ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಾವು ಯಾರಿಗೆ ಪ್ರಾರ್ಥಿಸಬೇಕು?

ನಾವು ಯಾರಿಗೆ ಪ್ರಾರ್ಥಿಸಬೇಕು?

ಸಂ ಶೋಧಕನೊಬ್ಬನು ಇತ್ತೀಚೆಗೆ ವಿವಿಧ ಕ್ರೈಸ್ತ ಪಂಗಡಗಳಿಗೆ ಸೇರಿದ 800ಕ್ಕಿಂತ ಹೆಚ್ಚಿನ ಯುವಜನರಿಗೆ ಕೆಲವು ಪ್ರಶ್ನೆಗಳನ್ನು ಕೇಳಿ ತಮ್ಮ ಅಭಿಪ್ರಾಯವನ್ನು ಬರೆಯುವಂತೆ ತಿಳಿಸಿದನು. ಅವುಗಳಲ್ಲಿ ಒಂದು ಪ್ರಶ್ನೆ, ‘ಯೇಸು ನಿಮ್ಮ ಪ್ರಾರ್ಥನೆಗಳಿಗೆ ಉತ್ತರ ಕೊಡುತ್ತಾನೆಂದು ನಂಬುತ್ತೀರೋ?’ ಎಂದಾಗಿತ್ತು. ಈ ಪ್ರಶ್ನೆಗೆ 60ಕ್ಕಿಂತ ಹೆಚ್ಚು ಪ್ರತಿಶತ ಯುವಜನರು ‘ಯೇಸು ಪ್ರಾರ್ಥನೆಗಳಿಗೆ ಉತ್ತರ ಕೊಡುತ್ತಾನೆಂದು ದೃಢವಾಗಿ ನಂಬುತ್ತೇವೆ’ ಎಂದು ಬರೆದರು. ಆದರೆ ಒಬ್ಬ ಯುವತಿ ಮಾತ್ರ ‘ಯೇಸು ಅಲ್ಲ ಬದಲಿಗೆ “ದೇವರು” ನಮ್ಮ ಪ್ರಾರ್ಥನೆಗಳಿಗೆ ಉತ್ತರ ಕೊಡುತ್ತಾನೆಂದು ನಂಬುತ್ತೇನೆ’ ಎಂದು ಬರೆದಳು.

ಇದರ ಬಗ್ಗೆ ನಿಮ್ಮ ಅಭಿಪ್ರಾಯವೇನು? ನಾವು ಯೇಸುವಿಗೆ ಪ್ರಾರ್ಥಿಸಬೇಕಾ ಅಥವಾ ದೇವರಿಗೆ ಪ್ರಾರ್ಥಿಸಬೇಕಾ? * ಈ ಪ್ರಶ್ನೆಗೆ ಯೇಸು ಯಾವ ಉತ್ತರ ಕೊಡುತ್ತಾನೆಂದು ನೋಡೋಣ.

ಯಾರಿಗೆ ಪ್ರಾರ್ಥಿಸಬೇಕೆಂದು ಯೇಸು ಹೇಳಿದ್ದಾನೆ?

ಯೇಸು ತನ್ನ ಬೋಧನೆ ಮತ್ತು ಮಾದರಿಯ ಮೂಲಕ ನಾವು ಯಾರಿಗೆ ಪ್ರಾರ್ಥಿಸಬೇಕೆಂದು ತೋರಿಸಿಕೊಟ್ಟಿದ್ದಾನೆ.

ತನ್ನ ಸ್ವರ್ಗೀಯ ತಂದೆಗೆ ಮಾತ್ರ ಪ್ರಾರ್ಥಿಸಬೇಕೆಂದು ಯೇಸು ತನ್ನ ಮಾದರಿಯ ಮೂಲಕ ನಮಗೆ ಕಲಿಸಿದ್ದಾನೆ

ಯೇಸುವಿನ ಬೋಧನೆ: ಯೇಸುವಿನ ಶಿಷ್ಯನೊಬ್ಬ “ಕರ್ತನೇ ಪ್ರಾರ್ಥನೆ ಮಾಡುವುದನ್ನು ಕಲಿಸು” ಎಂದು ಕೇಳಿಕೊಂಡಾಗ ‘ತಂದೆಗೆ’ ಪ್ರಾರ್ಥಿಸುವಂತೆ ಯೇಸು ಕಲಿಸಿದನು. (ಲೂಕ 11:1, 2) ಇನ್ನೊಮ್ಮೆ ತನ್ನ ಭಾಷಣದಲ್ಲಿ ‘ನಿಮ್ಮ ತಂದೆಗೆ ಪ್ರಾರ್ಥಿಸಿ’ ಎಂದು ಕೇಳುಗರನ್ನು ಉತ್ತೇಜಿಸಿದನು. ನಂತರ ‘ನಿಮ್ಮ ತಂದೆಯಾದ ದೇವರನ್ನು ಕೇಳುವ ಮುಂಚೆಯೇ ನಿಮಗೆ ಯಾವುದರ ಆವಶ್ಯಕತೆ ಇದೆಯೆಂಬುದು ದೇವರಿಗೆ ತಿಳಿದಿದೆ’ ಎಂದು ಅವರಲ್ಲಿ ಭರವಸೆ ತುಂಬಿಸಿದನು. (ಮತ್ತಾಯ 6:6, 8) ಅವನು ಸಾಯುವ ಮುಂಚಿನ ರಾತ್ರಿಯಂದು ತನ್ನ ಶಿಷ್ಯರಿಗೆ “ನೀವು ತಂದೆಯನ್ನು ಏನೇ ಬೇಡಿಕೊಳ್ಳುವುದಾದರೂ ಅದನ್ನು ಆತನು ನನ್ನ ಹೆಸರಿನಲ್ಲಿ ನಿಮಗೆ ಕೊಡುವನು” ಎಂದು ಹೇಳಿದನು. (ಯೋಹಾನ 16:23) ಹೀಗೆ ಯೇಸು ತನ್ನ ಮತ್ತು ನಮ್ಮೆಲ್ಲರ ತಂದೆಯಾದ ಯೆಹೋವ ದೇವರಿಗೆ ಮಾತ್ರ ಪ್ರಾರ್ಥಿಸುವಂತೆ ಬೋಧಿಸಿದನು.—ಯೋಹಾನ 20:17.

ಯೇಸುವಿನ ಮಾದರಿ: ದೇವರಿಗೆ ಪ್ರಾರ್ಥಿಸಬೇಕೆಂದು ಯೇಸು ಬೋಧಿಸಿದ್ದಷ್ಟೇ ಅಲ್ಲ ಸ್ವತಃ ಆತನೇ ದೇವರಿಗೆ ಪ್ರಾರ್ಥಿಸಿದನು. ತನ್ನ ವೈಯಕ್ತಿಕ ಪ್ರಾರ್ಥನೆಯಲ್ಲಿ “ತಂದೆಯೇ, ಸ್ವರ್ಗ ಭೂಲೋಕಗಳ ಒಡೆಯನೇ. . . ನಾನು ನಿನ್ನನ್ನು ಬಹಿರಂಗವಾಗಿ ಕೊಂಡಾಡುತ್ತೇನೆ” ಎಂದು ಹೇಳಿದನು. (ಲೂಕ 10:21) ಇನ್ನೊಂದು ಸಂದರ್ಭದಲ್ಲಿ, “ಕಣ್ಣುಗಳನ್ನು ಆಕಾಶದ ಕಡೆಗೆತ್ತಿ ‘ತಂದೆಯೇ ನೀನು ನನ್ನ ಪ್ರಾರ್ಥನೆಯನ್ನು ಕೇಳಿದ್ದಕ್ಕೆ ನಿನಗೆ ಕೃತಜ್ಞತೆ ಸಲ್ಲಿಸುತ್ತೇನೆ’” ಎಂದು ಹೇಳಿದನು. (ಯೋಹಾನ 11:41) ಸಾಯುವ ಸಂದರ್ಭದಲ್ಲೂ, “ತಂದೆಯೇ ನಿನ್ನ ಕೈಗಳಿಗೆ ನನ್ನ ಜೀವಶಕ್ತಿಯನ್ನು ಒಪ್ಪಿಸುತ್ತೇನೆ” ಎಂದು ಪ್ರಾರ್ಥಿಸಿದನು. (ಲೂಕ 23:46) “ಸ್ವರ್ಗ ಭೂಲೋಕಗಳ ಒಡೆಯನಾದ” ತನ್ನ ಸ್ವರ್ಗೀಯ ತಂದೆಗೆ ಮಾತ್ರ ಪ್ರಾರ್ಥಿಸಬೇಕೆಂದು ಯೇಸು ತನ್ನ ಮಾದರಿಯ ಮೂಲಕ ನಮಗೆ ಕಲಿಸಿದ್ದಾನೆ. (ಮತ್ತಾಯ 11:25; 26:41, 42; 1 ಯೋಹಾನ 2:6) ಯೇಸು ಕೊಟ್ಟ ಈ ಸಲಹೆಗಳನ್ನು ಆ ಸಮಯದಲ್ಲಿದ್ದ ಆತನ ಶಿಷ್ಯರು ಅರ್ಥಮಾಡಿಕೊಂಡರೋ?

ಆರಂಭದ ಕ್ರೈಸ್ತರು ಯಾರಿಗೆ ಪ್ರಾರ್ಥಿಸಿದರು?

ಯೇಸು ಭೂಮಿಯಿಂದ ಸ್ವರ್ಗಕ್ಕೆ ಹಿಂದಿರುಗಿದ ಕೆಲವು ವಾರಗಳೊಳಗೆ ಆತನ ಶಿಷ್ಯರನ್ನು ವಿರೋಧಿಗಳು ಹಿಂಸಿಸಿದರು ಮತ್ತು ಬೆದರಿಕೆ ಹಾಕಿದರು. (ಅಪೊಸ್ತಲರ ಕಾರ್ಯಗಳು 4:18) ಆ ಸಮಯದಲ್ಲಿ ಶಿಷ್ಯರು ವಿರೋಧಗಳನ್ನು ಎದುರಿಸಲು ಸಹಾಯಕ್ಕಾಗಿ ಪ್ರಾರ್ಥಿಸಿದರು ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಅವರು ಯಾರಿಗೆ ಪ್ರಾರ್ಥಿಸಿದರು? ಸಹಾಯಕ್ಕಾಗಿ ‘ಅವರೆಲ್ಲರೂ ಏಕಮನಸ್ಸಿನಿಂದ ತಮ್ಮ ಸ್ವರವೆತ್ತಿ ಯೆಹೋವ ದೇವರಿಗೆ’ “ಪವಿತ್ರ ಸೇವಕನಾದ ಯೇಸುವಿನ ಹೆಸರಿನಲ್ಲಿ” ಪ್ರಾರ್ಥಿಸಿದರು. (ಅಪೊಸ್ತಲರ ಕಾರ್ಯಗಳು 4:24, 30) ಆರಂಭದ ಕ್ರೈಸ್ತರು ಪ್ರಾರ್ಥನೆಯ ವಿಷಯದಲ್ಲಿ ಯೇಸು ಕೊಟ್ಟ ಸಲಹೆಗಳನ್ನು ಪಾಲಿಸಿದರು ಎಂದು ಈ ಘಟನೆ ತೋರಿಸುತ್ತದೆ. ಅವರು ದೇವರಿಗೆ ಪ್ರಾರ್ಥಿಸಿದರೇ ಹೊರತು ಯೇಸುವಿಗಲ್ಲ.

ಕೆಲವು ವರ್ಷಗಳ ನಂತರ ಅಪೊಸ್ತಲ ಪೌಲನೆಂಬ ವ್ಯಕ್ತಿ, ಅವನೂ ಅವನ ಸಂಗಡಿಗರೂ ಹೇಗೆ ಪ್ರಾರ್ಥಿಸಿದರು ಎಂದು ವಿವರಿಸಿದನು. ತನ್ನ ಜೊತೆ ಕ್ರೈಸ್ತರಿಗೆ ಬರೆದ ಪತ್ರದಲ್ಲಿ “ನಾವು ನಿಮಗಾಗಿ ಪ್ರಾರ್ಥನೆ ಮಾಡುವಾಗೆಲ್ಲ ನಮ್ಮ ಕರ್ತನಾದ ಯೇಸು ಕ್ರಿಸ್ತನ ತಂದೆಯಾದ ದೇವರಿಗೆ ಕೃತಜ್ಞತೆಯನ್ನು ಸಲ್ಲಿಸುತ್ತೇವೆ” ಎಂದು ಹೇಳಿದನು. (ಕೊಲೊಸ್ಸೆ 1:3) “ಯಾವಾಗಲೂ ಎಲ್ಲ ಕಾರ್ಯಗಳಿಗೋಸ್ಕರ ನಮ್ಮ ಕರ್ತನಾದ ಯೇಸು ಕ್ರಿಸ್ತನ ಹೆಸರಿನಲ್ಲಿ ನಮ್ಮ ದೇವರೂ ತಂದೆಯೂ ಆಗಿರುವಾತನಿಗೆ ಕೃತಜ್ಞತೆಯನ್ನು ಸಲ್ಲಿಸುತ್ತಾ ಇರಿ” ಎಂದು ಸಹ ಬರೆದನು. (ಎಫೆಸ 5:20) ಯೇಸುವಿನ ಹೆಸರಿನಲ್ಲಿ “ತಂದೆಯಾದ ದೇವರಿಗೆ” ಮಾತ್ರ ಪ್ರಾರ್ಥಿಸಬೇಕೆಂದು ಪೌಲನು ಉತ್ತೇಜಿಸಿದನು ಎಂದು ಈ ಮೇಲಿನ ಅಂಶಗಳಿಂದ ತಿಳಿದುಬರುತ್ತದೆ.—ಕೊಲೊಸ್ಸೆ 3:17.

ಆರಂಭದ ಕ್ರೈಸ್ತರಂತೆ ನಾವು ಸಹ ಪ್ರಾರ್ಥನೆಯ ವಿಷಯದಲ್ಲಿ ಯೇಸು ಕೊಟ್ಟ ಸಲಹೆಯನ್ನು ಅನ್ವಯಿಸಿಕೊಳ್ಳುವುದಾದರೆ ಆತನ ಮೇಲೆ ಪ್ರೀತಿಯಿದೆ ಎಂದು ತೋರಿಸುತ್ತೇವೆ. (ಯೋಹಾನ 14:15) ನಮ್ಮ ಸ್ವರ್ಗೀಯ ತಂದೆಯಾದ ಯೆಹೋವ ದೇವರಿಗೆ ಮಾತ್ರ ನಾವು ಪ್ರಾರ್ಥಿಸುವುದಾದರೆ ಕೀರ್ತನೆ 116:1, 2ರಲ್ಲಿರುವ ಮಾತನ್ನು ನಾವು ಸಹ ಹೇಳಬಹುದು. ಅಲ್ಲಿ ಹೀಗೆ ಹೇಳಲಾಗಿದೆ: ‘ಯೆಹೋವನನ್ನು ಪ್ರೀತಿಸುತ್ತೇನೆ; ಆತನು ನನ್ನ ಮೊರೆಯನ್ನು ಕೇಳುವನು . . . ಜೀವದಿಂದಿರುವ ವರೆಗೂ ಆತನಿಗೇ ಪ್ರಾರ್ಥಿಸುವೆನು.’ * ▪ (w15-E 01/01)

^ ಪ್ಯಾರ. 3 ಬೈಬಲ್‌ ಪ್ರಕಾರ, ದೇವರು ಯೇಸುವಿಗಿಂತ ಉನ್ನತನಾಗಿದ್ದಾನೆ. ಇದರ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಪುಸ್ತಕದ ಅಧ್ಯಾಯ 4ನ್ನು ನೋಡಿ. ಇದು ಯೆಹೋವನ ಸಾಕ್ಷಿಗಳಿಂದ ಪ್ರಕಾಶಿತ.

^ ಪ್ಯಾರ. 11 ನಮ್ಮ ಪ್ರಾರ್ಥನೆಗಳಿಗೆ ದೇವರು ಉತ್ತರ ಕೊಡಬೇಕೆಂದರೆ ಆತನು ನಮ್ಮಿಂದ ಕೇಳಿಕೊಳ್ಳುವ ವಿಷಯಗಳನ್ನು ನಾವು ಮಾಡಬೇಕು. ಇದರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಪುಸ್ತಕದ ಅಧ್ಯಾಯ 17ನ್ನು ನೋಡಿ.