ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

 ಮುಖಪುಟ ಲೇಖನ | ಧೂಮಪಾನದ ಬಗ್ಗೆ ದೇವರ ನೋಟ

ಧೂಮಪಾನದ ಬಗ್ಗೆ ದೇವರ ನೋಟವೇನು?

ಧೂಮಪಾನದ ಬಗ್ಗೆ ದೇವರ ನೋಟವೇನು?

ಆರಂಭದ ಲೇಖನದಲ್ಲಿ ತಿಳಿಸಲಾದ ನಾವೊಕೋ ಧೂಮಪಾನದ ದುಶ್ಚಟದಿಂದ ಮುಕ್ತಳಾಗಲು ಯಾವುದು ಸಹಾಯ ಮಾಡಿತೆಂದು ಹೇಳಿದ್ದು: “ನಾನು ದೇವರ ಗುಣಗಳ ಮತ್ತು ಉದ್ದೇಶದ ಕುರಿತಾದ ಸತ್ಯ ತಿಳಿದುಕೊಂಡಿದ್ದರಿಂದ ನನ್ನ ಬದುಕನ್ನೇ ಬದಲಾಯಿಸಲು ಶಕ್ತಳಾದೆ.” ಆ ಸತ್ಯವನ್ನು ಆಕೆ ಬೈಬಲಿನಿಂದ ತಿಳಿದುಕೊಂಡಳು. ಬೈಬಲಿನಲ್ಲಿ ತಂಬಾಕಿನ ಪ್ರಸ್ತಾಪವೇ ಇಲ್ಲದಿದ್ದರೂ ಧೂಮಪಾನದ * ಬಗ್ಗೆ ದೇವರ ನೋಟವೇನೆಂದು ತಿಳಿದುಕೊಳ್ಳಲು ಅದು ನಮಗೆ ಸಹಾಯಮಾಡುತ್ತದೆ. ಆ ಸತ್ಯದ ತಿಳುವಳಿಕೆಯೇ ಎಷ್ಟೋ ಜನರಿಗೆ ಈ ದುಶ್ಚಟವನ್ನು ಮೆಟ್ಟಿನಿಲ್ಲಲು ಸಹಾಯಮಾಡಿದೆ. (2 ತಿಮೊಥೆಯ 3:16, 17) ನಾವೀಗ ಧೂಮಪಾನದಿಂದಾಗುವ ಮೂರು ದುಷ್ಪರಿಣಾಮಗಳನ್ನು ಚರ್ಚಿಸುತ್ತಾ ಅದರ ಬಗ್ಗೆ ಬೈಬಲ್‌ ಏನು ಹೇಳುತ್ತದೆಂದು ನೋಡೋಣ.

ಧೂಮಪಾನ ಒಂದು ದುಶ್ಚಟ

ತಂಬಾಕಿನಲ್ಲಿ ನಿಕೊಟಿನ್‌ ಎಂಬ ಚಟ ಹಿಡಿಸುವ ಮಾದಕ ಪದಾರ್ಥವಿದೆ. ಇದಕ್ಕೆ ಚುರುಕುಗೊಳಿಸುವ ಅಥವಾ ಮಂಕುಗೊಳಿಸುವ ಶಕ್ತಿಯಿದೆ. ಧೂಮಪಾನ ಮಾಡಿದಾಗೆಲ್ಲಾ ಈ ನಿಕೊಟಿನ್‌ ಕ್ಷಣಮಾತ್ರದಲ್ಲಿ ಮತ್ತು ಪದೇ ಪದೇ ಮೆದುಳಿಗೆ ಸೇರುತ್ತಿರುತ್ತದೆ. ಸಿಗರೇಟಿನಿಂದ ಹೊಗೆಯನ್ನು ಎಳೆದ ಪ್ರತಿಬಾರಿ ಸಾಕಷ್ಟು ಪ್ರಮಾಣದ ನಿಕೊಟಿನ್‌ ಮೆದುಳಿನ ಮೇಲೆ ಪ್ರಭಾವ ಬೀರುತ್ತದೆ. ಒಬ್ಬ ವ್ಯಕ್ತಿ ದಿನಕ್ಕೆ ಒಂದು ಪ್ಯಾಕ್‌ ಸಿಗರೇಟ್‌ ಸೇದಿದರೆ, 200 ಬಾರಿ ಅವನ ಮೆದುಳಿನ ಮೇಲೆ ಪ್ರಭಾವ ಬೀರುತ್ತದೆ. ಬೇರೆ ಯಾವುದೇ ಮಾದಕ ಪದಾರ್ಥಕ್ಕಿಂತ ಇದು ಹೆಚ್ಚು ಬಾರಿ ಪ್ರಭಾವ ಬೀರುವುದರಿಂದ ಸುಲಭವಾಗಿ ಒಬ್ಬ ವ್ಯಕ್ತಿಯನ್ನು ತನಗೆ ದಾಸನನ್ನಾಗಿಸಿಕೊಳ್ಳುತ್ತದೆ. ಒಬ್ಬ ವ್ಯಕ್ತಿ ತಂಬಾಕಿನ ಬಲೆಗೆ ಬಿದ್ದ ಮೇಲೆ ನಿಕೊಟಿನ್‍ನ ಅಂಶ ಬೇಕೆನಿಸಿದಾಗೆಲ್ಲಾ ಅದು ಸಿಗದಿದ್ದರೆ ಅವನು ತನ್ನ ತ್ರಾಣವನ್ನೇ ಕಳೆದುಕೊಳ್ಳುತ್ತಾನೆ.

“ನೀವು ಅವನಿಗೆ ವಿಧೇಯರಾಗುವುದರಿಂದ ಅವನಿಗೆ ದಾಸರಾಗಿದ್ದೀರಿ.” —ರೋಮನ್ನರಿಗೆ 6:16

ನೀವು ತಂಬಾಕಿಗೆ ದಾಸರಾಗಿರುವುದಾದರೆ ದೇವರಿಗೆ ವಿಧೇಯರಾಗಿರಲು ಸಾಧ್ಯವೇ?

‘ನೀವು ಯಾವನಿಗಾದರೂ ವಿಧೇಯತೆ ತೋರಿಸಲು ನಿಮ್ಮನ್ನು ಒಪ್ಪಿಸಿಕೊಡುತ್ತೀರಾದರೆ ನೀವು ಅವನಿಗೆ ದಾಸರಾಗಿದ್ದೀರಿ’ ಎಂದು ಹೇಳುವ ಮೂಲಕ ಈ ವಿಷಯದ ಕುರಿತು ಸರಿಯಾದ ನೋಟವನ್ನಿಟ್ಟುಕೊಳ್ಳಲು ಬೈಬಲ್‌ ನಮಗೆ ಸಹಾಯಮಾಡುತ್ತದೆ. (ರೋಮನ್ನರಿಗೆ 6:16, ಪವಿತ್ರ ಗ್ರಂಥ) ಒಬ್ಬ ವ್ಯಕ್ತಿ ತಂಬಾಕು ಸೇವನೆಗಾಗಿ ಹಾತೊರೆಯುವುದಾದರೆ ಅದು ಅವನ ಯೋಚನೆ ಮತ್ತು ಕ್ರಿಯೆಗಳನ್ನು ನಿಯಂತ್ರಿಸುತ್ತದೆ. ಆಗ ಬಲು ಬೇಗನೆ ಆ ವ್ಯಕ್ತಿ ಅದಕ್ಕೆ ಗುಲಾಮನಾಗಿ ಬಿಡುತ್ತಾನೆ. ಆದರೆ ದೇವರಾದ ಯೆಹೋವನು ಕೇವಲ ನಮ್ಮ ದೇಹಕ್ಕೆ ಹಾನಿ ಮಾಡುವ ಕೆಟ್ಟಭ್ಯಾಸಗಳಿಂದ ಮಾತ್ರವಲ್ಲ ನಮ್ಮ ಮನಸ್ಸನ್ನು ಅಂದರೆ ಮಾನಸಿಕ ಪ್ರವೃತ್ತಿಯನ್ನು ಕೆಡಿಸುವ ಇತರ ವಿಷಯಗಳಿಂದಲೂ ನಾವು ದೂರವಿರುವಂತೆ ಬಯಸುತ್ತಾನೆ. (ಕೀರ್ತನೆ 83:18; 2 ಕೊರಿಂಥ 7:1) ಆದ್ದರಿಂದ ಒಬ್ಬ ವ್ಯಕ್ತಿ ಯೆಹೋವನನ್ನು ಮಾನ್ಯಮಾಡಲು ಮತ್ತು ಗೌರವಿಸಲು ಕಲಿಯುವಾಗ, ದೇವರು ತನ್ನಿಂದ ಅತ್ಯುತ್ತಮವಾದದ್ದನ್ನು ಬಯಸುತ್ತಾನೆಂದೂ ಅದೇ ಸಮಯದಲ್ಲಿ ಈ ಮಾರಣಾಂತಿಕ ಚಟಕ್ಕೆ ದಾಸನಾಗಿರಲು ಸಾಧ್ಯವಿಲ್ಲವೆಂದೂ ತಿಳಿದುಕೊಳ್ಳುತ್ತಾನೆ. ಈ ಮನವರಿಕೆ ದುಶ್ಚಟವನ್ನು ಬಿಟ್ಟುಬಿಡಬೇಕೆಂಬ ದೃಢಮನಸ್ಸನ್ನು ಕೊಡುತ್ತದೆ.

ಜರ್ಮನಿಯಲ್ಲಿ ವಾಸಿಸುವ ಓಲಾಫ್‌ ತನ್ನ 12ರ ಪ್ರಾಯದಲ್ಲೇ ಧೂಮಪಾನವನ್ನು ಆರಂಭಿಸಿ ಸುಮಾರು 16 ವರ್ಷಗಳು ಅದಕ್ಕೆ ದಾಸರಾಗಿದ್ದರು. ಮೊದಲ ಬಾರಿ ಸಿಗರೇಟ್‌ ಸೇದಿದಾಗ, ಒಂದು ಸಿಗರೇಟಿನಿಂದ ಏನೂ ಆಗಲ್ಲ ಅಂತ ಅಂದುಕೊಂಡರು. ಆದರೆ ವರ್ಷಗಳು ಉರುಳಿದಂತೆ ಅದು ನಿಯಂತ್ರಿಸಲಾರದಂತಹ ದುಶ್ಚಟವಾಗಿ ಹೋಯಿತು. ಅವರು ಹೇಳುವುದು: “ಒಮ್ಮೆ ನನ್‌ ಹತ್ರ ಒಂದೇ ಒಂದ್‌ ಸಿಗರೇಟೂ ಇರಲಿಲ್ಲ. ಸಿಗರೇಟ್‌ ಸೇದದೆ ಇರಲಿಕ್ಕೆ ನನಗೆಷ್ಟು ಕಷ್ಟ ಆಯಿತೆಂದರೆ ಈ ಹಿಂದೆ ಸೇದಿ ಉಳಿದಿದ್ದ ಸಿಗರೇಟ್‌ ತುಂಡುಗಳನ್ನು ಒಟ್ಟು ಮಾಡಿ ಅದರಲ್ಲಿದ್ದ ಅಲ್ಪಸ್ವಲ್ಪ ತಂಬಾಕು ಪುಡಿಯನ್ನು ನ್ಯೂಸ್‌ ಪೇಪರ್‌ನ ಒಂದು ಸಣ್ಣ ತುಣುಕಿನಲ್ಲಿ ಹಾಕಿ ಅದನ್ನು ಸುತ್ತಿ ಸಿಗರೇಟ್‌ ಮಾಡಿಕೊಂಡೆ. ಆದರೆ ಆಮೇಲೆ ನಾನು ಮಾಡಿದ ಕೆಲಸ ನೋಡಿ ನನಗೇ ನಾಚಿಕೆ ಆಯಿತು.” ಹಾಗಾದರೆ ಇಂಥ ಕೀಳ್ಮಟ್ಟದ ದುರಾಭ್ಯಾಸವನ್ನು ಅವರು ಹೇಗೆ ತಾನೇ ಬಿಟ್ಟರು? “ಸಿಗರೇಟ್‌ ಸೇದುವುದನ್ನು ಬಿಡುವುದಕ್ಕೆ ಪ್ರಾಮುಖ್ಯ ಕಾರಣ ಯೆಹೋವನನ್ನು ಮೆಚ್ಚಿಸಬೇಕೆಂಬ ಬಯಕೆಯೇ ಆಗಿತ್ತು. ಮನುಷ್ಯರ ಮೇಲೆ ಯೆಹೋವನಿಗಿರುವ ಪ್ರೀತಿ ಮತ್ತು ಆತನು ಕೊಟ್ಟಿರುವ ಆಶ್ವಾಸನೆ ನನಗೆ ಈ ದುಶ್ಚಟದಿಂದ ಶಾಶ್ವತವಾಗಿ ದೂರವಿರಲು ಸಹಾಯ ಮಾಡಿತು” ಎಂದು ಅವರು ಹೇಳುತ್ತಾರೆ.

 ಧೂಮಪಾನ ದೇಹಕ್ಕೆ ಹಾನಿಕರ

“ಸಿಗರೇಟು ಸೇದುವುದರಿಂದ. . . ದೇಹದ ಎಲ್ಲಾ ಭಾಗಗಳಿಗೂ ಹಾನಿಯಾಗುತ್ತದೆ ಮಾತ್ರವಲ್ಲ, ಕಾಯಿಲೆ ಮತ್ತು ಸಾವಿನ ಸಂಖ್ಯೆಗಳೂ ಹೆಚ್ಚಾಗುತ್ತವೆ ಎಂದು ವೈಜ್ಞಾನಿಕವಾಗಿ ಸಾಬೀತಾಗಿದೆ” ಎಂದು ದ ಟೊಬ್ಯಾಕೊ ಅಟ್ಲಾಸ್‌ ತಿಳಿಸುತ್ತದೆ. ಧೂಮಪಾನದಿಂದ ಕ್ಯಾನ್ಸರ್‌, ಹೃದ್ರೋಗ ಮತ್ತು ಶ್ವಾಸಕೋಶಕ್ಕೆ ಸಂಬಂಧಿಸಿದಂತಹ ಸಾಂಕ್ರಾಮಿಕವಲ್ಲದ ಕಾಯಿಲೆಗಳು ಬರುತ್ತವೆಂಬುದು ಎಲ್ಲರಿಗೂ ತಿಳಿದ ವಿಷಯವೇ. ಆದರೆ, ವಿಶ್ವ ಆರೋಗ್ಯ ಸಂಸ್ಥೆಯ (WHO) ಹೇಳಿಕೆಯ ಪ್ರಕಾರ ಕ್ಷಯ ರೋಗದಂತಹ ಸಾಂಕ್ರಾಮಿಕ ರೋಗಗಳಿಂದಾಗುವ ಸಾವುಗಳಲ್ಲಿ ಹೆಚ್ಚಿನ ಸಾವುಗಳಿಗೆ ಧೂಮಪಾನವೇ ಮುಖ್ಯ ಕಾರಣವಾಗಿದೆ.

“ನಿನ್ನ ದೇವರಾದ ಯೆಹೋವನನ್ನು ನಿನ್ನ ಪೂರ್ಣ ಹೃದಯದಿಂದಲೂ ನಿನ್ನ ಪೂರ್ಣ ಪ್ರಾಣದಿಂದಲೂ ನಿನ್ನ ಪೂರ್ಣ ಮನಸ್ಸಿನಿಂದಲೂ ಪ್ರೀತಿಸಬೇಕು.” —ಮತ್ತಾಯ 22:37

ದುಶ್ಚಟಕ್ಕೆ ಬಲಿಬಿದ್ದು ದೇವರು ಕೊಟ್ಟ ಶರೀರವನ್ನು ಹಾಳು ಮಾಡಿಕೊಳ್ಳುವುದಾದರೆ ದೇವರ ಮೇಲೆ ಪ್ರೀತಿ ಮತ್ತು ಗೌರವ ಇದೆಯೆಂದು ತೋರಿಸಿದಂತಾಗುತ್ತದಾ?

ತನ್ನ ವಾಕ್ಯವಾದ ಬೈಬಲಿನ ಮೂಲಕ ಯೆಹೋವ ದೇವರು ನಮ್ಮ ಜೀವ, ಶರೀರ ಮತ್ತು ಮಾನಸಿಕ ಸಾಮರ್ಥ್ಯವನ್ನು ಸರಿಯಾದ ದೃಷ್ಟಿಕೋನದಿಂದ ವೀಕ್ಷಿಸಲು ಕಲಿಸುತ್ತಾನೆ. ದೇವರ ಮಗನಾದ ಯೇಸು ಕ್ರಿಸ್ತನು ಅದನ್ನೇ ಒತ್ತಿ ಹೇಳಿದ್ದು: “ನಿನ್ನ ದೇವರಾದ ಯೆಹೋವನನ್ನು ನಿನ್ನ ಪೂರ್ಣ ಹೃದಯದಿಂದಲೂ ನಿನ್ನ ಪೂರ್ಣ ಪ್ರಾಣದಿಂದಲೂ ನಿನ್ನ ಪೂರ್ಣ ಮನಸ್ಸಿನಿಂದಲೂ ಪ್ರೀತಿಸಬೇಕು.” (ಮತ್ತಾಯ 22:37) ನಾವು ನಮ್ಮ ಜೀವ ಮತ್ತು ಶರೀರವನ್ನು ಸರಿಯಾಗಿ ಉಪಯೋಗಿಸಿ, ಗೌರವಿಸಬೇಕೆಂದು ಯೆಹೋವನು ಬಯಸುತ್ತಾನೆಂಬುದು ಸ್ಪಷ್ಟ. ಯೆಹೋವನ ಮತ್ತು ಆತನ ವಾಗ್ದಾನಗಳ ಬಗ್ಗೆ ಕಲಿತಂತೆ ಆತನ ಮೇಲೆ ನಮಗೆ ಪ್ರೀತಿ ಹೆಚ್ಚುತ್ತದೆ ಮತ್ತು ನಮಗೋಸ್ಕರ ಆತನು ಮಾಡಿದವುಗಳನ್ನು ಅಮೂಲ್ಯವೆಂದು ಎಣಿಸುತ್ತೇವೆ. ಇದು ನಮ್ಮ ಶರೀರವನ್ನು ಕಲುಷಿತಗೊಳಿಸುವ ಯಾವುದೇ ವಿಷಯದಿಂದ ದೂರವಿರುವಂತೆ ನಮ್ಮನ್ನು ಪ್ರಚೋದಿಸುತ್ತದೆ.

ಭಾರತದ ಜಯವಂತ್‌ ಎಂಬ ವೈದ್ಯರೊಬ್ಬರು 38 ವರ್ಷ ಕಾಲ ಧೂಮಪಾನ ವ್ಯಸನಿಯಾಗಿದ್ದರು. ಅವರು ಹೇಳುವುದು: “ವೈದ್ಯಕೀಯ ನಿಯತಕಾಲಿಕ ಪತ್ರಿಕೆಗಳಿಂದ ಧೂಮಪಾನದಿಂದಾಗುವ ಅಪಾಯಗಳ ಬಗ್ಗೆ ತಿಳಿದುಕೊಂಡೆ. ಆದ್ದರಿಂದ ಧೂಮಪಾನ ತಪ್ಪೆಂದು ನನಗೆ ಗೊತ್ತಿತ್ತು. ನನ್ನ ಹತ್ತಿರ ಬರುತ್ತಿದ್ದ ರೋಗಿಗಳಿಗೂ ಈ ದುಶ್ಚಟವನ್ನು ಬಿಟ್ಟುಬಿಡುವಂತೆ ಹೇಳುತ್ತಿದ್ದೆ. ಆದರೆ, ನನಗೇ ಅದನ್ನು ಬಿಡಲಿಕ್ಕೆ ಆಗಲಿಲ್ಲ, ಐದಾರು ಸಾರಿ ಕಠಿಣವಾಗಿ ಪ್ರಯತ್ನಿಸಿದರೂ ಆಗಲಿಲ್ಲ.” ಆದರೆ ಕೊನೆಗೂ ಅವರು ಅದರಿಂದ ಹೊರಬಂದರು. ಇಷ್ಟಕ್ಕೂ ಈ ದುಶ್ಟಟವನ್ನು ಬಿಟ್ಟುಬಿಡಲು ಅವರಿಗೆ ಸಹಾಯ ಮಾಡಿದ್ದಾದರೂ ಏನು? “ಬೈಬಲ್‌ ಅಧ್ಯಯನದ ಸಹಾಯದಿಂದ ನಾನು ಧೂಮಪಾನವನ್ನು ನಿಲ್ಲಿಸಿದೆ. ಯೆಹೋವನನ್ನು ಮೆಚ್ಚಿಸಬೇಕೆಂಬ ಬಯಕೆ ಈ ದುಶ್ಚಟವನ್ನು ಕೂಡಲೇ ನಿಲ್ಲಿಸಲು ನನ್ನನ್ನು ಪ್ರಚೋದಿಸಿತು” ಎಂದವರು ಹೇಳುತ್ತಾರೆ.

ಧೂಮಪಾನ ಇತರರಿಗೂ ಹಾನಿಕರ

ಧೂಮಪಾನಿಗಳು ಸೇದಿ ಬಿಡುವ ಹೊಗೆ ಮತ್ತು ನೇರವಾಗಿ ಸಿಗರೇಟಿನಿಂದ ಬರುವ ಹೊಗೆ ಎರಡೂ ವಿಷಪೂರಿತ. ಧೂಮಪಾನಿಗಳು ಸೇದಿ ಬಿಡುವ ಈ ಹೊಗೆಯಿಂದಾಗಿ ಕ್ಯಾನ್ಸರ್‌ ಮತ್ತು ಇತರ ಕಾಯಿಲೆಗಳು ಬರುತ್ತವೆ. ಇದರಿಂದ ಧೂಮಪಾನ ಮಾಡದ ಸುಮಾರು 6,00,000 ಜನರು ಪ್ರತಿ ವರ್ಷ ಸಾಯುತ್ತಿದ್ದಾರೆ. ಇವರಲ್ಲಿ ಹೆಚ್ಚಿನವರು ಸ್ತ್ರೀಯರು ಮತ್ತು ಮಕ್ಕಳೇ. “ಇತರರು ಸೇದಿ ಬಿಡುವ ಹೊಗೆಯಿಂದಾಗುವ ದುಷ್ಪರಿಣಾಮಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ” ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆಯ ವರದಿಯೊಂದನ್ನು ನೀಡಿದೆ.

“ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸಬೇಕು.”—ಮತ್ತಾಯ 22:39

ನೆರೆಯವರ ಮತ್ತು ಕುಟುಂಬದವರ ಮೇಲೆ ನಿಜವಾದ ಪ್ರೀತಿ ಇರುವುದಾದರೆ, ಧೂಮಪಾನದ ಹೊಗೆಯಿಂದ ಇತರರಿಗೆ ಹಾನಿಯಾಗುತ್ತದೆಂದು ತಿಳಿದೂ ನೀವು ಧೂಮಪಾನ ಮಾಡಲು ಬಯಸುತ್ತೀರೋ?

 “ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸಬೇಕು” ಎಂದು ಯೇಸು ಹೇಳಿದ ಮಾತಿನಿಂದ ನಾವು ಕುಟುಂಬದವರನ್ನು, ಸ್ನೇಹಿತರನ್ನು ಮತ್ತು ಸುತ್ತಮುತ್ತಲಿನ ಜನರನ್ನು ಪ್ರೀತಿಸಬೇಕೆಂದು ತಿಳಿದುಕೊಳ್ಳುತ್ತೇವೆ. (ಮತ್ತಾಯ 22:39) ಇದು ಯೆಹೋವನನ್ನು ಪೂರ್ಣ ಹೃದಯದಿಂದ ಪ್ರೀತಿಸಬೇಕೆಂಬ ಆಜ್ಞೆಯ ನಂತರದ ಆಜ್ಞೆಯಾಗಿದೆ. ನಮ್ಮ ಆಪ್ತರಿಗೆ ನೋವಾಗುವಂತಹ ಅಭ್ಯಾಸಗಳನ್ನು ನಾವು ಹೊಂದಿದ್ದರೆ, ನಾವು ನೆರೆಯವರಿಗೆ ಪ್ರೀತಿ ತೋರಿಸುತ್ತಿಲ್ಲ ಎಂದರ್ಥ. ನಿಜ ಪ್ರೀತಿ “ಪ್ರತಿಯೊಬ್ಬನು ತನ್ನ ಸ್ವಹಿತವನ್ನು ಚಿಂತಿಸದೆ ಪರಹಿತವನ್ನು ಚಿಂತಿಸುತ್ತಿರಲಿ” ಎಂಬ ಬೈಬಲಿನ ಹಿತೋಪದೇಶವನ್ನು ಅನ್ವಯಿಸಿಕೊಳ್ಳುವಂತೆ ಪ್ರಚೋದಿಸುತ್ತದೆ.—1 ಕೊರಿಂಥ 10:24.

ಅರ್ಮೇನಿಯಾದಲ್ಲಿ ವಾಸಿಸುವ ಆರ್ಮನ್‌ ಹೇಳುವುದು: “ಧೂಮಪಾನದಿಂದ ನನ್ನ ಕುಟುಂಬದವರಿಗೂ ಹಾನಿಯಾಗುತ್ತಿದ್ದರಿಂದ ಅದನ್ನು ನಿಲ್ಲಿಸುವಂತೆ ನನ್ನನ್ನು ಪರಿಪರಿಯಾಗಿ ಬೇಡಿಕೊಂಡರು. ಆದರೆ ನಾನು ಹಾಗೇನೂ ಹಾನಿ ಆಗಲ್ಲ ಅಂತ ಅವರ ಮಾತನ್ನು ಕಿವಿಗೇ ಹಾಕಿಕೊಳ್ಳುತ್ತಿರಲಿಲ್ಲ.” ತನ್ನ ದೃಷ್ಟಿಕೋನ ಬದಲಾಯಿಸಿದ್ದು ಯಾವುದೆಂದು ಅವನು ಹೇಳಿದ್ದು: “ಬೈಬಲ್‍ನ ಜ್ಞಾನ ಮತ್ತು ಯೆಹೋವ ದೇವರ ಮೇಲಿನ ಪ್ರೀತಿ ಧೂಮಪಾನವನ್ನು ಬಿಟ್ಟುಬಿಡಲು ನನಗೆ ಸಹಾಯಮಾಡಿತು. ಈ ಧೂಮಪಾನ ಕೇವಲ ನನಗೆ ಮಾತ್ರವಲ್ಲ ನನ್ನ ಸುತ್ತಲಿದ್ದ ಜನರಿಗೂ ಹಾನಿಕರವಾಗಿತ್ತೆಂದು ಅರ್ಥಮಾಡಿಕೊಂಡೆ.”

ಬಿಟ್ಟುಬಿಡಿ ಧೂಮಪಾನ — ನಿಮ್ಮದಾಗುವುದು ಒಳ್ಳೆಯ ಜೀವನ!

ತಮಗೂ ಇತರರಿಗೂ ಮಾರಕವಾಗಿದ್ದ ಆ ದುಶ್ಚಟದಿಂದ ಮುಕ್ತರಾಗಲು ಓಲಾಫ್‌, ಜಯವಂತ್‌ ಮತ್ತು ಆರ್ಮನ್‌ರಿಗೆ ಬೈಬಲಿನ ಜ್ಞಾನ ಸಹಾಯಮಾಡಿತು. ಧೂಮಪಾನ ಹಾನಿಕರವಾದದ್ದು ಎಂದು ಕೇವಲ ತಿಳಿದುಕೊಂಡಿದ್ದರಿಂದ ಅವರು ಅದನ್ನು ಬಿಟ್ಟುಬಿಡಲಿಲ್ಲ. ಯೆಹೋವನನ್ನು ಪ್ರೀತಿಸಿ, ಆತನನ್ನು ಸಂತೋಷಪಡಿಸಬೇಕೆಂದು ಬಯಸಿದ್ದರಿಂದ ಅದನ್ನು ಮೆಟ್ಟಿನಿಲ್ಲಲು ಸಾಧ್ಯವಾಯಿತು. ಈ ಪ್ರೀತಿಯ ಪ್ರಾಮುಖ್ಯ ಪಾತ್ರವನ್ನು 1 ಯೋಹಾನ 5:3 ರಲ್ಲಿ ಹೀಗೆ ಒತ್ತಿಹೇಳಲಾಗಿದೆ: “ದೇವರ ಮೇಲಣ ಪ್ರೀತಿ ಏನೆಂದರೆ ನಾವು ಆತನ ಆಜ್ಞೆಗಳನ್ನು ಕೈಕೊಂಡು ನಡೆಯುವುದೇ; ಆದರೂ ಆತನ ಆಜ್ಞೆಗಳು ಭಾರವಾದವುಗಳಲ್ಲ.” ಬೈಬಲಿನ ತತ್ವಗಳನ್ನು ಪಾಲಿಸುವುದು ಯಾವಾಗಲೂ ಸುಲಭವೇನಲ್ಲ ನಿಜ, ಆದರೆ ಒಬ್ಬ ವ್ಯಕ್ತಿಗೆ ದೇವರ ಮೇಲೆ ನಿಜವಾದ ಪ್ರೀತಿಯಿದ್ದರೆ ಆತನ ಮಾತಿಗೆ ವಿಧೇಯನಾಗುವುದು ಭಾರವೆಂದನಿಸುವುದಿಲ್ಲ.

ಭೂವ್ಯಾಪಕ ಬೈಬಲ್‌ ಶಿಕ್ಷಣದ ಕಾರ್ಯಾಚರಣೆಯ ಮುಖಾಂತರ ತಂಬಾಕಿನ ದಾಸತ್ವದಿಂದ ಹೊರಬರಲು ಮತ್ತು ಅದಕ್ಕೆ ದಾಸರಾಗದಿರಲು ಲಕ್ಷಾಂತರ ಜನರಿಗೆ ಯೆಹೋವ ದೇವರು ಸಹಾಯಮಾಡುತ್ತಿದ್ದಾನೆ. (1 ತಿಮೊಥೆಯ 2:3, 4) ಅತೀ ಬೇಗನೆ ತನ್ನ ಮಗನಾದ ಯೇಸು ಕ್ರಿಸ್ತನ ನಾಯಕತ್ವದಡಿಯಿರುವ ತನ್ನ ಸ್ವರ್ಗೀಯ ರಾಜ್ಯದ ಮೂಲಕ ಯೆಹೋವ ದೇವರು ಈ ದಾಸತ್ವಕ್ಕೆ ಕಾರಣವಾಗಿರುವ, ಲಕ್ಷಾಂತರ ಜನರ ಪ್ರಾಣ ತೆಗೆದುಕೊಳ್ಳುತ್ತಿರುವ ದುರಾಸೆ ತುಂಬಿದ ವಾಣಿಜ್ಯ ವ್ಯವಸ್ಥೆಯನ್ನು ಸಂಪೂರ್ಣವಾಗಿ ನಿರ್ನಾಮ ಮಾಡುತ್ತಾನೆ. ಎಲ್ಲರ ಒಳಿತಿಗಾಗಿ ಆತನು ಈ ಧೂಮಪಾನದ ಪಿಡುಗನ್ನು ನಿತ್ಯ ನಿರಂತರಕ್ಕೂ ತೆಗೆದುಹಾಕುತ್ತಾನೆ. ತದನಂತರ ವಿಧೇಯ ಮಾನವಕುಲಕ್ಕೆ ಪರಿಪೂರ್ಣ ದೇಹ ಮತ್ತು ಮನಸ್ಸನ್ನು ದಯಪಾಲಿಸುತ್ತಾನೆ.—ಯೆಶಾಯ 33:24; ಪ್ರಕಟನೆ 19:11, 15.

ಧೂಮಪಾನವನ್ನು ಬಿಡಲು ನಿಮಗೆ ಕಷ್ಟವಾಗುತ್ತಿದ್ದರೂ ಪ್ರಯತ್ನ ನಿಲ್ಲಿಸಬೇಡಿ. ಯೆಹೋವನನ್ನು ಪ್ರೀತಿಸಲು ಕಲಿತು ಈ ದುಶ್ಚಟದ ಬಗ್ಗೆ ಆತನ ನೋಟವನ್ನು ಮಾನ್ಯಮಾಡುವುದಾದರೆ, ನೀವೂ ಇದರಿಂದ ಯಶಸ್ವಿಯಾಗಿ ಹೊರಬರಲು ಪ್ರೇರಣೆಯನ್ನು ಪಡೆಯಸಾಧ್ಯವಿದೆ. ಬೈಬಲ್‌ ತತ್ವಗಳನ್ನು ಕಲಿತುಕೊಳ್ಳಲು ಮತ್ತು ಅದನ್ನು ಅನ್ವಯಿಸಿಕೊಳ್ಳಲು ಯೆಹೋವನ ಸಾಕ್ಷಿಗಳು ನಿಮಗೆ ಸಹಾಯಮಾಡುತ್ತಾರೆ. ನೀವು ತಂಬಾಕು ಸೇವನೆಯ ಚಟದಿಂದ ವಿಮುಕ್ತರಾಗಲು ಯೆಹೋವನ ಸಹಾಯವನ್ನು ಬಯಸುವುದಾದರೆ ಆತನು ಅಗತ್ಯವಾದ ಬಲವನ್ನು ಮತ್ತು ಸಾಮರ್ಥ್ಯವನ್ನು ಕೊಟ್ಟೇ ಕೊಡುತ್ತಾನೆ ಎಂಬ ದೃಢ ಭರವಸೆಯಿಂದಿರಿ.—ಫಿಲಿಪ್ಪಿ 4:13. (w14-E 06/01)

^ ಪ್ಯಾರ. 3 ಧೂಮಪಾನ ಅನ್ನುವಾಗೆಲ್ಲಾ ಅದು ನೇರವಾಗಿ ಬೀಡಿ, ಸಿಗರೇಟ್‌, ಚುಟ್ಟವನ್ನು ಸೇದುವುದಕ್ಕೆ ಸೂಚಿಸುತ್ತದಾದರೂ ಇಲ್ಲಿ ಚರ್ಚಿಸಲಾಗಿರುವ ತತ್ವಗಳು ತಂಬಾಕು ಅಗಿಯುವುದಕ್ಕೆ, ನಶ್ಯಕ್ಕೆ, ನಿಕೊಟಿನ್‌ ಇರುವ ಎಲೆಕ್ಟ್ರಾನಿಕ್‌ ಸಿಗರೇಟ್‌ಗೆ ಮತ್ತು ಇತರೆ ಚಟ ಹಿಡಿಸುವ ಮಾದಕ ಪದಾರ್ಥಗಳ ಸೇವನೆಗೂ ಅನ್ವಯಿಸುತ್ತವೆ.