ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮುಖಪುಟ ಲೇಖನ | ಚಿಂತೆಗೆ ಚಿಕಿತ್ಸೆ

‘ಹಣ ಇಲ್ವಲ್ಲಾ!’ ಅನ್ನುವ ಚಿಂತೆ

‘ಹಣ ಇಲ್ವಲ್ಲಾ!’ ಅನ್ನುವ ಚಿಂತೆ

“ನಮ್ಮ ದೇಶದಲ್ಲಿ ಇದ್ದಕ್ಕಿದ್ದ ಹಾಗೆ ಹಣದ (ಆರ್ಥಿಕ ಮುಗ್ಗಟ್ಟು) ಸಮಸ್ಯೆ ಬಂತು. ಇದರ ಪರಿಣಾಮ ಆಹಾರದ ಕೊರತೆ ತಲೆ ಎತ್ತಿದ್ದರಿಂದ ಅದರ ಬೆಲೆ ಗಗನಕ್ಕೇರಿತ್ತು” ಎಂದು ಇಬ್ಬರು ಮಕ್ಕಳ ತಂದೆ ಪೌಲ್‌ ಹೇಳುತ್ತಾನೆ. “ಆಹಾರವನ್ನು ಕೊಂಡುಕೊಳ್ಳಲು ಗಂಟೆಗಟ್ಟಲೆ ಕ್ಯೂನಲ್ಲಿ ನಿಂತು ಕಾಯೋ ಪರಿಸ್ಥಿತಿ ಬಂತು. ಎಷ್ಟೋ ಸಲ ನಮ್ಮ ಸರದಿ ಬರುವವಷ್ಟರಲ್ಲಿ ತಗೊಳ್ಳೋಕೆ ಏನೂ ಉಳಿದಿರುತ್ತಿರಲಿಲ್ಲ. ಜನ ಅಂತೂ ಒಂದೊತ್ತು ಊಟಾನೂ ಇಲ್ಲದೆ ಒಣಗಿಹೋಗಿದ್ದರು. ಎಷ್ಟೋ ಜನ ಸುಸ್ತಾಗಿ ರಸ್ತೆಯಲ್ಲೇ ಬಿದ್ದು ಹೋಗುತ್ತಿದ್ದರು. ದಿನನಿತ್ಯದ ವಸ್ತುಗಳ ಬೆಲೆ ಕೋಟಿಗೆ ಏರಿತ್ತು. ಕೊನೆಗೆ, ನಮ್ಮ ದೇಶದ ದುಡ್ಡಿನ (ಕರೆನ್ಸಿ) ಬೆಲೆನೇ ಶೂನ್ಯವಾಯಿತು. ಇದರಿಂದಾಗಿ ನಾನು ಬ್ಯಾಂಕ್‍ನಲ್ಲಿ ಹಾಕಿದ್ದ ಹಣ, ವಿಮೆಯ ಹಣ, ಪಿಂಚಣಿಯ ಹಣ ಎಲ್ಲ ಇದ್ದೂ ವ್ಯರ್ಥವಾಯಿತು.”

ಪೌಲ್‌

ಇಂಥ ಪರಿಸ್ಥಿತಿಯಲ್ಲಿ ತನ್ನ ಕುಟುಂಬ ಬದುಕುಳಿಯಬೇಕೆಂದರೆ ವಿವೇಚನೆಯಿಂದ ಹೆಜ್ಜೆಗಳನ್ನು ತೆಗೆದುಕೊಳ್ಳಬೇಕು ಅಂತ ಪೌಲ್‌ ಮನಗಂಡನು. (ಜ್ಞಾನೋಕ್ತಿ 3:21) “ನಾನು ಎಲೆಕ್ಟ್ರಿಕಲ್‌ ಕಂಟ್ರ್ಯಾಕ್ಟರ್‌ ಆಗಿದ್ದೆ. ಆದರೆ ಈ ಪರಿಸ್ಥಿತಿಯಲ್ಲಿ ಯಾವುದೇ ಕೆಲಸ ಮಾಡಲು ತಯಾರಿದ್ದೆ, ಕಡಿಮೆ ದುಡ್ಡಿಗೂ ಕೆಲಸ ಮಾಡಿದೆ. ಕೆಲವರು ಸಂಬಳದ ರೂಪದಲ್ಲಿ ನನಗೆ ಊಟ ಅಥವಾ ಮನೆಗೆ ಬೇಕಾಗಿರೋ ವಸ್ತುಗಳನ್ನು ಕೊಡುತ್ತಿದ್ದರು. 4 ಸಾಬೂನು ಕೊಟ್ಟಾಗ ಅವುಗಳಲ್ಲಿ ಎರಡನ್ನು ಉಪಯೋಗಿಸಿ ಇನ್ನೆರಡನ್ನು ಬೇರೆಯವರಿಗೆ ಮಾರುತ್ತಿದ್ದೆ. ಹೀಗೆ ಮಾಡಿದ್ದರಿಂದ ಸ್ವಲ್ಪ ಸಮಯದಲ್ಲೇ 40 ಕೋಳಿಮರಿಗಳನ್ನು ಖರೀದಿಸಲು ಸಾಧ್ಯವಾಯಿತು. ಅವು ದೊಡ್ಡವಾದಾಗ ಅವನ್ನು ಮಾರಿ ಇನ್ನೂ 300 ಕೋಳಿಮರಿಗಳನ್ನು ಖರೀದಿಸಿದೆ. ನಂತರ 50 ಕೋಳಿಗಳನ್ನು ಕೊಟ್ಟು 50 ಕೆ.ಜಿ.ಯ ಎರಡು ಚೀಲ ಜೋಳದ ಹಿಟ್ಟನ್ನು ತಗೊಂಡೆ. ಅದರಿಂದ ಎಷ್ಟೋ ದಿನಗಳು ನನ್ನ ಕುಟುಂಬ ಮತ್ತು ಇನ್ನೂ ಕೆಲವು ಕುಟುಂಬಗಳ ಜೀವನ ನಡೀತು.”

ಇಂಥ ಪರಿಸ್ಥಿತಿಯಲ್ಲಿ ದೇವರ ಮೇಲೆ ನಂಬಿಕೆ ಇಡುವುದು ಸಹ ತುಂಬ ಪ್ರಾಮುಖ್ಯ ಎಂದು ಪೌಲ್‌ಗೆ ಗೊತ್ತಿತ್ತು. ದೇವರು ಹೇಳಿದ್ದನ್ನು ನಾವು ಮಾಡಿದರೆ ಆತನು ಖಂಡಿತ ನಮಗೆ ಸಹಾಯ ಮಾಡುತ್ತಾನೆ. ಜೀವನಕ್ಕೆ ಬೇಕಾದ ವಸ್ತುಗಳು ಸಿಗುತ್ತೋ ಇಲ್ವೋ ಅಂತ ‘ಚಿಂತೆಮಾಡುವುದನ್ನು ಬಿಟ್ಟುಬಿಡಿರಿ. ಏಕೆಂದರೆ ಇವು ನಿಮಗೆ ಬೇಕಾಗಿವೆ ಎಂಬುದು ನಿಮ್ಮ ತಂದೆಗೆ ತಿಳಿದಿದೆ’ ಎಂದು ಯೇಸು ಹೇಳಿದ್ದಾನೆ.—ಲೂಕ 12:29-31.

ದುಃಖಕರವಾಗಿ, ಇವತ್ತಿನ ಹೆಚ್ಚಿನ ಜನರು “ದುಡ್ಡೇ ದೊಡ್ಡಪ್ಪ” ಎಂದು ಯೋಚಿಸುವಂತೆ ದೇವರ ಶತ್ರುವಾಗಿರುವ ಸೈತಾನನು ಪ್ರಚೋದಿಸುತ್ತಿದ್ದಾನೆ. ಜೀವನಕ್ಕೆ ಅತ್ಯಾವಶ್ಯಕವಾದ ವಿಷಯಗಳನ್ನು ಮತ್ತು ತಾವು ಇಷ್ಟಪಡುವಂಥದೆಲ್ಲವನ್ನು ಹೇಗೆ ಪಡೆದುಕೊಳ್ಳುವುದು ಅಂತ ಜನರು ಅತಿಯಾಗಿ ಚಿಂತೆ ಮಾಡುತ್ತಾರೆ. ಅಗತ್ಯ ಇಲ್ಲದಿರುವ ವಸ್ತುಗಳನ್ನೂ ಖರೀದಿಸುತ್ತಾರೆ. ತುಂಬ ಜನ ಹೀಗೆಲ್ಲ ಖರೀದಿಸಿ ಮೈ ತುಂಬ ಸಾಲ ಮಾಡಿಕೊಂಡು, ಕೊನೆಗೆ “ಸಾಲಗಾರನು ಸಾಲಕೊಟ್ಟವನಿಗೆ ಸೇವಕ” ಎಂಬ ಕಹಿಸತ್ಯವನ್ನು ಅರಿತಿದ್ದಾರೆ.—ಜ್ಞಾನೋಕ್ತಿ 22:7.

ಕಷ್ಟ ಬಂದಾಗ ಕೆಲವು ಜನ ತೆಗೆದುಕೊಳ್ಳುವ ನಿರ್ಧಾರಗಳು ಸರಿಯಿರುವುದಿಲ್ಲ. ಪೌಲ್‌ ಹೇಳುವುದು: “ನಮ್ಮ ಪರಿಚಯಸ್ಥರಲ್ಲಿ ಕೆಲವರು ಆರ್ಥಿಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ತಮ್ಮ ಕುಟುಂಬವನ್ನು, ಸ್ನೇಹಿತರನ್ನು ಬಿಟ್ಟು ದೇಶಾಂತರ ಹೋಗಿಬಿಟ್ಟರು. ಕೆಲವರು ಕಾನೂನುಬಾಹಿರವಾಗಿ ಬೇರೆ ದೇಶಕ್ಕೆ ಹೋದರು, ಅಲ್ಲಿ ಅವರಿಗೆ ಕೆಲಸ ಸಿಗಲಿಲ್ಲ. ಅಲ್ಲಿನ ಪೊಲೀಸ್‌ ಅಧಿಕಾರಿಗಳ ಕಣ್ಣು ತಪ್ಪಿಸಿ ಇರಬೇಕಾಯಿತು, ಫುಟ್‌ಪಾತ್‌ ಮೇಲೆ ಮಲಗುವ ಪರಿಸ್ಥಿತಿ ಬಂತು. ದೇವರ ಸಹಾಯ ಪಡೆದುಕೊಳ್ಳಲು ಅವರು ಪ್ರಯತ್ನಿಸಲೇ ಇಲ್ಲ. ಆದರೆ ನಾನೂ ನನ್ನ ಕುಟುಂಬ ಒಗ್ಗಟ್ಟಾಗಿದ್ದು, ದೇವರ ಸಹಾಯದಿಂದ ಈ ಆರ್ಥಿಕ ಸಮಸ್ಯೆಯನ್ನು ಎದುರಿಸೋಣ ಅಂತ ದೃಢನಿರ್ಧಾರ ಮಾಡಿದ್ದೆವು.”

ಯೇಸುವಿನ ಸಲಹೆಯನ್ನು ಪಾಲಿಸಿದಾಗ ಸಿಕ್ಕ ಪ್ರತಿಫಲ

ಪೌಲ್‌ ಮುಂದುವರಿಸುವುದು: “‘ನಾಳೆಯ ವಿಷಯವಾಗಿ ಎಂದೂ ಚಿಂತೆಮಾಡಬೇಡಿ; ನಾಳೆಯ ದಿನವೂ ತನ್ನದೇ ಆದ ಚಿಂತೆಗಳನ್ನು ಹೊಂದಿರುವುದು. ಪ್ರತಿದಿನಕ್ಕೆ ಅದಕ್ಕಿರುವ ಕೆಡುಕೇ ಸಾಕು’ ಎಂದು ಯೇಸು ಹೇಳಿದ್ದಾನೆ. ಹಾಗಾಗಿ ಪ್ರತಿದಿನ ನಾನು ದೇವರಿಗೆ ‘ನಮ್ಮ ಅನುದಿನದ ಆಹಾರವನ್ನು ಈ ಹೊತ್ತು ನಮಗೆ ದಯಪಾಲಿಸು’ ಎಂದಷ್ಟೇ ಪ್ರಾರ್ಥಿಸುತ್ತಿದ್ದೆ. ಯೇಸು ಹೇಳಿದಂತೆ ನಮಗೆ ಅಗತ್ಯವಿದ್ದದ್ದನ್ನು ದೇವರು ಕೊಟ್ಟನು. ಹಾಗಂತ ನನಗೆ ಯಾವುದು ತುಂಬ ಇಷ್ಟವೋ ಅದೇ ಸಿಗುತ್ತಿತ್ತು ಅಂತಾನೂ ಹೇಳಕ್ಕಾಗಲ್ಲ. ಒಮ್ಮೆ ಆಹಾರವನ್ನು ಖರೀದಿಸಲು ಕ್ಯೂನಲ್ಲಿ ನಿಂತಾಗ ಅಲ್ಲಿ ಏನನ್ನು ಮಾರುತ್ತಿದ್ದಾರೆ ಅಂತ ಗೊತ್ತಿರಲಿಲ್ಲ. ಆದರೆ ನನ್ನ ಸರದಿ ಬಂದಾಗ ಅಲ್ಲಿ ಮಾರುತ್ತಿದ್ದದ್ದು ಮೊಸರು ಅಂತ ಗೊತ್ತಾಯಿತು. ನನಗೆ ಮೊಸರು ಅಂದರೆ ಇಷ್ಟ ಆಗಲ್ಲ. ಆದರೂ ಅವತ್ತು ರಾತ್ರಿ ಅದನ್ನೇ ತಿಂದೆವು. ಹಣದ ಸಮಸ್ಯೆ ಇದ್ದಂಥ ಆ ಸಮಯದಲ್ಲಿ ಒಂದು ದಿನವೂ ನಾನು, ನನ್ನ ಹೆಂಡತಿ-ಮಕ್ಕಳು ಉಪವಾಸ ಮಲಗಲಿಲ್ಲ. ದೇವರು ಮಾಡಿದ ಈ ಸಹಾಯಕ್ಕೆ ನಾನು ಚಿರಋಣಿಯಾಗಿರುತ್ತೇನೆ.” *

“ನಾನು ಎಂದಿಗೂ ನಿನ್ನ ಕೈ ಬಿಡುವುದಿಲ್ಲ, ಎಂದಿಗೂ ತೊರೆಯುವುದಿಲ್ಲ” ಎಂದು ದೇವರು ಮಾತುಕೊಟ್ಟಿದ್ದಾನೆ.—ಇಬ್ರಿಯ 13:5

“ಈಗ ಅಷ್ಟೊಂದೇನು ಆರ್ಥಿಕ ಸಮಸ್ಯೆ ಇಲ್ಲ. ಆದರೆ ನಮ್ಮ ಅನುಭವದಿಂದ, ಚಿಂತೆ ಎಂಬ ಕಾಯಿಲೆಗೆ ದೇವರ ಮೇಲೆ ಭರವಸೆ ಇಡುವುದೇ ಉತ್ತಮ ಮದ್ದು ಎಂದು ಕಲಿತಿದ್ದೇವೆ. ನಾವೆಷ್ಟರವರೆಗೆ ಯೆಹೋವನು * ಹೇಳಿದ್ದನ್ನು ಮಾಡುತ್ತೇವೋ ಅಷ್ಟರವರೆಗೆ ಆತನು ನಮ್ಮನ್ನು ಕಾಪಾಡುತ್ತಾನೆ. ‘ಯೆಹೋವನು ಸರ್ವೋತ್ತಮನೆಂದು ಅನುಭವದಿಂದ ಸವಿದು ನೋಡಿರಿ, ಆತನನ್ನು ಆಶ್ರಯಿಸಿಕೊಂಡವರು ಎಷ್ಟೋ ಧನ್ಯರು’ ಎಂಬ ಕೀರ್ತನೆ 34:8ರಲ್ಲಿನ ಸತ್ಯವನ್ನು ನಮ್ಮ ಜೀವನದಲ್ಲಿ ಅನುಭವಿಸಿದ್ದೇವೆ. ಒಂದುವೇಳೆ, ಮುಂದೇನೂ ಇದೇ ಥರ ಹಣದ ಸಮಸ್ಯೆ ಎದುರಾದರೆ ನಾವು ಭಯಪಡುವುದಿಲ್ಲ.”

ನಂಬಿಗಸ್ತರಿಗೆ “ಅನುದಿನದ ಆಹಾರ” ಸಿಗುವಂತೆ ದೇವರು ಸಹಾಯ ಮಾಡುತ್ತಾನೆ

“ಮನುಷ್ಯನಿಗೆ ಮುಖ್ಯವಾಗಿ ಬೇಕಾಗಿರುವುದು ಉದ್ಯೋಗ ಅಥವಾ ದುಡ್ಡಲ್ಲ ಬದಲಿಗೆ ಊಟ ಅಷ್ಟೇ ಅನ್ನೋದು ನಮಗೆ ಈಗ ಸ್ಪಷ್ಟವಾಗಿದೆ. ‘ಬೆಟ್ಟಗಳ ಮೇಲೆಲ್ಲಾ ಬೆಳೆಯು ಸಮೃದ್ಧಿಯಾಗುವುದು’ ಎಂದು ದೇವರು ಕೊಟ್ಟಿರುವ ಮಾತು ನೆರವೇರುವ ದಿನಕ್ಕಾಗಿ ನಾವು ಕಾಯುತ್ತಾ ಇದ್ದೇವೆ. ಅಲ್ಲಿಯವರೆಗೆ ನಮಗೆ ‘ಅನ್ನವಸ್ತ್ರಗಳಿದ್ದರೆ ಸಾಕು, ನಾವು ಈ ವಿಷಯಗಳಲ್ಲಿ ತೃಪ್ತರಾಗಿರಬೇಕು’ ಅಂತ ನಿರ್ಧರಿಸಿದ್ದೇವೆ. ನಾವು ಬೈಬಲಿನ ಈ ವಚನದಿಂದ ಸಹ ಬಲ ಪಡೆದುಕೊಂಡಿದ್ದೇವೆ. ಅದು ಹೇಳುವುದು: ‘ನೀವು ನಿಮಗಿರುವವುಗಳಲ್ಲಿಯೇ ತೃಪ್ತರಾಗಿರುವಾಗ ನಿಮ್ಮ ಜೀವನ ರೀತಿಯು ಹಣದ ಪ್ರೇಮದಿಂದ ಮುಕ್ತವಾಗಿರಲಿ. ಏಕೆಂದರೆ ನಾನು ಎಂದಿಗೂ ನಿನ್ನ ಕೈಬಿಡುವುದಿಲ್ಲ, ಎಂದಿಗೂ ತೊರೆಯುವುದಿಲ್ಲ ಎಂದು ದೇವರು ಹೇಳಿದ್ದಾನೆ. ಆದುದರಿಂದ ನಾವು “ಯೆಹೋವನು ನನ್ನ ಸಹಾಯಕನು; ನಾನು ಭಯಪಡೆನು” ಎಂದು ಧೈರ್ಯವಾಗಿ ಹೇಳಬಹುದು.’” *

ಪೌಲ್‌ ಮತ್ತವನ ಕುಟುಂಬ ಮಾಡಿದಂತೆ ‘ದೇವರೊಂದಿಗೆ ಅನ್ಯೋನ್ಯವಾಗಿ ನಡೆದುಕೊಳ್ಳಲು’ ನಂಬಿಕೆ ಇರಬೇಕು. (ಆದಿಕಾಂಡ 6:9) ನಮಗೀಗ ಹಣದ ಸಮಸ್ಯೆ ಇರಬಹುದು ಅಥವಾ ಮುಂದೊಂದು ದಿನ ಬರಬಹುದು. ಆಗ ನಂಬಿಕೆ ಮತ್ತು ವಿವೇಚನೆಯನ್ನು ಹೇಗೆ ತೋರಿಸಬಹುದು ಅಂತ ಪೌಲ್‍ನ ಅನುಭವದಿಂದ ಕಲಿಯಬಹುದು.

ಆದರೆ ಕುಟುಂಬದಲ್ಲಿನ ಸಮಸ್ಯೆ ಬಗ್ಗೆ ಚಿಂತೆ ಇದ್ದರೆ ಆಗೇನು ಮಾಡಬಹುದು? (w15-E 07/01)

^ ಪ್ಯಾರ. 10 ಬೈಬಲಿನಲ್ಲಿ ಯೆಹೋವ ಎನ್ನುವುದು ದೇವರ ಹೆಸರಾಗಿದೆ.