ಮಾಹಿತಿ ಇರುವಲ್ಲಿ ಹೋಗಲು

ಬೈಬಲ್‌ ವಚನಗಳ ವಿವರಣೆ

ಯೆರೆಮೀಯ 29:11—“ನಿಮ್ಮ ವಿಷಯದಲ್ಲಿ ಮಾಡಿಕೊಳ್ಳುತ್ತಿರುವ ಆಲೋಚನೆಗಳನ್ನು ನಾನೇ ಬಲ್ಲೆ”

ಯೆರೆಮೀಯ 29:11—“ನಿಮ್ಮ ವಿಷಯದಲ್ಲಿ ಮಾಡಿಕೊಳ್ಳುತ್ತಿರುವ ಆಲೋಚನೆಗಳನ್ನು ನಾನೇ ಬಲ್ಲೆ”

 “ಯೆಹೋವ a ಹೇಳೋದು ಏನಂದ್ರೆ ‘ನಿಮಗೆ ಒಳ್ಳೇದು ಮಾಡಬೇಕಂತ ಯೋಚ್ನೆ ಮಾಡಿದ್ದೀನಿ. ನೀವು ಶಾಂತಿ ನೆಮ್ಮದಿಯಿಂದ ಬದುಕಬೇಕು, ನಿಮಗೆ ಕೆಟ್ಟದು ಆಗಬಾರದು, ನಿಮ್ಮ ಭವಿಷ್ಯ ಚೆನ್ನಾಗಿರಬೇಕು, ನೀವು ಒಳ್ಳೇದನ್ನ ಎದುರುನೋಡಬೇಕು ಅನ್ನೋದೇ ನನ್ನ ಆಸೆ.’”—ಯೆರೆಮೀಯ 29:11, ಹೊಸ ಲೋಕ ಭಾಷಾಂತರ.

 “ಇವರಿಗೆ ಗತಿಯಾಗಲಿ, ನಿರೀಕ್ಷೆಯಿರಲಿ ಎಂದು ನಾನು ನಿಮ್ಮ ವಿಷಯದಲ್ಲಿ ಮಾಡಿಕೊಳ್ಳುತ್ತಿರುವ ಆಲೋಚನೆಗಳನ್ನು ನಾನೇ ಬಲ್ಲೆನು; ಅವು ಅಹಿತದ ಯೋಚನೆಗಳಲ್ಲ, ಹಿತದ ಯೋಚನೆಗಳೇ.”—ಯೆರೆಮೀಯ 29:11, ಸತ್ಯವೇದವು.

ಯೆರೆಮೀಯ 29:11—ಅರ್ಥ

 ಈ ಮಾತುಗಳನ್ನು ಯೆಹೋವ ದೇವರು ಹಿಂದಿನ ಕಾಲದಲ್ಲಿದ್ದ ತನ್ನ ಜನರಿಗೋಸ್ಕರ ಬರೆಸಿದನು. ಅವರಿಗೊಂದು ಒಳ್ಳೇ ಭವಿಷ್ಯ ಸಿಗುವ ಹಾಗೆ, ಶಾಂತಿ ನೆಮ್ಮದಿಯಿಂದ ಜೀವಿಸುವ ಹಾಗೆ ಮಾಡುತ್ತೇನೆ ಅಂತ ಆತನು ಮಾತುಕೊಟ್ಟಿದ್ದನು. ಇವತ್ತು ಕೂಡ ಯೆಹೋವ ದೇವರು ತನ್ನ ಜನರಿಗೆ ಒಳ್ಳೇ ಭವಿಷ್ಯ ಸಿಗಬೇಕು ಅಂತ ಇಷ್ಟಪಡುತ್ತಾನೆ. ಆತನು ‘ನಿರೀಕ್ಷೆ ಕೊಡೋ ದೇವರು.’ (ರೋಮನ್ನರಿಗೆ 15:13) ನಿಜ ಹೇಳಬೇಕಂದ್ರೆ, ಉತ್ತಮ ಭವಿಷ್ಯಕ್ಕಾಗಿ “ನಮಗೀಗ ನಿರೀಕ್ಷೆ” ಇರಬೇಕು ಅಂತಾನೇ ಆತನು ಕೊಟ್ಟ ಆ ಮಾತುಗಳನ್ನು ಬರೆಸಿಟ್ಟಿದ್ದಾನೆ.—ರೋಮನ್ನರಿಗೆ 15:4.

ಯೆರೆಮೀಯ 29:11—ಸಂದರ್ಭ

 ಈ ಮಾತುಗಳು ಬಾಬೆಲಿನಲ್ಲಿದ್ದ ಇಸ್ರಾಯೇಲ್ಯರಿಗೆ ಬರೆದ ಪತ್ರದಲ್ಲಿದ್ದವು. b ಅವರು ಯೆರೂಸಲೇಮಿಂದ ಕೈದಿಗಳಾಗಿ ಹೋಗಿದ್ದರು. (ಯೆರೆಮೀಯ 29:1) ಅವರು ಆ ದೇಶದಲ್ಲಿ ತುಂಬ ವರ್ಷ ಕೈದಿಗಳಾಗಿರುತ್ತಾರೆ, ಅಲ್ಲೇ ಅವರು ಮನೆ ಕಟ್ಟಿಕೊಂಡು, ತೋಟಗಳನ್ನು ಮಾಡಿಕೊಂಡು, ಮದುವೆ ಮಕ್ಕಳು ಮಾಡಿಕೊಂಡು ಇರಬೇಕು ಅಂತ ದೇವರು ಹೇಳಿದನು. (ಯೆರೆಮೀಯ 29:4-9) ದೇವರು ಅವರಿಗೆ ಇನ್ನೂ ಏನು ಹೇಳಿದನು ನೋಡಿ: “ನೀವು ಬಾಬೆಲಲ್ಲಿ 70 ವರ್ಷ ಕಳೆದ್ಮೇಲೆ ನಿಮಗೆ ಗಮನ ಕೊಡ್ತೀನಿ. ನಿಮಗೆ ಮಾತು ಕೊಟ್ಟ ಹಾಗೆ ನಿಮ್ಮನ್ನ ವಾಪಸ್‌ [ಯೆರೂಸಲೇಮಿಗೆ] ಕರ್ಕೊಂಡು ಬರ್ತಿನಿ.” (ಯೆರೆಮೀಯ 29:10) ಈ ರೀತಿ ಅವರನ್ನು ಮರೆಯಲ್ಲ, ಅವರು ಸ್ವಂತ ಊರಿಗೆ ವಾಪಸ್‌ ಬರುವ ನಿರೀಕ್ಷೆಯನ್ನು ಖಂಡಿತ ನಿಜ ಮಾಡುತ್ತೇನೆ ಅಂತ ದೇವರು ಧೈರ್ಯ ತುಂಬಿದನು.—ಯೆರೆಮೀಯ 31:16, 17.

 ದೇವರು ಇಸ್ರಾಯೇಲ್ಯರಿಗೆ ಕೊಟ್ಟ ಮಾತನ್ನು ಉಳಿಸಿಕೊಂಡನು. ಆತನು ಮುಂಚೆನೇ ಹೇಳಿದ ಹಾಗೆ ಪರ್ಶಿಯದ ರಾಜ ಕೋರೆಷ ಬಾಬೆಲನ್ನು ಸೋಲಿಸಿದನು. (ಯೆಶಾಯ 45:1, 2; ಯೆರೆಮೀಯ 51:30-32) ಆಮೇಲೆ ಬಾಬೆಲಲ್ಲಿ ಕೈದಿಗಳಾಗಿದ್ದ ಯೆಹೂದ್ಯರನ್ನು ಸ್ವಂತ ಊರಿಗೆ ವಾಪಸ್‌ ಹೋಗಲು ಬಿಟ್ಟನು. 70 ವರ್ಷ ಆದ ಮೇಲೆ ಅವರು ಪುನಃ ಯೆರೂಸಲೇಮಿಗೆ ಬಂದರು.—2 ಪೂರ್ವಕಾಲವೃತ್ತಾಂತ 36:20-23; ಎಜ್ರ 3:1.

 ಯೆರೆಮೀಯ 29:11 ರಲ್ಲಿ ದೇವರು ಏನು ಮಾತು ಕೊಟ್ಟಿದ್ದನೋ ಅದನ್ನ ನಿಜ ಮಾಡಿದನು. ದೇವರು ಕೊಟ್ಟ ಮಾತನ್ನು ಇವತ್ತು ಕೂಡ ನಿಜ ಮಾಡುತ್ತಾನೆ ಅಂತ ನಾವು ಖಂಡಿತ ಭರವೆಸೆ ಇಡಬಹುದು. ದೇವರ ಆಳ್ವಿಕೆಯಲ್ಲಿ ಕ್ರಿಸ್ತ ಯೇಸು ರಾಜನಾಗಿ ಆಳುವಾಗ ಭೂಮಿಯಲ್ಲಿ ಎಲ್ಲ ಕಡೆ ಜನ ಶಾಂತಿ ನೆಮ್ಮದಿಯಿಂದ ಜೀವಿಸುತ್ತಾರೆ ಅನ್ನೋದು ದೇವರು ಕೊಟ್ಟಿರುವ ಮಾತು. ಇದು ಖಂಡಿತ ನಿಜ ಆಗುತ್ತೆ.—ಕೀರ್ತನೆ 37:10, 11, 29; ಯೆಶಾಯ 55:11; ಮತ್ತಾಯ 6:10.

ಯೆರೆಮೀಯ 29:11—ತಪ್ಪು ಕಲ್ಪನೆ

 

 ತಪ್ಪು: ಒಬ್ಬೊಬ್ಬರ ಜೀವನದಲ್ಲೂ ಏನೇನು ನಡಿಬೇಕಂತ ದೇವರು “ಆಲೋಚನೆ” ಮಾಡಿದ್ದಾನೆ. ಇನ್ನೊಂದು ಮಾತಲ್ಲಿ ಹೇಳೋದಾದ್ರೆ ದೇವರು ನಮ್ಮ ಹಣೆಯಲ್ಲಿ ಬರೆದಿದ್ದಾನೆ, ವಿಧಿಯಾಟ ಎಂದು ನಂಬುತ್ತಾರೆ.

 ಸರಿ: ಜನ ತಮಗೆ ಇಷ್ಟ ಇರೋದನ್ನ ಮಾಡಲಿಕ್ಕೆ ದೇವರು ಬಿಟ್ಟದ್ದಾನೆ. ಯೆರೆಮೀಯ 29:11 ರಲ್ಲಿರೋ ಮಾತನ್ನು ದೇವರು ಬಾಬೆಲಿನಲ್ಲಿದ್ದ ಇಸ್ರಾಯೇಲ್ಯರ ಗುಂಪಿಗೆ ಹೇಳಿದನು. ಶಾಂತಿ ನೆಮ್ಮದಿಯಿಂದ ಜೀವಿಸುವ ಭವಿಷ್ಯ ಅವರೆಲ್ಲರಿಗೆ ಸಿಗಬೇಕು ಅಂತ ಆತನು ಇಷ್ಟಪಟ್ಟನು. (ಯೆರೆಮೀಯ 29:4) ಆದರೆ ಒಬ್ಬೊಬ್ಬ ವ್ಯಕ್ತಿ ತನಗೆ ಆ ಭವಿಷ್ಯ ಬೇಕಾ ಬೇಡ್ವಾ ಅನ್ನೋದನ್ನ ಆರಿಸಿಕೊಳ್ಳಬೇಕಿತ್ತು. (ಧರ್ಮೋಪದೇಶಕಾಂಡ 30:19, 20; ಯೆರೆಮೀಯ 29:32) ದೇವರಿಗೆ ಹತ್ತಿರ ಆಗಬೇಕು ಅಂತ ನಿರ್ಣಯಿಸಿದವರು ಪ್ರಾಮಾಣಿಕವಾಗಿ ಪೂರ್ಣ ಹೃದಯದಿಂದ ಪ್ರಾರ್ಥನೆ ಮಾಡಿದರು.—ಯೆರೆಮೀಯ 29:12, 13.

ಯೆರೆಮೀಯ ಅಧ್ಯಾಯ 29 ಓದಿ. ಜೊತೆಗೆ ಪಾದಟಿಪ್ಪಣಿಗಳನ್ನು ಮತ್ತು ಅಡ್ಡ ಉಲ್ಲೇಖಗಳನ್ನು ಸಹ ಓದಿ.

a ಯೆಹೋವ ಅನ್ನೋದು ದೇವರ ಹೆಸರು.—ಕೀರ್ತನೆ 83:18.

b ಯೆರೆಮೀಯ 29:11 ರ ಬಗ್ಗೆ ದಿ ಎಕ್ಸ್‌ಪೊಸಿಟರ್ಸ್‌ ಬೈಬಲ್‌ ಕಾಮೆಂಟರಿ ಹೇಳೋದೇನಂದ್ರೆ “ಈ ವಚನದಲ್ಲಿ ಯಾಹ್ವೆ [ಯೆಹೋವ] ಆ ಕೈದಿಗಳ ಮೇಲೆ ತನಗೆಷ್ಟು ಕೋಮಲ ಮಮತೆ ಇದೆ ಅಂತ ತಿಳಿಸಿದ್ದಾನೆ. ಮುಂದೆ ಅವರಿಗೆ ಖಂಡಿತ ಒಳ್ಳೇದಾಗುತ್ತೆ ಅಂತ ನಿರೀಕ್ಷೆ ಕೊಟ್ಟಿದ್ದಾನೆ. ಕೈದಿಗಳಿಗೆ ಆತನು ಕೊಟ್ಟ ಇಂಥ ಅದ್ಭುತ ಮಾತು ಬೈಬಲಲ್ಲಿ ಬೇರೆ ಎಲ್ಲೂ ಇಲ್ಲ.”—ಸಂಪುಟ 7, ಪುಟ 360.