ಮಾಹಿತಿ ಇರುವಲ್ಲಿ ಹೋಗಲು

ಬದುಕು ಬದಲಾದ ವಿಧ

“ಹಣ ಮಾಡುವ ಅಡ್ಡದಾರಿ, ತುಂಬಾ ಅಪಾಯಕಾರಿ”

“ಹಣ ಮಾಡುವ ಅಡ್ಡದಾರಿ, ತುಂಬಾ ಅಪಾಯಕಾರಿ”
  • ಜನನ: 1974

  • ದೇಶ: ಅಲ್ಬೇನಿಯ

  • ಹಿಂದೆ: ಕಳ್ಳ, ಡ್ರಗ್ಸ್‌ ಮಾರುತ್ತಿದ್ದೆ, ಆಗಾಗ ಜೈಲಿಗೆ ಹೋಗ್ತಿದ್ದೆ

ಹಿನ್ನೆಲೆ

 ನಾನು ಹುಟ್ಟಿದ್ದು ಅಲ್ಬೇನಿಯದ ರಾಜಧಾನಿ ಟಿರಾನದಲ್ಲಿ. ನಾವು ತುಂಬ ಬಡವರು. ಅಪ್ಪ ತುಂಬ ನಿಯತ್ತಿನ ಮನುಷ್ಯ. ನಮ್ಮನ್ನೆಲ್ಲ ಸಾಕಲು ಹಗಲುರಾತ್ರಿ ದುಡಿಯುತ್ತಿದ್ದರು. ಆದ್ರೂ ಅದು ಯಾವುದಕ್ಕೂ ಸಾಕಾಗ್ತಿರಲಿಲ್ಲ. ಚಿಕ್ಕವನಿದ್ದಾಗ ಬಡತನದಿಂದ ನಾವು ಪಟ್ಟ ಪಾಡು ಅಷ್ಟಿಷ್ಟಲ್ಲ. ಹೊಟ್ಟೆಗೆ ಊಟ ಇರಲಿಲ್ಲ, ಕಾಲಿಗೆ ಚಪ್ಪಲಿ ಇರಲಿಲ್ಲ. ನಮ್ಮ ಗತಿ ನೋಡಿ ತುಂಬ ದುಃಖ ಆಗ್ತಿತ್ತು.

 ತುಂಬ ಚಿಕ್ಕವನಿರುವಾಗಲೇ ಕದಿಯಲು ಶುರು ಮಾಡ್ದೆ. ಹೊಟ್ಟೆಪಾಡಿಗಾಗಿ ಇದನ್ನು ಮಾಡೋದು ತಪ್ಪಲ್ಲ ಅಂದ್ಕೊಂಡೆ. ಹೇಗೋ ಜೀವನ ನಡಿತಾ ಇತ್ತು, ಆದ್ರೆ ಒಂದು ದಿನ ಪೊಲೀಸ್‌ ಕೈಗೆ ಸಿಕ್ಕಿಹಾಕಿಕೊಂಡೆ. 1998 ರಲ್ಲಿ ಅಪ್ಪ ನನ್ನನ್ನು ಬಾಲಾಪರಾಧಿ ಶಾಲೆಗೆ ಹಾಕಿದ್ರು. ಆಗ ನನಗೆ 14 ವರ್ಷ. ಅಲ್ಲಿ 2 ವರ್ಷ ಇದ್ದು ವೆಲ್ಡಿಂಗ್‌ ಕೆಲಸ ಕಲಿತೆ. ಅಲ್ಲಿಂದ ಮನೆಗೆ ಬಂದಾಗ ನಿಯತ್ತಿಂದ ದುಡಿಯಬೇಕು ಅಂದ್ಕೊಂಡೆ. ಆದ್ರೆ ನನಗೆ ಕೆಲಸನೇ ಸಿಗಲಿಲ್ಲ. ಅಲ್ಬೇನಿಯದಲ್ಲಿ ರಾಜಕೀಯ ಸಮಸ್ಯೆ ಇದ್ದದ್ರಿಂದ ತುಂಬ ಜನ ಕೆಲಸ ಸಿಗದೆ ಕಷ್ಟಪಡುತ್ತಿದ್ದರು. ಬೇಸತ್ತು ಹೋಗಿ ನಾನು ಹಳೇ ಫ್ರೆಂಡ್ಸ್‌ ಜೊತೆ ಸೇರಿ ಮತ್ತೆ ಕದಿಯಲು ಶುರು ಮಾಡ್ದೆ. ಹೀಗೆ ಒಂದು ದಿನ ನನ್ನನ್ನೂ ನನ್ನ ಫ್ರೆಂಡ್ಸನ್ನೂ ಅರೆಸ್ಟ್‌ ಮಾಡಿ 3 ವರ್ಷ ಜೈಲಿಗೆ ಹಾಕಿದ್ರು.

 ಜೈಲಿಂದ ಹೊರಗೆ ಬಂದ ಮೇಲೆ ಕ್ರೈಂಗಳನ್ನು ಮುಂದುವರಿಸಿದೆ. ಅಲ್ಬೇನಿಯದ ಆರ್ಥಿಕ ವ್ಯವಸ್ಥೆ ಕುಸಿದು ಹೋದದ್ರಿಂದ ಎಲ್ಲ ತಲೆಕೆಳಗಾಗಿತ್ತು. ಈ ಸಮಯದಲ್ಲಿ ಕಾನೂನು ವಿರುದ್ಧವಾಗಿರೋ ಕೆಲಸಗಳನ್ನು ಮಾಡಿ ನಾನು ತುಂಬ ಹಣ ಸಂಪಾದಿಸಿದೆ. ಒಂದು ಸಲ ಶಸ್ತ್ರಗಳನ್ನು ಧರಿಸಿಕೊಂಡು ಹೋಗಿ ಕಳ್ಳತನ ಮಾಡಿದ ಮೇಲೆ ನನ್ನ ಜೊತೆಗಿದ್ದ ಇಬ್ಬರು ಪೊಲೀಸರ ಕೈಗೆ ಸಿಕ್ಕಿಬಿದ್ದರು. ಆದ್ರೆ ನಾನು ತಪ್ಪಿಸಿಕೊಂಡು ಬೇರೆ ದೇಶಕ್ಕೆ ಓಡಿಹೋಗಿ ಬಿಟ್ಟೆ. ವರ್ಷಾನುಗಟ್ಟಲೆ ಜೈಲಲ್ಲಿ ಕೊಳೆಯಲು ನನಗೆ ಇಷ್ಟ ಇರಲಿಲ್ಲ. ಅಷ್ಟು ಹೊತ್ತಿಗೆ ನನಗೆ ಮದುವೆ ಆಗಿ ಪಾಪು ಕೂಡ ಇತ್ತು.

 ನಾವು ಹೇಗೋ ಇಂಗ್ಲೆಂಡಿಗೆ ಬಂದು ಸೇರಿಕೊಂಡ್ವಿ. ನನ್ನ ಹೆಂಡತಿ, ಮಗನ ಜೊತೆ ಹೊಸ ಜೀವನ ಶುರು ಮಾಡಬೇಕು ಅಂತ ನೆನಸಿದೆ. ಆದ್ರೆ ಹಳೇ ಚಟಗಳನ್ನು ಬಿಡಲಿಕ್ಕೇ ಆಗಲಿಲ್ಲ. ಈ ಸಲ ಡ್ರಗ್ಸ್‌ ವ್ಯವಹಾರಕ್ಕೆ ಇಳಿದೆ. ಕೈಯಲ್ಲಿ ಬೇಜಾನ್‌ ದುಡ್ಡು ಓಡಾಡ್ತಿತ್ತು.

 ನಾನು ಮಾಡ್ತಿದ್ದ ಡ್ರಗ್ಸ್‌ ವ್ಯವಹಾರದ ಬಗ್ಗೆ ನನ್ನ ಹೆಂಡತಿ ಜುಲಿಂಡಗೆ ಹೇಗೆ ಅನಿಸ್ತು? ಅವಳೇ ಹೇಳ್ತಾಳೆ ಕೇಳಿ, “ಅಲ್ಬೇನಿಯದಲ್ಲಿ ಹುಟ್ಟಿಬೆಳೆದ ನಾನು ಬಡತನ ಇಲ್ಲದ ಜೀವನ ಹೇಗಿರುತ್ತೆ ಅಂತ ಕನಸು ಕಾಣುತ್ತಿದ್ದೆ. ಜೀವನದಲ್ಲಿ ಸುಖವಾಗಿ ಇರಲು ಏನು ಮಾಡಲಿಕ್ಕೂ ರೆಡಿ ಇದ್ದೆ. ಹಣನೇ ಸರ್ವಸ್ವ ಅಂದುಕೊಂಡಿದ್ದೆ. ಅದಕ್ಕೇ ನನ್ನ ಗಂಡ ಆರ್ತನ್‌ ಹೇಳ್ತಿದ್ದ ಸುಳ್ಳಿಗೆ, ಮಾಡ್ತಿದ್ದ ಕಳ್ಳತನಕ್ಕೆ ಡ್ರಗ್ಸ್‌ ವ್ಯವಹಾರಕ್ಕೆ ಸಾತ್‌ ಕೊಡ್ತಿದ್ದೆ, ಅದರ ಬಗ್ಗೆ ಒಂದು ಮಾತೂ ಹೇಳ್ತಿರಲಿಲ್ಲ. ನಮಗೆ ದುಡ್ಡು ಬೇಕಿತ್ತು ಅಷ್ಟೇ.”

“ಆರ್ತನ್‌ ಹೇಳ್ತಿದ್ದ ಸುಳ್ಳಿಗೆ, ಮಾಡ್ತಿದ್ದ ಕಳ್ಳತನಕ್ಕೆ ಡ್ರಗ್ಸ್‌ ವ್ಯವಹಾರಕ್ಕೆ ಸಾತ್‌ ಕೊಡ್ತಿದ್ದೆ, ಅದರ ಬಗ್ಗೆ ಒಂದು ಮಾತೂ ಹೇಳ್ತಿರಲಿಲ್ಲ.”—ಜುಲಿಂಡ

 2002 ರಲ್ಲಿ ನಮ್ಮ ಜೀವನ ಮತ್ತೆ ಉಲ್ಟಾಪಲ್ಟಾ ಆಯಿತು. ಸುಖದ ಸುಪ್ಪತ್ತಿಗೆಯಲ್ಲಿ ತೇಲಾಡಬೇಕೆಂಬ ನಮ್ಮ ಕನಸು ನುಚ್ಚುನೂರಾಯಿತು. ಒಮ್ಮೆ ತುಂಬ ಡ್ರಗ್ಸ್‌ ಸಾಗಣೆ ಮಾಡುತ್ತಿರುವಾಗ ಸಿಕ್ಕಿಬಿದ್ದು ಮತ್ತೆ ಜೈಲಿಗೆ ಹೋದೆ.

ಬದುಕನ್ನೇ ಬದಲಾಯಿಸಿತು ಬೈಬಲ್‌

 ನನಗೇ ಗೊತ್ತಿಲ್ಲದೆ ನನ್ನ ಬಾಳಲ್ಲಿ ಬೈಬಲ್‌ ಪ್ರಭಾವ ಬೀರಲಿಕ್ಕೆ ಶುರುಮಾಡಿತು. ಹೇಗಂದ್ರೆ ಇಸವಿ 2000ದಲ್ಲಿ ಜುಲಿಂಡಗೆ ಯೆಹೋವನ ಸಾಕ್ಷಿಗಳ ಪರಿಚಯ ಆಯ್ತು. ಅವರು ಅವಳಿಗೆ ಬೈಬಲ್‌ ಕಲಿಸಲಿಕ್ಕೆ ಶುರುಮಾಡಿದರು. ಬೈಬಲ್‌ ಬಗ್ಗೆ ಮಾತಾಡೋದೆಲ್ಲ ನನಗೆ ಬೋರ್‌ ಅನಿಸುತಿತ್ತು. ಆದ್ರೆ ಜುಲಿಂಡಗೆ ತುಂಬ ಇಷ್ಟ ಆಗ್ತಿತ್ತು. ಅವಳು ಹೀಗೆ ಹೇಳ್ತಾಳೆ: “ಅಪ್ಪಅಮ್ಮ ಮನೆಯಲ್ಲಿ ದೇವರ ಮೇಲೆ ಭಕ್ತಿ ಜಾಸ್ತಿ. ನನಗೂ ಬೈಬಲ್‌ ಅಂದ್ರೆ ತುಂಬ ಇಷ್ಟ, ತುಂಬ ಗೌರವ. ನನಗೆ ಯಾವಾಗಲೂ ಬೈಬಲಲ್ಲಿ ಏನಿದೆ ಅಂತ ತಿಳಿದುಕೊಳ್ಳೋ ಆಸೆ ಇತ್ತು. ಸಾಕ್ಷಿಗಳಿಂದ ಬೈಬಲ್‌ ಕಲಿಯುವಾಗ ಇಷ್ಟೊಂದು ವಿಷ್ಯ ಬೈಬಲಲ್ಲಿ ಇದ್ಯಾ ಅಂತ ಆಶ್ಚರ್ಯ ಆಯ್ತು. ಹೆಚ್ಚಿನ ವಿಷ್ಯ ಸರಿ ಅಂತ ಒಪ್ಪಿಕೊಂಡೆ. ನನ್ನ ಜೀವನದಲ್ಲಿ ಕೆಲವು ಬದಲಾವಣೆ ಮಾಡಿಕೊಂಡೆ. ಹಣದ ವಿಷ್ಯದಲ್ಲಂತೂ ನನ್ನ ಮನೋಭಾವ ಸ್ವಲ್ಪನೂ ಬದಲಾಗಲಿಲ್ಲ. ಆದ್ರೆ ನನ್ನ ಗಂಡ ಅರೆಸ್ಟ್‌ ಆದಾಗ ನನ್ನ ಯೋಚನೆ ಸರಿ ಅಲ್ಲ ಅಂತ ಅರ್ಥಮಾಡಿಕೊಂಡೆ. ಹಣದ ವಿಷ್ಯದಲ್ಲಿ ಬೈಬಲ್‌ ಹೇಳೋದೇ ನಿಜ ಅಂತ ಆಗ ಗೊತ್ತಾಯ್ತು. ಹಣದ ಹಿಂದೇನೇ ಓಡ್ತಾ ಇದ್ವಿ. ಆದ್ರೆ ಅದ್ರಿಂದ ಖುಷಿ ಸಿಗಲೇ ಇಲ್ಲ. ದೇವರು ಹೇಳೋ ಎಲ್ಲ ವಿಷಯವನ್ನು ಪಾಲಿಸಬೇಕು ಅಂತ ಮನವರಿಕೆ ಆಯ್ತು.”

 2004 ರಲ್ಲಿ ನಾನು ಜೈಲಿಂದ ಹೊರಗೆ ಬಂದೆ. ಕೂಡಲೇ ಡ್ರಗ್ಸ್‌ ವ್ಯವಹಾರಕ್ಕೆ ಇಳಿದೆ. ದುಡ್ಡು ತೆಗೆದುಕೊಂಡು ಹೋಗಿ ಜುಲಿಂಡಗೆ ಕೊಟ್ಟಾಗ ಅವಳು, “ನನಗೆ ನಿನ್ನ ದುಡ್ಡು ಬೇಡ. ನೀನು ಬೇಕು, ನನ್ನ ಮಕ್ಕಳಿಗೆ ಅಪ್ಪ ಬೇಕು. ನೀನು ಅವರ ಜೊತೆ ಇರೋದೇ ನನಗೆ ಮುಖ್ಯ” ಅಂದಳು. ಅವಳು ತುಂಬ ಬದಲಾಗಿದ್ದಳು. ಅವಳು ಹೇಳಿದನ್ನು ಕೇಳಿ ನನಗೆ ತುಂಬ ಶಾಕ್‌ ಆಯ್ತು. ಆಗ ಕೂತು ಯೋಚನೆ ಮಾಡಿದೆ. ಅವಳು ಹೇಳಿದ್ದು ಸರಿ ಅಂತ ಅನಿಸಿತು. ದುಡ್ಡು ದುಡ್ಡು ಅಂತ ಹೋಗಿ ಎಷ್ಟೋ ವರ್ಷ ಹೆಂಡತಿ ಮಕ್ಕಳಿಂದ ದೂರ ಇದ್ದೆ. ತುಂಬ ನೋವು ಅನುಭವಿಸಿದ್ದೆಲ್ಲ ಮನಸ್ಸಿಗೆ ಬಂತು. ಅದಕ್ಕೇ ನಾನು ಬದಲಾಗಬೇಕು ಅಂದ್ಕೊಂಡೆ. ಹಳೇ ಫ್ರೆಂಡ್ಸ್‌ ಸಹವಾಸನೇ ಬೇಡ ಅಂತ ಬಿಟ್ಟುಬಿಟ್ಟೆ.

 ಒಮ್ಮೆ ನಾನು ಹೆಂಡ್ತಿ ಮತ್ತು ನನ್ನ ಇಬ್ಬರು ಗಂಡುಮಕ್ಕಳ ಜೊತೆ ಯೆಹೋವನ ಸಾಕ್ಷಿಗಳ ಕೂಟಕ್ಕೆ ಹೋದೆ. ಅಲ್ಲಿಂದ ನನ್ನ ಜೀವನ ಪೂರ್ತಿ ಬದಲಾಯ್ತು. ಅಲ್ಲಿದ್ದವರು ತುಂಬ ಒಳ್ಳೇ ಜನ, ಪರಿಚಯ ಇರುವವರ ತರ ಚೆನ್ನಾಗಿ ಮಾತಾಡಿಸಿದ್ರು. ನನಗೆ ತುಂಬ ಇಷ್ಟ ಆಗಿಬಿಟ್ಟಿತು. ಆಮೇಲೆ ನಾನು ಬೈಬಲ್‌ ಕಲಿಯಲು ಶುರುಮಾಡಿದೆ.

ಕೈತುಂಬ ದುಡ್ದಿದ್ರೆ ಜೀವನ ಪೂರ್ತಿ ಖುಷಿಯಾಗಿ ಇರಬಹುದು ಅಂತ ಅಂದುಕೊಳ್ಳುತ್ತಿದ್ದೆ

 ಹಣದಾಸೆ ಎಲ್ಲ ರೀತಿಯ ಹಾನಿಕರ ವಿಷಯಗಳಿಗೆ ಮೂಲ. ಹಣದ ಹಿಂದೆ ಹೋಗಿ ಕೆಲವರು ತುಂಬ ವೇದನೆ ಅನುಭವಿಸಿದ್ದಾರೆ ಅಂತ ನಾನು ಬೈಬಲಿಂದ ಕಲಿತುಕೊಂಡೆ. 1 ತಿಮೊತಿ 6:9, 10 ರಲ್ಲಿರುವ ಮಾತು ನಿಜ ಅನ್ನೋದಕ್ಕೆ ನಾನೇ ಸಾಕ್ಷಿ. ನಾನು ಮಾಡಿದ ತಪ್ಪಿಂದ ನನ್‌ ಕುಟುಂಬ ತುಂಬ ನೋವು ಅನುಭವಿಸಿತು. ಯಾಕಾದ್ರೂ ಹಾಗೆ ಮಾಡಿದ್ನೋ ಅಂತ ಪಶ್ಚಾತಾಪ ಆಯ್ತು. (ಗಲಾತ್ಯ 6:7) ಯೆಹೋವನಿಗೆ ಮತ್ತು ಆತನ ಮಗ ಯೇಸು ಕ್ರಿಸ್ತನಿಗೆ ನಮ್ಮ ಮೇಲೆ ಎಷ್ಟು ಪ್ರೀತಿ ಇದೆ ಅಂತ ಕಲಿತುಕೊಂಡಾಗ ನಾನು ಬದಲಾವಣೆ ಮಾಡೋಕೆ ಶುರುಮಾಡಿದೆ. ನನ್ನ ಬಗ್ಗೆ ಯೋಚನೆ ಮಾಡುವುದನ್ನು ಬಿಟ್ಟು ಬೇರೆಯವರ ಬಗ್ಗೆ ಯೋಚನೆ ಮಾಡಿದೆ. ನನ್ನ ಕುಟುಂಬದ ಜೊತೆನೂ ತುಂಬ ಸಮಯ ಕಳೆದೆ.

ಸಿಕ್ಕಿದ ಪ್ರಯೋಜನಗಳು

 ಹಣದಾಸೆ ಬಿಟ್ಟುಬಿಡಿ, ಇರೋದ್ರಲ್ಲೇ ತೃಪ್ತಿಪಡಿ ಅನ್ನೋ ಬೈಬಲ್‌ ಮಾತನ್ನು ಪಾಲಿಸಿ ತುಂಬ ಪ್ರಯೋಜನ ಪಡೆದೆ. (ಇಬ್ರಿಯ 13:5) ಈಗ ನನಗೆ ನೆಮ್ಮದಿ ಇದೆ, ಒಳ್ಳೇ ಮನಸ್ಸಾಕ್ಷಿ ಇದೆ. ಜೀವನದಲ್ಲೇ ನಾನು ಯಾವತ್ತೂ ಇಷ್ಟು ಖುಷಿಯಾಗಿ ಇರಲಿಲ್ಲ. ಮನೆಯಲ್ಲಿ ನಮ್ಮೆಲ್ಲರ ಮಧ್ಯೆ ಪ್ರೀತಿ ಜಾಸ್ತಿ ಆಗಿದೆ.

 ಕೈತುಂಬ ದುಡ್ದಿದ್ರೆ ಜೀವನ ಪೂರ್ತಿ ಖುಷಿಯಾಗಿ ಇರಬಹುದು ಅಂತ ಅಂದುಕೊಳ್ಳುತ್ತಿದ್ದೆ. ಆದ್ರೆ ಹಣ ಮಾಡುವ ಅಡ್ಡದಾರಿ, ತುಂಬಾ ಅಪಾಯಕಾರಿ ಅಂತ ಈಗ ಚೆನ್ನಾಗಿ ಗೊತ್ತಾಗಿದೆ. ನಾವೇನು ಶ್ರೀಮಂತರಲ್ಲ. ಆದ್ರೆ ದುಡ್ಡಿಗಿಂತ ಎಷ್ಟೋ ಶ್ರೇಷ್ಠವಾದದ್ದು ಈಗ ನಮಗೆ ಸಿಕ್ಕಿದೆ. ಅದೇ ಯೆಹೋವ ದೇವರ ಜೊತೆಗಿರೋ ಸ್ನೇಹ. ನಾವೆಲ್ಲರೂ ಆತನನ್ನು ಆರಾಧಿಸುತ್ತಿರೋದ್ರಿಂದ ತುಂಬ ಖುಷಿಯಾಗಿ ಇದ್ದೀವಿ.

ಯೆಹೋವನ ಸಾಕ್ಷಿಗಳ ಅಧಿವೇಶನದಲ್ಲಿ ನನ್ನ ಫ್ಯಾಮಿಲಿ