ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಬೈಬಲಿನ ದೃಷ್ಟಿಕೋನ | ಜೂಜಾಟ

ಜೂಜಾಟ

ಜೂಜಾಟ

‘ಜೂಜಾಟ ಕೇವಲ ಒಂದು ಆಟ ಅಷ್ಟೇ’ ಅಂತ ಕೆಲವರು ಹೇಳಿದರೆ, ಇನ್ನು ಕೆಲವರು ‘ಅದು ಚಟವಾದರೆ ಜೀವನವೆಲ್ಲಾ ನರಳಾಟ’ ಅಂತ ಹೇಳುತ್ತಾರೆ.

ಜೂಜಾಡುವುದು ತಪ್ಪಾ?

ಜನರು ಏನು ಹೇಳುತ್ತಾರೆ?

ಕಾನೂನುಬದ್ಧವಾದ ಕೆಲವು ಜೂಜಾಟಗಳಿವೆ. * ಇಂಥವುಗಳಲ್ಲಿ ಒಂದು, ಸರಕಾರವೇ ನಡೆಸುವ ಲಾಟರಿಗಳು. ‘ಇದರಿಂದ ಬರುವ ಹಣವನ್ನು ಜನರ ಹಿತಕ್ಷೇಮಕ್ಕಾಗಿ ಉಪಯೋಗಿಸಲಾಗುತ್ತದೆ, ಆದ್ದರಿಂದ ಅದನ್ನಾಡುವುದರಲ್ಲಿ ತಪ್ಪಿಲ್ಲ’ ಅಂತ ಹೇಳುತ್ತಾರೆ.

ಬೈಬಲ್‌ ಏನು ಹೇಳುತ್ತದೆ?

ಜೂಜಾಟ ತಪ್ಪು ಎಂದು ಬೈಬಲ್‌ ನೇರವಾಗಿ ಹೇಳಿಲ್ಲ. ಆದರೆ ಅದರ ಬಗ್ಗೆ ದೇವರ ಅನಿಸಿಕೆ ಏನಂತ ತಿಳಿದುಕೊಳ್ಳಲು ನಮಗೆ ಸಹಾಯ ಮಾಡುವ ವಿಷಯಗಳನ್ನು ಅದು ಹೇಳುತ್ತದೆ.

ಸರಳವಾಗಿ ಹೇಳುವುದಾದರೆ ಇನ್ನೊಬ್ಬರಿಗೆ ನಷ್ಟ ಮಾಡಿ, ಅವರ ಹಣವನ್ನು ನಮ್ಮ ಹಣವನ್ನಾಗಿ ಮಾಡಿಕೊಳ್ಳುವುದೇ ಜೂಜಾಟ. ಆದರೆ ಈ ಆಟ “ಪ್ರತಿಯೊಂದು ರೀತಿಯ ದುರಾಶೆಯಿಂದ ನಿಮ್ಮನ್ನು ಕಾಪಾಡಿಕೊಳ್ಳಿ” ಎಂಬ ಬೈಬಲ್‌ ಬೋಧನೆಗೆ ತದ್ವಿರುದ್ಧವಾಗಿದೆ. (ಲೂಕ 12:15) ಜೂಜಾಟಕ್ಕೆ ದುರಾಸೆಯೇ ಮುಖ್ಯ ಕಾರಣ. ಎಲ್ಲರೂ ಜೂಜಾಟದಲ್ಲಿ ಗೆಲ್ಲಲು ಆಗುವುದಿಲ್ಲವೆಂದು ಇಂಥ ಆಟಗಳನ್ನು ನಡೆಸುವವರಿಗೆ ಚೆನ್ನಾಗಿ ಗೊತ್ತಿದೆ. ಜೊತೆಗೆ, ದಿಢೀರ್‌ ಶ್ರೀಮಂತರಾಗಬಹುದು ಅಂತ ಜನರನ್ನು ನಂಬಿಸಿದರೆ ಅವರು ಹೆಚ್ಚೆಚ್ಚು ಹಣವನ್ನು ಜೂಜಾಟದಲ್ಲಿ ಹಾಕುತ್ತಾರೆ ಅನ್ನುವುದೂ ಗೊತ್ತಿದೆ. ಆದ್ದರಿಂದ ದೊಡ್ಡ ಮೊತ್ತದ ಹಣ ಗಳಿಸಬಹುದೆಂದು ಜೂಜಾಟ ನಡೆಸುವವರು ಜಾಹೀರಾತು ಕೊಡುತ್ತಾರೆ. ಈ ಜೂಜಾಟ ಸುಲಭವಾಗಿ ಹಣ ಗಳಿಸಬೇಕೆಂಬ ದುರಾಸೆಯನ್ನು ಹೆಚ್ಚಿಸುತ್ತದೆ ಹೊರತು ಅಂಥ ದುರಾಸೆಯಿಂದ ಹೊರಬರಲು ಸಹಾಯ ಮಾಡುವುದಿಲ್ಲ.

ಇತರರ ಹಣವನ್ನು ಗೆದ್ದುಕೊಳ್ಳುವುದೇ ಜೂಜಾಟದ ಉದ್ದೇಶ. ಆದ್ದರಿಂದ ಈ ಆಟ ಜನರನ್ನು ಸ್ವಾರ್ಥಿಗಳನ್ನಾಗಿ ಮಾಡುತ್ತದೆ. ಆದರೆ ‘ಪ್ರತಿಯೊಬ್ಬನು ತನ್ನ ಹಿತವನ್ನು ಚಿಂತಿಸದೆ ಪರಹಿತವನ್ನು ಚಿಂತಿಸುತ್ತಿರಲಿ’ ಎಂದು ಬೈಬಲ್‌ ಎಲ್ಲರನ್ನೂ ಪ್ರೋತ್ಸಾಹಿಸುತ್ತದೆ. (1 ಕೊರಿಂಥ 10:24) ಬೈಬಲಿನಲ್ಲಿ ‘ಮತ್ತೊಬ್ಬನಿಗೆ ಸೇರಿದ ಯಾವುದನ್ನೂ ಆಶಿಸಬಾರದು’ ಎಂದು ಖಡಾಖಂಡಿತವಾಗಿ ಹೇಳಲಾಗಿದೆ. (ವಿಮೋಚನಕಾಂಡ 20:17) ಒಬ್ಬ ಜೂಜಾಡುವ ವ್ಯಕ್ತಿ ತಾನು ಇತರರ ಹಣ ಗೆದ್ದುಕೊಳ್ಳಬೇಕೆಂದು ಬಯಸುತ್ತಾನೆ. ಇದಕ್ಕೋಸ್ಕರ ಅವನು ಇತರರ ಸೋಲನ್ನೇ ಎದುರುನೋಡುತ್ತಾ ಇರುತ್ತಾನೆ.

ಅದೃಷ್ಟ ಅನ್ನುವುದು ದೇವರು ಕೊಡುವ ಆಶೀರ್ವಾದವೆಂದು ಪರಿಗಣಿಸಬಾರದು ಅಂತ ಬೈಬಲ್‌ ಹೇಳುತ್ತದೆ. ಸಾವಿರಾರು ವರ್ಷಗಳ ಹಿಂದೆ ಇಸ್ರಾಯೇಲ್‌ ದೇಶದ ಜನರು ದೇವರಲ್ಲಿ ನಂಬಿಕೆ ಕಳೆದುಕೊಂಡು ಶುಭದಾಯಕ ಅಥವಾ ಅದೃಷ್ಟ ದೇವತೆಯನ್ನು ಆರಾಧಿಸಿದರು. ಇದು ದೇವರಿಗೆ ಮೆಚ್ಚಿಕೆಯಾಯಿತೋ? ಖಂಡಿತ ಇಲ್ಲ. ದೇವರು ಅವರಿಗೆ, “ನನ್ನ ಚಿತ್ತಕ್ಕೆ ವಿರುದ್ಧವಾದದ್ದನ್ನು ನಡಿಸಿ ನನಗೆ ಇಷ್ಟವಲ್ಲದ್ದನ್ನು ಆರಿಸಿಕೊಂಡಿರಿ” ಎಂದು ಖಂಡಿಸಿದನು. —ಯೆಶಾಯ 65:11, 12.

ಕೆಲವೊಂದು ಕಡೆ ಜೂಜಿನಿಂದ ಬರುವ ಹಣವನ್ನು ಶಿಕ್ಷಣ ಮತ್ತು ಆರ್ಥಿಕ ಕ್ಷೇತ್ರದ ಅಭಿವೃದ್ಧಿಗಾಗಿ ಮತ್ತು ಸಾರ್ವಜನಿಕರ ಒಳಿತಿಗಾಗಿ ಉಪಯೋಗಿಸಲಾಗುತ್ತದೆ. ಆ ಹಣವನ್ನು ಯಾವುದೇ ಒಳ್ಳೆಯ ಕೆಲಸಕ್ಕೆ ಉಪಯೋಗಿಸಿದರೂ ಅದನ್ನು ಒಳ್ಳೆಯ ವಿಧಾನದಿಂದ ಸಂಪಾದಿಸಿಲ್ಲ ಅನ್ನುವುದಂತೂ ನಿಜ. ಕಾರಣ ಜೂಜು ಒಬ್ಬನಲ್ಲಿ ದುರಾಸೆ, ಸ್ವಾರ್ಥಗಳಂತಹ ಕೆಟ್ಟ ಗುಣಗಳನ್ನು ಬೆಳೆಸುತ್ತದೆ. ಜೊತೆಗೆ ಪ್ರಯತ್ನ ಇಲ್ಲದೆ ಫಲಿತಾಂಶ ಪಡೆಯಲು ಅವರನ್ನು ಪ್ರೋತ್ಸಾಹಿಸುತ್ತದೆ ಅಂದರೆ ಸೋಮಾರಿಗಳಾಗುವಂತೆ ಮಾಡುತ್ತದೆ.

‘ಮತ್ತೊಬ್ಬನಿಗೆ ಸೇರಿದ ಯಾವುದನ್ನೂ ಆಶಿಸಬಾರದು.’ವಿಮೋಚನಕಾಂಡ 20:17.

ಜೂಜಾಟದಿಂದ ಯಾವ ಅಪಾಯಗಳಿವೆ?

ಬೈಬಲ್‌ ಏನು ಹೇಳುತ್ತದೆ?

“ಐಶ್ವರ್ಯವಂತರಾಗಬೇಕೆಂದು ದೃಢನಿರ್ಧಾರಮಾಡಿಕೊಂಡಿರುವವರು ಪ್ರಲೋಭನೆಯಲ್ಲಿಯೂ ಉರ್ಲಿನಲ್ಲಿಯೂ ಬುದ್ಧಿಹೀನವಾದ ಮತ್ತು ಹಾನಿಕರವಾದ ಆಶೆಗಳಲ್ಲಿಯೂ ಬೀಳುತ್ತಾರೆ; ಇವು ಅವರನ್ನು ನಾಶನ ಮತ್ತು ಧ್ವಂಸದಲ್ಲಿ ಮುಳುಗಿಸುತ್ತವೆ” ಎಂದು ಬೈಬಲ್‌ ಎಚ್ಚರಿಸುತ್ತದೆ. (1 ತಿಮೊಥೆಯ 6:9) ಜೂಜಾಟಕ್ಕೆ ದುರಾಸೆಯೇ ಮುಖ್ಯ ಕಾರಣ. ಈ ದುರಾಸೆ ಎಷ್ಟು ಅಪಾಯಕಾರಿ ಅಂದರೆ ನಾವೆಲ್ಲ ಬಿಟ್ಟುಬಿಡಲೇಬೇಕಾದ ಅತಿ ಕೆಟ್ಟ ಗುಣಗಳಲ್ಲಿ ಇದೂ ಒಂದು ಎಂದು ಬೈಬಲ್‌ ಹೇಳುತ್ತದೆ.—ಎಫೆಸ 5:3.

ಜೂಜಾಟದಿಂದ ಜನರು ಹಣದಾಸೆಗೆ ಬಲಿಬೀಳುತ್ತಾರೆ. ಯಾಕೆಂದರೆ ಇದರಿಂದ ಸುಲಭವಾಗಿ ಹಣ ಮಾಡಬಹುದು ಎಂದವರು ನೆನಸುತ್ತಾರೆ. ಆದರೆ ಈ ಹಣದಾಸೆ “ಎಲ್ಲ ರೀತಿಯ ಹಾನಿಕರವಾದ ವಿಷಯಗಳಿಗೆ ಮೂಲವಾಗಿದೆ” ಎಂದು ಬೈಬಲ್‌ ಹೇಳುತ್ತದೆ. ಹಣದಾಸೆ ಒಬ್ಬನ ಮೇಲೆ ಎಷ್ಟು ಪ್ರಭಾವ ಬೀರುತ್ತದೆಂದರೆ ಅದು ಜೀವನದಲ್ಲಿ ಎಷ್ಟೋ ಚಿಂತೆಗಳಿಗೆ ದಾರಿ ಮಾಡಿ ದೇವರ ಮೇಲಿನ ನಂಬಿಕೆಯನ್ನೂ ಕಳೆದುಕೊಳ್ಳುವಂತೆ ಮಾಡುತ್ತದೆ. ಈ ಹಣದಾಸೆಯ ಬಲೆಗೆ ಬಿದ್ದವರು “ಅನೇಕ ವೇದನೆಗಳಿಂದ ತಮ್ಮನ್ನು ಎಲ್ಲ ಕಡೆಗಳಲ್ಲಿ ತಿವಿಸಿಕೊಂಡಿದ್ದಾರೆ” ಎಂದು ಬೈಬಲ್‌ ಹೇಳುತ್ತದೆ.—1 ತಿಮೊಥೆಯ 6:10.

ದುರಾಸೆ ಇರುವವನಿಗೆ ಎಷ್ಟು ಹಣ-ಆಸ್ತಿಯಿದ್ದರೂ ಸಾಲದು. ಈ ಅತೃಪ್ತಿಯಿಂದ ಅವನು ಸಂತೋಷವನ್ನೇ ಕಳೆದುಕೊಳ್ಳುತ್ತಾನೆ. “ಬೆಳ್ಳಿಯನ್ನು ಆಶಿಸುವವನಿಗೆ ಎಷ್ಟು ಬೆಳ್ಳಿಯಿಂದಲೂ ತೃಪ್ತಿಯಾಗದು; ಸಮೃದ್ಧಿಯನ್ನು ಬಯಸುತ್ತಲೇ ಇರುವವನಿಗೆ ಆದಾಯವೆಷ್ಟಾದರೂ ಸಾಲದು” ಎಂಬ ಬೈಬಲಿನ ಮಾತು ಎಷ್ಟು ನಿಜ ಅಲ್ವಾ?—ಪ್ರಸಂಗಿ 5:10.

ಜೂಜಿನ ಕಪಿಮುಷ್ಠಿಗೆ ಸಿಕ್ಕಿ ಬಿದ್ದ ಎಷ್ಟೋ ಜನರು ಅದರಿಂದ ಹೊರಬರಲಾರದೆ ಒದ್ದಾಡುತ್ತಿದ್ದಾರೆ. ಪ್ರಪಂಚದ ಎಲ್ಲಾ ಕಡೆ ಈ ಚಟ ಸರ್ವೇ ಸಾಮಾನ್ಯವಾಗಿದೆ. ಅಮೆರಿಕ ಒಂದರಲ್ಲೇ ಲಕ್ಷಾಂತರ ಜನ ಜೂಜಿಗೆ ದಾಸರಾಗಿದ್ದಾರೆ.

“ಮೊದಲು ಬೇಗನೆ ಬಾಚಿಕೊಂಡ ಸ್ವಾಸ್ತ್ಯವು ಕೊನೆಯಲ್ಲಿ ಶುಭವನ್ನು ಹೊಂದದು.” (ಜ್ಞಾನೋಕ್ತಿ 20:21) ಜೂಜಾಟದ ಚಟದಿಂದ ಎಷ್ಟೋ ಜನ ಸಾಲಗಾರರಾಗಿದ್ದಾರೆ, ಬೀದಿಗೆ ಬಂದಿದ್ದಾರೆ. ಇನ್ನೂ ಎಷ್ಟೋ ಜನ ತಮ್ಮ ಕೆಲಸಕ್ಕೆ, ಮದುವೆ ಮತ್ತು ಸ್ನೇಹ ಬಂಧಕ್ಕೆ ಕುತ್ತು ತಂದುಕೊಂಡಿದ್ದಾರೆ. ಆದರೆ ಬೈಬಲಿನ ಸಲಹೆಗಳನ್ನು ಪಾಲಿಸುವಲ್ಲಿ ಈ ಎಲ್ಲಾ ಅಪಾಯಗಳಿಂದ ದೂರವಿದ್ದು, ಸಂತೋಷದ ಜೀವನ ಸಾಗಿಸಲು ಸಾಧ್ಯವಾಗುತ್ತದೆ. ▪ (g15-E 03)

“ಐಶ್ವರ್ಯವಂತರಾಗಬೇಕೆಂದು ದೃಢನಿರ್ಧಾರಮಾಡಿಕೊಂಡಿರುವವರು ಪ್ರಲೋಭನೆಯಲ್ಲಿಯೂ ಉರ್ಲಿನಲ್ಲಿಯೂ ಬುದ್ಧಿಹೀನವಾದ ಮತ್ತು ಹಾನಿಕರವಾದ ಆಶೆಗಳಲ್ಲಿಯೂ ಬೀಳುತ್ತಾರೆ; ಇವು ಅವರನ್ನು ನಾಶನ ಮತ್ತು ಧ್ವಂಸದಲ್ಲಿ ಮುಳುಗಿಸುತ್ತವೆ.” 1 ತಿಮೊಥೆಯ 6:9

^ ಪ್ಯಾರ. 5 ಈ ಲೇಖನದಲ್ಲಿ ಜೂಜಾಟದ ಬಗ್ಗೆ ಮಾತಾಡಿದಾಗೆಲ್ಲ ಅದರಲ್ಲಿ ಲಾಟರಿ, ಕುದುರೆ ಜೂಜು, ಕೋಳಿ ಕಾಳಗ, ದುಡ್ಡು ಕಟ್ಟಿ ಇಸ್ಪೀಟಾಡುವುದು ಇವೆಲ್ಲ ಸೇರಿವೆ.