ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಬರ್ನೆಟ್‌, ಸಿಮೋನ್‌, ಎಸ್ಟನ್‌, ಕೇಲಬ್‌

ತಮ್ಮನ್ನು ಮನಃಪೂರ್ವಕವಾಗಿ ನೀಡಿಕೊಂಡರು​—⁠ಓಶೀಯಾನಿಯದಲ್ಲಿ

ತಮ್ಮನ್ನು ಮನಃಪೂರ್ವಕವಾಗಿ ನೀಡಿಕೊಂಡರು​—⁠ಓಶೀಯಾನಿಯದಲ್ಲಿ

ರೆನೆ ಆಸ್ಟ್ರೇಲಿಯದಲ್ಲಿ ಹುಟ್ಟಿಬೆಳೆದ ಸಹೋದರಿ. ವಯಸ್ಸು ಸುಮಾರು 35. ಸೇವೆಯಲ್ಲಿ ತುಂಬ ಹುರುಪಿನಿಂದಿದ್ದ ಕುಟುಂಬದಲ್ಲಿ ಬೆಳೆದ ಅವರು ಹೇಳುತ್ತಾರೆ: “ಅನೇಕ ಸಲ ನಾವು ಪ್ರಚಾರಕರ ಅಗತ್ಯ ಹೆಚ್ಚಿರುವ ಸ್ಥಳಗಳಿಗೆ ಹೋಗಿ, ಅಲ್ಲೇ ವಾಸಮಾಡಿ ಸೇವೆಮಾಡಿದೆವು. ಅಪ್ಪಅಮ್ಮ ಇದನ್ನೆಲ್ಲಾ ನನಗೆ ‘ಬೋರ್‌’ ಆಗದ ಹಾಗೆ ಉತ್ಸಾಹದಿಂದ ಮಾಡುತ್ತಿದ್ದರು. ತುಂಬ ಮಜಾ ಸಿಗುತ್ತಿತ್ತು! ನನಗೆ ಇಬ್ಬರು ಮಕ್ಕಳಾದಾಗ ಅವರಿಗೂ ಅಂಥ ಜೀವನ ಸಿಗಬೇಕೆನ್ನುವುದು ನನ್ನ ಆಸೆ ಆಗಿತ್ತು.”

ಇಂಥದ್ದೇ ಗುರಿಗಳು ಆಕೆಯ ಗಂಡ ಶೇನ್‌ಗೂ (ಸುಮಾರು 40 ವರ್ಷ) ಇದ್ದವು. ಶೇನ್‌ ವಿವರಿಸಿದ್ದು: “ನಮ್ಮ ಎರಡನೆಯ ಮಗು ಹುಟ್ಟಿದ ನಂತರ ಒಮ್ಮೆ ಕಾವಲಿನಬುರುಜುವಿನಲ್ಲಿ ಒಂದು ಕುಟುಂಬದ ಅನುಭವ ಓದಿದೆವು. * ಅವರು ನೈರುತ್ಯ ಪೆಸಿಫಿಕ್‌ನ ಟಾಂಗ ದ್ವೀಪಗಳಿಗೆ ವಿಹಾರದೋಣಿಯಲ್ಲಿ ಹೋಗಿ ಅಲ್ಲೆಲ್ಲಾ ಸಾರಿದ್ದರು. ಇದನ್ನು ಓದಿ ನಮಗೂ ಹಾಗೆ ಸೇವೆ ಮಾಡಬೇಕು ಅಂತ ಅನಿಸಿತು. ಹಾಗಾಗಿ ಪ್ರಚಾರಕರ ಅಗತ್ಯ ಎಲ್ಲಿದೆ ಅಂತ ತಿಳಿದುಕೊಳ್ಳಲು ಆಸ್ಟ್ರೇಲಿಯ ಮತ್ತು ನ್ಯೂಜಿಲೆಂಡ್‌ ಬ್ರಾಂಚ್‌ಗಳಿಗೆ ಬರೆದು ಕೇಳಿದೆವು. * ಆಶ್ಚರ್ಯ ಏನೆಂದರೆ, ನಾವು ಯಾವ ಸ್ಥಳದ ಬಗ್ಗೆ ಓದಿದ್ದೆವೊ ಅದೇ ಸ್ಥಳಕ್ಕೆ ಅಂದರೆ ಟಾಂಗಕ್ಕೆ ಹೋಗುವಂತೆ ನಮಗೆ ಹೇಳಲಾಯಿತು.”

ಜೇಕಬ್‌, ರೆನೆ, ಸ್ಕೈ, ಶೇನ್‌

ಶೇನ್‌, ರೆನೆ, ಅವರ ಮಗ ಜೇಕಬ್‌, ಮಗಳು ಸ್ಕೈ ಟಾಂಗದಲ್ಲಿ ಒಂದು ವರ್ಷ ಇದ್ದರು. ಆದರೆ ಅಲ್ಲಿ ಒಂದಾದ ಮೇಲೆ ಒಂದು ದೊಂಬಿ ಗಲಭೆಗಳು ನಡೆದದ್ದರಿಂದ ಅವರು ಆಸ್ಟ್ರೇಲಿಯಕ್ಕೆ ಹಿಂದಿರುಗಬೇಕಾಯಿತು. ಹೀಗಾದರೂ ಈ ಕುಟುಂಬ ತಮ್ಮ ಸೇವೆಯನ್ನು ಹೆಚ್ಚಿಸುವ ಗುರಿಯನ್ನು ಮರೆಯಲಿಲ್ಲ. 2011ರಲ್ಲಿ ಅವರು ಆಸ್ಟ್ರೇಲಿಯದ ಪೂರ್ವಕ್ಕೆ ಸುಮಾರು 1,500 ಕಿ.ಮೀ. ದೂರದಲ್ಲಿರುವ ಒಂದು ಪುಟ್ಟ ಪೆಸಿಫಿಕ್‌ ದ್ವೀಪವಾದ ನಾರ್ಫೋಕ್‌ ಐಲೆಂಡ್‌ಗೆ ಸ್ಥಳಾಂತರಿಸಿದರು. ಅವರ ಈ ಪ್ರಯತ್ನ ಯಶಸ್ವಿ ಆಯಿತಾ? ಈಗ 14 ವಯಸ್ಸಿನ ಜೇಕಬ್‌ ಹೇಳುವುದು: “ಯೆಹೋವನು ನಮ್ಮನ್ನು ನೋಡಿಕೊಂಡನು ಅಷ್ಟೇ ಅಲ್ಲ ನಮ್ಮ ಸೇವೆಯನ್ನು ತುಂಬ ಆನಂದಿಸುವಂತೆಯೂ ಮಾಡಿದನು.”

ಅಗತ್ಯವಿರುವ ಸ್ಥಳಗಳಿಗೆ ಹೋದ ಕುಟುಂಬಗಳು

ಶೇನ್‌ ಕುಟುಂಬದಂತೆ ಅನೇಕ ಕುಟುಂಬಗಳು ಅಗತ್ಯ ಹೆಚ್ಚಿರುವ ಸ್ಥಳಗಳಲ್ಲಿ ಸೇವೆಮಾಡಲು ಸಂತೋಷದಿಂದ ಮುಂದೆ ಬಂದಿವೆ. ಹೀಗೆ ಮಾಡಲು ಅವರಿಗೆ ಯಾವುದು ಪ್ರೇರಣೆ ನೀಡಿತು?

“ಹೆಚ್ಚಿನವರು ಸುವಾರ್ತೆಯಲ್ಲಿ ಆಸಕ್ತಿ ತೋರಿಸಿದ್ದರು. ಇವರೆಲ್ಲರ ಜೊತೆ ಪ್ರತಿ ವಾರ ಬೈಬಲ್‌ ಅಧ್ಯಯನ ಮಾಡುವುದೇ ನಮ್ಮ ಗುರಿಯಾಗಿತ್ತು.”—ಬರ್ನೆಟ್‌

ಸುಮಾರು 35 ವರ್ಷ ಪ್ರಾಯದ ಬರ್ನೆಟ್‌ ಮತ್ತು ಅವರ ಪತ್ನಿ ಸಿಮೋನ್‌ ತಮ್ಮ ಗಂಡುಮಕ್ಕಳಾದ ಎಸ್ಟನ್‌ (12 ವರ್ಷ), ಕೇಲಬ್‌ (9 ವರ್ಷ) ಜೊತೆ ಆಸ್ಟ್ರೇಲಿಯಕ್ವೀನ್ಸ್‌ಲ್ಯಾಂಡ್‌ನಲ್ಲಿನ ಬರ್ಕ್‌ಟೌನ್‌ಗ ಮನೆ ಬದಲಾಯಿಸಿದರು. ಈ ಪಟ್ಟಣ ತುಂಬ ದೂರದಲ್ಲಿತ್ತು. “ಇಲ್ಲಿ ಮೂರು ನಾಲ್ಕು ವರ್ಷಕ್ಕೊಮ್ಮೆ ಮಾತ್ರ ಸಾರಲಾಗುತ್ತಿತ್ತು. ಹೆಚ್ಚಿನವರು ಸುವಾರ್ತೆಯಲ್ಲಿ ಆಸಕ್ತಿ ತೋರಿಸಿದ್ದರು. ಇವರೆಲ್ಲರ ಜೊತೆ ಪ್ರತಿ ವಾರ ಬೈಬಲ್‌ ಅಧ್ಯಯನ ಮಾಡುವುದೇ ನಮ್ಮ ಗುರಿಯಾಗಿತ್ತು” ಎನ್ನುತ್ತಾರೆ ಬರ್ನೆಟ್‌.

ಬೆಂಜಮಿನ್‌, ಜೇಡ್‌, ಬ್ರಿಯಾ, ಕ್ಯಾರಲಿನ್‌

ಈಗ 50 ವರ್ಷ ದಾಟಿರುವ ಮಾರ್ಕ್‌ ಮತ್ತು ಅವರ ಪತ್ನಿ ಕೆರೆನ್‌ ಈ ಮುಂಚೆ ಆಸ್ಟ್ರೇಲಿಯದ ಸಿಡ್ನಿ ಹತ್ತಿರದ ಅನೇಕ ಸಭೆಗಳಲ್ಲಿ ಸೇವೆಮಾಡಿದ್ದರು. ಅಲ್ಲಿಂದ, ಮಕ್ಕಳಾದ ಜೆಸ್ಸಿಕಾ, ಜಿಮ್‌, ಜ್ಯಾಕ್‌ರೊಟ್ಟಿಗೆ ನಾರ್ದರ್ನ್‌ ಟೆರಿಟರಿಯಲ್ಲಿರುವ ನಲನ್‌ಬೊಯಿ ಎಂಬ ಗಣಿಗಾರಿಕಾ ಸಮುದಾಯಕ್ಕೆ ಹೋಗಿ ನೆಲೆಸಿದರು. “ಜನರೆಂದರೆ ನನಗೆ ತುಂಬ ಇಷ್ಟ. ಅದಕ್ಕೆ ಸಭೆ ಮತ್ತು ಕ್ಷೇತ್ರದಲ್ಲಿ ಹೆಚ್ಚು ಕೆಲಸ ಮಾಡುವ ಅಗತ್ಯ ಇದ್ದಲ್ಲಿಗೆ ಹೋಗಬೇಕೆಂಬ ಆಸೆ ನನಗೆ ಮುಂಚಿನಿಂದಲೂ ಇತ್ತು” ಎಂದು ಮಾರ್ಕ್‌ ಹೇಳುತ್ತಾರೆ. ಆದರೆ ಆ ಹೊಸ ಸ್ಥಳಕ್ಕೆ ಹೋಗಲು ಕೆರೆನ್‌ ಹಿಂದೆಮುಂದೆ ನೋಡುತ್ತಿದ್ದರು. ನಂತರ ಅವರು ಹೀಗೆ ಹೇಳಿದರು: “ನನ್ನ ಯಜಮಾನರು ಮತ್ತು ಬೇರೆಯವರು ಪ್ರೋತ್ಸಾಹಿಸಿದ್ದರಿಂದ ಒಂದು ಸಲ ಪ್ರಯತ್ನ ಮಾಡೋಣ ಅಂತ ಯೋಚಿಸಿದೆ. ಹಾಗೆ ಮಾಡಿದ್ದು ತುಂಬ ಒಳ್ಳೇದಾಯಿತು!”

ಜಿಮ್‌, ಜ್ಯಾಕ್‌, ಮಾರ್ಕ್‌, ಕೆರೆನ್‌

ಬೆಂಜಮಿನ್‌ ಮತ್ತು ಕ್ಯಾರಲಿನ್‌ ದಂಪತಿ ಆಸ್ಟ್ರೇಲಿಯದ ಕ್ವೀನ್ಸ್‌ಲ್ಯಾಂಡ್‌ನಲ್ಲಿದ್ದರು. 2011ರಲ್ಲಿ ಅವರು 5 ವರ್ಷ ಕೆಳಗಿನ ತಮ್ಮ ಹೆಣ್ಮಕ್ಕಳಾದ ಜೇಡ್‌ ಮತ್ತು ಬ್ರಿಯಾರೊಟ್ಟಿಗೆ ಒಂದು ಚಿಕ್ಕ ದೇಶವಾದ ಟೈಮರ್‌-ಲೆಸ್ಟಿಗೆ ಹೋದರು. ಇದು ಇಂಡೋನೇಷಿಯ ದ್ವೀಪಸಮೂಹದಲ್ಲಿರುವ ಟೈಮರ್‌ ಐಲೆಂಡ್‌ನಲ್ಲಿದೆ. ಬೆಂಜಮಿನ್‌ ಹೇಳುವುದು: “ನಾನು ಮತ್ತು ಕ್ಯಾರಲಿನ್‌ ಮುಂಚೆ ಟೈಮರ್‌-ಲೆಸ್ಟಿಯಲ್ಲಿ ವಿಶೇಷ ಪಯನೀಯರರಾಗಿ ಸೇವೆಮಾಡಿದ್ದೆವು. ಅಲ್ಲಿಯ ಸೇವೆ ‘ಸೂಪರ್‌’ ಆಗಿರುತ್ತಿತ್ತು. ಸಹೋದರರು ಕೂಡ ತುಂಬ ಸಹಾಯ ಮಾಡುತ್ತಿದ್ದರು. ಅವರನ್ನು ಬಿಟ್ಟು ಹೋಗಲು ಮನಸ್ಸಿಗೆ ತುಂಬ ನೋವಾಯಿತು. ಮತ್ತೆ ವಾಪಸ್ಸು ಬರಲೇಬೇಕಂತ ತೀರ್ಮಾನ ಮಾಡಿದ್ದೆವು. ನಮಗೆ ಮಕ್ಕಳಾದಾಗ ನಮ್ಮ ಗುರಿ ಮುಂದೂಡಿದ್ವಿ ನಿಜ, ಆದರೆ ಬದಲಾಯಿಸಲಿಲ್ಲ.” ಕ್ಯಾರಲಿನ್‌ ಕೂಡ ಹೇಳಿದ್ದು, “ಮಿಷನರಿಗಳ, ಬೆತೆಲಿನಲ್ಲಿ ಸೇವೆಮಾಡುವವರ, ವಿಶೇಷ ಪಯನೀಯರರ ಜೊತೆ ನಮ್ಮ ಮಕ್ಕಳು ಸಹವಾಸ ಮಾಡಬೇಕು, ಯೆಹೋವನ ಸೇವೆಯಲ್ಲಿ ಆನಂದಿಸಬೇಕು ಅನ್ನೋದು ನಮ್ಮ ಆಸೆಯಾಗಿತ್ತು.”

ಹೋಗಲು ತಯಾರಿ

ಯೇಸು ಹೇಳಿದ್ದು: “ನಿಮ್ಮಲ್ಲಿ ಯಾವನಾದರೂ ಒಂದು ಬುರುಜನ್ನು ಕಟ್ಟಲು ಬಯಸುವುದಾದರೆ, ಮೊದಲು ಕುಳಿತುಕೊಂಡು ಅದನ್ನು ಕಟ್ಟಿಮುಗಿಸಲು ಸಾಕಾಗುವಷ್ಟು ಹಣ ತನ್ನಲ್ಲಿದೆಯೋ ಎಂದು ಲೆಕ್ಕಮಾಡುವುದಿಲ್ಲವೆ?” (ಲೂಕ 14:28) ಬೇರೆ ಸ್ಥಳಕ್ಕೆ ಹೋಗಲು ನೆನಸುವ ಕುಟುಂಬವು ಅದೇ ರೀತಿ ಮುಂದಾಗಿಯೇ ಯೋಜನೆ ಮಾಡಬೇಕು. ಆಗ ಯಾವ ವಿಷಯಗಳನ್ನು ಮನಸ್ಸಿನಲ್ಲಿಡಬೇಕೆಂದು ಗಮನಿಸಿ.

ನಂಬಿಕೆ ಬಲಪಡಿಸಿಕೊಳ್ಳಿ: “ನಾವು ಬೇರೆಯವರ ಸೇವೆ ಮಾಡಬೇಕೇ ಹೊರತು ಅವರಿಗೆ ಭಾರವಾಗಿರಬಾರದು ಎಂದೇ ನಮ್ಮ ಬಯಕೆಯಾಗಿತ್ತು. ಹಾಗಾಗಿ ಹೊಸ ಸ್ಥಳಕ್ಕೆ ಹೋಗುವ ಮುಂಚೆ ನಮ್ಮ ನಂಬಿಕೆಯನ್ನು ಬಲಪಡಿಸಿಕೊಂಡೆವು. ಅಲ್ಲದೆ ಸೇವೆಗೆ, ಸಭೆಯ ಕೆಲಸಗಳಿಗೆ ಜಾಸ್ತಿ ಸಮಯ ಕೊಟ್ಟೆವು” ಎಂದು ಬೆಂಜಮಿನ್‌ ಹೇಳುತ್ತಾರೆ.

ಈ ಮುಂಚೆ ತಿಳಿಸಲಾದ ಜೇಕಬ್‌ ಹೇಳುತ್ತಾನೆ: “ನಾವು ನಾರ್ಫೋಕ್‌ ಐಲೆಂಡ್‌ಗೆ ಹೋಗುವ ಮುಂಚೆ ಅಗತ್ಯವಿರುವ ಸ್ಥಳಗಳಿಗೆ ಹೋಗಿ ಸೇವೆಮಾಡಿದ ಹಲವಾರು ಕುಟುಂಬಗಳ ಜೀವನಕಥೆಗಳನ್ನು ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳಲ್ಲಿ ಓದಿದೆವು. ಅವರಿಗೆ ಏನೆಲ್ಲ ಕಷ್ಟ ಬಂತು, ಯೆಹೋವನು ಅವರಿಗೆ ಹೇಗೆಲ್ಲ ಸಹಾಯ ಮಾಡಿದನು ಎಂಬ ಬಗ್ಗೆ ಮಾತಾಡಿದೆವು.” ಜೇಕಬ್‌ನ 11 ವರ್ಷದ ತಂಗಿ ಸ್ಕೈ ಹೇಳುತ್ತಾಳೆ: “ನಾನು ತುಂಬ ತುಂಬ ಪ್ರಾರ್ಥನೆ ಮಾಡಿದೆ. ಒಬ್ಬಳೇ ಮಾಡಿದೆ, ಅಪ್ಪಅಮ್ಮ ಜೊತೆನೂ ಮಾಡಿದೆ.”

ಮನಸ್ಸನ್ನು ಗಟ್ಟಿಮಾಡಿಕೊಳ್ಳಿ: ರೆನೆ ಹೇಳುತ್ತಾರೆ: “ನನ್ನ ಕುಟುಂಬ, ಆಪ್ತ ಸ್ನೇಹಿತರೆಲ್ಲ ಹತ್ತಿರದಲ್ಲೇ ಇದ್ದರು, ಆ ಊರು ಸಹ ನನಗೆ ತುಂಬ ಇಷ್ಟವಾಗಿತ್ತು, ಹಾಗಾಗಿ ಇದನ್ನೆಲ್ಲ ಬಿಟ್ಟು ಬೇರೆ ಊರಿಗೆ ಹೋಗುವುದು ಸುಲಭ ಆಗಿರಲಿಲ್ಲ. ಆದರೆ ‘ಇಷ್ಟೆಲ್ಲಾ ಕಳಕೊಳ್ತೇನಲ್ಲ’ ಅಂತ ಕೊರಗುವ ಬದಲು ಇದರಿಂದ ನಮ್ಮ ಕುಟುಂಬಕ್ಕೆ ಆಗುವ ಪ್ರಯೋಜನದ ಬಗ್ಗೆ ಯೋಚಿಸಿದೆ.”

ರೀತಿರಿವಾಜುಗಳನ್ನು ತಿಳಿದುಕೊಳ್ಳಿ: ತಾವು ಹೋಗಲಿಕ್ಕಿರುವ ಹೊಸ ಸ್ಥಳಕ್ಕೆ ಹೊಂದಿಕೊಳ್ಳಲು ಅನೇಕ ಕುಟುಂಬಗಳು ಅಲ್ಲಿನ ಬಗ್ಗೆ ಮಾಹಿತಿ ಸಂಗ್ರಹಿಸುತ್ತವೆ. “ನಾವು ನಲನ್‌ಬೊಯಿ ಬಗ್ಗೆ ಆದಷ್ಟು ಹೆಚ್ಚು ಓದಿ ತಿಳಿದುಕೊಂಡೆವು. ಅಲ್ಲಿನ ಸಹೋದರರು ದಯೆಯಿಂದ ತಮ್ಮ ಊರಿನ ವಾರ್ತಾಪತ್ರಿಕೆಗಳನ್ನು ಕಳುಹಿಸಿಕೊಟ್ಟರು. ಇದನ್ನು ಓದಿ ಆ ಊರಿನ ಜನರ ಬಗ್ಗೆ, ಅವರ ರೀತಿರಿವಾಜುಗಳ ಬಗ್ಗೆ ಸ್ವಲ್ಪ ಗೊತ್ತಾಯಿತು” ಎಂದು ಮಾರ್ಕ್‌ ಹೇಳುತ್ತಾರೆ.

“ಎಲ್ಲದಕ್ಕಿಂತ ಹೆಚ್ಚಾಗಿ ಯಾವಾಗಲೂ ಕ್ರೈಸ್ತ ಗುಣಗಳನ್ನು ತೋರಿಸಲು ಗಮನಕೊಡುವ ಮೂಲಕ ತಯಾರಿ ಮಾಡಿದೆ. ಒಳ್ಳೇ ಮನಸ್ಸು, ಪ್ರಾಮಾಣಿಕತೆ, ಸೌಮ್ಯಭಾವ, ಶ್ರಮಶೀಲತೆ ನನ್ನಲ್ಲಿದ್ದರೆ ಪ್ರಪಂಚದಲ್ಲಿ ಎಲ್ಲಿ ಹೋದರೂ ಹೊಂದಿಕೊಂಡು ಜೀವಿಸಲು ಆಗ್ತದೆ ಎಂದು ಅರ್ಥಮಾಡ್ಕೊಂಡೆ” ಎನ್ನುತ್ತಾರೆ ನಾರ್ಫೋಕ್‌ ಐಲೆಂಡ್‌ಗೆ ಹೋದ ಶೇನ್‌.

ಕಷ್ಟಗಳನ್ನು ಎದುರಿಸಿದ ವಿಧ

ನೆನಸದ ಕಷ್ಟಗಳು ಎದುರಾದಾಗ ಪರಿಸ್ಥಿತಿಗೆ ಹೊಂದಿಕೊಳ್ಳುವುದು ಮತ್ತು ಬಿಟ್ಟುಕೊಡದಿರುವುದು ಪ್ರಾಮುಖ್ಯ. ಅಗತ್ಯವಿರುವ ಸ್ಥಳಗಳಿಗೆ ಹೋಗಿ ಯಶಸ್ಸು ಪಡೆದಿರುವವರು ಈ ಬಗ್ಗೆ ಏನು ಹೇಳುತ್ತಾರೆ ಕೇಳಿ.

ರೆನೆ ಹೇಳುತ್ತಾರೆ: “ಕೆಲಸ ಏನೇ ಇರಲಿ ಅದನ್ನು ಬೇರೆಬೇರೆ ವಿಧಗಳಲ್ಲಿ ಮಾಡಲು ಕಲಿತೆ. ಉದಾಹರಣೆಗೆ, ಕೆಲವೊಮ್ಮೆ ಸಮುದ್ರದಲ್ಲಿ ಬಿರುಗಾಳಿಯೆದ್ದಾಗ ಆಹಾರ ತರುವ ಹಡಗುಗಳು ನಾರ್ಫೋಕ್‌ ಐಲೆಂಡ್‌ನ ದಡಕ್ಕೆ ಬರುವುದಿಲ್ಲ. ಆಗ ಆಹಾರ ವಸ್ತುಗಳ ಬೆಲೆ ಗಗನಕ್ಕೇರುತ್ತದೆ. ಹಾಗಾಗಿ ಏನಿದೆಯೋ ಅದನ್ನೇ ಬಳಸಿ ಅಡಿಗೆ ಮಾಡಲು ಕಲಿತಿದ್ದೇನೆ.” ಅವರ ಗಂಡ ಶೇನ್‌ ಹೇಳುತ್ತಾರೆ: “ನಮ್ಮ ಖರ್ಚು ನಮ್ಮ ವಾರದ ಬಜೆಟ್‌ ಒಳಗೆ ಇರುವಂತೆ ನೋಡ್ಕೊಳ್ತೇವೆ.”

ಅವರ ಮಗ ಜೇಕಬ್‌ಗೆ ಬೇರೆ ತರದ ಕಷ್ಟ. ಅವನು ಹೇಳುತ್ತಾನೆ: “ಹೊಸ ಸಭೆಯಲ್ಲಿ ನಮ್ಮನ್ನು ಬಿಟ್ಟರೆ ಏಳು ಮಂದಿ ಮಾತ್ರ ಇದ್ದರು, ಅದೂ ಎಲ್ಲರು ನನಗಿಂತ ದೊಡ್ಡವರೇ. ನನ್ನ ವಯಸ್ಸಿನ ಫ್ರೆಂಡ್ಸ್‌ ಯಾರೂ ಇರಲಿಲ್ಲ! ಆದರೆ ದೊಡ್ಡವರೊಟ್ಟಿಗೆ ಸೇವೆಗೆ ಹೋಗ್ತಾ ಹೋಗ್ತಾ ಅವರನ್ನೇ ನನ್ನ ಸ್ನೇಹಿತರನ್ನಾಗಿ ಮಾಡಿಕೊಂಡೆ.”

ಈಗ 21 ವರ್ಷದ ಜಿಮ್‌ ತಾನು ನಿಭಾಯಿಸಿದ ಸನ್ನಿವೇಶದ ಬಗ್ಗೆ ಹೀಗೆ ವಿವರಿಸುತ್ತಾನೆ: “ನಲನ್‌ಬೊಯಿಗೆ ಅತಿ ಹತ್ತಿರದ ಸಭೆ 725 ಕಿ.ಮೀ. ದೂರದಲ್ಲಿದೆ! ಆದ್ದರಿಂದ ನಾವು ಅಧಿವೇಶನ, ಸಮ್ಮೇಳನಗಳಿಗೆ ತಪ್ಪದೆ ಹಾಜರಾಗಿ ಪೂರ್ಣ ಪ್ರಯೋಜನ ಪಡೆಯಲು ಪ್ರಯತ್ನಿಸುತ್ತೇವೆ. ಮುಂಚಿತವಾಗಿಯೇ ಬಂದು ಸಹೋದರ ಸಹೋದರಿಯರ ಸಹವಾಸದಲ್ಲಿ ಆನಂದಿಸುತ್ತೇವೆ. ಆ ದಿನಗಳನ್ನು ನಮಗೆ ಇಡೀ ವರ್ಷದಲ್ಲೇ ಮರೆಯಲಿಕ್ಕೆ ಆಗಲ್ಲ!”

“ಇಲ್ಲಿ ಬಂದದ್ದಕ್ಕೆ ನನಗೆ ನಿಜವಾಗಲೂ ಖುಷಿಯಾಗುತ್ತಿದೆ”

“ಯೆಹೋವನ ಆಶೀರ್ವಾದವು ಭಾಗ್ಯದಾಯಕವು” ಎಂದು ಬೈಬಲ್‌ ಹೇಳುತ್ತದೆ. (ಜ್ಞಾನೋ. 10:22) ಭೂಮಿಯಾದ್ಯಂತ ಅಗತ್ಯವಿರುವ ಸ್ಥಳಗಳಿಗೆ ಹೋಗಿರುವ ಎಷ್ಟೋ ಮಂದಿ ಈ ದೇವಪ್ರೇರಿತ ವಚನ ತಮ್ಮ ಜೀವನದಲ್ಲಿ ನಿಜ ಆಗಿರುವುದನ್ನು ನೋಡಿದ್ದಾರೆ.

ಮಾರ್ಕ್‌ ಹೇಳುತ್ತಾರೆ: “ಯೆಹೋವನ ಸೇವೆಗೆ ನಾವು ಮೊದಲ ಸ್ಥಾನ ಕೊಟ್ಟರೆ ಆತನು ಖಂಡಿತವಾಗಿಯೂ ನಮ್ಮನ್ನು ನೋಡಿಕೊಳ್ಳುತ್ತಾನೆ ಎಂಬ ಪೂರ್ಣ ಭರವಸೆಯನ್ನು ನಮ್ಮ ಮಕ್ಕಳಲ್ಲಿ ದೊಡ್ಡವರಿಬ್ಬರು ಬೆಳೆಸಿಕೊಂಡಿದ್ದಾರೆ. ಇದನ್ನು ಎಷ್ಟು ಹಣ ಕೊಟ್ಟರೂ ಪಡೆಯಲು ಆಗಲ್ಲ. ಇದೇ ನಮಗೆ ಸಿಕ್ಕಿರೋ ಅತಿ ದೊಡ್ಡ ಆಶೀರ್ವಾದ. ಇದಕ್ಕಿಂತ ಬೇರೇನು ಬೇಕು?”

ಶೇನ್‌ ಹೇಳುತ್ತಾರೆ: “ನನ್ನ ಹೆಂಡತಿ ಮಕ್ಕಳೊಟ್ಟಿಗೆ ಮೊದಲಿಗಿಂತ ಹೆಚ್ಚು ಹತ್ತಿರವಾಗಿದ್ದೇನೆ. ಯೆಹೋವನು ಅವರಿಗೆ ಹೇಗೆ ಸಹಾಯಮಾಡಿದನೆಂದು ಅವರ ಬಾಯಿಂದಲೇ ಕೇಳುವಾಗ ನನಗೆ ನಿಜವಾಗಲೂ ತೃಪ್ತಿ ಆಗುತ್ತೆ.” ಅವರ ಮಗ ಜೇಕಬ್‌ ಒಪ್ಪಿಕೊಳ್ಳುತ್ತಾನೆ: “ನಾನಿಲ್ಲಿ ತುಂಬ ಆನಂದಿಸುತ್ತಿದ್ದೇನೆ. ಇಲ್ಲಿ ಬಂದದ್ದಕ್ಕೆ ನನಗೆ ನಿಜವಾಗಲೂ ಖುಷಿಯಾಗುತ್ತಿದೆ.”

^ ಪ್ಯಾರ. 3 ಡಿಸೆಂಬರ್‌ 15, 2004 ಕಾವಲಿನಬುರುಜು ಪುಟ 8-11 ರ “‘ಸ್ನೇಹಪರ ದ್ವೀಪ’ಗಳಲ್ಲಿ ದೇವರ ಸ್ನೇಹಿತರು” ಲೇಖನ ನೋಡಿ.

^ ಪ್ಯಾರ. 3 2012ರಲ್ಲಿ ಆಸ್ಟ್ರೇಲಿಯ ಮತ್ತು ನ್ಯೂಜಿಲೆಂಡ್‌ ಬ್ರಾಂಚ್‌ಗಳನ್ನು ಒಂದುಗೂಡಿಸಿ, ಆಸ್ಟ್ರಲೇಶಿಯ ಎಂಬ ಬ್ರಾಂಚ್‌ ಅನ್ನು ರಚಿಸಲಾಯಿತು.