ಮಾಹಿತಿ ಇರುವಲ್ಲಿ ಹೋಗಲು

ಬದುಕು ಬದಲಾದ ವಿಧ

ನನ್ನ ಜೀವನಕ್ಕೆ ಗೊತ್ತು ಗುರಿ ಇರಲಿಲ್ಲ

ನನ್ನ ಜೀವನಕ್ಕೆ ಗೊತ್ತು ಗುರಿ ಇರಲಿಲ್ಲ
  • ಜನನ: 1971

  • ದೇಶ: ಟಾಂಗ

  • ಹಿಂದೆ: ಡ್ರಗ್ಸ್‌ ತಗೊಳ್ತಿದ್ರು, ಜೈಲಲ್ಲಿದ್ರು

ಹಿನ್ನೆಲೆ

 ನಾನು ಟಾಂಗ ದೇಶದವನು. ಈ ದೇಶ ನೈಋತ್ಯ ಪೆಸಿಫಿಕ್‌ ಸಾಗರದಲ್ಲಿದೆ. ನಮ್ಮ ದೇಶದಲ್ಲಿ 170 ದ್ವೀಪಗಳಿವೆ. ನಮ್ಮ ಮನೇಲಿ ಕರೆಂಟು, ಓಡಾಡೋಕೆ ಗಾಡಿ ಯಾವುದೂ ಇರ್ಲಿಲ್ಲ. ಟಾಂಗದಲ್ಲಿ ನಮ್ಮ ಜೀವನ ಅಷ್ಟೇನು ಚೆನ್ನಾಗಿರಲಿಲ್ಲ. ಆದ್ರೆ ನಮ್ಮ ಮನೇಲಿ ಕೊಳಾಯಿ ಇತ್ತು, ಒಂದೆರಡು ಕೋಳಿಗಳೂ ಇತ್ತು. ಶಾಲೆಗೆ ರಜೆ ಇದ್ದಾಗ ನಾನು, ಅಣ್ಣ ಮತ್ತು ತಮ್ಮ ನಮ್ಮ ಹೊಲದಲ್ಲಿ ಅಪ್ಪನ ಜೊತೆ ಕೆಲ್ಸ ಮಾಡ್ತಿದ್ವಿ. ಅಲ್ಲಿ ನಾವು ಬಾಳೆಹಣ್ಣು, ಗೆಡ್ಡೆ ಗೆಣಸು ಮತ್ತು ಮರಗೆಣಸನ್ನು ಬೆಳೀತಿದ್ವಿ. ಹೀಗೆ ನಮ್ಮ ಅಪ್ಪ, ಬೇರೆ-ಬೇರೆ ಕೆಲ್ಸ ಮಾಡ್ತಾ ನಮ್ಮ ಕುಟುಂಬ ನಡೆಸೋಕೆ ಮೂರು ಕಾಸು ಸಂಪಾದಿಸ್ತಿದ್ರು. ಅಲ್ಲಿದ್ದ ಎಲ್ರ ಥರ ನಮ್ಗೂ ಬೈಬಲ್‌ ಮೇಲೆ ತುಂಬ ಗೌರವ ಇತ್ತು. ನಾವು ತಪ್ಪದೇ ಚರ್ಚ್‌ಗೆ ಹೋಗ್ತಿದ್ವಿ. ಆದ್ರೂ ನಮ್ಮ ಜೀವ್ನ ಸುಧಾರಿಸಬೇಕಂದ್ರೆ ನಾವು ಯಾವುದಾದ್ರೂ ಶ್ರೀಮಂತ ದೇಶಕ್ಕೆ ಹೋಗ್ಲೇಬೇಕು ಅಂತ ಅಂದ್ಕೊಳ್ತಿದ್ವಿ.

 ನಂಗೆ 16 ವರ್ಷ ಇದ್ದಾಗ ನಮ್ಮ ಮಾವ ನಮ್ಮನ್ನೆಲ್ಲ ಅಮೆರಿಕದ ಕ್ಯಾಲಿಫೋರ್ನಿಯಾಗೆ ಕರ್ಕೊಂಡು ಹೋದ್ರು. ಅಲ್ಲಿನ ಪರಿಸ್ಥಿತಿಗೆ ಹೊಂದಿಕೊಳ್ಳೋಕೆ ನಮ್ಗೆ ತುಂಬ ಕಷ್ಟ ಆಯ್ತು! ಅಲ್ಲಿ ನಮ್ಮ ಜೀವ್ನ ಸುಧಾರಿಸಿತಾದ್ರೂ ನಾವು ಇದ್ದ ಜಾಗದಲ್ಲಿ ತುಂಬ ಹಿಂಸೆ ಇತ್ತು, ಡ್ರಗ್ಸ್‌ ವ್ಯವಹಾರ ನಡಿತಿತ್ತು. ರಾತ್ರಿ ಹೊತ್ತಲ್ಲಿ ಶೂಟ್‌ ಮಾಡ್ತಿದ್ದ ಶಬ್ದ ಕೇಳಿಸ್ತಿತ್ತು. ಅಲ್ಲಿದ್ದ ರೌಡಿ ಗ್ಯಾಂಗ್‌ಗೆ ನಮ್ಮ ಅಕ್ಕಪಕ್ಕದ ಮನೆಯವ್ರೆಲ್ಲ ಹೆದರುತ್ತಿದ್ರು. ತುಂಬ ಜನ ತಮ್ಮ ರಕ್ಷಣೆಗಾಗಿ, ಜಗಳಗಳನ್ನ ನಿಲ್ಸೋಕೆ ಕೈಯಲ್ಲಿ ಗನ್‌ ಹಿಡ್ಕೊಂಡು ತಿರ್ಗಾಡ್ತಿದ್ರು. ಒಂದು ಸಲ, ಈ ರೀತಿ ಜಗಳ ಆದಾಗ ನನ್ನ ಮೇಲೆ ಹಾರಿಸಿದ ಗುಂಡು ಇನ್ನೂ ನನ್ನ ಎದೆಯಲ್ಲೇ ಇದೆ.

 ನಾನು ಹೈಸ್ಕೂಲಲ್ಲಿದ್ದಾಗ ನನ್ನ ಫ್ರೆಂಡ್ಸ್‌ ಥರ ಜೀವ್ನ ಎಂಜಾಯ್‌ ಮಾಡ್ಬೇಕು ಅಂದ್ಕೊಂಡೆ. ಅದಕ್ಕೆ, ಪಾರ್ಟಿಗೆ ಹೋಗೋದು, ಕಂಠ ಪೂರ್ತಿ ಕುಡಿಯೋದು, ಹೊಡೆದಾಡೋದು, ಡ್ರಗ್ಸ್‌ ತಗೊಳ್ಳೋದು ಎಲ್ಲ ಶುರು ಮಾಡ್ಕೊಂಡೆ. ಹೋಗ್ತಾ ಹೋಗ್ತಾ ಕೊಕೇನ್‌ ಅನ್ನೋ ಡ್ರಗ್ಸ್‌ ಇಲ್ಲದೆ ನಂಗೆ ಇರೋಕೇ ಆಗ್ತಿರ್ಲಿಲ್ಲ. ಡ್ರಗ್ಸ್‌ ತಗೊಳ್ಳೋಕೆ ಹಣ ಬೇಕಿತ್ತು, ಅದಕ್ಕೆ ಕದಿಯೋಕೆ ಶುರು ಮಾಡ್ದೆ. ನಮ್ಮ ಮನೆಯವ್ರೆಲ್ಲ ನಿಯತ್ತಾಗಿ ಚರ್ಚಿಗೆ ಹೋಗ್ತಿದ್ವಿ. ಆದ್ರೆ ಅಲ್ಲಿ ಹೇಳಿಕೊಡ್ತಿದ್ದ ವಿಷ್ಯಗಳು ನನಗೆ ಕೆಟ್ಟ ಸ್ನೇಹಿತರ ಸಹವಾಸ ಬಿಡೋಕೆ ಯಾವ್ದೇ ಸಹಾಯ ಮಾಡ್ಲಿಲ್ಲ. ಹುಡುಗರ ಜೊತೆ ಎಷ್ಟರ ಮಟ್ಟಿಗೆ ಜಗಳ ಆಡ್ತಿದ್ದೆ ಅಂದ್ರೆ ಗನ್‌ನಿಂದ ಶೂಟ್‌ ಕೂಡ ಮಾಡ್ತಿದ್ದೆ. ಅದಕ್ಕೆ ಎಷ್ಟೋ ಸಲ ನನ್ನನ್ನ ಪೊಲೀಸ್ರು ಅರೆಸ್ಟ್‌ ಮಾಡಿದ್ರು. ನನ್ನ ಜೀವ್ನಕ್ಕೆ ಗೊತ್ತು ಗುರಿನೇ ಇರ್ಲಿಲ್ಲ. ಕೊನೆಗೆ ನಾನು ಜೈಲು ಪಾಲಾದೆ.

ಬದುಕನ್ನೇ ಬದಲಾಯಿಸಿತು ಬೈಬಲ್‌

 1997 ರಲ್ಲಿ ಒಂದಿನ ನಾನು ಜೈಲಲ್ಲಿದ್ದಾಗ ನನ್ನ ಪಕ್ಕದಲ್ಲಿದ್ದವನೊಬ್ಬ ನನ್ನ ಕೈಲಿ ಬೈಬಲನ್ನು ನೋಡ್ದ. ಅದು ಕ್ರಿಸ್ಮಸ್‌ ಸಮಯ. ಟಾಂಗದ ಜನ್ರಿಗೆ ಇದು ಪವಿತ್ರ ಸಮಯ. ‘ಯೇಸು ಹುಟ್ಟಿದ್ದರ ಬಗ್ಗೆ ಬೈಬಲ್‌ ಏನು ಹೇಳುತ್ತೆ ಗೊತ್ತಾ?’ ಅಂತ ಅವನು ಕೇಳ್ದ. ಆದ್ರೆ ನಂಗೆ ಅದ್ರ ಬಗ್ಗೆ ಒಂಚೂರು ಗೊತ್ತಿರಲಿಲ್ಲ. ಆಗ ಅವನು ಯೇಸು ಹುಟ್ಟಿದ್ರ ಬಗ್ಗೆ ಬೈಬಲಲ್ಲಿರೋದನ್ನ ತೋರಿಸ್ದ. ಕ್ರಿಸ್ಮಸ್‌ನಲ್ಲಿ ಜನ ಮಾಡೋ ಎಷ್ಟೋ ಆಚಾರಗಳ ಬಗ್ಗೆ ಬೈಬಲಲ್ಲಿ ಇಲ್ವೇ ಇಲ್ಲ ಅಂತ ನಂಗೆ ಗೊತ್ತಾಯ್ತು. (ಮತ್ತಾಯ 2:1-12; ಲೂಕ 2:5-14) ಅದನ್ನ ನೋಡಿ ನಂಗೆ ಆಶ್ಚರ್ಯ ಆಯ್ತು. ಈ ಥರ ಇನ್ನು ಏನೆಲ್ಲ ವಿಷ್ಯ ಬೈಬಲ್‌ ಹೇಳುತ್ತೆ ಅಂತ ಯೋಚಿಸ್ದೆ. ಜೈಲಲ್ಲಿ ನಡೀತಿದ್ದ ಯೆಹೋವನ ಸಾಕ್ಷಿಗಳ ಕೂಟಗಳಿಗೆ ಅವ್ನು ಹೋಗ್ತಿದ್ದ. ಅವ್ನ ಜೊತೆ ಇನ್ಮೇಲೆ ನಾನೂ ಹೋಗಬೇಕು ಅಂತ ನಿರ್ಧಾರ ಮಾಡ್ದೆ. ಆಗ ಅವ್ರು ಪ್ರಕಟನೆ ಪುಸ್ತಕದ ಬಗ್ಗೆ ಚರ್ಚೆ ಮಾಡ್ತಿದ್ರು. ಅಲ್ಲಿ ನಂಗೇನು ಜಾಸ್ತಿ ಅರ್ಥ ಆಗ್ಲಿಲ್ಲ. ಆದ್ರೆ ಒಂದಂತೂ ಅರ್ಥ ಆಯ್ತು, ಅವ್ರು ಏನೇ ಹೇಳಿದ್ರೂ ಅದನ್ನ ಬೈಬಲಿಂದನೇ ಹೇಳ್ತಿದ್ರು.

 ‘ನಿಮಗೆ ನಾವು ಬೈಬಲ್‌ ಕಲಿಸಬಹುದಾ?’ ಅಂತ ಯೆಹೋವನ ಸಾಕ್ಷಿಗಳು ನನ್ನ ಕೇಳ್ದಾಗ ನಾನು ಖುಷಿಯಾಗಿ ಒಪ್ಪಿಕೊಂಡೆ. ಮುಂದೆ ಇಡೀ ಭೂಮಿ ಒಂದು ಹೊಸ ಲೋಕ ಆಗುತ್ತೆ, ಸುಂದರ ತೋಟದ ಥರ ಆಗುತ್ತೆ ಅಂತ ಆಗಲೇ ನಾನು ತಿಳುಕೊಂಡಿದ್ದು. (ಯೆಶಾಯ 35:5-8) ದೇವರು ನನ್ನನ್ನಿಷ್ಟ ಪಡಬೇಕು ಅಂದ್ರೆ ನಾನು ಜೀವ್ನದಲ್ಲಿ ತುಂಬ ಬದಲಾವಣೆ ಮಾಡ್ಕೊಳ್ಬೇಕು ಅಂತ ಅರ್ಥ ಮಾಡ್ಕೊಂಡೆ. ನಾನು ಈ ಕೆಟ್ಟ ಅಭ್ಯಾಸಗಳನ್ನು ಬಿಡದಿದ್ರೆ ಯೆಹೋವನು ನನ್ನನ್ನ ಆ ಸುಂದರ ತೋಟದ ಒಳಗೆ ಹೋಗಲು ಬಿಡಲ್ಲ ಅಂತ ಗೊತ್ತಾಯ್ತು. (1 ಕೊರಿಂಥ 6:9, 10) ಅದಕ್ಕೆ ನನ್ನ ಕೆಟ್ಟ ಕೋಪನ, ಸಿಗರೇಟ್‌ ಸೇದೋದನ್ನ, ಕುಡಿಯೋದನ್ನ ಮತ್ತು ಡ್ರಗ್ಸ್‌ ತಗೊಳ್ಳೋದನ್ನ ಬಿಡಲು ನಿರ್ಧರಿಸ್ದೆ.

 ಶಿಕ್ಷೆ ಮುಗಿಯೋಕೆ ಮುಂಚೆನೇ ನನ್ನನ್ನ 1999 ರಲ್ಲಿ ಇನ್ನೊಂದು ಜೈಲಿಗೆ ಕಳುಹಿಸಲಾಯಿತು. ಅಲ್ಲಿ ಸುಮಾರು ಒಂದು ವರ್ಷ ನಾನು ಯೆಹೋವನ ಸಾಕ್ಷಿಗಳನ್ನು ನೋಡೋಕೆ ಆಗ್ಲಿಲ್ಲ. ಆದ್ರೆ ಬದಲಾವಣೆ ಮಾಡ್ಕೊಳ್ಳೋದನ್ನ ಮುಂದುವರಿಸ್ದೆ. ನಾನು ಇನ್ಮೇಲೆ ಅಮೆರಿಕದಲ್ಲಿ ಇರಬಾರದು ಅಂತ ಸರ್ಕಾರ ನಿರ್ಧಾರ ಮಾಡ್ತು. ಅದಕ್ಕೆ ಇಸವಿ 2000ದಲ್ಲಿ ನನ್ನನ್ನ ವಾಪಸ್ಸು ಟಾಂಗಾಗೆ ಕಳುಹಿಸಿದರು.

 ಟಾಂಗಾಗೆ ಹೋದ ಮೇಲೆ ಮೊದಲು ಯೆಹೋವನ ಸಾಕ್ಷಿಗಳನ್ನು ಹುಡುಕಿ ಬೈಬಲ್‌ ಕಲಿಯೋದನ್ನ ಮುಂದುವರಿಸಿದೆ. ಅದು ನಂಗೆ ತುಂಬ ಇಷ್ಟ ಆಯ್ತು. ಅಮೆರಿಕದಲ್ಲಿ ಯೆಹೋವನ ಸಾಕ್ಷಿಗಳು ಕಲಿಸಿದ ಥರನೇ ಇಲ್ಲಿರೋ ಯೆಹೋವನ ಸಾಕ್ಷಿಗಳೂ ಬೈಬಲಿಂದನೇ ಎಲ್ಲ ಹೇಳಿ ಕೊಟ್ರು. ಇದು ನನ್ನ ಮನಸ್ಸಿಗೆ ತುಂಬ ಹಿಡಿಸ್ತು.

 ನಮ್ಮ ಅಪ್ಪ ಪ್ರತಿ ವರ್ಷ ಟಾಂಗಗೆ ಬಂದು ಹೋಗ್ತಿದ್ದರು. ಅವ್ರಿಗೆ ಚರ್ಚ್‌ನಲ್ಲಿ ಒಳ್ಳೇ ಸ್ಥಾನ ಇದ್ದಿದ್ರಿಂದ ನಮ್ಮೂರಲ್ಲಿ ಎಲ್ರಿಗೂ ಅವ್ರ ಒಳ್ಳೇ ಪರಿಚಯ ಇತ್ತು. ನಾನು ಯೆಹೋವನ ಸಾಕ್ಷಿಗಳ ಜೊತೆ ಸೇರೋದನ್ನ ನೋಡಿ ಮೊದ್ಲು ನಮ್ಮ ಕುಟುಂಬದಲ್ಲಿ ಎಲ್ರಿಗೂ ಬೇಸರ ಆಯ್ತು, ಕೋಪ ಬಂತು. ಆದ್ರೆ, ನಾನು ಕಲೀತಿದ್ದ ಬೈಬಲ್‌ ತತ್ವಗಳು ನಂಗೆ ಬದಲಾಗೋಕೆ ಸಹಾಯ ಮಾಡ್ತಿದೆ ಅಂತ ಅರ್ಥ ಮಾಡ್ಕೊಂಡ ಮೇಲೆ ಖುಷಿಪಟ್ರು.

ಟಾಂಗಾದಲ್ಲಿರೋ ಅನೇಕ ಗಂಡಸ್ರ ತರ ನಾನು ಸಹ ಪ್ರತಿವಾರ ಗಂಟೆ ಗಟ್ಟಲೆ ಕಾವ ಕುಡಿತಿದ್ದೆ

 ಕುಡಿಯೋದನ್ನ ಬಿಡೋಕೆ ನಂಗೆ ತುಂಬ ಕಷ್ಟ ಆಯ್ತು. ಟಾಂಗಾದಲ್ಲಿರೋ ಗಂಡಸ್ರು ಪ್ರತಿವಾರ ಗಂಟೆ ಗಟ್ಟಲೆ ಮತ್ತೇರಿಸೋ ಕಾವ ಕುಡೀತಿದ್ರು. ಇದನ್ನು ಕರಿ ಮೆಣಸಿನ ಬಳ್ಳಿಯ ಬೇರುಗಳಿಂದ ತೆಗೀತಾರೆ. ನಮ್ಮೂರಲ್ಲಿ ನಾನು ಪ್ರತಿದಿನ ಇಂಥ ಕಾವ ಕ್ಲಬ್‌ಗಳಿಗೆ ಹೋಗಿ ಪ್ರಜ್ಞೆ ತಪ್ಪಿ ಬೀಳೋ ತನಕ ಕುಡೀತ್ತಿದ್ದೆ. ಇದಕ್ಕೆ ಒಂದು ಕಾರಣ, ನನಗಿದ್ದ ಫ್ರೆಂಡ್ಸ್‌, ಇವರು ಬೈಬಲಿಗೆ ಗೌರವ ಕೊಡ್ತಿರಲಿಲ್ಲ. ಆದ್ರೆ ನನ್ನ ಈ ಅಭ್ಯಾಸದಿಂದ ದೇವರಿಗೆ ಅವಮಾನ ಆಗುತ್ತೆ ಅಂತ ನಂಗೆ ಯೆಹೋವನ ಸಾಕ್ಷಿಗಳು ಅರ್ಥಮಾಡಿಸಿದ್ರು. ಆಗ ದೇವರ ಆಶೀರ್ವಾದ ಪಡೆಯೋಕೆ ಬದಲಾವಣೆ ಮಾಡ್ಕೊಂಡೆ.

 ಯೆಹೋವನ ಸಾಕ್ಷಿಗಳ ಎಲ್ಲ ಕೂಟಗಳಿಗೂ ಹೋಗೋಕೆ ಶುರು ಮಾಡ್ದೆ. ಅವರು ದೇವರು ಇಷ್ಟ ಪಡೋ ಥರ ಜೀವ್ನ ಮಾಡೋಕೆ ಪ್ರಯತ್ನ ಮಾಡ್ತಾರೆ. ಇವರ ಜೊತೆ ನಾನು ಸಹವಾಸ ಮಾಡಿದ್ರಿಂದ ನನಗಿದ್ದ ಕೆಟ್ಟ ಅಭ್ಯಾಸಗಳನ್ನ ಬಿಡೋಕೆ ಸಹಾಯ ಸಿಗ್ತು. ಆಮೇಲೆ, 2002 ರಲ್ಲಿ ನಾನು ಯೆಹೋವನ ಸಾಕ್ಷಿಯಾಗಿ ದೀಕ್ಷಾಸ್ನಾನ ತಗೊಂಡೆ.

ಸಿಕ್ಕಿದ ಪ್ರಯೋಜನಗಳು

 ‘ಯೆಹೋವ ದೇವರು ಯಾವನಾದರೂ ನಾಶವಾಗುವುದನ್ನು ಇಷ್ಟಪಡದೆ, ಎಲ್ಲರೂ ಪಶ್ಚಾತ್ತಾಪವನ್ನು ಹೊಂದುವುದನ್ನು ಬಯಸುವುದರಿಂದ ನಿಮ್ಮ ವಿಷಯದಲ್ಲಿ ತಾಳ್ಮೆಯಿಂದಿದ್ದಾನೆ’ ಅಂತ ಬೈಬಲ್‌ ಹೇಳುತ್ತೆ. (2 ಪೇತ್ರ 3:9) ಯೆಹೋವ ದೇವರು ಹೀಗೆ ತಾಳ್ಮೆ ತೋರಿಸಿದ್ರಿಂದ ನಂಗೆ ತುಂಬ ಪ್ರಯೋಜನ ಆಗಿದೆ. ಯೆಹೋವ ದೇವರು ಬಯಸಿದ್ರೆ ಈ ಕೆಟ್ಟತನವನ್ನ ಎಷ್ಟೋ ವರ್ಷಗಳ ಹಿಂದೆನೇ ತೆಗೆದುಹಾಕ್ತಿದ್ರು. ಆದ್ರೆ ನನ್ನಂಥವರು ಬದಲಾಗಿ ಆತನ ಜೊತೆ ಸ್ನೇಹ ಬೆಳೆಸಿಕೊಳ್ಳಬೇಕು ಅಂತ ಇಷ್ಟು ದಿವಸ ಕೆಟ್ಟತನವನ್ನ ಸಹಿಸಿಕೊಂಡಿದ್ದಾರೆ. ನನ್ನ ಥರನೇ ಬೇರೆಯವ್ರೂ ಬದಲಾಗೋಕೆ ಆತ ನನ್ನನ್ನ ಬಳಸಬಹುದು ಅಂತ ನಂಗನಿಸುತ್ತೆ.

 ಹಿಂದೆ ನನ್ನ ಜೀವ್ನ ಗೊತ್ತು ಗುರಿ ಇಲ್ಲದೇ ಹದಗೆಟ್ಟಿತ್ತು, ಆದ್ರೆ ಈಗ ಯೆಹೋವನ ಸಹಾಯದಿಂದ ನಂಗೊಂದು ಗುರಿ ಇದೆ. ನಾನು ಮೊದಲಿನ ಥರ ಕೆಟ್ಟ ಚಟಕ್ಕೋಸ್ಕರ ಈಗ ಜನರ ಹತ್ರ ಏನನ್ನೂ ಕದಿಯಲ್ಲ. ಬದ್ಲಿಗೆ, ಯೆಹೋವನ ಸ್ನೇಹಿತರಾಗೋಕೆ ಅವ್ರಿಗೆ ಸಹಾಯ ಮಾಡ್ತಿದ್ದೀನಿ. ಯೆಹೋವನ ಸಾಕ್ಷಿಗಳ ಜೊತೆ ಸ್ನೇಹ ಮಾಡಿದಾಗ ನನಗೆ ಟೀ ಅನ್ನೋವ್ರ ಪರಿಚಯ ಆಯ್ತು. ಅವ್ರನ್ನ ನಾನು ಮದ್ವೆ ಆದೆ. ಈಗ ನನ್ನ ಮುದ್ದಿನ ಮಗನ ಜೊತೆ ಸೇರಿ ನಾವು ಮೂರು ಜನ ಖುಷಿ ಖುಷಿಯಾಗಿ ಇದ್ದೀವಿ. ಮುಂದೆ ಈ ಭೂಮೀಲಿ ಎಲ್ಲರೂ ಶಾಶ್ವತವಾಗಿ ಶಾಂತಿ ಸಮಾಧಾನದಿಂದ ಜೀವಿಸಬಹುದು ಅಂತ ಬೈಬಲ್‌ ಹೇಳೋ ಸುವಾರ್ತೆಯನ್ನ ಎಲ್ಲರಿಗೂ ಹೇಳ್ತಿದ್ದೀವಿ.