ಮಾಹಿತಿ ಇರುವಲ್ಲಿ ಹೋಗಲು

ಮುಖಪುಟ ಲೇಖನ

“ಅಶ್ಲೀಲ ಚಿತ್ರ ಅಥವಾ ವಿಡಿಯೋಗಳನ್ನ ನೋಡೋದ್ರಲ್ಲಿ ತಪ್ಪೇನಿದೆ?”

“ಅಶ್ಲೀಲ ಚಿತ್ರ ಅಥವಾ ವಿಡಿಯೋಗಳನ್ನ ನೋಡೋದ್ರಲ್ಲಿ ತಪ್ಪೇನಿದೆ?”

ಇಂದು ಲೋಕದಲ್ಲಿ, ಎಲ್ಲೆಲ್ಲೂ ಅಶ್ಲೀಲ ವಿಷಯಗಳೇ ತುಂಬಿ ಹೋಗಿದೆ. a ಜಾಹೀರಾತುಗಳಲ್ಲಿ, ಫ್ಯಾಷನ್‌, ಚಲನಚಿತ್ರಗಳಲ್ಲಿ, ಹಾಡುಗಳಲ್ಲಿ, ಪುಸ್ತಕ, ಪತ್ರಿಕೆಗಳಲ್ಲಿ, ಟಿವಿಯಲ್ಲಿ, ವಿಡಿಯೋ ಗೇಮ್‌ನಲ್ಲಿ, ಫೋನ್‌ಗಳಲ್ಲಿ, ವೆಬ್‌ಸೈಟ್‌ಗಳಲ್ಲಿ ಮತ್ತು ಸೋಷಲ್‌ ಮೀಡಿಯಾದಲ್ಲೂ ಅಶ್ಲೀಲ ವಿಷಯಗಳೇ ನೋಡೋಕೆ ಸಿಗುತ್ತೆ. ಇತ್ತೀಚಿನ ದಿನಗಳಲ್ಲಿ, ಜನರ ಮಧ್ಯೆ ಈ ವಿಷಯ ಸಾಮಾನ್ಯ ಆಗಿಬಿಟ್ಟಿದೆ. ಹಿಂದೆಂದಿಗಿಂತಲೂ ಹೆಚ್ಚಾಗಿ ಇವತ್ತು, ಜನರು ಇಂಥ ವಿಷಯಗಳ ಕಡೆಗೆ ಆಕರ್ಷಿತರಾಗ್ತಿದ್ದಾರೆ.—“ ಅಶ್ಲೀಲ ವಿಷಯಗಳ ಬಗ್ಗೆ ಇರೋ ನಿಜಾಂಶ” ಅನ್ನೋ ಚೌಕವನ್ನ ನೋಡಿ.

ದಿನ ಕಳೆದಂತೆ ಬೇರೆ-ಬೇರೆ ರೀತಿಯ ಅಶ್ಲೀಲ ವಿಷಯಗಳು ಇಂದು ಕಾಣಿಸಿಕೊಳ್ತಾ ಇದೆ. ಪ್ರೊಫೆಸರ್‌ ಗೇಲ್‌ ಡೈನ್ಸ್‌ ಹೀಗೆ ಬರಿತಾರೆ: “ಒಂದು ಕಾಲದಲ್ಲಿ ನಾವು ಯಾವುದನ್ನ ತುಂಬ ಅಸಹ್ಯವಾದ ಅಶ್ಲೀಲ ವಿಷಯಗಳು ಅಂತ ನೋಡ್ತಿದ್ದವೋ, ಇಂದು ಅದೇ ವಿಷಯಗಳು ಸರ್ವೇಸಾಮಾನ್ಯ ಆಗಿಬಿಟ್ಟಿದೆ.”

ಈ ವಿಷಯದ ಬಗ್ಗೆ ನಿಮಗೇನನಿಸುತ್ತೆ? ಅಶ್ಲೀಲ ಚಿತ್ರ ಅಥವಾ ವಿಡಿಯೋಗಳನ್ನ ನೋಡೋದ್ರಲ್ಲಿ ತಪ್ಪೇನಿದೆ? ಯೇಸು ಹೀಗೆ ಹೇಳಿದನು: “ಒಳ್ಳೇ ಮರ ಒಳ್ಳೇ ಹಣ್ಣು ಕೊಡುತ್ತೆ. ಕೆಟ್ಟ ಮರ ಕೆಟ್ಟ ಹಣ್ಣು ಕೊಡುತ್ತೆ.” (ಮತ್ತಾಯ 7:17) ಹಾಗಾದರೆ, ಅಶ್ಲೀಲ ವಿಷಯಗಳು ಎಂಥ ಫಲವನ್ನು ಕೊಡುತ್ತೆ? ಇದಕ್ಕೆ ಉತ್ತರ ತಿಳಿಯಲು ಅಶ್ಲೀಲ ವಿಷಯಗಳ ಬಗ್ಗೆ ಇರೋ ಕೆಲವು ಪ್ರಶ್ನೆಗಳನ್ನ ನೋಡೋಣ.

ಅಶ್ಲೀಲ ವಿಷಯಗಳನ್ನ ನೋಡೋದು ಒಬ್ಬ ವ್ಯಕ್ತಿ ಮೇಲೆ ಯಾವ ಪರಿಣಾಮ ಬೀರುತ್ತೆ?

ವಿದ್ವಾಂಸರು ಹೀಗಂತಾರೆ: ಅಶ್ಲೀಲ ವಿಷಯಗಳಿಗೆ ಜನರು ವ್ಯಸನಿಗಳಾಗೋ ಸಾಧ್ಯತೆ ಇದೆ. ಇದರ ಬಗ್ಗೆ ಕೆಲವು ವೈದ್ಯರು ಮತ್ತು ಥೆರಪಿಸ್ಟ್‌ಗಳು ಇದೊಂದು ಮಾದಕ ವಸ್ತು ಅಂತನೂ ಹೇಳ್ತಾರೆ.

ಬ್ರಾಯನ್‌ b ಅನ್ನೋ ವ್ಯಕ್ತಿ ಇಂಟರನೆಟ್‌ನಲ್ಲಿ ಅಶ್ಲೀಲ ವಿಷಯಗಳನ್ನ ನೋಡೋ ಚಟಕ್ಕೆ ಬಿದ್ದಿದ್ದ. ಅವನು ಹೀಗೆ ಹೇಳ್ತಾನೆ: “ನಾನು ಇದ್ರ ದಾಸನಾಗಿದ್ದೆ. ಯಾವಾಗ್ಲೂ ಇದ್ರ ಗುಂಗಲ್ಲೇ ಇರ್ತಿದ್ದೆ. ಇದ್ರಿಂದ ಹೊರಬಂದಾಗ ನನ್ನ ಶರೀರ ನಡುಗುತ್ತಿತ್ತು. ತುಂಬ ತಲೆ ನೋವು ಬರ್ತಿತ್ತು. ಈ ಚಟವನ್ನ ಬಿಡೋಕೆ ಎಷ್ಟೇ ಪ್ರಯತ್ನ ಪಟ್ಟರೂ, ಎಷ್ಟೋ ವರ್ಷಗಳ ತನಕ ಇದನ್ನ ಬಿಡೋಕೆ ಆಗಲಿಲ್ಲ.”

ಅಶ್ಲೀಲ ಚಿತ್ರ ಅಥವಾ ವಿಡಿಯೋಗಳನ್ನ ಜನರು ಎಲ್ಲರ ಮುಂದೆ ಅಲ್ಲ ಕದ್ದುಮುಚ್ಚಿ ನೋಡ್ತಾರೆ. ಹಾಗಾಗಿ ಅವರಿಗೆ ಒಂಟಿತನದ ಭಾವನೆ, ನಾಚಿಕೆ, ಆತಂಕ, ಖಿನ್ನತೆ ಮತ್ತು ಕೋಪ ಕಾಡುತ್ತೆ. ಇನ್ನು ಕೆಲವರಿಗೆ ಆತ್ಮಹತ್ಯೆ ಮಾಡಿಕೊಳ್ಳಬೇಕು ಅಂತನೂ ಅನಿಸುತ್ತೆ. ಸರ್ಗೆ ಅನ್ನೋ ವ್ಯಕ್ತಿ ದಿನಾಲೂ ಅವರ ಫೋನ್‌ನಲ್ಲಿ ಅಶ್ಲೀಲ ವಿಷಯಗಳನ್ನ ಡೌನ್‌ಲೋಡ್‌ ಮಾಡ್ಕೊಳ್ತಿದ್ರು. ಇದ್ರ ಬಗ್ಗೆ ಅವರು ಹೀಗೆ ಹೇಳ್ತಾರೆ: “ನನ್ನ ತಲೆಯಲ್ಲಿ ಯಾವಾಗ್ಲೂ ಆ ವಿಷಯಗಳೇ ಇರ್ತಿತ್ತು. ಇದ್ರಿಂದಾಗಿ ಹತಾಶೆ, ಯಾವುದಕ್ಕೂ ಲಾಯಿಕಿಲ್ಲ, ತಪ್ಪು ಮಾಡಿಬಿಟ್ಟಿದ್ದೀನಿ, ನಾನು ಒಂಟಿಯಾಗಿದ್ದೀನಿ, ಸಿಕ್ಕಿಹಾಕಿಕೊಂಡಿದ್ದೀನಿ ಅನ್ನೋ ಭಾವನೆ ಯಾವಾಗ್ಲೂ ಕಾಡ್ತಾ ಇತ್ತು. ಸಹಾಯ ಕೇಳೋಕೆ ನನಗೆ ನಾಚಿಕೆ ಆಗ್ತಿತ್ತು.”

ಅಶ್ಲೀಲ ವಿಷಯಗಳಿಗೆ ನಾವು ಒಂದೇ ಒಂದು ಕ್ಷಣ ಗಮನ ಕೊಟ್ರೂ ಅದ್ರಿಂದ ಕೆಟ್ಟ ಪರಿಣಾಮಗಳು ತಪ್ಪಿದಲ್ಲ. ಅಶ್ಲೀಲ ವಿಷಯಗಳ ಬಗ್ಗೆ ಸಂಶೋಧನೆ ಮಾಡಿರೋ ಡಾಕ್ಟರ್‌ ಜೂಡಿತ್‌ ರೀಸ್ಮನ್‌ರವರು ಅಮೆರಿಕದ ನ್ಯಾಯಾಲಯದ ಮುಂದೆ ಹೀಗೆ ಹೇಳ್ತಾರೆ: “ಅಶ್ಲೀಲ ಚಿತ್ರಗಳು ನಮ್ಮ ಮೆದುಳಿನ ಮೇಲೆ ಆಳವಾದ ಪ್ರಭಾವಬೀರುತ್ತೆ. ಇಂಥ ವಿಷಯಗಳನ್ನ ನೋಡಿದಾಗ ನಮ್ಮ ಮೆದುಳಿನಲ್ಲಿ ಎಂಥ ರಾಸಾಯನಿಕ ಕ್ರಿಯೆ ಆಗುತ್ತೆ ಅಂದ್ರೆ ಇದನ್ನ ಮರೆಯೋಕೆ ಆಗಲ್ಲ.” 19 ವರ್ಷದ ಸೂಸನ್‌ ಅಪ್ಪಿತಪ್ಪಿ ಅಶ್ಲೀಲ ವಿಷಯಗಳಿರುವ ವೆಬ್‌ಸೈಟ್‌ನ್ನ ನೋಡಿದಳು. ಅವಳು ಹೀಗೆ ಹೇಳ್ತಾಳೆ: “ಆ ಚಿತ್ರಗಳು ನನ್ನ ತಲೆಯಲ್ಲಿ ಉಳಿದುಬಿಟ್ಟಿದೆ. ಅವು ಇದ್ದಕ್ಕಿದ್ದಂತೆ ನೆನಪಾಗುತ್ತೆ. ಇದನ್ನ ನಾನು ಯಾವತ್ತೂ ಮರೆಯೋಕೆ ಆಗಲ್ಲ ಅಂತ ಅನಿಸುತ್ತೆ.”

ನಮಗಿರುವ ಪಾಠ: ಅಶ್ಲೀಲ ವಿಷಯಗಳು ಒಬ್ಬ ವ್ಯಕ್ತಿಯನ್ನ ಗುಲಾಮನನ್ನಾಗಿ ಮಾಡಿ ಮತ್ತು ಅವನ ಜೀವನವನ್ನೇ ಹಾಳು ಮಾಡುತ್ತೆ.—2 ಪೇತ್ರ 2:19.

ಅಶ್ಲೀಲ ವಿಷಯಗಳಿಂದ ಕುಟುಂಬಗಳಿಗೆ ಹೇಗೆ ಹಾನಿ ಆಗುತ್ತೆ?

ವಿದ್ವಾಂಸರು ಹೀಗಂತಾರೆ: “ಅಶ್ಲೀಲ ವಿಷಯಗಳಿಂದಾಗಿ ಕುಟುಂಬಗಳು ಮತ್ತು ದಂಪತಿಗಳು ದೂರದೂರ ಆಗ್ತಾರೆ.”—ವೆಂಡಿ ಮತ್ತು ಲ್ಯಾರಿ ಮಾಲ್ಟ್ಸ್‌ರವರ ದ ಪೋರ್ನ್‌ ಟ್ರ್ಯಾಪ್‌ ಅನ್ನೋ ಪುಸ್ತಕ.

ಅಶ್ಲೀಲ ವಿಷಯಗಳಿಂದಾಗಿ ಕುಟುಂಬಗಳು ಒಡೆದು ಹೋಗುತ್ತೆ ಮತ್ತು ಗಂಡ ಹೆಂಡತಿ ಬೇರೆ-ಬೇರೆ ಆಗ್ತಾರೆ ಹೇಗಂದ್ರೆ:

  • ಗಂಡ ಹೆಂಡತಿ ಮಧ್ಯೆ ಇರೋ ನಂಬಿಕೆ, ಅನ್ಯೋನ್ಯತೆ ಮತ್ತು ಪ್ರೀತಿ ಕಡಿಮೆಯಾಗುತ್ತೆ.—ಜ್ಞಾನೋಕ್ತಿ 2:12-17.

  • ಸಂಗಾತಿ ಜೊತೆ ತೃಪ್ತಿ ಇರಲ್ಲ, ಸ್ವಾರ್ಥ ಬೆಳೆಯುತ್ತೆ ಮತ್ತು ಭಾವನಾತ್ಮಕವಾಗಿ ದೂರ ಆಗ್ತಾರೆ.—ಎಫೆಸ 5:28, 29.

  • ವಿಕೃತ ಲೈಂಗಿಕ ಆಸೆ ಮತ್ತು ಬಯಕೆಗಳು ಹೆಚ್ಚಾಗುತ್ತೆ.—2 ಪೇತ್ರ 2:14

  • ತಪ್ಪಾದ ಲೈಂಗಿಕ ಕೆಲಸಗಳನ್ನ ಮಾಡುವಂತೆ ಸಂಗಾತಿಗೆ ಒತ್ತಾಯ ಮಾಡಬಹುದು.—ಎಫೆಸ 5:3, 4.

  • ಭಾವನಾತ್ಮಕವಾಗಿ ಮತ್ತು ಶಾರೀರಿಕವಾಗಿ ಸಂಗಾತಿಗೆ ದ್ರೋಹ ಮಾಡಬಹುದು.—ಮತ್ತಾಯ 5:28.

ಗಂಡ ಹೆಂಡತಿ ಒಬ್ಬರಿಗೊಬ್ಬರು ಮೋಸ ಮಾಡಬಾರದು ಅಂತ ಬೈಬಲ್‌ ಹೇಳುತ್ತೆ. (ಮಲಾಕಿ 2:16) ಗಂಡ ಹೆಂಡತಿ ಒಬ್ಬರಿಗೊಬ್ಬರು ದ್ರೋಹ ಮಾಡೋದು ಎಂಥ ಗಂಭೀರ ವಿಷಯ ಅಂದ್ರೆ, ಇದು ಅವರಿಬ್ಬರು ದೂರದೂರ ಆಗಿ ವಿಚ್ಛೇದನ ಪಡ್ಕೊಳ್ಳೋಕೂ ನಡೆಸಬಹುದು. ಇಂಥ ವಿಷಯ ನಡೆದಾಗ ಅವರ ಮಕ್ಕಳು ನಷ್ಟವನ್ನ ಅನುಭವಿಸಬೇಕಾಗುತ್ತೆ.

ಅಶ್ಲೀಲ ವಿಷಯಗಳು ಮಕ್ಕಳ ಮೇಲೆ ನೇರವಾದ ಪರಿಣಾಮ ಬೀರುತ್ತೆ. ಮುಂಚೆ ಹೇಳಲಾಗಿದ್ದ ಬ್ರಾಯನ್‌ ಹೀಗಂತಾರೆ: “ನಾನು 10 ವರ್ಷದವನಾಗಿದ್ದಾಗ, ಅಪ್ಪ ಬಳಸ್ತಿದ್ದ ಅಶ್ಲೀಲ ಚಿತ್ರಗಳ ಪತ್ರಿಕೆ ನನ್ನ ಕೈಗೆ ಸಿಕ್ತು. ನಾನು ಅದನ್ನ ಕದ್ದುಮುಚ್ಚಿ ನೋಡೋಕೆ ಶುರು ಮಾಡಿದೆ. ಯಾಕೆ ಆ ಚಿತ್ರಗಳಿಗೆ ಅಷ್ಟೊಂದು ಆಕರ್ಷಿತನಾಗಿದ್ದೆ ಅಂತನೇ ಗೊತ್ತಿರಲಿಲ್ಲ. ಆದ್ರೆ ಎಷ್ಟೋ ವರ್ಷಗಳು ಆದಮೇಲೂ ನಾನು ಇದ್ರ ಚಟಕ್ಕೆ ಬಿದ್ದು ಬಿಟ್ಟಿದೆ.” ಸಂಶೋಧನೆ ಹೇಳೋ ಪ್ರಕಾರ ಅಶ್ಲೀಲ ವಿಷಯಗಳನ್ನ ಮಕ್ಕಳು ಚಿಕ್ಕ ವಯಸ್ಸಿನಲ್ಲೇ ನೋಡಿದ್ರೆ ಲೈಂಗಿಕವಾಗಿ ಕ್ರೂರಿಗಳಾಗ್ತಾರೆ. ಆ ವಯಸ್ಸಲ್ಲೇ ದೊಡ್ಡವರ ತರ ಯೋಚನೆ ಮಾಡೋಕೆ ಶುರು ಮಾಡ್ತಾರೆ, ಭಾವನಾತ್ಮಕವಾಗಿ ಮತ್ತು ಮಾನಸಿಕವಾಗಿ ಸ್ಥಿರತೆಯನ್ನು ಕಳೆದುಕೊಳ್ಳುತ್ತಾರೆ.

ನಮಗಿರುವ ಪಾಠ: ಅಶ್ಲೀಲ ವಿಷಯಗಳು ಸಂಬಂಧಗಳನ್ನು ಹಾಳು ಮಾಡೋದ್ರ ಜೊತೆಗೆ ಮನಸ್ಸಿಗೆ ತುಂಬ ನೋವೂ ಕೊಡುತ್ತೆ.—ಜ್ಞಾನೋಕ್ತಿ 6:27.

ಅಶ್ಲೀಲ ವಿಷಯಗಳ ಬಗ್ಗೆ ಬೈಬಲ್‌ ಏನು ಹೇಳುತ್ತೆ?

ಬೈಬಲ್‌ ಹೀಗೆ ಹೇಳುತ್ತೆ: “ಹಾಗಾಗಿ ಲೈಂಗಿಕ ಅನೈತಿಕತೆ, ಅಶುದ್ಧತೆ, ಹತೋಟಿ ಇಲ್ಲದ ಕಾಮದಾಸೆ, ಕೆಟ್ಟದು ಮಾಡೋ ಅತಿಯಾಸೆ ಮತ್ತು ಮೂರ್ತಿಪೂಜೆ ಆಗಿರೋ ದುರಾಸೆ ಇಂಥ ಆಸೆಗಳನ್ನ ಹುಟ್ಟಿಸೋ ನಿಮ್ಮ ದೇಹದ ಅಂಗಗಳನ್ನ ಸಾಯಿಸಿ.”—ಕೊಲೊಸ್ಸೆ 3:5.

ಸರಳವಾಗಿ ಹೇಳೋದಾದ್ರೆ, ಯೆಹೋವ c ದೇವರು ಅಶ್ಲೀಲ ವಿಷಯಗಳನ್ನ ದ್ವೇಷಿಸುತ್ತಾನೆ. ಹಾಗಂತ ಗಂಡ ಹೆಂಡತಿಯ ಮಧ್ಯೆ ಇರೋ ಲೈಂಗಿಕ ಸಂಬಂಧವನ್ನೂ ಆತನು ದ್ವೇಷಿಸುತ್ತಾನೆ ಅಂತಲ್ಲ. ಲೈಂಗಿಕ ಶಕ್ತಿಯನ್ನ ಸೃಷ್ಟಿಸಿದ್ದೇ ಆತನು. ಇದನ್ನ ಬಳಸಿ ಗಂಡ ಹೆಂಡತಿ ಭಾವನಾತ್ಮಕವಾಗಿ ಒಂದಾಗಬೇಕು ಮತ್ತು ಮಕ್ಕಳನ್ನ ಪಡಿಬೇಕು ಅನ್ನೋದೇ ಆತನ ಆಸೆ.—ಯಾಕೋಬ 1:17.

ಲೈಂಗಿಕ ವಿಷಯಗಳನ್ನ ಯೆಹೋವ ದೇವರು ಯಾಕೆ ಅಷ್ಟು ದ್ವೇಷಿಸುತ್ತಾನೆ ಅಂತ ತಿಳ್ಕೊಳ್ಳೋಕೆ ಕೆಲವು ಕಾರಣಗಳನ್ನ ನೋಡಿ.

  • ಅಶ್ಲೀಲ ವಿಷಯಗಳು ಜೀವನವನ್ನೇ ಹಾಳು ಮಾಡುತ್ತೆ ಅಂತ ಆತನಿಗೆ ಗೊತ್ತು.—ಎಫೆಸ 4:17-19.

  • ನಮಗೆ ಯಾವುದೇ ಹಾನಿ ಆಗಬಾರದು ಅಂತ ಆತನು ನಮ್ಮನ್ನ ಕಾಪಾಡೋಕೆ ಬಯಸುತ್ತಾನೆ ಮತ್ತು ಪ್ರೀತಿಸುತ್ತಾನೆ.—ಯೆಶಾಯ 48:17, 18.

  • ಮದುವೆ ಬಂಧವನ್ನ ಮತ್ತು ಕುಟುಂಬಗಳನ್ನ ಆತನು ಕಾಪಾಡೋಕೆ ಇಷ್ಟಪಡ್ತಾನೆ.—ಮತ್ತಾಯ 19:4-6.

  • ನಾವು ನೈತಿಕವಾಗಿ ಶುದ್ಧರಾಗಿದ್ದು ಇನ್ನೊಬ್ಬರ ಹಕ್ಕನ್ನ ಗೌರವಿಸಬೇಕು ಅನ್ನೋದೇ ಆತನ ಬಯಕೆ.—1 ಥೆಸಲೊನೀಕ 4:3-6.

  • ಮಕ್ಕಳನ್ನ ಪಡೆಯೋ ಶಕ್ತಿಯನ್ನ ನಾವು ಗೌರವಿಸಿ ಸರಿಯಾದ ರೀತಿಯಲ್ಲಿ ಅದನ್ನ ಬಳಸಬೇಕು ಅಂತ ಆತನು ಬಯಸುತ್ತಾನೆ.—ಇಬ್ರಿಯ 13:4.

  • ಅಶ್ಲೀಲ ವಿಷಯಗಳು ಸ್ವಾರ್ಥದಿಂದ ತುಂಬಿರೋ ಸೈತಾನನ ನೋಟವನ್ನ ಪ್ರತಿಬಿಂಬಿಸುತ್ತೆ ಅಂತ ಯೆಹೋವ ದೇವರಿಗೆ ಚೆನ್ನಾಗಿ ಗೊತ್ತು.—ಆದಿಕಾಂಡ 6:2; ಯೂದ 6, 7.

ನಮಗಿರುವ ಪಾಠ: ಅಶ್ಲೀಲ ವಿಷಯಗಳಿಂದಾಗಿ ದೇವರ ಜೊತೆಗಿರುವ ಸ್ನೇಹ ಸಂಬಂಧ ಮುರಿದು ಬೀಳುತ್ತೆ.—ರೋಮನ್ನರಿಗೆ 1:24.

ಅಶ್ಲೀಲ ವಿಷಯಗಳ ಚಟದಿಂದ ದೂರ ಇರೋರ ಕಡೆಗೆ ಯೆಹೋವ ದೇವರು ತುಂಬಾ ಅನುಕಂಪ ತೋರಿಸುತ್ತಾನೆ. ಬೈಬಲ್‌ ಹೀಗನ್ನುತ್ತೆ: “ಯೆಹೋವ ಕರುಣೆ, ಕನಿಕರ ಇರೋ ದೇವರು, ಅಷ್ಟು ಬೇಗ ಕೋಪ ಮಾಡ್ಕೊಳಲ್ಲ, ಶಾಶ್ವತ ಪ್ರೀತಿಯನ್ನ ಅಪಾರವಾಗಿ ತೋರಿಸ್ತಾನೆ. ಯಾಕಂದ್ರೆ ನಮ್ಮನ್ನ ರಚಿಸಿರೋದು ಹೇಗೆ ಅಂತ ಆತನಿಗೆ ಚೆನ್ನಾಗಿ ಗೊತ್ತು, ನಾವು ಧೂಳಾಗಿದ್ದೀವಿ ಅಂತ ಆತನು ನೆನಪಿಸ್ಕೊಳ್ತಾನೆ.” (ಕೀರ್ತನೆ 103:8, 14) ದೀನ ಜನರಿಗೆ ಸಹಾಯ ಬೇಕಿದ್ದಾಗ ಆತನು ಕರುಣೆ, ಅಪಾರ ಕೃಪೆ ತೋರಿಸ್ತಾನೆ.—ಇಬ್ರಿಯ 4:16; “ ಅಶ್ಲೀಲ ವಿಷಯಗಳಿಂದ ದೂರ ಇರಿ” ಅನ್ನೋ ಚೌಕವನ್ನ ನೋಡಿ.

ಎಷ್ಟೋ ಜನ ದೇವರಿಂದ ಸಹಾಯ ಪಡೆದಿದ್ದಾರೆ. ಇದರಿಂದ ಅವರಿಗೆ ಒಳ್ಳೇದಾಗಿದೆಯಾ? ಕೆಟ್ಟ ಚಟದಿಂದ ಹೊರ ಬಂದ ಕೆಲವರ ಬಗ್ಗೆ ಬೈಬಲ್‌ ಹೀಗನ್ನುತ್ತೆ: “ದೇವರು ನಿಮ್ಮನ್ನ ತೊಳೆದು ಶುದ್ಧಮಾಡಿದ್ದಾನೆ, ಪವಿತ್ರ ಮಾಡಿದ್ದಾನೆ. ನಮ್ಮ ಪ್ರಭು ಯೇಸು ಕ್ರಿಸ್ತನ ಹೆಸ್ರಿಂದ ನಮ್ಮ ದೇವರ ಪವಿತ್ರಶಕ್ತಿಯಿಂದ ನೀವು ದೇವರ ದೃಷ್ಟಿಯಲ್ಲಿ ನೀತಿವಂತರಾದ್ರಿ.” (1 ಕೊರಿಂಥ 6:11) ಅಪೊಸ್ತಲ ಪೌಲನ ಹಾಗೆ ಇವರು ಕೂಡ “ದೇವರಿಂದಾನೇ ನನಗೆ ಎಲ್ಲ ಮಾಡೋಕೆ ಆಗ್ತಿದೆ. ಯಾಕಂದ್ರೆ ನನಗೆ ಬೇಕಾದ ಶಕ್ತಿ ಕೊಡೋದು ಆತನೇ” ಅಂತ ಹೇಳಬಹುದು.—ಫಿಲಿಪ್ಪಿ 4:13.

ಅಶ್ಲೀಲ ವಿಷಯಗಳ ಚಟದಿಂದ ಹೊರಗೆ ಬಂದ ಸೂಸನ್‌ ಹೀಗೆ ಹೇಳ್ತಾರೆ: “ಈ ಚಟದಿಂದ ಹೊರಗೆ ಬರೋಕೆ ಸಹಾಯ ಮಾಡೋ ಶಕ್ತಿ ಯೆಹೋವ ದೇವರಿಗೆ ಮಾತ್ರ ಇದೆ. ಆತನ ಸಹಾಯ ಮತ್ತು ಮಾರ್ಗದರ್ಶನೆ ನೀವು ಪಡ್ಕೊಂಡ್ರೆ ನಿಮಗೆ ಶುದ್ಧ ಮನಸಾಕ್ಷಿ ಸಿಗುತ್ತೆ. ಆತನು ಯಾವತ್ತು ನಿಮ್ಮ ಕೈ ಬಿಡಲ್ಲ.”

a ಒಬ್ಬ ವ್ಯಕ್ತಿಯಲ್ಲಿ ಲೈಂಗಿಕ ಭಾವನೆಗಳನ್ನು ಉದ್ರೇಕಿಸೋ ವಿಷಯಗಳನ್ನ ಪೋರ್ನೋಗ್ರಫಿ ಅಥವಾ ಅಶ್ಲೀಲ ವಿಷಯಗಳು ಅಂತ ಕರೆಯಲಾಗುತ್ತೆ. ಇದರಲ್ಲಿ ಲೈಂಗಿಕ ವಿಷಯಗಳನ್ನ ಅಥವಾ ಚಿತ್ರಗಳನ್ನ ನೋಡೋದು, ಕೇಳೋದು ಮತ್ತು ಓದೋದು ಸೇರಿದೆ.

b ಈ ಲೇಖನದಲ್ಲಿ ಕೆಲವು ಹೆಸರುಗಳು ಬದಲಾಗಿವೆ.

c ಯೆಹೋವ ಅನ್ನೋದು ಬೈಬಲಲ್ಲಿ ತಿಳಿಸಿರೋ ದೇವರ ಹೆಸರು.