ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಿಮಗೆ ಗೊತ್ತಿತ್ತಾ?

ನಿಮಗೆ ಗೊತ್ತಿತ್ತಾ?

ಇಸ್ರಾಯೇಲ್ಯರು ಈಜಿಪ್ಟ್‌ನಲ್ಲಿ ಗುಲಾಮರಾಗಿದ್ದರು ಅನ್ನೋದಕ್ಕೆ ಬೈಬಲ್‌ ಅಲ್ಲದೆ ಬೇರೆ ಯಾವ ಆಧಾರ ಇದೆ?

ಬೈಬಲ್‌ ಹೇಳೋ ಪ್ರಕಾರ ಮಿದ್ಯಾನ್ಯರು ಯೋಸೇಫನನ್ನು ಈಜಿಪ್ಟಿಗೆ (ಐಗುಪ್ತ) ಕರಕೊಂಡು ಹೋಗಿ ಕೆಲವು ವರ್ಷಗಳಾದ ನಂತ್ರ ಯಾಕೋಬ ಮತ್ತು ಅವ್ನ ಇಡೀ ಕುಟುಂಬ ಕಾನಾನ್‌ನಿಂದ ಈಜಿಪ್ಟಿಗೆ ಹೋಯಿತು. ಅವ್ರು ಅಲ್ಲಿ ನೈಲ್‌ ನದಿಯ ಮುಖಜ ಭೂಮಿಯಾಗಿದ್ದ ಗೋಷೆನ್‌ ಪ್ರದೇಶದಲ್ಲಿ ವಾಸಿಸಿದ್ರು. * (ಆದಿ. 47:1, 6) ಅಲ್ಲಿ “ಇಸ್ರಾಯೇಲ್ಯರು ಅಭಿವೃದ್ಧಿಯಾಗಿ ಅತ್ಯಧಿಕವಾಗಿ ಹೆಚ್ಚಿ ಬಹಳ ಬಲಗೊಂಡರು.” ಆದ್ರಿಂದ ಈಜಿಪ್ಟಿನವರಿಗೆ ಇಸ್ರಾಯೇಲ್ಯರ ಬಗ್ಗೆ ಭಯ ಶುರುವಾಯ್ತು. ಹಾಗಾಗಿ ಅವ್ರು ಇಸ್ರಾಯೇಲ್ಯರನ್ನ ಗುಲಾಮರನ್ನಾಗಿ ಮಾಡ್ಕೊಂಡ್ರು.—ವಿಮೋ. 1:7-14.

ಈ ಬೈಬಲ್‌ ವೃತ್ತಾಂತ ಸುಳ್ಳು ಅಂತ ಈಗಿನ ಕಾಲದ ಕೆಲ್ವು ವಿಮರ್ಶಕರು ಹೇಳಿದ್ದಾರೆ. ಆದ್ರೆ ಪುರಾತನ ಈಜಿಪ್ಟ್‌ನಲ್ಲಿ ಸೆಮೈಟ್‌ ಜನ್ರು ಅಂದ್ರೆ ಶೇಮನ ವಂಶದವ್ರು ಗುಲಾಮರಾಗಿದ್ರು ಅನ್ನೋದಕ್ಕೆ ಆಧಾರಗಳಿವೆ. *

ಉದಾಹರಣೆಗೆ ಉತ್ತರ ಈಜಿಪ್ಟ್‌ನಲ್ಲಿ ವಲಸಿಗರು ಬಂದು ನೆಲೆಸಿರುವ ಪ್ರದೇಶಗಳ ಅವಶೇಷಗಳು ಪ್ರಾಕ್ತನಶಾಸ್ತ್ರಜ್ಞರಿಗೆ ಸಿಕ್ಕಿದೆ. ಉತ್ತರ ಈಜಿಪ್ಟ್‌ನಲ್ಲಿನ 20 ಅಥವಾ ಅದಕ್ಕೂ ಹೆಚ್ಚಿನ ಪ್ರದೇಶಗಳಲ್ಲಿ ಶೇಮನ ವಂಶದವ್ರು ನೆಲೆಸಿದ್ರು ಅನ್ನೋದಕ್ಕೆ ಆಧಾರಗಳಿವೆ ಎಂದು ಡಾ.  ಜಾನ್‌ ಬಿಮ್‌ಸನ್‌ ಹೇಳ್ತಾರೆ. ಅಷ್ಟೇ ಅಲ್ಲದೆ ಈಜಿಪ್ಟ್‌ನ ಇತಿಹಾಸವನ್ನ ಅಧ್ಯಯನ ಮಾಡಿದ ಜೇಮ್ಸ್‌ ಕೆ. ಹಾಫ್‌ಮಿಯರ್‌ ಹೀಗೆ ಹೇಳ್ತಾರೆ: “ಸುಮಾರು ಕ್ರಿ. ಪೂ. 1800 ರಿಂದ 1540 ರ ಅವಧಿಯಲ್ಲಿ ಪಶ್ಚಿಮ ಏಷ್ಯಾದಿಂದ ಸೆಮೈಟ್‌ ಭಾಷೆಯ ಜನ್ರು ಈಜಿಪ್ಟಿಗೆ ವಲಸೆ ಹೋಗಿ ಅಲ್ಲೇ ವಾಸ ಮಾಡಿದ್ರು.” ಅಷ್ಟೇ ಅಲ್ಲ, “ಈ ಅವಧಿಯು ಅಬ್ರಹಾಮ, ಇಸಾಕ ಮತ್ತು ಯಾಕೋಬರು ಬದುಕಿದ್ದ ಸಮಯವಾಗಿದೆ. ಹಾಗಾಗಿ ಆದಿಕಾಂಡ ಪುಸ್ತಕದಲ್ಲಿ ವಿವರಿಸಲಾದ ಸನ್ನಿವೇಶ ಮತ್ತು ಸಮಯಕ್ಕೆ ಇದು ಸರಿಹೊಂದುತ್ತೆ” ಎಂದು ಸಹ ಅವರು ಹೇಳಿದ್ದಾರೆ.

ದಕ್ಷಿಣ ಈಜಿಪ್ಟಿನಲ್ಲೂ ಕೆಲ್ವು ಆಧಾರಗಳು ಸಿಕ್ಕಿವೆ. ಸುಮಾರು ಕ್ರಿ. ಪೂ. 2000ದಿಂದ 1600 ರ ಸಮ್ಯದ ಪ್ಯಾಪಿರಸ್‌ ಹಾಳೆಯ ಒಂದು ಚೂರು ಸಿಕ್ಕಿದೆ. ಅದ್ರಲ್ಲಿ ದಕ್ಷಿಣ ಈಜಿಪ್ಟಿನ ಒಂದು ಮನೇಲಿ ಕೆಲ್ಸ ಮಾಡಿದ ಗುಲಾಮರ ಹೆಸರುಗಳಿವೆ. ಆ ಗುಲಾಮರಲ್ಲಿ 40 ಜನ್ರು ಶೇಮನ ವಂಶದವ್ರು ಆಗಿದ್ರು. ಈ ಗುಲಾಮರು ಅಥವಾ ಸೇವಕರು ಅಡಿಗೆ ಕೆಲ್ಸ, ಬಟ್ಟೆ ನೇಯುವ ಕೆಲ್ಸ ಮತ್ತು ಇತರ ಕೆಲ್ಸ ಮಾಡ್ತಿದ್ರು. ಹಾಫ್‌ಮೇಯರ್‌ರವರು ಇದ್ರ ಬಗ್ಗೆ ಹೀಗೆ ಹೇಳ್ತಾರೆ: “ದಕ್ಷಿಣ ಈಜಿಪ್ಟಿನ ಒಂದು ಮನೆಯಲ್ಲೇ ಸುಮಾರು 40 ಜನ ಶೇಮನ ವಂಶದವ್ರು ಕೆಲ್ಸ ಮಾಡ್ತಿದ್ರು ಅಂದ್ರೆ ಇಡೀ ಈಜಿಪ್ಟಿನಲ್ಲಿ ಅದ್ರಲ್ಲೂ ಆ ಮುಖಜ ಭೂಮಿಯಲ್ಲಿ ಶೇಮನ ವಂಶದ ಎಷ್ಟೋ ಮಂದಿ ಇದ್ದಿರ್ತಾರೆ.”

ಆ ಗುಲಾಮರ ಪಟ್ಟಿಯಲ್ಲಿ ಕೊಡಲಾದ ಕೆಲ್ವು ಹೆಸ್ರುಗಳೂ “ಬೈಬಲಿನಲ್ಲಿರೋ ಜನ್ರ ಹೆಸ್ರುಗಳೂ ಒಂದೇ ಆಗಿವೆ” ಅಂತ ಪ್ರಾಕ್ತನಶಾಸ್ತ್ರಜ್ಞ ಡೇವಿಡ್‌ ರೌಲ್‌ ಬರೆದಿದ್ದಾರೆ. ಉದಾಹರಣೆಗೆ ಆ ಪ್ಯಾಪಿರಸ್‌ನ ಚೂರಿನಲ್ಲಿ ಇಸ್ಸಾಕಾರ್‌, ಆಶೇರ್‌, ಮತ್ತು ಶಿಫ್ರಾ ಎಂಬ ಹೆಸರುಗಳಿದ್ವು. (ವಿಮೋ. 1:3, 4, 15) “ಇಸ್ರಾಯೇಲ್ಯರು ಈಜಿಪ್ಟ್‌ನಲ್ಲಿ ಗುಲಾಮರಾಗಿದ್ರು ಅನ್ನೋದಕ್ಕೆ ಇದೊಂದು ನೈಜ ಪುರಾವೆಯಾಗಿದೆ” ಎಂದು ರೌಲ್‌ ಹೇಳ್ತಾರೆ.

“ಈಜಿಪ್ಟ್‌ನಲ್ಲಿ ಗುಲಾಮಗಿರಿ ಮತ್ತು ಅದ್ರಿಂದ ಆದ ಬಿಡುಗಡೆ ಬಗ್ಗೆ ಬೈಬಲ್‌ನಲ್ಲಿ ಹೇಳೋ ವಿಷ್ಯಗಳಿಗೆ ಐತಿಹಾಸಿಕವಾಗಿ ಬಲವಾದ ಆಧಾರಗಳಿದೆ” ಎಂದು ಡಾ.  ಬಿಮ್‌ಸನ್‌ ಹೇಳ್ತಾರೆ.

^ ಪ್ಯಾರ. 3 ನೈಲ್‌ ನದಿ ಸಮುದ್ರವನ್ನು ಸೇರುವುದಕ್ಕೂ ಸ್ವಲ್ಪ ಮುಂಚೆ ಅನೇಕ ಕವಲುಗಳಾಗಿ ಒಡೆಯುತ್ತದೆ. ಅಲ್ಲಿಂದ ಆ ಕವಲುಗಳು ಮೆಡಿಟರೇನಿಯನ್‌ ಸಮುದ್ರವನ್ನು ಸೇರುವವರೆಗಿನ ಭೂಪ್ರದೇಶವನ್ನು ನೈಲ್‌ ಮುಖಜ ಭೂಮಿ ಅಂತ ಕರೆಯುತ್ತಾರೆ.

^ ಪ್ಯಾರ. 4 ಶೇಮನು ನೋಹನ ಮೂವರು ಮಕ್ಕಳಲ್ಲಿ ಒಬ್ಬನಾಗಿದ್ದನು. ಅವನ ವಂಶದವರಲ್ಲಿ ಏಲಾಮ್ಯರು, ಅಶ್ಶೂರ್ಯರು, ಕಸ್ದೀಯರು, ಇಸ್ರಾಯೇಲ್ಯರು, ಅರಾಮ್ಯರು, ಅರೇಬಿಯದ ಅನೇಕ ಕುಲದವ್ರು ಸೇರಿದ್ದಾರೆ.