ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮಕ್ಕಳಿಗೆ ರೂಲ್ಸ್‌ ಹೇಗೆ ಇಡೋದು?

ಮಕ್ಕಳಿಗೆ ರೂಲ್ಸ್‌ ಹೇಗೆ ಇಡೋದು?

ಸುಖೀ ಸಂಸಾರಕ್ಕೆ ಸಲಹೆಗಳು | ಮಕ್ಕಳ ಪಾಲನ

ಮಕ್ಕಳಿಗೆ ರೂಲ್ಸ್‌ ಹೇಗೆ ಇಡೋದು?

ಸಮಸ್ಯೆ

ನೀವು ತುಂಬ ಸ್ಟ್ರಿಕ್ಟ್‌ ಅಂತ ನಿಮ್ಮ ಮಕ್ಕಳು ಹೇಳುತ್ತಾರೆ. ಆದರೆ ‘ನಾನು ಈ ರೀತಿ ಕಟ್ಟುಪಾಡು ಇಡೋದು ಅವರ ಒಳ್ಳೇದಕ್ಕೆ’ ಅಂತ ನಿಮ್ಮ ಮನಸ್ಸು ಹೇಳುತ್ತಿರುತ್ತೆ.

ನಿಮ್ಮ ಮಕ್ಕಳಿಗೆ ಹಿತಮಿತವಾದ ಕಟ್ಟುಪಾಡುಗಳನ್ನು ಇಡುವುದರಲ್ಲಿ ತಪ್ಪೇನಿಲ್ಲ. ಆದರೆ ಅದಕ್ಕೂ ಮುನ್ನ ನೀವು ಕಟ್ಟುಪಾಡುಗಳನ್ನು ಇಟ್ಟರೆ ಮಕ್ಕಳಿಗೆ ಯಾಕೆ ಕಿರಿಕಿರಿಯಾಗುತ್ತೆ ಅಂತ ಕಂಡುಹಿಡಿಯಬೇಕು.

ಯಾಕೆ ಹೀಗಾಗುತ್ತೆ?

ಕಲ್ಪನೆ: ಎಲ್ಲ ಹದಿಹರೆಯದ ಮಕ್ಕಳು ಕಟ್ಟಳೆಗಳನ್ನು ಮೀರೇ ಮೀರುತ್ತಾರೆ. ಆ ವಯಸ್ಸೇ ಹಾಗೆ. ಏನೂ ಮಾಡಕ್ಕಾಗಲ್ಲ.

ವಾಸ್ತವ: ಹಿತಮಿತವಾದ ಕಟ್ಟುಪಾಡುಗಳನ್ನು ಇಡೋದಾದರೆ ಮತ್ತು ಅವುಗಳ ಬಗ್ಗೆ ಮಕ್ಕಳ ಹತ್ತಿರ ಚರ್ಚಿಸೋದಾದರೆ ಮಕ್ಕಳು ಮಾತು ಮೀರುವುದು ಅತಿ ವಿರಳ.

ಮಕ್ಕಳು ನಿಯಮ ಉಲ್ಲಂಘಿಸಲು ಅನೇಕ ಕಾರಣಗಳಿರಬಹುದು. ಆದರೆ ಹೆತ್ತವರು ಕಟ್ಟುನಿಟ್ಟಾದ ನಿಯಮಗಳನ್ನು ಇಡುವಲ್ಲಿ ಅಥವಾ ಬೆಳೆದ ಮಕ್ಕಳನ್ನು ಚಿಕ್ಕಮಕ್ಕಳಂತೆ ನಡೆಸಿಕೊಳ್ಳುವಲ್ಲಿ ನಿಯಮ ಮೀರುವ ಸಾಧ್ಯತೆ ಹೆಚ್ಚು. ಬನ್ನಿ ಸ್ವಲ್ಪ ವಿಸ್ತೃತವಾಗಿ ಚರ್ಚಿಸೋಣ.

ಕಟ್ಟುನಿಟ್ಟಾದ ನಿಯಮ. ಹೆತ್ತವರು ತಮ್ಮ ಪಾಡಿಗೆ ತಾವೇ ನಿಯಮಗಳನ್ನು ಮಾಡಿಬಿಡುತ್ತಾರೆ. ಅದೂ ಎಷ್ಟು ಕಟ್ಟುನಿಟ್ಟಾಗಿ ಅಂದ್ರೆ ರಾಜಿಗೆ ಸ್ವಲ್ಪನೂ ಅವಕಾಶನೇ ಇರಲ್ಲ. ಆಗ ಮಕ್ಕಳಿಗೆ ಹೆತ್ತವರು ತಮ್ಮನ್ನು ಹಿಡಿತದಲ್ಲಿಡಲು ಪ್ರಯತ್ನಿಸುತ್ತಿದ್ದಾರೆ ಅಂತ ಅನಿಸುತ್ತೆ. ಯಾವುದನ್ನು ಮಾಡಬಾರದು ಅಂತ ಹೇಳಿರುತ್ತಾರೋ ಅದನ್ನು ಗುಟ್ಟಾಗಿ ಮಾಡಲು ಶುರುಮಾಡುತ್ತಾರೆ.

ಚಿಕ್ಕಮಕ್ಕಳಂತೆ ನಡೆಸಿಕೊಳ್ಳೋದು. “ನಾನು ಹೇಳ್ತಾ ಇದ್ದೀನಿ, ನೀನು ಕೇಳ್ಬೇಕು” ಅನ್ನೋ ವಿವರಣೆ ಚಿಕ್ಕಮಕ್ಕಳಿಗೆ ಸಾಕಾಗಬಹುದು. ಆದರೆ ಹದಿವಯಸ್ಸಿಗೆ ಬಂದ ಮಕ್ಕಳಿಗೆ ಇಷ್ಟು ಸಾಕಾಗಲ್ಲ. ಅವರಿಗೆ ಕಾರಣಗಳು ಬೇಕು. ಇಷ್ಟಕ್ಕೂ ಅವರು ಮುಂದೆ ತಮ್ಮ ಕಾಲಮೇಲೆ ನಿಲ್ಲಬೇಕಾದವರು, ದೊಡ್ಡ ದೊಡ್ಡ ತೀರ್ಮಾನಗಳನ್ನು ತೆಗೆದುಕೊಳ್ಳಬೇಕಾದವರು. ಹೀಗಿರುವಾಗ ಈಗ ನಿಮ್ಮ ಕಣ್ಗಾವಲಲ್ಲಿ ಇರುವಾಗಲೇ ಮಕ್ಕಳು ಚೆನ್ನಾಗಿ ಯೋಚಿಸಿ ತೀರ್ಮಾನಗಳನ್ನು ಮಾಡೋದು ಹೇಗೆಂದು ಕಲಿತುಕೊಳ್ಳುವುದು ಒಳ್ಳೇದು ಅಲ್ವಾ.

ಆದರೆ ನಿಮ್ಮ ಮಕ್ಕಳು ಒಂದ್ಸಲ ಅಲ್ಲ ಎರಡು ಸಲ ಅಲ್ಲ ಪ್ರತಿ ಸಲ ನೀವು ಇಡುತ್ತಿರೋ ನಿಯಮಗಳಿಂದಾಗಿ ಕೆರಳುತ್ತಿರೋದಾದರೆ ಏನು ಮಾಡುವುದು?

ಇದಕ್ಕೇನು ಪರಿಹಾರ?

ಮೊದಲನೇದಾಗಿ ನೀವು ಮನಸ್ಸಿನಲ್ಲಿ ಇಡಬೇಕಾದ ವಿಷಯ, ಹದಿವಯಸ್ಕರ ಒಳಿತಿಗೆ ಮಿತಿಮೇರೆಗಳು ಬೇಕು. ಮಕ್ಕಳೂ ಅದನ್ನೇ ಬಯಸುತ್ತಾರೆ. ಹಾಗಾಗಿ ನಿಯಮಗಳನ್ನು ಇಡಿ. ಅವುಗಳ ಹಿಂದಿರುವ ಕಾರಣಗಳನ್ನೂ ಮಕ್ಕಳಿಗೆ ಸ್ಪಷ್ಟಪಡಿಸಿ. ಪ್ರೀತಿ ಭರವಸೆಯಿಂದ ನಿಯಂತ್ರಿಸೋಣ ಎಂಬ ಇಂಗ್ಲಿಷ್‌ ಪುಸ್ತಕ ಹೇಳುತ್ತೆ: “ಯಾವುದನ್ನು ಮಾಡಬೇಕು, ಯಾವುದನ್ನು ಮಾಡಬಾರದು ಅಂತ ಸ್ಪಷ್ಟವಾದ ಕಟ್ಟಳೆಗಳನ್ನು ಇಟ್ಟು ಜೊತೆಗೆ ಅಗತ್ಯಕ್ಕೆ ತಕ್ಕಷ್ಟು ಹೆತ್ತವರ ನಿಗರಾನಿಯೂ ಇದ್ದರೆ ತೊಂದರೆಗೆ ಸಿಕ್ಕಿಬೀಳುವಂಥ ಚಟುವಟಿಕೆಗಳಿಗೆ ಮಕ್ಕಳು ಕೈಹಾಕಲ್ಲ.” ಇನ್ನು ಹೆತ್ತವರು ಯಾವ ಕಟ್ಟುಪಾಡುಗಳನ್ನೂ ವಿಧಿಸದೆ ಮಕ್ಕಳನ್ನು ಸ್ವಚ್ಛಂದವಾಗಿ ಬಿಟ್ಟರೆ ತಮ್ಮ ಮಕ್ಕಳ ಬಗ್ಗೆ ಸ್ವಲ್ಪನೂ ಆಸ್ಥೆಯಿಲ್ಲ ಅನ್ನೋ ಸಂದೇಶ ಕೊಡುತ್ತೆ. ಇದು ಸಾಕು ಮಕ್ಕಳು ಬಂಡಾಯ ಏಳೋಕೆ.ಬೈಬಲ್‌ ತತ್ವ: ಜ್ಞಾನೋಕ್ತಿ 29:15.

ಹಾಗಾದರೆ ಆರಕ್ಕೇರಿಸದೆ ಮೂರಕ್ಕಿಳಿಸದೆ ನಿಯಮ ಮಾಡೋದು ಹೇಗೆ? ನೀವಿಟ್ಟಿರುವ ಕಟ್ಟಳೆಗಳ ಬಗ್ಗೆ ಮಕ್ಕಳಿಗೆ ಏನನಿಸುತ್ತೆ ಅಂತ ಕೇಳಿ. ಉದಾಹರಣೆಗೆ ರಾತ್ರಿ ಇಷ್ಟು ಗಂಟೆಯೊಳಗೆ ಮನೆಗೆ ಬಂದುಬಿಡಬೇಕು ಅಂತ ನಿಯಮ ಮಾಡಿರುತ್ತೀರ, ಆ ಬಗ್ಗೆ ಮಗ ಸ್ವಲ್ಪ ವಿನಾಯಿತಿ ಕೇಳುತ್ತಾನೆಂದು ನೆನಸಿ. ಅವನಿಗೆ ಯಾಕೆ ವಿನಾಯಿತಿ ಬೇಕು ಅಂತ ಅವನು ವಿವರಿಸುವಾಗ ಆಲಿಸಿ. ನೀವು ಅವನ ಅನಿಸಿಕೆಗಳನ್ನು ಆಲಿಸಿದರೆ ಅವನು ನಿಮ್ಮ ಮಾತಿಗೆ ಬೆಲೆ ಕೊಡಬಹುದು. ನಿಮ್ಮ ನಿರ್ಣಯಗಳು ಇಷ್ಟವಾಗದಿದ್ದರೂ ಅದರಂತೆ ನಡೆಯಲು ಮನಸ್ಸು ಮಾಡಬಹುದು.ಬೈಬಲ್‌ ತತ್ವ: ಯಾಕೋಬ 1:19.

ಆದರೆ ನಿರ್ಣಯಗಳನ್ನು ಮಾಡುವಾಗ ಇದನ್ನು ಮರೆಯಬೇಡಿ: ವಯಸ್ಸಿಗೆ ಮೀರಿದ ಸ್ವಾತಂತ್ರ್ಯ ಬೇಕು ಅಂತ ಹೇಗೆ ಮಕ್ಕಳ ಮನಸ್ಸು ಆಶಿಸುತ್ತಿರುತ್ತೋ ಹಾಗೆ ಹೆತ್ತವರ ಮನಸ್ಸು ಮಕ್ಕಳಿಗೆ ಕೊಡಬೇಕಾದ ಸ್ವಾತಂತ್ರ್ಯವನ್ನು ಕೊಡದೆ ಜಿಪುಣತನ ಮಾಡುತ್ತೆ. ಹಾಗಾಗಿ ನಿಮ್ಮ ಮಕ್ಕಳ ವಿನಂತಿಯನ್ನು ಅಳೆದು ನೋಡಿ. ಮಕ್ಕಳು ಈ ಮುಂಚೆ ಹೇಳಿದಂತೆ ನಡೆದುಕೊಂಡಿದ್ದಾರಾ? ಸನ್ನಿವೇಶ ನೋಡಿದರೆ ಮಕ್ಕಳಿಗೆ ವಿನಾಯಿತಿ ಕೊಡುವಂತೆ ತೋರುತ್ತಿದೆಯಾ? ಸೂಕ್ತವಾದಲ್ಲಿ ಮಕ್ಕಳಿಗೆ ಸ್ವಲ್ಪ ವಿನಾಯಿತಿ ಕೊಡಿ.ಬೈಬಲ್‌ ತತ್ವ: ಆದಿಕಾಂಡ 19:17-22.

ಮಕ್ಕಳ ಭಾವನೆಗಳನ್ನು ನೀವು ಕೇಳಿ ತಿಳಿದುಕೊಂಡಂತೆ ನಿಮ್ಮ ಚಿಂತೆ, ಕಳವಳಗಳನ್ನೂ ಅವರಿಗೆ ತಿಳಿಸಿ. ಹೀಗೆ ಮಾಡುವುದರಿಂದ ಮಕ್ಕಳು ಬರೇ ತಮ್ಮ ಇಷ್ಟಗಳಿಗೇ ಪ್ರಾಮುಖ್ಯತೆ ಕೊಡದೆ ಬೇರೆಯವರ ಭಾವನೆಗಳನ್ನೂ ಗಣನೆಗೆ ತೆಗೆದುಕೊಳ್ಳಬೇಕು ಅನ್ನೋ ಪಾಠವನ್ನು ಕಲಿಸಿಕೊಡುತ್ತೀರಿ.ಬೈಬಲ್‌ ತತ್ವ: 1 ಕೊರಿಂಥ 10:24.

ನೀವೇ ನಿರ್ಣಯವನ್ನು ಮಾಡಬೇಕು ಮತ್ತು ಅದರ ಹಿಂದಿರುವ ಕಾರಣಗಳನ್ನು ಮಕ್ಕಳಿಗೆ ವಿವರಿಸಬೇಕು. ಬಹುಶಃ ಅವರಿಗೆ ನಿಮ್ಮ ನಿರ್ಣಯ ಇಷ್ಟವಾಗದಿದ್ದರೂ ಅವರು ಹೇಳುವುದನ್ನು ನೀವು ಕೇಳುವಾಗ ಅವರ ಅನಿಸಿಕೆಗಳಿಗೆ ನೀವು ಬೆಲೆಕೊಡುತ್ತಿದ್ದೀರಿ ಅನ್ನೋ ಸಂತೋಷ ಅವರಿಗಿರುತ್ತೆ. ನೆನಪಿಡಿ, ಮಕ್ಕಳು ವಯಸ್ಕರಾದಾಗ ಹೇಗೆ ವರ್ತಿಸಬೇಕೆಂದು ನೀವೀಗ ಅವರಿಗೆ ತರಬೇತು ನೀಡುತ್ತಿದ್ದೀರಿ. ಹಿತಮಿತವಾದ ಕಟ್ಟುಪಾಡುಗಳನ್ನಿಟ್ಟು, ಅದರ ಹಿಂದಿರುವ ಕಾರಣಗಳನ್ನು ವಿವರಿಸುವಾಗ ನಿಮ್ಮ ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಸಹಾಯ ಮಾಡುತ್ತೀರಿ.ಬೈಬಲ್‌ ತತ್ವ: ಜ್ಞಾನೋಕ್ತಿ 22:6. ◼ (g13-E 03)

[ಪುಟ 13ರಲ್ಲಿರುವ ಚಿತ್ರ]

ಬೈಬಲಿನ ನುಡಿಮುತ್ತುಗಳು

“ನಿಮ್ಮ ನ್ಯಾಯಸಮ್ಮತತೆಯು ಎಲ್ಲ ಮನುಷ್ಯರಿಗೆ ತಿಳಿದುಬರಲಿ.” —ಫಿಲಿಪ್ಪಿ 4:5.

“ತಂದೆಗಳೇ, ನಿಮ್ಮ ಮಕ್ಕಳು ಮನಗುಂದಿಹೋಗದಂತೆ ಅವರನ್ನು ಕೆಣಕುತ್ತಾ ಇರಬೇಡಿ.”—ಕೊಲೊಸ್ಸೆ 3:21.

[ಪುಟ 13ರಲ್ಲಿರುವ ಚಿತ್ರ]

ಹದಿವಯಸ್ಕರಿಗೆ ಕಿವಿಮಾತು

“ಒಬ್ಬ ವ್ಯಕ್ತಿ ಬ್ಯಾಂಕಿನಿಂದ ಸಾಲ ತೆಗೆದುಕೊಂಡಿದ್ದಾನೆ ಅಂತ ನೆನಸಿ. ಆ ಸಾಲವನ್ನು ಸರಿಯಾಗಿ ಕಟ್ಟುತ್ತಾ ಬಂದರೆ ಬ್ಯಾಂಕಿಗೆ ಅವನ ಮೇಲೆ ಭರವಸೆ ಹೆಚ್ಚುತ್ತೆ. ಮುಂದೆ ಅವನು ಸಾಲ ಕೇಳಿದರೆ ಕೊಡಲು ಸಿದ್ಧವಿರುತ್ತೆ. ಅದೇರೀತಿ ಹೆತ್ತವರಿಗೆ ನೀವು ವಿಧೇಯತೆ ತೋರಿಸುವ ಹಂಗಿನಲ್ಲಿದ್ದೀರಿ. ಚಿಕ್ಕದಿರಲಿ ದೊಡ್ಡದಿರಲಿ ಪ್ರತಿಯೊಂದು ವಿಷಯದಲ್ಲೂ ಹೆತ್ತವರ ಮಾತಿಗೆ ಬೆಲೆಕೊಟ್ಟರೆ ಅವರ ಭರವಸೆ ಗಿಟ್ಟಿಸಿಕೊಳ್ಳುತ್ತೀರಿ. ಆದರೆ ಮೇಲಿಂದ ಮೇಲೆ ನೀವು ಹೆತ್ತವರ ಮಾತನ್ನು ತಳ್ಳಿಹಾಕುತ್ತಲೇ ಇದ್ದರೆ ನಿಮ್ಮ ಮೇಲೆ ಅವರಿಗಿರುವ ಭರವಸೆ ಕಮ್ಮಿಯಾಗುತ್ತಾ ಹೋಗುತ್ತೆ. ಆ ಭರವಸೆ ಸಂಪೂರ್ಣವಾಗಿ ಬತ್ತಿಹೋದರೂ ಅದರಲ್ಲಿ ಆಶ್ಚರ್ಯವೇನಿಲ್ಲ.”—ಯುವಜನರ ಪ್ರಶ್ನೆಗಳು ಕಾರ್ಯಸಾಧಕ ಉತ್ತರಗಳು, ಸಂಪುಟ 2 (ಇಂಗ್ಲಿಷ್‌). ಇದು ಯೆಹೋವನ ಸಾಕ್ಷಿಗಳ ಪ್ರಕಾಶನ.

[ಪುಟ 12ರಲ್ಲಿರುವ ಚಿತ್ರ]

[ಪುಟ 12ರಲ್ಲಿರುವ ಚಿತ್ರ]