ಮಾಹಿತಿ ಇರುವಲ್ಲಿ ಹೋಗಲು

ದಯಾಮರಣ—ಇದ್ರ ಬಗ್ಗೆ ಬೈಬಲ್‌ ಏನು ಹೇಳುತ್ತೆ?

ದಯಾಮರಣ—ಇದ್ರ ಬಗ್ಗೆ ಬೈಬಲ್‌ ಏನು ಹೇಳುತ್ತೆ?

ಬೈಬಲ್‌ ಕೊಡೋ ಉತ್ತರ

 ದಯಾಮರಣ ಅಥವಾ ಯುಥನೇಶಿಯ a ಬಗ್ಗೆ ಬೈಬಲ್‌ ನಿರ್ದಿಷ್ಟವಾಗಿ ಏನೂ ಹೇಳಲ್ಲ. ಆದ್ರೆ ಜೀವ ಮತ್ತು ಮರಣದ ಬಗ್ಗೆ ಸರಿಯಾದ ನೋಟ ಇರಬೇಕು ಅಂತ ಹೇಳುತ್ತೆ. ಜೀವ ತೆಗೆಯೋದು ತಪ್ಪು, ಆದ್ರೆ ಒಬ್ರನ್ನ ಉಳಿಸೋಕೇ ಆಗಲ್ಲ ಅಂತ ಗೊತ್ತಾದ ಮೇಲೆ ಬರೀ ಸಾವನ್ನ ಮುಂದೂಡೋಕಾಗಿ ಚಿಕಿತ್ಸೆ ಮಾಡಬೇಕಂತ ಏನಿಲ್ಲ.

 ದೇವರು ಸೃಷ್ಟಿಕರ್ತ ಮತ್ತು “ಜೀವದ ಬುಗ್ಗೆ” ಅಂತ ಬೈಬಲ್‌ ಹೇಳುತ್ತೆ. (ಕೀರ್ತನೆ 36:9; ಅಪೊಸ್ತಲರ ಕಾರ್ಯ 17:28) ಯೆಹೋವ ದೇವರಿಗೆ ಜೀವ ತುಂಬ ಅಮೂಲ್ಯ. ಅದಕ್ಕೆ ಬೇರೆಯವರ ಜೀವ ತೆಗೆಯೋದು ಅಥ್ವಾ ಆತ್ಮಹತ್ಯೆ ಮಾಡಿಕೊಳ್ಳೋದು ಆತನಿಗೆ ಒಂಚೂರು ಇಷ್ಟ ಇಲ್ಲ. (ವಿಮೋಚನಕಾಂಡ 20:13; 1 ಯೋಹಾನ 3:15) ನಮ್ಮ ಮತ್ತು ಬೇರೆಯವರ ಜೀವವನ್ನ ಕಾಪಾಡಿಕೊಳ್ಳೋಕೆ ಬೇಕಾದ ಸುರಕ್ಷಾ ಕ್ರಮಗಳನ್ನ ಪಾಲಿಸಬೇಕು ಅಂತ ಬೈಬಲ್‌ ತಿಳಿಸುತ್ತೆ. (ಧರ್ಮೋಪದೇಶಕಾಂಡ 22:8) ಇದ್ರಿಂದ ನಮಗೆ, ಜೀವ ಅನ್ನೋ ಉಡುಗೊರೆಯನ್ನ ತುಂಬ ಅಮೂಲ್ಯವಾಗಿ ನೋಡಬೇಕು ಅನ್ನೋದು ದೇವರ ಇಷ್ಟ ಅಂತ ಗೊತ್ತಾಗುತ್ತೆ.

ಮಾರಣಾಂತಿಕ ಕಾಯಿಲೆಯಿಂದ ನರಳುತ್ತಿರೋ ವ್ಯಕ್ತಿಯ ಜೀವ ತೆಗೆಯೋದು ಸರಿನಾ?

 ಒಬ್ಬ ವ್ಯಕ್ತಿಗೆ ಬದುಕುಳಿಯೋಕೆ ಸಾಧ್ಯನೇ ಇಲ್ಲದೆ, ತುಂಬ ನೋವಿನಿಂದ ನರಳುತ್ತಿದ್ದರೂ, ಅವ್ರ ಜೀವ ತೆಗೆಯೋದು ತಪ್ಪು ಅಂತ ಬೈಬಲ್‌ ಹೇಳುತ್ತೆ. ಇದಕ್ಕೆ ಒಂದು ಉದಾಹರಣೆ, ಇಸ್ರಾಯೇಲಿನ ರಾಜ ಸೌಲ. ಯುದ್ಧದಲ್ಲಿ ಸೌಲನಿಗೆ ಪ್ರಾಣ ಹೋಗುವಷ್ಟು ಗಾಯವಾದಾಗ ತನ್ನ ಸೇವಕನಿಗೆ ಪ್ರಾಣ ತೆಗೆಯುವಂತೆ ಹೇಳಿದ. (1 ಸಮುವೇಲ 31:3, 4) ಆದ್ರೆ ಆ ಸೇವಕ ಅದಕ್ಕೆ ಒಪ್ಪಲಿಲ್ಲ. ಸೌಲ ಹೇಳಿದ ತರ ಅವನನ್ನ ಸಾಯಿಸಿದೆ ಅಂತ ಒಬ್ಬ ದಾರಿಹೋಕ ದಾವೀದನ ಹತ್ರ ಸುಳ್ಳು ಹೇಳಿದ. ಅದಕ್ಕೆ ದಾವೀದ ಆ ಮನುಷ್ಯನನ್ನ ರಕ್ತಾಪರಾಧಿ ಅಂತ ದೂಷಿಸಿದ. ಯಾಕಂದ್ರೆ ಬೇರೆಯವ್ರ ಪ್ರಾಣ ತೆಗೆಯೋದು ಯೆಹೋವನಿಗೆ ಇಷ್ಟ ಇಲ್ಲ ಅಂತ ಅವನಿಗೆ ಗೊತ್ತಿತ್ತು.—2 ಸಮುವೇಲ 1:6-16.

ಸಾವನ್ನ ಮುಂದೂಡೋಕಾಗಿ ಮಾತ್ರ ಚಿಕಿತ್ಸೆ ಮಾಡೋದು ಸರಿನಾ?

 ಒಬ್ಬ ವ್ಯಕ್ತಿ ಸತ್ತು ಹೋಗ್ತಾನೆ ಅಂತ ಗ್ಯಾರಂಟಿ ಗೊತ್ತಾದ ಮೇಲೆ, ಅವನ ಸಾವನ್ನ ಮುಂದೂಡೋಕಾಗಿ ಚಿಕಿತ್ಸೆ ಮಾಡೋದು ಸರಿನಾ? ಇದ್ರ ಬಗ್ಗೆ ಸರಿಯಾದ ನೋಟವನ್ನ ಇಟ್ಟುಕೊಳ್ಳೋಕೆ ಬೈಬಲ್‌ ಸಹಾಯ ಮಾಡುತ್ತೆ. ಸಾವು ಪಾಪದ ಪರಿಣಾಮ, ನಮ್ಮೆಲ್ಲರ ಶತ್ರು ಅಂತ ಬೈಬಲ್‌ ಹೇಳುತ್ತೆ. (ರೋಮನ್ನರಿಗೆ 5:12; 1 ಕೊರಿಂಥ 15:26) ಆದ್ರೆ ನಾವು ಅದಕ್ಕೆ ಹೆದರಬೇಕಾಗಿಲ್ಲ. ಯಾಕಂದ್ರೆ ಸತ್ತು ಹೋದವರನ್ನ ಮತ್ತೆ ಜೀವಂತವಾಗಿ ಎಬ್ಬಿಸ್ತೇನೆ ಅಂತ ದೇವರು ಮಾತು ಕೊಟ್ಟಿದ್ದಾನೆ. (ಯೋಹಾನ 6:39, 40) ಯಾರು ಜೀವವನ್ನ ಅಮೂಲ್ಯವಾಗಿ ನೋಡ್ತಾರೋ ಅವ್ರು ಒಳ್ಳೇ ಚಿಕಿತ್ಸೆ ಪಡ್ಕೊಳ್ತಾರೆ. ಹಾಗಂತ, ಸಾವು ಖಂಡಿತ ಅಂತ ಗೊತ್ತಿದ್ದ ಮೇಲೂ ಸಾವನ್ನ ಮುಂದೂಡೋಕಾಗಿ ಚಿಕಿತ್ಸೆ ಮಾಡಬೇಕು ಅಂತೇನಿಲ್ಲ.

ಆತ್ಮಹತ್ಯೆನ ದೇವರು ಕ್ಷಮಿಸ್ತಾನಾ?

 ಕ್ಷಮಿಸ್ತಾನೆ. ಯಾಕಂದ್ರೆ ಬೈಬಲಿನಲ್ಲಿ ತಿಳಿಸಿರೋ ಕ್ಷಮೆನೇ ಸಿಗದ ಪಾಪಗಳಲ್ಲಿ ಆತ್ಮಹತ್ಯೆ ಸೇರಿಲ್ಲ. ಆದ್ರೆ ಒಬ್ಬನು ತನ್ನ ಸ್ವಂತ ಜೀವವನ್ನ ತೆಗೆಯೋದು ಗಂಭೀರ ಪಾಪ ಅಂತ ಬೈಬಲ್‌ ಹೇಳುತ್ತೆ. b ಕೆಲವ್ರು ಮಾನಸಿಕ ತೊಂದ್ರೆ, ವಿಪರೀತ ಒತ್ತಡದ ಕಾರಣ ಆತ್ಮಹತ್ಯೆ ಮಾಡಿಕೊಳ್ತಾರೆ. ಇನ್ನೂ ಕೆಲವ್ರಿಗೆ ಅನುವಂಶೀಯವಾಗಿ ಇಂಥ ಸ್ವಭಾವ ಇರೋದ್ರಿಂದ ಆತ್ಮಹತ್ಯೆ ಮಾಡಿಕೊಳ್ತಾರೆ. ಇವ್ರ ಪರಿಸ್ಥಿತಿನ ದೇವರು ಚೆನ್ನಾಗಿ ಅರ್ಥಮಾಡಿಕೊಳ್ತಾನೆ. (ಕೀರ್ತನೆ 103:13, 14) ಒತ್ತಡ, ನಿರಾಶೆಯಲ್ಲಿ ಇರೋರಿಗೆ ಸಾಂತ್ವನ ಕೊಡ್ತೇನೆ ಮತ್ತು “ನೀತಿವಂತರಿಗೂ ಅನೀತಿವಂತರಿಗೂ ಪುನರುತ್ಥಾನವಾಗುವುದೆಂದು” ಬೈಬಲಿನ ಮೂಲಕ ಆತನು ಮಾತು ಕೊಟ್ಟಿದ್ದಾನೆ. (ಅಪೊಸ್ತಲರ ಕಾರ್ಯ 24:15) ಇದ್ರಿಂದ, ಆತ್ಮಹತ್ಯೆಯಂಥ ಗಂಭೀರ ಪಾಪ ಮಾಡಿದವ್ರನ್ನೂ ದೇವರು ಮತ್ತೆ ಜೀವಂತವಾಗಿ ಎಬ್ಬಿಸ್ತಾನೆ ಅನ್ನೋ ನಿರೀಕ್ಷೆ ಇದೆ.

a ಯುಥನೇಶಿಯ ಅಥವಾ ದಯಾಮರಣ ಅಂದ್ರೆ, “ತುಂಬ ಕಾಯಿಲೆಯಿಂದ ನರಳುತ್ತಿರೋ ಅಥವಾ ತುಂಬಾ ಗಾಯವಾಗಿ ಒದ್ದಾಡುತ್ತಿರೋರಿಗೆ ಆ ನೋವಿಂದ ಬಿಡುಗಡೆ ಮಾಡೋಕಾಗಿ ಅವ್ರ ಜೀವವನ್ನ ತೆಗೆಯೋದು” ಅಂತ ಅರ್ಥ. (ಮೆರಿಯಮ್‌-ವೆಬ್‌ಸ್ಟರ್‌ ಲರ್ನರ್ಸ್‌ ಡಿಕ್ಷನರಿ) ಇಂಥವರ ಜೀವನವನ್ನ ಕೊನೆಗಾಣಿಸೋಕೆ ಡಾಕ್ಟರ್‌ ಸಹಾಯ ಪಡ್ಕೊಳ್ಳೋದನ್ನ ಫಿಸಿಶಿಯನ್‌ ಅಸಿಸ್ಟೆಡ್‌ ಸುಯಿಸೈಡ್‌ ಅಂತಾರೆ.

b ಕೆಲವ್ರು ಆತ್ಮಹತ್ಯೆ ಮಾಡಿಕೊಂಡಿದ್ರ ಬಗ್ಗೆ ಬೈಬಲಿನಲ್ಲಿ ತಿಳಿಸಿರೋದಾದ್ರೂ ಅವ್ರು ದೇವರ ಇಷ್ಟದ ಪ್ರಕಾರ ನಡ್ಕೊಳ್ಳಲಿಲ್ಲ.—2 ಸಮುವೇಲ 17:23; 1 ಅರಸು 16:18; ಮತ್ತಾಯ 27:3-5.