ಮಾಹಿತಿ ಇರುವಲ್ಲಿ ಹೋಗಲು

ಬೈಬಲ್‌ ವಚನಗಳ ವಿವರಣೆ

ಯೆಶಾಯ 42:8—“ನಾನೇ ಕರ್ತನು”

ಯೆಶಾಯ 42:8—“ನಾನೇ ಕರ್ತನು”

 “ನಾನು ಯೆಹೋವ. ಇದು ನನ್ನ ಹೆಸ್ರು, ನನಗೆ ಸಿಗಬೇಕಾದ ಮಹಿಮೆಯನ್ನ ನಾನು ಬೇರೆ ಯಾರ ಜೊತೆನೂ ಹಂಚ್ಕೊಳ್ಳಲ್ಲ, ನನಗೆ ಸಲ್ಲಬೇಕಾದ ಸ್ತುತಿ ಕೆತ್ತಿದ ಮೂರ್ತಿಗಳಿಗೆ ಸಲ್ಲೋಕೆ ನಾನು ಬಿಡಲ್ಲ.”—ಯೆಶಾಯ 42:8, ಹೊಸ ಲೋಕ ಭಾಷಾಂತರ.

 “ನಾನೇ ಕರ್ತನು, ಅದೇ ನನ್ನ ಹೆಸರು; ನನ್ನ ಮಹಿಮೆಯನ್ನು ಮತ್ತೊಬ್ಬನಿಗೆ ಇಲ್ಲವೆ ನನ್ನ ಸ್ತೋತ್ರವನ್ನು ಎರಕದ ವಿಗ್ರಹಗಳಿಗೂ ಕೊಡೆನು.”—ಯೆಶಾಯ 42:8, ಪವಿತ್ರ ಬೈಬಲ್‌.

ಯೆಶಾಯ 42:8—ಅರ್ಥ

 ಈ ವಚನದಲ್ಲಿ ದೇವರು ತನ್ನ ಹೆಸರು ಏನಂತ ಹೇಳುತ್ತಿದ್ದಾನೆ. ಆತನಿಗೆ ಸಿಗಬೇಕಾದ ಮಹಿಮೆ ಮತ್ತು ಸ್ತುತಿಯನ್ನು ಆತನು ಮೂರ್ತಿಗಳ ಜೊತೆ ಹಂಚಿಕೊಳ್ಳಲ್ಲ.

 ದೇವರ ಹೆಸರನ್ನು ಕನ್ನಡದಲ್ಲಿ ಸಾಮಾನ್ಯವಾಗಿ “ಯೆಹೋವ” ಎಂದು ಭಾಷಾಂತರಿಸಲಾಗಿದೆ. a ಈ ಹೆಸರು ಇಟ್ಟುಕೊಂಡಿರೋದು ದೇವರೇ. (ವಿಮೋಚನಕಾಂಡ 3:14, 15) ಹಳೇ ಒಡಂಬಡಿಕೆಯಲ್ಲಿ (ಹೀಬ್ರು-ಅರಾಮಿಕ್‌ ಗ್ರಂಥ) ದೇವರ ಹೆಸರು ಸುಮಾರು 7,000 ಸಲ ಇದೆ. ಆದ್ರೂ ಅನೇಕ ಭಾಷಾಂತರಕಾರರು ಆ ಹೆಸರಿಗೆ ಬದಲಾಗಿ “ಕರ್ತನು” ಅನ್ನೋ ಬಿರುದನ್ನು ಹಾಕಿದ್ದಾರೆ. ಇದಕ್ಕೊಂದು ಉದಾಹರಣೆ ಕೀರ್ತನೆ 110:1. ಈ ವಚನದಲ್ಲಿರೋ ಭವಿಷ್ಯವಾಣಿ ಯೆಹೋವ ಮತ್ತು ಯೇಸುಗೆ ಸೂಚಿಸುತ್ತೆ. ಈ ವಚನ ಪವಿತ್ರ ಬೈಬಲ್‌ನಲ್ಲಿ, “ಕರ್ತನು [ಯೆಹೋವನು] ನನ್ನ ಕರ್ತನಿಗೆ [ಯೇಸುವಿಗೆ] ಹೇಳಿದ್ದೇನೆಂದರೆ” ಅಂತಿದೆ. (ಅಪೊಸ್ತಲರ ಕಾರ್ಯ 2:34-36) ಇಲ್ಲಿ ಕರ್ತನು ಅಂತ ಎರಡು ಸಲ ಇರೋದ್ರಿಂದ ಯಾರು ಯಾರಿಗೆ ಹೇಳ್ತಿದ್ದಾರೆ ಎಂದು ಗೊಂದಲ ಆಗುತ್ತೆ. ಆದ್ರೆ ಹೊಸ ಲೋಕ ಭಾಷಾಂತರ ಬೈಬಲಿನಲ್ಲಿ ದೇವರ ಹೆಸರನ್ನು ಎಲ್ಲೆಲ್ಲಿ ಇರಬೇಕೋ ಅಲ್ಲಿ ಹಾಕಿರೋದ್ರಿಂದ ಆ ಗೊಂದಲ ಬರುವುದಿಲ್ಲ. ಆ ವಚನ ಹೊಸ ಲೋಕ ಭಾಷಾಂತರದಲ್ಲಿ ಹೀಗಿದೆ: “ಯೆಹೋವ ನನ್ನ ಒಡೆಯನಿಗೆ, ‘ನಿನ್ನ ಶತ್ರುಗಳನ್ನ ನಾನು ನಿನ್ನ ಪಾದಪೀಠವಾಗಿ ಮಾಡೋ ತನಕ, ನೀನು ನನ್ನ ಬಲಗಡೆ ಕೂತ್ಕೊ’ ಅಂತ ಹೇಳಿದ.”

 ಅನೇಕ ವಿದ್ವಾಂಸರು ದೇವರ ಹೆಸರಿನ ಅರ್ಥ “ಆತನು ಆಗುವಂತೆ ಮಾಡುತ್ತಾನೆ” ಎಂದು ನಂಬುತ್ತಾರೆ. ಈ ಹೆಸರು ಸತ್ಯ ದೇವರಿಗೆ ಮಾತ್ರ ಸರಿಹೊಂದುತ್ತದೆ. ಏಕೆಂದ್ರೆ ತನ್ನ ಉದ್ದೇಶವನ್ನು ನೆರವೇರಿಸಲಿಕ್ಕೆ ಏನಾಗಬೇಕೋ ಹಾಗೆ ಆಗಲು, ತನ್ನ ಸೃಷ್ಟಿಯನ್ನು ಕೂಡ ತಾನು ಬಯಸಿದ ಹಾಗೆ ಆಗುವಂತೆ ಮಾಡಲು ಆತನೊಬ್ಬನಿಗೆ ಮಾತ್ರ ಸಾಧ್ಯ.

 ಯೆಹೋವನು ನಮ್ಮ ಸೃಷ್ಟಿಕರ್ತ. ಆತನೊಬ್ಬನೇ ಸತ್ಯ ದೇವರು. ಹಾಗಾಗಿ ನಮ್ಮ ಆರಾಧನೆಗೆ ಆತನೊಬ್ಬನೇ ಅರ್ಹ. ಬೇರೆ ಯಾರನ್ನೂ ಬೇರೆ ಯಾವುದನ್ನೂ ನಾವು ಆರಾಧಿಸಬಾರದು, ಮೂರ್ತಿ, ವಿಗ್ರಹ, ಪ್ರತಿಮೆ ಯಾವುದನ್ನೂ ಆರಾಧಿಸಬಾರದು.—ವಿಮೋಚನಕಾಂಡ 20:2-6; 34:14; 1 ಯೋಹಾನ 5:21.

ಯೆಶಾಯ 42:8—ಸಂದರ್ಭ

 ಯೆಶಾಯ ಅಧ್ಯಾಯ 42 ರ ಆರಂಭದ ವಚನಗಳಲ್ಲಿ ತಾನು ‘ಆರಿಸಿದವನು’ ಏನೇನು ಮಾಡ್ತಾನೆ ಅನ್ನೋದರ ಬಗ್ಗೆ ಯೆಹೋವನು ಮುಂಚೆನೇ ತಿಳಿಸಿದನು. ತನಗೆ ಖುಷಿ ತರುವ ಅವನು “ಜನ್ರಿಗೆ ನ್ಯಾಯ ಸಿಗೋ ತರ ಮಾಡ್ತಾನೆ” ಅಂತನೂ ಹೇಳಿದನು. (ಯೆಶಾಯ 42:1) ಯೆಹೋವನು ತಾನು ಕೊಟ್ಟ ಆ ಮಾತಿನ ಬಗ್ಗೆ ಹೇಳಿದ್ದೇನೆಂದ್ರೆ, “ಈಗ ನಾನು ಹೊಸ ವಿಷ್ಯಗಳನ್ನ ಹೇಳ್ತಿದ್ದೀನಿ. ಅವು ಶುರು ಆಗೋದಕ್ಕಿಂತ ಮುಂಚೆನೇ ನಾನು ನಿಮಗೆ ಅವುಗಳ ಬಗ್ಗೆ ತಿಳಿಸ್ತೀನಿ.” (ಯೆಶಾಯ 42:9) ಆತನು ತಾನು ಆರಿಸಿದವನ ಬಗ್ಗೆ ಮುಂಚೆನೇ ಹೇಳಿದ ಮಾತು ನಿಜ ಆಯಿತು. ಹೇಗಂದರೆ ನೂರಾರು ವರ್ಷಗಳು ಆದ ಮೇಲೆ ಮೆಸ್ಸೀಯ ಅಂದ್ರೆ ಕ್ರಿಸ್ತನು ಭೂಮಿಗೆ ಬಂದು ದೇವರ ಸೇವೆ ಮಾಡಿದನು.—ಮತ್ತಾಯ 3:16, 17; 12:15-21.

ಯೆಶಾಯ 42:8 ಬೇರೆ ಭಾಷಾಂತರಗಳಲ್ಲಿ

 “ನಾನೇ ಯೆಹೋವನು, ಅದೇ ನನ್ನ ಹೆಸರು. ನನ್ನ ಮಹಿಮೆಯನ್ನು ಮತ್ತೊಬ್ಬನಿಗೆ ಇಲ್ಲವೆ ನನ್ನ ಸ್ತೋತ್ರವನ್ನು ಎರಕದ ವಿಗ್ರಹಗಳಿಗೂ ಕೊಡೆನು.”—ಯೆಶಾಯ 42:8, ಪವಿತ್ರ ಗ್ರಂಥ.

 “ನಾನೇ ಕರ್ತನು. ಯೆಹೋವನೆಂಬುದೇ ನನ್ನ ಹೆಸರು. ನನ್ನ ಮಹಿಮೆಯನ್ನು ನಾನು ಇತರರಿಗೆ ಕೊಡೆನು. ನನಗೆ ಸಲ್ಲತಕ್ಕ ಮಹಿಮೆಯನ್ನು ಸುಳ್ಳು ದೇವರ ವಿಗ್ರಹಗಳಿಗೆ ಬಿಟ್ಟುಕೊಡೆನು.”—ಯೆಶಾಯ 42:8, ಪರಿಶುದ್ಧ ಬೈಬಲ್‌.

a ಹೀಬ್ರು ಭಾಷೆಯಲ್ಲಿ ದೇವರ ಹೆಸರು 4 ವ್ಯಂಜನ ಅಕ್ಷರಗಳಲ್ಲಿದೆ. ಇದನ್ನು ಇಂಗ್ಲಿಷಲ್ಲಿ ಹೆಚ್ಚಾಗಿ YHWH ಅಂತ ಬರೆಯುತ್ತಾರೆ. ಕೆಲವು ಬೈಬಲಲ್ಲಿ ದೇವರ ಹೆಸರನ್ನು “ಯಾಹ್ವೆ” ಅಂತ ಬರೆಯುತ್ತಾರೆ. ಹೆಚ್ಚು ವಿಷಯ ತಿಳಿಯಲು ಪವಿತ್ರ ಬೈಬಲ್‌ ಹೊಸ ಲೋಕ ಭಾಷಾಂತರದಲ್ಲಿ ಪರಿಶಿಷ್ಟ ಎ4 ನೋಡಿ, “ಹೀಬ್ರು ಪವಿತ್ರ ಗ್ರಂಥದಲ್ಲಿ ದೇವರ ಹೆಸ್ರು.”