ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸುಖೀ ಸಂಸಾರಕ್ಕೆ ಸಲಹೆಗಳು | ಮಕ್ಕಳ ಪಾಲನೆ

ಮಕ್ಕಳಿಗೆ ದೀನತೆಯನ್ನು ಕಲಿಸಿ

ಮಕ್ಕಳಿಗೆ ದೀನತೆಯನ್ನು ಕಲಿಸಿ

ಸಮಸ್ಯೆ

  • ನಿಮ್ಮ ಮಗನಿಗೆ ಬರೀ ಹತ್ತು ವರ್ಷ. ಅವನು ಅಹಂಕಾರದಿಂದ ವರ್ತಿಸುತ್ತಿದ್ದಾನೆ.

  • ಪ್ರತಿಯೊಬ್ಬರು ಅವನಿಗೆ ವಿಶೇಷ ಉಪಚಾರ ಮಾಡಬೇಕೆಂದು ಬಯಸುತ್ತಾನೆ.

‘ಅವನು ಯಾಕೆ ಈ ರೀತಿ ಮಾಡುತ್ತಿದ್ದಾನೆ?’ ಎಂದು ನಿಮಗೆ ಆಶ್ಚರ್ಯ ಆಗಬಹುದು. ‘ಅವನಿಗೆ ತನ್ನ ಬಗ್ಗೆ ಕೀಳರಿಮೆ ಬರಬಾರದು. ಹಾಗಂತ, ತಾನೇ ಎಲ್ಲರಿಗಿಂತ ಉತ್ತಮ ಎಂದೂ ಯೋಚಿಸಬಾರದು!’ ಅಂತ ನಿಮಗನಿಸುತ್ತೆ.

ನಿಮ್ಮ ಮಗ ಅಥವಾ ಮಗಳ ಸ್ವಗೌರವಕ್ಕೆ ಹಾನಿಯಾಗದೆ ದೀನತೆಯನ್ನು ಕಲಿಸಲು ಸಾಧ್ಯನಾ?

ನಿಮಗಿದು ತಿಳಿದಿರಲಿ

ಇತ್ತೀಚಿನ ವರ್ಷಗಳಲ್ಲಿ, ಮಕ್ಕಳ ಆಸೆಗಳನ್ನು ಪೂರೈಸುವುದರ ಕಡೆಗೆ ಗಮನಕೊಡುವಂತೆ ಹೆತ್ತವರನ್ನು ಉತ್ತೇಜಿಸಲಾಗಿದೆ. ಜೊತೆಗೆ, ಹೊಗಳುವಂಥ ಯಾವುದೇ ವಿಷಯಗಳನ್ನು ಮಕ್ಕಳು ಮಾಡಲಿಲ್ಲವಾದರೂ ಅವರನ್ನು ಉದಾರವಾಗಿ ಹೊಗಳುವಂತೆ, ಶಿಸ್ತು-ತಿದ್ದುಪಾಟನ್ನು ಕೊಡದಂತೆ ಪ್ರೋತ್ಸಾಹಿಸಲಾಗಿದೆ. ಮಕ್ಕಳನ್ನು ವಿಶೇಷ ರೀತಿಯಲ್ಲಿ ಉಪಚರಿಸುವಾಗ ಅವರಲ್ಲಿ ಸ್ವಗೌರವ ಬೆಳೆಯುತ್ತದೆ ಎಂದು ನೆನಸಲಾಗಿತ್ತು. ಆದರೆ ಅದರ ಪರಿಣಾಮ ಏನಾಯ್ತು? ಜನರೇಷನ್‌ ಮಿ ಎಂಬ ಪುಸ್ತಕ ಹೇಳುವುದು: “ಸ್ವಗೌರವವನ್ನು ಬೆಳೆಸುವ ಈ ಕಾರ್ಯಕ್ರಮವು ಹೊಂದಿಕೊಳ್ಳುವ, ಸಂತೋಷವಾಗಿರುವ ಮಕ್ಕಳನ್ನಲ್ಲ, ತಮ್ಮನ್ನು ಮಾತ್ರ ಮೆಚ್ಚಿಕೊಳ್ಳುವ ಮಕ್ಕಳ ಸೈನ್ಯವನ್ನೇ ಸೃಷ್ಟಿಸಿದೆ.”

ಮಿತಿಮೀರಿದ ಹೊಗಳಿಕೆಯನ್ನು ಪಡೆದು ಬೆಳೆದ ಮಕ್ಕಳಿಗೆ ನಿರಾಶೆ, ಟೀಕೆ, ಮತ್ತು ವೈಫಲ್ಯಗಳನ್ನು ಎದುರಿಸಲು ಸಾಧ್ಯವಾಗುತ್ತಿಲ್ಲ. ತಮ್ಮ ಆಸೆಗಳ ಮೇಲೆಯೇ ಗಮನ ಕೇಂದ್ರೀಕರಿಸಲು ಕಲಿತ ಕಾರಣ, ವಯಸ್ಕರಾದಾಗ ಬಾಳುವ ಬಂಧವನ್ನು ಬೆಳೆಸಲು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ, ಅನೇಕರು ಚಿಂತೆ ಮತ್ತು ಖಿನ್ನತೆಯಿಂದ ಬಳಲುತ್ತಿದ್ದಾರೆ.

ಮಕ್ಕಳನ್ನು ಯಾವಾಗಲೂ ಹೊಗಳುವುದರಿಂದಲ್ಲ, ಬದಲಿಗೆ ಅವರು ನಿಜವಾಗಿಯೂ ಏನನ್ನಾದರೂ ಸಾಧಿಸುವಾಗ ಅವರಲ್ಲಿ ನಿಜವಾದ ಸ್ವಗೌರವ ಬೆಳೆಯುತ್ತದೆ. ಹೀಗೆ ಸಾಧಿಸಲು ‘ನನ್ನಿಂದ ಆಗುತ್ತೆ’ ಅಂತ ನಂಬುವುದೊಂದೇ ಸಾಕಾಗುವುದಿಲ್ಲ. ಅವರು ನಿರ್ದಿಷ್ಟ ಕೌಶಲಗಳನ್ನು ಕಲಿಯಬೇಕು, ಅಭ್ಯಾಸ ಮಾಡಬೇಕು, ಮತ್ತು ಉತ್ತಮಗೊಳಿಸುತ್ತಾ ಹೋಗಬೇಕು. (ಜ್ಞಾನೋಕ್ತಿ 22:29) ಇತರರ ಅಗತ್ಯಗಳ ಬಗ್ಗೆಯೂ ಅವರು ಕಾಳಜಿವಹಿಸಬೇಕು. (1 ಕೊರಿಂಥ 10:24) ಇದಕ್ಕೆಲ್ಲ ದೀನತೆ ಅಗತ್ಯ.

ನೀವೇನು ಮಾಡಬಹುದು?

ಹೊಗಳುವಂಥ ಕೆಲಸ ಮಾಡಿದಾಗ ಮಾತ್ರ ಹೊಗಳಿ. ನಿಮ್ಮ ಮಗಳಿಗೆ ಪರೀಕ್ಷೆಯಲ್ಲಿ ಒಳ್ಳೇ ಅಂಕಗಳು ಸಿಕ್ಕಿದರೆ ಶಭಾಸ್‌ ಹೇಳಿ. ಅವಳಿಗೆ ಕಡಿಮೆ ಅಂಕ ಸಿಕ್ಕಿದರೆ ತಕ್ಷಣ ಶಿಕ್ಷಕಿಯ ಮೇಲೆ ತಪ್ಪು ಹೊರಿಸಬೇಡಿ, ಯಾಕೆಂದರೆ ಆಗ ಅವಳು ದೀನತೆ ಕಲಿಯುವುದಿಲ್ಲ. ಅದರ ಬದಲು, ಮುಂದಿನ ಸಲ ಹೆಚ್ಚು ಅಂಕಗಳನ್ನು ಪಡೆಯಲು ಏನು ಮಾಡಬಹುದೆಂದು ಅವಳಿಗೆ ಮನದಟ್ಟು ಮಾಡಿ. ನಿಜವಾದ ಸಾಧನೆ ಮಾಡಿದಾಗ ಮಾತ್ರ ಹೊಗಳಿ.

ಅಗತ್ಯವಿದ್ದಾಗ ತಿದ್ದುಪಾಟು ನೀಡಿ. ಇದರ ಅರ್ಥ ನಿಮ್ಮ ಮಕ್ಕಳ ಪ್ರತಿಯೊಂದು ತಪ್ಪನ್ನು ಎತ್ತಿ ತೋರಿಸಿ ತಿದ್ದುವುದಲ್ಲ. (ಕೊಲೊಸ್ಸೆ 3:21) ಆದರೆ ಅವರ ಗಂಭೀರ ತಪ್ಪುಗಳನ್ನು, ತಪ್ಪು ಮನೋಭಾವಗಳನ್ನು ತಿದ್ದಲೇಬೇಕು. ಇಲ್ಲವಾದರೆ, ಇವು ಅವರಲ್ಲಿ ಆಳವಾಗಿ ಬೇರೂರಬಹುದು.

ಉದಾಹರಣೆಗೆ, ನಿಮ್ಮ ಮಗ ಆಗಾಗ್ಗೆ ಕೊಚ್ಚಿಕೊಳ್ಳುತ್ತಿದ್ದಾನೆ ಎಂದು ನೆನಸಿ. ತಿದ್ದದಿದ್ದರೆ ಅವನು ಅಹಂಕಾರಿಯಾಗಬಹುದು, ಇತರರು ಅವನಿಂದ ದೂರ ಆಗಬಹುದು. ಆದ್ದರಿಂದ ಕೊಚ್ಚಿಕೊಂಡರೆ ಇತರರಿಗೆ ಅವನ ಬಗ್ಗೆ ಕೆಟ್ಟ ಅಭಿಪ್ರಾಯ ಬರುತ್ತದೆ ಮತ್ತು ಮುಜುಗರವಾಗುವ ಪರಿಸ್ಥಿತಿ ಬರುತ್ತದೆ ಎಂದು ವಿವರಿಸಿ. (ಜ್ಞಾನೋಕ್ತಿ 27:2) ತನ್ನ ಬಗ್ಗೆ ಸರಿಯಾದ ದೃಷ್ಟಿಕೋನವಿರುವ ವ್ಯಕ್ತಿಗೆ ತನ್ನ ಸಾಮರ್ಥ್ಯಗಳ ಬಗ್ಗೆ ಡಂಗುರ ಸಾರಬೇಕಂತ ಅನಿಸುವುದಿಲ್ಲ ಎಂದೂ ವಿವರಿಸಿ. ಹೀಗೆ ನೀವು ಪ್ರೀತಿಯಿಂದ ತಿದ್ದುವಾಗ ಅವನ ಸ್ವ-ಗೌರವಕ್ಕೆ ಪೆಟ್ಟಾಗದ ರೀತಿಯಲ್ಲಿ ದೀನತೆಯನ್ನು ಕಲಿಸಬಹುದು.—ಬೈಬಲ್‌ ತತ್ವ: ಮತ್ತಾಯ 23:12.

ಜೀವನದ ನಿಜತ್ವಗಳನ್ನು ಎದುರಿಸಲು ಕಲಿಸಿ. ನಿಮ್ಮ ಮಗುವಿನ ಎಲ್ಲ ಬಯಕೆಗಳನ್ನು ನೀವು ತೀರಿಸುತ್ತಾ ಹೋದರೆ ಆ ಮಗು ತಾನು ಬಯಸುವುದೆಲ್ಲ ತನಗೆ ಸಿಗುತ್ತೆ ಅಂತ ಅಂದುಕೊಂಡು ಬಿಡುತ್ತದೆ. ನಿಮ್ಮ ಮಗು ಕೇಳಿದ ಯಾವುದನ್ನಾದರೂ ಕೊಡಿಸಲು ನಿಮ್ಮ ಹತ್ತಿರ ಹಣ ಇಲ್ಲವಾದರೆ, ಹಾಸಿಗೆ ಇದ್ದಷ್ಟೇ ಕಾಲು ಚಾಚುವುದು ಏಕೆ ಅಗತ್ಯ ಎಂದು ವಿವರಿಸಿ. ಕುಟುಂಬದ ಪ್ರವಾಸವನ್ನು ರದ್ದು ಮಾಡಬೇಕಾಗಿ ಬಂದರೆ, ಇಂಥ ನಿರಾಶೆಗಳು ಜೀವನದ ಭಾಗವಾಗಿವೆ ಎಂದು ವಿವರಿಸಿ. ಇಂಥ ನಿರಾಶೆಯಾದಾಗ ನೀವು ಹೇಗೆ ನಿಭಾಯಿಸುತ್ತೀರಿ ಎಂದು ಚರ್ಚಿಸಿ. ಮಕ್ಕಳಿಗೆ ಯಾವುದೇ ಕಷ್ಟ ಬರದಂತೆ ಕಾಪಾಡುವ ಬದಲು ವಯಸ್ಕರಾಗುವಾಗ ಬರುವ ಸವಾಲುಗಳನ್ನು ಎದುರಿಸಲು ಈಗಲೇ ಅವರನ್ನು ಸಿದ್ಧಮಾಡಿ.—ಬೈಬಲ್‌ ತತ್ವ: ಜ್ಞಾನೋಕ್ತಿ 29:21.

ಕೊಡುವುದನ್ನು ಕಲಿಸಿ. ‘ತೆಗೆದುಕೊಳ್ಳುವುದಕ್ಕಿಂತಲೂ ಕೊಡುವುದರಲ್ಲಿ ಹೆಚ್ಚಿನ ಸಂತೋಷವಿದೆ’ ಎಂದು ನಿಮ್ಮ ಮಕ್ಕಳಿಗೆ ಮನಗಾಣಿಸಿ. (ಅಪೊಸ್ತಲರ ಕಾರ್ಯಗಳು 20:35) ಹೇಗೆ? ಶಾಪಿಂಗ್‌, ಸಾರಿಗೆ, ದುರಸ್ತಿ ಕೆಲಸದಂಥ ಸಹಾಯದ ಅಗತ್ಯವಿರುವ ಜನರ ಪಟ್ಟಿಯನ್ನು ನೀವೂ ನಿಮ್ಮ ಮಗ/ಮಗಳು ಒಟ್ಟಾಗಿ ತಯಾರಿಸಬಹುದು. ನಂತರ, ನೀವು ಅವರಲ್ಲಿ ಕೆಲವರಿಗೆ ಸಹಾಯ ಮಾಡುವಾಗ ನಿಮ್ಮ ಜೊತೆಯಲ್ಲಿ ಮಕ್ಕಳನ್ನು ಕರಕೊಂಡು ಹೋಗಿ. ಇತರರ ಅಗತ್ಯಗಳನ್ನು ಪೂರೈಸುವಾಗ ನಿಮಗೆ ಸಿಗುವ ಸಂತೋಷ ಮತ್ತು ಸಂತೃಪ್ತಿಯನ್ನು ನೋಡಲು ನಿಮ್ಮ ಮಗುವಿಗೆ ಅವಕಾಶ ಕೊಡಿ. ಹೀಗೆ ಮಾಡುವಾಗ ನೀವು ಅತ್ಯುತ್ತಮ ರೀತಿಯಲ್ಲಿ ಅಂದರೆ ನಿಮ್ಮ ಮಾದರಿಯ ಮೂಲಕ ಮಕ್ಕಳಿಗೆ ದೀನತೆಯನ್ನು ಕಲಿಸುವಿರಿ. —ಬೈಬಲ್‌ ತತ್ವ: ಲೂಕ 6:38.

ಹೆಚ್ಚಿನ ಮಾಹಿತಿಗಾಗಿ, ಈ ಕೋಡ್‌ ಸ್ಕ್ಯಾನ್‌ ಮಾಡಿ ಅಥವಾ ನಮ್ಮ ವೆಬ್‌ಸೈಟ್‌ jw.orgಗೆ ಭೇಟಿ ನೀಡಿ ಮತ್ತು ಜನವರಿ 2013​ರ “‘ನಾ ಮುಂದು’ ಪ್ರಪಂಚದಲ್ಲಿ ಪರೋಪಕಾರಿ ಮಕ್ಕಳು” ಎಂಬ ಎಚ್ಚರ! ಪತ್ರಿಕೆಗಾಗಿ ಹುಡುಕಿ. ಪ್ರಕಾಶನಗಳು >ಪತ್ರಿಕೆಗಳು ಎಂಬಲ್ಲಿ ನೋಡಿ.