ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಗಂಭೀರ ಕಾಯಿಲೆಗೆ ತುತ್ತಾದಾಗ

ಗಂಭೀರ ಕಾಯಿಲೆಗೆ ತುತ್ತಾದಾಗ

“ನನಗೆ ಶ್ವಾಸಕೋಶ ಮತ್ತು ದೊಡ್ಡ ಕರುಳಿನ ಕ್ಯಾನ್ಸರ್‌ ಇದೆ ಎಂದು ಡಾಕ್ಟರ್‌ ಹೇಳಿದಾಗ ನಾನು ಖಂಡಿತ ಸತ್ತು ಹೋಗುತ್ತೇನೆ ಅಂತ ಅನಿಸಿತು. ಆದರೆ ಅಲ್ಲಿಂದ ಮನೆಗೆ ಬಂದ ನಂತರ ನಾನು, ‘ಇಂಥ ಕಾಯಿಲೆ ಬರುತ್ತೆ ಅಂತ ಅಂದುಕೊಂಡಿರಲಿಲ್ಲ ನಿಜ, ಆದರೂ ಇದನ್ನು ನಾನು ಎದುರಿಸಬೇಕು’ ಅಂತ ಯೋಚಿಸಿದೆ.”—71 ವಯಸ್ಸಿನ ಲಿಂಡ.

“ನರಗಳಿಗೆ ಸಂಬಂಧಿಸಿದ ಕಾಯಿಲೆಯು ನನ್ನ ಮುಖದ ಎಡಭಾಗವನ್ನು ಬಾಧಿಸಿದೆ. ತುಂಬಾ ನೋವು ಕಾಣಿಸಿಕೊಳ್ಳುವುದರಿಂದ ಒಂದು ಸಮಯದಲ್ಲಿ ನಾನು ಖಿನ್ನತೆಗೆ ಒಳಗಾಗಿದ್ದೆ. ಅನೇಕ ಸಾರಿ ನನಗ್ಯಾರೂ ಇಲ್ಲ ಅಂತ ಅನಿಸಿದೆ, ಆತ್ಮಹತ್ಯೆ ಮಾಡಿಕೊಳ್ಳಲು ಸಹ ಪ್ರಯತ್ನಿಸಿದ್ದೇನೆ.”—49 ವಯಸ್ಸಿನ ಎಲೀಸ.

ನಿಮಗೋ ನಿಮ್ಮ ಪ್ರಿಯರಿಗೋ ಮಾರಣಾಂತಿಕ ಕಾಯಿಲೆ ಇರುವುದಾದರೆ ಅದರಿಂದ ಎಷ್ಟು ಕಷ್ಟವಾಗುತ್ತದೆಂದು ನಿಮಗೆ ಚೆನ್ನಾಗಿ ತಿಳಿದಿರುತ್ತದೆ. ಆ ಕಾಯಿಲೆಯನ್ನು ಮಾತ್ರವಲ್ಲ, ಭಾವನೆಗಳಲ್ಲಾಗುವ ಏರುಪೇರನ್ನೂ ಎದುರಿಸಬೇಕಾಗುತ್ತದೆ. ಆತಂಕ ಹುಟ್ಟಿಸುವ ವೈದ್ಯಕೀಯ ಭೇಟಿಗಳು, ಚಿಕಿತ್ಸೆಯ ಖರ್ಚು ಮತ್ತು ಔಷಧಿಗಳಿಂದಾಗುವ ದುಷ್ಪರಿಣಾಮಗಳಿಂದಾಗಿ ಭಯ, ಚಿಂತೆ ಹೆಚ್ಚಾಗುತ್ತಾ ಹೋಗಬಹುದು. ಗಂಭೀರ ಕಾಯಿಲೆಯಿಂದಾಗಿ ತೀವ್ರ ಮಾನಸಿಕ ಒತ್ತಡ ಇರಬಹುದು.

ಇಂಥ ಸಮಯದಲ್ಲಿ ಸಹಾಯ ಎಲ್ಲಿ ಸಿಗುತ್ತದೆ? ದೇವರಿಗೆ ಪ್ರಾರ್ಥಿಸುವ ಮೂಲಕ ಆತನ ಮೇಲೆ ಭಾರ ಹಾಕಿ ಮತ್ತು ಬೈಬಲಿನಲ್ಲಿರುವ ಸಾಂತ್ವನ ನೀಡುವ ಭಾಗಗಳನ್ನು ಓದಿ. ಇದರಿಂದ ತುಂಬ ಸಾಂತ್ವನ ಸಿಗುತ್ತದೆ ಎಂದು ಅನೇಕರು ತಮ್ಮ ಅನುಭವಗಳಿಂದ ತಿಳಿಸುತ್ತಾರೆ. ಕುಟುಂಬದವರ ಮತ್ತು ಸ್ನೇಹಿತರ ಪ್ರೀತಿ ಹಾಗೂ ಬೆಂಬಲ ಸಹ ತುಂಬ ಸಹಾಯ ಮಾಡುತ್ತದೆ.

ಅನೇಕರಿಗೆ ಸಹಾಯ ಮಾಡಿದ ವಿಷಯಗಳು

“ದೇವರ ಮೇಲೆ ನಿಮಗಿರುವ ನಂಬಿಕೆಯ ಸಹಾಯದಿಂದ ಕಾಯಿಲೆಯನ್ನು ಎದುರಿಸಿ. ಆಗ ಆತನು ನಿಮಗೆ ಕಾಯಿಲೆಯನ್ನು ತಾಳಿಕೊಳ್ಳಲು ಸಹಾಯ ಮಾಡುವನು. ಯೆಹೋವನಿಗೆ ಪ್ರಾರ್ಥಿಸಿ. ನಿಮಗೆ ಹೇಗನಿಸುತ್ತಿದೆ ಎಂದು ಹೇಳಿ. ಬಲ ಕೊಡುವಂತೆ ಕೇಳಿಕೊಳ್ಳಿ. ಕುಟುಂಬಕ್ಕೆ ಧೈರ್ಯ ತುಂಬಲು ಬೇಕಾದ ಬಲ ಕೊಡುವಂತೆ ಮತ್ತು ಕಾಯಿಲೆಯಿಂದ ಬಳಲುತ್ತಿದ್ದರೂ ಸಮಾಧಾನದಿಂದ ಇರಲು ಸಹಾಯ ಮಾಡುವಂತೆ ಕೇಳಿಕೊಳ್ಳಿ” ಎಂದು 58 ವಯಸ್ಸಿನ ರಾಬರ್ಟ್‌ ಹೇಳುತ್ತಾರೆ.

“ಕುಟುಂಬದವರು ನಿಮಗೆ ಭಾವನಾತ್ಮಕವಾಗಿ ಬೆಂಬಲ ನೀಡುವಾಗ ತುಂಬ ಸಹಾಯವಾಗುತ್ತದೆ. ನನಗೆ ಪ್ರತಿದಿನ ಒಬ್ಬಿಬ್ಬರಾದರೂ ಫೋನ್‌ ಮಾಡಿ ‘ಹೇಗಿದ್ದೀರಾ?’ ಅಂತ ಕೇಳುತ್ತಾರೆ. ಬೇರೆ ಬೇರೆ ಸ್ಥಳಗಳಲ್ಲಿನ ನನ್ನ ಸ್ನೇಹಿತರು ನನಗೆ ಪ್ರೋತ್ಸಾಹ ಕೊಡುತ್ತಾರೆ. ಅವರು ಕೊಡುವ ಬಲದಿಂದ ನನಗೆ ತಾಳಿಕೊಂಡು ಹೋಗಲು ಸಹಾಯವಾಗುತ್ತದೆ” ಎನ್ನುತ್ತಾರೆ ರಾಬರ್ಟ್‌.

ನೀವು ಕಾಯಿಲೆಯಲ್ಲಿರುವವರನ್ನು ಭೇಟಿ ಮಾಡಲು ಹೋಗುವುದಾದರೆ ಲಿಂಡ ಹೇಳುವ ಈ ವಿಷಯಗಳನ್ನು ನೆನಪಿನಲ್ಲಿಡಿ: “ಹುಷಾರಿಲ್ಲದ ವ್ಯಕ್ತಿ ಸಾಧ್ಯವಾದಷ್ಟು ಮಟ್ಟಿಗೆ ಎಲ್ಲರಂತೆ ಸಹಜ ಜೀವನ ಮಾಡಲು ಬಯಸುತ್ತಾರೆ. ಯಾವಾಗಲೂ ಕಾಯಿಲೆಯ ಬಗ್ಗೆ ಮಾತಾಡಲು ಬಯಸದಿರಬಹುದು. ಹಾಗಾಗಿ, ನೀವು ಸಾಮಾನ್ಯವಾಗಿ ಮಾತಾಡುವ ವಿಷಯಗಳ ಬಗ್ಗೆ ಮಾತಾಡಿ.”

ಗಂಭೀರ ಕಾಯಿಲೆ ಬಂದರೂ, ಜೀವನ ಸಾರ್ಥಕ ಎಂಬ ಭರವಸೆಯನ್ನು ಕಳೆದುಕೊಳ್ಳದೇ ಮುಂದೆ ಸಾಗಲು ಸಾಧ್ಯ. ಇದನ್ನು ಮಾಡಲು, ದೇವರು ಕೊಡುವ ಬಲ, ಬೈಬಲಿನಿಂದ ಸಿಗುವ ಸಾಂತ್ವನ ಮತ್ತು ಪ್ರೀತಿಯ ಕುಟುಂಬ ಹಾಗೂ ಸ್ನೇಹಿತರ ಬೆಂಬಲದಿಂದ ಸಹಾಯ ಸಿಗುತ್ತದೆ.