ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಿಮಗೆ ಗೊತ್ತಿತ್ತಾ?

ನಿಮಗೆ ಗೊತ್ತಿತ್ತಾ?

ಯೆರೂಸಲೇಮ್‌ ದೇವಾಲಯದಲ್ಲಿ ಪ್ರಾಣಿಗಳನ್ನು ಮಾರುತ್ತಿದ್ದವರನ್ನು ‘ಕಳ್ಳರು’ ಎಂದು ಯೇಸು ಕರೆದದ್ದು ಸರಿಯಾಗಿಯೇ ಇತ್ತು ಯಾಕೆ?

ಮತ್ತಾಯ ಪುಸ್ತಕ ಹೀಗೆ ಹೇಳುತ್ತದೆ: “ಯೇಸು ದೇವಾಲಯವನ್ನು ಪ್ರವೇಶಿಸಿ ಅದರೊಳಗೆ ಮಾರುತ್ತಿದ್ದವರನ್ನೂ ಕೊಳ್ಳುತ್ತಿದ್ದವರನ್ನೂ ಹೊರಗಟ್ಟಿದನು ಮತ್ತು ಹಣವಿನಿಮಯಗಾರರ ಮೇಜುಗಳನ್ನು ಹಾಗೂ ಪಾರಿವಾಳಗಳನ್ನು ಮಾರುತ್ತಿದ್ದವರ ಕಾಲ್ಮಣೆಗಳನ್ನು ಕೆಡವಿದನು. ಮತ್ತು ಅವನು ಅವರಿಗೆ, ‘“ನನ್ನ ಆಲಯವು ಪ್ರಾರ್ಥನಾ ಮಂದಿರವೆನಿಸಿಕೊಳ್ಳುವುದು” ಎಂದು ಬರೆದಿದೆ. ಆದರೆ ನೀವು ಅದನ್ನು ಕಳ್ಳರ ಗವಿಯನ್ನಾಗಿ ಮಾಡುತ್ತಿದ್ದೀರಿ’ ಎಂದು ಹೇಳಿದನು.”—ಮತ್ತಾ. 21:12, 13.

ಇತಿಹಾಸ ಹೇಳುವ ಪ್ರಕಾರ ದೇವಾಲಯದಲ್ಲಿದ್ದ ವ್ಯಾಪಾರಿಗಳು ವಿಪರೀತ ಹಣ ತೆಗೆದುಕೊಂಡು ಗಿರಾಕಿಗಳಿಗೆ ಅನ್ಯಾಯಮಾಡುತ್ತಿದ್ದರು. ಉದಾಹರಣೆಗೆ, ಸಾಮಾನ್ಯವಾಗಿ ಬೆಳವಕ್ಕಿಗಳ ಬೆಲೆ ಎಷ್ಟು ಕಡಿಮೆ ಇತ್ತೆಂದರೆ ಬಡವರು ಅವುಗಳನ್ನು ಯಜ್ಞಕ್ಕಾಗಿ ಖರೀದಿಸಲಿಕ್ಕೆ ಆಗುತ್ತಿತ್ತು. ಆದರೆ ಮಿಷ್ನಾ (ಕೆರಿಟೊಟ್‌ 1:7) ಎಂಬ ಪುರಾತನ ಯೆಹೂದಿ ಬರಹ ಹೇಳುವಂತೆ, ಒಂದನೇ ಶತಮಾನದಲ್ಲಿ ಎರಡು ಬೆಳವಕ್ಕಿಗಳನ್ನು ಖರೀದಿಸಲು ಒಂದು ಚಿನ್ನದ ದಿನಾರ್‌ ಕೊಡಬೇಕಾಗಿತ್ತು. ಅಷ್ಟು ಹಣ ಸಂಪಾದಿಸಲು ಒಬ್ಬ ಕೂಲಿಯಾಳು 25 ದಿನ ದುಡಿಯಬೇಕಾಗಿತ್ತು. ಹೀಗಾಗಿ ಬೆಳವಕ್ಕಿಗಳು ಬಡವರು ಖರೀದಿಸಲು ಆಗದಷ್ಟು ದುಬಾರಿಯಾಗಿದ್ದವು. (ಯಾಜ. 1:14; 5:7; 12:6-8) ಈ ಪರಿಸ್ಥಿತಿ ನೋಡಿ ರಬ್ಬಿಯಾದ ಸಿಮ್ಯನ್‌ ಬೆನ್‌ ಗಮೇಲಿಯಲ್‌ ಸಿಟ್ಟಿಗೆದ್ದು ಯೆಹೂದ್ಯರು ಅರ್ಪಿಸಬೇಕಾಗಿದ್ದ ಯಜ್ಞಗಳನ್ನು ಕಡಿಮೆ ಮಾಡಿದನು. ಆಗ ತಕ್ಷಣ ಎರಡು ಬೆಳವಕ್ಕಿಗಳ ಬೆಲೆ ಒಂದು ದಿನಾರಿನ ನೂರನೇ ಒಂದು ಭಾಗದಷ್ಟು ಕಡಿಮೆಯಾಯಿತು.

ದೇವಾಲಯದ ವ್ಯಾಪಾರಿಗಳು ದುರಾಸೆಯಿಂದಾಗಿ ತಮ್ಮ ಗಿರಾಕಿಗಳಿಂದ ತುಂಬ ಹಣ ಕೀಳುತ್ತಿದ್ದರು ಎನ್ನುವುದು ಇದರಿಂದ ಸ್ಪಷ್ಟ. ಆದ್ದರಿಂದ ಯೇಸು ಅವರನ್ನು ‘ಕಳ್ಳರು’ ಎಂದು ಕರೆದದ್ದು ಸರಿಯಾಗಿಯೇ ಇತ್ತು.