ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ವಸಡು ರೋಗ—ಹೊಂಚುಹಾಕುತ್ತಿದೆಯಾ?

ವಸಡು ರೋಗ—ಹೊಂಚುಹಾಕುತ್ತಿದೆಯಾ?

ಇಡೀ ಪ್ರಪಂಚದಲ್ಲಿ ಬಾಯಿಗೆ ಸಂಬಂಧಿಸಿದ ರೋಗಗಳಲ್ಲಿ ಅತಿ ಸಾಮಾನ್ಯವಾದದ್ದು ವಸಡು ರೋಗ. ಹಾಗಿದ್ದರೂ ಆರಂಭ ಹಂತದಲ್ಲಿ ಈ ರೋಗದ ಲಕ್ಷಣಗಳು ಗೋಚರಿಸುವುದಿಲ್ಲ. ಈ ರೀತಿ ವಂಚಿಸಿ ಅಪಾಯ ತಂದೊಡ್ಡುವುದರಲ್ಲಿ ಇದು ನಿಸ್ಸೀಮ. ಇಂಟರ್‌ನ್ಯಾಷನಲ್‌ ಡೆಂಟಲ್‌ ಜರ್ನಲ್‌ ಹೇಳುವ ಪ್ರಕಾರ, ‘ವಸಡಿಗೆ ಸಂಬಂಧಿಸಿದ ರೋಗವು ಜನರ ಆರೋಗ್ಯವನ್ನು ತೀವ್ರವಾಗಿ ಬಾಧಿಸುವ ಬಾಯಿಯ ರೋಗಗಳಲ್ಲಿ ಒಂದು. ಬಾಯಿಯ ರೋಗದಿಂದಾಗಿ ಜನರು ತೀವ್ರತರದ ನೋವು, ಹಿಂಸೆಯನ್ನು ಅನುಭವಿಸುತ್ತಾರೆ. ಆಹಾರವನ್ನು ತಿನ್ನಲು ಆಗದೆ ಪರದಾಡುತ್ತಾರೆ. ಹಾಗಾಗಿ ಜೀವನದಲ್ಲಿ ಆನಂದವನ್ನು ಕಳೆದುಕೊಳ್ಳುತ್ತಾರೆ.’ ಅನೇಕ ಜನರನ್ನು ಬಾಧಿಸುವ ವಸಡಿನ ರೋಗದ ಕುರಿತು ನಾವೀಗ ತಿಳಿದುಕೊಳ್ಳೋಣ. ಅದು ಬಾರದಂತೆ ಎಚ್ಚರ ವಹಿಸೋಣ.

ರೋಗಲಕ್ಷಣಗಳು

ವಸಡಿನ ರೋಗದಲ್ಲಿ ಅನೇಕ ಹಂತಗಳಿವೆ. ಮೊದಲ ಹಂತ ವಸಡಿನೂತ (ಜಿಂಜಿವೈಟಿಸ್‌). ಈ ಹಂತದಲ್ಲಿ ವಸಡು ಬಾತುಕೊಳ್ಳುತ್ತದೆ. ವಸಡಿನ ರಕ್ತಸ್ರಾವವು ಈ ಸಮಸ್ಯೆ ಆರಂಭವಾಗುವ ಸೂಚನೆಯಾಗಿರಬಹುದು. ಹಲ್ಲುಜ್ಜುವಾಗ ಅಥವಾ ಹಲ್ಲುಸಂದುಗಳನ್ನು ಶುಚಿಮಾಡಲು ದಂತದಾರ (ಫ್ಲಾಸ್‌) ಬಳಸುವಾಗ ಇಲ್ಲವೆ ವಿನಾಕಾರಣ ವಸಡಿನಿಂದ ರಕ್ತ ಜಿನುಗಬಹುದು. ವಸಡನ್ನು ಪರೀಕ್ಷಿಸಿ ನೋಡುವಾಗಲೂ ರಕ್ತ ಬರುವ ಸಾಧ್ಯತೆಯಿದೆ.

ಈ ವಸಡಿನ ರೋಗ ಉಲ್ಬಣಗೊಂಡು ಎರಡನೇ ಹಂತ ತಲಪುತ್ತದೆ. ಅದು ಪರಿದಂತದ ಸಮಸ್ಯೆ. ಈ ಹಂತದಲ್ಲಿ ಹಲ್ಲುಗಳ ಅಡಿಪಾಯವಾಗಿರುವ ವಸಡುಗಳು ಹಾಗೂ ಮೂಳೆ ನಾಶವಾಗತೊಡಗುತ್ತವೆ. ಆರಂಭದಲ್ಲಿ ಯಾವುದೇ ಸುಳಿವನ್ನು ಕೊಡದ ಈ ಸಮಸ್ಯೆ ತೀವ್ರವಾದಾಗಲೇ ಗಮನಕ್ಕೆ ಬರುತ್ತದೆ. ಪರಿದಂತದ ಸಮಸ್ಯೆ ಇರುವವರಲ್ಲಿ ಈ ಮುಂದಿನ ಲಕ್ಷಣಗಳು ಕಂಡುಬರಬಹುದು: ಹಲ್ಲು ಮತ್ತು ವಸಡಿನ ಮಧ್ಯೆ ಅಂತರ, ಹಲ್ಲುಗಳು ಸಡಿಲಗೊಳ್ಳುವುದು, ಹಲ್ಲುಗಳ ಮಧ್ಯೆ ಸಂದುಗಳು, ಬಾಯಿಂದ ದುರ್ವಾಸನೆ, ವಸಡು ಕೆಳಕ್ಕೆ ಜಾರುವುದು ಮತ್ತು ಇದರಿಂದಾಗಿ ಹಲ್ಲುಗಳು ಉದ್ದುದ್ದವಾಗಿ ಕಾಣುವುದು, ವಸಡಿನ ರಕ್ತಸ್ರಾವ ಇತ್ಯಾದಿ.

ಕಾರಣ ಹಾಗೂ ಪರಿಣಾಮ

ಅನೇಕ ವಿಷಯಗಳು ವಸಡಿನ ರೋಗಕ್ಕೆ ಆಹ್ವಾನ ನೀಡಬಲ್ಲವು. ಹಲ್ಲಿನ ಮೇಲೆ ಆಗಾಗ್ಗೆ ಬ್ಯಾಕ್ಟೀರಿಯಗಳು ಜಮಾಯಿಸಿ ಉಂಟಾಗುವ ತೆಳುಪದರ ಇದಕ್ಕೆ ಮುಖ್ಯ ಕಾರಣ. ಈ ತೆಳುಪದರವನ್ನು ತೆಗೆಯಲು ಸಾಧ್ಯ. ತೆಗೆಯದಿದ್ದರೆ ಆ ಬ್ಯಾಕ್ಟೀರಿಯಗಳು ವಸಡು ಬಾತುಕೊಳ್ಳುವಂತೆ ಮಾಡುತ್ತವೆ. ಹಾಗೇ ಮುಂದುವರಿದರೆ ವಸಡು ಹಲ್ಲಿನಿಂದ ದೂರಸರಿಯಲಾರಂಭಿಸಿ ಸಂದು ಉಂಟಾಗುತ್ತದೆ. ಬ್ಯಾಕ್ಟೀರಿಯಗಳ ಪದರ ಆ  ಸಂದಿನೊಳಗೂ ಬೆಳೆಯುತ್ತದೆ. ಒಮ್ಮೆ ಬ್ಯಾಕ್ಟೀರಿಯಗಳು ಒಳಗೆ ಹೋದರೆ ಸಾಕು ತಮ್ಮ ಕೆಲಸ ಆರಂಭಿಸುತ್ತವೆ. ಉರಿಯೂತ ಹೆಚ್ಚಾಗುತ್ತದೆ. ಮೂಳೆ ಹಾಗೂ ವಸಡನ್ನು ತಿಂದುಹಾಕತೊಡಗುತ್ತವೆ. ಬ್ಯಾಕ್ಟೀರಿಯಗಳ ಈ ಪದರ ಹಲ್ಲಿನ ಮೇಲಿರಲಿ ಅಥವಾ ಸಂದಿಯೊಳಗಿರಲಿ ಅದು ತದನಂತರ ಗಡುಸಾಗಿ ಪಾಚಿಕಟ್ಟುತ್ತದೆ. ಈ ಪಾಚಿಯ ಹೊರಮೇಲ್ಮೈಯನ್ನೂ ಬ್ಯಾಕ್ಟೀರಿಯಗಳು ಆವರಿಸಿರುತ್ತವೆ. ಈ ಪಾಚಿಯು ಗಡುಸಾಗಿರುವುದರಿಂದ ಮತ್ತು ಹಲ್ಲಿಗೆ ಬಲವಾಗಿ ಅಂಟಿಕೊಂಡಿರುವುದರಿಂದ ಅದನ್ನು ತೆಗೆಯುವುದು ತುಂಬ ಕಷ್ಟ. ಇದರಿಂದಾಗಿ ಬ್ಯಾಕ್ಟೀರಿಯಗಳು ವಸಡನ್ನು ನಾಶ ಮಾಡುತ್ತಾ ಹೋಗುತ್ತವೆ.

ವಸಡಿನ ರೋಗಕ್ಕೆ ಬೇರೆ ಕಾರಣಗಳೂ ಇವೆ. ಬಾಯಿಯನ್ನು ಶುಚಿಯಾಗಿ ಇಡದಿರುವುದು, ರೋಗನಿರೋಧಕ ಶಕ್ತಿಯನ್ನು ಕುಂಠಿತಗೊಳಿಸಬಲ್ಲ ಔಷಧಿಗಳ ಸೇವನೆ, ವೈರಸ್‍ನಿಂದಾಗುವ ಸೋಂಕು, ಮಾನಸಿಕ ಒತ್ತಡ, ನಿಯಂತ್ರಣದಲ್ಲಿಲ್ಲದ ಮಧುಮೇಹ, ಮಿತಿಮೀರಿದ ಕುಡಿತ, ತಂಬಾಕು ಸೇವನೆ, ಗರ್ಭಿಣಿಯರಲ್ಲಿ ಹಾರ್ಮೋನ್‌ ಏರುಪೇರು ಇತ್ಯಾದಿ.

ವಸಡು ರೋಗದಿಂದಾಗುವ ಇತರ ಪರಿಣಾಮಗಳೆಂದರೆ ಬಾಯಿ ನೋವು ಅಥವಾ ಹಲ್ಲುಗಳು ಉದುರುವುದು. ಇದರಿಂದ ಜಗಿದು ತಿನ್ನಲು ಕಷ್ಟವಾಗಿ ಆಹಾರವನ್ನು ಆಸ್ವಾದಿಸಲಾಗುವುದಿಲ್ಲ. ಮಾತು ಅಸ್ಪಷ್ಟಗೊಳ್ಳುತ್ತದೆ. ಮುಖದ ಅಂದ ಕೆಡುತ್ತದೆ. ಮಾತ್ರವಲ್ಲ ಸಂಶೋಧಕರು ಹೇಳುವಂತೆ, ನಿಮ್ಮ ದಂತಾರೋಗ್ಯ ಕೈಕೊಟ್ಟರೆ ಇಡೀ ದೇಹದ ಆರೋಗ್ಯ ಕೈಕೊಟ್ಟಂತೆ.

ರೋಗಪತ್ತೆ ಮತ್ತು ಚಿಕಿತ್ಸೆ

ನಿಮಗೆ ವಸಡಿನ ರೋಗ ಇದೆಯಾ ಇಲ್ಲವಾ ಎಂದು ಕಂಡುಹಿಡಿಯುವುದು ಹೇಗೆ? ಇಷ್ಟರ ವರೆಗೆ ತಿಳಿಸಲಾದ ಲಕ್ಷಣಗಳಲ್ಲಿ ಕೆಲವು ನಿಮ್ಮಲ್ಲಿ ತೋರಿಬಂದರೆ ಈ ರೋಗ ನಿಮ್ಮನ್ನು ಹೊಂಚುಹಾಕುತ್ತಿರಬಹುದು. ಕೂಡಲೆ ಪರಿಣತ ದಂತವೈದ್ಯರ ಬಳಿ ಹೋಗಿ ನಿಮ್ಮ ವಸಡುಗಳನ್ನು ಪರೀಕ್ಷಿಸುವುದು ಅತ್ಯುತ್ತಮ.

ಈ ರೋಗವನ್ನು ಗುಣಪಡಿಸಲು ಸಾಧ್ಯವೇ? ಆರಂಭದ ಹಂತದಲ್ಲಿದ್ದರೆ ಸಂಪೂರ್ಣವಾಗಿ ಗುಣಪಡಿಸಬಹುದು. ರೋಗವು ಎರಡನೇ ಹಂತ ತಲಪಿರುವಲ್ಲಿ ಅದು ಮುಂದುವರಿಯದಂತೆ ವೈದ್ಯರು ಚಿಕಿತ್ಸೆ ನೀಡಬಲ್ಲರು. ಹಾಗೆ ಮಾಡುವುದರಿಂದ ಹಲ್ಲಿನ ಸುತ್ತಲಿರುವ ವಸಡು ಹಾಗೂ ಮೂಳೆ ನಾಶವಾಗುವುದನ್ನು ತಡೆಯಬಹುದು. ಹಲ್ಲಿನ ಮೇಲಿರುವ ಮತ್ತು ವಸಡಿನ ಸಂದಿಯಲ್ಲಿರುವ ಬ್ಯಾಕ್ಟೀರಿಯಗಳ ಪದರವನ್ನು ಹಾಗೂ ಗಡುಸಾದ ಪಾಚಿಯನ್ನು ವೈದ್ಯರು ವಿಶೇಷ ಉಪಕರಣ ಬಳಸಿ ತೆಗೆಯುತ್ತಾರೆ.

ನಿಮಗೆ ಹತ್ತಿರದಲ್ಲಿ ಪರಿಣತ ದಂತವೈದ್ಯರು ಇಲ್ಲದಿರುವಲ್ಲಿ ಆಗೇನು? ಆಗಲೂ ಈ ಅಪಾಯಕಾರಿ ರೋಗವನ್ನು ತಡೆಯಲು ನೀವು ಮಾಡಬಹುದಾದ ವಿಷಯವೊಂದಿದೆ. ಅದು ಮುಂಜಾಗ್ರತೆ. ಬಾಯಿ ಮತ್ತು ಹಲ್ಲುಗಳನ್ನು ಸೂಕ್ತ ರೀತಿಯಲ್ಲಿ, ನಿಯತವಾಗಿ ಆರೈಕೆ ಮಾಡುವುದೇ ಮುಂಜಾಗ್ರತೆ ವಹಿಸುವ ಪ್ರಾಮುಖ್ಯ ವಿಧ. (g14-E 06)