ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಹದಿಹರೆಯದಿಂದ ಪ್ರೌಢಾವಸ್ಥೆಗೆ ಸಿದ್ಧತೆ

ಹದಿಹರೆಯದಿಂದ ಪ್ರೌಢಾವಸ್ಥೆಗೆ ಸಿದ್ಧತೆ

ಕುಟುಂಬ ಸಂತೋಷಕ್ಕೆ ಕೀಲಿಕೈಗಳು

ಹದಿಹರೆಯದಿಂದ ಪ್ರೌಢಾವಸ್ಥೆಗೆ ಸಿದ್ಧತೆ

“ನನ್ನ ಗಂಡುಮಕ್ಕಳು ಚಿಕ್ಕವರಿದ್ದಾಗ ಅವರೊಂದಿಗೆ ಮಾತಾಡಲು ತುಂಬ ಖುಷಿಯಾಗುತ್ತಿತ್ತು. ಏನು ಹೇಳಿದರೂ ಬಾಯ್ಮುಚ್ಚಿ ಕೇಳುತ್ತಿದ್ದರು, ಕೂಡಲೇ ಮಾಡುತ್ತಿದ್ದರು. ಈಗ ನನ್ನ ಭುಜದೆತ್ತರ ಬೆಳೆದ ಮಾತ್ರಕ್ಕೆ ಎಲ್ಲದಕ್ಕೂ ಎದುರು ಮಾತು. ಆಧ್ಯಾತ್ಮಿಕ ವಿಷಯಗಳಲ್ಲಿ ಒಳಗೂಡಲೂ ಅವರಿಗೆ ಇಷ್ಟವಿಲ್ಲ. ‘ದಿನವಿಡೀ ಬೈಬಲ್‌ ಕುರಿತೇ ಮಾತಾಡ್ಬೇಕಾ?’ ಎಂದೂ ಕೇಳುತ್ತಾರೆ. ಬೇರೆ ಮಕ್ಕಳು ಹಾಗೆ ಮಾಡುವುದನ್ನು ನಾನು ಕಂಡಿದ್ದೆ. ನನ್ನ ಮಕ್ಕಳು ದೊಡ್ಡವರಾದಾಗ ಹಾಗೆಯೇ ಮಾಡುತ್ತಾರೆಂದು ನಾನು ಕನಸು ಮನಸ್ಸಲ್ಲೂ ನೆನಸಿರಲಿಲ್ಲ.”—ರೆಜೀ. *

ನಿಮಗೆ ಹದಿವಯಸ್ಸಿನ ಮಕ್ಕಳಿದ್ದಾರೋ? ಹಾಗಿರುವಲ್ಲಿ, ನಿಮ್ಮ ಮಕ್ಕಳ ಬೆಳವಣಿಗೆಯ ಅತ್ಯಂತ ಮನಮೋಹಕ ಹಂತವನ್ನು ನೀವು ಕಾಣುತ್ತಿದ್ದೀರಿ. ಅದು ಅತ್ಯಂತ ಮನೋವೇದಕ ಹಂತವೂ ಆಗಿರಬಲ್ಲದು. ಕೆಳಗಿನ ಸನ್ನಿವೇಶಗಳು ನಿಮಗೆ ಚಿರಪರಿಚಿತವೋ?

ನಿಮ್ಮ ಮಗನು ಚಿಕ್ಕವನಾಗಿದ್ದಾಗ ಕಟ್ಟೆಗೆ ಬಿಗಿದ ದೋಣಿಯಂತೆ ಅಪ್ಪಅಮ್ಮನ ಬೆನ್ನು ಬಿಡದೆ ಅಂಟಿಕೊಂಡಿರುತ್ತಿದ್ದ. ಈಗಲಾದರೋ ಬಿಗಿದ ಹಗ್ಗವನ್ನೇ ಜಗ್ಗುತ್ತಾ ದೂರ ಚಲಿಸಲು ಪ್ರಯತ್ನಿಸುವ ದೋಣಿಯಂತೆ ಸ್ವತಂತ್ರನಾಗ ಬಯಸುತ್ತಾನೆ. ತನ್ನ ಜೊತೆಗೆ ತಂದೆತಾಯಿಗಳು ಬೇಡ ಎಂಬ ಭಾವನೆಯೂ ಅವನಿಗಿರುವಂತೆ ತೋರುತ್ತದೆ.

ನಿಮ್ಮ ಮಗಳು ಚಿಕ್ಕವಳಿದ್ದಾಗ ಆಗುಹೋಗುಗಳನ್ನೆಲ್ಲಾ ಒಂದೂ ಬಿಡದೆ ಎಲ್ಲವನ್ನೂ ತಿಳಿಸುತ್ತಿದ್ದಳು. ಈಗ ದೊಡ್ಡವಳಾದ ಅವಳಿಗೆ ತನ್ನದೇ ಆದ ಸ್ನೇಹಿತರ ಪ್ರಪಂಚ. ಅದರೊಳಗೆ ನಿಮಗೆ ಪ್ರವೇಶವಿಲ್ಲವೋ ಎಂಬಂತೆ ನಿಮಗನಿಸುತ್ತದೆ.

ತದ್ರೀತಿಯ ಸನ್ನಿವೇಶವು ನಿಮ್ಮ ಮನೆಯಲ್ಲಿದೆಯೋ? ಹಾಗಿರುವಲ್ಲಿ, ‘ನಮ್ಮ ಮಗ ಸುಧಾರಿಸಲಾಗದಷ್ಟು ಕೆಟ್ಟಿದ್ದಾನೆ. ಇನ್ನು ನಮ್ಮ ಕೈಗೆ ಸಿಗೋಲ್ಲ’ ಎಂದು ದುಡುಕಿ ನಿರ್ಣಯಿಸಬೇಡಿ. ಹಾಗಾದರೆ ಅವನು ಹಾಗೆ ಮಾಡುವುದೇಕೆ? ಈ ಪ್ರಶ್ನೆಗೆ ಉತ್ತರವನ್ನು ಕಂಡುಕೊಳ್ಳಲು ನಿಮ್ಮ ಮಗುವಿನ ಬೆಳವಣಿಗೆಯಲ್ಲಿ ಹದಿವಯಸ್ಸು ವಹಿಸುವ ಮುಖ್ಯ ಪಾತ್ರವನ್ನು ನಾವೀಗ ಗಮನಿಸುವ.

ಹದಿಹರೆಯ—ಒಂದು ಮಹತ್ವದ ಘಟ್ಟ

ಮಗುವಿನ ಜನನದಿಂದಾರಂಭಿಸಿ ಅದು ಮಾಡುವ ಎಲ್ಲಾ ವಿಷಯಗಳು ಅದರ ಜೀವನದಲ್ಲಿ ಮೊದಲುಗಳು. ಉದಾಹರಣೆಗೆ, ಅದು ಇಡುವ ಮೊದಲ ಹೆಜ್ಜೆ, ಆಡುವ ಮೊದಲ ಮಾತು, ಶಾಲೆಗೆ ಹೋದ ಮೊದಲ ದಿನ ಇವುಗಳು ಕೆಲವಷ್ಟೇ. ಮಗುವು ಅಂಥ ಒಂದು ಮಹತ್ವದ ಘಟ್ಟವನ್ನು ಮುಟ್ಟುವುದನ್ನು ನೋಡುವಾಗಲಂತೂ ಅಪ್ಪಅಮ್ಮಗೆ ತುಂಬಾ ಸಂಭ್ರಮ. ಅವರು ಆತುರದಿಂದ ಎದುರು ನೋಡುತ್ತಿರುವ ಮಗುವಿನ ಬೆಳವಣಿಗೆಗೆ ಅದು ಪುರಾವೆಯನ್ನು ಒದಗಿಸುತ್ತದೆ.

ಹರೆಯವು ಕೂಡ ಬೆಳವಣಿಗೆಯ ಒಂದು ಮಹತ್ವದ ಘಟ್ಟ. ಆದರೂ ಕೆಲವು ಹೆತ್ತವರಿಗೆ ಅದು ಸಂಭ್ರಮವನ್ನು ತರಲಿಕ್ಕಿಲ್ಲ. ನಾವು ಅವರ ಕಳವಳವನ್ನು ಅರ್ಥಮಾಡಿಕೊಳ್ಳಬಹುದು. ಎಷ್ಟೆಂದರೂ ತಮ್ಮ ವಿಧೇಯ ಪುಟ್ಟ ಮಗು ಈಗ ಮಾತೆತ್ತಿದರೆ ಸಿಡುಕಿ ಬೀಳುವ ಹದಿಹರೆಯದವನಾಗಿ ಪರಿಣಮಿಸುವಾಗ ಯಾವ ಅಪ್ಪಅಮ್ಮ ತಾನೇ ಸಂತೋಷಿಸಿಯಾರು? ಆದರೂ ಹದಿವಯಸ್ಸು ಮಗುವಿನ ಬೆಳವಣಿಗೆಯ ಪ್ರಾಮುಖ್ಯ ಹಂತ. ಯಾವ ವಿಧದಲ್ಲಿ?

ತಕ್ಕ ಸಮಯದಲ್ಲಿ “ಪುರುಷನು ತಂದೆತಾಯಿಗಳನ್ನು ಬಿಟ್ಟು ತನ್ನ ಹೆಂಡತಿಯನ್ನು ಸೇರಿಕೊಳ್ಳುವನು” ಎಂದು ಬೈಬಲ್‌ ಹೇಳುತ್ತದೆ. (ಆದಿಕಾಂಡ 2:24) ಮಕ್ಕಳ ಹದಿಹರೆಯದಲ್ಲಿ ಹೆತ್ತವರ ಪ್ರಾಮುಖ್ಯ ಕರ್ತವ್ಯವು ಆ ಸಿಹಿಕಹಿ ಅನುಭವದ ದಿನಕ್ಕಾಗಿ ತಮ್ಮ ಮಗ ಅಥವಾ ಮಗಳನ್ನು ಸಿದ್ಧಗೊಳಿಸುವುದೇ. ಆ ದಿನದಲ್ಲಿ ನಿಮ್ಮ ಮಕ್ಕಳು ಅಪೊಸ್ತಲ ಪೌಲನಂತೆ ಹೀಗನ್ನಲು ಶಕ್ತರಾಗಬೇಕು: “ನಾನು ಬಾಲಕನಾಗಿದ್ದಾಗ ಬಾಲಕನ ಮಾತುಗಳನ್ನಾಡಿದೆನು, ಬಾಲಕನ ಸುಖದುಃಖಗಳನ್ನು ಅನುಭವಿಸಿದೆನು, ಬಾಲಕನ ಆಲೋಚನೆಗಳನ್ನು ಮಾಡಿಕೊಂಡೆನು. ಪ್ರಾಯಸ್ಥನಾದ ಮೇಲೆ ಬಾಲ್ಯದವುಗಳನ್ನು ಬಿಟ್ಟುಬಿಟ್ಟೆನು.”—1 ಕೊರಿಂಥ 13:11.

ಮೂಲತಃ ನಿಮ್ಮ ಮಗ ಅಥವಾ ಮಗಳು ತಮ್ಮ ಹದಿಹರೆಯದಲ್ಲಿ ಅದನ್ನೇ ಮಾಡುತ್ತಿದ್ದಾರೆ ಅಂದರೆ ಬಾಲ್ಯದವುಗಳನ್ನು ಬಿಟ್ಟುಬಿಟ್ಟು ಸ್ವಾವಲಂಬಿಯಾದ ಜವಾಬ್ದಾರಿಯುತ ಯುವ ವ್ಯಕ್ತಿಯಾಗಲು ಹಾಗೂ ಸ್ವತಂತ್ರರಾಗಿರಲಿಕ್ಕಾಗಿ ಸಾಕಷ್ಟು ಪ್ರೌಢ ವ್ಯಕ್ತಿಯಾಗಲು ಕಲಿಯುತ್ತಿದ್ದಾರೆ. ವಾಸ್ತವದಲ್ಲಿ, ಮಕ್ಕಳು ಹೆತ್ತವರನ್ನು “ಅಗಲುವ” ಒಂದು ಮನೋವೇದಕ ಸ್ಥಿತಿಯೇ ಅದು ಎಂದು ಒಂದು ಪರಾಮರ್ಶೆ ಕೃತಿ ಹೇಳುತ್ತದೆ.

ನಿಮ್ಮ “ಪುಟ್ಟ” ಹುಡುಗ ಅಥವಾ ಹುಡುಗಿ ದೊಡ್ಡವರಾಗಿ ಸ್ವತಂತ್ರರಾಗಿರಲು ಬಯಸುವ ವಿಷಯವು ತಾನೇ ಈಗ ನಿಮ್ಮಲ್ಲಿ ಸಂದೇಹ ಎಬ್ಬಿಸಬಹುದು ಎಂಬುದು ಒಪ್ಪತಕ್ಕದ್ದೇ. ನೀವು ಹೀಗೆ ಕೇಳಬಹುದು:

“ನನ್ನ ಮಗನಿಗೆ ತನ್ನ ಸ್ವಂತ ಕೆಲಸಗಳನ್ನೇ ನೆಟ್ಟಗೆ ಮಾಡಲಿಕ್ಕೆ ಬರಲ್ಲ, ಇನ್ನು ಮನೆಯನ್ನು ಹೇಗೆ ಸಂಬಾಳಿಸಿಯಾನು?”

“ನಮ್ಮ ಮಗಳು ಹೇಳಿದ ಸಮಯಕ್ಕೆ ಮನೆಗೆ ಬರುವುದಿಲ್ಲ, ಇನ್ನು ಉದ್ಯೋಗವನ್ನು ಹೇಗೆ ಉಳಿಸಿಕೊಳ್ತಾಳೆ?”

ನಿಮಗೆ ಇಂಥ ಚಿಂತೆಕಳಕಳಿಯಿರುವಲ್ಲಿ ಒಂದು ವಿಷಯವನ್ನು ನೆನಪಿಡಿ. ನಿಮ್ಮ ಮಗುವಿಗೆ ನಿಮ್ಮನ್ನು ಬಿಟ್ಟು ಸ್ವತಂತ್ರವಾಗಿ ಜೀವಿಸುವುದು ಅಷ್ಟೇನೂ ಸುಲಭವಲ್ಲ. ಅದನ್ನು ಅವರು ಕಲಿತುಕೊಳ್ಳುವ ಅಗತ್ಯವಿದೆ. ಅದನ್ನು ಪೂರ್ಣವಾಗಿ ಕಲಿಯಲು ವರ್ಷಗಳೇ ತಗಲಬಹುದು. ಈಗಲಾದರೋ, “ಮೂರ್ಖತನವು ಹುಡುಗನ [ಅಥವಾ ಹುಡುಗಿಯ] ಮನಸ್ಸಿಗೆ ಸಹಜ” ಎಂಬದನ್ನು ನೀವು ಸ್ವತಃ ತಿಳಿದಿದ್ದೀರಿ.—ಜ್ಞಾನೋಕ್ತಿ 22:15.

ಆದರೂ ಯೋಗ್ಯ ಮಾರ್ಗದರ್ಶನದಿಂದ ನಿಮ್ಮ ಮಗು ಹದಿಹರೆಯವನ್ನು ದಾಟಿ ಜವಾಬ್ದಾರಿಯುತ ಪ್ರೌಢ ಯುವಕ/ಯುವತಿಯಾಗುವುದು ಸಂಭಾವ್ಯ. ಆದರೆ ಅವರು ‘ಸರಿ ಮತ್ತು ತಪ್ಪಿನ ಭೇದವನ್ನು ತಿಳಿಯಲಿಕ್ಕಾಗಿ ತಮ್ಮ ಗ್ರಹಣ ಶಕ್ತಿಗಳನ್ನು ತರಬೇತುಗೊಳಿಸಿಕೊಂಡರೆ’ ಮಾತ್ರ ಅದು ಸಾಧ್ಯ.—ಇಬ್ರಿಯ 5:14.

ಯಶಸ್ಸಿಗೆ ಕೀಲಿಕೈಗಳು

ನಿಮ್ಮ ಹದಿವಯಸ್ಸಿನ ಮಗನನ್ನು ಪ್ರೌಢಾವಸ್ಥೆಗೆ ಸಿದ್ಧಗೊಳಿಸಬೇಕಾದರೆ ಅವನು ತನ್ನ ‘ವಿವೇಚನಾಶಕ್ತಿಯನ್ನು’ ಬೆಳೆಸಿಕೊಳ್ಳಲು ಸಹಾಯಮಾಡಬೇಕು. ಈ ಮೂಲಕ ಅವನು ತಾನಾಗಿಯೇ ಯೋಗ್ಯ ನಿರ್ಣಯಗಳನ್ನು ಮಾಡಶಕ್ತನಾಗುವನು. * (ರೋಮನ್ನರಿಗೆ 12:1, 2) ಇದನ್ನು ಮಾಡಲು ಕೆಳಗಿನ ಬೈಬಲ್‌ ಮೂಲತತ್ತ್ವಗಳು ಸಹಾಯಮಾಡುವುವು.

ಫಿಲಿಪ್ಪಿ 4:5: “ನಿಮ್ಮ ನ್ಯಾಯಸಮ್ಮತತೆಯು ಎಲ್ಲ ಮನುಷ್ಯರಿಗೆ ತಿಳಿದುಬರಲಿ.” ನಿಮ್ಮ ಹದಿವಯಸ್ಸಿನ ಮಗ ಗೊತ್ತುಮಾಡಿದ ಸಮಯಕ್ಕಿಂತ ತಡವಾಗಿ ಮನೆಗೆ ಬರುವುದಾಗಿ ವಿನಂತಿಸುತ್ತಾನೆಂದು ಊಹಿಸಿ. ನೀವು ಕೂಡಲೇ ಬೇಡವೆನ್ನುತ್ತೀರಿ. ಅದಕ್ಕವನು ಸಿಡುಕಿ “ನಾನೇನು ಇನ್ನೂ ಚಿಕ್ಕ ಹುಡುಗನೋ!” ಎಂದು ಗೊಣಗುತ್ತಾನೆ. “ನೀನು ಚಿಕ್ಕ ಹುಡುಗನಂತೇ ಮಾಡ್ತಿ” ಎಂದು ನೀವು ಹೇಳುವ ಮುಂಚೆ ಕೆಳಗಿನ ವಿಷಯಗಳನ್ನು ತುಸು ಪರಿಗಣಿಸಿ: ಹದಿಹರೆಯದವರಿಗೆ ತಮ್ಮಿಂದ ನಿರ್ವಹಿಸಸಾಧ್ಯವಿರುವುದಕ್ಕಿಂತ ಹೆಚ್ಚಿನ ಸ್ವಾತಂತ್ರ್ಯವನ್ನು ಕೇಳುವ ಪ್ರವೃತ್ತಿಯಿದೆ. ಹೆತ್ತವರು ಸಹ ತಾವು ಕೊಡಸಾಧ್ಯವಿರುವುದಕ್ಕಿಂತ ಕಡಿಮೆ ಸ್ವಾತಂತ್ರ್ಯವನ್ನು ನೀಡುವ ಪ್ರವೃತ್ತಿ ಉಳ್ಳವರಾಗಿರಬಹುದು. ಈ ವಿಷಯದಲ್ಲಿ ನೀವು ಆಗಿಂದಾಗ್ಗೆ ವಿನಾಯಿತಿ ಕೊಡಬಹುದೋ? ನಿಮ್ಮ ಮಕ್ಕಳ ದೃಷ್ಟಿಕೋನದ ಕುರಿತು ಕಡಿಮೆಪಕ್ಷ ಯೋಚಿಸಿಯಾದರೂ ನೋಡಬಹುದಲ್ಲವೇ?

ಪ್ರಯತ್ನಿಸಿ ನೋಡಿ: ನಿಮ್ಮ ಹರೆಯದ ಮಕ್ಕಳಿಗೆ ಸ್ವಲ್ಪ ಹೆಚ್ಚು ಸ್ವಾತಂತ್ರ್ಯ ನೀಡಬಹುದಾದ ಒಂದೆರಡು ಕ್ಷೇತ್ರಗಳನ್ನು ಬರೆದಿಡಿ. ಆ ಸ್ವಾತಂತ್ರ್ಯವನ್ನು ನೀವು ಅವನಿಗೆ ನೀಡುವುದು ಸ್ವಲ್ಪದಿನಗಳ ವರೆಗೆ ಮಾತ್ರ ಎಂದು ವಿವರಿಸಿರಿ. ಅವನು ಅದನ್ನು ಹೊಣೆಗಾರಿಕೆಯಿಂದ ನಿರ್ವಹಿಸುವಲ್ಲಿ ಕ್ರಮೇಣ ಅವನಿಗೆ ಹೆಚ್ಚು ಸ್ವಾತಂತ್ರ್ಯ ಸಿಗಬಲ್ಲದು, ಇಲ್ಲವಾದರೆ ಅವನಿಗೆ ನೀಡಲ್ಪಟ್ಟಿದ್ದ ಸ್ವಾತಂತ್ರ್ಯವನ್ನೂ ಹಿಂತೆಗೆಯಲಾಗುವುದು ಎಂದು ತಿಳಿಸಿ.—ಮತ್ತಾಯ 25:21.

ಕೊಲೊಸ್ಸೆ 3:21: “ತಂದೆಗಳೇ, ನಿಮ್ಮ ಮಕ್ಕಳು ಮನಗುಂದಿಹೋಗದಂತೆ ಅವರನ್ನು ಕೆಣಕುತ್ತಾ ಇರಬೇಡಿ.” ಕೆಲವು ಹೆತ್ತವರು ತಮ್ಮ ಹರೆಯದ ಮಕ್ಕಳನ್ನು ಅತಿಯಾಗಿ ನಿಯಂತ್ರಿಸುತ್ತಾರೆ. ಅವರು ಹೋದಲ್ಲಿ-ಬಂದಲ್ಲಿ ಕಣ್ಣಿಟ್ಟು ಸದಾ ವಿಚಾರಿಸುತ್ತಿರುತ್ತಾರೆ. ಮಕ್ಕಳಿಗಾಗಿ ತಾವೇ ಸ್ನೇಹಿತರನ್ನು ಆರಿಸುತ್ತಾರೆ ಮತ್ತು ಅವರ ಫೋನ್‌ ಕರೆಗಳನ್ನು ಕದ್ದುಮುಚ್ಚಿ ಕೇಳುತ್ತಾರೆ. ಆದರೆ ಈ ತಂತ್ರಗಳು ಅವರಿಗೇ ತಿರುಗುಬಾಣ ಆಗಬಲ್ಲವು. ಅತಿ ನಿಯಂತ್ರಣವು ಮಕ್ಕಳಲ್ಲಿ ನಿಮ್ಮಿಂದ ದೂರವಾಗುವ ಬಯಕೆಯನ್ನೇ ಹೊರತು ಬೇರೇನನ್ನೂ ಮೂಡಿಸದು. ನೀವು ಅವನ ಸ್ನೇಹಿತರನ್ನು ಸದಾ ಟೀಕಿಸಿದಷ್ಟಕ್ಕೆ ಅವನು ಅವರನ್ನು ಹೆಚ್ಚು ಇಷ್ಟಪಡುವ ಸಂಭಾವ್ಯತೆ ಇದೆ; ಕದ್ದುಮುಚ್ಚಿ ಕೇಳುವ ನಿಮ್ಮ ಸ್ವಭಾವದಿಂದಾಗಿ ಅವನು ನಿಮ್ಮ ಬೆನ್ನ ಹಿಂದೆ ತನ್ನ ಮಿತ್ರರ ಸಂಗಡ ಸಂಪರ್ಕ ಬೆಳೆಸಿಯಾನು. ನೀವೆಷ್ಟು ಹೆಚ್ಚು ಅಂಕೆಯಲ್ಲಿಡಲು ಬಯಸುತ್ತೀರೋ ಅವನಷ್ಟೇ ಅಂಕೆಮೀರಿ ಹೋಗಬಹುದು. ಹದಿಹರೆಯದಲ್ಲಿ ನಿಮ್ಮ ಮಗ ತನಗಾಗಿ ನಿರ್ಣಯಗಳನ್ನು ಮಾಡಲು ಕಲಿಯದಿದ್ದಲ್ಲಿ ದೊಡ್ಡವನಾದಾಗ ಅದನ್ನು ಮಾಡಲು ಅವನು ಹೇಗೆ ಕಲಿತಾನು?

ಪ್ರಯತ್ನಿಸಿ ನೋಡಿ: ಮುಂದಿನ ಬಾರಿ ನಿಮ್ಮ ಮಗನೊಂದಿಗೆ ಒಂದು ಸಂಗತಿಯ ಕುರಿತು ಮಾತಾಡುವಾಗ, ಅವನ ಆಯ್ಕೆಗಳು ಸ್ವತಃ ಅವನ ಮೇಲೆ ಹೇಗೆ ಪ್ರಭಾವ ಬೀರುತ್ತವೆ ಎಂದು ತಿಳಿಯಲು ಅವನಿಗೆ ಸಹಾಯಮಾಡಿ. ಉದಾಹರಣೆಗೆ, ಅವನ ಸ್ನೇಹಿತರನ್ನು ಟೀಕಿಸುವ ಬದಲು ನೀವು ಹೀಗೆ ಕೇಳಿ: “ನಿಯಮ ಉಲ್ಲಂಘನೆಗಾಗಿ ನಿನ್ನ ಆ ಸ್ನೇಹಿತನು ಒಂದುವೇಳೆ ಅರೆಸ್ಟ್‌ ಆಗುವಲ್ಲಿ ಆಗೇನು? ಆಗ ಜನರು ನಿನ್ನ ಕುರಿತು ಏನು ಹೇಳಾರು?” ಅವನ ಆಯ್ಕೆಗಳು ಒಂದೋ ಅವನ ಪ್ರತಿಷ್ಠೆಯನ್ನು ಹೆಚ್ಚಿಸಬಹುದು ಇಲ್ಲವೆ ಕುಂದಿಸಬಹುದು ಎಂದು ತಿಳಿಯಲು ಮಗನಿಗೆ ಸಹಾಯಮಾಡಿ.—ಜ್ಞಾನೋಕ್ತಿ 11:17, 22; 20:11.

ಎಫೆಸ 6:4: “ತಂದೆಗಳೇ, ನಿಮ್ಮ ಮಕ್ಕಳಿಗೆ ಕಿರಿಕಿರಿ ಉಂಟುಮಾಡುವವರಾಗಿರದೆ, ಅವರನ್ನು ಯೆಹೋವನ ಶಿಸ್ತಿನಲ್ಲಿಯೂ ಮಾನಸಿಕ ಕ್ರಮಪಡಿಸುವಿಕೆಯಲ್ಲಿಯೂ ಬೆಳೆಸುತ್ತಾ ಬನ್ನಿರಿ.” “ಮಾನಸಿಕ ಕ್ರಮಪಡಿಸುವಿಕೆ” ಎಂದರೆ ಮಕ್ಕಳಿಗೆ ಬರೇ ವಿಷಯಗಳನ್ನು ತಿಳಿಸುವುದಲ್ಲ, ಅವರ ನೈತಿಕ ಪ್ರಜ್ಞೆಗೆ ಅವನ್ನು ನಾಟಿಸಬೇಕು. ಎಷ್ಟರ ಮಟ್ಟಿಗೆ ಅಂದರೆ ಅದು ಮಕ್ಕಳ ಕ್ರಿಯೆಗಳನ್ನು ಸಹ ಪ್ರಭಾವಿಸಬೇಕು. ಇದು ವಿಶೇಷವಾಗಿ ಮಗುವು ಹದಿಹರೆಯವನ್ನು ತಲಪುವಾಗ ಅತಿ ಪ್ರಾಮುಖ್ಯ. “ನಿಮ್ಮ ಮಕ್ಕಳು ಹೆಚ್ಚು ದೊಡ್ಡವರಾಗುತ್ತಾ ಬಂದಷ್ಟಕ್ಕೆ ನೀವು ಅವರೊಂದಿಗೆ ಮಾತಾಡುವ ಮತ್ತು ತರ್ಕಿಸುವ ಧಾಟಿಯನ್ನು ಹೆಚ್ಚೆಚ್ಚು ಹೊಂದಿಸಿಕೊಳ್ಳುವ ಅಗತ್ಯವಿದೆ” ಎನ್ನುತ್ತಾನೆ ಆ್ಯಂಡ್ರೆ ಎಂಬ ಒಬ್ಬ ತಂದೆ.—2 ತಿಮೊಥೆಯ 3:14.

ಪ್ರಯತ್ನಿಸಿ ನೋಡಿ: ಸಮಸ್ಯೆಯೊಂದು ಎದ್ದಾಗ ನಿಮ್ಮ ನಿಮ್ಮ ಪಾತ್ರಗಳನ್ನು ಬದಲಿಸಿಕೊಳ್ಳಿ. ‘ನೀನು ನನ್ನ ತಂದೆಯಾಗಿದ್ದು ನನ್ನ ಸ್ಥಾನದಲ್ಲಿರುತ್ತಿದ್ದರೆ ನನಗೆ ಯಾವ ಸಲಹೆ ಕೊಡುತ್ತಿದ್ದೀ’ ಎಂದು ಕೇಳಿ. ತನ್ನ ಅಭಿಪ್ರಾಯಕ್ಕೆ ಒಪ್ಪುವ ಇಲ್ಲವೆ ಒಪ್ಪದಿರುವ ಕಾರಣಗಳನ್ನು ಅವನು ರಿಸರ್ಚ್‌ ಮಾಡಿ ಹೇಳಲಿ. ಇದೇ ವಿಷಯವನ್ನು ಒಂದು ವಾರದೊಳಗೆ ಪುನಃ ಚರ್ಚಿಸಿ.

ಗಲಾತ್ಯ 6:7: “ಮನುಷ್ಯನು ಏನು ಬಿತ್ತುತ್ತಿದ್ದಾನೊ ಅದನ್ನೇ ಕೊಯ್ಯುವನು.” ಒಂದು ಚಿಕ್ಕ ಮಗುವಿಗೆ ಶಿಕ್ಷೆಯ ಮೂಲಕವೂ ಪಾಠವನ್ನು ಕಲಿಸಸಾಧ್ಯವಿದೆ. ಉದಾಹರಣೆಗೆ, ಅವನಿಗಿಷ್ಟದ ತಿಂಡಿ ಕೊಡದಿರುವುದು ಅಥವಾ ಅಚ್ಚುಮೆಚ್ಚಿನ ಆಟ ಆಡಲು ಬಿಡದಿರುವುದು. ಆದರೆ ಹದಿಹರೆಯದ ಮಗನಿಗೆ ಕೆಟ್ಟತನದ ಅಂತ್ಯ ಫಲಿತಾಂಶವನ್ನು ತಿಳಿಸುವ ಮೂಲಕ ಎಚ್ಚರಿಕೆಯನ್ನು ನೀಡುವುದು ಒಳ್ಳೆಯದು.—ಜ್ಞಾನೋಕ್ತಿ 6:27.

ಪ್ರಯತ್ನಿಸಿ ನೋಡಿ: ಅವನು ಮಾಡಿದ ಸಾಲವನ್ನು ನೀವು ತೀರಿಸುವ ಮೂಲಕ ಇಲ್ಲವೆ ಕ್ಲಾಸ್‌ನಲ್ಲಿ ಫೇಲ್‌ ಆದಾಗ ಅವನ ಟೀಚರ್‌ಗೆ ನೆವನಹೇಳಿ ಸಮಜಾಯಿಸುವ ಮೂಲಕ ಅವನನ್ನು ಬಚಾವ್‌ ಮಾಡಬೇಡಿ. ಅದರ ಕೆಟ್ಟ ಫಲಿತಾಂಶಗಳನ್ನು ಅವನೇ ಅನುಭವಿಸಲಿ. ಆಗ ಅವನು ಮರೆಯಲಾಗದ ಪಾಠವನ್ನು ಕಲಿಯುವನು.

ನಿಮ್ಮ ಮಗುವು ಹದಿಹರೆಯವನ್ನು ಯಾವುದೇ ತಡೆಯಿಲ್ಲದೆ ತ್ವರೆಯಾಗಿ ಹಾಗೂ ಸಫಲವಾಗಿ ದಾಟಿ ಪ್ರಾಪ್ತ ವಯಸ್ಸನ್ನು ಮುಟ್ಟೀತೆಂದು ಹೆತ್ತವರಾದ ನೀವು ಪ್ರಾಯಶಃ ಆಶಿಸಬಹುದು. ಆದರೆ ಪ್ರಾಪ್ತ ವಯಸ್ಸನ್ನು ಅಷ್ಟು ಸುಗಮವಾಗಿ ಮುಟ್ಟುವುದು ಬಹಳ ಅಪರೂಪ. ಆದರೂ “ನಡೆಯಬೇಕಾದ ಮಾರ್ಗಕ್ಕೆ ತಕ್ಕಂತೆ” ತರಬೇತಿಗೊಳಿಸುವ ಅತ್ಯುತ್ತಮ ಸಂದರ್ಭವನ್ನು ಮಗುವಿನ ಹದಿಹರೆಯವು ನಿಮಗೆ ಒದಗಿಸುತ್ತದೆ. (ಜ್ಞಾನೋಕ್ತಿ 22:6) ನೆನಪಿಡಿ, ಬೈಬಲ್‌ ಮೂಲತತ್ತ್ವಗಳು ಕುಟುಂಬ ಸಂತೋಷವನ್ನು ಕಟ್ಟಬಲ್ಲ ಒಂದು ಸುಭದ್ರ ತಳಪಾಯವಾಗಿದೆ. (w09 5/1)

[ಪಾದಟಿಪ್ಪಣಿಗಳು]

^ ಪ್ಯಾರ. 3 ಹೆಸರು ಬದಲಾಗಿದೆ.

^ ಪ್ಯಾರ. 19 ನಾವಿಲ್ಲಿ ಹುಡುಗನಿಗೆ ಸೂಚಿಸಿ ಹೇಳುತ್ತೇವಾದರೂ ಚರ್ಚಿಸಲಾದ ಮೂಲತತ್ತ್ವಗಳು ಹುಡುಗ/ಹುಡುಗಿ ಇಬ್ಬರಿಗೂ ಅನ್ವಯಿಸುತ್ತವೆ.

ಕೇಳಿಕೊಳ್ಳಿ . . .

ಹದಿಹರೆಯದ ನನ್ನ ಮಗ ಅಥವಾ ಮಗಳು ಪ್ರಾಪ್ತವಯಸ್ಸಿನವರಾದಾಗ ಈ ಕೆಳಗಿನವುಗಳನ್ನು ಮಾಡಶಕ್ತರೋ?

▪ ಕ್ರಮದ ಆಧ್ಯಾತ್ಮಿಕ ರೂಢಿಯನ್ನು ಕಾಪಾಡುವುದು

▪ ಒಳ್ಳೇ ಆಯ್ಕೆಗಳನ್ನು ಮತ್ತು ನಿರ್ಣಯಗಳನ್ನು ಮಾಡುವುದು

▪ ಇತರರೊಂದಿಗೆ ಉತ್ತಮ ಸಂವಾದ ಮಾಡುವುದು

▪ ಸ್ವಂತ ಆರೋಗ್ಯವನ್ನು ಕಾಪಾಡುವುದು

▪ ತಮ್ಮ ಹಣಕಾಸನ್ನು ಯೋಗ್ಯವಾಗಿ ನಿರ್ವಹಿಸುವುದು

▪ ಮನೆ ಅಥವಾ ರೂಮನ್ನು ಶುಚಿಯಾಗಿಯೂ ಅಚ್ಚುಕಟ್ಟಾಗಿಯೂ ಇಡುವುದು

▪ ಸ್ವಪ್ರೇರಣೆಯಿಂದ ಕೆಲಸಮಾಡುವುದು

[ಪುಟ 12ರಲ್ಲಿರುವ ಚಿತ್ರ]

ನಿಮ್ಮ ಹದಿಹರೆಯದ ಮಕ್ಕಳು ಜವಾಬ್ದಾರಿಯಿಂದ ವರ್ತಿಸಿದಲ್ಲಿ ಅವರಿಗೆ ಹೆಚ್ಚಿನ ಸ್ವಾತಂತ್ರ್ಯವನ್ನು ವಹಿಸಿಕೊಡಬಲ್ಲಿರೋ?