ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಿಮ್ಮ ಸಂಗಾತಿ ಅಶ್ಲೀಲ ಚಿತ್ರ ನೋಡಿದ್ರೆ ಏನು ಮಾಡಬೇಕು?

ನಿಮ್ಮ ಸಂಗಾತಿ ಅಶ್ಲೀಲ ಚಿತ್ರ ನೋಡಿದ್ರೆ ಏನು ಮಾಡಬೇಕು?
  • “ನನ್ನ ಗಂಡ ಪದೇ ಪದೇ ವ್ಯಭಿಚಾರ ಮಾಡಿದ ಹಾಗನಿಸ್ತು.”

  • “ನನಗೆ ತುಂಬಾ ಅವಮಾನ ಆಯ್ತು, ನಾನ್‌ ಲಾಯಕ್ಕಿಲ್ಲ, ನಾನ್‌ ಸುಂದರವಾಗಿ ಇಲ್ವೆನೋ ಅನಿಸ್ತು.”

  • “ಇದ್ರ ಬಗ್ಗೆ ಯಾರ ಹತ್ರನೂ ಹೇಳ್ಕೊಳ್ಳೋಕೆ ಆಗದೆ ಒಬ್ಬಳೇ ಸಂಕಟ ಅನುಭವಿಸ್ತಿದ್ದೆ.”

  • “ಯೆಹೋವ ದೇವರೂ ನನ್ನ ಬಗ್ಗೆ ಯೋಚ್ನೆ ಮಾಡಲ್ವೆನೋ ಅಂತ ಅನಿಸಿಬಿಡ್ತು.”

ಇದನ್ನೆಲ್ಲ ಓದಿದಾಗ ಒಂದುವೇಳೆ ಗಂಡ ಅಶ್ಲೀಲ ಚಿತ್ರಗಳನ್ನ ನೋಡಿದ್ರೆ ಹೆಂಡತಿಗೆ ಎಷ್ಟು ಕಷ್ಟ ಆಗುತ್ತೆ ಅಂತ ಇದ್ರಿಂದ ಗೊತ್ತಾಗುತ್ತೆ. ಅದ್ರಲ್ಲೂ ಒಬ್ಬ ಗಂಡ ತಿಂಗಳಾನುಗಟ್ಟಲೆ, ವರ್ಷಾನುಗಟ್ಟಲೆ ಕದ್ದುಮುಚ್ಚಿ ನೋಡ್ತಾ ಇದ್ರೆ ಅವಳು ಅವನ ಮೇಲೆ ನಂಬಿಕೆನೇ ಕಳ್ಕೊಳ್ತಾಳೆ. ಇದ್ರ ಬಗ್ಗೆ ಒಬ್ಬ ಹೆಂಡತಿ “ಇವ್ರ ಜೊತೆನಾ ನಾನಿಷ್ಟು ವರ್ಷ ಸಂಸಾರ ಮಾಡ್ತಾ ಇದ್ದಿದ್ದು? ಇವರು ಇನ್ನೂ ಏನೆಲ್ಲಾ ನನ್ನ ಹತ್ರ ಮುಚ್ಚಿಟ್ಟಿದ್ದಾರೋ ಏನೋ” ಅಂತ ಹೇಳಿದಳು.

ಗಂಡ ಅಶ್ಲೀಲ ಚಿತ್ರ ನೋಡಿದ್ರೆ ಹೆಂಡತಿ ಏನು ಮಾಡಬೇಕು ಅಂತ ಈ ಲೇಖನ ಹೇಳುತ್ತೆ. a ಅಷ್ಟೇ ಅಲ್ಲ ಅವಳಿಗೆ ಸಹಾಯ ಆಗೋ ಬೈಬಲ್‌ ಸಲಹೆಗಳು ಇದ್ರಲ್ಲಿ ಇದೆ. ಅದನ್ನ ಪಾಲಿಸಿದಾಗ ಅವಳಿಗೆ ಸಾಂತ್ವನ ಸಿಗುತ್ತೆ. ಯೆಹೋವ ದೇವರು ಅವಳನ್ನ ಪ್ರೀತಿಸ್ತಾನೆ, ಸಹಾಯ ಮಾಡೋಕೆ ರೆಡಿ ಇದ್ದಾನೆ ಅಂತ ಅವಳಿಗೆ ಗೊತ್ತಾಗುತ್ತೆ. ಅಷ್ಟೇ ಅಲ್ಲ ಸಮಾಧಾನದಿಂದ ಯೋಚ್ನೆ ಮಾಡೋಕೆ, ಯೆಹೋವನಿಗೆ ಇನ್ನೂ ಹತ್ರ ಆಗೋಕೆ ಸಹಾಯ ಮಾಡುತ್ತೆ. b

ತಪ್ಪು ಮಾಡದಿರೋ ಸಂಗಾತಿ ಏನು ಮಾಡಬಹುದು?

ಗಂಡ ಏನು ಮಾಡ್ತಿದ್ದಾನೆ ಅಂತ ನಿಮಗೆ ಯಾವಾಗ್ಲೂ ನೋಡ್ತಾ ಇರಕ್ಕಾಗಲ್ಲ. ಅವನು ತಪ್ಪು ಮಾಡಿದಾಗ ಹೋಗಿ ತಡೆಯೋಕೂ ಯಾವಾಗ್ಲೂ ಆಗಲ್ಲ. ಆದ್ರೆ ನಿಮ್ಮ ಚಿಂತೆಯನ್ನ ಕಮ್ಮಿ ಮಾಡ್ಕೊಳ್ಳೋಕೆ ಮತ್ತು ಸಮಾಧಾನದಿಂದ ಯೋಚ್ನೆ ಮಾಡೋಕೆ ನೀವು ಕೆಲವು ಹೆಜ್ಜೆಗಳನ್ನ ತಗೊಬಹುದು. ಅದೇನಂತ ಈಗ ನೋಡೋಣ.

ಇದಕ್ಕೆ ನೀವೇ ಕಾರಣ ಅಂತ ಅಂದ್ಕೊಬೇಡಿ. ‘ನನ್ನಿಂದ ಏನೋ ತಪ್ಪಾಗಿರಬೇಕು. ಅದಕ್ಕೆ ಗಂಡ ಅಶ್ಲೀಲ ಚಿತ್ರ ನೋಡ್ತಿದ್ದಾನೆ’ ಅಂತ ಒಬ್ಬ ಹೆಂಡತಿ ಅಂದ್ಕೊಬಹುದು. ಉದಾಹರಣೆಗೆ ದೆಬೋರಾ c ಅನ್ನುವವರು “ನನ್ನ ಗಂಡ ಈ ರೀತಿ ಮಾಡೋದನ್ನ ನೋಡಿದಾಗ ನನಗೆ ತುಂಬ ಕೋಪ ಬರುತ್ತೆ. ಆಗ ನಾನು ಏನೇನೋ ಮಾತಾಡಿಬಿಡ್ತೀನಿ. ನನ್ನ ಕುಟುಂಬ ಇಷ್ಟು ಒಡೆದುಹೋಗೋಕೆ ನಾನೇ ಕಾರಣ ಅಂತ ಅನ್ಸುತ್ತೆ” ಅಂತಾರೆ. ಆ್ಯಲಿಸ್‌ ಅವ್ರಿಗೆ ತಾನಷ್ಟು ಸುಂದರವಾಗಿಲ್ಲ ಅಂತನಿಸುತ್ತೆ. “ಅದಕ್ಕೆ ನನ್ನ ಗಂಡ ನನ್ನನ್ನ ಬಿಟ್ಟು ಬೇರೆಯವ್ರನ್ನ ನೋಡ್ತಾರೇನೋ” ಅಂತ ಅವರು ಹೇಳ್ತಾರೆ.

ನಿಮಗೂ ಹಾಗೆ ಅನಿಸ್ತಾ ಇರೋದಾದ್ರೆ ನಿಮ್ಮ ಗಂಡ ಮಾಡೋ ತಪ್ಪಿಗೆ ಯೆಹೋವ ದೇವರು ನಿಮ್ಮಿಂದ ಲೆಕ್ಕ ಕೇಳಲ್ಲ ಅನ್ನೋದನ್ನ ನೆನಪಿಡಿ. ಯಾಕೋಬ 1:14ರಲ್ಲಿ “ಒಬ್ಬ ವ್ಯಕ್ತಿಯ ಆಸೆನೇ ಅವನನ್ನ ಎಳ್ಕೊಂಡು ಹೋಗಿ ಪುಸಲಾಯಿಸಿ ಪರೀಕ್ಷೆ ಮಾಡುತ್ತೆ” ಅಂತ ಇದೆ. (ರೋಮ. 14:12; ಫಿಲಿ. 2:12) ಹಾಗಾಗಿ ಗಂಡನ ತಪ್ಪಿಗೆ ನೀವು ಕಾರಣ ಅಂತ ಯೆಹೋವ ದೇವರು ಯಾವತ್ತೂ ಹೇಳಲ್ಲ. ನೀವು ತೋರಿಸೋ ನಿಷ್ಠೆನೇ ಆತನಿಗೆ ತುಂಬ ಅಮೂಲ್ಯ.—2 ಪೂರ್ವ. 16:9.

ನಾವು ಮನಸ್ಸಲ್ಲಿ ಇಡಬೇಕಾದ ಇನ್ನೊಂದು ವಿಷ್ಯ ಏನಂದ್ರೆ ಒಬ್ಬ ಗಂಡ ಅಶ್ಲೀಲ ಚಿತ್ರ ನೋಡ್ತಿದ್ದಾನೆ ಅಂದ್ರೆ ಹೆಂಡತಿಯಲ್ಲಿ ಏನೋ ಕೊರತೆ ಇದೆ ಅಂತ ಅರ್ಥ ಅಲ್ಲ. ಎಷ್ಟೋ ಸಂಶೋಧನೆಗಳಿಂದ ಏನು ಗೊತ್ತಾಗುತ್ತೆ ಅಂದ್ರೆ “ಅಶ್ಲೀಲ ಚಿತ್ರಗಳನ್ನ ನೋಡೋ ವ್ಯಕ್ತಿಗೆ ಆಗೋ ಕಾಮದಾಸೆಯನ್ನ ಯಾವ ಹೆಣ್ಣು ಕೂಡ ತಣಿಸೋಕೆ ಸಾಧ್ಯ ಇಲ್ಲ.”

ಮಿತಿಮೀರಿ ಚಿಂತೆ ಮಾಡಬೇಡಿ. “ನನ್ನ ಗಂಡ ಅಶ್ಲೀಲ ಚಿತ್ರ ನೋಡ್ತಾರೆ ಅನ್ನೋದೇ ನನ್ನ ತಲೇಲಿ ಯಾವಾಗ್ಲೂ ಓಡ್ತಾ ಇರುತ್ತೆ” ಅಂತ ಕ್ಯಾಥರಿನ್‌ ಹೇಳ್ತಾರೆ. “ನನ್ನ ಗಂಡ ಒಂದು ಕ್ಷಣ ಕಣ್ಮುಂದೆ ಇಲ್ಲಾಂದ್ರೂ ತುಂಬ ಚಿಂತೆ ಆಗ್ತಿತ್ತು. ನನ್ನ ತಲೆನೇ ಕೆಟ್ಟುಹೋಗ್ತಿತ್ತು” ಅಂತ ನ್ಯಾನ್ಸಿ ಹೇಳ್ತಾರೆ. ‘ನನ್ನ ಗಂಡನಿಗೆ ಈ ತರ ಸಮಸ್ಯೆ ಇದೆ ಅಂತ ಗೊತ್ತಿರೋ ಸಹೋದರ ಸಹೋದರಿಯರ ಜೊತೆ ಇರೋಕೂ ಮುಜುಗರ ಆಗುತ್ತೆ’ ಅಂತ ಕೆಲವು ಹೆಂಡತಿಯರು ಹೇಳಿದ್ದಾರೆ. ಈ ಸಮಸ್ಯೆ ಬಗ್ಗೆ ಯಾರಿಗೂ ಗೊತ್ತಿಲ್ಲಾಂದ್ರೂ ‘ನನ್ನನ್ನ ಯಾರೂ ಅರ್ಥ ಮಾಡ್ಕೊಳ್ಳಲ್ಲ, ನಂಗ್ಯಾರೂ ಇಲ್ಲ’ ಅಂತ ಇನ್ನು ಕೆಲವು ಹೆಂಡತಿಯರಿಗೆ ಅನಿಸಿದೆ.

ಈ ರೀತಿ ಅನಿಸೋದು ಸರ್ವೇಸಾಮಾನ್ಯ. ಆದ್ರೆ ಇದ್ರ ಬಗ್ಗೆನೇ ಚಿಂತೆ ಮಾಡ್ತಾ ಇದ್ರೆ ನಿಮ್ಮ ಚಿಂತೆ ಜಾಸ್ತಿ ಆಗ್ತಾ ಹೋಗುತ್ತೆ ಹೊರತು ಕಮ್ಮಿ ಆಗಲ್ಲ. ಅದಕ್ಕೆ ಯೆಹೋವ ದೇವರ ಜೊತೆ ನಿಮಗಿರೋ ಆಪ್ತ ಸ್ನೇಹದ ಬಗ್ಗೆ ಯೋಚ್ನೆ ಮಾಡಿ. ಈ ರೀತಿ ಮಾಡೋದ್ರಿಂದ ನಿಮಗೆ ತಾಳ್ಕೊಳ್ಳೋಕೆ ಶಕ್ತಿ ಸಿಗುತ್ತೆ.—ಕೀರ್ತ. 62:2; ಎಫೆ. 6:10.

ತುಂಬ ದುಃಖದಲ್ಲಿದ್ದ ಸ್ತ್ರೀಯರ ಬಗ್ಗೆ ಬೈಬಲಲ್ಲಿ ಓದಿ ಅದ್ರ ಬಗ್ಗೆ ಯೋಚ್ನೆ ಮಾಡೋದು ನಿಮಗೆ ಸಹಾಯ ಮಾಡುತ್ತೆ. ಅವರು ಯೆಹೋವ ದೇವರಿಗೆ ಪ್ರಾರ್ಥನೆ ಮಾಡಿದಾಗ ಸಾಂತ್ವನ ಸಿಕ್ತು. ಅವ್ರ ಸಮಸ್ಯೆನ ದೇವರು ತೆಗೆದುಹಾಕಲಿಲ್ಲ. ಆದ್ರೆ ಅವ್ರಿಗೆ ನೆಮ್ಮದಿ ಸಿಗೋ ಹಾಗೆ ಮಾಡಿದನು. ಹನ್ನಳ ಉದಾಹರಣೆ ನೋಡಿ. ಅವಳಿಗೆ ಇದ್ದ ಸಮಸ್ಯೆಯಿಂದ ಅವಳು ‘ತುಂಬ ದುಃಖದಲ್ಲಿ ಇದ್ದಳು.’ ಅವಳು ‘ತುಂಬ ಹೊತ್ತಿನ ತನಕ ಯೆಹೋವನಿಗೆ ಪ್ರಾರ್ಥನೆ ಮಾಡಿದಳು.’ ಮುಂದೆ ಏನಾಗುತ್ತೆ ಅಂತ ಗೊತ್ತಿಲ್ಲದೆ ಇದ್ರೂ ಪ್ರಾರ್ಥನೆ ಮಾಡಿದಾಗ ಅವಳಿಗೆ ಸಮಾಧಾನ ಆಯ್ತು.—1 ಸಮು. 1:10, 12, 18; 2 ಕೊರಿಂ. 1:3, 4.

ಗಂಡ-ಹೆಂಡ್ತಿ ಇಬ್ರೂ ಹಿರಿಯರ ಸಹಾಯ ಪಡ್ಕೊಬೇಕು

ಹಿರಿಯರ ಸಹಾಯ ತಗೊಳ್ಳಿ. ಯಾಕಂದ್ರೆ ಅವರು “ಬಿರುಗಾಳಿಯಿಂದ ಮರೆಮಾಡೋ ಆಸರೆ ತರ ಇರ್ತಾರೆ, ಭಾರಿ ಮಳೆಯಾಗುವಾಗ ಸಿಗೋ ಆಶ್ರಯದ ತರ ಇರ್ತಾರೆ.” (ಯೆಶಾ. 32:2) ಅಷ್ಟೇ ಅಲ್ಲ ಒಬ್ಬ ಸಹೋದರಿ ಹತ್ರ ಮಾತಾಡೋಕೆ ನಿಮಗೆ ಹೇಳಬಹುದು. ಅವ್ರ ಹತ್ರ ನೀವು ನಿಮ್ಮ ನೋವನ್ನ ಹೇಳ್ಕೊಬಹುದು. ಆಗ ನಿಮಗೆ ಖಂಡಿತ ಸಾಂತ್ವನ ಸಿಗುತ್ತೆ.​—ಜ್ಞಾನೋ. 17:17.

ನೀವೂ ಅವ್ರಿಗೆ ಸಹಾಯ ಮಾಡಬಹುದು!

ಅಶ್ಲೀಲ ಚಿತ್ರಗಳನ್ನ ನೋಡೋ ಚಟವನ್ನ ಬಿಡೋಕೆ ನಿಮ್ಮ ಗಂಡನಿಗೆ ಕೆಲವೊಮ್ಮೆ ನೀವೂ ಸಹಾಯ ಮಾಡಬಹುದು. ಒಬ್ಬ ಶತ್ರುನ ಮಟ್ಟ ಹಾಕೋಕೆ ಅಥವಾ ಒಂದು ಸಮಸ್ಯೆನ ಜಯಿಸೋಕೆ ಅಂತ “ಒಬ್ಬನಿಗಿಂತ ಇಬ್ರು ಉತ್ತಮ” ಅಂತ ಬೈಬಲ್‌ ಹೇಳುತ್ತೆ. (ಪ್ರಸಂ. 4:9-12) ‘ಗಂಡ ಹೆಂಡತಿ ಇಬ್ರೂ ಸೇರಿ ಪ್ರಯತ್ನ ಮಾಡಿದ್ರೆ ಗಂಡನಿಗೆ ಈ ಚಟದಿಂದ ಹೊರಗೆ ಬರೋಕೂ ಆಗುತ್ತೆ. ಜೊತೆಗೆ ಹೆಂಡತಿಗೆ ಗಂಡನ ಮೇಲೆ ಮತ್ತೆ ನಂಬಿಕೆ ಇಡೋಕೂ ಆಗುತ್ತೆ’ ಅಂತ ತಜ್ಞರು ಹೇಳ್ತಾರೆ.

ಹೆಚ್ಚಿನ ಪಕ್ಷ ಅಶ್ಲೀಲ ಚಿತ್ರಗಳನ್ನ ನೋಡೋ ಚಟದಿಂದ ಹೊರಗೆ ಬರೋದು ನಿಮ್ಮ ಗಂಡನ ಕೈಯಲ್ಲಿದೆ. ಅದನ್ನ ಬಿಟ್ಟುಬಿಡಬೇಕು ಅನ್ನೋ ಛಲ ಅವ್ರಲ್ಲಿ ಇರಬೇಕು ಮತ್ತು ಪ್ರಯತ್ನನೂ ಹಾಕಬೇಕು. ಬಲಕ್ಕಾಗಿ ಅವರು ಯೆಹೋವನ ಹತ್ರ ಪ್ರಾರ್ಥಿಸ್ತಾ ಇದ್ದಾರಾ? ಹಿರಿಯರ ಸಹಾಯ ಪಡ್ಕೊಂಡಿದ್ದಾರಾ? (2 ಕೊರಿಂ. 4:7; ಯಾಕೋ. 5:14, 15) ಆ ತಪ್ಪಾದ ಆಸೆಗಳಿಗೆ ಬಲಿ ಬೀಳದೆ ಇರೋಕೆ ಏನು ಮಾಡಬೇಕು ಅಂತ ಯೋಚ್ನೆ ಮಾಡಿದ್ದಾರಾ? ಉದಾಹರಣೆಗೆ, ಅವರು ತಮ್ಮ ಎಲೆಕ್ಟ್ರಾನಿಕ್‌ ಸಾಧನಗಳನ್ನ ಉಪಯೋಗಿಸೋ ವಿಷ್ಯದಲ್ಲಿ ಒಂದು ಮಿತಿ ಇಟ್ಕೊಂಡಿದ್ದಾರಾ? ಅಶ್ಲೀಲ ಚಿತ್ರಗಳನ್ನ ನೋಡಬೇಕು ಅನ್ನೋ ಆಸೆ ಹುಟ್ಟಿಸೋ ಸನ್ನಿವೇಶಗಳಿಂದ ದೂರ ಇದ್ದಾರಾ? (ಜ್ಞಾನೋ. 27:12) ಅವ್ರಿಗೆ ನಿಮ್ಮ ಸಹಾಯ ಪಡ್ಕೊಳ್ಳೋಕೆ ಇಷ್ಟ ಇದ್ಯಾ? ನಿಮ್ಮ ಜೊತೆ ಅವರು ಯಾವಾಗ್ಲೂ ಪ್ರಾಮಾಣಿಕವಾಗಿ ಇರ್ತಾರಾ? ಈ ಎಲ್ಲಾ ಪ್ರಯತ್ನನ ಅವರು ಮಾಡ್ತಿರೋದಾದ್ರೆ ನೀವು ಅವ್ರಿಗೆ ಸಹಾಯ ಮಾಡೋಕೆ ಆಗುತ್ತೆ.

ಹೇಗೆ ಸಹಾಯ ಮಾಡಬಹುದು ಅನ್ನೋದಕ್ಕೆ ಫೆಲ್ಸಿಯಾ ಅನ್ನುವವ್ರ ಉದಾಹರಣೆ ನೋಡಿ. ಅವ್ರ ಗಂಡ ಈತನ್‌ಗೆ ಚಿಕ್ಕವನಿದ್ದಾಗ್ಲೆ ಅಶ್ಲೀಲ ಚಿತ್ರಗಳನ್ನ ನೋಡೋ ಚಟ ಇತ್ತು. ಅಂಥ ಚಿತ್ರಗಳನ್ನ ಮತ್ತೆ ನೋಡಬೇಕು ಅನ್ನೋ ಆಸೆ ಬರ್ತಿತ್ತು. ಅಂಥ ತಪ್ಪಾದ ಆಸೆ ಬಂದಾಗ ಮುಚ್ಚುಮರೆ ಇಲ್ಲದೆ ತನ್ನ ಹತ್ರ ಬಂದು ಮಾತಾಡೋ ತರ ಫೆಲ್ಸಿಯಾ ನಡ್ಕೊಳ್ತಿದ್ದಳು. ಇದ್ರ ಬಗ್ಗೆ ಈತನ್‌ “ನಾನು ನನ್ನ ಹೆಂಡ್ತಿ ಹತ್ರ ಮನಸ್ಸುಬಿಚ್ಚಿ ಮಾತಾಡ್ತೀನಿ. ಯಾವುದನ್ನೂ ಮುಚ್ಚಿಡಲ್ಲ. ಆಗ ಅವಳು ಆ ತಪ್ಪಾದ ಆಸೆಯಿಂದ ಹೊರಗೆ ಬರೋಕೆ ನನಗೆ ಪ್ರೀತಿಯಿಂದ ಸಹಾಯ ಮಾಡ್ತಾಳೆ. ಆಗಾಗ ಬಂದು ನನಗೆ ಹೇಗನಿಸ್ತಿದೆ ಅಂತ ಕೇಳ್ತಾಳೆ. ಇಂಟರ್‌ನೆಟ್‌ ಬಳಸೋದ್ರಲ್ಲೂ ಮಿತಿ ಇಟ್ಕೊಳ್ಳೋಕೆ ಸಹಾಯ ಮಾಡ್ತಾಳೆ” ಅಂತ ಹೇಳ್ತಾನೆ. ಈತನ್‌ಗೆ ಅಶ್ಲೀಲ ಚಿತ್ರಗಳನ್ನ ನೋಡೋ ಆಸೆ ಇರೋದ್ರಿಂದ ಫೆಲ್ಸಿಯಾಗೆ ಬೇಜಾರಾಗೇ ಆಗುತ್ತೆ. ಅದಕ್ಕೆ ಫೆಲ್ಸಿಯಾ “ಹಾಗಂತ ನಾನು ಕೋಪ ಮಾಡ್ಕೊಂಡ್ರೆ, ಬೇಜಾರ್‌ ಮಾಡ್ಕೊಂಡ್ರೆ ಅವ್ರಿಗೆ ಚಟ ಬಿಡೋಕೆ ಏನೂ ಸಹಾಯ ಆಗಲ್ಲ. ಅದಕ್ಕೆ ಅವ್ರಿಗಿರೋ ಸಮಸ್ಯೆ ಬಗ್ಗೆ ಇಬ್ರೂ ಸೇರಿ ಮಾತಾಡ್ತೀವಿ. ಅವರು ನನ್ನ ನೋವನ್ನ ಅರ್ಥ ಮಾಡ್ಕೊಳ್ತಾರೆ. ನಾನು ಕೊಡೋ ಸಹಾಯನೂ ತಗೊಳ್ತಾರೆ” ಅಂತ ಹೇಳ್ತಾಳೆ.

ಈ ರೀತಿ ಗಂಡ-ಹೆಂಡತಿ ಮನಸ್ಸುಬಿಚ್ಚಿ ಮಾತಾಡೋದು ಗಂಡನಿಗೆ ಅಶ್ಲೀಲ ಚಿತ್ರ ನೋಡೋದನ್ನ ಬಿಡೋಕೆ ಸಹಾಯ ಆಗೋದಷ್ಟೇ ಅಲ್ಲ, ಗಂಡನನ್ನ ಮತ್ತೆ ನಂಬೋಕೂ ಹೆಂಡತಿಗೆ ಸಹಾಯ ಆಗುತ್ತೆ. ಯಾಕಂದ್ರೆ ಗಂಡ ತನಗೆ ಏನನಿಸುತ್ತೆ, ಎಲ್ಲಿ ಹೋಗ್ತಾ ಇದ್ದೀನಿ, ಏನು ಮಾಡ್ತಾ ಇದ್ದೀನಿ ಅಂತ ಎಲ್ಲಾ ಹೇಳಿದಾಗ ಅವ್ರಿಬ್ರ ಮಧ್ಯೆ ಯಾವ ಮುಚ್ಚುಮರೆನೂ ಇರಲ್ಲ.

ಈ ತರ ನೀವೂ ನಿಮ್ಮ ಗಂಡನಿಗೆ ಸಹಾಯ ಮಾಡೋಕೆ ಆಗುತ್ತೆ ಅಂತ ಅನಿಸುತ್ತಾ? ಅನಿಸೋದಾದ್ರೆ ನೀವಿಬ್ರೂ ಸೇರಿ ಈ ಲೇಖನ ಓದಿ, ಮಾತಾಡಿ. ಗಂಡನ ಗುರಿ ಏನಾಗಿರಬೇಕಂದ್ರೆ ಅಶ್ಲೀಲ ಚಿತ್ರಗಳನ್ನ ನೋಡೋದನ್ನ ಬಿಟ್ಟುಬಿಡೋದು ಮತ್ತು ನಿಮ್ಮ ನಂಬಿಕೆಯನ್ನ ಮತ್ತೆ ಗಳಿಸೋದು. ಈ ಸಮಸ್ಯೆ ಬಗ್ಗೆ ನೀವು ನಿಮ್ಮ ಗಂಡನ ಹತ್ರ ಮಾತಾಡೋಕೆ ಹೋದಾಗ ಅವರು ನಿಮ್ಮ ಮೇಲೆ ಕೋಪ ಮಾಡ್ಕೊಳ್ಳೋ ಬದ್ಲು ನಿಮ್ಮನ್ನ ಅರ್ಥ ಮಾಡ್ಕೊಬೇಕು. ಹೆಂಡತಿಯಾಗಿ ನಿಮ್ಮ ಗುರಿ ಏನಾಗಿರಬೇಕಂದ್ರೆ ಆ ಚಟದಿಂದ ಹೊರಗೆ ಬರೋಕೆ ಅವರು ಹಾಕೋ ಎಲ್ಲಾ ಪ್ರಯತ್ನವನ್ನ ನೀವು ಬೆಂಬಲಿಸಬೇಕು. ನಿಮ್ಮ ನಂಬಿಕೆಯನ್ನ ಗಳಿಸೋಕೆ ಅವ್ರಿಗೆ ಅವಕಾಶ ಮಾಡ್ಕೊಡಬೇಕು. ಜನ್ರು ಸಾಮಾನ್ಯವಾಗಿ ಅಶ್ಲೀಲ ಚಿತ್ರಗಳನ್ನ ನೋಡೋ ಚಟಕ್ಕೆ ಯಾಕೆ ಬೀಳ್ತಾರೆ, ಆ ಚಟದಿಂದ ಹೊರಗೆ ಬರೋದು ಹೇಗೆ ಅಂತ ನಿಮ್ಮಿಬ್ರಿಗೂ ಗೊತ್ತಿರಬೇಕು. d

ಈ ವಿಷ್ಯದ ಬಗ್ಗೆ ನೀವಿಬ್ರು ಮಾತಾಡುವಾಗ ಜಗಳ ಆಗುತ್ತೆ ಅಂತ ಅನಿಸ್ತಿದ್ಯಾ? ಹಾಗಾದ್ರೆ ನಿಮ್ಮಿಬ್ರಿಗೂ ಒಪ್ಪಿಗೆ ಇರೋ ಒಬ್ಬ ಹಿರಿಯನನ್ನ ಕರೀರಿ. ಅವರು ನಿಮಗೆ ಸಹಾಯ ಮಾಡೋಕೆ ಸ್ವಲ್ಪ ಹೊತ್ತು ನಿಮ್ಮ ಜೊತೆ ಇರ್ತಾರೆ. ನಿಮ್ಮ ಗಂಡ ಅಶ್ಲೀಲ ಚಿತ್ರ ನೋಡೋ ಚಟವನ್ನ ಬಿಟ್ಟಿದ್ರೂ ನಿಮಗೆ ಅವ್ರ ಮೇಲೆ ನಂಬಿಕೆ ಇದ್ದಕ್ಕಿದ್ದ ಹಾಗೆ ಬಂದುಬಿಡಲ್ಲ. ಸ್ವಲ್ಪ ಸಮಯ ಹಿಡಿಬಹುದು. ಆಗ ಸೋತು ಹೋಗಬೇಡಿ. ಆಗ್ತಿರೋ ಚಿಕ್ಕಪುಟ್ಟ ಸುಧಾರಣೆಯನ್ನೂ ಗಮನಿಸ್ತಾ ಇರಿ. ತಾಳ್ಮೆಯಿಂದ ಇರಿ. ಹೋಗ್ತಾ ಹೋಗ್ತಾ ನಿಮ್ಮ ಬಂಧ ಗಟ್ಟಿ ಆಗುತ್ತೆ.—ಪ್ರಸಂ. 7:8; 1 ಕೊರಿಂ. 13:4.

ಅವ್ರಿಗೆ ಚಟ ಬಿಡೋಕೆ ಆಗ್ತಿಲ್ಲಾಂದ್ರೆ ಏನು ಮಾಡೋದು?

ಸ್ವಲ್ಪ ಸಮಯದ ತನಕ ಅಶ್ಲೀಲ ಚಿತ್ರ ನೋಡೋದನ್ನ ಬಿಟ್ಟಿರೋ ನಿಮ್ಮ ಗಂಡ ಮತ್ತೆ ಅದನ್ನ ನೋಡಿದ್ರೆ ಅವ್ರಿಗೆ ಆ ಚಟವನ್ನ ಬಿಡಕ್ಕಾಗೋದೇ ಇಲ್ಲ ಅಂತ ಅರ್ಥನಾ? ಹಾಗೆ ಹೇಳಕ್ಕಾಗಲ್ಲ. ಸಾಮಾನ್ಯವಾಗಿ ಒಬ್ಬ ವ್ಯಕ್ತಿಗೆ ಈ ಚಟ ಅಂಟ್ಕೊಂಡ್ರೆ ಅದನ್ನ ಬಿಡೋಕೆ ಅವನು ಜೀವನಪೂರ್ತಿ ಹೋರಾಡಬೇಕಾಗುತ್ತೆ. ಯಾಕಂದ್ರೆ ಆ ಚಟ ಬಿಟ್ಟು ತುಂಬ ವರ್ಷ ಆದ್ಮೇಲೂ ಅದನ್ನ ಮತ್ತೆ ನೋಡೋ ಸಾಧ್ಯತೆ ಇದೆ. ಅದಕ್ಕೆ ನಿಮ್ಮ ಗಂಡ ಈ ಮುಂಚೆಗಿಂತ ಈಗ ಇನ್ನೂ ಹುಷಾರಾಗಿ ಇರಬೇಕಾಗುತ್ತೆ. ಆ ಚಟವನ್ನ ಬಿಟ್ಟುಬಿಟ್ಟಿದ್ರೂ ‘ನಾನ್‌ ಏನ್‌ ನೋಡ್ತೀನಿ, ಏನ್‌ ಮಾಡ್ತೀನಿ’ ಅನ್ನೋ ವಿಷ್ಯದಲ್ಲಿ ಅವ್ರಿಗೆ ಅವ್ರೇ ಕಟ್ಟುನಿಟ್ಟಾಗಿ ಇರಬೇಕು. (ಜ್ಞಾನೋ. 28:14; ಮತ್ತಾ. 5:29; 1 ಕೊರಿಂ. 10:12) ಅವರು ತಮ್ಮ ‘ಯೋಚ್ನೆಯನ್ನ, ನಡತೆಯನ್ನ ಬದಲಾಯಿಸ್ಕೊಳ್ತಾ’ ಇರಬೇಕು. ಅವರು ‘ಕೆಟ್ಟದನ್ನ ದ್ವೇಷಿಸ್ತಾ’ ಇರಬೇಕು. (ಎಫೆ. 4:23; ಕೀರ್ತ. 97:10; ರೋಮ. 12:9) ಅಶ್ಲೀಲ ಚಿತ್ರ ನೋಡದೆ ಇರೋದಷ್ಟೇ ಅಲ್ಲ ಹಸ್ತಮೈಥುನದಂಥ ಅಶುದ್ಧತೆಯಿಂದಾನೂ ದೂರ ಇರಬೇಕು. ಈ ಎಲ್ಲಾ ಹೆಜ್ಜೆಗಳನ್ನ ಅವರು ತಗೊಳ್ತಾ ಇರೋದಾದ್ರೆ ಈ ಚಟವನ್ನ ಬಿಡೋಕೆ ಅವ್ರಿಗೆ ಆಗುತ್ತೆ. e

ಯೆಹೋವನಿಗೆ ಇನ್ನೂ ಹತ್ರ ಆಗೋದ್ರ ಕಡೆಗೆ ಗಮನ ಕೊಡಿ

ಒಂದುವೇಳೆ ನಿಮ್ಮ ಸಂಗಾತಿ ಆ ಚಟ ಬಿಡೋಕೆ ಪ್ರಯತ್ನನೇ ಮಾಡ್ತಿಲ್ಲಾಂದ್ರೆ ಏನು ಮಾಡೋದು? ಆ ತರ ಆದಾಗ ನಿಮಗೆ ತುಂಬಾ ಬೇಜಾರ್‌ ಆಗುತ್ತೆ, ಕೋಪ ಬರುತ್ತೆ. ‘ನನ್ನ ಗಂಡ ನಂಗೆ ಮೋಸ ಮಾಡಿಬಿಟ್ರು’ ಅಂತ ಅನಿಸುತ್ತೆ. ಆಗ ನಿಮ್ಮ ಎಲ್ಲಾ ಭಾರವನ್ನ ಯೆಹೋವನ ಮೇಲೆ ಹಾಕಿ. (1 ಪೇತ್ರ 5:7) ಆತನು ನಿಮಗೆ ಸಮಾಧಾನ ಮಾಡ್ತಾನೆ. ಯೆಹೋವ ದೇವರಿಗೆ ಪ್ರಾರ್ಥನೆ ಮಾಡ್ತಾ ಬೈಬಲ್‌ ಓದ್ತಾ, ಅದ್ರ ಬಗ್ಗೆ ಯೋಚ್ನೆ ಮಾಡ್ತಾ ಆತನಿಗೆ ಇನ್ನಷ್ಟು ಹತ್ರ ಆಗಿ. ಈ ರೀತಿ ಮಾಡುವಾಗ ಯೆಹೋವ ದೇವರೂ ನಿಮಗೆ ಹತ್ರ ಆಗ್ತಾನೆ. ಯೆಶಾಯ 57:15ರಲ್ಲಿ ಹೇಳೋ ತರ ಆತನು “ಜಜ್ಜಿ ಹೋಗಿರುವವರ ಜೊತೆ, ದೀನಮನಸ್ಸು ಇರುವವ್ರ ಜೊತೆ” ಯಾವಾಗ್ಲೂ ಇರ್ತಾನೆ. ಮತ್ತೆ ಚೈತನ್ಯ ಪಡ್ಕೊಳ್ಳೋ ತರ ಮಾಡ್ತಾನೆ. ಯೆಹೋವನ ಗುಣಗಳನ್ನ ತೋರಿಸೋಕೆ ಆದಷ್ಟು ಪ್ರಯತ್ನ ಮಾಡಿ. ಹಿರಿಯರ ಸಹಾಯ ಪಡ್ಕೊಳ್ಳಿ. ಮುಂದೆ ಅವರು ಪೂರ್ತಿ ಬದಲಾಗ್ತಾರೆ ಅಂತ ನಂಬಿ.—ರೋಮ. 2:4; 2 ಪೇತ್ರ 3:9.

a ಒಂದುವೇಳೆ ಹೆಂಡತಿ ಅಶ್ಲೀಲ ಚಿತ್ರ ನೋಡ್ತಾ ಇದ್ರೆ ಈ ಲೇಖನದಲ್ಲಿರೋ ಹೆಚ್ಚಿನ ಸಲಹೆಗಳು ಗಂಡನಿಗೂ ಅನ್ವಯಿಸುತ್ತೆ.

b ಒಬ್ಬ ವ್ಯಕ್ತಿ ಅಶ್ಲೀಲ ಚಿತ್ರ ನೋಡ್ತಿದ್ದಾರೆ ಅನ್ನೋ ಕಾರಣಕ್ಕೆ ಅವರ ಸಂಗಾತಿ ಬೈಬಲ್‌ ಪ್ರಕಾರ ವಿಚ್ಛೇದನ ಕೊಡಕ್ಕಾಗಲ್ಲ.—ಮತ್ತಾ. 19:9.

c ಕೆಲವ್ರ ಹೆಸ್ರು ಬದಲಾಗಿದೆ.

d jw.org ವೆಬ್‌ಸೈಟಲ್ಲಿ ಮತ್ತು ನಮ್ಮ ಬೇರೆ ಪ್ರಕಾಶನಗಳಲ್ಲಿ ಇದ್ರ ಬಗ್ಗೆ ಜಾಸ್ತಿ ಮಾಹಿತಿ ಇದೆ. ಉದಾಹರಣೆಗೆ “ಅಶ್ಲೀಲ ಚಿತ್ರ ಗಂಡ-ಹೆಂಡ್ತಿ ಮಧ್ಯೆ ಮಾಡೋ ಅವಾಂತರ” ಅನ್ನೋ ಲೇಖನ ನೋಡಿ. ಜುಲೈ 1, 2014ರ ಕಾವಲಿನಬುರುಜುವಿನ ಪುಟ 9-11ರಲ್ಲಿರೋ “ಪ್ರಲೋಭನೆಯನ್ನು ನಿಗ್ರಹಿಸಲು ಸಾಧ್ಯ!” ಮತ್ತು “ಅಶ್ಲೀಲ ಚಿತ್ರ ಅಥವಾ ವಿಡಿಯೋಗಳನ್ನ ನೋಡೋದ್ರಲ್ಲಿ ತಪ್ಪೇನಿದೆ?” ಅನ್ನೋ jw.org ಲೇಖನ (brwp130801) ನೋಡಿ.

e ಎಷ್ಟೇ ಪ್ರಯತ್ನ ಮಾಡಿದ್ರೂ ಅಶ್ಲೀಲ ಚಿತ್ರಗಳನ್ನ ನೋಡೋ ಚಟವನ್ನ ಬಿಡೋಕೆ ಆಗದೇ ಇದ್ದಾಗ ಕೆಲವು ದಂಪತಿ ಹಿರಿಯರ ಸಹಾಯ ಪಡ್ಕೊಳ್ಳೋದ್ರ ಜೊತೆಗೆ ಡಾಕ್ಟರ್‌ ಸಹಾಯ ಪಡ್ಕೊಳ್ಳೋ ನಿರ್ಧಾರನೂ ಮಾಡಿದ್ದಾರೆ.