ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಿಮಗೆ ಗೊತ್ತಿತ್ತಾ?

ನಿಮಗೆ ಗೊತ್ತಿತ್ತಾ?

ಬೈಬಲ್‌ ಕಾಲದಲ್ಲಿ ತಿಂಗಳು ಮತ್ತು ವರ್ಷಗಳನ್ನ ಹೇಗೆ ಲೆಕ್ಕ ಹಾಕುತ್ತಿದ್ದರು?

ಯೆಹೋವ ಮಾತು ಕೊಟ್ಟ ದೇಶದಲ್ಲಿ ಇಸ್ರಾಯೇಲ್ಯರು ಉಳೋಕೆ ಮತ್ತು ಬಿತ್ತನೆ ಮಾಡೋಕೆ ಶುರುಮಾಡುವಾಗ ಹೊಸ ವರ್ಷ ಪ್ರಾರಂಭವಾಗ್ತಿತ್ತು. ಇದು ನಮ್ಮ ಕ್ಯಾಲೆಂಡರಲ್ಲಿ ಸೆಪ್ಟೆಂಬರ್‌/ಅಕ್ಟೋಬರ್‌ನಲ್ಲಿ ಬರುತ್ತೆ.

ಯೆಹೂದ್ಯರು ಒಂದು ವರ್ಷದಲ್ಲಿ ಎಷ್ಟು ದಿನಗಳು ಇರಬೇಕು ಅಂತ ಸೂರ್ಯನನ್ನ ನೋಡಿ ಲೆಕ್ಕ ಮಾಡುತ್ತಿದ್ದರು. ಆದ್ರೆ ಒಂದು ತಿಂಗಳಲ್ಲಿ ಎಷ್ಟು ದಿನ ಇರಬೇಕು ಅಂತ ಚಂದ್ರನನ್ನ ನೋಡಿ ಲೆಕ್ಕ ಮಾಡುತ್ತಿದ್ದರು. ಆಗ ತಿಂಗಳಿಗೆ 29/30 ದಿನಗಳು ಇರುತ್ತಿತ್ತು. ಹೀಗೆ ಮಾಡುವಾಗ ಚಂದ್ರನನ್ನ ನೋಡಿ ಲೆಕ್ಕ ಮಾಡುತ್ತಿದ್ದ ದಿನಗಳು ಸೂರ್ಯನನ್ನ ನೋಡಿ ಲೆಕ್ಕ ಮಾಡುತ್ತಿದ್ದ ದಿನಗಳಿಗಿಂತ ಕಡಿಮೆ ಬೀಳುತ್ತಿತ್ತು. ಹಾಗಾಗಿ ಆ ಲೆಕ್ಕಾಚಾರನ ಸರಿಹೊಂದಿಸೋಕೆ ಆ ವರ್ಷ ಶುರು ಆಗೋ ಮುಂಚೆನೆ ಕೆಲವು ದಿನಗಳನ್ನ ಅಥವಾ ಒಂದು ತಿಂಗಳನ್ನ ಸೇರಿಸುತ್ತಿದ್ದರು. ಹೀಗೆ ಮಾಡಿದ್ರಿಂದ ಅವರು ನೆಡುವ ಮತ್ತು ಉಳುವ ಕಾಲಕ್ಕೆ ಸರಿಯಾಗಿ ಹೊಸ ವರ್ಷ ಶುರು ಆಗುತ್ತಿತ್ತು.

ಮೋಶೆ ಕಾಲದಲ್ಲಿ ಯೆಹೋವ ತನ್ನ ಜನರಿಗೆ ನೈಸಾನ್‌ ಅಥವಾ ಅಬೀಬನ್ನ ವರ್ಷದ ಮೊದಲನೇ ತಿಂಗಳಾಗಿ ಕೊಟ್ಟನು. ಅದು ವಸಂತ ಕಾಲದಲ್ಲಿ ಬರುತ್ತಿತ್ತು. (ವಿಮೋ. 12:2; 13:4) ಆ ತಿಂಗಳಲ್ಲಿ ಬಾರ್ಲಿ ಕೊಯ್ಲು ಮಾಡುತ್ತಿದ್ದರು ಮತ್ತು ಕೊಯ್ಲಿನ ಹಬ್ಬ ಆಚರಿಸುತ್ತಿದ್ದರು.—ವಿಮೋ. 23:15, 16.

ಇಮಿಲ್‌ ಶ್ಹೂರರ್‌ ಅನ್ನೋ ತತ್ವಜ್ಞಾನಿ ದಿ ಹಿಸ್ಟರಿ ಆಫ್‌ ಜ್ಯೂವಿಷ್‌ ಪೀಪಲ್‌ ಇನ್‌ ದ ಏಜ್‌ ಆಫ್‌ ಜೀಸಸ್‌ ಕ್ರೈಸ್ಟ್‌, (ಕ್ರಿ.ಪೂ. 175-ಕ್ರಿ.ಶ. 135) ಅನ್ನೋ ಪುಸ್ತಕದಲ್ಲಿ ಹೀಗೆ ಹೇಳಿದ್ದಾರೆ: “ಕ್ಯಾಲೆಂಡರಲ್ಲಿ ಒಂದು ಹೊಸ ತಿಂಗಳನ್ನ ಯಾವಾಗ ಸೇರಿಸಬೇಕು ಅಂತ ಕಂಡುಹಿಡಿಯೋಕೆ ಒಂದು ಸುಲಭವಾದ ವಿಧ ಇದೆ. ಪಸ್ಕ ಹಬ್ಬವನ್ನು ನೈಸಾನ್‌ 14ನೇ ತಾರೀಕು ಹುಣ್ಣಿಮೆಯ ದಿನದಂದು ಆಚರಿಸುತ್ತಿದ್ದರು. ಇದನ್ನ ಸಾಮಾನ್ಯವಾಗಿ ಮೇಘ ಸಂಕ್ರಾಂತಿಯ ನಂತರ ಮಾಡುತ್ತಿದ್ದರು. ಒಂದುವೇಳೆ ವರ್ಷಾಂತ್ಯದಲ್ಲಿ, ಪಸ್ಕವು ಮೇಘ ಸಂಕ್ರಾಂತಿಗಿಂತ ಮೊದಲು ಬೀಳುತ್ತದೆಂದು ಗಮನಿಸಿದ್ದಲ್ಲಿ ನೈಸಾನಿನ ಮೊದಲು ಅಧಿಕ ಮಾಸವನ್ನು ಅಂದರೆ 13ನೇ ತಿಂಗಳನ್ನು ಕೂಡಿಸಬೇಕೆಂದು ಆಜ್ಞೆ ವಿಧಿಸಲಾಗುತ್ತಿತ್ತು.”

ಈ ವಿಧಾನವನ್ನ ಮನಸ್ಸಲ್ಲಿಟ್ಟು ಯೆಹೋವನ ಸಾಕ್ಷಿಗಳು ಕರ್ತನ ಸಂಧ್ಯಾ ಭೋಜನವನ್ನ ಆಚರಿಸೋ ತಾರೀಖನ್ನ ನಿರ್ಧರಿಸುತ್ತಾರೆ. ಇದು ಹೀಬ್ರು ಕ್ಯಾಲೆಂಡರ್‌ನಲ್ಲಿ ನೈಸಾನ್‌ 14ನೇ ತಾರೀಖು, ವಸಂತಕಾಲದಲ್ಲಿ ಬರುತ್ತೆ. ಆ ದಿನ ನಮ್ಮ ಕ್ಯಾಲೆಂಡರ್‌ನಲ್ಲಿ ಯಾವ ತಾರೀಖಿಗೆ ಬೀಳುತ್ತೆ ಅಂತ ನೋಡಿ ಎಲ್ಲರಿಗೂ ತಿಳಿಸಲಾಗುತ್ತೆ. *

ನಾವು ಕ್ಯಾಲೆಂಡರ್‌ ಅಥವಾ ಮೊಬೈಲ್‌ನ ನೋಡಿ ತಿಂಗಳು, ತಾರೀಖನ್ನ ಹೇಳಿಬಿಡ್ತೀವಿ. ಆದರೆ ಯೆಹೂದ್ಯರ ಕಾಲದಲ್ಲಿ ಇದು ಅಷ್ಟು ಸುಲಭವಾಗಿರಲಿಲ್ಲ. ಒಂದು ತಿಂಗಳು ಯಾವಾಗ ಶುರುವಾಗುತ್ತೆ ಯಾವಾಗ ಕೊನೆಯಾಗುತ್ತೆ ಅಂತ ಅವರು ಹೇಗೆ ತಿಳಿದುಕೊಳ್ತಿದ್ರು?

ನೋಹನ ಕಾಲದಲ್ಲಿ, ಒಂದು ತಿಂಗಳಿಗೆ 30 ದಿನ ಅಂತ ಲೆಕ್ಕ ಮಾಡುತ್ತಿದ್ದರು. (ಆದಿ. 7:11, 24; 8:3, 4) ಆದರೆ ಆಮೇಲೆ ಯೆಹೂದ್ಯರು ಒಂದು ತಿಂಗಳಿಗೆ 30 ದಿನ ಅಂತ ನಿಶ್ಚಯಿಸಿರಲಿಲ್ಲ. ಚಂದ್ರ ಕಾಣಿಸಿಕೊಳ್ಳೋಕೆ ಶುರುವಾದಾಗ ತಿಂಗಳು ಶುರುವಾಯಿತು ಅಂದುಕೊಳ್ಳುತ್ತಿದ್ದರು. ಅವತ್ತಿಂದ ಹಿಡಿದು 29/30 ದಿನಗಳ ತನಕ ಒಂದು ತಿಂಗಳು ಅಂತ ಲೆಕ್ಕ ಮಾಡುತ್ತಿದ್ದರು.

ಒಮ್ಮೆ ದಾವೀದ ಮತ್ತು ಯೋನಾತಾನ, ತಿಂಗಳು ನಾಳೆ ಶುರುವಾಗುತ್ತೆ ಅಂತ ಹೇಳೋಕೆ, “ನಾಳೆ ಅಮಾವಾಸ್ಯೆ” ಅಂತ ಹೇಳಿದ್ರು. (1 ಸಮು. 20:5, 18) ಇದರಿಂದ ಕ್ರಿ.ಪೂ. 11ನೇ ಶತಮಾನದಷ್ಟಕ್ಕೆ ಜನರು ತಿಂಗಳುಗಳನ್ನ ಮುಂಚಿತವಾಗೇ ಲೆಕ್ಕ ಮಾಡುತ್ತಿದ್ದರು ಅಂತ ಗೊತ್ತಾಗುತ್ತೆ. ಅವರು ಹೇಗೆ ಲೆಕ್ಕ ಮಾಡ್ತಿದ್ರು ಅನ್ನೋದರ ಬಗ್ಗೆ ಯೆಹೂದ್ಯರ ಮೌಖಿಕ ನಿಯಮಗಳು ಮತ್ತು ಸಂಪ್ರದಾಯಗಳ ಬಗ್ಗೆ ಬರೆದಿರುವ ಮಿಷ್ನಾ ಅನ್ನೋ ಪುಸ್ತಕ ಸ್ವಲ್ಪ ಮಾಹಿತಿ ಕೊಡುತ್ತೆ. ಯೆಹೂದ್ಯರು ಬಾಬೆಲಿಂದ ಬಿಡುಗಡೆಯಾಗಿ ಬಂದಮೇಲೆ ಒಂದು ತಿಂಗಳು ಯಾವಾಗ ಶುರುವಾಗುತ್ತೆ ಅನ್ನೋದನ್ನ ಸನ್ಹೆದ್ರಿನ್‌ (ಯೆಹೂದ್ಯರ ಉಚ್ಚ ನ್ಯಾಯಾಲಯ) ನಿರ್ಧರಿಸುತ್ತಿತ್ತು. ಇಸ್ರಾಯೇಲ್ಯರು ಹಬ್ಬಗಳನ್ನ ಆಚರಿಸುತ್ತಿದ್ದ 7 ತಿಂಗಳಲ್ಲಿ ಪ್ರತಿ ತಿಂಗಳ 30ನೇ ದಿನದಂದು ಅವರು ಮುಂದಿನ ತಿಂಗಳು ಆರಂಭವಾಯಿತಾ ಇಲ್ವಾ ಅಂತ ಪ್ರಕಟಿಸುತ್ತಿದ್ದರು ಅಂತ ಆ ಪುಸ್ತಕ ಹೇಳುತ್ತೆ. ಆದರೆ ಇದನ್ನ ಯಾವ ಆಧಾರದ ಮೇಲೆ ಮಾಡುತ್ತಿದ್ದರು?

ಚಂದ್ರ ಕಾಣಿಸಿಕೊಳ್ತಾ ಅಂತ ನೋಡೋಕಂತಾನೇ ಯೆರೂಸಲೇಮಿನ ಬೆಟ್ಟಗಳಲ್ಲಿ ಕಾವಲುಗಾರರನ್ನ ನೇಮಿಸಲಾಗಿತ್ತು. ಅವರು ಚಂದ್ರ ಕಂಡ ತಕ್ಷಣ ಸನ್ಹೆದ್ರಿನ್‌ಗೆ ಬಂದು ತಿಳಿಸುತ್ತಿದ್ರು. ಈ ರೀತಿ ಸಾಕಷ್ಟು ಆಧಾರಗಳು ಸಿಕ್ಕಿದ ಮೇಲೆ ಹೊಸ ತಿಂಗಳು ಶುರುವಾಯ್ತು ಅಂತ ನ್ಯಾಯಾಲಯ ಪ್ರಕಟಿಸುತ್ತಿತ್ತು. ಒಂದುವೇಳೆ ಮೋಡ ಮುಚ್ಚಿಕೊಂಡು ಅಥವಾ ಮಂಜು ತುಂಬಿಕೊಂಡು ಚಂದ್ರ ಕಾಣಿಸದೆ ಇದ್ರೆ ಪ್ರಸ್ತುತ ತಿಂಗಳಲ್ಲಿ 30 ದಿನಗಳಿವೆ ಮತ್ತು ನಾಳೆಯಿಂದ ಹೊಸ ತಿಂಗಳು ಶುರುವಾಗುತ್ತೆ ಅಂತ ಪ್ರಕಟಿಸುತ್ತಿದ್ದರು.

ಇದನ್ನ ಯೆರೂಸಲೇಮ್‌ ಪಕ್ಕದಲ್ಲಿದ್ದ ಆಲೀವ್‌ ಬೆಟ್ಟದ ಮೇಲೆ ಬೆಂಕಿ ಹಚ್ಚಿ ಜನರಿಗೆ ತಿಳಿಸುತ್ತಿದ್ದರು. ಇಸ್ರಾಯೇಲಿನ ಸುತ್ತಮುತ್ತ ಇದ್ದ ಊರುಗಳಿಗೂ ಇದೇ ತರ ತಿಳಿಸುತ್ತಿದ್ದರು. ಆದ್ರೆ ಕಾಲ ಹೋದ ಹಾಗೆ ಡಂಗುರ ಸಾರುವವರನ್ನ ಅಥವಾ ಸಂದೇಶವಾಹಕರನ್ನ ಕಳಿಸಿ ಜನರಿಗೆ ತಿಳಿಸುತ್ತಿದ್ದರು ಅಂತ ಮಿಷ್ನಾ ಪುಸ್ತಕ ವಿವರಿಸುತ್ತೆ. ಹೀಗೆ ಯೆರೂಸಲೇಮ್‌, ಇಸ್ರಾಯೇಲ್‌ ಮತ್ತು ಸುತ್ತಮುತ್ತ ಹಳ್ಳಿಗಳಲ್ಲಿದ್ದ ಯೆಹೂದ್ಯರಿಗೆ ಹೊಸ ತಿಂಗಳು ಶುರುವಾಯ್ತು ಅಂತ ಗೊತ್ತಾಗುತ್ತಿತ್ತು. ಆಗ ಎಲ್ಲರಿಗೂ ಒಂದೇ ಸಮಯದಲ್ಲಿ ಹಬ್ಬಗಳನ್ನ ಆಚರಿಸೋಕೆ ಆಗುತ್ತಿತ್ತು.

ಇಸ್ರಾಯೇಲ್ಯರ ಕಾಲಗಳಲ್ಲಿ ತಿಂಗಳುಗಳು, ಹಬ್ಬಗಳು ಮತ್ತು ಕಾಲಗಳು ಹೇಗೆ ಒಂದಕ್ಕೊಂದು ಸಂಬಂಧಿಸಿದೆ ಅಂತ ಅರ್ಥಮಾಡಿಕೊಳ್ಳೋಕೆ ಕೆಳಗಿರೋ ಚಾರ್ಟ್‌ ನೋಡಿ.

^ ಫೆಬ್ರವರಿ 15, 1990ರ ಕಾವಲಿನಬುರುಜುವಿನ ಪುಟ 15 ಮತ್ತು ಜೂನ್‌ 15, 1977ರಲ್ಲಿರೋ ಕಾವಲಿನಬುರುಜುವಿನ “ವಾಚಕರಿಂದ ಪ್ರಶ್ನೆಗಳು” (ಇಂಗ್ಲಿಷ್‌) ನೋಡಿ.