ಮಾಹಿತಿ ಇರುವಲ್ಲಿ ಹೋಗಲು

ತಮ್ಮನ್ನು ಮನಃಪೂರ್ವಕವಾಗಿ ನೀಡಿಕೊಂಡರು—ಬಲ್ಗೇರಿಯಾದಲ್ಲಿ

ತಮ್ಮನ್ನು ಮನಃಪೂರ್ವಕವಾಗಿ ನೀಡಿಕೊಂಡರು—ಬಲ್ಗೇರಿಯಾದಲ್ಲಿ

 ಬಲ್ಗೇರಿಯಾದಲ್ಲಿ ಇರುವ ಯೆಹೋವನ ಸಾಕ್ಷಿಗಳು ದೇವರ ಬಗ್ಗೆ ಮತ್ತು ಬೈಬಲಿನ ಬಗ್ಗೆ ಜನರಿಗೆ ಕಲಿಸುವುದರಲ್ಲಿ ಬ್ಯೂಸಿ಼ ಆಗಿದ್ದಾರೆ. ಅವರಿಗೆ ಸಹಾಯಮಾಡಲು ಬೇರೆಬೇರೆ ದೇಶದಿಂದ ನೂರಾರು ಯೆಹೋವನ ಸಾಕ್ಷಿಗಳು ಇಸವಿ 2000ದಿಂದ ಬಲ್ಗೇರಿಯಾಗೆ ಹೋಗಿ ಅಲ್ಲೇ ಇದ್ದು ಸೇವೆ ಮಾಡ್ತಿದ್ದಾರೆ. ಅವರಿಗೆ ಏನೇನು ಕಷ್ಟ ಬಂತು? ಅಲ್ಲಿಗೆ ಹೋದದ್ದು ಸಾರ್ಥಕ ಅಂತ ಅವರಿಗೆ ಯಾಕೆ ಅನಿಸಿತು? ಅವರೇ ಏನು ಹೇಳ್ತಾರೆ ಕೇಳಿ.

ಗುರಿ ಇಟ್ಟರು

 ಇಂಗ್ಲೆಂಡ್‌ನಲ್ಲಿದ್ದ ಡೇರನ್‌ ಅನುಭವ ಕೇಳಿ: “ಸಾರುವ ಕೆಲಸಕ್ಕೆ ಸಹಾಯ ಬೇಕಾಗಿರೋ ದೇಶಕ್ಕೆ ಹೋಗಿ ಸೇವೆ ಮಾಡಬೇಕು ಅನ್ನೋದೇ ನಮ್ಮ ಗುರಿ ಆಗಿತ್ತು. ಮದುವೆ ಆದ್ಮೇಲೆ ನಾನು, ನನ್ನ ಹೆಂಡತಿ ಡಾನ್‌ ನಮ್ಮ ದೇಶದಲ್ಲೇ ಇರುವ ಬೇರೆ ಸ್ಥಳಕ್ಕೆ ಅಂದ್ರೆ ಲಂಡನ್‌ಗೆ ಹೋಗಿ ಅಲ್ಲೇ ಉಳುಕೊಂಡು ರಷ್ಯನ್‌ ಭಾಷೆ ಮಾತಾಡುವ ಜನರಿಗೆ ಬೈಬಲ್‌ ಕಲಿಸಲು ಸಹಾಯಮಾಡಿದ್ವಿ. ಎರಡು ಮೂರು ಸಲ ಹೊರ ದೇಶಕ್ಕೆ ಹೋಗಲಿಕ್ಕೆ ಪ್ಲಾನ್‌ ಮಾಡಿದ್ವಿ. ಆದ್ರೆ ಏನೇನೋ ಕಾರಣದಿಂದ ಹೋಗಲಿಕ್ಕೆ ಆಗ್ಲಿಲ್ಲ. ನಮಗೆ ಹೋಗಲಿಕ್ಕೆ ಆಗೋದೇ ಇಲ್ಲವೇನೋ ಅಂತ ಅನಿಸಿತು. ಆಮೇಲೆ ನಮ್ಮ ಸನ್ನಿವೇಶ ಬದಲಾಯಿತು. ಆಗ ನನ್ನ ಫ್ರೆಂಡ್‌ ಈಗ ನಿಮ್ಮ ಗುರಿ ಬಗ್ಗೆ ಯೋಚಿಸಬಹುದಲ್ಲಾ ಅಂದ.” ಬೈಬಲ್‌ ಕಲಿಸಲು ಹೆಚ್ಚು ಜನ ಬೇಕಾಗಿರುವ ದೇಶ ಯಾವುದಾದರೂ ಇದ್ಯಾ ಅಂತ ಗಂಡ-ಹೆಂಡತಿ ಇಬ್ಬರೂ ಹುಡುಕಿದ್ರು. ಅಲ್ಲಿಗೆ ಹೋಗೋಕೆ ತಮ್ಮಿಂದ ಆಗುತ್ತಾ ಅಂತಾನೂ ನೋಡಿದ್ರು. 2011 ರಲ್ಲಿ ಅವರು ಬಲ್ಗೇರಿಯಾಗೆ ಸೇವೆ ಮಾಡಲಿಕ್ಕೆ ಹೋದರು.

ಡೇರನ್‌ ಮತ್ತು ಡಾನ್‌

 ಕೆಲವರಿಗೆ ಬೇರೆ ದೇಶಕ್ಕೆ ಹೋಗಿ ಸೇವೆ ಮಾಡಬೇಕು ಅನ್ನೋ ಗುರಿ ಇರಲ್ಲ. ಆದರೆ ಆ ತರ ಬೇರೆ ದೇಶಕ್ಕೆ ಹೋಗಿ ಸೇವೆ ಮಾಡುತ್ತಿರುವವರ ಸಂತೋಷ ನೋಡಿ, ಅನುಭವ ಕೇಳಿ ಆ ಗುರಿ ಇಡ್ತಾರೆ. ಅವರಲ್ಲಿ ಜೇಡ ಕೂಡ ಒಬ್ಬರೂ. ಅವಳು ಮತ್ತು ಅವಳ ಗಂಡ ಲೂಕ ಇಟಲಿಯಲ್ಲಿ ಇದ್ದರು. ಜೇಡ ಹೇಳೋದು ಏನಂದ್ರೆ, “ದಕ್ಷಿಣ ಅಮೆರಿಕ ಮತ್ತು ಆಫ್ರಿಕಕ್ಕೆ ಹೋಗಿ ಹುರುಪಿನಿಂದ ಸೇವೆ ಮಾಡ್ತಿರುವ ಸಹೋದರಿಯರನ್ನು ನಾನು ಭೇಟಿ ಮಾಡಿದೆ. ಅವರು ತುಂಬ ಖುಷಿಯಾಗಿದ್ರು. ಅವರು ಹೇಳಿದ ಒಂದೊಂದು ಅನುಭವ ಕೇಳಿ ಮೈ ಜುಂ ಅಂತು. ಯೆಹೋವನ ಸೇವೆ ಜಾಸ್ತಿ ಮಾಡಲಿಕ್ಕೆ ಗುರಿ ಇಟ್ಟೆ.”

ಲೂಕ ಮತ್ತು ಜೇಡ

 ಚೆಕ್‌ ಗಣರಾಜ್ಯದಲ್ಲಿದ್ದ ಟೋಮಾಶ್‌ ಮತ್ತು ಅವನ ಹೆಂಡತಿ ವೆರೋನಿಕಗೆ ಇಬ್ಬರು ಮಕ್ಕಳು. ಅವರ ಹೆಸರು ಕ್ಲಾರ ಮತ್ತು ಮಟಿಯಾಶ್‌. ಇವರೆಲ್ಲ 2015 ರಲ್ಲಿ ಬಲ್ಗೇರಿಯಾಗೆ ಹೋಗಿ ಅಲ್ಲೇ ಇದ್ದು ಸೇವೆಮಾಡ್ತಿದ್ದಾರೆ. ಯಾಕೆ ಈ ತೀರ್ಮಾನ ಮಾಡಿದ್ರು? ಟೋಮಾಶ್‌ ಹೇಳೋದೇನಂದ್ರೆ, “ಬೇರೆ ದೇಶಕ್ಕೆ ಹೋಗಿ ಸೇವೆ ಮಾಡ್ತಿದ್ದವರ ಪರಿಚಯ ನಮಗಿತ್ತು. ನಮ್ಮ ಸಂಬಂಧಿಕರಲ್ಲೂ ಕೆಲವರು ಹಾಗೆ ಸೇವೆಮಾಡ್ತಿದ್ರು. ಅವರ ಒಳ್ಳೇ ಮಾದರಿ ಬಗ್ಗೆ, ಅವರಿಗೆ ಸಿಕ್ಕಿದ ಅನುಭವಗಳ ಬಗ್ಗೆ ಯೋಚನೆ ಮಾಡಿದ್ವಿ. ಅವರ ಖುಷಿ ನೋಡಿ ಅದರ ಬಗ್ಗೆನೇ ಮನೆಯಲ್ಲಿ ಮಾತಾಡ್ತಿದ್ವಿ.” ಈಗ ಈ ಸುಖೀ ಕುಟುಂಬ ಬಲ್ಗೇರಿಯಾದ ಮಾನ್‌ಟಾನ ಪಟ್ಟಣಕ್ಕೆ ಹೋಗಿ ಸೇವೆ ಮಾಡ್ತಿದ್ದಾರೆ.

ಕ್ಲಾರ, ಟೋಮಾಶ್‌, ವೆರೋನಿಕ, ಮಟಿಯಾಶ್‌

 ಬಲ್ಗೇರಿಯಾಗೆ ಹೋಗಿ ಸೇವೆ ಮಾಡ್ತಿರುವವರಲ್ಲಿ ಲಿಂಡ ಕೂಡ ಒಬ್ಬಳು. “ತುಂಬ ವರ್ಷದ ಹಿಂದೆ ನಾನು ಈಕ್ವೆಡಾರ್‌ಗೆ ಹೋಗಿದ್ದಾಗ ಬೇರೆಬೇರೆ ಸ್ಥಳದಿಂದ ಅಲ್ಲಿಗೆ ಬಂದು ಸೇವೆ ಮಾಡ್ತಿರುವವರನ್ನು ಭೇಟಿಮಾಡಿದೆ. ಅವರನ್ನು ನೋಡಿ ನನಗೂ ಅಗತ್ಯ ಇರುವ ಸ್ಥಳಕ್ಕೆ ಹೋಗಿ ಸೇವೆ ಮಾಡಬೇಕು ಅಂತ ಅನಿಸಿತು” ಅನ್ನುತಾಳೆ ಲಿಂಡ. ಫಿನ್‌ಲ್ಯಾಂಡ್‌ನಲ್ಲಿದ್ದ ಪೀಟರಿ ಮತ್ತು ಅವನ ಹೆಂಡತಿ ನಾಡ್ಯ ಕೂಡ ಬೇರೆ ಕಡೆ ಹೋಗಿ ಸೇವೆ ಮಾಡುವವರ ಮಾದರಿ ಬಗ್ಗೆ ಯೋಚನೆ ಮಾಡಿದರು. ಅವರು ಹೇಳೋದು ಏನಂದ್ರೆ, “ನಮ್ಮ ಸಭೆಯಲ್ಲಿದ್ದ ಕೆಲವು ಅನುಭವಸ್ಥ ಪ್ರಚಾರಕರು ಬೇರೆ ಸ್ಥಳಕ್ಕೆ ಹೋಗಿ ಅಲ್ಲೇ ಮನೆ ಮಾಡಿಕೊಂಡು ಜನರಿಗೆ ಬೈಬಲ್‌ ಬಗ್ಗೆ ಕಲಿಸ್ತಿದ್ರು. ಅಲ್ಲಿನ ಸೇವೆ ಬಗ್ಗೆ ಮಾತಾಡುವಾಗ ಅವರಲ್ಲಿ ಏನೋ ಒಂದು ಉತ್ಸಾಹ ಇರ್ತಿತ್ತು. ಜೀವನದಲ್ಲಿ ಮರೆಯಲಿಕ್ಕೆ ಆಗದೆ ಇರೋ ವರ್ಷಗಳು ಅಂದ್ರೆ ಅದೇ ಅಂತ ಅವರು ಹೇಳಿದ್ರು.”

ಲಿಂಡ

ನಾಡ್ಯ ಮತ್ತು ಪೀಟರಿ

ಮೊದಲೇ ಪ್ಲಾನ್‌ ಮಾಡಿದರು

 ಹೊರ ದೇಶಕ್ಕೆ ಹೋಗಿ ಸೇವೆ ಮಾಡಬೇಕಾದ್ರೆ ಚೆನ್ನಾಗಿ ಪ್ಲಾನ್‌ ಮಾಡಬೇಕು. (ಲೂಕ 14:28-30) ಬೆಲ್ಜಿಯಂನ ನೀಲ ಎಂಬ ಸಹೋದರಿ ಹೇಳೋದೇನಂದ್ರೆ, “ಬೇರೆ ದೇಶಕ್ಕೆ ಹೋಗಿ ಸೇವೆ ಮಾಡಲೇಬೇಕು ಅನ್ನೋ ಯೋಚನೆ ಬಂದಾಗ ನಾನು ತುಂಬ ಪ್ರಾರ್ಥನೆ ಮಾಡಿ ಇದಕ್ಕೆ ಸಂಬಂಧಪಟ್ಟ ಲೇಖನಗಳನ್ನು ಹುಡುಕಿದೆ, ಓದಿದೆ ಮತ್ತು ನಾನು ಏನೇನು ಮಾಡಬೇಕು ಅಂತಾನೂ ಅರ್ಥಮಾಡಿಕೊಂಡೆ.”

ನೀಲ (ಬಲಕ್ಕೆ)

 ಪೋಲೆಂಡಿನಲ್ಲಿದ್ದ ಕ್ರಿಸ್ಟಿಯಾನ್‌ ಮತ್ತು ಅವನ ಹೆಂಡತಿ ಇರ್ಮೀನ 9ಕ್ಕಿಂತ ಹೆಚ್ಚು ವರ್ಷಗಳಿಂದ ಬಲ್ಗೇರಿಯಾದಲ್ಲಿ ಸೇವೆ ಮಾಡ್ತಿದ್ದಾರೆ. ಪೋಲೆಂಡಲ್ಲಿ ಇರುವಾಗಲೇ ಅವರು ಕೂಟಗಳಿಗಾಗಿ ಬಲ್ಗೇರಿಯನ್‌ ಭಾಷೆಯ ಗುಂಪಿಗೆ ಹೋಗ್ತಿದ್ರು. ಇದು ಅವರಿಗೆ ತುಂಬ ಸಹಾಯ ಮಾಡಿತು. ಆ ಗುಂಪಲ್ಲಿ ಇದ್ದವರು ಭಾಷೆ ಕಲಿಯಲಿಕ್ಕೆ ತುಂಬ ಸಹಾಯ ಮಾಡಿದರು, ತುಂಬ ಪ್ರೋತ್ಸಾಹ ಕೊಟ್ಟರು. ಕ್ರಿಸ್ಟಿಯಾನ್‌ ಮತ್ತು ಇರ್ಮೀನ ಹೀಗೆ ಹೇಳ್ತಾರೆ, “ಯೆಹೋವ ದೇವರ ಸೇವೆ ಮಾಡಬೇಕು ಅಂತ ಹೆಜ್ಜೆ ತಗೊಂಡಾಗ ಆತನು ನಮಗೆ ಬೇಕಾಗಿರೋದನ್ನು ಕೊಡ್ತಾನೆ. ಅದು ನಿಜವಾಗಲೂ ಒಂದು ಅದ್ಭುತ. ‘ನಾನಿದ್ದೇನೆ, ನನ್ನನ್ನು ಕಳುಹಿಸು’ ಅಂತ ನಾವು ಯೆಹೋವನಿಗೆ ಹೇಳಿದರೆ ಸಾಕು, ನಮ್ಮಿಂದ ಮಾಡಕ್ಕಾಗಲ್ಲ ಅಂತ ನೆನೆಸೋ ವಿಷ್ಯವನ್ನು ಕೂಡ ನಮ್ಮಿಂದ ಮಾಡಕ್ಕಾಗುತ್ತೆ.”—ಯೆಶಾಯ 6:8.

ಕ್ರಿಸ್ಟಿಯಾನ್‌ ಮತ್ತು ಇರ್ಮೀನ

 ಸ್ವಿಟ್ಜರ್ಲೆಂಡ್‌ನಲ್ಲಿರೋ ರಿಟೋ ಮತ್ತು ಅವನ ಹೆಂಡತಿ ಕೊರ್ನೀಲ್ಯ ಬೇರೆ ದೇಶಕ್ಕೆ ಹೋಗಿ ಸೇವೆ ಮಾಡಬೇಕು ಅನ್ನೋ ಉದ್ದೇಶದಿಂದ ಸರಳ ಜೀವನ ನಡೆಸಲು ತೀರ್ಮಾನ ಮಾಡಿದರು. ಇದ್ರಿಂದ ಅವರಿಗೆ ಹಣ ಕೂಡಿಸಿ ಇಡಲಿಕ್ಕೂ ಆಯ್ತು. ಗಂಡಹೆಂಡತಿ ಏನು ಹೇಳ್ತಾರಂದ್ರೆ, “ಮೊದಲು ನಾವು ಬಲ್ಗೇರಿಯಾಗೆ ಹೋಗಿ ಒಂದು ವಾರ ಇದ್ದು ಆ ಜಾಗ ಹೇಗಿದೆ ಅಂತ ನೋಡಿಕೊಂಡು ಬಂದ್ವಿ. ಅನುಭವವಿರುವ ಮಿಷನರಿಗಳ ಹತ್ರ ಮಾತಾಡಿದ್ವಿ. ಅವರು ಒಳ್ಳೊಳ್ಳೆ ಸಲಹೆ ಕೊಟ್ಟರು. ಒಂದು ವರ್ಷ ಬಿಟ್ಟು ಬಲ್ಗೇರಿಯಾಗೆ ಹೋಗಿ ಅಲ್ಲೇ ಇದ್ದು ಸೇವೆ ಶುರುಮಾಡಿದ್ವಿ.” ರಿಟೋ ಮತ್ತು ಕೊರ್ನೀಲ್ಯ ಆ ಮಿಷನರಿಗಳು ಹೇಳಿದ ಹಾಗೆ ಮಾಡಿದ್ರು. ಅವರೀಗ 20ಕ್ಕಿಂತ ಹೆಚ್ಚು ವರ್ಷದಿಂದ ಬಲ್ಗೇರಿಯಾದಲ್ಲೇ ಸೇವೆ ಮಾಡ್ತಿದ್ದಾರೆ.

ಕೊರ್ನೀಲ್ಯ, ರಿಟೋ ಮತ್ತು ಅವರ ಮಕ್ಕಳು ಲೂಕ ಮತ್ತು ಯಾನಿಕ್‌

ಕಷ್ಟಗಳನ್ನು ನಿಭಾಯಿಸಿದರು

 ಹೊಸ ಜಾಗಕ್ಕೆ ಹೋದ ಮೇಲೆ ಹೊಸಹೊಸ ಕಷ್ಟ ಬರುತ್ತೆ. (ಅಪೊಸ್ತಲರ ಕಾರ್ಯ 16:9, 10; 1 ಕೊರಿಂಥ 9:19-23) ಹೆಚ್ಚಿನವರಿಗೆ ಬರುವ ಒಂದು ದೊಡ್ಡ ಕಷ್ಟ ಹೊಸ ಭಾಷೆ ಕಲಿಯೋದು. ಮೇಲೆ ತಿಳಿಸಿದ ಲೂಕ ಏನ್‌ ಹೇಳ್ತಾರೆ ನೋಡಿ, “ನಾವು ಕೂಟಗಳಲ್ಲಿ ಯಾವಾಗಲೂ ಸ್ವಂತ ಮಾತಲ್ಲಿ ಉತ್ತರ ಕೊಡ್ತಿದ್ವಿ. ಅದು ನಮಗೆ ತುಂಬ ಇಷ್ಟ. ಆದ್ರೆ ಬಲ್ಗೇರಿಯಗೆ ಹೋದಾಗ ಮೊದಮೊದಲು ಒಂದು ಚಿಕ್ಕ ಉತ್ತರ ತಯಾರು ಮಾಡಲಿಕ್ಕೂ ಆಗ್ಲಿಲ್ಲ. ಮತ್ತೆ ಮಕ್ಕಳ ತರ ಆಗಿದ್ದೀವೇನೋ ಅಂತ ಅನಿಸ್ತಿತ್ತು. ನಮ್‌ ಉತ್ತರಕ್ಕಿಂತ ಅಲ್ಲಿರೋ ಮಕ್ಕಳು ಕೊಡೋ ಉತ್ತರನೇ ಎಷ್ಟೋ ಚೆನ್ನಾಗಿತ್ತು.”

 ಜರ್ಮನಿಯ ರಾವಿಲ್‌ ಹೀಗೆ ಹೇಳ್ತಾರೆ: “ಹೊಸ ಭಾಷೆ ಕಲಿಯುವಾಗ ಸಾಕು ಸಾಕಾಗಿ ಹೋಗ್ತಿತ್ತು. ಆದ್ರೂ ನಾನು ಬಿಡಲಿಲ್ಲ. ನಮ್ಮ ತಪ್ಪು ನೋಡಿ ನಾವೇ ನಗಾಡಬೇಕು, ಆಗಲೇ ಕಲಿಯಕ್ಕೆ ಆಗೋದು. ಭಾಷೆ ಕಲಿಯೋದು ಸುಲಭ ಅಲ್ಲ ನಿಜ. ಆದ್ರೆ ಇದು ದೊಡ್ಡ ಕಷ್ಟ ಅಂತ ನಾನು ನೋಡಲ್ಲ. ಯೆಹೋವನ ಸೇವೆಯಲ್ಲಿ ಇದನ್ನೆಲ್ಲ ಮಾಡಬೇಕಲ್ವಾ?”

ರಾವಿಲ್‌ ಮತ್ತು ಲಿಲಿ

 ಮೇಲೆ ತಿಳಿಸಿದ ಲಿಂಡ ಏನ್‌ ಹೇಳ್ತಾಳೆ ನೋಡಿ, “ನನಗೆ ಹೊಸ ಭಾಷೆ ಕಲಿಯೋದು ಸ್ವಲ್ಪ ಕಷ್ಟನೇ. ಬಲ್ಗೇರಿಯನ್‌ ಭಾಷೆ ತುಂಬ ಕಷ್ಟ. ಇದನ್ನು ಕಲಿಯೋಕೆ ನನ್ನಿಂದ ಆಗಲ್ಲಪ್ಪ, ಬಿಟ್ಟುಬಿಡೋಣ ಅಂತ ಎಷ್ಟೋ ಸಲ ಅಂದ್ಕೊಂಡೆ. ಬೇರೆಯವರ ಹತ್ರ ನಿಮಗೆ ಮಾತಾಡಕ್ಕೆ ಆಗದೇ ಇರೋವಾಗ, ಅವರು ಮಾತಾಡೋದು ನಿಮಗೆ ಅರ್ಥ ಆಗದೇ ಇರೋವಾಗ ತುಂಬ ಬೇಜಾರಾಗುತ್ತೆ. ಯೆಹೋವನ ಜೊತೆ ನನ್ನ ಸಂಬಂಧ ಕಾಪಾಡಿಕೊಳ್ಳೋದೇ ನನಗೆ ಮುಖ್ಯ ಆಗಿತ್ತು. ಹಾಗಾಗಿ ಸ್ವೀಡಿಷ್‌ ಭಾಷೆಯಲ್ಲೇ ವೈಯಕ್ತಿಕ ಅಧ್ಯಯನ ಮಾಡ್ತಿದ್ದೆ. ಬಲ್ಗೇರಿಯನ್‌ ಭಾಷೆ ಕಲಿಯಲು ಸಹೋದರ ಸಹೋದರಿಯರು ತುಂಬ ಸಹಾಯಮಾಡಿದರು. ಕೊನೆಗೂ ಆ ಭಾಷೆ ಕಲಿತೆ.”

 ಹೊಸ ದೇಶಕ್ಕೆ ಹೋದಾಗ ಬರೋ ಇನ್ನೊಂದು ಕಷ್ಟ ಮನೆ ನೆನಪು. ಮನೆಯಲ್ಲಿ ಇರುವವರಿಂದ, ಸ್ನೇಹಿತರಿಂದ ದೂರ ಇರೋದು ಅಷ್ಟು ಸುಲಭ ಅಲ್ಲ. ಇವಾ ಮತ್ತು ಅವಳ ಗಂಡ ಯಾನೀಸ್‌ ಬಲ್ಗೇರಿಯಾಗೆ ಹೋಗಿ ಅಲ್ಲೇ ಸೇವೆ ಮಾಡ್ತಿದ್ದಾರೆ. ಅವರಿಗೆ ಏನು ಕಷ್ಟ ಬಂತು? ಇವಾ ಹೇಳ್ತಾಳೆ: “ಮೊದಮೊದಲು ಇಲ್ಲಿ ನಮಗೆ ಯಾರೂ ಇಲ್ವೇನೋ ಅಂತ ಅನಿಸ್ತಿತ್ತು. ಇಂಥ ಭಾವನೆಯನ್ನು ತೆಗೆದುಹಾಕಲಿಕ್ಕೆ ನಮ್ಮೂರಲ್ಲಿದ್ದ ಫ್ರೆಂಡ್ಸ್‌ ಜೊತೆ, ಕುಟುಂಬದವರ ಜೊತೆ ಯಾವಾಗಲೂ ಮಾತಾಡ್ತಿದ್ವಿ. ಈ ಊರಲ್ಲೂ ಹೊಸ ಫ್ರೆಂಡ್ಸ್‌ನ ಮಾಡ್ಕೊಂಡ್ವಿ.”

ಯಾನೀಸ್‌ ಮತ್ತು ಇವಾ

 ಹೊಸ ದೇಶಕ್ಕೆ ಹೋದಾಗ ಬೇರೆ ಕಷ್ಟಗಳೂ ಬರುತ್ತೆ. ಸ್ವಿಟ್ಜರ್ಲೆಂಡ್‌ನಲ್ಲಿರೋ ರಾಬರ್ಟ್‌ ಮತ್ತು ಲಿಯೇನ ಏನು ಹೇಳ್ತಾರೆ ನೋಡಿ, “ಇಲ್ಲಿ ಭಾಷೆ, ಸಂಸ್ಕೃತಿ ಎಲ್ಲ ಹೊಸದು. ತುಂಬ ಚಳಿ ಬೇರೆ. ಇಷ್ಟೊಂದು ಚಳಿ ಇದೆ ಅಂತ ನೆನಸೇ ಇರಲಿಲ್ಲ.” ಆದ್ರೂ ಈ ದಂಪತಿ ಬಿಡಲಿಲ್ಲ, ತುಂಬ ಪಾಸಿಟಿವ್‌ ಆಗಿದ್ರು. ಯಾವಾಗಲೂ ನಗುನಗುತ್ತಾ ನಗಾಡಿಸ್ತಾ ಇರೋದೇ ಇವರ ಸ್ವಭಾವ. ಹಾಗಾಗಿ ಇವರು ಕಳೆದ 14 ವರ್ಷದಿಂದ ಬಲ್ಗೇರಿಯಾದಲ್ಲಿ ಸೇವೆ ಮಾಡ್ತಿದ್ದಾರೆ.

ರಾಬರ್ಟ್‌ ಮತ್ತು ಲಿಯೇನ

ಅವರಿಗೆ ಸಿಕ್ಕಿದ ಆಶೀರ್ವಾದಗಳು

 ಸಾರುವ ಕೆಲಸಕ್ಕೆ ಸಹಾಯ ಬೇಕಾಗಿರುವ ಸ್ಥಳಗಳಿಗೆ ಹೋಗಿ ಸಾರಿ ಅಂತ ಲಿಲಿ ಬೇರೆಯವರನ್ನು ಪ್ರೋತ್ಸಾಹಿಸುತ್ತಾಳೆ. ಯಾಕೆ? ಅವಳು ಹೇಳೋದು ಏನಂದ್ರೆ, “ನೆನಸಲಿಕ್ಕೇ ಆಗದೇ ಇರೋ ವಿಧದಲ್ಲಿ ಯೆಹೋವನು ನನಗೆ ಸಹಾಯ ಮಾಡಿದ್ದಾನೆ. ನಾನು ಏನಾದ್ರೂ ನನ್ನ ಊರಲ್ಲೇ ಇದ್ದಿದ್ರೆ ಈ ಸಹಾಯವನ್ನೆಲ್ಲ ಪಡೆದುಕೊಳ್ಳುತ್ತಿರಲಿಲ್ಲ ಅಂತ ಅನಿಸುತ್ತೆ. ನಾನು ಬೇರೆಯವರಿಗೆ ಸಹಾಯ ಮಾಡೋದ್ರಲ್ಲಿ ಬ್ಯೂಸಿ಼ಯಾಗಿ ಇರ್ತಿನಿ. ಇದ್ರಿಂದ ನಾನು ಯೆಹೋವನಿಗೆ ತುಂಬ ಹತ್ರ ಆಗಿದ್ದೇನೆ. ಸಂತೋಷ ಸಂತೃಪ್ತಿಯಿಂದ ಇದ್ದೇನೆ.” ಇದನ್ನು ಅವಳ ಗಂಡ ರಾವಿಲ್‌ ಒಪ್ಕೊಳ್ತಾನೆ. ಅವನು ಹೇಳೋದು, “ಈ ಸೇವೆ ಮಾಡೋದ್ರಿಂದ ಬೇರೆ ಬೇರೆ ದೇಶದಿಂದ ಬಂದಿರೋ ಸಹೋದರ ಸಹೋದರಿಯರ ಪರಿಚಯ ಆಗಿದೆ. ಸೇವೆಯಲ್ಲಿ ಅವರಿಗಿರುವ ಹುರುಪು ಅನುಭವದಿಂದ ನಾನು ತುಂಬ ಕಲಿತಿದ್ದೀನಿ. ಇದು ನಮಗೆ ಸಿಕ್ಕಿರೋ ಅದ್ಭುತ ಅವಕಾಶ ಅನ್ನಬಹುದು.”

 ಈ ರೀತಿ ತುಂಬ ಸಹೋದರ ಸಹೋದರಿಯರು ಸಾರುವ ಕೆಲಸಕ್ಕೆ ಸಹಾಯ ಬೇಕಾಗಿರೋ ಸ್ಥಳಗಳಿಗೆ ಹೋಗಿ ಮನಸಾರೆ ಸೇವೆ ಮಾಡ್ತಿದ್ದಾರೆ. ಇದ್ರಿಂದ ‘ದೇವರ ರಾಜ್ಯದ ಸುವಾರ್ತೆ ಭೂಮಿಯಾದ್ಯಂತ‘ ಸಾರಲು ಆಗಿದೆ. (ಮತ್ತಾಯ 24:14) ಬಲ್ಗೇರಿಯಾದಲ್ಲಿ ಇರುವವರಿಗೆ ಸಹಾಯ ಮಾಡಲಿಕ್ಕಾಗಿ ಅನೇಕ ಸಹೋದರ ಸಹೋದರಿಯರು ಖುಷಿಯಿಂದ ಬಂದಿದ್ದಾರೆ. ಅವರೆಲ್ಲ ತಮ್ಮ ಆಸೆಗಳನ್ನು ಯೆಹೋವನು ಹೇಗೆ ಈಡೇರಿಸಿದ್ದಾನೆ, ತಮ್ಮ ಯೋಜನೆಗಳನ್ನು ಹೇಗೆ ಯಶಸ್ವಿಗೊಳಿಸಿದ್ದಾನೆ ಅನ್ನೋದನ್ನು ಕಣ್ಣಾರೆ ನೋಡಿದ್ದಾರೆ.—ಕೀರ್ತನೆ 20:1-4.