ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ವಿಕಾಸವೇ?

ಶಾಖವನ್ನು ಹೀರಿಕೊಳ್ಳುವ ಚಿಟ್ಟೆಯ ರೆಕ್ಕೆ

ಶಾಖವನ್ನು ಹೀರಿಕೊಳ್ಳುವ ಚಿಟ್ಟೆಯ ರೆಕ್ಕೆ

ದಿನನಿತ್ಯದ ಜೀವನಕ್ಕಾಗಿ ಭೂ ಗರ್ಭದಲ್ಲಿ ಸಿಗುವ ಕಲ್ಲಿದ್ದಲು, ಪೆಟ್ರೋಲಿಯಂನಂತಹ ಇಂಧನಗಳ ಮೇಲೆಯೇ ವರ್ಷಾನು ವರ್ಷಗಳಿಂದ ಮಾನವರು ಅವಲಂಬಿಸಿದ್ದಾರೆ. ಇದರ ಬಳಕೆಯನ್ನು ಕಡಿಮೆ ಮಾಡಲು ವಿಜ್ಞಾನಿಗಳು ಸೂರ್ಯನ ಶಕ್ತಿಯನ್ನು ಹೀರಿಕೊಳ್ಳುವ ಸಾಧನಗಳ ಸಾಮರ್ಥ್ಯವನ್ನು ಹೆಚ್ಚಿಸಲು ತುಂಬ ಪ್ರಯತ್ನಿಸುತ್ತಿದ್ದಾರೆ. ಆದರೆ ಇದಕ್ಕೆ ಪರಿಹಾರ ‘ನಮ್ಮ ಕಣ್ಣ ಮುಂದೆಯೇ ಹಾರಾಡುತ್ತಿದೆ’ ಎಂದು ಒಬ್ಬ ವಿಜ್ಞಾನಿ ಹೇಳುತ್ತಾರೆ. ಅದು ಹೇಗೆ?

ಚಿಟ್ಟೆಯ ರೆಕ್ಕೆಯಲ್ಲಿನ ಜೇನುಗೂಡಿನಂತಹ ರಚನೆ

ಪರಿಗಣಿಸಿ: ಚಳಿಗಾಲದಲ್ಲಿ ತಮ್ಮ ದೇಹವನ್ನು ಬೆಚ್ಚಗಾಗಿಸಿಕೊಳ್ಳಲು ಚಿಟ್ಟೆಗಳು ತಮ್ಮ ರೆಕ್ಕೆಗಳನ್ನು ಬಿಸಿಲಿಗೆ ತೆರೆದಿಡುತ್ತವೆ. ಸ್ವಾಲೋ ಜಾತಿಯ ಕೆಲವು ಚಿಟ್ಟೆಗಳ ರೆಕ್ಕೆಗಳಿಗೆ ಸೂರ್ಯನ ಬೆಳಕನ್ನು ಹೀರಿಕೊಳ್ಳುವ ಸಾಮರ್ಥ್ಯ ಹೆಚ್ಚಿರುತ್ತದೆ. ಈ ಸಾಮರ್ಥ್ಯಕ್ಕೆ ಮುಖ್ಯ ಕಾರಣ ಅವುಗಳ ರೆಕ್ಕೆಗಳಲ್ಲಿನ ಕಪ್ಪು ಬಣ್ಣ ಅಲ್ಲ, ಆ ರೆಕ್ಕೆಗಳ ರಚನೆಯಾಗಿದೆ. ರೆಕ್ಕೆಗಳಲ್ಲಿ ಒಂದರ ಮೇಲೊಂದರಂತೆ ಜೋಡಿಸಿರುವ ಬರಿಗಣ್ಣಿಗೆ ಕಾಣದ ತೀರಾ ಚಿಕ್ಕದಾದ ಪದರಗಳಿವೆ. ಈ ಪದರಗಳಲ್ಲಿ ಉಲ್ಟಾ ‘V’ ಆಕಾರದ ಗೆರೆಗಳಿದ್ದು ಅವುಗಳ ಮಧ್ಯದಲ್ಲಿ ಜೇನುಗೂಡಿನಂಥ ರಂಧ್ರಗಳಿವೆ. ಆದ್ದರಿಂದ ಬೆಳಕು ರೆಕ್ಕೆಯ ಮೇಲೆ ಬಿದ್ದಾಕ್ಷಣ ಈ ಗೆರೆಗಳು ಅದನ್ನು ರಂಧ್ರಗಳಿಗೆ ಹರಿಯುವಂತೆ ಮಾಡುತ್ತವೆ. ಈ ಕ್ರಿಯೆ ಚಿಟ್ಟೆಯ ರೆಕ್ಕೆಗಳನ್ನು ಕಡುಕಪ್ಪಾಗಿ ಕಾಣುವಂತೆ ಮಾಡುತ್ತದೆ ಮತ್ತು ಇಡೀ ದೇಹವನ್ನು ಬೆಚ್ಚಗಾಗಿಸುತ್ತದೆ.

“ಇಡೀ ಪರಿಸರದಲ್ಲೇ ಅತೀ ಸೂಕ್ಷ್ಮ ರಚನೆ ಚಿಟ್ಟೆಯ ರೆಕ್ಕೆಗಳಲ್ಲಿದೆ. ಈ ರಚನೆ ನೀರು ಮತ್ತು ಸೂರ್ಯನ ಬೆಳಕಿನಿಂದ ಹಸಿರು (ಪರಿಸರ ಸ್ನೇಹಿ) ಇಂಧನವಾದ ಜಲಜನಕವನ್ನು ಉತ್ಪಾದಿಸುವ ತಂತ್ರಜ್ಞಾನವನ್ನು ಕಂಡುಹಿಡಿಯುವಂತೆ ವಿಜ್ಞಾನಿಗಳನ್ನು ಪ್ರೇರೇಪಿಸಿದೆ” ಎಂದು ಸೈನ್ಸ್‌ ಡೈಲಿ ಎಂಬ ವಾರ್ತಾ ಮಾಧ್ಯಮ ತಿಳಿಸಿದೆ. ಸೂರ್ಯನ ಬೆಳಕನ್ನು ವಿದ್ಯುಚ್ಛಕ್ತಿಯನ್ನಾಗಿ ಪರಿವರ್ತಿಸುವ ಸಾಧನಗಳಲ್ಲಿ ಮತ್ತು ದೃಷ್ಟಿಗೆ ಸಂಬಂಧಿಸಿದ (ಆಪ್ಟಿಕಲ್‌) ಸಾಧನಗಳಲ್ಲಿ ಈ ವಿನ್ಯಾಸವನ್ನು ಬಳಸಬಹುದು.

ನೀವೇನು ನೆನಸುತ್ತೀರಿ? ಶಾಖವನ್ನು ಹೀರಿಕೊಳ್ಳುವ ಚಿಟ್ಟೆಯ ರೆಕ್ಕೆಗಳ ಈ ಅದ್ಭುತ ರಚನೆ ವಿಕಾಸನಾ? ಅಥವಾ ಸೃಷ್ಟಿಕರ್ತನ ಕೈ ಕೆಲಸಾನಾ? ▪ (g14-E 08)