ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪಾಠ 1

ಸ್ವನಿಯಂತ್ರಣ

ಸ್ವನಿಯಂತ್ರಣ

ಸ್ವನಿಯಂತ್ರಣ ಅಂದರೇನು?

ಸ್ವನಿಯಂತ್ರಣ ಅಂದರೆ,

  • ಬಯಸಿದ ವಿಷಯ ತಡವಾದರೂ ಅದಕ್ಕಾಗಿ ಕಾಯುವುದು

  • ಆಸೆಗಳನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು.

  • ಮಾಡಬೇಕಾದ ಕೆಲಸಗಳನ್ನು ಇಷ್ಟವಿಲ್ಲದಿದ್ದರೂ ಮಾಡಿಮುಗಿಸುವುದು

  • ನಮ್ಮ ಅಗತ್ಯಗಳಿಗಿಂತ ಬೇರೆಯವರ ಅಗತ್ಯಗಳಿಗೆ ಹೆಚ್ಚು ಪ್ರಾಮುಖ್ಯತೆ ಕೊಡುವುದು

ಸ್ವನಿಯಂತ್ರಣ ತೋರಿಸುವುದು ಯಾಕೆ ಮುಖ್ಯ?

ಸ್ವನಿಯಂತ್ರಣ ಇರುವ ಮಕ್ಕಳು, ತಮಗೆ ಒಂದು ವಿಷಯ ಇಷ್ಟವಾದರೂ ಅದು ಕೆಟ್ಟದ್ದಾಗಿದ್ದರೆ ಅದನ್ನು ಮಾಡುವುದಿಲ್ಲ. ಆದರೆ ಸ್ವನಿಯಂತ್ರಣ ಇಲ್ಲದ ಮಕ್ಕಳು

  • ತುಂಬ ಬೇಗ ಕೋಪ ತೋರಿಸುತ್ತಾರೆ

  • ಖಿನ್ನತೆಗೆ ಒಳಗಾಗುತ್ತಾರೆ

  • ಧೂಮಪಾನ, ಕುಡಿಕತನ ಅಥವಾ ಡ್ರಗ್ಸ್‌ ಉಪಯೋಗಿಸುವ ಬಲೆಗೆ ಬೀಳುತ್ತಾರೆ

  • ಇಷ್ಟ ಇರುವುದನ್ನೆಲ್ಲಾ ಹಿಂದೆ ಮುಂದೆ ಯೋಚಿಸದೆ ತಿಂದು ಬಿಡುತ್ತಾರೆ

ಹೆಚ್ಚು ಸ್ವನಿಯಂತ್ರಣ ಇರುವ ಮಕ್ಕಳಿಗೆ ದೊಡ್ಡವರಾದ ಮೇಲೂ ಅನಾರೋಗ್ಯ, ಆರ್ಥಿಕ ಅಥವಾ ಕಾನೂನಿನ ಸಮಸ್ಯೆಗಳು ಬರುವುದು ತುಂಬ ಕಡಿಮೆ ಎಂದು ಒಂದು ಅಧ್ಯಯನದಿಂದ ತಿಳಿದುಬಂದಿದೆ. ಈ ಅಧ್ಯಯನ ನಡೆಸಿದ ಪೆನ್ಸಿಲ್ವೇನಿಯದ ಯೂನಿವರ್ಸಿಟಿಯ ಉಪನ್ಯಾಸಕರಾದ ಏಂಜೆಲಾ ಡಕ್‌ವರ್ತ್‌ ಹೀಗೆ ಹೇಳುತ್ತಾರೆ: “ಸ್ವನಿಯಂತ್ರಣ ತೋರಿಸುವುದು ಎಲ್ಲಾ ಸನ್ನಿವೇಶಗಳಲ್ಲೂ ಒಳ್ಳೇದು.”

ಸ್ವನಿಯಂತ್ರಣ ತೋರಿಸಲು ಕಲಿಸುವುದು ಹೇಗೆ?

‘ಬೇಡ’ ಎನ್ನಲು ಕಲಿಯಿರಿ, ಹಠ ಮಾಡುವಾಗ ಮಣಿಯಬೇಡಿ.

ಬೈಬಲ್‌ ತತ್ವ: “ನಿಮ್ಮ ಮಾತು ಹೌದಾದರೆ ಹೌದು, ಅಲ್ಲವಾದರೆ ಅಲ್ಲ ಎಂದಿರಲಿ.” —ಮತ್ತಾಯ 5:37.

ಮಕ್ಕಳು ಹಠ ಮಾಡಿ, ರಂಪ ಮಾಡಿ ತಂದೆ-ತಾಯಿಯ ನಿರ್ಣಯ ಬದಲಾಗುತ್ತದಾ ಎಂದು ಪರೀಕ್ಷಿಸುತ್ತಾರೆ. ಬೇರೆಯವರ ಎದುರು ಸಹ ಇದನ್ನವರು ಮಾಡಬಹುದು. ಅಂಥ ಸಮಯಗಳಲ್ಲಿ ಹೆತ್ತವರು ಮಣಿದರೆ, ‘ನಾನು ಹಠ ಮಾಡಿದರೆ ಅಪ್ಪ-ಅಮ್ಮ ನನ್ನ ಮಾತು ಕೇಳುತ್ತಾರೆ’ ಎಂದು ಮಕ್ಕಳು ಅಂದುಕೊಳ್ಳುತ್ತಾರೆ.

ಆದರೆ ಒಂದು ವೇಳೆ ನೀವು ಬೇಡ ಅಂತ ಹೇಳಿ, ಅವರು ಕೇಳಿಕೊಂಡ ವಿಷಯಗಳನ್ನು ಮಾಡದೆ ಹೋದರೆ, ಜೀವನದಲ್ಲಿ ನಾವು ಬಯಸಿದ್ದೆಲ್ಲ ಸಿಗುವುದಿಲ್ಲ ಎಂದು ಮಕ್ಕಳಿಗೆ ಅರಿವಾಗುತ್ತದೆ. ಹಾಗಾಗಿ, “ಈ ಪಾಠವನ್ನು ಕಲಿತ ಮಕ್ಕಳು ಇರುವುದರಲ್ಲೇ ತೃಪ್ತರಾಗಿರುತ್ತಾರೆ” ಎಂದು ಡಾ. ಡೇವಿಡ್‌ ವೋಲ್ಶ್‌ ಬರೆದಿದ್ದಾರೆ. “ತಾವು ಬಯಸಿದ್ದೆಲ್ಲಾ ಸಿಗುತ್ತದೆ ಎಂದು ನಾವು ನಮ್ಮ ಮಕ್ಕಳಿಗೆ ಕಲಿಸಿದರೆ ಅದರಿಂದ ಅವರಿಗೆ ಏನೂ ಪ್ರಯೋಜನವಿಲ್ಲ” ಎನ್ನುತ್ತಾರೆ ಅವರು. *

ನೀವು ಈಗ ನಿಮ್ಮ ಮಕ್ಕಳಿಗೆ ‘ಬೇಡ’ ಎಂದು ಹೇಳಲು ಕಲಿತರೆ, ಅವರು ಸಹ ಮುಂದೆ ದೊಡ್ಡವರಾದ ಮೇಲೆ ಕೆಟ್ಟ ವಿಷಯಗಳಿಗೆ ‘ಬೇಡ’ ಎಂದು ಹೇಳಲು ಕಲಿಯುತ್ತಾರೆ. ಉದಾಹರಣೆಗೆ, ಡ್ರಗ್ಸ್‌ ತೆಗೆದುಕೊಳ್ಳಬೇಕು, ಸೆಕ್ಸ್‌ನಲ್ಲಿ ಒಳಗೂಡಬೇಕು ಅಥವಾ ಯಾವುದಾದರೂ ಕೆಟ್ಟ ವಿಷಯಗಳನ್ನು ಮಾಡಬೇಕೆಂದು ಆಸೆಯಾದರೂ ಸ್ವನಿಯಂತ್ರಣ ತೋರಿಸುತ್ತಾರೆ.

ನಿಮ್ಮ ಮಕ್ಕಳಿಗೆ ಅವರ ಕ್ರಿಯೆಗಳ ಪರಿಣಾಮ ಏನಾಗುತ್ತದೆಂದು ಅರ್ಥಮಾಡಿಸಿ.

ಬೈಬಲ್‌ ತತ್ವ: “ಮನುಷ್ಯನು ಏನು ಬಿತ್ತುತ್ತಿದ್ದಾನೊ ಅದನ್ನೇ ಕೊಯ್ಯುವನು.”—ಗಲಾತ್ಯ 6:7.

ತಾವು ಮಾಡುವ ಪ್ರತಿಯೊಂದು ಕೆಲಸಕ್ಕೂ ಅದರದ್ದೇ ಆದ ಪರಿಣಾಮಗಳು ಇರುತ್ತವೆ ಮತ್ತು ಸ್ವನಿಯಂತ್ರಣ ತೋರಿಸದಿದ್ದರೆ ಕೆಟ್ಟ ಪರಿಣಾಮಗಳನ್ನು ಅನುಭವಿಸಬೇಕಾಗುತ್ತದೆ ಎಂದು ಮಕ್ಕಳು ಅರ್ಥಮಾಡಿಕೊಳ್ಳಬೇಕು. ಉದಾಹರಣೆಗೆ, ನಿಮ್ಮ ಮಗ ಚಿಕ್ಕ ಚಿಕ್ಕ ವಿಷಯಗಳಿಗೂ ಬೇಗ ಕೋಪ ಮಾಡಿಕೊಂಡರೆ, ಬೇರೆಯವರು ಅವನೊಂದಿಗೆ ಬೆರೆಯಲು ಇಷ್ಟಪಡುವುದಿಲ್ಲ. ಆದರೆ, ಅವನು ತನ್ನ ಕೋಪವನ್ನು ನಿಯಂತ್ರಿಸಿದರೆ ಅಥವಾ ಬೇರೆಯವರು ಮಾತಾಡುವಾಗ ಮಧ್ಯೆ ಬಾಯಿ ಹಾಕದೆ ತಾಳ್ಮೆಯಿಂದ ಕಾದರೆ ಎಲ್ಲರೂ ಅವನೊಂದಿಗೆ ಇರಲು ಇಷ್ಟಪಡುತ್ತಾರೆ. ಸ್ವನಿಯಂತ್ರಣ ಬೆಳೆಸಿಕೊಂಡರೆ ಜೀವನ ಚೆನ್ನಾಗಿರುತ್ತೆ ಎಂದು ನಿಮ್ಮ ಮಕ್ಕಳಿಗೆ ಅರ್ಥಮಾಡಿಸಿ.

ಯಾವ ವಿಷಯಗಳಿಗೆ ಪ್ರಾಮುಖ್ಯತೆ ಕೊಡಬೇಕು ಎಂದು ಕಲಿಸಿ.

ಬೈಬಲ್‌ ತತ್ವ: ‘ಹೆಚ್ಚು ಪ್ರಮುಖವಾದ ವಿಷಯಗಳನ್ನು ಖಚಿತಪಡಿಸಿಕೊಳ್ಳುವವರಾಗಿರಿ.’ —ಫಿಲಿಪ್ಪಿ 1:10.

ಸ್ವನಿಯಂತ್ರಣ ಕೆಟ್ಟ ವಿಷಯಗಳನ್ನು ಮಾಡದಂತೆ ನಮ್ಮನ್ನು ತಡೆಹಿಡಿಯುತ್ತದೆ ಮಾತ್ರವಲ್ಲ, ಮಾಡಲೇಬೇಕಾದ ವಿಷಯಗಳನ್ನು, ಇಷ್ಟವಿಲ್ಲದಿದ್ದರೂ ಮಾಡುವಂತೆ ಪ್ರೇರೇಪಿಸುತ್ತದೆ. ಮಕ್ಕಳು ಯಾವುದು ಪ್ರಾಮುಖ್ಯವೆಂದು ಗುರುತಿಸಲು ಮತ್ತು ಅದನ್ನೇ ಮೊದಲು ಮಾಡಲು ಕಲಿಯುವುದು ತುಂಬ ಮುಖ್ಯ. ಉದಾಹರಣೆಗೆ, ಮೊದಲು ಪಾಠ ಆಮೇಲೆ ಆಟ.

ನೀವು ಒಳ್ಳೇ ಮಾದರಿಯಾಗಿರಿ.

ಬೈಬಲ್‌ ತತ್ವ: “ನಾನು ಮಾಡಿದಂತೆಯೇ ನೀವೂ ಮಾಡಬೇಕೆಂದು ನಾನು ನಿಮಗೆ ಒಂದು ಮಾದರಿಯನ್ನು ಇಟ್ಟಿದ್ದೇನೆ.”—ಯೋಹಾನ 13:15.

ನಿಮಗೆ ನಿರಾಶೆಯಾದಾಗ ಅಥವಾ ಕೋಪ ಬರಿಸುವಂಥ ಸನ್ನಿವೇಶಗಳು ಎದುರಾದಾಗ ಹೇಗೆ ಪ್ರತಿಕ್ರಿಯಿಸುತ್ತೀರಿ ಎಂದು ನಿಮ್ಮ ಮಗು ಗಮನಿಸುತ್ತಾ ಇರುತ್ತದೆ. ಇಂಥ ಸನ್ನಿವೇಶದಲ್ಲಿ ಸ್ವನಿಯಂತ್ರಣ ತೋರಿಸಿದರೆ ಪರಿಸ್ಥಿತಿ ಸುಧಾರಿಸುತ್ತದೆ ಎಂದು ನಿಮ್ಮ ಮಾದರಿ ಮೂಲಕ ಮಗುವಿಗೆ ಕಲಿಸಿ. ಉದಾಹರಣೆಗೆ, ಮಗು ಹಠ ಮಾಡುತ್ತಾ ನಿಮ್ಮ ತಾಳ್ಮೆ ಪರೀಕ್ಷಿಸುವಾಗ ನೀವು ಹೇಗೆ ಪ್ರತಿಕ್ರಿಯಿಸುತ್ತೀರಿ? ಕೋಪಮಾಡಿಕೊಳ್ಳುತ್ತೀರಾ? ಅಥವಾ ಸಮಾಧಾನದಿಂದ ಶಿಸ್ತು ನೀಡುತ್ತೀರಾ?

^ ಪ್ಯಾರ. 20 ನೋ: ವೈ ಕಿಡ್ಸ್‌—ಆಫ್‌ ಆಲ್‌ ಏಜಸ್‌—ನೀಡ್‌ ಟು ಹಿಯರ್‌ ಇಟ್‌ ಆ್ಯಂಡ್‌ ವೇಸ್‌ ಪೇರೆಂಟ್ಸ್‌ ಕ್ಯಾನ್‌ ಸೇ ಇಟ್‌ ಎಂಬ ಪುಸ್ತಕದಲ್ಲಿರುವ ಮಾಹಿತಿ.