ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಿಮಗೆ ಗೊತ್ತಿತ್ತಾ?

ನಿಮಗೆ ಗೊತ್ತಿತ್ತಾ?

ಆಣೆ ಇಡುವುದನ್ನು ಯೇಸು ಏಕೆ ಖಂಡಿಸಿದನು?

ಮೋಶೆಯ ಧರ್ಮಶಾಸ್ತ್ರವು ಜನರಿಗೆ ಕೆಲವೊಂದು ಆಣೆಗಳನ್ನಿಡಲು ಅನುಮತಿಸಿತ್ತು. ಅವರು ‘ದೇವರಾಣೆಗೂ ನಿನಗೆ . . .’ ಅಥವಾ ‘ಯೆಹೋವನ ಹೆಸರಿನಾಣೆ ನಾನು . . .’ ಎಂಬಂಥ ಪದಗಳನ್ನು ಬಳಸಿ ಆಣೆ ಇಡಬಹುದಿತ್ತು. ಆದರೆ ಕಾಲಾನಂತರ ಅಂದರೆ ಯೇಸುವಿನ ಸಮಯದಷ್ಟಕ್ಕೆ ಯೆಹೂದ್ಯರು ಪ್ರತಿಯೊಂದಕ್ಕೂ ಆಣೆಯಿಡುವುದು ಸರ್ವೇಸಾಮಾನ್ಯ ಆಗಿಬಿಟ್ಟಿತ್ತು. ತಾವು ಹೇಳುವ ವಿಷಯವನ್ನು ನಂಬಿಸಲಿಕ್ಕಾಗಿ ಅವರು ಹೀಗೆ ಮಾಡುತ್ತಿದ್ದರು. ಪ್ರಯೋಜನವಿಲ್ಲದ ಈ ತಪ್ಪಾದ ಅಭ್ಯಾಸವನ್ನು ಯೇಸು ಕ್ರಿಸ್ತನು ಎರಡು ಸಲ ಖಂಡಿಸಿದನು. ಆತನು ಕಲಿಸಿದ್ದು: “ನಿಮ್ಮ ಮಾತು ಹೌದಾದರೆ ಹೌದು, ಇಲ್ಲವಾದರೆ ಇಲ್ಲ ಎಂದಿರಲಿ.”—ಮತ್ತಾ. 5:33-37; 23:16-22.

ಯೆಹೂದ್ಯರು ಯಾವ ಆಣೆಗಳನ್ನು ಪಾಲಿಸಬೇಕು, ಯಾವ ಆಣೆಗಳನ್ನು ಮುರಿಯಬಹುದೆಂದು ಯೆಹೂದ್ಯರ ನ್ಯಾಯಶಾಸ್ತ್ರವಾದ ಟ್ಯಾಲ್ಮಡ್‌ನಲ್ಲಿ ತುಂಬ ವಿವರವಾಗಿ ತಿಳಿಸಲಾಗಿದೆ. ಯೆಹೂದ್ಯರು ತಾವು ಹೇಳಿದ ಮಾತು ಸತ್ಯವೆಂದು ನಂಬಿಸಲು ಆಣೆಯಿಡುವುದು ಎಷ್ಟು ಸಾಮಾನ್ಯವಾಗಿ ಬಿಟ್ಟಿತೆಂದು ಇದರಿಂದ ಗೊತ್ತಾಗುತ್ತದೆ.—ಹೊಸ ಒಡಂಬಡಿಕೆಯ ದೇವತಾಶಾಸ್ತ್ರದ ಶಬ್ದಕೋಶ (ಇಂಗ್ಲಿಷ್‌).

ಯೆಹೂದ್ಯರ ಈ ತಪ್ಪಾದ ಅಭ್ಯಾಸವನ್ನು ಯೇಸು ಮಾತ್ರವಲ್ಲ ಬೇರೆಯವರೂ ಖಂಡಿಸಿದ್ದಾರೆ. ಉದಾಹರಣೆಗೆ, ಯೆಹೂದಿ ಇತಿಹಾಸಕಾರನಾದ ಫ್ಲೇವಿಯಸ್‌ ಜೋಸೀಫಸ್‌ ಆಣೆ ಇಡದಿದ್ದ ಯೆಹೂದ್ಯರ ಒಂದು ಪಂಗಡದ ಬಗ್ಗೆ ಬರೆದಿದ್ದಾನೆ. ಆಣೆ ಇಡುವುದು ಸುಳ್ಳು ಹೇಳುವುದಕ್ಕಿಂತಲೂ ಕೆಟ್ಟದೆಂದು ಈ ಪಂಗಡದವರು ನಂಬುತ್ತಿದ್ದರು. ಇವರ ಪ್ರಕಾರ ಒಬ್ಬ ವ್ಯಕ್ತಿ ತನ್ನ ಮಾತನ್ನು ಸತ್ಯವೆಂದು ನಂಬಿಸಲಿಕ್ಕಾಗಿ ಆಣೆ ಇಡಬೇಕಾಗುತ್ತದಾದರೆ ಅದರರ್ಥ ಅವನು ಒಬ್ಬ ಸುಳ್ಳುಗಾರನಾಗಿದ್ದಾನೆ. ಯೆಹೂದ್ಯರ ಅಪಾಕ್ರಿಫ ಪುಸ್ತಕವಾದ ಸಿರಾಖ ಅಥವಾ ಎಕ್ಲೀಸಿಯಾಸ್ಟಿಕಸ್‌ (23:11) ಸಹ ಹೀಗನ್ನುತ್ತದೆ: “ಸದಾ ಆಣೆಯಿಡುವವನು ದೋಷಭರಿತನು.” ಪ್ರಾಮುಖ್ಯವಲ್ಲದ ವಿಷಯಗಳಿಗಾಗಿ ಆಣೆ ಇಡುವುದನ್ನು ಯೇಸು ಖಂಡಿಸಿದನು. ನಾವು ಯಾವಾಗಲೂ ಸತ್ಯವನ್ನೇ ನುಡಿಯುವುದಾದರೆ, ನಾವು ಹೇಳುವ ವಿಷಯವನ್ನು ನಂಬಿಸಲಿಕ್ಕಾಗಿ ಆಣೆ ಇಡುವುದರ ಅಗತ್ಯವೇ ಇರುವುದಿಲ್ಲ.