ಮಾಹಿತಿ ಇರುವಲ್ಲಿ ಹೋಗಲು

ದೇವರ ರಾಜ್ಯ ಇರೋದು ನಿಮ್ಮ ಹೃದಯದಲ್ಲಾ?

ದೇವರ ರಾಜ್ಯ ಇರೋದು ನಿಮ್ಮ ಹೃದಯದಲ್ಲಾ?

ಬೈಬಲ್‌ ಕೊಡೋ ಉತ್ತರ

 ಇಲ್ಲ. ದೇವರ ರಾಜ್ಯ ಕೇವಲ ಕ್ರೈಸ್ತರ ಮನಸ್ಸಿನಲ್ಲಿರುವ ಒಂದು ಸ್ಥಿತಿಯಲ್ಲ. a ದೇವರ ರಾಜ್ಯ ಇರೋದು ‘ಸ್ವರ್ಗದಲ್ಲಿ’ ಅಂತ ಬೈಬಲ್‌ ಹೇಳುತ್ತೆ. (ಮತ್ತಾಯ 4:17) ದೇವರ ರಾಜ್ಯ ಸ್ವರ್ಗದಿಂದ ಆಳುತ್ತಿರುವ ಒಂದು ನಿಜವಾದ ಸರ್ಕಾರ ಅನ್ನೋದನ್ನ ಬೈಬಲ್‌ ಹೇಗೆ ತೋರಿಸುತ್ತೆ ಅಂತ ನೋಡೋಣ.

  •   ಆಳುವ ರಾಜರು, ಪ್ರಜೆಗಳು ಮತ್ತು ನಿಯಮಗಳು ದೇವರ ರಾಜ್ಯದಲ್ಲಿ ಇರುತ್ತೆ. ದೇವರ ಚಿತ್ತ ಸ್ವರ್ಗದಲ್ಲಿ ಮತ್ತು ಭೂಮಿಯಲ್ಲಿ ಸರಾಗವಾಗಿ ನೆರವೇರೋಕೆ ಬೇಕಾದಂತ ಕಟ್ಟುಪಾಡುಗಳೂ ಇರುತ್ತವೆ.—ಮತ್ತಾಯ 6:10; ಪ್ರಕಟನೆ 5:10.

  •   ದೇವರ ಸರ್ಕಾರ ಅಥವಾ ರಾಜ್ಯ ಭೂಮಿ ಮೇಲಿರೋ “ಎಲ್ಲ ಜನ್ರು, ದೇಶಗಳು, ಬೇರೆಬೇರೆ ಭಾಷೆ ಮಾತಾಡೋ ಜನ್ರ” ಮೇಲೆ ಆಳ್ವಿಕೆ ನಡೆಸುತ್ತೆ. (ದಾನಿಯೇಲ 7:13, 14) ಈ ಆಳ್ವಿಕೆ ನಡೆಸೋಕೆ ಬೇಕಾದ ಅಧಿಕಾರ ಪ್ರಜೆಗಳಿಂದ ಬರಲ್ಲ ಬದಲಾಗಿ ದೇವರಿಂದ ಬರುತ್ತೆ ಅಂತ ನಮಗೆ ಗೊತ್ತಾಗುತ್ತೆ.—ಕೀರ್ತನೆ 2:4-6; ಯೆಶಾಯ 9:7.

  •   ತನ್ನ ನಂಬಿಗಸ್ತ ಅಪೊಸ್ತಲರಿಗೆ ಯೇಸು ‘ನೀವು ನನ್ನ ಜೊತೆ ಸಿಂಹಾಸನದ ಮೇಲೆ ಕೂತು’ ಆಳ್ತೀರಾ ಅಂತ ಹೇಳಿದ.—ಲೂಕ 22:28, 30.

  •   ದೇವರ ರಾಜ್ಯಕ್ಕೆ ಶತ್ರುಗಳು ಕೂಡ ಇದ್ದಾರೆ. ಆ ಶತ್ರುಗಳನ್ನ ದೇವರ ರಾಜ್ಯನೇ ನಾಶಮಾಡುತ್ತೆ.—ಕೀರ್ತನೆ 2:1, 2, 8, 9; 110:1, 2; 1 ಕೊರಿಂಥ 15:25, 26.

 ದೇವರ ರಾಜ್ಯ ನಮ್ಮ ಹೃದಯದಲ್ಲಿದೆ ಅಥವಾ ಒಬ್ಬ ವ್ಯಕ್ತಿಯ ಹೃದಯದ ಮೂಲಕ ಆ ರಾಜ್ಯ ಆಳ್ತಿದೆ ಅಂತ ಬೈಬಲ್‌ನಲ್ಲಿ ಎಲ್ಲೂ ಹೇಳಲ್ಲ. ಆದ್ರೆ “ದೇವರ ಆಳ್ವಿಕೆಯ ಸಂದೇಶ” ಅಥವಾ “ದೇವರ ಆಳ್ವಿಕೆಯ ಈ ಸಿಹಿಸುದ್ದಿ” ನಮ್ಮ ಹೃದಯವನ್ನ ಪ್ರಭಾವಿಸೋ ಹಾಗೆ ಬಿಡಬೇಕು ಅಂತ ಬೈಬಲ್‌ ಹೇಳುತ್ತೆ.—ಮತ್ತಾಯ 13:19; 24:14.

“ದೇವರ ರಾಜ್ಯ ನಿಮ್ಮಲ್ಲಿಯೇ” ಇದೆ ಅನ್ನೋದರ ಅರ್ಥ ಏನು?

 ಲೂಕ 17:21ನ್ನ ಕೆಲವು ಬೈಬಲ್‌ಗಳಲ್ಲಿ ಭಾಷಾಂತರಿಸಿರುವ ರೀತಿ ದೇವರ ರಾಜ್ಯ ಎಲ್ಲಿದೆ ಅಥವಾ ಯಾವ ಜಾಗದಲ್ಲಿದೆ ಅನ್ನೋದರ ಬಗ್ಗೆ ಕೆಲವು ಜನರಲ್ಲಿ ಗೊಂದಲಗಳನ್ನ ಉಂಟುಮಾಡಿವೆ. ಉದಾಹರಣೆಗೆ, ಸತ್ಯವೇದವು ಬೈಬಲ್‌ನಲ್ಲಿ “ದೇವರ ರಾಜ್ಯ ನಿಮ್ಮಲ್ಲಿಯೇ ಅದೇ” ಅಂತ ಭಾಷಾಂತರಿಸಲಾಗಿದೆ. ಈ ವಚನವನ್ನ ಚೆನ್ನಾಗಿ ಅರ್ಥ ಮಾಡ್ಕೊಬೇಕಂದ್ರೆ ಅದರ ಹಿಂದೆ-ಮುಂದೆ ಇರುವ ವಚನಗಳನ್ನ ನೋಡಬೇಕು.

ಯೇಸುವನ್ನ ಸಾಯಿಸಬೇಕು ಅಂತ ಸಂಚು ಮಾಡ್ತಿದ್ದ ಕಠಿಣ ಹೃದಯಗಳಲ್ಲಿ ದೇವರ ರಾಜ್ಯ ಇರಲಿಲ್ಲ

 ಇದರ ಹಿಂದೆ ಇರುವ ವಚನಗಳನ್ನ ನೋಡಿದರೆ ಒಂದು ವಿಷ್ಯ ಗೊತ್ತಾಗುತ್ತೆ, ಯೇಸು ಮಾತಾಡ್ತಾ ಇದಿದ್ದು ಫರಿಸಾಯರ ಬಗ್ಗೆ. ಅವರು ಯೇಸುವನ್ನ ವಿರೋಧಿಸುವುದು ಮಾತ್ರ ಅಲ್ಲ ಆತನನ್ನ ಸಾಯಿಸೋದಕ್ಕೂ ಸಂಚು ಮಾಡುತ್ತಿದ್ದರು. (ಮತ್ತಾಯ 12:14; ಲೂಕ 17:20) ಹೀಗಿರೋವಾಗ, ದೇವರ ರಾಜ್ಯ ಇಂತಹ ಕಠಿಣ ಹೃದಯಗಳ ಒಂದು ಸ್ಥಿತಿಯಾಗಿತ್ತು ಅಂತ ನಾವು ಹೇಳೋದು ಎಷ್ಟು ಮಾತ್ರಕ್ಕೆ ಸರಿ? ಯೇಸು ಅವರಿಗೆ ಹೀಗಂದನು: “ನಿಮ್ಮೊಳಗೆ ಕಪಟತನ, ಅನ್ಯಾಯ ತುಂಬಿಕೊಂಡಿದೆ.”—ಮತ್ತಾಯ 23:27, 28.

 ಆದರೆ ಕೆಲವು ಭಾಷಾಂತರಗಳಲ್ಲಿ ಲೂಕ 17:21ನ ಸರಿಯಾದ ರೀತಿಯಲ್ಲಿ ಅನುವಾದ ಮಾಡಿದ್ದಾರೆ. ಉದಾಹರಣೆಗೆ, “ದೇವರ ರಾಜ್ಯ ಇಲ್ಲೇ ನಿಮ್ಮ ಜೊತೆ ಇದೆ.” (ಕಂಟೆಂಪರರಿ ಇಂಗ್ಲಿಷ್‌ ವರ್ಷನ್‌) ಮತ್ತು “ದೇವರ ಆಳ್ವಿಕೆ ನಿಮ್ಮ ಮಧ್ಯದಲ್ಲೇ ಇದೆ.” (ಹೊಸ ಲೋಕ ಭಾಷಾಂತರ) ಈ ಎರಡು ಭಾಷಾಂತರಗಳಿಂದ ಯೇಸು ನಿಜವಾಗ್ಲೂ ಏನು ಹೇಳ್ತಿದ್ದ ಅಂತ ಗೊತ್ತಾಗುತ್ತೆ. ಅದೇನಂದ್ರೆ ಯೇಸು ದೇವರ ರಾಜ್ಯದ ರಾಜ. ಆ ರಾಜನೇ ಫರಿಸಾಯರ ಮಧ್ಯೆ ಇದ್ದ. ಹಾಗಾಗಿ ದೇವರ ರಾಜ್ಯನೇ ಒಂದು ರೀತಿಯಲ್ಲಿ ಅವರ ಜೊತೆ ಇತ್ತು.—ಲೂಕ 1:32, 33.

a ಅನೇಕ ಚರ್ಚಗಳು ದೇವರ ರಾಜ್ಯ ಅಂದ್ರೆ ಕೇವಲ ಒಬ್ಬ ವ್ಯಕ್ತಿಯ ಒಳಗಡೆ ಅಥವಾ ಒಬ್ಬ ವ್ಯಕ್ತಿಯ ಮನಸ್ಸಲ್ಲಿ ಇರುವಂಥ ಒಂದು ಸ್ಥಿತಿ ಅಷ್ಟೇ ಅಂತ ಹೇಳ್ಕೊಡ್ತಾರೆ. ಉದಾಹರಣೆಗೆ, ಅಮೆರಿಕದಲ್ಲಿರುವ ದಿ ಸದ್ರನ್‌ ಬ್ಯಾಪ್ಟಿಸ್ಟ್‌ ಕನ್ವೆನ್ಷನ್‌ ಚರ್ಚ್‌ ಪ್ರಕಾರ ದೇವರ ರಾಜ್ಯ ಅಂದರೆ “ಒಬ್ಬ ವ್ಯಕ್ತಿಯ ಹೃದಯ ಮತ್ತು ಅವನ ಜೀವನದಲ್ಲಿ ದೇವರು ಆಳ್ತಿರೋದೇ ಆಗಿದೆ.” ಅದೇ ತರ ಪೋಪ್‌ ಬೆನೆಡಿಕ್ಟ್‌ XVI ಬರೆದ ನಜರೇತಿನ ಯೇಸು (ಇಂಗ್ಲಿಷ್‌) ಅನ್ನೊ ಪುಸ್ತಕದಲ್ಲಿ, “ದೇವರ ರಾಜ್ಯ ಅನ್ನೋದು ಒಬ್ಬ ವ್ಯಕ್ತಿ ಯೇಸುವಿನ ಬೋಧನೆಗಳನ್ನ ಒಪ್ಪಿಕೊಂಡು, ಅದನ್ನ ಕೇಳಿದಾಗ ಅವನ ಹೃದಯದಲ್ಲಿ ಆ ರಾಜ್ಯ ಬರೋದೇ ಆಗಿದೆ.”