ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದೇವರ ಮತ್ತು ಯೇಸುವಿನ ಬಗ್ಗೆ ಸತ್ಯ

ದೇವರ ಮತ್ತು ಯೇಸುವಿನ ಬಗ್ಗೆ ಸತ್ಯ

ಜನ ಬೇರೆ ಬೇರೆ ದೇವರುಗಳನ್ನು ಆರಾಧಿಸುತ್ತಾರೆ. ಆದ್ರೆ ಸತ್ಯ ದೇವರೊಬ್ಬನು ಇದ್ದಾನೆ. (ಯೋಹಾನ 17:3) ಆ ದೇವರೊಬ್ಬನೇ “ಮಹೋನ್ನತನು.” ಯಾಕೆಂದರೆ, ಈ ಪ್ರಪಂಚದಲ್ಲಿರುವ ಎಲ್ಲವನ್ನು ಸೃಷ್ಟಿಸಿದ್ದು ಆ ದೇವರೇ. ಹಾಗಾಗಿ ನಮ್ಮೆಲ್ಲರ ಆರಾಧನೆಗೆ ಆ ದೇವರೇ ಯೋಗ್ಯನು.—ದಾನಿಯೇಲ 7:18, ಪವಿತ್ರ ಗ್ರಂಥ; ಪ್ರಕಟನೆ 4:11.

ದೇವರು ಯಾರು?

ಬೈಬಲಿನಲ್ಲಿ ದೇವರ ಹೆಸರು ಇರುವುದು ಸುಮಾರು 7,000 ಬಾರಿ

ಯೆಹೋವ ದೇವರ ಹೆಸರು

ಕರ್ತನು, ದೇವರು, ತಂದೆ​—ಯೆಹೋವನ ಬಿರುದುಗಳು

ದೇವರ ಹೆಸರೇನು? “ನಾನೇ ಯೆಹೋವನು; ಇದೇ ನನ್ನ ನಾಮವು” ಅಂತ ಸ್ವತಃ ದೇವರೇ ಹೇಳಿದ್ದಾನೆ. (ಯೆಶಾಯ 42:8) ದೇವರ ಈ ಹೆಸರನ್ನು, ನಾವು ಬೈಬಲಿನಲ್ಲಿ ಸುಮಾರು 7,000 ಸಲ ನೋಡಬಹುದು. ಆದರೆ ಯೆಹೋವ ಎಂಬ ಈ ಹೆಸರನ್ನು ಅನೇಕ ಬೈಬಲ್‌ ಭಾಷಾಂತರಗಾರರು “ಕರ್ತ” ಎಂದು ಬದಲಾಯಿಸಿದ್ದಾರೆ. ನಿಜಾಂಶವೇನೆಂದರೆ, ದೇವರು ನಿಮ್ಮ ಗೆಳೆಯನಾಗಲು ಇಷ್ಟಪಡುತ್ತಾನೆ. ನೀವು ‘ಆತನ ಹೆಸರೆತ್ತಿ ಕರೆಯಬೇಕು’ ಎಂಬುದೇ ದೇವರ ಆಸೆ.—ಕೀರ್ತನೆ 105:1, ಪವಿತ್ರ ಗ್ರಂಥ.

ಯೆಹೋವನ ಬಿರುದುಗಳು. ಬೈಬಲ್‌ ಯೆಹೋವನನ್ನು “ದೇವರು”, “ಸರ್ವಶಕ್ತ”, “ಸೃಷ್ಟಿಕರ್ತ”, “ತಂದೆ”, “ಕರ್ತ” ಹೀಗೆ ಅನೇಕ ಬಿರುದುಗಳಿಂದ ಕರೆಯುತ್ತೆ. ದೇವರ ಸೇವಕರಲ್ಲಿ ಕೆಲವರು, ತಮ್ಮ ಪ್ರಾರ್ಥನೆಗಳಲ್ಲಿ ಯೆಹೋವನ ಬಿರುದು ಮತ್ತು ಹೆಸರು ಎರಡನ್ನೂ ಉಪಯೋಗಿಸಿದ್ದಾರೆ.—ದಾನಿಯೇಲ 9:4.

ದೇವರ ಸ್ವರೂಪ. ದೇವರು ನಮ್ಮ ಕಣ್ಣಿಗೆ ಕಾಣದ ಆತ್ಮಸ್ವರೂಪಿ. (ಯೋಹಾನ 4:24) ‘ಯಾವ ಮನುಷ್ಯನೂ ಎಂದಿಗೂ ದೇವರನ್ನು ಕಂಡಿಲ್ಲ’ ಎನ್ನುತ್ತೆ ಬೈಬಲ್‌. (ಯೋಹಾನ 1:18) ಆದರೂ ದೇವರಿಗೆ ಭಾವನೆಗಳಿವೆ. ಉದಾಹರಣೆಗೆ, ನಾವು ತಪ್ಪು ಮಾಡುವಾಗ ದೇವರಿಗೆ ತುಂಬ ಬೇಜಾರಾಗುತ್ತೆ. ಅದೇ ಸಮಯದಲ್ಲಿ, ನಾವು ಒಳ್ಳೇದು ಮಾಡುವಾಗ ದೇವರಿಗೆ ತುಂಬ ‘ಸಂತೋಷವಾಗುತ್ತೆ.’—ಜ್ಞಾನೋಕ್ತಿ 27:11; ಕೀರ್ತನೆ 78:40, 41.

ದೇವರ ಸುಂದರ ಗುಣಗಳು. ಎಲ್ಲಾ ಜನಾಂಗದವರನ್ನು ದೇವರು ಸ್ವೀಕರಿಸುತ್ತಾರೆ. ದೇವರಲ್ಲಿ ಯಾವ ಭೇದ-ಭಾವನೂ ಇಲ್ಲ. (ಅಪೊಸ್ತಲರ ಕಾರ್ಯಗಳು 10:34, 35) ಯೆಹೋವನು, “ಕನಿಕರವೂ ದಯೆಯೂ ಉಳ್ಳ ದೇವರು; ದೀರ್ಘಶಾಂತನೂ ಪ್ರೀತಿಯೂ ನಂಬಿಕೆಯೂ ಉಳ್ಳವನು.” (ವಿಮೋಚನಕಾಂಡ 34:6, 7) ದೇವರ ಅದ್ಭುತ ವ್ಯಕ್ತಿತ್ವದಲ್ಲಿ ನಮ್ಮ ಮನಸೆಳೆಯುವ ನಾಲ್ಕು ಗುಣಗಳನ್ನು ನಾವೀಗ ನೋಡೋಣ.

ಶಕ್ತಿ. ದೇವರು ಸರ್ವಶಕ್ತನು ಮತ್ತು ಅವನಿಗೆ ಅಪಾರ ಶಕ್ತಿಯಿದೆ. ಹಾಗಾಗಿ, ತಾನು ಕೊಟ್ಟ ಮಾತನ್ನೆಲ್ಲ ನೆರವೇರಿಸುತ್ತಾನೆ.—ಆದಿಕಾಂಡ 17:1.

ವಿವೇಕ. ವಿವೇಕದಲ್ಲಿ ದೇವರಿಗೆ ಸರಿಸಾಟಿ ಯಾರೂ ಇಲ್ಲ. ಹಾಗಾಗಿ, ಬೈಬಲ್‌ ದೇವರೊಬ್ಬನೇ ವಿವೇಕಿ ಅಂತ ಹೇಳುತ್ತೆ.—ರೋಮನ್ನರಿಗೆ 16:27.

ನ್ಯಾಯ. ದೇವರು ಯಾವಾಗಲೂ ಸರಿಯಾದದ್ದನ್ನೇ ಮಾಡುತ್ತಾನೆ. ದೇವರಲ್ಲಿ ಯಾವ “ಕುಂದೂ ಇಲ್ಲ” ಮತ್ತು “ಆತನು ನಡಿಸುವದೆಲ್ಲಾ ನ್ಯಾಯ.”—ಧರ್ಮೋಪದೇಶಕಾಂಡ 32:4.

ಪ್ರೀತಿ. ದೇವರು ಪ್ರೀತಿಯ ಸಾಕಾರಮೂರ್ತಿ. ಬೈಬಲ್‌ “ದೇವರು ಪ್ರೀತಿಯಾಗಿದ್ದಾನೆ” ಅಂತ ಹೇಳುತ್ತೆ. (1 ಯೋಹಾನ 4:8) ದೇವರು ಮಾಡುವ ಪ್ರತಿಯೊಂದು ವಿಷಯದಲ್ಲೂ ಆ ಪ್ರೀತಿ ಎದ್ದು ಕಾಣುತ್ತೆ. ಆ ಪ್ರೀತಿಯಿಂದಾನೇ ದೇವರು ನಮಗಾಗಿ ಎಷ್ಟೋ ವಿಷಯಗಳನ್ನು ಮಾಡಿದ್ದಾನೆ.

ನಮ್ಮ ಗೆಳೆಯನಾಗಬೇಕು ಅನ್ನೋದೇ ದೇವರ ಆಸೆ. ದೇವರು ನಮ್ಮ ಪ್ರೀತಿಯ ತಂದೆ. (ಮತ್ತಾಯ 6:9) ನಿಜವಾದ ನಂಬಿಕೆ ಇರುವವರೆಲ್ಲರೂ ದೇವರ ಸ್ನೇಹಿತರಾಗಬಹುದು. (ಕೀರ್ತನೆ 25:14) ಪ್ರಾರ್ಥನೆಯ ಮೂಲಕ ನನ್ನ ಸಮೀಪಕ್ಕೆ ಬನ್ನಿರಿ ಅಂತ ದೇವರು ನಮ್ಮನ್ನು ಆಮಂತ್ರಿಸುತ್ತಾನೆ. (ಯಾಕೋಬ 4:8) “ನಿಮ್ಮ ಚಿಂತೆಯನ್ನೆಲ್ಲಾ ಆತನ ಮೇಲೆ ಹಾಕಿರಿ, ಏಕೆಂದರೆ ಆತನು ನಿಮಗೋಸ್ಕರ ಚಿಂತಿಸುತ್ತಾನೆ” ಎನ್ನುತ್ತೆ ಬೈಬಲ್‌.—1 ಪೇತ್ರ 5:7.

ದೇವರಿಗೂ ಯೇಸುವಿಗೂ ಏನು ವ್ಯತ್ಯಾಸ?

ಯೇಸು ದೇವರ ಮಗ. ನಾವೆಲ್ಲರೂ ದೇವರ ಮಕ್ಕಳು, ಆದರೆ ಯೇಸುಗೆ ಒಂದು ವಿಶೇಷತೆ ಇದೆ. ದೇವರು ಯೇಸುವನ್ನು ಮಾತ್ರ ನೇರವಾಗಿ ಸೃಷ್ಟಿಸಿದನು. ಹಾಗಾಗಿ, ಬೈಬಲ್‌ ಯೇಸುವನ್ನು ದೇವರ ಮಗ ಅಂತ ಕರೆಯುತ್ತೆ. (ಯೋಹಾನ 1:14) ಯೇಸುವನ್ನು ಸೃಷ್ಟಿಸಿದ ನಂತರ, ಬೇರೆಲ್ಲವನ್ನು ಸೃಷ್ಟಿಸಲು ಯೆಹೋವ ದೇವರು ತನ್ನ ಈ ಮಗನನ್ನೇ ಶಿಲ್ಪಿಯಾಗಿ ಬಳಸಿದನು.—ಜ್ಞಾನೋಕ್ತಿ 8:30, 31; ಕೊಲೊಸ್ಸೆ 1:15, 16.

ಯೇಸು ತಾನು ದೇವರೆಂದು ಯಾವತ್ತೂ ಹೇಳಲಿಲ್ಲ. “ನಾನು ಆತನ (ದೇವರ) ಬಳಿಯಿಂದ ಬಂದ ಪ್ರತಿನಿಧಿಯಾಗಿದ್ದೇನೆ ಮತ್ತು ನನ್ನನ್ನು ಕಳುಹಿಸಿದವನು ಆತನೇ” ಅಂತ ಸ್ವತಃ ಯೇಸುವೇ ಹೇಳಿದನು. (ಯೋಹಾನ 7:29) ಒಮ್ಮೆ ಯೇಸು ತನ್ನ ಶಿಷ್ಯರ ಹತ್ತಿರ ಯೆಹೋವ ದೇವರ ಬಗ್ಗೆ ಹೇಳುವಾಗ, “ನನ್ನ ತಂದೆಯೂ ನಿಮ್ಮ ತಂದೆಯೂ ನನ್ನ ದೇವರೂ ನಿಮ್ಮ ದೇವರೂ” ಅಂದನು. (ಯೋಹಾನ 20:17) ಯೇಸು ತೀರಿಹೋದ ಮೇಲೆ ಯೆಹೋವ ದೇವರು ಅವನಿಗೆ ಪುನಃ ಜೀವ ಕೊಟ್ಟರು. ನಂತರ ದೇವರು ಯೇಸುವಿಗೆ, ತನ್ನ ಬಲಗಡೆಯ ಉನ್ನತ ಸ್ಥಾನ ಕೊಟ್ಟನು.—ಮತ್ತಾಯ 28:18; ಅಪೊಸ್ತಲರ ಕಾರ್ಯಗಳು 2:32, 33.

ಯೇಸು ನಮಗೆ ದೇವರ ಗೆಳೆಯರಾಗಲು ಸಹಾಯ ಮಾಡುತ್ತಾನೆ

ಯೇಸು ಭೂಮಿಗೆ ಬರಲು ಒಂದು ಮುಖ್ಯ ಕಾರಣ ತನ್ನ ತಂದೆಯ ಬಗ್ಗೆ ಕಲಿಸುವುದಕ್ಕಾಗಿಯೇ. ಯೇಸುವಿನ ಬಗ್ಗೆ ಸ್ವತಃ ಯೆಹೋವ ದೇವರೇ “ಇವನು ಪ್ರಿಯನಾಗಿರುವ ನನ್ನ ಮಗನು, ಇವನ ಮಾತಿಗೆ ಕಿವಿಗೊಡಿರಿ” ಅಂತ ಹೇಳಿದನು. (ಮಾರ್ಕ 9:7) ಬೇರೆಲ್ಲರಿಗಿಂತ ಯೇಸುವಿಗೆ ದೇವರ ಬಗ್ಗೆ ಚೆನ್ನಾಗಿ ಗೊತ್ತು. ಹಾಗಾಗಿನೇ ಯೇಸು, ‘ತಂದೆಯು ಯಾರೆಂಬುದು ಮಗನ ಹೊರತು ಮತ್ತು ಮಗನು ಯಾರಿಗೆ ಆತನನ್ನು ತಿಳಿಯಪಡಿಸಲು ಇಷ್ಟಪಡುತ್ತಾನೊ ಅವನ ಹೊರತು ಯಾರಿಗೂ ತಿಳಿದಿಲ್ಲ’ ಅಂತ ಹೇಳಿದನು.—ಲೂಕ 10:22.

ಯೇಸು ಸಾಕ್ಷಾತ್‌ ತನ್ನ ತಂದೆ ತರನೇ ಇದ್ದಾನೆ. “ನನ್ನನ್ನು ನೋಡಿದವನು ನನ್ನ ತಂದೆಯನ್ನೂ ನೋಡಿದ್ದಾನೆ” ಎಂದು ಹೇಳುವಷ್ಟರಮಟ್ಟಿಗೆ ಯೇಸು ದೇವರನ್ನು ಅನುಕರಿಸಿದನು. (ಯೋಹಾನ 14:9) ದೇವರಲ್ಲಿದ್ದ ಎಲ್ಲಾ ಗುಣಗಳು ಯೇಸುವಿನಲ್ಲಿತ್ತು. ಯೇಸು ತನ್ನ ಮಾತು ಮತ್ತು ನಡತೆಯಲ್ಲಿ ದೇವರ ಕೋಮಲ ಪ್ರೀತಿಯನ್ನು ತೋರಿಸಿದನು. ಇದರಿಂದಾಗಿ ಎಷ್ಟೋ ಜನರು ದೇವರ ಹತ್ತಿರ ಬರಲಿಕ್ಕಾಯಿತು. ಹಾಗಾಗಿಯೇ ಯೇಸು, “ನಾನೇ ಮಾರ್ಗವೂ ಸತ್ಯವೂ ಜೀವವೂ ಆಗಿದ್ದೇನೆ. ನನ್ನ ಮೂಲಕವೇ ಹೊರತು ಯಾರೂ ತಂದೆಯ ಬಳಿಗೆ ಬರುವುದಿಲ್ಲ” ಅಂತ ಹೇಳಿದನು. (ಯೋಹಾನ 14:6) “ಸತ್ಯಾರಾಧಕರು ತಂದೆಯನ್ನು ಪವಿತ್ರಾತ್ಮದಿಂದಲೂ ಸತ್ಯದಿಂದಲೂ ಆರಾಧಿಸುವ ಕಾಲ ಬರುತ್ತದೆ . . . ಏಕೆಂದರೆ ತಂದೆಯು ತನ್ನನ್ನು ಆರಾಧಿಸಲು ಇಂಥವರನ್ನೇ ಹುಡುಕುತ್ತಿದ್ದಾನೆ” ಅಂತ ಸಹ ಯೇಸು ಹೇಳಿದನು. (ಯೋಹಾನ 4:23) ಹೌದು, ಯೆಹೋವ ದೇವರು ತನ್ನ ಬಗ್ಗೆ ಇರುವ ಸತ್ಯವನ್ನು ತಿಳಿಯಲು ಬಯಸುವ ನಿಮ್ಮಂಥವರನ್ನೇ ಹುಡುಕುತ್ತಿದ್ದಾನೆ.