ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಋತುಬಂಧದ ಸಮಸ್ಯೆಗಳನ್ನು ನಿಭಾಯಿಸುವುದು ಹೇಗೆ?

ಋತುಬಂಧದ ಸಮಸ್ಯೆಗಳನ್ನು ನಿಭಾಯಿಸುವುದು ಹೇಗೆ?

“ಸುಮ್ಮಸುಮ್ಮನೆ ಅಥವಾ ತಟ್ಟನೆ ದುಃಖದ ಭಾವನೆಗಳು ನನ್ನನ್ನು ಆವರಿಸಿಬಿಡುತ್ತಿದ್ದವು. ಅತ್ತುಬಿಡುತ್ತಿದ್ದೆ. ನನಗೇನೊ ಹುಚ್ಚುಹಿಡಿಯುತ್ತಿದೆಯಾ ಅಂತ ನೆನಸುತ್ತಿದ್ದೆ.”—ರತ್ನ,* 50 ವರ್ಷ.

“ಬೆಳಗ್ಗೆ ಎದ್ದಾಗ ಮನೆ ಪೂರ್ತಿ ಅಸ್ತವ್ಯಸ್ತ ಆಗಿರುವುದನ್ನು ನೋಡುತ್ತೀರಿ. ವಸ್ತುಗಳು ಕೈಗೆ ಸಿಗುವುದಿಲ್ಲ. ವರ್ಷಗಳಿಂದ ಸಲೀಸಾಗಿ ಮಾಡುತ್ತಿದ್ದ ಕೆಲಸಗಳು ಈಗ ತುಂಬ ಕಷ್ಟವೆನಿಸುತ್ತಿದೆ. ಯಾಕಂತ ಗೊತ್ತಾಗುವುದಿಲ್ಲ.”—ಹೇಮಾ, 55 ವರ್ಷ.

ಈ ಮಹಿಳೆಯರಿಗೆ ಯಾವುದೇ ಕಾಯಿಲೆಯಿರಲಿಲ್ಲ. ಅವರು ಋತುಬಂಧದ (ಮೆನೋಪಾಸ್‌) ಹಂತದಲ್ಲಿದ್ದರು. ಇದು ಒಬ್ಬ ಸ್ತ್ರೀಯ ಬದುಕಲ್ಲಾಗುವ ನೈಸರ್ಗಿಕ ಬದಲಾವಣೆ ಆಗಿದ್ದು, ಆಕೆಯ ಸಂತಾನಪ್ರಾಪ್ತಿ ಕಾಲದ ಅಂತ್ಯವನ್ನು ಸೂಚಿಸುತ್ತದೆ. ನೀವೊಬ್ಬ ಮಹಿಳೆ ಆಗಿರುವಲ್ಲಿ ನಿಮ್ಮ ಬದುಕಲ್ಲಿ ಆ ಸಮಯ ಹತ್ತಿರ ಬರುತ್ತಾ ಇದೆಯಾ? ಅಥವಾ ಈಗಾಗಲೇ ಆ ಹಂತದಲ್ಲಿದ್ದೀರಾ? ಏನೇ ಇರಲಿ ನಿಮಗೆ, ನಿಮ್ಮ ಆಪ್ತರಿಗೆ ಇದರ ಬಗ್ಗೆ ಆದಷ್ಟು ಹೆಚ್ಚು ತಿಳುವಳಿಕೆ ಇರುವುದು ಒಳ್ಳೇದು. ಈ ಬದಲಾವಣೆಯಿಂದ ಎದುರಾಗುವ ಸಮಸ್ಯೆಗಳನ್ನು ನಿಭಾಯಿಸಲು ಆಗ ಹೆಚ್ಚು ಸನ್ನದ್ಧರಾಗಿರುವಿರಿ.

ಹೆಚ್ಚಿನ ಮಹಿಳೆಯರಿಗೆ 40-50 ವರ್ಷದೊಳಗೆ ಮುಟ್ಟು ನಿಂತುಹೋಗುತ್ತದೆ. * ಕೆಲವರಿಗೆ ತುಂಬ ತಡವಾಗಿ, 60 ದಾಟಿದ ಮೇಲೂ ಆಗುತ್ತದೆ. ಹೆಚ್ಚಾಗಿ ಅದು ಕ್ರಮೇಣ ನಿಂತುಹೋಗುತ್ತದೆ. ಹಾರ್ಮೋನುಗಳ ಉತ್ಪಾದನೆಯಲ್ಲಿನ ಏರಿಳಿತದಿಂದಾಗಿ ಮುಟ್ಟು ಪ್ರತಿ ತಿಂಗಳು ಆಗಲಿಕ್ಕಿಲ್ಲ. ಎಲ್ಲೊ ಮಧ್ಯಮಧ್ಯದಲ್ಲಿ ರಕ್ತಸ್ರಾವ ಆಗಬಹುದು. ಅಥವಾ ಮುಟ್ಟಾದಾಗ ಅತಿಸ್ರಾವವಾಗಬಹುದು. ಕೆಲವೇ ಕೆಲವು ಸ್ತ್ರೀಯರಿಗೆ ಒಮ್ಮಿಂದೊಮ್ಮೆಗೆ ರಾತ್ರಿಬೆಳಗಾಗುವುದರೊಳಗೆ ಎಂಬಂತೆ ಋತುಸ್ರಾವ ಪೂರ್ತಿ ನಿಂತುಹೋಗುತ್ತದೆ.

“ಋತುಬಂಧದ ಅನುಭವ ಪ್ರತಿಯೊಬ್ಬ ಸ್ತ್ರೀಯಲ್ಲಿ ಭಿನ್ನಭಿನ್ನ ಆಗಿರುತ್ತದೆ” ಎನ್ನುತ್ತದೆ ಮೆನೋಪಾಸ್‌ ಗೈಡ್‌ಬುಕ್‌ ಎಂಬ ಪುಸ್ತಕ. ಅದು ಹೀಗೂ ಹೇಳುತ್ತದೆ: “ಅದಕ್ಕೆ ಸಂಬಂಧಪಟ್ಟ ಅತಿ ಸಾಮಾನ್ಯವಾದ ತೊಂದರೆ ‘ಹಾಟ್‌ ಫ್ಲಾಷ್‌’ (ಹಾಟ್‌ ಫ್ಲಷ್‌ ಎಂದೂ ಕರೆಯಲಾಗುತ್ತದೆ) ಆಗಿದೆ.” ಅಂದರೆ ಇದ್ದಕ್ಕಿದ್ದಂತೆ ಮುಖ ಕೆಂಪೇರಿ, ಬೆವತು ದೇಹದಲ್ಲಿ ಕಾವು, ಉಷ್ಣತೆ ಉಂಟಾಗುತ್ತದೆ. ಇದಾದ ನಂತರ ಥಟ್ಟನೆ ಮೈಯ ಶಾಖ ಇಳಿಯಬಹುದು. ಈ ಲಕ್ಷಣಗಳು ನಿದ್ದೆಭಂಗಮಾಡುತ್ತವೆ ಮತ್ತು ಶಕ್ತಿಯನ್ನೆಲ್ಲ ಹೀರಿಬಿಡುತ್ತವೆ. ಈ ತೊಂದರೆ ಎಷ್ಟು ಸಮಯ ಇರುತ್ತದೆ? ದ ಮೆನೋಪಾಸ್‌ ಬುಕ್‌ಗನುಸಾರ “ಋತುಸ್ರಾವ ನಿಂತುಹೋಗುವ ಈ ಅವಧಿಯಲ್ಲಿ ಕೆಲವು ಸ್ತ್ರೀಯರಿಗೆ ಒಂದು ಅಥವಾ ಎರಡು ವರ್ಷಗಳ ತನಕ ಒಮ್ಮೊಮ್ಮೆ ಹಾಟ್‌ ಫ್ಲಾಷಸ್‌ ಆಗುತ್ತಿರುತ್ತದೆ. ಇತರರಿಗೆ ತುಂಬ ವರ್ಷಗಳ ತನಕ ಆಗುತ್ತದೆ. ಕೆಲವೇ ಕೆಲವರು ತಮ್ಮ  ಉಳಿದ ಜೀವಮಾನವಿಡೀ ಆಗಾಗ್ಗೆ ಹಾಟ್‌ ಫ್ಲಾಷಸ್‌ ಆಗುವುದನ್ನು ವರದಿಸಿದ್ದಾರೆ.” *

ಹಾರ್ಮೋನುಗಳಲ್ಲಿನ ಏರುಪೇರಿನಿಂದಾಗಿ ಸ್ತ್ರೀಯೊಬ್ಬಳು ಖಿನ್ನತೆಗೂ ಒಳಗಾಗಬಹುದು. ಮನಸ್ಥಿತಿ ಆಗಾಗ ಬದಲಾದೀತು. ಎಲ್ಲಾದಕ್ಕೂ ಅಳು ಬರುವುದು, ಏಕಾಗ್ರತೆ ಕಡಿಮೆಯಾಗುವುದು, ಮರೆವು ಹೆಚ್ಚಾಗುವುದು ಆಗಬಹುದು. ಹಾಗಿದ್ದರೂ, “ಎಲ್ಲಾ ಸ್ತ್ರೀಯರಿಗೂ ಈ ಎಲ್ಲಾ ತೊಂದರೆಗಳು ಆಗುವುದು ತೀರ ಅಸಂಭವ” ಎನ್ನುತ್ತದೆ ದ ಮೆನೋಪಾಸ್‌ ಬುಕ್‌. ಕೆಲವರಲ್ಲಂತೂ ಈ ಸಮಸ್ಯೆಗಳು ಕಡಿಮೆ ಇರುತ್ತವೆ ಅಥವಾ ಇರುವುದೇ ಇಲ್ಲ.

ನಿಭಾಯಿಸುವುದು ಹೇಗೆ?

ಜೀವನಶೈಲಿಯಲ್ಲಿ ಸರಳವಾದ ಬದಲಾವಣೆಗಳನ್ನು ಮಾಡಿದರೆ ಕೆಲವು ತೊಂದರೆಗಳನ್ನು ಕಡಿಮೆಮಾಡಬಹುದು. ಉದಾಹರಣೆಗೆ, ಧೂಮಪಾನವನ್ನು ಬಿಟ್ಟರೆ ಹಾಟ್‌ ಫ್ಲಾಷ್‌ಗಳನ್ನು ಕಡಿಮೆಗೊಳಿಸಬಹುದು. ಅನೇಕ ಸ್ತ್ರೀಯರಿಗೆ ತಮ್ಮ ಆಹಾರದಲ್ಲೂ ಬದಲಾವಣೆಗಳನ್ನು ಮಾಡುವುದರಿಂದ ಸಹಾಯವಾಗಿದೆ. ಮದ್ಯ ಸೇವನೆ, ಕ್ಯಾಫೀನ್‌, ಮಸಾಲೆ ಪದಾರ್ಥಗಳು ಇಲ್ಲವೆ ಸಕ್ಕರೆ ಇರುವ ಆಹಾರ ಹಾಟ್‌ ಫ್ಲಾಷ್‌ಗಳನ್ನು ಬರಿಸಬಲ್ಲವು. ಆದ್ದರಿಂದ ಇದೆಲ್ಲವನ್ನು ಕಡಿಮೆಗೊಳಿಸುತ್ತಾರೆ ಅಥವಾ ಪೂರ್ತಿ ಬಿಟ್ಟುಬಿಡುತ್ತಾರೆ. ಚೆನ್ನಾಗಿ ಊಟಮಾಡುವುದಂತೂ ಪ್ರಾಮುಖ್ಯ. ಆದರೆ ಅದು ಸಂತುಲಿತ ಆಗಿರಬೇಕು, ವೈವಿಧ್ಯಮಯ ಆಗಿರಬೇಕು.

ವ್ಯಾಯಾಮ ಸಹ ಋತುಬಂಧದ ಲಕ್ಷಣಗಳನ್ನು ತಗ್ಗಿಸಲು ತುಂಬ ನೆರವಾಗುತ್ತದೆ. ಅದು ನಿದ್ರಾಹೀನತೆಯನ್ನು ಕಡಿಮೆಮಾಡುತ್ತದೆ. ಮನಸ್ಥಿತಿಯನ್ನು ಬಹಳಷ್ಟು ಮಟ್ಟಿಗೆ ಉತ್ತಮಗೊಳಿಸುತ್ತದೆ. ಅಲ್ಲದೆ ಮೂಳೆಗಳನ್ನು ಗಟ್ಟಿಮಾಡಿ, ಒಟ್ಟಿನಲ್ಲಿ ಆರೋಗ್ಯವನ್ನು ಚೆನ್ನಾಗಿಡುತ್ತದೆ. *

ಮುಕ್ತವಾಗಿ ಮಾತಾಡಿ

ಈ ಮುಂಚೆ ತಿಳಿಸಲಾದ ರತ್ನ ಎಂಬವರು ಹೇಳುವುದು: “ನೀವು ಒಂಟಿಯಾಗಿ, ಮೌನವಾಗಿ ಇದೆಲ್ಲವನ್ನು ಸಹಿಸುತ್ತಾ ನರಳಬೇಕಾಗಿಲ್ಲ. ನಿಮ್ಮ ಆಪ್ತರೊಂದಿಗೆ ಮುಕ್ತವಾಗಿ ಮಾತಾಡಿದರೆ ನಿಮಗೇನಾಗುತ್ತಿದೆಯೊ ಅದನ್ನು ನೋಡಿ ಅವರು ವಿಪರೀತವಾಗಿ ಚಿಂತೆಮಾಡುವುದಿಲ್ಲ.” ಅದರ ಬದಲು ನಿಮ್ಮೊಟ್ಟಿಗೆ ಹೆಚ್ಚು ತಾಳ್ಮೆಯಿಂದ ನಡೆದುಕೊಳ್ಳುವರು, ನಿಮ್ಮನ್ನು ಅರ್ಥಮಾಡಿಕೊಳ್ಳುವರು. “ಪ್ರೀತಿ ಬಹು ತಾಳ್ಮೆಯುಳ್ಳದ್ದು, ಪ್ರೀತಿ ದಯೆ ತೋರಿಸುವದು” ಎನ್ನುತ್ತದೆ 1 ಕೊರಿಂಥ 13:4.—ಸತ್ಯವೇದ ಭಾಷಾಂತರ.

ಅನೇಕ ಮಹಿಳೆಯರಿಗೆ, ಅದರಲ್ಲೂ ಸಂತಾನಪ್ರಾಪ್ತಿ ಶಕ್ತಿಯನ್ನು ಕಳೆದುಕೊಂಡಿದ್ದೇವೆಂದು ನೊಂದಿರುವವರಿಗೆ ಪ್ರಾರ್ಥನೆಯಿಂದ ತುಂಬ ಸಹಾಯ ಸಿಗುತ್ತದೆ. “ನಮ್ಮ ಎಲ್ಲ ಸಂಕಟಗಳಲ್ಲಿ [ದೇವರು] ನಮ್ಮನ್ನು ಸಾಂತ್ವನಗೊಳಿಸುತ್ತಾನೆ” ಎಂದು ಬೈಬಲ್‌ ಆಶ್ವಾಸನೆ ಕೊಡುತ್ತದೆ. (2 ಕೊರಿಂಥ 1:4) ಋತುಬಂಧದ ಅವಧಿ ತಾತ್ಕಾಲಿಕ ಎಂಬ ತಿಳುವಳಿಕೆಯೂ ಸಾಂತ್ವನದಾಯಕ. ಈ ಅವಧಿಯ ಬಳಿಕವೂ ತಮ್ಮ ಆರೋಗ್ಯವನ್ನು ಚೆನ್ನಾಗಿ ನೋಡಿಕೊಳ್ಳುವ ಸ್ತ್ರೀಯರು ನವಚೈತನ್ಯ ಮತ್ತು ಉತ್ತಮ ಗುಣಮಟ್ಟದ ಜೀವನವನ್ನು ಹಲವಾರು ವರ್ಷಗಳ ತನಕ ಆನಂದಿಸುತ್ತಾರೆ. (g13-E 11)

^ ಪ್ಯಾರ. 5 ಹೆಸರುಗಳನ್ನು ಬದಲಿಸಲಾಗಿದೆ.

^ ಪ್ಯಾರ. 6 ವೈದ್ಯರಿಗನುಸಾರ 12 ತಿಂಗಳ ತನಕ ಋತುಸ್ರಾವ ಆಗಿರದ ಮಹಿಳೆಗೆ ಋತುಸ್ರಾವ ನಿಂತುಹೋಗಿದೆ ಎಂದರ್ಥ.

^ ಪ್ಯಾರ. 10 ಥೈರಾಯ್ಡ್ ಕಾಯಿಲೆ, ಸೋಂಕುಗಳು, ಕೆಲವೊಂದು ವಿಧದ ಔಷಧ ಚಿಕಿತ್ಸೆಗಳಿಂದಾಗಿಯೂ ಹಾಟ್‌ ಫ್ಲಾಷ್‌ ಆಗುತ್ತದೆ. ಋತುಬಂಧದಿಂದಾಗಿಯೇ ಹೀಗಾಗುತ್ತಿದೆ ಎಂದು ನಿರ್ಧರಿಸುವ ಮೊದಲು ಈ ಎಲ್ಲ ಕಾರಣಗಳಿಂದೇನಾದರೂ ಆಗುತ್ತಿದೆಯಾ ಅಂತ ಮೊದಲು ಖಚಿತಪಡಿಸಿಕೊಳ್ಳಬೇಕು.

ಋತುಬಂಧದ ಅವಧಿಯಲ್ಲಿನ ಈ ಸಮಸ್ಯೆಗಳನ್ನು ಸ್ವಲ್ಪಮಟ್ಟಿಗೆ ನಿಭಾಯಿಸುವಂತೆ ಸಹಾಯಮಾಡಲು ಡಾಕ್ಟರರು ಹಾರ್ಮೋನುಗಳನ್ನು, ಆಹಾರಕ್ಕೆ ಪೂರಕವಾಗಿರುವ ಮಾತ್ರೆಗಳನ್ನು ಮತ್ತು ಖಿನ್ನತೆ ತಗ್ಗಿಸುವ ಔಷಧಗಳನ್ನು ಶಿಫಾರಸ್ಸು ಮಾಡಬಹುದು. ಎಚ್ಚರ! ಪತ್ರಿಕೆಯು ಯಾವುದೇ ಉತ್ಪನ್ನ ಅಥವಾ ಚಿಕಿತ್ಸೆಯನ್ನು ಶಿಫಾರಸ್ಸು ಮಾಡುವುದಿಲ್ಲ.