ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ತಮ್ಮನ್ನು ಮನಃಪೂರ್ವಕವಾಗಿ ನೀಡಿಕೊಂಡರು—ರಷ್ಯದಲ್ಲಿ

ತಮ್ಮನ್ನು ಮನಃಪೂರ್ವಕವಾಗಿ ನೀಡಿಕೊಂಡರು—ರಷ್ಯದಲ್ಲಿ

ಇಸವಿ 1991ರಲ್ಲಿ ರಷ್ಯದಲ್ಲಿದ್ದ ಯೆಹೋವನ ಸಾಕ್ಷಿಗಳ ಆನಂದಕ್ಕೆ ಪಾರವೇ ಇರಲಿಲ್ಲ. ಇವರ ಚಟುವಟಿಕೆಗಳ ಮೇಲೆ ತುಂಬ ವರ್ಷಗಳಿಂದ ಇದ್ದ ನಿಷೇಧಕ್ಕೆ ಆ ವರ್ಷದಲ್ಲಿ ತೆರೆಬಿತ್ತು. ಯೆಹೋವನ ಸಾಕ್ಷಿಗಳಾಗಿ ಕಾನೂನಿನ ಅಧಿಕೃತ ಮನ್ನಣೆಯೂ ಸಿಕ್ಕಿತು. ಇಂದು ಅಲ್ಲಿರುವ ಸಾಕ್ಷಿಗಳ ಸಂಖ್ಯೆ ಸುಮಾರು 1,70,000ಕ್ಕೆ ಏರಿದೆ. ಹೀಗೆ 10 ಪಟ್ಟು ಹೆಚ್ಚಳವಾಗುವುದೆಂದು 1991ರಲ್ಲಿ ಯಾರೂ ಕನಸಲ್ಲೂ ನೆನಸಿರಲಿಲ್ಲ. ಇಂದು ಅಲ್ಲಿ ಶ್ರಮಪಟ್ಟು ಕೆಲಸ ಮಾಡುವ ರಾಜ್ಯ ಪ್ರಚಾರಕರಲ್ಲಿ ಬೇರೆ ದೇಶಗಳಿಂದ ರಷ್ಯಕ್ಕೆ ಬಂದ ಸಾಕ್ಷಿಗಳೂ ಇದ್ದಾರೆ. ಇವರಿಲ್ಲಿಗೆ ಬಂದದ್ದು ಆಧ್ಯಾತ್ಮಿಕ ಕೊಯ್ಲಿನಲ್ಲಿ ಸಹಾಯ ಮಾಡಲಿಕ್ಕಾಗಿ. (ಮತ್ತಾ. 9:37, 38) ಇವರಲ್ಲಿ ಕೆಲವರ ಬಗ್ಗೆ ತಿಳಿಯೋಣ.

ಸಿದ್ಧಮನಸ್ಸಿನ ಸಹೋದರರು ಸಭೆಗಳನ್ನು ಬಲಗೊಳಿಸಲು ನೆರವಾಗುತ್ತಾರೆ

ರಷ್ಯದಲ್ಲಿ ನಿಷೇಧವನ್ನು ರದ್ದುಗೊಳಿಸಿದ ಅದೇ ವರ್ಷ, ಮ್ಯಾತ್ಯು ಎಂಬ ಸಹೋದರನಿಗೆ 28 ವಯಸ್ಸಾಗಿತ್ತು. ಇವರು ಗ್ರೇಟ್‌ ಬ್ರಿಟನ್‌ನವರು. ಆ ವರ್ಷ ಅಧಿವೇಶನದ ಒಂದು ಭಾಷಣದಲ್ಲಿ ಪೂರ್ವ ಯುರೋಪ್‍ನ ಸಭೆಗಳಲ್ಲಿ ಹೆಚ್ಚಿನ ಸಹಾಯದ ಅಗತ್ಯವಿದೆ ಎಂದು ಹೇಳಲಾಗಿತ್ತು. ಉದಾಹರಣೆಗೆ ರಷ್ಯದ ಸೇಂಟ್‌ ಪೀಟರ್ಸ್‌ಬರ್ಗ್‌ನಲ್ಲಿದ್ದ ಒಂದು ಸಭೆಯ ಬಗ್ಗೆ ಭಾಷಣಕಾರರು ಹೇಳಿದರು. ಅಲ್ಲಿ ಹಿರಿಯರೇ ಇರಲಿಲ್ಲ. ಇದ್ದದ್ದು ಒಬ್ಬ ಶುಶ್ರೂಷಾ ಸೇವಕ ಮಾತ್ರ. ಆದರೂ ಅಲ್ಲಿನ ಪ್ರಚಾರಕರು ನೂರಾರು ಬೈಬಲ್‌ ಅಧ್ಯಯನಗಳನ್ನು ನಡೆಸುತ್ತಿದ್ದರು. ಮ್ಯಾತ್ಯು ಹೀಗನ್ನುತ್ತಾರೆ: “ಭಾಷಣದ ನಂತರ ನನ್ನ ತಲೆಯಲ್ಲಿ ಬರೀ ರಷ್ಯದ ಬಗ್ಗೆಯೇ ಯೋಚನೆ. ಅಲ್ಲಿಗೆ ಹೋಗಲು ನನಗಿದ್ದ ಆಸೆಯ ಬಗ್ಗೆ ಯೆಹೋವನ ಹತ್ತಿರ ನಿರ್ದಿಷ್ಟವಾಗಿ ಪ್ರಾರ್ಥಿಸಿದೆ.” ಮ್ಯಾತ್ಯು ಸ್ವಲ್ಪ ಹಣವನ್ನು ಕೂಡಿಸಿದರು. ತಮ್ಮಲ್ಲಿದ್ದ ಅನೇಕ ವಸ್ತುಗಳನ್ನು ಮಾರಿದರು. ನಂತರ 1992ರಲ್ಲಿ ರಷ್ಯಕ್ಕೆ ಸ್ಥಳಾಂತರಿಸಿದರು. ಫಲಿತಾಂಶ?

ಮ್ಯಾತ್ಯು

“ಅಲ್ಲಿನ ಭಾಷೆಯೇ ಒಂದು ದೊಡ್ಡ ಸವಾಲಾಗಿತ್ತು. ಹಾಗಾಗಿ ಆಧ್ಯಾತ್ಮಿಕ ವಿಷಯಗಳ ಬಗ್ಗೆ ಚೆನ್ನಾಗಿ ಚರ್ಚೆ ಮಾಡಲು ಕಷ್ಟವಾಗುತ್ತಿತ್ತು” ಎನ್ನುತ್ತಾರೆ ಮ್ಯಾತ್ಯು. ಇನ್ನೊಂದು ಸವಾಲು, ಇವರಿಗೆ ತಂಗಲು ಜಾಗವಿರಲಿಲ್ಲ. ಮ್ಯಾತ್ಯು ಕೂಡಿಸಿ ಹೇಳಿದ್ದು: “ತುಂಬ ದಿನಗಳ ವರೆಗೆ ನಾನು ಒಂದು ಮನೆಯಲ್ಲಿ ನೆಲೆಸಿದ್ದೇ ಇಲ್ಲ. ಅದೆಷ್ಟು ಸಲ ಒಂದು ಮನೆಯಿಂದ ಇನ್ನೊಂದು ಮನೆಗೆ ಸ್ಥಳಾಂತರಿಸಿದ್ದೇನೊ ಗೊತ್ತಿಲ್ಲ.” ಆರಂಭದಲ್ಲಿ ಇಂಥ ಸವಾಲುಗಳು ಬಂದರೂ ಮ್ಯಾತ್ಯು ಹೀಗನ್ನುತ್ತಾರೆ: “ನಾನು ರಷ್ಯಕ್ಕೆ ಸ್ಥಳಾಂತರಿಸಲು ಮಾಡಿದ ತೀರ್ಮಾನ ಉತ್ತಮವಾದದ್ದು.” ಮುಂದಕ್ಕೆ ಅವರು ವಿವರಿಸಿದ್ದು: “ಇಲ್ಲಿಗೆ ಬಂದು ಯೆಹೋವನ ಸೇವೆ ಮಾಡುತ್ತಿರುವುದರಿಂದ ಆತನ ಮೇಲೆ ಇನ್ನಷ್ಟು ಅವಲಂಬಿಸಲು ಕಲಿತಿದ್ದೇನೆ, ಆತನು ಅನೇಕ ರೀತಿಗಳಲ್ಲಿ ನನಗೆ ದಾರಿ ತೋರಿಸಿದ್ದನ್ನೂ ಅನುಭವಿಸಿದ್ದೇನೆ.” ನಂತರ ಮ್ಯಾತ್ಯು ಒಬ್ಬ ಹಿರಿಯರಾಗಿ ಮತ್ತು ವಿಶೇಷ ಪಯನೀಯರರಾಗಿ ನೇಮಕಗೊಂಡರು. ಈಗ ಇವರು ಸೇಂಟ್‌ ಪೀಟರ್ಸ್‌ಬರ್ಗ್‌ ಬಳಿ ಇರುವ ಬ್ರಾಂಚ್‌ ಆಫೀಸಿನಲ್ಲಿ ಕೆಲಸ ಮಾಡುತ್ತಿದ್ದಾರೆ.

1999ರಲ್ಲಿ ಜಪಾನ್‌ನಲ್ಲಿ ನಡೆದ ಶುಶ್ರೂಷಾ ತರಬೇತಿ ಶಾಲೆಯಲ್ಲಿ ಹಿರೂ ಎಂಬವರು ಪದವಿ ಪಡೆದರು. ಆಗ ಅವರಿಗೆ 25 ವರ್ಷ. ತರಬೇತಿಯ ಬೋಧಕರಲ್ಲಿ ಒಬ್ಬರು ಹಿರೂವಿಗೆ ಬೇರೊಂದು ದೇಶದಲ್ಲಿ ಸೇವೆ ಮಾಡಲು ಪ್ರೋತ್ಸಾಹಿಸಿದರು. ರಷ್ಯದಲ್ಲಿ ಹೆಚ್ಚಿನ ಸಹಾಯದ ಅಗತ್ಯವಿದೆ ಎಂದು ಹಿರೂ ಕೇಳಿದ್ದರಿಂದ ರಷ್ಯನ್‌ ಭಾಷೆ ಕಲಿಯಲು ಆರಂಭಿಸಿದರು. ಇನ್ನೊಂದು ಪ್ರಾಯೋಗಿಕ ಹೆಜ್ಜೆಯನ್ನೂ ಹಿರೂ ತೆಗೆದುಕೊಂಡರು. ಆರು ತಿಂಗಳಿಗಾಗಿ ರಷ್ಯಕ್ಕೆ ಹೋದರು. ಅವರು ಮುಂದುವರಿಸಿದ್ದು: “ಅಲ್ಲಿ ವಿಪರೀತ ಚಳಿ. ಅದಕ್ಕೆ ನಾನು ನವೆಂಬರ್‌ ತಿಂಗಳಲ್ಲಿ ಅಲ್ಲಿಗೆ ಹೋಗಿ ಆ ಚಳಿಯನ್ನು ನನ್ನಿಂದ ತಡಿಯಲಿಕ್ಕೆ ಆಗಬಹುದಾ ಎಂದು ನೋಡಿದೆ.” ಚಳಿ ತಡೆಯಬಹುದು ಎಂದು ಅನಿಸಿದ್ದರಿಂದ ಹಿರೂ ವಾಪಸ್‌ ಜಪಾನ್‌ಗೆ ಬಂದು ತುಂಬ ಸರಳ ಜೀವನ ನಡೆಸಿದರು. ಪುನಃ ರಷ್ಯಕ್ಕೆ ಹೋಗಿ ಅಲ್ಲೇ ನೆಲೆಸಲು ಹಣ ಕೂಡಿಸಲು ಶುರುಮಾಡಿದರು.

ಹಿರೂ ಮತ್ತು ಸ್ವೆಟ್ಲಾನ

ಹಿರೂ ರಷ್ಯಕ್ಕೆ ಸ್ಥಳಾಂತರಿಸಿ ಈಗ 12 ವರ್ಷಗಳಾಗಿವೆ. ಅವರು ಅನೇಕ ಸಭೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಕೆಲವೊಮ್ಮೆ 100 ಪ್ರಚಾರಕರಿದ್ದ ಸಭೆಯಲ್ಲಿ ಹಿರೂ ಒಬ್ಬರೇ ಹಿರಿಯರಾಗಿದ್ದದ್ದೂ ಇದೆ. ಒಂದು ಸಭೆಯಲ್ಲಿ ಅವರು ಸೇವಾ ಕೂಟದ ಹೆಚ್ಚಿನ ಭಾಗಗಳನ್ನು ನಿರ್ವಹಿಸುತ್ತಿದ್ದರು, ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ, ಕಾವಲಿನಬುರುಜು ಅಧ್ಯಯನ ಮತ್ತು ಐದು ಬೇರೆಬೇರೆ ಸಭಾ ಪುಸ್ತಕ ಅಧ್ಯಯನಗಳನ್ನು ನಡೆಸುತ್ತಿದ್ದರು. ಇವೆಲ್ಲದರ ಜೊತೆಗೆ ಹಿರೂ ಕುರಿಪಾಲನಾ ಭೇಟಿಗಳನ್ನೂ ಮಾಡುತ್ತಿದ್ದರು. ಆ ವರ್ಷಗಳ ಬಗ್ಗೆ ಯೋಚಿಸುತ್ತಾ ಹಿರೂ ಹೀಗನ್ನುತ್ತಾರೆ: “ಆಧ್ಯಾತ್ಮಿಕವಾಗಿ ಬಲಗೊಳ್ಳಲು ಸಹೋದರ ಸಹೋದರಿಯರಿಗೆ ನೆರವಾಗುವುದು ತುಂಬ ಆನಂದ ತರುತ್ತಿತ್ತು.” ಅಗತ್ಯ ಹೆಚ್ಚಿರುವ ಸ್ಥಳದಲ್ಲಿ ಸೇವೆ ಸಲ್ಲಿಸಿದ್ದು ಇವರನ್ನು ಹೇಗೆ ಪ್ರಭಾವಿಸಿದೆ? ಹಿರೂ ಹೇಳುವುದು: “ರಷ್ಯಕ್ಕೆ ಹೋಗುವ ಮುಂಚೆ ಹಿರಿಯ ಮತ್ತು ಪಯನೀಯರನಾಗಿ ಸೇವೆ ಸಲ್ಲಿಸುತ್ತಿದ್ದೆ. ಆದರೆ ಇಲ್ಲಿಗೆ ಬಂದ ಮೇಲೆ ಯೆಹೋವನೊಟ್ಟಿಗೆ ಸಂಪೂರ್ಣವಾಗಿ ಒಂದು ಹೊಸ ಸಂಬಂಧ ಬೆಳೆಸಿಕೊಂಡ ಹಾಗೆ ನನಗನಿಸುತ್ತದೆ. ಜೀವನದ ಎಲ್ಲಾ ಕ್ಷೇತ್ರಗಳಲ್ಲಿ ಯೆಹೋವನ ಮೇಲೆ ಹೆಚ್ಚು ಅವಲಂಬಿಸಲು ಕಲಿತಿದ್ದೇನೆ.” 2005ರಲ್ಲಿ ಹಿರೂ ಸ್ವೆಟ್ಲಾನ ಎಂಬವರನ್ನು ಮದುವೆಯಾದರು. ಪಯನೀಯರರಾಗಿ ಇಬ್ಬರೂ ತಮ್ಮ ಸೇವೆಯನ್ನು ಮುಂದುವರಿಸುತ್ತಿದ್ದಾರೆ.

ಮೈಕಲ್‌ ಮತ್ತು ಓಲ್ಗಾ ಜೊತೆ ಮರೀನಾ ಮತ್ತು ಮ್ಯಾತ್ಯು

ಕೆನಡದವರಾದ ಮ್ಯಾತ್ಯುಗೆ 34, ಇವರ ತಮ್ಮ ಮೈಕಲ್‌ಗೆ 28 ವರ್ಷ. ಒಮ್ಮೆ ಇಬ್ಬರೂ ರಷ್ಯಕ್ಕೆ ಭೇಟಿ ನೀಡಿದ್ದರು. ಅಲ್ಲಿ ಅನೇಕ ಮಂದಿ ಆಸಕ್ತಿಯುಳ್ಳವರು ಕೂಟಗಳಿಗೆ ಹಾಜರಾಗುತ್ತಿದ್ದರೂ ಕೂಟಗಳನ್ನು ನಡೆಸಲು ಕೆಲವೇ ಮಂದಿ ಸಹೋದರರು ಇರುವುದನ್ನು ನೋಡಿ ತುಂಬ ಆಶ್ಚರ್ಯಪಟ್ಟರು. ಮ್ಯಾತ್ಯು ಹೀಗನ್ನುತ್ತಾರೆ: “ನಾನು ಭೇಟಿ ನೀಡಿದ ಸಭೆಯಲ್ಲಿ 200 ಜನ ಇದ್ದರು. ಆದರೆ ಎಲ್ಲಾ ಕೂಟಗಳನ್ನು ವಯಸ್ಸಾದ ಒಬ್ಬ ಹಿರಿಯ ಮತ್ತು ಒಬ್ಬ ಯುವ ಶುಶ್ರೂಷಾ ಸೇವಕ ನಿರ್ವಹಿಸುತ್ತಿದ್ದರು. ಈ ಪರಿಸ್ಥಿತಿ ನೋಡಿ ನನಗೆ ಆ ಸಹೋದರರಿಗೆ ಸಹಾಯ ಮಾಡಲು ಮನಸ್ಸಾಯಿತು. ಅಲ್ಲಿಗೆ ಸ್ಥಳಾಂತರಿಸಲು ತೀರ್ಮಾನಿಸಿದೆ.” ಮ್ಯಾತ್ಯು 2002ರಲ್ಲಿ ರಷ್ಯಕ್ಕೆ ಬಂದರು.

ನಾಲ್ಕು ವರ್ಷಗಳ ನಂತರ ಮೈಕಲ್‌ ಸಹ ರಷ್ಯಕ್ಕೆ ಸ್ಥಳಾಂತರಿಸಿದರು. ಸಹೋದರರ ಅಗತ್ಯ ಇನ್ನೂ ಇದೆ ಎಂದು ಗ್ರಹಿಸಲು ಇವರಿಗೆ ಹೆಚ್ಚು ಸಮಯ ಹಿಡಿಯಲಿಲ್ಲ. ಶುಶ್ರೂಷಾ ಸೇವಕರಾಗಿದ್ದ ಇವರನ್ನು ಲೆಕ್ಕಾಚಾರ, ಸಾಹಿತ್ಯ ಮತ್ತು ಟೆರಿಟೊರಿಯನ್ನು ನೋಡಿಕೊಳ್ಳಲು ನೇಮಿಸಲಾಯಿತು. ಸಾಮಾನ್ಯವಾಗಿ ಸಭಾ ಕಾರ್ಯದರ್ಶಿ ಮಾಡುತ್ತಿದ್ದ ಕೆಲಸಗಳನ್ನು ಮಾಡಲು ಮೈಕಲ್‌ಗೆ ಹೇಳಲಾಯಿತು. ಅಂದರೆ ಸಾರ್ವಜನಿಕ ಉಪನ್ಯಾಸ ನೀಡಲು, ಸಮ್ಮೇಳನಗಳನ್ನು ಯೋಜಿಸಲು ಮತ್ತು ರಾಜ್ಯ ಸಭಾಗೃಹಗಳ ನಿರ್ಮಾಣ ಕಾರ್ಯದಲ್ಲಿ ಸಹಾಯ ಮಾಡಬೇಕಿತ್ತು. ಇಂದಿಗೂ ಸಭೆಗಳಲ್ಲಿ ಸಹಾಯದ ಅಗತ್ಯವೇನು ಕಡಿಮೆಯಾಗಿಲ್ಲ. ತುಂಬ ನೇಮಕಗಳನ್ನು ನೋಡಿಕೊಳ್ಳುವುದು ಶ್ರಮದ ಕೆಲಸವಾದರೂ ಈಗ ಹಿರಿಯರಾಗಿರುವ ಮೈಕಲ್‌ ಹೀಗನ್ನುತ್ತಾರೆ: “ಸಹೋದರರಿಗೆ ಸಹಾಯ ಮಾಡುವಾಗ ತುಂಬ ಸಂತೃಪ್ತಿ ಸಿಗುತ್ತದೆ. ನನ್ನ ಬದುಕನ್ನು ಹೀಗೆ ಸಾಗಿಸುವುದೇ ಅತ್ಯುತ್ತಮ.”

ಮ್ಯಾತ್ಯು ಮರೀನಾ ಎಂಬವರನ್ನು ಮತ್ತು ಮೈಕಲ್‌ ಓಲ್ಗಾ ಎಂಬವರನ್ನು ಮದುವೆಯಾದರು. ಎರಡೂ ದಂಪತಿಗಳು ಸಿದ್ಧಮನಸ್ಸಿನ ಇತರ ಕೆಲಸಗಾರರ ಜೊತೆ ಸೇರಿ ಬೆಳೆಯುತ್ತಿರುವ ಸಭೆಗಳಿಗೆ ಸಹಾಯ ಮಾಡುತ್ತಾ ಇದ್ದಾರೆ.

ಹುರುಪಿನ ಸಹೋದರಿಯರು ಕೊಯ್ಲಿನ ಕೆಲಸದಲ್ಲಿ ನೆರವಾಗುತ್ತಾರೆ

ಟಟ್ಯಾನ

1994ರಲ್ಲಿ ಟಟ್ಯಾನಳಿಗೆ 16 ವರ್ಷ. ಆಗ ಯುಕ್ರೇನ್‌ನಲ್ಲಿನ ಅವಳ ಸಭೆಯಲ್ಲಿ ಚೆಕ್‌ ಗಣರಾಜ್ಯ, ಪೋಲೆಂಡ್, ಸ್ಲೊವಾಕಿಯದಿಂದ 6 ಮಂದಿ ವಿಶೇಷ ಪಯನೀಯರರು ಸೇವೆ ಮಾಡಲು ಬಂದರು. ಅವರನ್ನು ಪ್ರೀತಿಯಿಂದ ನೆನಪಿಸಿಕೊಳ್ಳುತ್ತಾ ಟಟ್ಯಾನ ಹೀಗನ್ನುತ್ತಾಳೆ: “ಆ ಪಯನೀಯರರಿಗೆ ತುಂಬ ಹುರುಪಿತ್ತು. ಯಾರು ಬೇಕಾದರೂ ಅವರ ಬಳಿ ಹೋಗಿ ಮಾತಾಡಬಹುದಿತ್ತು. ತುಂಬ ದಯೆಯಿಂದ ನಡೆದುಕೊಳ್ಳುತ್ತಿದ್ದರು. ಅವರಿಗೆ ಬೈಬಲಿನ ಒಳ್ಳೇ ಪರಿಚಯವಿತ್ತು.” ಯೆಹೋವನು ಅವರ ಸ್ವತ್ಯಾಗದ ಮನೋಭಾವವನ್ನು ಆಶೀರ್ವದಿಸಿದ್ದನ್ನು ಟಟ್ಯಾನ ನೋಡಿದ್ದಳು ಮತ್ತು ‘ನಾನೂ ಅವರಂತೆ ಆಗಬೇಕು’ ಎಂಬ ಆಸೆ ಅವಳಲ್ಲಿ ಹುಟ್ಟಿತು.

ಆ ಪಯನೀಯರರ ಮಾದರಿಯಿಂದ ಪ್ರೋತ್ಸಾಹ ಪಡೆದ ಟಟ್ಯಾನ ಶಾಲೆಗೆ ರಜೆಯಿದ್ದಾಗ ಯುಕ್ರೇನ್‌ ಮತ್ತು ಬೆಲರೂಸ್‍ನಲ್ಲಿ ಯಾವ ಸಾಕ್ಷಿಗಳೂ ಇಲ್ಲಿವರೆಗೆ ಹೋಗಿರದ ದೂರದ ಕ್ಷೇತ್ರಗಳಿಗೆ ಬೇರೆಯವರ ಜೊತೆ ಸುವಾರ್ತೆ ಸಾರಲು ಹೋಗುತ್ತಿದ್ದಳು. ಹೀಗೆ ಪ್ರಯಾಣ ಮಾಡಿ ಸೇವೆಗೆ ಹೋಗುತ್ತಿದ್ದದ್ದು ಟಟ್ಯಾನಳಿಗೆ ಎಷ್ಟು ಹಿಡಿಸಿತೆಂದರೆ ರಷ್ಯಕ್ಕೆ ಸ್ಥಳಾಂತರಿಸಿ ತನ್ನ ಸೇವೆಯನ್ನು ಹೆಚ್ಚಿಸಲು ಯೋಜನೆಗಳನ್ನು ಮಾಡಿದಳು. ಮೊದಲು ಸ್ವಲ್ಪ ದಿನಗಳಿಗೆ ಒಬ್ಬ ಸಹೋದರಿಯ ಜೊತೆ ಇರಲು ಅಲ್ಲಿಗೆ ಹೋದಳು. ಈ ಸಹೋದರಿ ಬೇರೊಂದು ದೇಶದಿಂದ ರಷ್ಯಕ್ಕೆ ಬಂದಿದ್ದರು. ಜೊತೆಗೆ ತನ್ನ ಪಯನೀಯರ್‌ ಸೇವೆಗೆ ನೆರವಾಗುವ ಕೆಲಸಕ್ಕಾಗಿ ಟಟ್ಯಾನ ಹುಡುಕಿದಳು. ನಂತರ ಇಸವಿ 2000ದಲ್ಲಿ ಟಟ್ಯಾನ ರಷ್ಯಕ್ಕೆ ಸ್ಥಳಾಂತರಿಸಿದಳು. ಈ ಬದಲಾವಣೆ ಏನಾದರೂ ಕಷ್ಟ ತಂದಿತಾ?

ಟಟ್ಯಾನ ಹೀಗನ್ನುತ್ತಾಳೆ: “ಸ್ವಂತ ಮನೆಯನ್ನು ತೆಗೆದುಕೊಳ್ಳುವಷ್ಟು ಅನುಕೂಲ ನನಗಿರಲಿಲ್ಲ. ಹಾಗಾಗಿ ಬೇರೆಯವರ ಮನೆಯಲ್ಲಿ ಒಂದು ಕೋಣೆಯನ್ನು ಬಾಡಿಗೆಗೆ ಪಡೆದೆ. ಅಲ್ಲಿರುವುದು ಸುಲಭವಾಗಿರಲಿಲ್ಲ. ವಾಪಸ್‌ ಹೋಗಿ ಬಿಡೋಣ ಎಂದು ಎಷ್ಟೋ ಸಲ ಅನಿಸಿದ್ದೂ ಇದೆ. ಆದರೆ ನನ್ನ ಸೇವೆಯನ್ನು ಮುಂದುವರಿಸಿದರೆ ನನಗೇ ಪ್ರಯೋಜನವೆಂದು ಗ್ರಹಿಸಲು ಯೆಹೋವನು ನನಗೆ ಯಾವಾಗಲೂ ಸಹಾಯ ಮಾಡಿದನು.” ಇಂದು ಟಟ್ಯಾನ ರಷ್ಯದಲ್ಲಿ ಮಿಷನರಿಯಾಗಿ ಸೇವೆ ಸಲ್ಲಿಸುತ್ತಿದ್ದಾಳೆ. “ಮನೆಯಿಂದ ದೂರವಿದ್ದ ಈ ಎಲ್ಲಾ ವರ್ಷಗಳಲ್ಲಿ ನನಗೆ ಬೆಲೆಕಟ್ಟಲಾಗದ ಅನುಭವಗಳು ಸಿಕ್ಕಿವೆ, ಅನೇಕ ಸ್ನೇಹಿತರನ್ನು ಪಡೆದಿದ್ದೇನೆ. ಎಲ್ಲಕ್ಕಿಂತ ಹೆಚ್ಚಾಗಿ ಈ ಎಲ್ಲಾ ವರ್ಷಗಳಲ್ಲಿ ನನ್ನ ನಂಬಿಕೆ ಬಲಗೊಂಡಿದೆ” ಎನ್ನುತ್ತಾಳೆ ಟಟ್ಯಾನ.

ಮಸಾಕೊ

ಜಪಾನ್‌ನಲ್ಲಿರುವ ಮಸಾಕೊಳಿಗೆ ಈಗ 50 ವರ್ಷ ದಾಟಿದೆ. ಮಿಷನರಿಯಾಗಿ ಸೇವೆ ಮಾಡಬೇಕೆಂದು ಇವರಿಗೆ ತುಂಬ ಆಸೆ ಇತ್ತು. ಆದರೆ ಆರೋಗ್ಯ ಸಮಸ್ಯೆಗಳಿಂದಾಗಿ ಅದು ನೆರವೇರಲಿಲ್ಲ. ಆರೋಗ್ಯ ಸ್ವಲ್ಪ ಸುಧಾರಿಸಿಕೊಂಡ ಮೇಲೆ ರಷ್ಯಕ್ಕೆ ಸ್ಥಳಾಂತರಿಸಿ ಅಲ್ಲಿ ಕೊಯ್ಲಿನ ಕೆಲಸದಲ್ಲಿ ನೆರವಾಗಲು ತೀರ್ಮಾನಿಸಿದರು. ತಂಗಲು ಸರಿಯಾದ ಸ್ಥಳ, ಒಂದು ಕಾಯಂ ಕೆಲಸ ಸಿಗುವುದು ತುಂಬ ಕಷ್ಟವಾಗಿತ್ತು. ಆದ್ದರಿಂದ ಇವರು ಶುಚಿ ಕೆಲಸ ಮಾಡುವ ಮೂಲಕ ಮತ್ತು ಜ್ಯಾಪನೀಸ್‌ ಭಾಷೆಯನ್ನು ಕಲಿಸುವ ಮೂಲಕ ಹಣ ಸಂಪಾದಿಸಿ ಪಯನೀಯರ್‌ ಸೇವೆ ಮಾಡುತ್ತಿದ್ದರು. ಅವರ ಸೇವೆಯನ್ನು ಮುಂದುವರಿಸಲು ಯಾವುದು ಸಹಾಯ ಮಾಡಿದೆ?

ರಷ್ಯದಲ್ಲಿ 14 ವರ್ಷಗಳ ಸೇವೆಯ ಬಗ್ಗೆ ಮೆಲುಕುಹಾಕುತ್ತಾ ಮಸಾಕೊ ಹೀಗನ್ನುತ್ತಾರೆ: “ಯಾವುದೇ ಕಷ್ಟ ಬಂದರೂ ಸೇವೆಯಲ್ಲಿ ಸಿಗುವ ಸಂತೋಷ ಆ ನೋವನ್ನು ಮರೆಸಿ ಬಿಡುತ್ತದೆ. ರಾಜ್ಯ ಪ್ರಚಾರಕರ ಅಗತ್ಯ ಹೆಚ್ಚಿರುವ ಸ್ಥಳಗಳಲ್ಲಿ ಸುವಾರ್ತೆ ಸಾರುವುದು ನಿಜವಾಗಲೂ ಬದುಕಲ್ಲಿ ಜೀವ ಮತ್ತು ರೋಮಾಂಚನ ತುಂಬಿಸುತ್ತದೆ.” ಮಸಾಕೊ ಮುಂದುವರಿಸುವುದು: “ಯೆಹೋವನು ನನಗೆ ಈ ಎಲ್ಲಾ ವರ್ಷಗಳಲ್ಲಿ ಆಹಾರ, ಬಟ್ಟೆ, ವಸತಿಯನ್ನು ಎಷ್ಟು ಚೆನ್ನಾಗಿ ಒದಗಿಸುತ್ತಾ ಬಂದಿದ್ದಾನೆಂದರೆ ನಾನದನ್ನು ಆಧುನಿಕ ಕಾಲದ ಅದ್ಭುತ ಎಂದೇ ಕರೆಯುತ್ತೇನೆ.” ರಷ್ಯದಲ್ಲಿ ಅಗತ್ಯ ಹೆಚ್ಚಿರುವಲ್ಲಿ ಸೇವೆ ಮಾಡಿರುವುದಲ್ಲದೆ ಮಸಾಕೊ ಕಿರ್ಗಿಸ್ತಾನ್‍ನಲ್ಲಿ ಕೂಡ ಕೊಯ್ಲಿನ ಕೆಲಸದಲ್ಲಿ ನೆರವಾಗಿದ್ದಾರೆ. ಜೊತೆಗೆ ಇಂಗ್ಲಿಷ್‌, ಚೈನೀಸ್‌ ಮತ್ತು ವೀಗೂರ್‌ ಭಾಷಾ ಗುಂಪುಗಳಿಗೂ ಸಹಾಯ ನೀಡಿದ್ದಾರೆ. ಈಗ ಅವರು ಸೇಂಟ್‌ ಪೀಟರ್ಸ್‌ಬರ್ಗ್‌ನಲ್ಲಿ ಪಯನೀಯರರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಕುಟುಂಬಗಳು ಸಹಾಯ ನೀಡಿ ಆಶೀರ್ವಾದ ಪಡೆಯುತ್ತವೆ

ಇಂಗ ಮತ್ತು ಮಿಖೇಲ್‌

ಹಣಕಾಸಿನ ತೊಂದರೆಯಿಂದಾಗಿ ಕುಟುಂಬಗಳು ಹಣ ಮಾಡಲು ಹೆಚ್ಚಾಗಿ ಬೇರೆ ದೇಶಗಳಿಗೆ ಹೋಗುತ್ತವೆ. ಆದರೆ ಪುರಾತನ ಕಾಲದ ಅಬ್ರಹಾಮ ಸಾರಳಂತೆ ಕೆಲವು ಕುಟುಂಬಗಳು ಆಧ್ಯಾತ್ಮಿಕ ಗುರಿಗಳನ್ನು ಮುಟ್ಟಲಿಕ್ಕೊಸ್ಕರ ಬೇರೆ ದೇಶಕ್ಕೆ ಸ್ಥಳಾಂತರಿಸಿವೆ. (ಆದಿ. 12:1-9) ಮಿಖೇಲ್‌ ಮತ್ತು ಇಂಗರವರ ಮಾದರಿಯನ್ನೇ ತೆಗೆದುಕೊಳ್ಳಿ. ಯುಕ್ರೇನ್‌ನ ಈ ದಂಪತಿಗೆ 2003ರಲ್ಲಿ ರಷ್ಯಕ್ಕೆ ಬಂದರು. ಬೈಬಲ್‌ ಸತ್ಯಕ್ಕಾಗಿ ಹಾತೊರೆಯುತ್ತಿದ್ದ ಜನರನ್ನು ಕಂಡುಕೊಳ್ಳಲು ಇವರಿಗೆ ಹೆಚ್ಚು ಸಮಯ ಹಿಡಿಯಲಿಲ್ಲ.

ಮಿಖೇಲ್‌ ಹೀಗನ್ನುತ್ತಾರೆ: “ಈ ಮುಂಚೆ ಸಾಕ್ಷಿ ನೀಡಿರದ ಒಂದು ಸ್ಥಳದಲ್ಲಿ ನಾವು ಒಮ್ಮೆ ಸುವಾರ್ತೆ ಸಾರುತ್ತಿದ್ದೆವು. ವಯಸ್ಸಾದ ಒಬ್ಬ ವ್ಯಕ್ತಿ ಬಾಗಿಲು ತೆಗೆದು ‘ನೀವು ಸಾರುವವರಾ?’ ಎಂದು ಕೇಳಿದರು. ನಾವು ಹೌದು ಎಂದಾಗ ‘ಯಾವತ್ತಾದರೂ ಒಂದು ದಿನ ನೀವು ಬಂದೇ ಬರುತ್ತೀರಾ ಅಂತ ನನಗೆ ಗೊತ್ತಿತ್ತು. ಯೇಸುವಿನ ಮಾತು ನೆರವೇರದೆ ಇರಲು ಸಾಧ್ಯವೇ ಇಲ್ಲ’ ಎಂದರವರು. ನಂತರ ಆ ವ್ಯಕ್ತಿ ಮತ್ತಾಯ 24:14ನ್ನು ಉಲ್ಲೇಖಿಸಿದರು.” ಮಿಖೇಲ್‌ ಕೂಡಿಸಿ ಹೇಳಿದ್ದು: “ಆ ಕ್ಷೇತ್ರದಲ್ಲಿ ಸತ್ಯಕ್ಕಾಗಿ ಬಾಯಾರಿದ ಬ್ಯಾಪ್ಟಿಸ್ಟ್‌ ಪಂಗಡದ 10 ಮಂದಿ ಮಹಿಳೆಯರನ್ನೂ ಭೇಟಿಯಾದೆವು. ಅವರ ಬಳಿ ಈಗಾಗಲೇ ಇದ್ದ ಸದಾ ಜೀವಿಸಬಲ್ಲಿರಿ ಪುಸ್ತಕ ಬಳಸಿ ಪ್ರತಿ ವಾರಾಂತ್ಯ ಬೈಬಲ್‌ ಅಧ್ಯಯನ ಮಾಡುತ್ತಿದ್ದರು. ಅವರನ್ನು ಭೇಟಿಯಾದಾಗ ಅವರಿಗಿದ್ದ ಅನೇಕ ಪ್ರಶ್ನೆಗಳನ್ನು ನಾವು ಉತ್ತರಿಸುತ್ತಾ ಹಲವಾರು ತಾಸು ಅಲ್ಲೇ ಇದ್ದೆವು. ಅವರೊಟ್ಟಿಗೆ ರಾಜ್ಯ ಗೀತೆಗಳನ್ನು ಹಾಡಿದೆವು. ಒಟ್ಟಿಗೆ ರಾತ್ರಿಯೂಟ ಸಹ ಮಾಡಿದೆವು. ಆ ಭೇಟಿ ಎಷ್ಟು ಚೆನ್ನಾಗಿತ್ತೆಂದರೆ ನನ್ನ ಮನಸ್ಸಲ್ಲಿ ಇನ್ನೂ ಹಚ್ಚಹಸಿರಾಗಿ ಉಳಿದಿದೆ.” ರಾಜ್ಯ ಪ್ರಚಾರಕರ ಅಗತ್ಯ ಹೆಚ್ಚಿರುವ ಸ್ಥಳಗಳಲ್ಲಿ ಕೆಲಸ ಮಾಡುವುದು ತಮಗೆ ಯೆಹೋವನ ಸಮೀಪಕ್ಕೆ ಬರುವಂತೆ ಮಾಡಿದೆ, ಜನರ ಮೇಲೆ ಪ್ರೀತಿ ಗಾಢವಾಗಿಸಿದೆ ಮತ್ತು ತುಂಬ ಸಂತೃಪ್ತಿ ತರುವ ಜೀವನ ಕೊಟ್ಟಿದೆ ಎಂದು ಮಿಖೇಲ್‌ ಮತ್ತು ಇಂಗ ಒಪ್ಪಿಕೊಳ್ಳುತ್ತಾರೆ. ಈಗ ಈ ದಂಪತಿ ಸರ್ಕಿಟ್‌ ಕೆಲಸದಲ್ಲಿದ್ದಾರೆ.

ಒಕ್ಸಾನ, ಅಲೆಕ್ಸಿ ಮತ್ತು ಯುರಿ

ಯುಕ್ರೇನ್‌ ದೇಶದವರಾದ ಯುರಿ ಮತ್ತು ಒಕ್ಸಾನ ಎಂಬ ದಂಪತಿಗೆ ಈಗ 35 ವಯಸ್ಸು ದಾಟಿದೆ. ಇವರ ಮಗನ ಹೆಸರು ಅಲೆಕ್ಸಿ, ಈಗ ಅವನಿಗೆ 13 ವರ್ಷ. ಇವರು ರಷ್ಯದ ಬ್ರಾಂಚ್‌ ಆಫೀಸನ್ನು 2007ರಲ್ಲಿ ಭೇಟಿ ಮಾಡಿದರು. ಅಲ್ಲಿ ಇವರು ನೋಡಿದ ರಷ್ಯದ ಭೂಪಟದಲ್ಲಿ ಯಾವ ಸಭೆಗೂ ನೇಮಿಸಲಾಗಿರದ ಸೇವಾ ಕ್ಷೇತ್ರಗಳನ್ನು ಗುರುತಿಸಲಾಗಿತ್ತು. “ಆ ಭೂಪಟ ನೋಡಿದ ಮೇಲೆ ರಾಜ್ಯ ಪ್ರಚಾರಕರ ಅಗತ್ಯ ಎಷ್ಟರ ಮಟ್ಟಿಗೆ ಇದೆ ಎಂದು ಹಿಂದೆಂದಿಗಿಂತಲೂ ಹೆಚ್ಚಾಗಿ ನಮಗೆ ಅರಿವಾಯಿತು. ರಷ್ಯಕ್ಕೆ ಸ್ಥಳಾಂತರಿಸುವ ತೀರ್ಮಾನ ತೆಗೆದುಕೊಳ್ಳಲು ಸಹಾಯವಾಯಿತು” ಎನ್ನುತ್ತಾರೆ ಒಕ್ಸಾನ. ಮುಂದಕ್ಕೆ ಅವರಿಗೆ ಸಹಾಯ ಮಾಡಿದ್ದು ಯಾವುದು? ಯುರಿ ಹೀಗನ್ನುತ್ತಾರೆ: “ನಮ್ಮ ಸಾಹಿತ್ಯದಲ್ಲಿ ಬಂದಂಥ ಲೇಖನಗಳು, ಉದಾಹರಣೆಗೆ ‘ವಿದೇಶಿ ಕ್ಷೇತ್ರದಲ್ಲಿ ನೀವು ಸೇವೆಮಾಡಬಲ್ಲಿರೊ?’ ಎಂಬ ಲೇಖನವನ್ನು ಓದಿದ್ದು ಸಹಾಯ ಮಾಡಿತು. * ಬ್ರಾಂಚ್‌ ನಮಗೆ ಹೇಳಿದ ಕ್ಷೇತ್ರವನ್ನು ನೋಡಲು ಹೋದೆವು. ಅಲ್ಲಿ ಮನೆ ಮತ್ತು ಕೆಲಸವನ್ನು ಹುಡುಕಿದೆವು.” 2008ರಲ್ಲಿ ಇವರು ರಷ್ಯಕ್ಕೆ ಸ್ಥಳಾಂತರಿಸಿದರು.

ಆರಂಭದಲ್ಲಿ ಕೆಲಸ ಸಿಗುವುದು ಕಷ್ಟವಾಗಿತ್ತು. ಆಗಿಂದಾಗ್ಗೆ ಮನೆ ಬದಲಾಯಿಸಬೇಕಾಯಿತು. ಯುರಿ ಹೀಗನ್ನುತ್ತಾರೆ: “ನಿರುತ್ತೇಜನ ಆಗಬಾರದೆಂದು ನಾವು ಅನೇಕ ಸಲ ಪ್ರಾರ್ಥಿಸುತ್ತಿದ್ದೆವು. ನಂತರ ಯೆಹೋವನು ನಮ್ಮನ್ನು ಬೆಂಬಲಿಸುತ್ತಾನೆಂದು ನಂಬಿಕೆಯಿಟ್ಟು ಸುವಾರ್ತೆ ಸಾರುವುದನ್ನು ಮುಂದುವರಿಸುತ್ತಿದ್ದೆವು. ರಾಜ್ಯಕ್ಕೆ ಸಂಬಂಧಪಟ್ಟ ವಿಷಯಗಳಿಗೆ ಮೊದಲ ಸ್ಥಾನ ಕೊಟ್ಟಾಗಲೆಲ್ಲ ಯೆಹೋವನು ಹೇಗೆ ನಮ್ಮನ್ನು ನೋಡಿಕೊಳ್ಳುತ್ತಾನೆಂದು ನಮಗೇ ಅನುಭವವಾಯಿತು. ನಾವು ಮಾಡುತ್ತಿರುವ ಈ ಸೇವೆ ನಮ್ಮ ಕುಟುಂಬವನ್ನು ಬಲಗೊಳಿಸಿದೆ.” (ಮತ್ತಾ. 6:22, 33) ಅಗತ್ಯ ಹೆಚ್ಚಿರುವ ಕ್ಷೇತ್ರದಲ್ಲಿ ಕೆಲಸ ಮಾಡುವುದು ಯುವ ಅಲೆಕ್ಸಿಯನ್ನು ಹೇಗೆ ಪ್ರಭಾವಿಸಿದೆ? “ಇದರಿಂದ ಅವನಿಗೆ ತುಂಬ ಒಳ್ಳೇದಾಗಿದೆ. 9ನೇ ವಯಸ್ಸಿನಲ್ಲಿ ಯೆಹೋವನಿಗೆ ಸಮರ್ಪಣೆ ಮಾಡಿ ದೀಕ್ಷಾಸ್ನಾನ ಪಡೆದ. ರಾಜ್ಯ ಪ್ರಚಾರಕರ ಹೆಚ್ಚಿನ ಅಗತ್ಯವಿರುವುದು ಅವನಿಗೆ ಗೊತ್ತಿರುವುದರಿಂದ ಶಾಲಾ ರಜೆಗಳಲ್ಲಿ ಆಕ್ಸಿಲಿಯರಿ ಪಯನೀಯರ್‌ ಸೇವೆ ಮಾಡುತ್ತಾನೆ. ಸೇವೆಗಾಗಿ ಅವನಿಗಿರುವ ಪ್ರೀತಿ, ಹುರುಪನ್ನು ನೋಡುವಾಗ ನಮಗೆ ತುಂಬ ಸಂತೋಷವಾಗುತ್ತದೆ” ಎನ್ನುತ್ತಾರೆ ಒಕ್ಸಾನ. ಯುರಿ ಮತ್ತು ಒಕ್ಸಾನ ಇಂದು ವಿಶೇಷ ಪಯನೀಯರರಾಗಿ ಸೇವೆ ಮಾಡುತ್ತಿದ್ದಾರೆ.

“ಒಂದೇ ಒಂದು ಬೇಜಾರೇನೆಂದರೆ . . .”

ಕೊಯ್ಲಿನ ಕೆಲಸ ಮಾಡುತ್ತಿರುವವರ ಮಾತುಗಳನ್ನು ಕೇಳಿದ ಮೇಲೆ ಒಂದು ವಿಷಯವಂತೂ ಸ್ಪಷ್ಟ: ಬೇರೊಂದು ಸ್ಥಳಕ್ಕೆ ಹೋಗಿ ನಿಮ್ಮ ಸೇವೆಯನ್ನು ಹೆಚ್ಚಿಸಬೇಕೆಂದಿದ್ದರೆ ಯೆಹೋವನ ಮೇಲೆ ಪೂರ್ಣ ಭರವಸೆ ಇಡಬೇಕು. ಅಗತ್ಯ ಹೆಚ್ಚಿರುವ ಸ್ಥಳಗಳಿಗೆ ಹೋದಾಗ ಅಲ್ಲಿನ ಸೇವಾ ಕ್ಷೇತ್ರದಲ್ಲಿ ಸವಾಲುಗಳಿರುತ್ತವೆ ನಿಜ. ಆದರೆ ರಾಜ್ಯ ಸಂದೇಶಕ್ಕೆ ಕಿವಿಗೊಡುವವರ ಜೊತೆ ಸುವಾರ್ತೆಯನ್ನು ಹಂಚಿಕೊಂಡಾಗ ತುಂಬ ಸಂತೋಷ ಸಿಗುತ್ತದೆ. ರಾಜ್ಯ ಪ್ರಚಾರಕರ ಹೆಚ್ಚಿನ ಅಗತ್ಯವಿರುವ ಸ್ಥಳಕ್ಕೆ ಹೋಗಿ ಕೊಯ್ಲಿನ ಕೆಲಸದಲ್ಲಿ ನೆರವಾಗಲು ಬಯಸುತ್ತೀರಾ? ಹೌದು ಎಂಬುದು ನಿಮ್ಮ ಉತ್ತರವಾಗಿದ್ದರೆ ಹೆಚ್ಚಿನ ಅಗತ್ಯವಿರುವ ಸ್ಥಳದಲ್ಲಿ ಕೆಲಸ ಮಾಡುತ್ತಿರುವ ಯುರಿಗೆ ಅನಿಸಿದಂತೆ ನಿಮಗೂ ಅನಿಸುತ್ತದೆ: “ಒಂದೇ ಒಂದು ಬೇಜಾರೇನೆಂದರೆ ಈ ಕೆಲಸವನ್ನು ಮುಂಚೆಯೇ ಶುರು ಮಾಡಬೇಕಿತ್ತು.”

^ ಪ್ಯಾರ. 20 ಅಕ್ಟೋಬರ್‌ 15, 1999 ಕಾವಲಿನಬುರುಜು ಪುಟ 23-27 ನೋಡಿ.