತು ಅವಳ ಮನಸ್ಸಲ್ಲೂ ಶಿಷ್ಯರ ಮನಸ್ಸಲ್ಲೂ ಹಾಗೇ ಅಚ್ಚೊತ್ತಿರಬೇಕು. ಯೇಸು ಹೇಳಿದ್ದನ್ನು ಒಂದೂ ಬಿಡದೆ ಒಂದೇ ಉಸಿರಲ್ಲಿ ಎಲ್ಲ ಹೇಳಿದಳು. (ಯೋಹಾನ 20:18) ಅವಳ ಮಾತನ್ನು ಮತ್ತು ಸಮಾಧಿ ಹತ್ರ ಹೋಗಿ ಬಂದ ಬೇರೆ ಸ್ತ್ರೀಯರು ಹೇಳಿದ ಮಾತನ್ನು ಶಿಷ್ಯರು ಕೇಳಿಸಿಕೊಂಡಾಗ ನಡೆದ ವಿಷ್ಯ ಏನು ಅಂತ ಅವರಿಗೆ ಪೂರ್ತಿ ಅರ್ಥ ಆಯಿತು.—ಲೂಕ 24:1-3, 10.

“ನಾನು ಕರ್ತನನ್ನು ನೋಡಿದೆ!”

“ಅವರು ಆ ಸ್ತ್ರೀಯರ ಮಾತುಗಳನ್ನು ನಂಬಲಿಲ್ಲ”

ಅವರು ಹೇಳಿದ್ದನ್ನು ಕೇಳಿ ಶಿಷ್ಯರು ಏನ್‌ ಮಾಡಿದ್ರು? ಮೊದಮೊದಲು ನಂಬಲಿಲ್ಲ. “ಅವರಿಗೆ ಈ ಮಾತುಗಳು ಅಸಂಬದ್ಧವಾಗಿ ತೋರಿದವು; ಅವರು ಆ ಸ್ತ್ರೀಯರ ಮಾತುಗಳನ್ನು ನಂಬಲಿಲ್ಲ” ಅಂತ ವಚನ ಹೇಳ್ತದೆ. (ಲೂಕ 24:11) ಶಿಷ್ಯರಿಗೆ ಒಳ್ಳೇ ಮನಸ್ಸಿತ್ತು. ಆದರೆ ಅವರು ಬೆಳೆದುಬಂದ ಸಮಾಜದಲ್ಲಿ ಜನ ಸ್ತ್ರೀಯರನ್ನು ನಂಬುತ್ತಿರಲಿಲ್ಲ. ರಬ್ಬಿಗಳ ಸಂಪ್ರದಾಯದ ಪ್ರಕಾರ ಒಬ್ಬ ಸ್ತ್ರೀ ನ್ಯಾಯಾಲಯದಲ್ಲಿ ಸಾಕ್ಷಿ ಹೇಳಬಾರದಿತ್ತು. ಅಲ್ಲಿನ ಸಂಸ್ಕೃತಿ ಅಪೊಸ್ತಲರ ಮೇಲೆ ಎಷ್ಟು ಪ್ರಭಾವಬೀರಿತ್ತು ಅಂತ ಅವರಿಗೇ ಗೊತ್ತಿರಲಿಲ್ಲ. ಆದರೆ ಯೇಸುಗಾಗಲಿ ಆತನ ತಂದೆಗಾಗಲಿ ಈ ಬೇಧಭಾವ ಇರಲಿಲ್ಲ. ಹಾಗಾಗಿ ಅವರು ಯೇಸುವಿನ ಪುನರುತ್ಥಾನದ ಬಗ್ಗೆ ಪುರುಷರಿಗೆ ಹೇಳುವ ಅವಕಾಶವನ್ನು ನಂಬಿಗಸ್ತ ಸ್ತ್ರೀಯಾದ ಮರಿಯಳಿಗೆ ಕೊಟ್ಟರು.

ಶಿಷ್ಯರು ಒಳ್ಳೇ ಪ್ರತಿಕ್ರಿಯೆ ತೋರಿಸದಿದ್ದಾಗ ಮರಿಯಳು ಬೇಜಾರು ಮಾಡ್ಕೊಳ್ಳಿಲ್ಲ. ಅವಳ ಬೋಧಕನಿಗೆ ಅವಳ ಮೇಲೆ ನಂಬಿಕೆ ಇದೆ ಅಂತ ಗೊತ್ತಿತ್ತು. ಅವಳಿಗೆ ಅಷ್ಟೇ ಸಾಕಾಗಿತ್ತು. ಯೇಸುವನ್ನು ಹಿಂಬಾಲಿಸುವ ಎಲ್ಲರಿಗೂ ಒಂದು ಸಂದೇಶ ಸಾರಲಿಕ್ಕಿದೆ. ಆ ಸಂದೇಶ “ದೇವರ ರಾಜ್ಯದ ಸುವಾರ್ತೆ” ಅಂತ ಬೈಬಲ್‌ ಹೇಳುತ್ತೆ. (ಲೂಕ 8:1) ಆದ್ರೆ ಅವರು ಹೇಳೋದನ್ನು ಎಲ್ಲರೂ ನಂಬಲ್ಲ, ಸಾರುವ ಕೆಲಸಕ್ಕೆ ಎಲ್ಲರೂ ಬೆಲೆ ಕೊಡಲ್ಲ ಅಂತ ಯೇಸು ಹೇಳಿದನು. (ಯೋಹಾನ 15:20, 21) ಹಾಗಾಗಿ ನಾವು ಮಗ್ದಲದ ಮರಿಯಳ ಮಾದರಿಯನ್ನು ನೆನಪಲ್ಲಿ ಇಡಬೇಕು. ಬೇರೆ ಶಿಷ್ಯರು ಅವಳ ಮಾತು ನಂಬಲಿಲ್ಲ ಅಂತ ಯೇಸುವಿನ ಪುನರುತ್ಥಾನದ ಬಗ್ಗೆ ಬೇರೆಯವರಿಗೆ ಹೇಳೋದನ್ನು ಅವಳು ನಿಲ್ಲಿಸಲಿಲ್ಲ. ಈ ಸಂತೋಷದ ವಿಷ್ಯನ ಬೇರೆಯವರಿಗೆ ಖುಷಿಖುಷಿಯಿಂದ ಹೇಳ್ತಾ ಇದ್ದಳು.

ಆಮೇಲೆ ಯೇಸು ತನ್ನ ಅಪೊಸ್ತಲರಿಗೆ ಮತ್ತು ತುಂಬ ಶಿಷ್ಯರಿಗೆ ಕಾಣಿಸಿಕೊಂಡನು. ಒಂದು ಸಲ ಆತನು 500ಕ್ಕಿಂತ ಹೆಚ್ಚು ಜನರು ಒಂದು ಕಡೆ ಸೇರಿಬಂದಿದ್ದಾಗ ಅವರೆಲ್ಲರಿಗೆ ಕಾಣಿಸಿಕೊಂಡನು. (1 ಕೊರಿಂಥ 15:3-8) ಒಂದೊಂದು ಸಲನೂ ಯೇಸು ಕಾಣಿಸಿಕೊಂಡಾಗ ಮರಿಯ ಆ ಸ್ಥಳದಲ್ಲಿ ಇದ್ದಿರಲಿ ಅಥವಾ ಅದರ ಬಗ್ಗೆ ಕೇಳಿಸಿಕೊಂಡಿರಲಿ ಅವಳ ನಂಬಿಕೆಯಂತೂ ಖಂಡಿತ ಜಾಸ್ತಿ ಆಯ್ತು. ಪಂಚಾಶತ್ತಮ ಹಬ್ಬದ ದಿನದಂದು ಯೆರೂಸಲೇಮಿನಲ್ಲಿ ಕೂಡಿಬಂದ ಯೇಸುವಿನ ಶಿಷ್ಯರ ಮೇಲೆ ಪವಿತ್ರಾತ್ಮ ಸುರಿಸಲಾಯಿತು. ಆ ಶಿಷ್ಯರಲ್ಲಿ ಕೆಲವು ಸ್ತ್ರೀಯರೂ ಇದ್ದರು. ಅವರಲ್ಲಿ ಮಗ್ದಲದ ಮರಿಯ ಒಬ್ಬಳಾಗಿರಬಹುದು.—ಅಪೊಸ್ತಲರ ಕಾರ್ಯ 1:14, 15; 2:1-4.

ಒಟ್ಟಿನಲ್ಲಿ ಮಗ್ದಲದ ಮರಿಯ ಜೀವ ಇರೋ ತನಕ ನಂಬಿಕೆ ಕಾಪಾಡಿಕೊಂಡಳು ಅನ್ನೋದಂತೂ ಖಂಡಿತ. ನಾವು ಸಹ ಅವಳ ತರನೇ ನಂಬಿಕೆ ಕಾಪಾಡಿಕೊಳ್ಳೋಣ. ಮಗ್ದಲದ ಮರಿಯಳ ಮಾದರಿಯನ್ನು ಅನುಕರಿಸುತ್ತಾ ಯೇಸು ನಮಗೋಸ್ಕರ ಮಾಡಿದ ಎಲ್ಲ ವಿಷಯಗಳಿಗಾಗಿ ಕೃತಜ್ಞತೆ ತೋರಿಸೋಣ, ದೀನರಾಗಿದ್ದು ಬೇರೆಯವರ ಸೇವೆ ಮಾಡೋಣ. ದೇವರು ನಮಗೆ ಸಹಾಯ ಮಾಡ್ತಾನೆ ಅಂತ ಭರವಸೆ ಇಡೋಣ.

^ ಪ್ಯಾರ. 12 ಒಬ್ಬ ದೇವದೂತನು ಯೇಸುವಿನ ಪುನರುತ್ಥಾನದ ಬಗ್ಗೆ ಸಮಾಧಿ ಬಳಿಯಿದ್ದ ಸ್ತ್ರೀಯರಿಗೆ ಹೇಳಿದಾಗ ಮರಿಯ ಅಲ್ಲಿ ಇರಲಿಲ್ಲ. ಇದ್ದಿದ್ರೆ ಅವಳು ಪೇತ್ರ ಯೋಹಾನನಿಗೆ ಯೇಸುವಿನ ದೇಹ ಸಮಾಧಿಯಲ್ಲಿಲ್ಲ ಅಂತ ಹೇಳ್ತಿರಲಿಲ್ಲ, ಯೇಸು ಜೀವಂತವಾಗಿ ಎದ್ದಿದ್ದಾನೆ ಅಂತ ದೇವದೂತ ಹೇಳಿದ ವಿಷ್ಯನ ಹೇಳ್ತಿದ್ದಳು.—ಮತ್ತಾಯ 28:2-4; ಮಾರ್ಕ 16:1-8.