ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸುಖೀ ಸಂಸಾರಕ್ಕೆ ಸಲಹೆಗಳು | ವೈವಾಹಿಕ ಜೀವನ

ವಿವಾಹದಲ್ಲಿ ನಿರಾಶೆಯ ಅಲೆಗಳೆದ್ದಾಗ

ವಿವಾಹದಲ್ಲಿ ನಿರಾಶೆಯ ಅಲೆಗಳೆದ್ದಾಗ

ಸವಾಲು

ವಿವಾಹಕ್ಕೂ ಮುನ್ನ ಬಹಳಷ್ಟು ವಿಷಯಗಳಲ್ಲಿ ನಿಮ್ಮ ಮತ್ತು ನಿಮ್ಮ ಸಂಗಾತಿಯ ವಿಚಾರಧಾಟಿ ಒಂದೇ ಆಗಿರುವಂತೆ ತೋರುತ್ತಿತ್ತು. ಆದರೆ ವಿವಾಹದ ನಂತರ ಅಂಥ ಭ್ರಮೆ ಭಂಗಗೊಂಡು ನಿಮ್ಮ ಮತ್ತು ನಿಮ್ಮ ಸಂಗಾತಿಯ ಮಧ್ಯೆ ಬಿರುಕನ್ನುಂಟುಮಾಡಿದೆ. ವೈವಾಹಿಕ ಜೀವನ ಸಂತೋಷ ಸಾಗರವಾಗಿರದೆ ಬಂದೀಖಾನೆಯಂತೆ ಭಾಸವಾಗಲು ಶುರುವಾಗಿರಬಹುದು.

ನೀವು ನಿಮ್ಮ ಬಾಂಧವ್ಯವನ್ನು ಬಲಗೊಳಿಸಲು ಸಾಧ್ಯವಿದೆ. ಮೊದಲಾಗಿ, ಯಾಕೆ ನಿಮ್ಮ ಭ್ರಮೆ ಭಂಗಗೊಂಡಿರಬಹುದೆಂದು ಪರಿಗಣಿಸಿ.

ಯಾಕೆ ಹೀಗಾಗುತ್ತದೆ?

ವಾಸ್ತವಾಂಶಕ್ಕೆ ಎದುರಾಗುವಾಗ. ದಿನನಿತ್ಯದ ಕೆಲಸಕಾರ್ಯಗಳು, ಮಕ್ಕಳ ಪಾಲನೆ ಪೋಷಣೆ, ಅತ್ತೆ ಮಾವಂದಿರೊಂದಿಗಿನ ಆಗುಹೋಗುಗಳು ಇಂಥ ಜಂಜಾಟಗಳು ಕ್ರಮೇಣವಾಗಿ ನಿಮ್ಮ ವಿವಾಹದ ಆನಂದವನ್ನು ಕಸಿದುಕೊಳ್ಳಬಹುದು. ಅದರ ಜೊತೆಗೆ, ಹಣಕಾಸಿನ ಸಮಸ್ಯೆ ಅಥವಾ ಕುಟುಂಬ ಸದಸ್ಯರೊಬ್ಬರಿಗೆ ಗಂಭೀರ ಕಾಯಿಲೆಯಿದ್ದರೆ ಅವರನ್ನು ನೋಡಿಕೊಳ್ಳುವುದು, ಇಂಥ ಅನಿರೀಕ್ಷಿತ ಸಮಸ್ಯೆಗಳು ‘ನನಗ್ಯಾಕ್‌ ಬೇಕಿತ್‌ ಈ ಮದ್ವೆ?’ ಎಂದೆನಿಸುವಂತೆ ಮಾಡಬಹುದು.

ಭಿನ್ನಾಭಿಪ್ರಾಯಗಳು ಸರಿಯಾಗಲಾರವೆಂಬ ಅನಿಸಿಕೆಯಾದಾಗ. ವಿವಾಹಕ್ಕೂ ಮುನ್ನ ಪುಟ್ಟದಾಗಿ ಕಾಣುವ ಭಿನ್ನಾಭಿಪ್ರಾಯಗಳು ವಿವಾಹದ ನಂತರ ದಂಪತಿಗಳಿಗೆ ಬೆಟ್ಟದಂತೆ ಕಾಣುತ್ತವೆ. ಮಾತಾಡುವ ಶೈಲಿ, ಹಣ ನಿರ್ವಹಣೆ ಮತ್ತು ಸಮಸ್ಯೆಗಳ ನಿಭಾಯಿಸುವಿಕೆಯಂಥ ವಿಷಯಗಳಲ್ಲಿ ಭಿನ್ನಾಭಿಪ್ರಾಯಗಳು ಏಳುತ್ತವೆ. ಮೊದಲು ಸಾಮಾನ್ಯವೆನಿಸುತ್ತಿದ್ದ ವಿಷಯಗಳು ಈಗ ಸಹಿಸಲು ಅಸಾಧ್ಯವಾದಂಥ ಭಿನ್ನಾಭಿಪ್ರಾಯಗಳಾಗಿ ಕಾಣಬಹುದು.

ಭಾವನಾತ್ಮಕವಾಗಿ ದೂರವಾದಾಗ. ನಿರ್ದಯವಾದ ಮಾತುಗಳು ಅಥವಾ ನಡವಳಿಕೆಗಳು ಮತ್ತು ಬಗೆಹರಿಸದೆ ಹಾಗೆಯೇ ಮುಂದುವರಿಸಿದ ಜಗಳಗಳು ಕಾಲಕ್ರಮೇಣ ಗಂಡ ಹೆಂಡತಿಯ ಮಧ್ಯೆ ಒಂದು ಭಾವಾನಾತ್ಮಕ ಕಂದರವನ್ನೇ ಸೃಷ್ಟಿಮಾಡಿ ಬಿಡುತ್ತವೆ. ದುಃಖಕರವಾಗಿ, ಈ ಕಂದರ ತಮ್ಮ ಸಂಗಾತಿಯನ್ನು ಬಿಟ್ಟು ಬೇರೆಯವರೊಂದಿಗೆ ಭಾವನಾತ್ಮಕವಾಗಿ ಹತ್ತಿರವಾಗುವಂತೆ ಮಾಡಬಹುದು.

ಅಸಾಧ್ಯವಾದ ನಿರೀಕ್ಷೆಗಳನ್ನಿಟ್ಟುಕೊಂಡಾಗ. ಕೆಲವರು ತಾವು ಬಯಸಿದ ವ್ಯಕ್ತಿ ಸಿಕ್ಕಿದರೆಂದು ನೆನಸಿ ವೈವಾಹಿಕ ಜೀವನಕ್ಕೆ ಕಾಲಿಡುತ್ತಾರೆ. ಇಂಥ ಒಂದು ಪ್ರಣಯಾತ್ಮಕ ಕಲ್ಪನೆ ಕೆಲವೊಮ್ಮೆ ದೊಡ್ಡ ಆಘಾತವನ್ನೇ ಉಂಟುಮಾಡಬಹುದು. ಒಂದು ಸಾರಿ ಸಮಸ್ಯೆ ಶುರುವಾದರೆ ಸಾಕು, “ಇವರೇ/ಳೇ ನನಗೆ ಹೇಳಿ ಮಾಡಿಸಿದ ಸಂಗಾತಿ” ಎಂದು ಕಂಡ ಕನಸು ನುಚ್ಚುನೂರಾಗುತ್ತದೆ. ಆಗ ದಂಪತಿಗಳಿಬ್ಬರೂ ಇಂಥವರನ್ನು/ಳನ್ನು ಮದುವೆಯಾಗಿದ್ದೇ ತಮ್ಮ ಜೀವನದಲ್ಲಿ ಮಾಡಿದ ದೊಡ್ಡ ತಪ್ಪೆಂಬ ಕೊರಗಿನಲ್ಲೇ ಜೀವನವನ್ನು ಸವೆಸುತ್ತಾರೆ.

ಇದಕ್ಕೇನು ಪರಿಹಾರ?

ಸಂಗಾತಿಯ ಒಳ್ಳೇ ಗುಣಗಳನ್ನು ನೋಡಿ. ಹೀಗೆ ಮಾಡಿ: ನಿಮ್ಮ ಸಂಗಾತಿಯಲ್ಲಿರುವ ಯಾವುದಾದರೂ ಮೂರು ಒಳ್ಳೇ ಗುಣಗಳನ್ನು ಪಟ್ಟಿಮಾಡಿ. ಆ ಪಟ್ಟಿಯನ್ನು ನಿಮ್ಮ ಮದುವೆ ಫೋಟೋ ಹಿಂದೆ ಅಂಟಿಸಿ ನಿಮ್ಮೊಂದಿಗಿಟ್ಟುಕೊಳ್ಳಿ ಅಥವಾ ನಿಮ್ಮ ಮೊಬೈಲ್‌ ಫೋನ್‍ನಲ್ಲಿ ಇಟ್ಟುಕೊಳ್ಳಿ. ‘ಅವರ/ಳ ಯಾವ ಗುಣವನ್ನು ನೋಡಿ ಇಷ್ಟಪಟ್ಟೆ?’ ಎಂದು ನೆನಪು ಮಾಡಿಕೊಳ್ಳಲು ದಿನಕ್ಕೊಮ್ಮೆಯಾದರೂ ಆ ಪಟ್ಟಿಯನ್ನು ತೆರೆದು ನೋಡಿ. ಹೀಗೆ ನಿಮ್ಮ ಸಂಗಾತಿಯ ಒಳ್ಳೇ ಗುಣಗಳ ಕಡೆಗೆ ಗಮನ ಹರಿಸುವಾಗ ಮನಸ್ಸಿಗೆ ಶಾಂತಿಯಿರುತ್ತದೆ ಮತ್ತು ನಿಮ್ಮ ಭಿನ್ನಾಭಿಪ್ರಾಯಗಳು ಕ್ರಮೇಣವಾಗಿ ಹಿಂದೆ ಸರಿಯುತ್ತವೆ.—ಬೈಬಲ್‌ ತತ್ವ: ರೋಮನ್ನರಿಗೆ 14:19.

ಜೊತೆಯಾಗಿ ಸಮಯ ಕಳೆಯಲು ಯೋಜಿಸಿ. ವಿವಾಹವಾಗುವ ಮೊದಲು ಜೊತೆಯಾಗಿ ಸಮಯ ಕಳೆದಿರಬಹುದು. ಆಗ ಡೇಟಿಂಗ್‌ ಎನ್ನುವುದು ನಿಮಗೆ ಹೊಸದಾಗಿತ್ತು, ರೋಮಾಂಚನಕಾರಿಯಾಗಿತ್ತು ಮತ್ತು ಹಾಗೆ ಜೊತೆಯಾಗಿ ಸಮಯ ಕಳೆಯಲು ನೀವು ಯೋಜಿಸಿರುತ್ತೀರಿ. ಈಗಲೂ ಅದೇ ರೀತಿ ಯಾಕೆ ಮಾಡಬಾರದು? ಡೇಟಿಂಗ್‍ಗೆ ಹೋದ ಹಾಗೆ ನೀವು ಮತ್ತು ನಿಮ್ಮ ಸಂಗಾತಿ ಇಬ್ಬರೇ ಸಮಯ ಕಳೆಯಲು ಯೋಜಿಸಿ. ಈ ರೀತಿ ಮಾಡುವಾಗ ಪರಸ್ಪರ ಹತ್ತಿರವಾಗಲು ಮತ್ತು ಜೀವನದಲ್ಲಿ ಎದುರಾಗುವ ಅನಿರೀಕ್ಷಿತ ಸಮಸ್ಯೆಗಳನ್ನು ನಿಭಾಯಿಸಲು ಸಾಧ್ಯವಾಗುತ್ತದೆ.—ಬೈಬಲ್‌ ತತ್ವ: ಜ್ಞಾನೋಕ್ತಿ 5:18.

ಭಾವನೆಗಳನ್ನು ಹಂಚಿಕೊಳ್ಳಿ. ನಿಮ್ಮ ಸಂಗಾತಿಯ ಮಾತಿನಿಂದ ಅಥವಾ ನಡವಳಿಕೆಯಿಂದ ನಿಮ್ಮ ಮನಸ್ಸಿಗೆ ನೋವಾಗಿದ್ದರೆ ಅದನ್ನು ನೀವು ಮರೆಯುವುದಕ್ಕಾಗುತ್ತದಾ? ಮರೆಯಲು ಆಗದಿದ್ದರೂ ಮೌನಾಚರಣೆಯನ್ನಂತೂ ಮಾಡಬೇಡಿ. ಆದಷ್ಟು ಬೇಗ, ಸಾಧ್ಯವಾದಲ್ಲಿ ಅಂದೇ ನಿಮ್ಮ ಸಂಗಾತಿಯೊಂದಿಗೆ ಅದರ ಬಗ್ಗೆ ಸಮಾಧಾನದಿಂದ ಮಾತಾಡಿ.—ಬೈಬಲ್‌ ತತ್ವ: ಎಫೆಸ 4:26.

ನಿಮ್ಮ ಸಂಗಾತಿಯ ಮಾತಿನಿಂದ ಅಥವಾ ನಡವಳಿಕೆಯಿಂದ ನಿಮ್ಮ ಮನಸ್ಸಿಗೆ ನೋವಾಗಿದ್ದರೆ ಅದನ್ನು ನೀವು ಮರೆಯುವುದಕ್ಕಾಗುತ್ತದಾ?

ನಿಮ್ಮ ಭಾವನೆಗಳಿಗೂ ಮತ್ತು ನಿಮ್ಮ ಸಂಗಾತಿಯ ಉದ್ದೇಶಗಳಿಗೂ ಇರುವ ವ್ಯತ್ಯಾಸವನ್ನು ಗುರುತಿಸಿ. ಸಂಗಾತಿಯ ಮನನೋಯಿಸಬೇಕೆಂಬ ಉದ್ದೇಶ ನಿಮ್ಮಿಬ್ಬರಲ್ಲೂ ಇರುವುದಿಲ್ಲ. ಇದನ್ನು ನಿಮ್ಮಿಂದ ನಿಮ್ಮ ಸಂಗಾತಿಗೆ ಏನಾದ್ರೂ ನೋವಾಗಿದ್ದಾಗ ಯಥಾರ್ಥವಾಗಿ ಕ್ಷಮೆ ಕೇಳುವ ಮೂಲಕ ಖಚಿತಪಡಿಸಿ. ತದನಂತರ, ತಿಳಿಯದೆ ಮನನೋಯಿಸುವುದನ್ನು ತಡೆಯಲು ನೀವಿಬ್ಬರು ಯಾವ ನಿರ್ದಿಷ್ಟ ವಿಷಯಗಳನ್ನು ಮಾಡಬಹುದೆಂದು ಚರ್ಚಿಸಿ. ಈ ಬೈಬಲ್‌ ಸಲಹೆಯನ್ನು ಅನುಸರಿಸಿ: “ಒಬ್ಬರಿಗೊಬ್ಬರು ದಯೆಯುಳ್ಳವರಾಗಿಯೂ ಕೋಮಲ ಸಹಾನುಭೂತಿಯುಳ್ಳವರಾಗಿಯೂ ದೇವರು ಕ್ರಿಸ್ತನ ಮೂಲಕ ನಿಮ್ಮನ್ನು ಉದಾರವಾಗಿ ಕ್ಷಮಿಸಿದಂತೆಯೇ ಒಬ್ಬರನ್ನೊಬ್ಬರು ಉದಾರವಾಗಿ ಕ್ಷಮಿಸುವವರಾಗಿಯೂ ಇರಿ.”—ಎಫೆಸ 4:32.

ನೆರವೇರುವಂಥ ನಿರೀಕ್ಷೆಗಳನ್ನಿಟ್ಟುಕೊಳ್ಳಿ. ಮದುವೆ ಮಾಡಿಕೊಳ್ಳುವವರಿಗೆ “ಸಂಕಟವಿರುವುದು” ಎಂದು ಬೈಬಲ್‌ ಒಪ್ಪಿಕೊಳ್ಳುತ್ತದೆ. (1  ಕೊರಿಂಥ 7:28) ನಿಮಗೆ ಅಂಥ ಸಂಕಟ ಎದುರಾಗುವಾಗ ಮದುವೆ ಮಾಡಕೊಂಡು ತಪ್ಪು ಮಾಡಿದೆ ಎಂದು ದುಡುಕಿ ತೀರ್ಮಾನಿಸಬೇಡಿ. ಬದಲಿಗೆ, ಭಿನ್ನಾಭಿಪ್ರಾಯಗಳನ್ನು ಬಗೆಹರಿಸಲು ಜೊತೆಯಾಗಿ ಪ್ರಯತ್ನಿಸಿ ಮತ್ತು “ಒಬ್ಬರನ್ನೊಬ್ಬರು ಸಹಿಸಿಕೊಂಡು ಒಬ್ಬರನ್ನೊಬ್ಬರು ಉದಾರವಾಗಿ ಕ್ಷಮಿಸುವವರಾಗಿರಿ.”—ಕೊಲೊಸ್ಸೆ 3:13. (g14-E 03)