ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

 ವಿಕಾಸವೇ? ವಿನ್ಯಾಸವೇ?

ಪುಟಾಣಿ ಡಿಎನ್‌ಎ ಅಪಾರ ಶೇಖರಣೆ

ಪುಟಾಣಿ ಡಿಎನ್‌ಎ ಅಪಾರ ಶೇಖರಣೆ

ಕಂಪ್ಯೂಟರಿನಲ್ಲಿ ಜನರು ಮಾಹಿತಿ ಸಂಗ್ರಹಿಸಿಟ್ಟು ಅಗತ್ಯವಿದ್ದಾಗ ಬಳಸುತ್ತಾರೆ. ಹಾಗಾಗಿ ಇಂದು ವಿಜ್ಞಾನಿಗಳು ಅಗಾಧ ಪ್ರಮಾಣದ ಮಾಹಿತಿಯನ್ನು ಸಂಗ್ರಹಿಸಿಡಲು ಅತ್ಯಾಧುನಿಕ ವಿಧಾನವೊಂದನ್ನು ಕಂಡುಹಿಡಿಯುವ ಪ್ರಯತ್ನದಲ್ಲಿದ್ದಾರೆ. ಅದಕ್ಕಾಗಿ ಅವರು ಯಾವುದರ ಶೇಖರಣಾ ಸಾಮರ್ಥ್ಯವನ್ನು ನಕಲು ಮಾಡುತ್ತಿದ್ದಾರೆ ಗೊತ್ತೇ? ಡಿಎನ್‌ಎ.

ಪರಿಗಣಿಸಿ: ಈ ಡಿಎನ್‌ಎ ಇರೋದು ಜೀವಂತ ಜೀವಕೋಶಗಳಲ್ಲಿ. ಇದರಲ್ಲಿ ಜೀವಿಗಳ ಬಗ್ಗೆ ಕೋಟ್ಯಾನುಕೋಟಿ ಮಾಹಿತಿ ಘಟಕಗಳಿರುತ್ತವೆ. ಅಳಿದು ಹೋದ ಬೃಹತ್‌ ಗಾತ್ರದ ಆನೆಯಾಕಾರದ “ಮ್ಯಾಮತ್‌ಗಳ ಮೂಳೆಗಳಿಂದ [ಡಿಎನ್‌ಎ] ತೆಗೆಯಲಾದರೆ . . . ಆ ಪ್ರಾಣಿಗಳ ಪೂರ್ಣ ಮಾಹಿತಿ ಗೊತ್ತಾಗುತ್ತದೆ.” ಡಿಎನ್‌ಎ “ತುಂಬಾ ಚಿಕ್ಕದು ಆದರೆ ಅದರೊಳಗೆ ಅಪಾರ ಮಾಹಿತಿ ತುಂಬಿರುತ್ತೆ. ಆ ಮಾಹಿತಿಯನ್ನು ಕಾಪಾಡಲು ಯಾವುದೇ ಶಕ್ತಿಯ ಪೂರೈಕೆ ಬೇಕಾಗಿಲ್ಲ. ಸುಲಭವಾಗಿ ಎಲ್ಲಿಗೆ ಬೇಕಾದರೂ ತೆಗೆದುಕೊಂಡು ಹೋಗಬಹುದು” ಎನ್ನುತ್ತಾರೆ ನಿಕ್‌ ಗೋಲ್ಡ್‌ಮನ್‌. ಮನುಷ್ಯ ಇವತ್ತು ಸಂಗ್ರಹಿಸಿಡುತ್ತಿರುವ ಮಾಹಿತಿಯನ್ನು ಡಿಎನ್‌ಎಯಲ್ಲಿ ಸಂಗ್ರಹಿಸಿ ಇಡಲು ಆಗುತ್ತಾ? ಇದಕ್ಕೆ ಸಂಶೋಧಕರ ಉತ್ತರ ಹೌದು.

ಕಂಪ್ಯೂಟರಿನಲ್ಲಿ ಅಕ್ಷರಗಳು, ಚಿತ್ರಗಳು, ಆಡಿಯೊಗಳನ್ನು ಶೇಖರಿಸಿಡುವ ಹಾಗೆಯೇ ಡಿಎನ್‌ಎಯಲ್ಲಿ ವಿಜ್ಞಾನಿಗಳು ಮಾಹಿತಿಯನ್ನು ಸಂಕೇತಭಾಷೆಯಲ್ಲಿ ಶೇಖರಿಸಿಟ್ಟರು. ಸ್ವಲ್ಪ ಸಮಯದ ನಂತರ ಆ ಮಾಹಿತಿಯನ್ನು ಪರಿವರ್ತಿಸಿದಾಗ ಶೇಖರಿಸಿಟ್ಟ 100% ಮಾಹಿತಿ ವಾಪಸ್ಸು ಸಿಕ್ಕಿತು. ವಿಜ್ಞಾನಿಗಳ ಪ್ರಕಾರ, ಇದೇ ವಿಧಾನ ಬಳಸೋದಾದರೆ ಒಂದು ಗ್ರಾಮ್‌ ತೂಕದ ಕೃತಕ ಡಿಎನ್‌ಎಯಲ್ಲಿ ಸುಮಾರು 30 ಲಕ್ಷದಷ್ಟು ಸಿ.ಡಿ.ಗಳ ಮಾಹಿತಿ ಶೇಖರಿಸಿಡಬಹುದು. ಅಲ್ಲದೆ ಆ ಮಾಹಿತಿಯನ್ನು ನೂರಾರು ಅಷ್ಟೇಕೆ ಸಾವಿರಾರು ವರ್ಷಗಳ ತನಕ ಜೋಪಾನವಾಗಿ ಇಡಬಹುದು. ಇಡೀ ಪ್ರಪಂಚದ ಮಾಹಿತಿ ಭಂಡಾರವನ್ನು ಪುಟ್ಟ ವಸ್ತುವಿನಲ್ಲಿ ಶೇಖರಿಸಿಡಬಹುದು. ಇಂಥಾ ವ್ಯವಸ್ಥೆಯೊಂದನ್ನು ಕಂಡುಹಿಡಿದರೆ ಡಿಎನ್‌ಎ ಮಾದರಿಯ ಅತೀ ಚಿಕ್ಕ ಹಾರ್ಡ್‌ ಡ್ರೈವ್‌ ನಿಮ್ಮ ಕೈಯಲ್ಲಿರುತ್ತೆ.

ನೀವೇನು ನೆನಸುತ್ತೀರಿ? ಡಿಎನ್‌ಎಗೆ ಇಂಥಾ ಶೇಖರಣಾ ಸಾಮರ್ಥ್ಯ ವಿಕಾಸವಾಗಿ ಬಂತಾ? ಅಥವಾ ಸೃಷ್ಟಿಕರ್ತ ವಿನ್ಯಾಸಿಸಿದನಾ? (g13-E 12)