ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮದುವೆಯ ಮೊದಲ ವರ್ಷವನ್ನು ಯಶಸ್ವಿಯಾಗಿ ಪೂರೈಸುವುದು ಹೇಗೆ?

ಮದುವೆಯ ಮೊದಲ ವರ್ಷವನ್ನು ಯಶಸ್ವಿಯಾಗಿ ಪೂರೈಸುವುದು ಹೇಗೆ?

ಕುಟುಂಬ ಸಂತೋಷಕ್ಕೆ ಕೀಲಿಕೈಗಳು

ಮದುವೆಯ ಮೊದಲ ವರ್ಷವನ್ನು ಯಶಸ್ವಿಯಾಗಿ ಪೂರೈಸುವುದು ಹೇಗೆ?

ಪತಿ: “ನನಗೂ ನನ್ನ ಹೆಂಡತಿಗೂ ಇರುವ ವ್ಯತ್ಯಾಸ ನೋಡಿದರೆ ತುಂಬ ಆಶ್ಚರ್ಯವಾಗುತ್ತದೆ. ಉದಾಹರಣೆಗೆ, ನನಗೆ ಬೆಳಗ್ಗೆ ಬೇಗ ಏಳುವ ಅಭ್ಯಾಸವಿದ್ದರೆ ಅವಳಿಗೆ ತಡವಾಗಿ ಏಳುವ ಅಭ್ಯಾಸ. ಅವಳ ಮೂಡ್‌ಗಳಾ? ಅಬ್ಬಬ್ಬಾ! ಯಾವಾಗ ಬದಲಾಗುತ್ತದೆಂದು ಹೇಳುವುದೇ ಕಷ್ಟ. ಇನ್ನೊಂದೇನೆಂದರೆ ನಾನು ಅಡುಗೆ ಮಾಡಿದರೆ ಏನಾದರೂ ತಪ್ಪು ಹುಡುಕುತ್ತಾ ಇರುತ್ತಾಳೆ. ಅದರಲ್ಲೂ ಪಾತ್ರೆ ಒರಸುವ ಬಟ್ಟೆಯಲ್ಲೇ ನಾನು ಯಾವತ್ತೂ ಕೈ ಒರಸುತ್ತೇನೆಂದು ಸಿಡುಕುತ್ತಾಳೆ.”

ಪತ್ನಿ: “ನನ್ನ ಗಂಡನ ಸ್ವಭಾವ ಹೇಗಂದರೆ ನೀವು ಹತ್ತು ಮಾತಾಡಿದರೆ ಅವರು ಒಂದು ಮಾತಾಡುತ್ತಾರೆ. ಆದರೆ ನನ್ನ ಅಮ್ಮನ ಮನೆಯಲ್ಲಿ ಎಲ್ಲರಿಗೂ ತುಂಬ ಮಾತಾಡಬೇಕು. ಊಟಮಾಡುವಾಗಲೂ ಅಷ್ಟೇ. ನನಗೆ ಅದೇ ರೂಢಿಯಾಗಿದೆ. ಇನ್ನೊಂದೇನೆಂದರೆ ನನ್ನ ಪತಿರಾಯ ಅಡುಗೆಗೆ ಇಳಿದರೆ ಒಂದೇ ಬಟ್ಟೆಯಲ್ಲಿ ಎಲ್ಲ ಮುಗಿಸುತ್ತಾರೆ, ಪಾತ್ರೆ ಒರಸುವುದೂ ಅದರಲ್ಲೇ ಕೈ ಒರಸುವುದೂ ಅದರಲ್ಲೇ! ಅದನ್ನು ನೋಡಿದರೆ ನನಗೆ ಕಿರಿಕಿರಿ ಆಗುತ್ತದೆ. ಈ ಗಂಡಸರನ್ನು ಅರ್ಥಮಾಡಿಕೊಳ್ಳುವುದೇ ಕಷ್ಟ. ಜನರು ವಿವಾಹ ಜೀವನದಲ್ಲಿ ಯಶಸ್ವಿಗಳಾಗುತ್ತಾರಂತೆ. ಅದು ಹೇಗೋ?”

ನೀವು ಹೊಸದಾಗಿ ಮದುವೆಯಾಗಿದ್ದೀರೋ? ಇಂಥದ್ದೇ ತೊಂದರೆಗಳನ್ನು ನೀವೂ ಎದುರಿಸಿದ್ದೀರೋ? ಮದುವೆ ಮುಂಚೆ ನಿಮ್ಮ ಸಂಗಾತಿಯನ್ನು ಭೇಟಿಯಾಗುತ್ತಿದ್ದಾಗೆಲ್ಲ ಇಲ್ಲದಿದ್ದ ಲೋಪದೋಷಗಳು ಈಗ ದಿಢೀರನೆ ಬಂದದ್ದೆಲ್ಲಿಂದ ಅಂತ ಅಚ್ಚರಿಪಡುತ್ತೀರೋ? ‘ಪ್ರತಿದಿನವೂ ವಿವಾಹಿತರು ಎದುರಿಸುವ ತೊಂದರೆಗಳಿಂದಾಗಿ’ ಆಗುವ ಪರಿಣಾಮಗಳನ್ನು ನೀವು ಹೇಗೆ ಕಡಿಮೆ ಮಾಡಬಲ್ಲಿರಿ?—1 ಕೊರಿಂಥ 7:28, ಟುಡೇಸ್‌ ಇಂಗ್ಲಿಷ್‌ ವರ್ಷನ್‌.

ವಿವಾಹ ಜೀವನಕ್ಕೆ ಕಾಲಿರಿಸಿದ್ದೀರೆಂದ ಮಾತ್ರಕ್ಕೆ ನೀವಿಬ್ಬರೂ ವೈವಾಹಿಕ ಜೀವನದಲ್ಲಿ ಪಾಂಡಿತ್ಯ ಪಡೆದಿದ್ದೀರೆಂದು ಭಾವಿಸಬೇಡಿ. ಅವಿವಾಹಿತರಾಗಿದ್ದಾಗ ನೀವು ಜನರೊಂದಿಗೆ ಚೆನ್ನಾಗಿ ಹೊಂದಿಕೊಂಡು ಹೋಗುವ ಅಮೂಲ್ಯ ಕೌಶಲಗಳನ್ನು ಬೆಳೆಸಿಕೊಂಡಿರಬಹುದು. ಮದುವೆ ಮುಂಚಿನ ಭೇಟಿಗಳಲ್ಲಿ ಆ ಕೌಶಲಗಳಿಗೆ ಇನ್ನಷ್ಟು ಮೆರುಗು ಬಂದಿರಬಹುದು. ಆದರೆ ವಿವಾಹವಾದಾಗ ಆ ಗುಣಗಳು ಹೊಸ ಹೊಸ ವಿಧಗಳಲ್ಲಿ ಪರೀಕ್ಷೆಗೆ ಈಡಾಗುತ್ತವೆ. ನೀವು ಹೊಸ ಕೌಶಲಗಳನ್ನೂ ಕಲಿಯಬೇಕಾದೀತು. ನಿಮ್ಮಿಂದ ತಪ್ಪುಗಳಾಗುವುದೋ? ಖಂಡಿತ. ಅಗತ್ಯ ಕೌಶಲಗಳನ್ನು ಬೆಳೆಸಿಕೊಳ್ಳಲು ನಿಮ್ಮಿಂದ ಸಾಧ್ಯವೇ? ನಿಶ್ಚಯ!

ಯಾವುದೇ ಕೌಶಲವನ್ನು ಉತ್ತಮಗೊಳಿಸುವ ಅತ್ಯುತ್ತಮ ವಿಧಾನ, ಆ ವಿಷಯದಲ್ಲಿ ಅಪಾರ ಜ್ಞಾನವಿರುವ ವ್ಯಕ್ತಿಯ ಸಲಹೆ ಕೇಳಿ ಅದನ್ನು ಕಾರ್ಯರೂಪಕ್ಕೆ ಹಾಕುವುದೇ. ವಿವಾಹದ ಬಗ್ಗೆ ಅಪಾರ ಜ್ಞಾನವಿರುವಾತ ಯೆಹೋವ ದೇವರು. ಎಷ್ಟೆಂದರೂ ನಮ್ಮಲ್ಲಿ ಮದುವೆಯ ಇಚ್ಛೆಯನ್ನಿಟ್ಟವನು ಆತನೇ ಅಲ್ಲವೇ? (ಆದಿಕಾಂಡ 2:22-24) ಆತನ ವಾಕ್ಯವಾದ ಬೈಬಲ್‌ ನಿಮಗೆ ವೈವಾಹಿಕ ಜೀವನದ ಸವಾಲುಗಳನ್ನು ಎದುರಿಸಲು ಮತ್ತು ವಿವಾಹಬಂಧದ ಮೊದಲನೇ ವರ್ಷವನ್ನು ಯಶಸ್ವಿಕರವಾಗಿ ಪೂರೈಸಿ ಸದಾ ಬಾಳುವ ಬಂಧವಾಗಿಸಲು ಬೇಕಾದ ಕೌಶಲಗಳನ್ನು ಬೆಳೆಸಿಕೊಳ್ಳಲು ನೆರವಾಗುತ್ತದೆ. ಹೇಗೆಂದು ಗಮನಿಸಿ.

ಕೌಶಲ 1. ಪರಸ್ಪರರ ಅಭಿಪ್ರಾಯ ಕೇಳಲು ಕಲಿಯಿರಿ

ಸವಾಲುಗಳೇನು? ಕೇಯ್ಜೀ * ಜಪಾನಿನ ನಿವಾಸಿ. ತಾನು ಮಾಡುತ್ತಿದ್ದ ನಿರ್ಣಯಗಳು ತನ್ನ ಹೆಂಡತಿಯನ್ನೂ ಬಾಧಿಸುತ್ತವೆಂದು ಕೆಲವೊಮ್ಮೆ ಮರೆತುಬಿಡುತ್ತಿದ್ದನು. “ಬೇರೆಯವರು ಎಲ್ಲಿಗಾದರೂ ನಮ್ಮನ್ನು ಕರೆದಾಗ ‘ಆಯ್ತು ಬರುತ್ತೇವೆ’ ಎಂದು ಹೆಂಡತಿಯನ್ನು ಕೇಳದೇ ಮಾತುಕೊಡುತ್ತಿದ್ದೆ. ಆ ಸಮಯಕ್ಕೆ ಬರಲು ಆಕೆಗೆ ಕಷ್ಟವಾಗುತ್ತದೆಂದು ಆಮೇಲೇ ಗೊತ್ತಾಗುತ್ತಿತ್ತು” ಎನ್ನುತ್ತಾನೆ ಆತ. ಆಸ್ಟ್ರೇಲಿಯದ ನಿವಾಸಿ ಆ್ಯಲನ್‌, “ಹೆಂಡತಿಯ ಅಭಿಪ್ರಾಯ ಕೇಳುವುದು ಗಂಡಸುತನವಲ್ಲ ಎಂದು ನೆನಸುತ್ತಿದ್ದೆ” ಎನ್ನುತ್ತಾನೆ. ಆತ ಬೆಳೆದು ಬಂದಿರುವ ಹಿನ್ನೆಲೆ ಹಾಗಿತ್ತು. ಈ ರೀತಿಯ ಸಮಸ್ಯೆ ಬ್ರಿಟನ್‌ನ ಡಯಾನ್‌ಳಿಗೂ ಇತ್ತು. “ಏನೇ ಮಾಡಬೇಕಾದರೂ ಮೊದಲು ನನ್ನ ಕುಟುಂಬದವರನ್ನು ಕೇಳುವ ರೂಢಿ ನನಗಿತ್ತು. ಹಾಗಾಗಿ ಮದುವೆಯಾದ ಹೊಸದರಲ್ಲಿ ಯಾವುದೇ ನಿರ್ಣಯ ಮಾಡುವ ಮೊದಲು ಗಂಡನನ್ನಲ್ಲ ನನ್ನ ಕುಟುಂಬದವರನ್ನೇ ಕೇಳುತ್ತಿದ್ದೆ” ಎಂದು ಆಕೆ ಹೇಳುತ್ತಾಳೆ.

ಪರಿಹಾರವೇನು? ಯೆಹೋವ ದೇವರ ದೃಷ್ಟಿಯಲ್ಲಿ ಪತಿಪತ್ನಿ “ಒಂದೇ ಶರೀರವಾಗಿದ್ದಾರೆ” ಎಂಬುದನ್ನು ನೆನಪಿಡಿ. (ಮತ್ತಾಯ 19:3-6) ಆತನ ದೃಷ್ಟಿಯಲ್ಲಿ ಸತಿಪತಿಗಳ ಮಧ್ಯೆಯಿರುವ ಅನುಬಂಧ ಬೇರಾವುದೇ ಮಾನವ ಸಂಬಂಧಕ್ಕಿಂತ ಮಿಗಿಲಾದದ್ದು! ಆ ಬಂಧವನ್ನು ಬಲವಾಗಿರಿಸಲು ಅವರ ಮಧ್ಯೆ ಮುಕ್ತ ಸಂವಾದ ಇರಲೇಬೇಕು.

ಯೆಹೋವ ದೇವರು ತನ್ನ ಸೇವಕ ಅಬ್ರಹಾಮನೊಂದಿಗೆ ಸಂವಾದಿಸಿದ ರೀತಿಯನ್ನು ಪರಿಶೀಲಿಸುವ ಮೂಲಕ ಪತಿಪತ್ನಿ ಬಹಳಷ್ಟನ್ನು ಕಲಿಯಬಲ್ಲರು. ಉದಾಹರಣೆಗೆ, ಬೈಬಲಿನ ಆದಿಕಾಂಡ 18:17-33ರಲ್ಲಿ ದಾಖಲಾಗಿರುವ ಸಂಭಾಷಣೆಯನ್ನು ದಯವಿಟ್ಟು ಓದಿ. ಅಬ್ರಹಾಮನನ್ನು ದೇವರು ಈ 3 ವಿಧಗಳಲ್ಲಿ ಗೌರವಿಸಿದ್ದನ್ನು ಗಮನಿಸಿ: (1) ತಾನು ಏನು ಮಾಡಲಿದ್ದೇನೆಂದು ವಿವರಿಸಿದನು. (2) ಅಬ್ರಹಾಮನು ಅಭಿಪ್ರಾಯಗಳನ್ನು ತಿಳಿಸುತ್ತಿದ್ದಾಗ ಆಲಿಸಿದನು. (3) ತಾನು ಕೈಗೊಳ್ಳಲಿದ್ದ ಕ್ರಮವನ್ನು ಸಾಧ್ಯವಾಗುವಷ್ಟರ ಮಟ್ಟಿಗೆ ಆ ಅಭಿಪ್ರಾಯಗಳಿಗೆ ಹೊಂದಿಸಿಕೊಂಡನು. ನಿಮ್ಮ ಸಂಗಾತಿಯ ಅಭಿಪ್ರಾಯ ಕೇಳುವಾಗ ನೀವೂ ಇದನ್ನು ಹೇಗೆ ಮಾಡಬಹುದು?

ಪ್ರಯತ್ನಿಸಿ ನೋಡಿ: ನಿಮ್ಮ ಸಂಗಾತಿಯನ್ನು ಬಾಧಿಸುವ ವಿಷಯಗಳ ಬಗ್ಗೆ ಮಾತಾಡುವಾಗ (1) ಸನ್ನಿವೇಶವನ್ನು ನೀವು ಹೇಗೆ ನಿಭಾಯಿಸಲು ಇಷ್ಟಪಡುತ್ತೀರೆಂದು ಅವರಿಗೆ ವಿವರಿಸಿ. ಆದರೆ ನಿಮ್ಮ ಮಾತೇ ಕಡೇ ಮಾತು ಅಥವಾ ಅಂತಿಮ ತೀರ್ಮಾನದಂತೆ ಇರದೇ ಸಲಹೆಯಂತಿರಬೇಕು. (2) ನಿಮ್ಮ ಸಂಗಾತಿಯ ಅಭಿಪ್ರಾಯವೇನೆಂದು ಕೇಳಿ. ಅದು ನಿಮ್ಮ ಅಭಿಪ್ರಾಯಕ್ಕಿಂತ ಭಿನ್ನವಾಗಿದ್ದರೂ ಅದನ್ನು ವ್ಯಕ್ತಪಡಿಸುವ ಹಕ್ಕು ಅವರಿಗಿದೆ ಎಂದು ಮನಸ್ಸಿನಲ್ಲಿಡಿ. (3) ಸಾಧ್ಯವಿರುವಾಗೆಲ್ಲ ಸಂಗಾತಿಯ ಆಯ್ಕೆಗಳಿಗೆ ಮಣಿಯಿರಿ. ಹೀಗೆ “ನಿಮ್ಮ ನ್ಯಾಯಸಮ್ಮತತೆಯು . . . ತಿಳಿದುಬರಲಿ.”—ಫಿಲಿಪ್ಪಿ 4:5.

ಕೌಶಲ 2. ನಯನಾಜೂಕಿನಿಂದ ಮಾತಾಡಲು ಕಲಿಯಿರಿ

ಸವಾಲುಗಳೇನು? ಅಭಿಪ್ರಾಯಗಳನ್ನು ದೃಢತೆಯಿಂದ ಕಡ್ಡಿಮುರಿದಂತೆ ವ್ಯಕ್ತಪಡಿಸುವ ಅಭ್ಯಾಸ ನಿಮಗಿರಬಹುದು. ನೀವು ಬೆಳೆದು ಬಂದ ಕುಟುಂಬ ವಾತಾವರಣ ಇಲ್ಲವೆ ನಿಮ್ಮ ಸಂಸ್ಕೃತಿಯೇ ಹಾಗಿದ್ದಿರಬಹುದು. ಯೂರೋಪ್‌ನಲ್ಲಿ ವಾಸವಾಗಿರುವ ಲಿಯಾಮ್‌ನ ಉದಾಹರಣೆಯನ್ನು ಗಮನಿಸಿ. “ನಾನು ಹುಟ್ಟಿಬೆಳೆದ ದೇಶದಲ್ಲಿ ಜನರು ಸಾಮಾನ್ಯವಾಗಿ ನಯನಾಜೂಕಿಲ್ಲದೆ ಮಾತಾಡುತ್ತಾರೆ. ನಾನೂ ಅದೇ ರೀತಿಯಲ್ಲಿ ಒರಟಾಗಿ ಮಾತಾಡಿ ನನ್ನ ಹೆಂಡತಿಯನ್ನು ಎಷ್ಟೋ ಸಲ ನೋಯಿಸಿದ್ದೇನೆ. ಸೌಮ್ಯವಾಗಿ ಮಾತಾಡಲು ನಾನು ಕಲಿಯಬೇಕಾಯಿತು” ಎನ್ನುತ್ತಾನೆ ಆತ.

ಪರಿಹಾರವೇನು? ನಿಮಗೆ ಒಂದು ನಿರ್ದಿಷ್ಟ ರೀತಿಯಲ್ಲಿ ಮಾತಾಡುವ ರೂಢಿ ಇರಬಹುದೇನೋ ನಿಜ. ಆದರೆ ತನ್ನೊಂದಿಗೂ ಅದೇ ರೀತಿಯಲ್ಲಿ ಮಾತಾಡಬೇಕೆಂದು ನಿಮ್ಮ ಸಂಗಾತಿ ಇಚ್ಛಿಸುತ್ತಾರೆಂದು ಅಂದುಕೊಳ್ಳಬೇಡಿ. (ಫಿಲಿಪ್ಪಿ 2:3, 4) ಅಪೊಸ್ತಲ ಪೌಲನು ಒಬ್ಬ ಮಿಷನೆರಿಗೆ ನೀಡಿದ ಈ ಸಲಹೆ ನವದಂಪತಿಗಳಿಗೂ ಸಹಾಯಕಾರಿ: “ಕರ್ತನ ದಾಸನು ಜಗಳವಾಡದೆ ಎಲ್ಲರೊಂದಿಗೆ ಕೋಮಲಭಾವದಿಂದಿರಬೇಕು.” “ಕೋಮಲ” ಎಂಬುದಕ್ಕಿರುವ ಗ್ರೀಕ್‌ ಭಾಷೆಯ ಪದವನ್ನು “ನಯನಾಜೂಕು” ಎಂದೂ ಭಾಷಾಂತರಿಸಬಹುದು. (2 ತಿಮೊಥೆಯ 2:24) ನಯನಾಜೂಕು ಅಂದರೆ ಪರಿಸ್ಥಿತಿಯ ಸೂಕ್ಷ್ಮತೆಯನ್ನು ಅರಿತು ಅದಕ್ಕೆ ತಕ್ಕಂತೆ, ಯಾರಿಗೂ ನೋವಾಗದಂತೆ ದಯೆಯಿಂದ ವ್ಯವಹರಿಸುವುದೇ.

ಪ್ರಯತ್ನಿಸಿ ನೋಡಿ: ಸಂಗಾತಿಯ ಮೇಲೆ ತುಂಬ ಸಿಟ್ಟು ಬಂದಾಗ ಒಬ್ಬ ಒಳ್ಳೇ ಮಿತ್ರನೊಂದಿಗೆ ಅಥವಾ ಧಣಿಯೊಂದಿಗೆ ಮಾತಾಡುತ್ತಿದ್ದೀರೆಂದು ನೆನಸಿ. ಅವರೊಂದಿಗಾದರೆ ನೀವು ಯಾವ ಸ್ವರದಲ್ಲಿ ಮಾತಾಡುತ್ತಿದ್ದಿರಿ? ಯಾವ ಪದಗಳನ್ನು ಬಳಸುತ್ತಿದ್ದಿರಿ? ಅದಕ್ಕಿಂತಲೂ ಹೆಚ್ಚು ಗೌರವ, ನಯನಾಜೂಕಿನಿಂದ ನಿಮ್ಮ ಸಂಗಾತಿಯೊಂದಿಗೆ ಏಕೆ ಮಾತಾಡಬೇಕೆಂದು ಈಗ ಯೋಚಿಸಿ.—ಕೊಲೊಸ್ಸೆ 4:6.

ಕೌಶಲ 3. ನಿಮ್ಮ ನಿಮ್ಮ ಹೊಸ ಪಾತ್ರಕ್ಕೆ ಹೊಂದಿಕೊಳ್ಳಲು ಕಲಿಯಿರಿ

ಸವಾಲುಗಳೇನು? ಪತಿಯು ಮೊದಮೊದಲು ತನ್ನ ತಲೆತನವನ್ನು ನಾಜೂಕಿಲ್ಲದೆ ನಿರ್ವಹಿಸಿ ತಿಳಿಯದೇ ತನ್ನ ಪತ್ನಿಯ ಮನನೋಯಿಸುವ ಸಾಧ್ಯತೆ ಇದೆ. ಪತ್ನಿಯೂ ನಯನಾಜೂಕಿನಿಂದ ಸಲಹೆಗಳನ್ನು ಕೊಡದಿರುವ ಸಾಧ್ಯತೆ ಇದೆ. ಉದಾಹರಣೆಗೆ, ಇಟಲಿಯ ನಿವಾಸಿ ಅಂಟೊನ್ಯೋ ಹೇಳಿದ್ದು: “ಕುಟುಂಬದಲ್ಲಿ ನನ್ನ ತಂದೆ ನಿರ್ಣಯಗಳನ್ನು ತಕ್ಕೊಳ್ಳುವಾಗ ಅಮ್ಮನ ಅಭಿಪ್ರಾಯ ಕೇಳುತ್ತಿದ್ದದ್ದೇ ಅಪರೂಪ. ಮೊದಮೊದಲು ನಾನೂ ಹಾಗೇ ಇದ್ದೆ. ನನ್ನ ಕುಟುಂಬದಲ್ಲಿ ನಾನೇ ರಾಜ ನಾನೇ ಮಂತ್ರಿ.” ಕೆನಡದ ಡೆಬಿ ಹೇಳುವುದು: “ನನ್ನ ಗಂಡ ಅಚ್ಚುಕಟ್ಟಾಗಿರಬೇಕೆಂದು ದಬಾಯಿಸುತ್ತಿದ್ದೆ. ಆದರೆ ಈ ತರಹದ ನನ್ನ ಯಜಮಾನಿಕೆಯಿಂದ ನನ್ನ ಗಂಡ ಇನ್ನೂ ಹಠಮಾರಿಯಾಗಿಬಿಟ್ಟರು.”

ಪತಿ ಹೇಗೆ ನಿಭಾಯಿಸಬಹುದು? ಪತ್ನಿ ಅಧೀನಳಾಗಿರಬೇಕೆಂದು ಬೈಬಲ್‌ ಹೇಳುವಾಗ ಅದು ಮಕ್ಕಳು ಹೆತ್ತವರಿಗೆ ತೋರಿಸುವ ವಿಧೇಯತೆಯಂತೆ ಇರಬೇಕೆಂದು ಕೆಲವು ಗಂಡಂದಿರು ತಪ್ಪಾರ್ಥ ಮಾಡಿಕೊಳ್ಳುತ್ತಾರೆ. (ಕೊಲೊಸ್ಸೆ 3:20; 1 ಪೇತ್ರ 3:1) ಗಂಡನು ‘ತನ್ನ ಹೆಂಡತಿಯನ್ನು ಸೇರಿಕೊಳ್ಳಬೇಕು, ಅವರಿಬ್ಬರು ಒಂದೇ ಶರೀರವಾಗಿರುವರು’ ಎಂದು ಬೈಬಲ್‌ ಹೇಳುತ್ತದೆ. ಆದರೆ ಅದು ಹೆತ್ತವರ ಮತ್ತು ಮಕ್ಕಳ ಬಗ್ಗೆ ಹೀಗನ್ನುವುದಿಲ್ಲ. (ಮತ್ತಾಯ 19:5) ಹೆಂಡತಿಯು ಗಂಡನಿಗೆ ಸರಿಬೀಳುವ ಸಹಕಾರಿ ಎಂದು ಯೆಹೋವನು ವರ್ಣಿಸುತ್ತಾನೆ. (ಆದಿಕಾಂಡ 2:18) ಆದರೆ ಆತನು ಮಕ್ಕಳನ್ನು ಹೆತ್ತವರಿಗೆ ಸರಿಬೀಳುವ ಸಹಕಾರಿ ಎಂದು ಕರೆಯುವುದಿಲ್ಲ. ಈಗ ಹೇಳಿ, ಮಕ್ಕಳೊಡನೆ ವ್ಯವಹರಿಸುವಂತೆ ಪತಿ ತನ್ನ ಪತ್ನಿಯೊಂದಿಗೆ ವ್ಯವಹರಿಸಿದರೆ ಆತ ನಿಜವಾಗಿಯೂ ವಿವಾಹ ಏರ್ಪಾಡನ್ನು ಗೌರವಿಸುತ್ತಿದ್ದಾನೋ?

ದೇವರ ವಾಕ್ಯವಾದರೋ ಕ್ರೈಸ್ತ ಸಭೆಯೊಂದಿಗೆ ಯೇಸು ವ್ಯವಹರಿಸಿದ ರೀತಿಯಲ್ಲೇ ನಿಮ್ಮ ಹೆಂಡತಿಯೊಂದಿಗೆ ವ್ಯವಹರಿಸುವಂತೆ ಗಂಡಂದಿರಾದ ನಿಮ್ಮನ್ನು ಪ್ರೋತ್ಸಾಹಿಸುತ್ತದೆ. ನಿಮ್ಮ ಪತ್ನಿ ನಿಮ್ಮನ್ನು ತನ್ನ ಶಿರಸ್ಸಾಗಿ ಪರಿಗಣಿಸುವಂತೆ ಸುಲಭಗೊಳಿಸಲು (1) ನಿಮ್ಮ ಪತ್ನಿ ಕುಂದಿಲ್ಲದ ಅಧೀನತೆಯನ್ನು ಒಡನೆ ತೋರಿಸಬೇಕೆಂದು ನಿರೀಕ್ಷಿಸಬೇಡಿ. (2) ಕಷ್ಟಗಳು ಬಂದಾಗಲೂ ನಿಮ್ಮ ಪತ್ನಿಯನ್ನು ಸ್ವಂತ ದೇಹದಂತೆ ಪ್ರೀತಿಸಿ.—ಎಫೆಸ 5:25-29.

ಪತ್ನಿ ಹೇಗೆ ನಿಭಾಯಿಸಬಹುದು? ಈಗ ಪತಿಯೇ ನಿಮ್ಮ ದೇವನೇಮಿತ ತಲೆ ಅಥವಾ ಶಿರಸ್ಸು ಎಂಬುದನ್ನು ಅಂಗೀಕರಿಸಿ. (1 ಕೊರಿಂಥ 11:3) ನಿಮ್ಮ ಪತಿಯನ್ನು ಗೌರವಿಸುವ ಮೂಲಕ ದೇವರನ್ನು ಗೌರವಿಸುತ್ತೀರಿ. ಪತಿಯ ತಲೆತನ ತಿರಸ್ಕರಿಸಿದರೆ ನಿಮ್ಮ ಗಂಡನ ಬಗ್ಗೆ ಮಾತ್ರವಲ್ಲ ದೇವರ ಮತ್ತು ಆತನ ನಿಯಮಗಳ ಬಗ್ಗೆಯೂ ನಿಮಗೆ ಹೇಗನಿಸುತ್ತದೆಂದು ತೋರಿಸುತ್ತಿದ್ದೀರಿ.—ಕೊಲೊಸ್ಸೆ 3:18.

ಜಟಿಲ ಸಮಸ್ಯೆಗಳ ಬಗ್ಗೆ ಪತಿಯೊಂದಿಗೆ ಮಾತಾಡುವಾಗ ಅವರ ವ್ಯಕ್ತಿತ್ವವನ್ನು ಜರೆಯುವ ಬದಲು ಸಮಸ್ಯೆಗೆ ಗಮನಕೊಡಲು ಕಲಿಯಿರಿ. ಉದಾಹರಣೆಗೆ ರಾಣಿ ಎಸ್ತೇರಳು ತನ್ನ ಗಂಡನಾದ ರಾಜ ಅಹಷ್ವೇರೋಷನು, ನಡೆದ ಒಂದು ಅನ್ಯಾಯವನ್ನು ಸರಿಪಡಿಸಬೇಕೆಂದು ಬಯಸಿದಳು. ಆಕೆ ತನ್ನ ಗಂಡನ ಮೇಲೆ ಆರೋಪ ಹಾಕದೆ ತನ್ನ ಮನಸ್ಸಿನಲ್ಲಿದ್ದ ಸಂಗತಿಯನ್ನು ನಯನಾಜೂಕಿನಿಂದ ತಿಳಿಸಿದಳು. ರಾಜನು ಆಕೆಯ ಸಲಹೆಯನ್ನು ಸ್ವೀಕರಿಸಿ ಅನ್ಯಾಯವನ್ನು ಸರಿಪಡಿಸಿದನು. (ಎಸ್ತೇರಳು 7:1-4; 8:3-8) ನಿಮ್ಮ ಪತಿ ನಿಮ್ಮನ್ನು ಹೆಚ್ಚು ಪ್ರೀತಿಸಲು ಕಲಿಯಬೇಕಾದರೆ (1) ಕುಟುಂಬದ ತಲೆಯಾಗಿ ತನ್ನ ಹೊಸ ಪಾತ್ರವನ್ನು ನಿಭಾಯಿಸಲು ಶಕ್ತನಾಗುವಂತೆ ಸಮಯಾವಕಾಶ ಕಲ್ಪಿಸಿಕೊಡಿ. (2) ನಿಮ್ಮ ಪತಿಗೆ ಗೌರವ ತೋರಿಸಿ. ಅವರು ತಪ್ಪುಗಳನ್ನು ಮಾಡಿದಾಗಲೂ ಹಾಗೆ ಮಾಡಿ.—ಎಫೆಸ 5:33.

ಪ್ರಯತ್ನಿಸಿ ನೋಡಿ: ಸಂಗಾತಿ ಎಲ್ಲೆಲ್ಲಿ ಬದಲಾವಣೆ ಮಾಡಬೇಕೆಂಬದನ್ನೇ ಗಮನಿಸುತ್ತಿರುವ ಬದಲು ಸ್ವತಃ ನಿಮ್ಮಲ್ಲಿ ಮಾಡಬೇಕಾದ ಬದಲಾವಣೆಗಳ ಪಟ್ಟಿ ತಯಾರಿಸಿ. ಗಂಡಂದಿರೇ, ನೀವು ತಲೆತನವನ್ನು ನಿರ್ವಹಿಸದೆ ಅಥವಾ ಸರಿಯಾದ ವಿಧದಲ್ಲಿ ನಿರ್ವಹಿಸದೆ ಇದ್ದದ್ದರಿಂದ ಹೆಂಡತಿಗೆ ನಿರಾಶೆ, ದುಃಖವನ್ನು ಉಂಟುಮಾಡಿರಬಹುದು. ನೀವು ಹೇಗೆ ಸುಧಾರಣೆ ಮಾಡಬಹುದೆಂದು ಆಕೆಗೆ ಕೇಳಿ. ಆಕೆಯ ಸಲಹೆಗಳನ್ನು ಬರೆದಿಟ್ಟುಕೊಳ್ಳಿ. ಹೆಂಡತಿಯರೇ, ನೀವು ನಿಮ್ಮ ಪತಿಗೆ ಗೌರವ ತೋರಿಸುತ್ತಿಲ್ಲವೆಂದು ಅವರಿಗನಿಸಿದಾಗ ನೀವು ಹೇಗೆ ಸುಧಾರಣೆ ಮಾಡಬೇಕೆಂದು ಅವರನ್ನೇ ಕೇಳಿ. ಅವರ ಸಲಹೆಗಳನ್ನು ಬರೆದಿಡಿ.

ನಿರೀಕ್ಷೆಗಳಿಗೆ ಇತಿಮಿತಿಗಳಿರಲಿ

ಸಂತಸದ, ಸಂತುಲಿತ ವೈವಾಹಿಕ ಬಾಳನ್ನು ನಡೆಸಲು ಕಲಿಯುವುದು ಸೈಕಲ್‌ ಓಡಿಸಲು ಕಲಿತಂತೆ. ಸೈಕಲ್‌ ಕಲಿಯುವಾಗ ಬೀಳುವುದು ಏಳುವುದು ಸಹಜ. ನಂತರ ಚೆನ್ನಾಗಿ ಓಡಿಸಲಾರಂಭಿಸುತ್ತೀರಿ. ಹಾಗೆಯೇ ಮುಜುಗರ ಹುಟ್ಟಿಸುವ ಕೆಲವೊಂದು ತಪ್ಪುಗಳು ನಿಮ್ಮಿಂದಾಗುವುದು ಸಹಜವೇ. ದಿನಗಳು ಉರುಳಿದಂತೆ ವೈವಾಹಿಕ ಜೀವನದಲ್ಲಿ ನೀವು ಅನುಭವ ಪಡೆಯುವಿರಿ.

ಹಾಸ್ಯಪ್ರಜ್ಞೆಯುಳ್ಳವರಾಗಿರಿ. ನೀವು ಮಾಡುವ ಚಿಕ್ಕಪುಟ್ಟ ತಪ್ಪುಗಳ ಬಗ್ಗೆ ನಗಾಡಲು ಕಲಿಯಿರಿ. ಆದರೆ ನಿಮ್ಮ ಸಂಗಾತಿ ನೀವು ಮಾಡಬೇಕಾದ ಸುಧಾರಣೆಗಳ ಬಗ್ಗೆ ಹೇಳುವಾಗ ಅದನ್ನು ಗಂಭೀರವಾಗಿ ತಕ್ಕೊಳ್ಳಿ. ನಿಮ್ಮ ಮದುವೆಯ ಮೊದಲ ವರ್ಷದಲ್ಲಿ ಸಂಗಾತಿಗೆ ಹರುಷ ತರಲು ಅವಕಾಶಗಳನ್ನು ಹುಡುಕಿ. (ಧರ್ಮೋಪದೇಶಕಾಂಡ 24:5) ಎಲ್ಲಕ್ಕಿಂತ ಮಿಗಿಲಾಗಿ ದೇವರ ವಾಕ್ಯ ನಿಮ್ಮ ವೈವಾಹಿಕ ಬಾಳಿಗೆ ದಾರಿದೀಪವಾಗಿರಲಿ. ಆಗ ನಿಮ್ಮ ಮದುವೆಯ ಬಾಂಧವ್ಯ ವರ್ಷವರ್ಷಕ್ಕೂ ಬಲಗೊಳ್ಳುತ್ತಾ ಇರುವುದು. (w10-E 08/01)

[ಪಾದಟಿಪ್ಪಣಿ]

^ ಪ್ಯಾರ. 9 ಕೆಲವು ಹೆಸರುಗಳನ್ನು ಬದಲಾಯಿಸಲಾಗಿದೆ.

ಕೇಳಿಕೊಳ್ಳಿ . . .

▪ ಯಾವುದೇ ವಿಷಯದ ಬಗ್ಗೆ ಅಭಿಪ್ರಾಯ ಕೇಳಲು ಯಾರ ಹತ್ತಿರ ಹೋಗುತ್ತೇನೆ? ಸಂಗಾತಿ ಬಳಿಯೋ ಬೇರೆಯವರ ಬಳಿಯೋ?

▪ ನನ್ನ ಸಂಗಾತಿಗಾಗಿ ಪ್ರೀತಿಗೌರವ ತೋರಿಸುವ ಯಾವ ಕೆಲಸವನ್ನು ಕಳೆದ 24 ತಾಸುಗಳಲ್ಲಿ ಮಾಡಿದ್ದೇನೆ?

[ಪುಟ 30ರಲ್ಲಿರುವ ಚೌಕ/ಚಿತ್ರಗಳು]

ಬೈಬಲಿನಿಂದಾಗಿ ನಮ್ಮ ಮದುವೆ ಉಳಿಯಿತು

ಮದುವೆಯಾದ ಹೊಸದರಲ್ಲಿ ಟೋರು ಮತ್ತು ಅಕಿಕೊ ಎಂಬ ಜಪಾನೀ ದಂಪತಿ ಪರಸ್ಪರ ತುಂಬ ಪ್ರೀತಿಸುತ್ತಿದ್ದರು. ಆದರೆ ಬರೇ 8 ತಿಂಗಳೊಳಗೆ ವಿಚ್ಛೇದ ಪಡೆಯಲು ನಿರ್ಧರಿಸಿದರು. ಏಕೆಂದು ಅವರಿಂದಲೇ ಕೇಳೋಣ.

ಟೋರು: “ನಾವಿಬ್ಬರೂ ಚೆನ್ನಾಗಿ ಹೊಂದಿಕೊಂಡು ಹೋಗುವೆವು ಎಂದು ಮದುವೆ ಮುಂಚೆ ಅಂದುಕೊಂಡಿದ್ದೆ. ಆದರೆ ಹಾಗಿಲ್ಲವೆಂದು ಆಮೇಲೆ ಗೊತ್ತಾಯಿತು. ಉದಾಹರಣೆಗೆ ಟಿವಿಯಲ್ಲಿ ನನಗೆ ಕ್ರೀಡಾಕಾರ್ಯಕ್ರಮ ಇಷ್ಟವಾಗುತ್ತಿತ್ತು, ಅವಳಿಗೆ ಡ್ರಾಮ ಇಷ್ಟವಾಗುತ್ತಿತ್ತು. ನನಗೆ ಮನೆಯೊಳಗೆ ಇರಲು ಕಷ್ಟವಾಗುತ್ತಿತ್ತು, ಅವಳಿಗೆ ಮನೆಯೊಳಗೇ ಇರಲು ಇಷ್ಟವಾಗುತ್ತಿತ್ತು.”

ಅಕಿಕೊ: “ಟೋರು ತಮ್ಮ ಕುಟುಂಬದವರು ಹೇಳಿದ್ದನ್ನೆಲ್ಲ ಮಾಡುತ್ತಿದ್ದರು, ನನ್ನನ್ನು ಒಂದು ಮಾತೂ ಕೇಳುತ್ತಿರಲಿಲ್ಲ. ಅದಕ್ಕೆ ನಾನು ‘ನಿಮಗೆ ಯಾರು ಮುಖ್ಯ? ನಾನಾ ನಿಮ್ಮಮ್ಮನಾ?’ ಎಂದು ಕೇಳಿದೆ. ಅಷ್ಟೇ ಅಲ್ಲ ಅವರು ಕಥೆಕಟ್ಟುತ್ತಿದ್ದದ್ದನ್ನು ನೋಡಿ ನನಗೆ ಆಘಾತ. ಒಂದು ಸುಳ್ಳು ಮುಚ್ಚಲು ಸಾವಿರ ಸುಳ್ಳು ಹೇಳಬೇಕಾಗುತ್ತದೆ, ಅದನ್ನು ನಿಲ್ಲಿಸದಿದ್ದರೆ ನಮ್ಮ ಸಂಬಂಧ ಉಳಿಯುವುದಿಲ್ಲ ಎಂದು ಹೇಳಿದೆ.”

ಟೋರು: “ನನಗೆ ತಲೆಚಿಟ್ಟು ಹಿಡಿದು ಹೋಯಿತು. ನನ್ನ ಹೆಂಡತಿಯನ್ನು ಏನು ಮಾಡಲಿ ಎಂದು ಒಬ್ಬ ಹಿರಿಯ ಸಹೋದ್ಯೋಗಿಯ ಸಲಹೆ ಕೇಳಿದೆ. ‘ಬಾಯಿಮುಚ್ಚಿ ಕೂತ್ಕೋ ಅಂತ ಹೇಳು. ಪುನಃ ಬಾಯಿಮಾಡಿದರೆ ಸರಿಯಾಗಿ ಬಾರಿಸಿಬಿಡು’ ಎಂದರವರು. ಹಾಗೆ ಒಮ್ಮೆ ಕಪಾಳಕ್ಕೆ ಹೊಡೆದುಬಿಟ್ಟೆ, ಸಿಟ್ಟಿನಿಂದ ಮೇಜನ್ನೂ ಮಗುಚಿಹಾಕಿದೆ. ದೊಡ್ಡ ಜಗಳವೇ ನಡೆಯಿತು. ಅಕಿಕೊ ಮನೆಬಿಟ್ಟು ಹೋದಳು. ಟೊಕಿಯೋದ ಹೋಟೆಲೊಂದರಲ್ಲಿ ಉಳುಕೊಂಡಿದ್ದ ಅವಳನ್ನು ಮನೆಗೆ ಕರಕೊಂಡು ಬರಬೇಕಾಯಿತು. ಕೊನೆಗೆ ವಿಚ್ಛೇದಪಡೆಯುವ ನಿರ್ಧಾರಕ್ಕೆ ಬಂದೆವು. ಬೆಳಗ್ಗೆ ನಾನು ಆಫೀಸಿಗೆ ಹೊರಡುತ್ತಿದ್ದಾಗ ಅವಳು ತನ್ನ ಸಾಮಾನುಗಳನ್ನು ಪ್ಯಾಕ್‌ ಮಾಡುತ್ತಿದ್ದಳು.”

ಅಕಿಕೊ: “ಬ್ಯಾಗ್‌ಗಳನ್ನು ಬಾಗಿಲ ಬಳಿ ತರುತ್ತಿದ್ದಂತೆ ಕರೆಗಂಟೆ ಕೂಗಿತು. ಬಾಗಿಲಲ್ಲಿ ಒಬ್ಬ ಮಹಿಳೆ ನಿಂತಿದ್ದಳು. ಆಕೆ ತಾನು ಯೆಹೋವನ ಸಾಕ್ಷಿ ಎಂದು ಪರಿಚಯಿಸಿಕೊಂಡಳು. ಆಕೆಯನ್ನು ಒಳಗೆ ಕರೆದೆ.”

ಟೋರು: “ಆಫೀಸ್‌ ತಲುಪುವಷ್ಟರಲ್ಲಿ ನನ್ನ ಮನಸ್ಸು ವಿಚ್ಛೇದ ಬೇಡವೆನ್ನುತ್ತಿತ್ತು. ತಕ್ಷಣ ಮನೆಗೆ ಓಡಿದೆ. ಮನೆಗೆ ಬಂದಾಗ ಅಕಿಕೊ ಒಬ್ಬ ಮಹಿಳೆಯೊಂದಿಗೆ ಮಾತಾಡುತ್ತಿದ್ದಳು. ಆ ಮಹಿಳೆ ನನಗೆ, ‘ನೀವಿಬ್ಬರೂ ಒಟ್ಟಾಗಿ ಏನಾದರೂ ಮಾಡಿದರೆ ಸಹಾಯವಾಗುತ್ತದೆ. ಬೈಬಲನ್ನು ಅಧ್ಯಯನ ಮಾಡಿದರೆ ಹೇಗೆ?’ ಎಂದು ಕೇಳಿದರು. ಅದಕ್ಕೆ ನಾನು ‘ಆಗಲಿ, ನಮ್ಮ ಮದುವೆ ಉಳಿಸಲು ಏನು ಬೇಕಾದರೂ ಮಾಡುವೆ’ ಎಂದೆ.”

ಅಕಿಕೊ: “ಬೈಬಲ್‌ ಅಧ್ಯಯನಕ್ಕಾಗಿ ಆ ಮಹಿಳೆ ಏರ್ಪಾಡು ಮಾಡಿದಳು. ವಿವಾಹ ಏರ್ಪಾಡಿನ ಬಗ್ಗೆ ಬೈಬಲ್‌ ಕೊಡುವ ಈ ವರ್ಣನೆಯನ್ನು ತಿಳಿದುಕೊಂಡೆವು: ‘ಪುರುಷನು ತಂದೆತಾಯಿಗಳನ್ನು ಬಿಟ್ಟು ತನ್ನ ಹೆಂಡತಿಯನ್ನು ಸೇರಿಕೊಳ್ಳುವನು; ಅವರಿಬ್ಬರು ಒಂದೇ ಶರೀರವಾಗಿರುವರು.’ ಇದು ನಮ್ಮ ಬಾಳಿಗೊಂದು ತಿರುವು ಕೊಟ್ಟಿತು.”—ಆದಿಕಾಂಡ 2:24.

ಟೋರು: “ನನಗೆ ವಿಷಯ ಕೂಡಲೇ ಅರ್ಥವಾಯಿತು. ‘ಇನ್ನು ಮೇಲೆ ಯಾವುದೇ ನಿರ್ಣಯ ತಕ್ಕೊಳ್ಳುವ ಮುಂಚೆ ನನ್ನ ಹೆಂಡತಿಯೊಂದಿಗೆ ಮಾತಾಡುತ್ತೇನೆ’ ಎಂದು ಅಪ್ಪಅಮ್ಮನಿಗೆ ಹೇಳಿದೆ. ಕುಡಿಯುವುದನ್ನು ಕಡಿಮೆ ಮಾಡಿದೆ. ಸುಳ್ಳು ಹೇಳುವುದನ್ನು ದೇವರು ದ್ವೇಷಿಸುತ್ತಾನೆಂದು ಕಲಿತಂದಿನಿಂದ ಸತ್ಯವನ್ನೇ ಹೇಳಲು ಪ್ರಯತ್ನಿಸಿದೆ.”

ಅಕಿಕೊ: “ನಾನೂ ಬದಲಾದೆ. ಉದಾಹರಣೆಗೆ ಟೋರು ಏನು ಹೇಳಿದರೂ ಎದುರುಬೀಳುತ್ತಿದ್ದೆ. ಆದರೆ ಬೈಬಲ್‌ ಸೂತ್ರಗಳನ್ನು ಪಾಲಿಸಲು ಅವರು ಮಾಡುತ್ತಿದ್ದ ಪ್ರಯತ್ನ ನೋಡಿ ಅವರಿಗೆ ಹೆಚ್ಚೆಚ್ಚು ಬೆಂಬಲ ನೀಡತೊಡಗಿದೆ. (ಎಫೆಸ 5:22-24) ನಾವೀಗ 28ಕ್ಕಿಂತಲೂ ಹೆಚ್ಚು ವರ್ಷಗಳ ಸುಖೀ ದಾಂಪತ್ಯವನ್ನು ನಡೆಸಿದ್ದೇವೆ. ಒಬ್ಬರನ್ನೊಬ್ಬರು ಚೆನ್ನಾಗಿ ಅರ್ಥಮಾಡಿಕೊಂಡು, ಬೈಬಲಿನ ವಿವೇಕಯುತ ಸಲಹೆಗಳನ್ನು ಪಾಲಿಸುವ ಮೂಲಕ ನಮ್ಮ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಾಯಿತು.”