ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪಾಠ 4

ಜವಾಬ್ದಾರಿಯುತ ವ್ಯಕ್ತಿಯಾಗುವುದು

ಜವಾಬ್ದಾರಿಯುತ ವ್ಯಕ್ತಿಯಾಗುವುದು

ಜವಾಬ್ದಾರಿಯುತ ವ್ಯಕ್ತಿಯಾಗುವುದರಲ್ಲಿ ಏನೆಲ್ಲಾ ಒಳಗೂಡಿದೆ?

ಜವಾಬ್ದಾರಿಯುತ ಜನರು ಭರವಸಾರ್ಹರಾಗಿರುತ್ತಾರೆ. ತಮಗೆ ಕೊಟ್ಟ ಕೆಲಸವನ್ನು ಚೆನ್ನಾಗಿ, ಸಮಯಕ್ಕೆ ಸರಿಯಾಗಿ ಮಾಡಿ ಮುಗಿಸುತ್ತಾರೆ.

ಚಿಕ್ಕಮಕ್ಕಳಿಗೆ ದೊಡ್ಡವರಷ್ಟು ಸಾಮರ್ಥ್ಯ ಇರುವುದಿಲ್ಲವಾದರೂ ಜವಾಬ್ದಾರಿಯುತ ವ್ಯಕ್ತಿಗಳಾಗಲು ಕಲಿಯಬಹುದು. “ಮಗು ತನ್ನ ಹದಿನೈದನೆಯ ತಿಂಗಳಿನಿಂದ ಹೆತ್ತವರಿಗೆ ವಿಧೇಯರಾಗಲು ಕಲಿಯುತ್ತದೆ ಮತ್ತು ಹದಿನೆಂಟನೆಯ ತಿಂಗಳಲ್ಲಿ ಹೆತ್ತವರನ್ನು ಅನುಕರಿಸಲು ಕಲಿಯುತ್ತದೆ. ಅನೇಕ ಸಂಸ್ಕೃತಿಗಳಲ್ಲಿ ಐದರಿಂದ ಏಳು ವಯಸ್ಸಿನೊಳಗಿನ ಮಕ್ಕಳಿಗೆ ಮನೆಯಲ್ಲಿ ಇತರರಿಗೆ ಸಹಾಯಮಾಡುವುದನ್ನು ಹೆತ್ತವರು ಕಲಿಸುತ್ತಾರೆ. ಅವರು ಚಿಕ್ಕ ಮಕ್ಕಳಾದರೂ ಅನೇಕ ಕೆಲಸಗಳನ್ನು ಚೆನ್ನಾಗಿ ಮಾಡುತ್ತಾರೆ” ಎಂದು ಪೇರೆಂಟಿಂಗ್‌ ವಿದೌಟ್‌ ಬಾರ್ಡರ್ಸ್‌ ಎಂಬ ಪುಸ್ತಕವು ಹೇಳುತ್ತದೆ.

ಜವಾಬ್ದಾರಿಯುತ ವ್ಯಕ್ತಿಯಾಗುವುದು ಯಾಕೆ ಮುಖ್ಯ?

ಕೆಲವು ದೇಶಗಳಲ್ಲಿ ಮಕ್ಕಳು ದೊಡ್ಡವರಾದ ಮೇಲೆ ಬೇರೆ ಮನೆ ಮಾಡಿ ಸ್ವಂತ ಜೀವನ ನಡೆಸಲು ಪ್ರಯತ್ನಿಸುತ್ತಾರೆ. ಆದರೆ ಜೀವನದಲ್ಲಿ ಬರುವ ಸಮಸ್ಯೆಗಳನ್ನು ಎದುರಿಸಲು ಆಗದೆ ಮತ್ತೆ ಮನೆಗೆ ಹಿಂದಿರುಗುತ್ತಾರೆ. ಹಣವನ್ನು ಸರಿಯಾಗಿ ಉಪಯೋಗಿಸುವುದು, ಮನೆ ನಡಿಸುವುದು ಮತ್ತು ಬೇರೆ ಜವಾಬ್ದಾರಿಗಳನ್ನು ನಿರ್ವಹಿಸುವುದು ಹೇಗೆ ಅಂತ ಹೆತ್ತವರು ಅವರಿಗೆ ಕಲಿಸದೆ ಇರುವುದೇ ಇದಕ್ಕೆ ಕಾರಣ.

ಆದುದರಿಂದ ಮಕ್ಕಳಿಗೆ ಜವಾಬ್ದಾರಿಯುತ ವ್ಯಕ್ತಿಯಾಗುವುದು ಹೇಗೆ ಅಂತ ಈಗಲೇ ಹೇಳಿಕೊಡುವುದು ಪ್ರಾಮುಖ್ಯ. ಇದರಿಂದ ಅವರಿಗೆ ದೊಡ್ಡವರಾದ ಮೇಲೆ ಏನು ಮಾಡಬೇಕೆಂದು ತಿಳಿದಿರುತ್ತದೆ. ದೊಡ್ಡವರಾಗುವ ತನಕ ಮಕ್ಕಳಿಗೆ ಏನೂ ಕಲಿಸದೆ, “ಅವರನ್ನು ನಿಮ್ಮ ಆಸರೆಯಲ್ಲೇ ಇಟ್ಟುಕೊಂಡು ಆಮೇಲೆ ಲೋಕಕ್ಕೆ ದೊಬ್ಬಿ ಬಿಡಲು ನೀವಿಷ್ಟಪಡಲ್ಲ ಅಲ್ವಾ?” ಎನ್ನುತ್ತದೆ ಹೌ ಟು ರೈಸ್‌ ಯೋರ್‌ ಚಿಲ್ಡ್ರನ್‌ ಎಂಬ ಪುಸ್ತಕ.

ಜವಾಬ್ದಾರಿಯನ್ನು ಹೇಗೆ ಕಲಿಸುವುದು?

ಮನೆಯಲ್ಲಿ ಕೆಲಸಗಳನ್ನು ಕೊಡಿ.

ಬೈಬಲ್‌ ತತ್ವ: “ಶ್ರಮೆಯಿಂದ ಸಮೃದ್ಧಿ.”—ಜ್ಞಾನೋಕ್ತಿ 14:23.

ಮಕ್ಕಳು ಹೆತ್ತವರೊಟ್ಟಿಗೆ ಕೆಲಸ ಮಾಡಲು ಇಷ್ಟಪಡುತ್ತಾರೆ. ಆದ್ದರಿಂದ ಅವರಿಗೆ ಕೆಲವು ಮನೆಕೆಲಸಗಳನ್ನು ಕೊಡಿ.

ಶಾಲೆಗೆ ಹೋಗುವ ಮಕ್ಕಳಿಗೆ ತುಂಬ ಹೋಮ್‌ವರ್ಕ್‌ ಇರುತ್ತದೆ. ಆದುದರಿಂದ ಅವರ ಮೇಲೆ ತುಂಬ ಭಾರ ಹಾಕಬಾರದು ಎಂದು ಕೆಲವು ಹೆತ್ತವರು ತಮ್ಮ ಮಕ್ಕಳಿಗೆ ಕೆಲಸಾನೇ ಕೊಡಲ್ಲ.

ಆದರೆ, ಮನೆಯಲ್ಲಿ ಕೆಲಸ ಮಾಡುವ ಮಕ್ಕಳು ಸಾಮಾನ್ಯವಾಗಿ ಓದಿನಲ್ಲೂ ಮುಂದಿರುತ್ತಾರೆ. ಯಾಕೆಂದರೆ ಅವರು ಯಾವುದೇ ಕೆಲಸವನ್ನಾದರೂ ಮಾಡಿ ಮುಗಿಸುವುದು ಹೇಗೆಂದು ಕಲಿತಿರುತ್ತಾರೆ. ಅಷ್ಟೇ ಅಲ್ಲ “ಚಿಕ್ಕಂದಿನಲ್ಲಿ ಮಕ್ಕಳಿಗೆ ಕೆಲಸ ಮಾಡಬೇಕೆಂಬ ಹುಮ್ಮಸ್ಸು ಇರುವಾಗ ಅದನ್ನು ಕಡೆಗಣಿಸಿದರೆ ಕೆಲಸ ಮಾಡುವುದು ಅಷ್ಟೇನು ಪ್ರಾಮುಖ್ಯವಲ್ಲ ಎಂಬ ಭಾವನೆ ಅವರ ಮನಸ್ಸಿನಲ್ಲಿ ಬೇರೂರುತ್ತದೆ . . . ಬೇರೆಯವರು ತಮ್ಮ ಕೆಲಸ ಮಾಡಿಕೊಡಬೇಕೆಂದು ನಿರೀಕ್ಷಿಸುತ್ತಾರೆ” ಎನ್ನುತ್ತದೆ ಪೇರೆಂಟಿಂಗ್‌ ವಿದೌಟ್‌ ಬಾರ್ಡರ್ಸ್‌ ಎಂಬ ಪುಸ್ತಕ.

ಮನೆ ಕೆಲಸಗಳನ್ನು ಮಾಡುವ ಮಕ್ಕಳು ಬೇರೆಯವರಿಗೆ ಸಹಾಯ ಮಾಡಲು ಕಲಿಯುತ್ತಾರೆ, ಸ್ವಾರ್ಥಿಗಳಾಗಲ್ಲ. ಕುಟುಂಬದಲ್ಲಿ ತಮಗೂ ಒಂದು ಅಮೂಲ್ಯವಾದ ಸ್ಥಾನವಿದೆ ಎಂದವರು ಅರ್ಥಮಾಡಿಕೊಳ್ಳುತ್ತಾರೆ ಮತ್ತು ತಮ್ಮ ಪಾತ್ರವನ್ನು ಜವಾಬ್ದಾರಿಯುತವಾಗಿ ನಿರ್ವಹಿಸುತ್ತಾರೆ.

ತಮ್ಮ ತಪ್ಪುಗಳ ಜವಾಬ್ದಾರಿಯನ್ನು ತಾವೇ ತೆಗೆದುಕೊಳ್ಳಬೇಕೆಂದು ಕಲಿಸಿ.

ಬೈಬಲ್‌ ತತ್ವ: “ಬುದ್ಧಿವಾದವನ್ನು ಕೇಳು, ಉಪದೇಶವನ್ನಾಲಿಸು, ಮುಂದೆ ಜ್ಞಾನಿಯಾಗುವಿ.”—ಜ್ಞಾನೋಕ್ತಿ 19:20.

ನಿಮ್ಮ ಮಗು ಒಂದು ತಪ್ಪುಮಾಡಿದರೆ ಉದಾಹರಣೆಗೆ ಬೇರೆಯವರ ವಸ್ತುಗಳನ್ನು ಹಾಳುಮಾಡಿದರೆ, ಆ ತಪ್ಪನ್ನು ಮುಚ್ಚಿಡಬೇಡಿ. ಪರಿಣಾಮಗಳನ್ನು ಅವರೇ ಎದುರಿಸುವಂತೆ ಅಂದರೆ ಕ್ಷಮೆ ಕೇಳುವಂತೆ ಮತ್ತು ಸಾಧ್ಯವಾದರೆ ಪರಿಹಾರವನ್ನು ಸಹ ಕೊಡುವಂತೆ ಕಲಿಸಿ.

ತಮ್ಮ ತಪ್ಪುಗಳಿಗೆ ತಾವೇ ಜವಾಬ್ದಾರಿ ತೆಗೆದುಕೊಳ್ಳಲು ಕಲಿತ ಮಕ್ಕಳು. . .

  • ಪ್ರಾಮಾಣಿಕರಾಗಿರುತ್ತಾರೆ, ತಮ್ಮ ತಪ್ಪುಗಳನ್ನು ಮುಚ್ಚಿಡುವುದಿಲ್ಲ

  • ತಮ್ಮ ತಪ್ಪುಗಳಿಗೆ ಬೇರೆಯವರನ್ನು ದೂರುವುದಿಲ್ಲ

  • ನೆಪ ಹೇಳುವುದಿಲ್ಲ

  • ಸೂಕ್ತವಾದಾಗೆಲ್ಲಾ ಕ್ಷಮೆ ಕೇಳುತ್ತಾರೆ