ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದೇವರ ದೃಷ್ಟಿಕೋನ

ಕೃತಜ್ಞತೆ

ಕೃತಜ್ಞತೆ

ಕೃತಜ್ಞತೆ ತೋರಿಸುವುದರಿಂದ ದೈಹಿಕವಾಗಿ, ಮಾನಸಿಕವಾಗಿ, ಭಾವನಾತ್ಮಕವಾಗಿ ಅನೇಕ ಪ್ರಯೋಜನಗಳಿವೆ. ಆದ್ದರಿಂದ ಪ್ರತಿಯೊಬ್ಬರು ಈ ಗುಣವನ್ನು ಬೆಳೆಸಿಕೊಳ್ಳಬೇಕು.

ಕೃತಜ್ಞತೆ ತೋರಿಸುವುದರಿಂದ ನಮಗೇನು ಪ್ರಯೋಜನ?

ವೈದ್ಯಕೀಯ ಕ್ಷೇತ್ರ ಏನು ಹೇಳುತ್ತದೆ?

ಹಾರ್ವರ್ಡ್‌ ಮೆಂಟಲ್‌ ಹೆಲ್ತ್‌ ಲೆಟರ್‌ನಲ್ಲಿನ ಒಂದು ಲೇಖನದಲ್ಲಿ ಹೀಗೆ ತಿಳಿಸಲಾಗಿದೆ: “ಕೃತಜ್ಞರಾಗಿರುವುದಕ್ಕೂ ಸಂತೋಷದಿಂದ ಇರುವುದಕ್ಕೂ ತುಂಬ ಹತ್ತಿರದ ಸಂಬಂಧವಿದೆ. ಕೃತಜ್ಞರಾಗಿರುವುದರಿಂದ ಜನರ ಮೂಡ್ ಚೆನ್ನಾಗಿರುತ್ತೆ, ಖುಷಿಯಾಗಿರುತ್ತಾರೆ, ಆರೋಗ್ಯ ಚೆನ್ನಾಗಿರುತ್ತೆ, ಸಮಸ್ಯೆಗಳನ್ನು ಸರಿಯಾಗಿ ನಿಭಾಯಿಸುತ್ತಾರೆ ಮತ್ತು ಇತರರೊಂದಿಗಿನ ಸ್ನೇಹ-ಸಂಬಂಧ ಚೆನ್ನಾಗಿರುತ್ತೆ.”

ಬೈಬಲ್‌ ಏನು ಹೇಳುತ್ತದೆ?

ಕೃತಜ್ಞತಾಭಾವವನ್ನು ಬೆಳೆಸಿಕೊಳ್ಳುವಂತೆ ಬೈಬಲ್‌ ನಮ್ಮನ್ನು ಉತ್ತೇಜಿಸುತ್ತದೆ. ಪೌಲನು, “ನೀವು ಕೃತಜ್ಞತಾಭಾವದವರೆಂದು ತೋರಿಸಿರಿ” ಎಂದು ಬರೆದನು ಮಾತ್ರವಲ್ಲ, ಉತ್ತಮ ಮಾದರಿಯಿಟ್ಟನು. ಉದಾಹರಣೆಗೆ, ಅವನು ಸಾರಿದ ಸಂದೇಶಕ್ಕೆ ಜನರು ಚೆನ್ನಾಗಿ ಪ್ರತಿಕ್ರಿಯಿಸಿದಾಗ, “ದೇವರಿಗೆ ಎಡೆಬಿಡದೆ ಕೃತಜ್ಞತೆ” ಸಲ್ಲಿಸಿದನು. (ಕೊಲೊಸ್ಸೆ 3:15; 1 ಥೆಸಲೊನೀಕ 2:13) ನಾವು ಯಾವಾಗಲೂ ಸಂತೋಷದಿಂದ ಇರಬೇಕೆಂದರೆ ಆಗೊಮ್ಮೆ ಈಗೊಮ್ಮೆ ‘ಥ್ಯಾಂಕ್ಸ್‌’ ಅಂತ ಹೇಳಿದರೆ ಸಾಕಾಗುವುದಿಲ್ಲ, ನಮ್ಮಲ್ಲಿ ಕೃತಜ್ಞತಾಭಾವ ಯಾವಾಗಲೂ ಇರಬೇಕು. ಈ ಗುಣ ನಮ್ಮಲ್ಲಿದ್ದರೆ ಅಹಂಕಾರ, ಹೊಟ್ಟೆಕಿಚ್ಚು, ಕೋಪಕ್ಕೆ ಜಾಗ ಇರುವುದಿಲ್ಲ. ಹಾಗಾಗಿ, ಸಂಬಂಧಗಳು ಮುರಿದುಹೋಗುವುದಿಲ್ಲ, ನಾವೂ ಸಂತೋಷದಿಂದಿರುತ್ತೇವೆ.

ಕೃತಜ್ಞತೆ ತೋರಿಸುವುದರಲ್ಲಿ ನಮ್ಮ ಸೃಷ್ಟಿಕರ್ತನೇ ಉತ್ತಮ ಮಾದರಿ. ಧೂಳಿನಂತಿರುವ ಮನುಷ್ಯರಿಗೂ ಆತನು ಕೃತಜ್ಞತೆ ತೋರಿಸಿದನು. “ನಿಮ್ಮ ಈ ಕೆಲಸವನ್ನೂ ದೇವರ ಹೆಸರಿಗಾಗಿ ನೀವು ತೋರಿಸಿದ ಪ್ರೀತಿಯನ್ನೂ ಮರೆಯುವುದಕ್ಕೆ ಆತನು ಅನೀತಿವಂತನಲ್ಲ” ಎಂದು ಬೈಬಲಿನ ಇಬ್ರಿಯ 6:10 ರಲ್ಲಿ ಹೇಳಲಾಗಿದೆ. ನಮ್ಮ ಸೃಷ್ಟಿಕರ್ತನ ದೃಷ್ಟಿಯಲ್ಲಿ ಕೃತಜ್ಞತೆ ತೋರಿಸದೆ ಇರುವುದು ಅನೀತಿ ಅಥವಾ ಅನ್ಯಾಯವಾಗಿದೆ.

“ಯಾವಾಗಲೂ ಹರ್ಷಿಸುತ್ತಾ ಇರಿ. ಎಲ್ಲ ವಿಷಯಗಳಲ್ಲಿ ಕೃತಜ್ಞತೆಯನ್ನು ಸಲ್ಲಿಸಿರಿ.” 1 ಥೆಸಲೊನೀಕ 5:16, 18.

ಕೃತಜ್ಞತೆ ತೋರಿಸುವುದರಿಂದ ಸ್ನೇಹ-ಸಂಬಂಧಗಳು ಚೆನ್ನಾಗಿರುತ್ತವೆ, ಹೇಗೆ?

ಅನುಭವಗಳಿಂದ ಏನು ತಿಳಿಯುತ್ತದೆ?

ಯಾರಾದರೂ ಗಿಫ್ಟ್‌ ಕೊಟ್ಟಾಗ, ದಯೆಯಿಂದ ಮಾತಾಡಿದಾಗ ಅಥವಾ ಏನಾದರೂ ಸಹಾಯ ಮಾಡಿದಾಗ ಹೃದಯದಾಳದಿಂದ ಕೃತಜ್ಞತೆ ತೋರಿಸಬೇಕು. ಆಗ, ‘ಇವರು ನಮ್ಮನ್ನು ಗಣ್ಯಮಾಡ್ತಾರೆ, ಅಮೂಲ್ಯರಂತ ಎಣಿಸುತ್ತಾರೆ’ ಎಂದು ಅದನ್ನು ಕೊಟ್ಟವರಿಗೆ ಅನಿಸುತ್ತದೆ. ಅಷ್ಟೇ ಅಲ್ಲದೆ, ಅಪರಿಚಿತರು ಸಹ ಕೃತಜ್ಞತೆ ಹೇಳಿದಾಗ ಸಂತೋಷಪಡುತ್ತಾರೆ. ಉದಾಹರಣೆಗೆ, ಬಾಗಿಲು ತೆರೆದು ಹಿಡಿಯುವಂಥ ಚಿಕ್ಕ-ಪುಟ್ಟ ಸಹಾಯ ಮಾಡಿದಾಗ.

ಬೈಬಲ್‌ ಏನು ಹೇಳುತ್ತದೆ?

“ಕೊಡುವುದನ್ನು ರೂಢಿಮಾಡಿಕೊಳ್ಳಿರಿ, ಆಗ ಜನರು ನಿಮಗೆ ಕೊಡುವರು. ಅವರು ಒಳ್ಳೆಯ ಅಳತೆಯಲ್ಲಿ ಅಳೆದು, ಒತ್ತಿ, ಅಲ್ಲಾಡಿಸಿ, ತುಂಬಿತುಳುಕುತ್ತಿರುವಾಗ ಅದನ್ನು ನಿಮ್ಮ ಮಡಿಲಿಗೆ ಹಾಕುವರು” ಎಂದು ಯೇಸು ಹೇಳಿದನು. (ಲೂಕ 6:38) ದಕ್ಷಿಣ ಫೆಸಿಪಿಕ್‍ನ ವನುವಾಟು ದ್ವೀಪದಲ್ಲಿರುವ ರೋಜ್ ಎಂಬ ಶ್ರವಣ ದೋಷವಿರುವ ಹುಡುಗಿಯ ಅನುಭವವನ್ನು ಗಮನಿಸಿ.

ರೋಜ್ ಯೆಹೋವನ ಸಾಕ್ಷಿಗಳ ಕ್ರೈಸ್ತ ಕೂಟಗಳಿಗೆ ಹಾಜರಾಗುತ್ತಿದ್ದರೂ ಅವಳಿಗೆ ಅದರಿಂದ ಏನೂ ಪ್ರಯೋಜನವಾಗುತ್ತಿರಲಿಲ್ಲ. ಯಾಕೆಂದರೆ ಅವಳಿಗೆ ಮತ್ತು ಅಲ್ಲಿರುವ ಯಾರಿಗೂ ಸನ್ನೆ ಭಾಷೆ ಬರುತ್ತಿರಲಿಲ್ಲ. ಒಮ್ಮೆ, ವಿಷಯಗಳನ್ನು ಸನ್ನೆ ಭಾಷೆಗೆ ಭಾಷಾಂತರಿಸಲು ಚೆನ್ನಾಗಿ ಗೊತ್ತಿರುವ ದಂಪತಿ ಈ ಕೂಟದ ಸ್ಥಳಕ್ಕೆ ಭೇಟಿ ಮಾಡಿದರು. ಆಗ ಅವರಿಗೆ ಅಲ್ಲಿದ್ದ ಸಮಸ್ಯೆ ಬಗ್ಗೆ ಗೊತ್ತಾಯಿತು. ಸನ್ನೆ ಭಾಷೆ ಕಲಿಸಲು ಆರಂಭಿಸಿದರು. ಇದಕ್ಕಾಗಿ ರೋಜ್ ತುಂಬ ಕೃತಜ್ಞತೆ ಹೇಳಿದಳು. “ನನ್ನನ್ನು ಪ್ರೀತಿಸುವ ತುಂಬ ಸ್ನೇಹಿತರು ನನಗಿದ್ದಾರೆ. ಅದನ್ನು ನೋಡುವಾಗ ಸಂತೋಷವಾಗುತ್ತೆ” ಎನ್ನುತ್ತಾಳೆ ರೋಜ್. ಅವಳು ಕೃತಜ್ಞತೆ ತೋರಿಸುವಾಗ ಮತ್ತು ಕೂಟಗಳಲ್ಲಿ ಭಾಗವಹಿಸುವುದನ್ನು ನೋಡುವಾಗ ಅವಳಿಗೆ ಸಹಾಯ ಮಾಡಿದ ಆ ದಂಪತಿಗೆ ತುಂಬ ಸಂತೋಷವಾಗುತ್ತದೆ. ತನ್ನ ಜೊತೆ ಮಾತಾಡಲಿಕ್ಕಾಗಿ ಸನ್ನೆ ಭಾಷೆಯನ್ನು ಕಲಿಯಲು ಇತರರು ಹಾಕಿದ ಪ್ರಯತ್ನಗಳಿಗಾಗಿ ಕೂಡ ರೋಜ್ ಕೃತಜ್ಞತೆ ಹೇಳುತ್ತಾಳೆ.—ಅಪೊಸ್ತಲರ ಕಾರ್ಯಗಳು 20:35.

“ಯಾರು ಸ್ತುತಿಯಜ್ಞವನ್ನು ಸಮರ್ಪಿಸುತ್ತಾರೋ ಅವರೇ ನನ್ನನ್ನು [ದೇವರನ್ನು] ಗೌರವಿಸುವವರು.” ಕೀರ್ತನೆ 50:23.

ಕೃತಜ್ಞತಾಭಾವವನ್ನು ಬೆಳೆಸಿಕೊಳ್ಳುವುದು ಹೇಗೆ?

ಬೈಬಲ್‌ ಏನು ಹೇಳುತ್ತದೆ?

ನಮ್ಮ ಭಾವನೆಗಳಿಗೂ ಯೋಚನೆಗಳಿಗೂ ತುಂಬ ಹತ್ತಿರದ ಸಂಬಂಧವಿದೆ. ಬೈಬಲ್‌ ಬರಹಗಾರನಾದ ದಾವೀದನು ದೇವರಿಗೆ ಪ್ರಾರ್ಥಿಸುತ್ತಾ, “ನಿನ್ನ ಎಲ್ಲಾ ಕಾರ್ಯಗಳನ್ನು ಧ್ಯಾನಿಸುತ್ತೇನೆ; ನಿನ್ನ ಕೈಕೆಲಸಗಳನ್ನು ಸ್ಮರಿಸುತ್ತೇನೆ” ಎಂದನು. (ಕೀರ್ತನೆ 143:5) ದಾವೀದನು ಕಾಟಾಚಾರ ಮನೋಭಾವ ಅಥವಾ ಚಂಚಲ ಮನಸ್ಸಿನ ವ್ಯಕ್ತಿಯಾಗಿರಲಿಲ್ಲ. ದಾವೀದನು ದೇವರ ಮಾರ್ಗಗಳ ಬಗ್ಗೆ ಯಾವಾಗಲೂ ಧ್ಯಾನಿಸುವ ರೂಢಿ ಮಾಡಿಕೊಂಡಿದ್ದನು. ಇದರಿಂದ ಅವನಲ್ಲಿ ಕೃತಜ್ಞತಾಭಾವ ಬೆಳೆಯಿತು.—ಕೀರ್ತನೆ 71:5, 17.

“ಯಾವ ವಿಷಯಗಳು ಪ್ರೀತಿಯೋಗ್ಯವಾಗಿವೆಯೊ, ಯಾವ ವಿಷಯಗಳ ಕುರಿತು ಮೆಚ್ಚುಗೆಯ ಮಾತುಗಳು ನುಡಿಯಲ್ಪಟ್ಟಿವೆಯೊ, ಸದ್ಗುಣವಾಗಿರುವ ಯಾವುದಿದ್ದರೂ ಮತ್ತು ಸ್ತುತಿಗೆ ಯೋಗ್ಯವಾಗಿರುವ ಯಾವುದೇ ವಿಷಯವಿದ್ದರೂ ಅಂಥ ವಿಷಯಗಳನ್ನು ಲಕ್ಷ್ಯಕ್ಕೆ ತಂದುಕೊಳ್ಳುತ್ತಾ ಇರಿ” ಎಂಬ ಉತ್ತಮ ಸಲಹೆಯನ್ನು ಬೈಬಲ್‌ ನಮಗೆ ಕೊಡುತ್ತದೆ. (ಫಿಲಿಪ್ಪಿ 4:8) “ಲಕ್ಷ್ಯಕ್ಕೆ ತಂದುಕೊಳ್ಳುತ್ತಾ ಇರಿ” ಎಂಬ ಮಾತು ಕೃತಜ್ಞತಾಭಾವ ಬೆಳೆಸಿಕೊಳ್ಳಲು ಕ್ರಮವಾಗಿ ಧ್ಯಾನಿಸುವುದು ಅತ್ಯಗತ್ಯ ಎಂದು ತೋರಿಸುತ್ತದೆ. ▪ (g16-E No. 5)

“ನನ್ನ ಬಾಯಿ ಸುಜ್ಞಾನವನ್ನು ಬೋಧಿಸುವದು; ನನ್ನ ಹೃದಯವು ವಿವೇಕವನ್ನು ಫಲಿಸುವದು.” ಕೀರ್ತನೆ 49:3.