ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ತಮ್ಮನ್ನು ಮನಃಪೂರ್ವಕವಾಗಿ ನೀಡಿಕೊಂಡರು

ತಮ್ಮನ್ನು ಮನಃಪೂರ್ವಕವಾಗಿ ನೀಡಿಕೊಂಡರು

ಎಷ್ಟೋ ಅವಿವಾಹಿತ ಸಹೋದರಿಯರು ಹೆಚ್ಚು ಅಗತ್ಯವಿರುವ ಸ್ಥಳಗಳಿಗೆ ಹೋಗಿ ಹುರುಪಿನಿಂದ ಸೇವೆ ಸಲ್ಲಿಸುತ್ತಿದ್ದಾರೆ. ಇವರಲ್ಲಿ ಕೆಲವರು ಬೇರೆ ದೇಶಗಳಿಗೆ ಹೋಗಿ ಅನೇಕ ದಶಕಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಹೀಗೆ ಸೇವೆ ಮಾಡಲು ಇವರಿಗೆ ಯಾವುದು ಸಹಾಯ ಮಾಡಿತು? ಯಾವ ಪ್ರಯೋಜನ ಪಡೆದಿದ್ದಾರೆ? ಅದು ಅವರ ಜೀವನವನ್ನು ಹೇಗೆ ಬದಲಾಯಿಸಿತು? ಇದರ ಕುರಿತು ನಾವು ಅನೇಕ ಅನುಭವಸ್ಥ ಸಹೋದರಿಯರನ್ನು ಕೇಳಿದೆವು. ಅವರು ತಮ್ಮ ಸೇವೆಯನ್ನು ತುಂಬ ಆನಂದಿಸುತ್ತಿದ್ದಾರೆ ಎಂದು ಗೊತ್ತಾಯಿತು. ಅವರ ಹೇಳಿಕೆಗಳಿಂದ ಪೂರ್ಣ ಸಮಯದ ಸೇವೆಯನ್ನು ಮಾಡಬೇಕೆಂಬ ಆಸೆ ಇರುವ ಅವಿವಾಹಿತ ಸಹೋದರಿಯರು ಪ್ರಯೋಜನ ಪಡೆಯುತ್ತಾರೆ. ಬೇರೆಯವರಿಗೂ ಪ್ರಯೋಜನ ಇದೆ.

ಸಂಶಯವನ್ನು ಮೆಟ್ಟಿ ನಿಂತರು

ಅನೀಟ

‘ನಾನೊಬ್ಬಳೇ ಹೋಗಿ ಬೇರೆ ದೇಶದಲ್ಲಿ ಸೇವೆ ಮಾಡೋದಾ! ನನ್ನಿಂದ ಆಗಲ್ಲಪ್ಪ?’ ಎಂದು ನಿಮಗೆ ಅನಿಸಿದೆಯಾ? 75 ವರ್ಷದ ಅನೀಟ ಎಂಬ ಸಹೋದರಿಗೂ ಇದೇ ರೀತಿಯ ಸಂಶಯಗಳಿದ್ದವು. ಇವರು ಇಂಗ್ಲೆಂಡ್‌ನವರು. 18⁠ರ ಪ್ರಾಯದಲ್ಲಿ ಪಯನೀಯರ್‌ ಸೇವೆ ಆರಂಭಿಸಿದರು. ಅವರು ಹೇಳುವುದು: “ಯೆಹೋವನ ಬಗ್ಗೆ ಜನರಿಗೆ ಕಲಿಸುವುದೆಂದರೆ ನನಗೆ ತುಂಬ ಇಷ್ಟ. ಆದರೆ ಬೇರೆ ದೇಶಕ್ಕೆ ಹೋಗಿ ಸೇವೆ ಸಲ್ಲಿಸುವುದು ನನ್ನಿಂದ ಆಗಲ್ಲ ಅಂತ ನೆನಸುತ್ತಿದ್ದೆ. ನಾನು ಬೇರೆ ಯಾವುದೇ ಭಾಷೆ ಕಲಿತಿರಲಿಲ್ಲ. ಕಲಿಯಕ್ಕೂ ಆಗಲ್ಲ ಅಂದುಕೊಂಡಿದ್ದೆ. ಆದ್ದರಿಂದ ಗಿಲ್ಯಡ್‌ ಶಾಲೆಯ ಆಮಂತ್ರಣ ಸಿಕ್ಕಿದಾಗ ನನಗೆ ದಿಕ್ಕೇ ತೋಚಲಿಲ್ಲ. ನನ್ನಂಥ ಸಾಧಾರಣ ವ್ಯಕ್ತಿಗೆ ಈ ಆಮಂತ್ರಣ ಸಿಕ್ಕಿದ್ದು ಆಶ್ಚರ್ಯವಾಯಿತು. ಆದರೆ ನಾನು ಹೀಗೆ ಯೋಚಿಸಿದೆ: ‘ಯೆಹೋವನಿಗೆ ನನ್ನ ಮೇಲೆ ಭರವಸೆ ಇದೆಯಾದರೆ ನಾನ್ಯಾಕೆ ಪ್ರಯತ್ನಿಸಬಾರದು?’ ಇದೆಲ್ಲಾ ನಡೆದು 50 ವರ್ಷ ಆಗಿದೆ. ಅಂದಿನಿಂದ ನಾನು ಜಪಾನ್‌ನಲ್ಲಿ ಮಿಷನರಿಯಾಗಿ ಸೇವೆ ಸಲ್ಲಿಸುತ್ತಿದ್ದೇನೆ. ಯುವ ಸಹೋದರಿಯರು ಸಿಕ್ಕಿದರೆ, ‘ಜೀವನದ ಅತಿ ದೊಡ್ಡ ಸಾಹಸಕ್ಕೆ ಕೈಹಾಕಲು ಬಯಸುತ್ತೀರಾ? ನನ್ನಂತೆ ಬೇರೆ ದೇಶಕ್ಕೆ ಹೋಗಿ ಸೇವೆ ಮಾಡಿ’ ಎಂದು ಉತ್ಸಾಹದಿಂದ ಹೇಳುತ್ತೇನೆ. ಇದನ್ನು ಕೇಳಿ ಎಷ್ಟೋ ಸಹೋದರಿಯರು ವಿದೇಶಕ್ಕೆ ಹೋಗಿ ಸೇವೆ ಮಾಡುತ್ತಿದ್ದಾರೆ!”

ಧೈರ್ಯದಿಂದ ಮುಂದೆ ಬಂದರು

ಬೇರೆ ದೇಶಕ್ಕೆ ಹೋಗಿ ಸೇವೆ ಸಲ್ಲಿಸಲು ಅನೇಕ ಸಹೋದರಿಯರಿಗೆ ಮೊದಲು ಹಿಂಜರಿಕೆ ಇತ್ತು. ಅವರಿಗೆ ಯಾವುದು ಸಹಾಯಮಾಡಿತು?

ಮೊರೀನ್‌

ಮೊರೀನ್‌ ಎಂಬ 64 ವರ್ಷದ ಸಹೋದರಿ ಹೀಗೆ ಹೇಳಿದರು: “ನನ್ನ ಜೀವನಕ್ಕೆ ಉದ್ದೇಶ ಇರಬೇಕು, ಬೇರೆಯವರಿಗೆ ಸಹಾಯ ಮಾಡಬೇಕು ಎಂಬ ಬಯಕೆ ಚಿಕ್ಕಂದಿನಿಂದಲೇ ಇತ್ತು.” 20⁠ರ ಪ್ರಾಯದಲ್ಲೇ ಅವರು ಕೆನಡದ ಕ್ವಿಬೆಕ್‌ಗೆ ಹೋದರು. ಅಲ್ಲಿ ಹೆಚ್ಚು ಪಯನೀಯರರ ಅಗತ್ಯವಿತ್ತು. ಅವರಿಗೆ ಗಿಲ್ಯಡ್‌ ಶಾಲೆಯ ಆಮಂತ್ರಣ ಸಿಕ್ಕಿದಾಗ, ಗೊತ್ತಿಲ್ಲದ ಜಾಗಕ್ಕೆ ಒಬ್ಬಳೇ ಹೋಗಿ ಸೇವೆ ಸಲ್ಲಿಸುವುದು ಕಷ್ಟ ಎಂದು ನೆನಸಿದರು. ಅವರು ಹೀಗನ್ನುತ್ತಾರೆ: “ತಂದೆಗೆ ತುಂಬ ಹುಷಾರಿರಲಿಲ್ಲ. ನಾನೂ ಹೋಗಿಬಿಟ್ಟರೆ ಅವರನ್ನು ಅಮ್ಮ ಒಬ್ಬರೇ ನೋಡಿಕೊಳ್ಳಬೇಕು. ಇದರಿಂದ ನನಗೆ ತುಂಬಾ ಚಿಂತೆ ಆಗುತ್ತಿತ್ತು. ಎಷ್ಟೋ ಸಲ ರಾತ್ರಿಯೆಲ್ಲಾ ಅಳುತ್ತಾ ಪ್ರಾರ್ಥನೆ ಮಾಡಿದ್ದೇನೆ. ಅಪ್ಪ-ಅಮ್ಮ ಜೊತೆ ಮಾತಾಡಿದಾಗ ಅವರು ‘ನಮ್‌ ಬಗ್ಗೆ ಚಿಂತೆ ಮಾಡಬೇಡ, ಗಿಲ್ಯಡ್‌ಗೆ ಹೋಗು’ ಅಂದರು. ಸಭೆಯವರು ನನ್ನ ಹೆತ್ತವರಿಗೆ ತೋರಿಸಿದ ಪ್ರೀತಿ ಕಾಳಜಿಯನ್ನು ನಾನು ಕಣ್ಣಾರೆ ಕಂಡೆ. ಇದರಲ್ಲಿ ಯೆಹೋವನ ಹಸ್ತವನ್ನು ನೋಡಲು ಸಾಧ್ಯವಾಯಿತು. ಯೆಹೋವನು ನನ್ನನ್ನು ಸಹ ಖಂಡಿತ ನೋಡಿಕೊಳ್ಳುತ್ತಾನೆ ಎಂಬ ಆಶ್ವಾಸನೆ ಸಿಕ್ಕಿತು.” 1979⁠ರಿಂದ 30 ವರ್ಷಗಳ ವರೆಗೆ ಮೊರೀನ್‌ ಪಶ್ಚಿಮ ಆಫ್ರಿಕದಲ್ಲಿ ಮಿಷನರಿಯಾಗಿ ಸೇವೆ ಸಲ್ಲಿಸಿದರು. ಈಗ ತನ್ನ ತಾಯಿಗೆ ಆರೈಕೆ ಮಾಡುತ್ತಾ ಸ್ಪೆಷಲ್‌ ಪಯನೀಯರ್‌ ಆಗಿ ಕೆನಡದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಬೇರೆ ದೇಶದಲ್ಲಿ ಅವರು ಮಾಡಿದ ಸೇವೆಯ ಬಗ್ಗೆ ಹೀಗೆ ಹೇಳುತ್ತಾರೆ: “ನನಗೆ ಏನು ಬೇಕು ಅನ್ನೋದು ಯೆಹೋವನಿಗೆ ಚೆನ್ನಾಗಿ ಗೊತ್ತಿತ್ತು. ಅದನ್ನು ಯಾವಾಗಲೂ ಸರಿಯಾದ ಸಮಯಕ್ಕೆ ಕೊಟ್ಟನು.”

ವೆಂಡೀ

ವೆಂಡೀ ಎಂಬ ಸಹೋದರಿಗೆ ಈಗ 65 ವರ್ಷ. 14 ವಯಸ್ಸಲ್ಲಿ ಆಸ್ಟ್ರೇಲಿಯದಲ್ಲಿ ಪಯನೀಯರ್‌ ಸೇವೆ ಆರಂಭಿಸಿದರು. ಅವರು ಹೀಗೆನ್ನುತ್ತಾರೆ: “ನನಗೆ ತುಂಬ ನಾಚಿಕೆ ಸ್ವಭಾವ ಇತ್ತು. ಅಪರಿಚಿತರೊಂದಿಗೆ ಮಾತಾಡುವುದೆಂದರೆ ತುಂಬ ಕಷ್ಟ. ಆದರೆ ಪಯನೀಯರ್‌ ಸೇವೆಯು ಎಲ್ಲಾ ರೀತಿಯ ಜನರೊಂದಿಗೆ ಮಾತಾಡಲು ಧೈರ್ಯ ಕೊಟ್ಟಿತು. ಇದರಿಂದ ಆತ್ಮವಿಶ್ವಾಸ ಹೆಚ್ಚಾಯಿತು. ಪಯನೀಯರ್‌ ಸೇವೆಯಿಂದ ನಾನು ಯೆಹೋವನ ಮೇಲೆ ಆತುಕೊಳ್ಳಲು ಕಲಿತೆ. ಬೇರೆ ದೇಶಕ್ಕೆ ಸಹ ಹೋಗಿ ಸೇವೆ ಮಾಡಲು ಆಗುತ್ತದೆ ಎಂಬ ಧೈರ್ಯ ಬಂತು. ಅದೇ ಸಮಯಕ್ಕೆ ಜಪಾನಿನಲ್ಲಿ 30 ವರ್ಷದಿಂದ ಮಿಷನರಿಯಾಗಿ ಸೇವೆ ಮಾಡಿದ್ದ ಸಹೋದರಿಯೊಬ್ಬರು ತನ್ನೊಟ್ಟಿಗೆ ಮೂರು ತಿಂಗಳು ಸೇವೆ ಮಾಡುವಂತೆ ಕೇಳಿಕೊಂಡರು. ಅವರೊಂದಿಗೆ ಜಪಾನಿನಲ್ಲಿ ಕಳೆದ ಸಮಯ ನಾನೂ ಬೇರೆ ದೇಶಕ್ಕೆ ಹೋಗಿ ಸೇವೆಸಲ್ಲಿಸಬೇಕು ಎಂಬ ಆಸೆಯನ್ನು ಹೆಚ್ಚಿಸಿತು.” 1986⁠ರಲ್ಲಿ ವೆಂಡೀ ಆಸ್ಟ್ರೇಲಿಯದ ಪೂರ್ವ ದಿಕ್ಕಿಗೆ ಸುಮಾರು 1,770 ಕಿಲೋಮೀಟರ್‌ ದೂರದಲ್ಲಿದ್ದ ವನುವಾಟು ಎಂಬ ದ್ವೀಪಕ್ಕೆ ಸೇವೆ ಮಾಡಲು ಹೋದರು.

ವೆಂಡೀ ಈಗಲೂ ವನುವಾಟುವಿನಲ್ಲೇ ಸೇವೆ ಮಾಡುತ್ತಿದ್ದಾರೆ. ಅಲ್ಲಿನ ಪ್ರಾದೇಶಿಕ ಭಾಷಾಂತರ ಕಚೇರಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. “ದ್ವೀಪದ ಮೂಲೆ ಮೂಲೆಯಲ್ಲೂ ಸಭೆಗಳು ಆಗುತ್ತಿರುವುದನ್ನು ನೋಡಿ ತುಂಬ ಖುಷಿ ಆಗುತ್ತದೆ. ಯೆಹೋವನು ನನಗೆ ಈ ದ್ವೀಪಗಳಲ್ಲಿ ಸೇವೆ ಮಾಡಲು ಕೊಟ್ಟಿರುವ ಸುಯೋಗವನ್ನು ಮಾತಿನಲ್ಲಿ ವರ್ಣಿಸಕ್ಕಾಗಲ್ಲ” ಎಂದು ಅವರು ತಿಳಿಸುತ್ತಾರೆ.

ಕೂಮೀಕೋ (ಮಧ್ಯೆ)

ಕೂಮೀಕೋ ಎಂಬ ಸಹೋದರಿಗೆ ಈಗ 65 ವರ್ಷ. ಜಪಾನಿನಲ್ಲಿ ಪಯನೀಯರ್‌ ಸೇವೆ ಮಾಡುತ್ತಿದ್ದರು. ಅವರು ಹೀಗನ್ನುತ್ತಾರೆ: “ನನ್ನ ಜೊತೆ ಪಯನೀಯರ್‌ ಸೇವೆ ಮಾಡುತ್ತಿದ್ದ ಸಹೋದರಿ ನಾವು ನೇಪಾಳಕ್ಕೆ ಹೋಗಿ ಸೇವೆ ಮಾಡೋಣ ಎಂದು ಯಾವಾಗಲೂ ಹೇಳುತ್ತಿದ್ದರು. ನನಗಂತೂ ಹೊಸ ಭಾಷೆ ಕಲೀಬೇಕಲ್ಲಾ, ಹೊಸ ಜಾಗಕ್ಕೆ ಹೋಗಿ ಹೇಗೆ ಜೀವಿಸೋದು, ಬೇರೆ ದೇಶಕ್ಕೆ ಹೋಗಲು ಹಣ ಬೇಕಾಗುತ್ತೆ ಎಂಬ ಚಿಂತೆಗಳು ಕಾಡುತ್ತಿದ್ದರಿಂದ ಹಿಂದೇಟು ಹಾಕುತ್ತಿದ್ದೆ. ಆಗಲೆ ನನಗೆ ಒಂದು ಅಪಘಾತ ಆಗಿ ಆಸ್ಪತ್ರೆ ಸೇರಿದೆ. ಆಗ ನಾನು ‘ಮುಂದೇನಾಗುತ್ತೋ ಗೊತ್ತಿಲ್ಲ, ಒಂದುವೇಳೆ ನನಗೆ ಯಾವುದಾದರೂ ದೊಡ್ಡ ಕಾಯಿಲೆ ಬಂದುಬಿಟ್ಟರೆ ಬೇರೆ ದೇಶಕ್ಕೆ ಹೋಗಿ ಪಯನೀಯರ್‌ ಸೇವೆಮಾಡುವ ಅವಕಾಶ ತಪ್ಪಿಹೋಗುತ್ತಲ್ಲಾ’ ಅಂತ ಯೋಚಿಸಲು ಶುರುಮಾಡಿದೆ. ಇದರಿಂದ ಬೇರೆ ದೇಶಕ್ಕೆ ಹೋಗಿ ಒಂದು ವರ್ಷವಾದರೂ ಸೇವೆ ಸಲ್ಲಿಸಬೇಕು ಎಂದು ನಿರ್ಣಯ ಮಾಡಿದೆ. ಸಹಾಯ ಕೊಡಪ್ಪಾ ಅಂತ ಯೆಹೋವನಲ್ಲಿ ಬೇಡಿಕೊಂಡೆ.” ಆಸ್ಪತ್ರೆಯಿಂದ ಬಂದ ಕೂಡಲೇ ಕೂಮೀಕೋ ನೇಪಾಳಕ್ಕೆ ಭೇಟಿನೀಡಿದರು. ನಂತರ ಅವರು ಮತ್ತು ಅವರ ಜೊತೆ ಪಯನೀಯರ್‌ ಮಾಡುತ್ತಿದ್ದ ಸಹೋದರಿ ನೇಪಾಳಕ್ಕೆ ಹೋಗಿ ಸೇವೆಮಾಡಿದರು.

ಕೂಮೀಕೋ ಹತ್ತು ವರ್ಷಗಳಿಂದ ನೇಪಾಳದಲ್ಲಿ ಸೇವೆಸಲ್ಲಿಸುತ್ತಿದ್ದಾರೆ. ಅವರು ಹೀಗೆ ಹೇಳುತ್ತಾರೆ: “ನನ್ನನ್ನು ಕಾಡುತ್ತಿದ್ದ ಚಿಂತೆಗಳು ನೋಡುನೋಡುತ್ತಿದ್ದಂತೆ ಕೆಂಪು ಸಮುದ್ರದ ನೀರಿನಂತೆ ವಿಭಾಗವಾಗಿ ಮಾಯವಾಗಿಬಿಟ್ಟವು. ಹೆಚ್ಚು ಅಗತ್ಯವಿದ್ದ ಜಾಗದಲ್ಲಿ ಸೇವೆ ಸಲ್ಲಿಸಲು ಮುಂದೆ ಬಂದದ್ದು ನನಗೆ ತುಂಬ ಸಂತೋಷ ತಂದಿದೆ. ಒಂದು ಮನೆಗೆ ಹೋಗಿ ಬೈಬಲ್‌ ಸಂದೇಶವನ್ನು ಹೇಳುವಾಗ ಅಕ್ಕಪಕ್ಕದ ಜನರೂ ಬಂದು ಕೇಳಿಸಿಕೊಳ್ಳುತ್ತಾರೆ. ಚಿಕ್ಕ ಮಕ್ಕಳು ಸಹ ಕರಪತ್ರವನ್ನು ಕೇಳಿ ತಗೊಂಡು ಓದುತ್ತಾರೆ. ಇಷ್ಟು ಚೆನ್ನಾಗಿ ಕೇಳಿಸಿಕೊಳ್ಳುವ ಜನರಿಗೆ ಸುವಾರ್ತೆ ಸಾರುವುದೇ ಒಂದು ಖುಷಿ.”

ಅಡೆತಡೆಗಳನ್ನು ನಿಭಾಯಿಸಿದರು

ನಾವು ಸಂದರ್ಶನ ಮಾಡಿದ ಅವಿವಾಹಿತ ಸಹೋದರಿಯರು ಅನೇಕ ಅಡೆತಡೆಗಳನ್ನು ಎದುರಿಸಿದರು. ಇದನ್ನೆಲ್ಲ ಧೈರ್ಯದಿಂದ ನಿಭಾಯಿಸಲು ಅವರಿಗೆ ಯಾವುದು ಸಹಾಯ ಮಾಡಿತು?

ಡೈಯಾನ್‌

ಡೈಯಾನ್‌ ಎಂಬ ಸಹೋದರಿಗೆ ಈಗ 62 ವರ್ಷ. ಇವರು ಕೆನಡದವರು. 20 ವರ್ಷ ಐವರಿ ಕೋಸ್ಟ್‌ನಲ್ಲಿ (ಈಗ ಕೋಟ್‌ ಡೀವಾರ್‌) ಮಿಷನರಿ ಸೇವೆ ಸಲ್ಲಿಸಿದರು. ಅವರು ಹೀಗನ್ನುತ್ತಾರೆ: “ಮೊದಮೊದಲು ನನ್ನ ಕುಟುಂಬದಿಂದ ದೂರ ಇರುವುದು ತುಂಬ ಕಷ್ಟವಾಗುತ್ತಿತ್ತು. ನನಗೆ ಸೇವೆಯಲ್ಲಿ ಸಿಕ್ಕಿದ ಜನರನ್ನು ಪ್ರೀತಿಸಲು ಯೆಹೋವನ ಸಹಾಯಕ್ಕಾಗಿ ಬೇಡಿದೆ. ಗಿಲ್ಯಡ್‌ ಶಾಲೆಯ ಶಿಕ್ಷಕರಾದ ಸಹೋದರ ಜ್ಯಾಕ್‌ ರೆಡ್‌ಫರ್ಡ್‌ ‘ನೀವು ಹೋಗುವ ಸ್ಥಳದ ಪರಿಸ್ಥಿತಿ ನೋಡಿ ನಿಮಗೆ ಮೊದಮೊದಲು ಬೇಜಾರು ಆಗಬಹುದು. ಜನರ ಬಡತನವನ್ನು ನೋಡಿ ಆಘಾತ ಆಗಬಹುದು. ಆದರೆ ಬಡತನವನ್ನು ನೋಡಬೇಡಿ. ಜನರನ್ನು ನೋಡಿ, ಅವರ ಮುಖ-ಕಣ್ಣುಗಳನ್ನು ನೋಡಿ. ಜನರು ಬೈಬಲ್‌ ಸತ್ಯಕ್ಕೆ ಹೇಗೆ ಪ್ರತಿಕ್ರಿಯಿಸುತ್ತಾರೆ ಎನ್ನುವ ವಿಷಯಕ್ಕೆ ಗಮನಕೊಡಿ’ ಎಂದು ಹೇಳಿದ್ದರು. ನಾನು ಅದನ್ನೇ ಮಾಡಿದ್ದರಿಂದ ಅನೇಕ ಆಶೀರ್ವಾದಗಳು ಸಿಕ್ಕಿತು. ನೆಮ್ಮದಿ ತರುವಂಥ ದೇವರ ರಾಜ್ಯದ ಸಂದೇಶವನ್ನು ಜನರಿಗೆ ತಿಳಿಸುವಾಗ ಸಂತೋಷದಿಂದ ಅವರ ಕಣ್ಣುಗಳು ಮಿರಮಿರ ಮಿನುಗುತ್ತಿತ್ತು.” ಡೈಯಾನ್‌ಗೆ ಬೇರೆ ದೇಶದಲ್ಲಿ ಸೇವೆಸಲ್ಲಿಸಲು ಸಹಾಯ ಮಾಡಿದ ಇನ್ನೊಂದು ವಿಷಯ ಯಾವುದು? “ಬೈಬಲ್‌ ವಿದ್ಯಾರ್ಥಿಗಳೊಂದಿಗೆ ಬೆಳೆಸಿಕೊಂಡ ಒಳ್ಳೆ ಸಂಬಂಧ. ಅವರು ಯೆಹೋವನ ನಿಷ್ಠಾವಂತ ಸೇವಕರಾಗುವುದನ್ನು ನೋಡುವಾಗ ನನಗೆ ತುಂಬ ಸಂತೋಷ ಆಗುತ್ತಿತ್ತು. ನಾನು ಸೇವೆಮಾಡಲು ಹೋದ ಊರೇ ನನಗೆ ತವರೂರು ಆಯಿತು. ಯೇಸು ಹೇಳಿದಂತೆ ಇಲ್ಲಿ ನನಗೆ ಅನೇಕ ಆಧ್ಯಾತ್ಮಿಕ ತಂದೆ, ತಾಯಿ, ಅಣ್ಣತಮ್ಮಂದಿರು, ಅಕ್ಕತಂಗಿಯರು ಸಿಕ್ಕಿದ್ದಾರೆ” ಎನ್ನುತ್ತಾರೆ ಡೈಯಾನ್‌.—ಮಾರ್ಕ 10:29, 30.

ಆ್ಯನ್‌ ಎಂಬ ಸಹೋದರಿಗೆ ಈಗ 46 ವರ್ಷ. ಏಷ್ಯಾ ಖಂಡದಲ್ಲಿ ನಮ್ಮ ಕೆಲಸದ ಮೇಲೆ ನಿರ್ಬಂಧ ಹಾಕಲಾಗಿರುವ ದೇಶದಲ್ಲಿ ಇವರು ಸೇವೆ ಮಾಡುತ್ತಿದ್ದಾರೆ. ಅವರು ಹೀಗನ್ನುತ್ತಾರೆ: “ನಾನು ಅನೇಕ ದೇಶಗಳಲ್ಲಿ ಸೇವೆ ಮಾಡಿದ್ದೇನೆ. ನನಗೆ ಬೇರೆ ಬೇರೆ ಹಿನ್ನೆಲೆ ಮತ್ತು ವ್ಯಕ್ತಿತ್ವ ಇರುವ ಸಹೋದರಿಯರೊಂದಿಗೆ ಕೆಲಸ ಮಾಡುವ ಅವಕಾಶ ಸಿಕ್ಕಿತು. ಆದರೆ ನಮ್ಮ ಸಂಸ್ಕೃತಿ ಭಿನ್ನವಾಗಿರುವುದರಿಂದ ಕೆಲವೊಮ್ಮೆ ಮನಸ್ತಾಪ ಆಯಿತು. ಅಂಥ ಸಂದರ್ಭದಲ್ಲಿ ಅವರಿಗೆ ಇನ್ನೂ ಹತ್ತಿರವಾಗಲು, ಅವರ ಸಂಸ್ಕೃತಿಯನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದೆ. ಅವರೊಂದಿಗೆ ಪ್ರೀತಿಯಿಂದ ಹೊಂದಿಕೊಂಡು ಹೋದೆ. ಇದರಿಂದ ಅನೇಕರೊಂದಿಗೆ ಒಳ್ಳೇ ಸ್ನೇಹವನ್ನು ಬೆಳೆಸಿಕೊಳ್ಳಲು ಸಾಧ್ಯವಾಗಿದೆ. ಇದು ಎಲ್ಲವನ್ನು ತಾಳಿಕೊಳಲು, ನೇಮಕವನ್ನು ಒಳ್ಳೇ ರೀತಿಯಲ್ಲಿ ಪೂರೈಸಲು ಸಹಾಯ ಮಾಡಿದೆ.”

ಯೂಟ

ಯೂಟ ಎಂಬ ಸಹೋದರಿಗೆ ಈಗ 53 ವರ್ಷ. ಇವರು ಜರ್ಮನಿ ದೇಶದವರು. 1993⁠ರಲ್ಲಿ ಮಡಗಾಸ್ಕರ್‌ನಲ್ಲಿ ಮಿಷನರಿಯಾಗಿ ಸೇವೆ ಸಲ್ಲಿಸುವ ನೇಮಕ ಇವರಿಗೆ ಸಿಕ್ಕಿತು. ಅವರು ಹೀಗನ್ನುತ್ತಾರೆ: “ಮೊದಮೊದಲು ಇಲ್ಲಿಯ ಭಾಷೆ ಕಲಿಯಲು ಕಷ್ಟವಾಯಿತು. ಸೆಕೆ ತುಂಬ ಇತ್ತು. ಸೊಳ್ಳೆಗಳು ಮತ್ತು ಕೀಟಗಳ ಕಾಟ ಇತ್ತು. ಇದರಿಂದ ಮಲೇರಿಯ ಮತ್ತು ಬೇರೆ ಕಾಯಿಲೆಗಳೊಂದಿಗೂ ಹೋರಾಡಬೇಕಿತ್ತು. ಆದರೆ ಇದೆಲ್ಲವನ್ನು ನಿಭಾಯಿಸಲು ತುಂಬ ಸಹಾಯ ಸಿಕ್ಕಿತು. ಸಭೆಯಲ್ಲಿದ್ದ ಸಹೋದರಿಯರು, ಮಕ್ಕಳು ಮತ್ತು ನನ್ನ ಬೈಬಲ್‌ ವಿದ್ಯಾರ್ಥಿಗಳು ಭಾಷೆ ಕಲಿಯಲು ಸಹಾಯ ಮಾಡಿದರು. ನನಗೆ ಹುಷಾರಿಲ್ಲದಿದ್ದಾಗ ನನ್ನೊಂದಿಗೆ ನೇಮಿಸಲಾಗಿದ್ದ ಮಿಷನರಿ ಸಹೋದರಿ ನನ್ನನ್ನು ಚೆನ್ನಾಗಿ ನೋಡಿಕೊಂಡರು. ಇದೆಲ್ಲದಕ್ಕಿಂತ ಹೆಚ್ಚಾಗಿ ಯೆಹೋವನು ನನಗೆ ತುಂಬ ಸಹಾಯ ಮಾಡಿದನು. ನನ್ನ ಹೃದಯಾಳದ ಭಾವನೆಗಳನ್ನು ಯೆಹೋವನೊಂದಿಗೆ ಹಂಚಿಕೊಂಡೆ. ಯೆಹೋವನು ನನ್ನ ಪ್ರಾರ್ಥನೆಗೆ ಉತ್ತರ ಕೊಡುವ ತನಕ ತಾಳ್ಮೆಯಿಂದ ಕಾದೆ. ಕೆಲವೊಮ್ಮೆ ಯೆಹೋವನ ಉತ್ತರಕ್ಕಾಗಿ ಕೆಲವು ದಿನಗಳು, ಕೆಲವೊಮ್ಮೆ ತಿಂಗಳುಗಳು ಕಾಯಬೇಕಾಯಿತು. ಯೆಹೋವನು ನನ್ನ ಪ್ರತಿಯೊಂದು ಸಮಸ್ಯೆಯನ್ನು ಬಗೆಹರಿಸಿದನು.” ಯೂಟ 23 ವರ್ಷಗಳಿಂದ ಮಡಗಾಸ್ಕರ್‌ನಲ್ಲಿ ಸೇವೆ ಮಾಡುತ್ತಿದ್ದಾರೆ.

ಹೇರಳವಾದ ಆಶೀರ್ವಾದ ಪಡೆದರು

ಅಗತ್ಯವಿರುವ ಕಡೆ ಹೋಗಿ ಸೇವೆ ಮಾಡುವ ಎಲ್ಲರೂ ಹೇರಳವಾದ ಆಶೀರ್ವಾದ ಪಡೆಯುತ್ತಾರೆ. ಬೇರೆ ದೇಶಕ್ಕೆ ಹೋಗಿ ಸೇವೆ ಸಲ್ಲಿಸುತ್ತಿರುವ ಅವಿವಾಹಿತ ಸಹೋದರಿಯರ ವಿಷಯದಲ್ಲೂ ಇದು ಸತ್ಯ. ಅವರು ತಮ್ಮ ಸೇವೆಯನ್ನು ತುಂಬ ಆನಂದಿಸುತ್ತಿದ್ದಾರೆ. ಅವರಿಗೆ ಸಿಕ್ಕಿರುವ ಕೆಲವು ಆಶೀರ್ವಾದಗಳು ಏನಂತ ನೋಡೋಣವಾ?

ಹೈಡೀ

ಹೈಡೀ ಎಂಬ ಸಹೋದರಿಗೆ ಈಗ 73 ವರ್ಷ. ಇವರು ಜರ್ಮನಿ ದೇಶದವರು. 1968⁠ರಿಂದ ಐವರಿ ಕೋಸ್ಟ್‌ನಲ್ಲಿ (ಈಗ ಕೋಟ್‌ ಡೀವಾರ್‌) ಮಿಷನರಿಯಾಗಿ ಸೇವೆ ಮಾಡುತ್ತಿದ್ದಾರೆ. ಅವರು ಹೀಗನ್ನುತ್ತಾರೆ: “ನನ್ನ ಆಧ್ಯಾತ್ಮಿಕ ಮಕ್ಕಳು ಸತ್ಯದಲ್ಲಿ ನಡೆಯುತ್ತಾ ಇರುವುದೇ ನನಗೆ ತುಂಬ ಖುಷಿ ಕೊಡುತ್ತೆ. ನನ್ನ ಬೈಬಲ್‌ ವಿದ್ಯಾರ್ಥಿಗಳಲ್ಲಿ ಕೆಲವರು ಈಗ ಪಯನೀಯರ್‌ ಆಗಿದ್ದಾರೆ, ಹಿರಿಯರಾಗಿದ್ದಾರೆ. ಅವರಲ್ಲಿ ಅನೇಕರು ನನ್ನನ್ನು ಅಮ್ಮ ಅಥವಾ ಅಜ್ಜಿ ಎಂದು ಕರೆಯುತ್ತಾರೆ. ಒಬ್ಬ ಹಿರಿಯನ ಕುಟುಂಬ ನನ್ನನ್ನು ಅವರ ಕುಟುಂಬದ ಸದಸ್ಯೆಯಂತೆ ನೋಡುತ್ತಾರೆ. ಹೀಗೆ ಯೆಹೋವನು ನನಗೆ ಒಬ್ಬ ಮಗ, ಸೊಸೆ, ಮೂರು ಮೊಮ್ಮಕ್ಕಳನ್ನು ಕೊಟ್ಟಿದ್ದಾನೆ.”—3 ಯೋಹಾ. 4.

ಕ್ಯಾರನ್‌ (ಮಧ್ಯೆ)

ಕ್ಯಾರನ್‌ ಎಂಬ ಸಹೋದರಿಗೆ ಈಗ 72 ವರ್ಷ. ಇವರು ಕೆನಡ ದೇಶದವರು. ಪಶ್ಚಿಮ ಆಫ್ರಿಕದಲ್ಲಿ 20 ವರ್ಷ ಮಿಷನರಿಯಾಗಿ ಸೇವೆ ಮಾಡಿದ್ದರು. ಅವರು ಹೀಗನ್ನುತ್ತಾರೆ: “ನನಗೆ ಪ್ರೀತಿ, ತಾಳ್ಮೆ, ಸ್ವತ್ಯಾಗದ ಮನೋಭಾವ ಬೆಳೆಸಿಕೊಳಲು ಮಿಷನರಿ ಸೇವೆ ಸಹಾಯ ಮಾಡಿತು. ಅನೇಕ ದೇಶಗಳ ಸಹೋದರ ಸಹೋದರಿಯರ ಜೊತೆ ಸೇವೆಮಾಡಲು ಅವಕಾಶ ಸಿಕ್ಕಿತು. ಇದು ಬೇರೆ ಬೇರೆ ರೀತಿಯಲ್ಲಿ ಯೋಚಿಸಲು, ಕೆಲಸಗಳನ್ನು ಮಾಡಲು ಕಲಿಸಿತು. ಇದರಿಂದ ಲೋಕಾದ್ಯಂತ ಅನೇಕ ಸ್ನೇಹಿತರನ್ನು ಗಳಿಸಿದ್ದೇನೆ. ಇದು ನನಗೆ ಸಿಕ್ಕಿದ ದೊಡ್ಡ ಆಶೀರ್ವಾದ. ನಮ್ಮ ಜೀವನ ಬದಲಾದರೂ ನೇಮಕಗಳು ಬದಲಾದರೂ ನಮ್ಮೆಲ್ಲರ ಸ್ನೇಹ ಬದಲಾಗಲಿಲ್ಲ.”

ಮಾರ್ಗರೆಟ್‌ ಎಂಬ ಸಹೋದರಿಗೆ ಈಗ 79 ವರ್ಷ. ಇವರು ಇಂಗ್ಲೆಂಡ್‌ನವರು. ಇವರು ಲಾವೋಸ್‌ನಲ್ಲಿ ಮಿಷನರಿಯಾಗಿ ಸೇವೆ ಮಾಡಿದ್ದರು. ಅವರು ಹೀಗನ್ನುತ್ತಾರೆ: “ಬೇರೆ ದೇಶದಲ್ಲಿ ಸೇವೆ ಮಾಡುವ ಮೂಲಕ ಯೆಹೋವನು ಹೇಗೆ ಎಲ್ಲಾ ಜಾತಿ ಮತ್ತು ಹಿನ್ನೆಲೆಯ ಜನರನ್ನು ತನ್ನ ಸಂಘಟನೆಯಲ್ಲಿ ಸೇರಿಸುತ್ತಾನೆ ಎಂದು ಕಣ್ಣಾರೆ ಕಾಣಲು ಸಾಧ್ಯವಾಯಿತು. ಇದು ನನ್ನ ನಂಬಿಕೆಯನ್ನು ಬಲಪಡಿಸಿತು. ಯೆಹೋವನೇ ತನ್ನ ಸಂಘಟನೆಯನ್ನು ನಡೆಸುತ್ತಿದ್ದಾನೆ ಮತ್ತು ತನ್ನ ಉದ್ದೇಶವನ್ನು ಖಂಡಿತ ನೆರವೇರಿಸುತ್ತಾನೆ ಎಂಬ ದೃಢಭರವಸೆ ಮೂಡಿಸಿತು.”

ಬೇರೆ ದೇಶದಲ್ಲಿ ಸೇವೆ ಸಲ್ಲಿಸುತ್ತಿರುವ ಅವಿವಾಹಿತ ಸಹೋದರಿಯರು ಕ್ರೈಸ್ತ ಸೇವೆಯನ್ನು ಮಾಡುವುದರಲ್ಲಿ ಅತ್ಯುತ್ತಮ ಮಾದರಿ ಇಟ್ಟಿದ್ದಾರೆ. ಅವರನ್ನು ನಾವು ಶ್ಲಾಘಿಸಲೇಬೇಕು. (ನ್ಯಾಯ. 11:40) ಹೊರದೇಶಕ್ಕೆ ಹೋಗಿ ಸೇವೆಮಾಡುವ ಸ್ತ್ರೀಸಮೂಹ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. (ಕೀರ್ತ. 68:11) ನೀವು ಸಹ ಈ ಸಹೋದರಿಯರಂತೆ ಸನ್ನಿವೇಶಗಳನ್ನು ಹೊಂದಿಸಿಕೊಂಡು ಬೇರೊಂದು ಸ್ಥಳಕ್ಕೆ ಹೋಗಿ ಸೇವೆ ಮಾಡಬಲ್ಲಿರಾ? ಹೀಗೆ ಮಾಡಿದರೆ “ಯೆಹೋವನು ಸರ್ವೋತ್ತಮನೆಂದು ಅನುಭವ ಸವಿದು” ನೋಡುವಿರಿ.—ಕೀರ್ತ. 34:8.