ಮಾಹಿತಿ ಇರುವಲ್ಲಿ ಹೋಗಲು

“ಆಲ್ಫ ಮತ್ತು ಒಮೇಗ” ಅಂದರೆ ಏನು? ಅದು ಯಾರನ್ನ ಸೂಚಿಸುತ್ತೆ?

“ಆಲ್ಫ ಮತ್ತು ಒಮೇಗ” ಅಂದರೆ ಏನು? ಅದು ಯಾರನ್ನ ಸೂಚಿಸುತ್ತೆ?

ಬೈಬಲ್‌ ಕೊಡೋ ಉತ್ತರ

 “ಆಲ್ಫ ಮತ್ತು ಒಮೇಗ” ಸರ್ವಶಕ್ತ ದೇವರಾದ ಯೆಹೋವನನ್ನ ಸೂಚಿಸುತ್ತೆ. ಇದು ಬೈಬಲಿನಲ್ಲಿ ಮೂರು ಸಲ ಇದೆ.—ಪ್ರಕಟನೆ 1:8; 21:6; 22:13. a

ದೇವರು ತನ್ನನ್ನ ಯಾಕೆ “ಆಲ್ಫ ಮತ್ತು ಒಮೇಗ” ಅಂತ ಹೇಳಿದ್ದಾನೆ?

 ಆಲ್ಫ ಮತ್ತು ಒಮೇಗ ಗ್ರೀಕ್‌ ಅಕ್ಷರಮಾಲೆಯ ಮೊದಲ ಮತ್ತು ಕೊನೇ ಅಕ್ಷರಗಳು. ಬೈಬಲಿನ ಹೊಸ ಒಡಂಬಡಿಕೆಯನ್ನ ಗ್ರೀಕ್‌ ಭಾಷೆಲಿ ಬರೆಯಲಾಯಿತು, ಇದರಲ್ಲಿ ಪ್ರಕಟನೆ ಪುಸ್ತಕ ಕೂಡ ಸೇರಿದೆ. ಆಲ್ಫ ಮತ್ತು ಒಮೇಗ ಗ್ರೀಕ್‌ ಅಕ್ಷರಮಾಲೆಯ ಮೊದಲ ಮತ್ತು ಕೊನೇ ಅಕ್ಷರಗಳಾಗಿರೋದ್ರಿಂದ ಯೆಹೋವನು ಒಬ್ಬನೇ ಆದಿ ಮತ್ತು ಅಂತ್ಯ ಅನ್ನೋದನ್ನ ಸೂಚಿಸೋಕೆ ಈ ಅಕ್ಷರಗಳನ್ನ ಉಪಯೋಗಿಸಲಾಗಿದೆ. (ಪ್ರಕಟನೆ 21:6) ಯೆಹೋವನು ಅನಂತ ಕಾಲದಿಂದಲೂ ಸರ್ವಶಕ್ತ ದೇವರಾಗಿದ್ದಾನೆ ಮತ್ತು ಶಾಶ್ವತವಾಗಿ ಆತನೇ ಸರ್ವಶಕ್ತ ದೇವರಾಗಿರ್ತಾನೆ. ಆತನೊಬ್ಬನೇ “ಯುಗಯುಗಾಂತರಗಳಲ್ಲಿಯೂ” ಇರುವವನು.—ಕೀರ್ತನೆ 90:2.

“ಆದಿ ಮತ್ತು ಅಂತ್ಯ” ಯಾರು?

 ಬೈಬಲ್‌ ಈ ಪದಗಳನ್ನ ಯೆಹೋವ ದೇವರು ಮತ್ತು ಆತನ ಮಗನಾದ ಯೇಸು ಇಬ್ಬರಿಗೂ ಸೂಚಿಸುತ್ತೆ, ಆದರೆ ಅವುಗಳ ಅರ್ಥ ಬೇರೆ ಬೇರೆ. ಇದಕ್ಕೆ ಎರಡು ಉದಾಹರಣೆಗಳನ್ನ ನೊಡೋಣ.

  •   ಯೆಶಾಯ 44:6 ರಲ್ಲಿ ಯೆಹೋವ ದೇವರು “ನಾನೇ ಆದಿ, ಅಂತವೂ ನಾನೇ; ನಾನು ಹೊರತು ಯಾವ ದೇವರೂ ಇಲ್ಲ” ಅಂತ ಹೇಳಿದ್ದಾನೆ. ಇದರ ಅರ್ಥ ಯೆಹೋವ ದೇವರೇ ಶಾಶ್ವವಾದ ಸತ್ಯ ದೇವರು, ಆತನನ್ನ ಬಿಟ್ಟು ಬೇರೆ ಯಾವ ದೇವರುಗಳೂ ಇಲ್ಲ. (ಧರ್ಮೋಪದೇಶಕಾಂಡ 4:35, 39) ಈ ಸಂದರ್ಭದಲ್ಲಿ “ಆಲ್ಫ ಮತ್ತು ಒಮೇಗ”ಕ್ಕಿರೊ ಅದೇ ಅರ್ಥ “ಆದಿ ಮತ್ತು ಅಂತ್ಯ” ಪದಗಳಿಗೂ ಇದೆ.

  •   ಪ್ರಕಟನೆ 1:17, 18 ಮತ್ತು 2:8 ರಲ್ಲಿ “ಮೊದಲನೆಯವನೂ [ಪ್ರೊಟೋಸ್‌, ಇದು ಆಲ್ಫ ಅಲ್ಲ] ಕೊನೆಯವನೂ [ಎಸ್ಕಟೋಸ್‌, ಇದು ಒಮೇಗ ಅಲ್ಲ]” ಅನ್ನೋದ್ರ ಬಗ್ಗೆ ತಿಳಿಸುತ್ತೆ. ಈ ವಚನದ ಹಿನ್ನೆಲೆ ನೋಡುವಾಗ, ಇಲ್ಲಿ ಸತ್ತು ಪುನಃ ಜೀವಿತನಾದವನ ಬಗ್ಗೆ ಹೇಳುತ್ತೆ. ಆದ್ರಿಂದ ಈ ವಚನನಾ ನಾವು ದೇವರಿಗೆ ಸೂಚಿಸೋಕಾಗಲ್ಲ, ಯಾಕಂದ್ರೆ ದೇವರು ಯಾವತ್ತು ಸತ್ತಿಲ್ಲ. (ಹಬಕ್ಕೂಕ 1:12) ಹಾಗಾದ್ರೆ ಇದು ಯಾರನ್ನ ಸೂಚಿಸುತ್ತೆ? ಬೈಬಲ್‌ ಯೇಸು ಸತ್ತು ಮತ್ತೆ ಜೀವಂತವಾಗಿ ಎದ್ದು ಬಂದನು ಅಂತ ಹೇಳುತ್ತೆ. (ಅಪೊಸ್ತಲರ ಕಾರ್ಯ 3:13-15) ಅಮರ ಜೀವಿಯಾಗಿ ಸ್ವರ್ಗಕ್ಕೆ ಪುನರುತ್ಥಾನವಾದ ಮೊದಲನೇ ವ್ಯಕ್ತಿ ಯೇಸು ಆಗಿದ್ದಾನೆ. ಈಗ ಅಲ್ಲಿ ಅವನು ‘ಸದಾಕಾಲಕ್ಕೂ ಜೀವಿಸುತ್ತಿರುವವನಾಗಿದ್ದಾನೆ.’ (ಪ್ರಕಟನೆ 1:18; ಕೊಲೊಸ್ಸೆ 1:18) ಮುಂದೆ ನಡೆಯೋ ಪುನರುತ್ಥಾನಗಳನ್ನ ಯೇಸುನೇ ಮಾಡ್ತಾನೆ. (ಯೋಹಾನ 6:40, 44) ಯೆಹೋವ ದೇವರಿಂದ ನೇರವಾಗಿ ಪುನರುತ್ಥಾನವಾದ ಕೊನೇ ವ್ಯಕ್ತಿ ಯೇಸು ಆಗಿದ್ದಾನೆ. (ಅಪೊಸ್ತಲರ ಕಾರ್ಯ 10:40) ಹಾಗಾಗಿ ನಾವು ಯೇಸುನ “ಮೊದಲನೆಯವನೂ ಕೊನೆಯವನೂ” ಅಂತ ಕರೀಬಹುದು.

ಪ್ರಕಟನೆ 22:13 ರಲ್ಲಿ ಹೇಳಿರೋ “ಆಲ್ಫ ಮತ್ತು ಒಮೇಗ” ಯೇಸುನ ಸೂಚಿಸುತ್ತಾ?

 ಇಲ್ಲ. ಪ್ರಕಟನೆ 22:13ನ್ನ ನಿರ್ದಿಷ್ಟವಾಗಿ ಯಾರು ಹೇಳ್ತಿದ್ದಾರೆ ಅಂತ ಹೇಳಕ್ಕಾಗಲ್ಲ. ಯಾಕಂದ್ರೆ ಈ ಅಧ್ಯಾಯದಲ್ಲಿ ತುಂಬ ಜನ ಮಾತಾಡ್ತಿದ್ದಾರೆ. ಪ್ರಕಟನೆ ಪುಸ್ತಕದ ಈ ಭಾಗದ ಬಗ್ಗೆ ಪ್ರೊಫೆಸರ್‌ ವಿಲಿಯಂ ಬಾರ್ಕ್ಲೇ ಹೀಗೆ ಬರೆದಿದ್ದಾರೆ: “ಇಲ್ಲಿ ವಿಷಯಗಳನ್ನ ಕ್ರಮಬದ್ಧವಾಗಿ ತಿಳಿಸಿಲ್ಲ . . . ಮತ್ತು ಇಲ್ಲಿ ಯಾರು ಮಾತಾಡ್ತಿದ್ದಾರೆ ಅನ್ನೋದನ್ನ ಖಚಿತವಾಗಿ ಹೇಳಕ್ಕಾಗಲ್ಲ.” (ದ ರೆವಲೇಶನ್‌ ಆಫ್‌ ಜಾನ್‌, ಸಂಪುಟ 2, ಪರಿಷ್ಕೃತ ಆವೃತಿ, ಪುಟ 223) ಹಾಗಾಗಿ ಪ್ರಕಟನೆ ಪುಸ್ತಕದಲ್ಲಿ ತಿಳಿಸಿರೊ ಈ ಪದಗಳು ಯೆಹೋವ ದೇವರನ್ನ ಸೂಚಿಸುತ್ತೆ ಮತ್ತು ಪ್ರಕಟನೆ 22:13 ರಲ್ಲಿ ತಿಳಿಸಿರೋ “ಆಲ್ಫ ಮತ್ತು ಒಮೇಗ” ಕೂಡ ಯೆಹೋವ ದೇವರನ್ನೇ ಸೂಚಿಸುತ್ತೆ.

a ಬೈಬಲಿನ ಕಿಂಗ್‌  ಜೇಮ್ಸ್‌ ವರ್ಶನ್‌ಪ್ರಕಟನೆ 1:11 ರಲ್ಲಿ ನಾಲ್ಕನೇ ಸಲ ಇದನ್ನ ನೋಡಬಹುದು. ಆದ್ರೆ ಇತ್ತೀಚಿನ ಭಾಷಾಂತರಗಳಲ್ಲಿ ಇದನ್ನ ಉಪಯೋಗಿಸಿಲ್ಲ, ಕಾರಣ ಅವುಗಳು ಹಳೇ ಗ್ರೀಕ್‌ ಹಸ್ತ ಪ್ರತಿಗಳಲ್ಲಿ ಇರಲಿಲ್ಲ, ನಂತರ ಇದನ್ನ ಸೇರಿಸಲಾಯಿತು.