ಮಾಹಿತಿ ಇರುವಲ್ಲಿ ಹೋಗಲು

ಯೆಹೋವನ ಸಾಕ್ಷಿಗಳು ಅವರದ್ದೇ ಆದ ಬೈಬಲನ್ನು ಬಳಸುತ್ತಾರಾ?

ಯೆಹೋವನ ಸಾಕ್ಷಿಗಳು ಅವರದ್ದೇ ಆದ ಬೈಬಲನ್ನು ಬಳಸುತ್ತಾರಾ?

 ಯೆಹೋವನ ಸಾಕ್ಷಿಗಳು ಅಧ್ಯಯನ ಮಾಡುವಾಗ ಅನೇಕ ಬೈಬಲ್‌ ಭಾಷಾಂತರಗಳನ್ನು ಬಳಸಿದ್ದಾರೆ. ಯಾವೆಲ್ಲ ಭಾಷೆಯಲ್ಲಿ ನೂತನ ಲೋಕ ಭಾಷಾಂತರವಿದೆಯೋ ಆ ಭಾಷಾ ಜನರು ಅದನ್ನು ಬಳಸಲು ಇಷ್ಟಪಡುತ್ತಾರೆ. ಯಾಕೆಂದರೆ ಅದರಲ್ಲಿ ದೇವರ ಹೆಸರಿದೆ, ವಿಷಯಗಳು ನಿಖರವಾಗಿ ಸ್ವಲ್ಪವೂ ತಪ್ಪಿಲ್ಲದೇ ಸ್ಪಷ್ಟವಾಗಿ ಇವೆ.

  •   ದೇವರ ಹೆಸರು. ಕೆಲವು ಪ್ರಕಾಶಕರು ಬೈಬಲಿನ ನಿಜವಾದ ಲೇಖಕನಿಗೆ ಸಲ್ಲಬೇಕಾದ ಗೌರವವನ್ನು ಸಲ್ಲಿಸಲಿಲ್ಲ. ಉದಾಹರಣೆಗೆ, ಒಂದು ಬೈಬಲ್‌ ಭಾಷಾಂತರದಲ್ಲಿ ಆ ಬೈಬಲನ್ನು ಸಿದ್ಧಪಡಿಸುವುದರಲ್ಲಿ ನೆರವಾದ ಸುಮಾರು 70ಜನರ ಹೆಸರುಗಳನ್ನು ಕೊಟ್ಟಿದ್ದಾರೆ. ಆದರೆ ಬೈಬಲಿನ ಮುಖ್ಯ ಲೇಖಕನಾದ ಯೆಹೋವ ದೇವರ ಹೆಸರನ್ನೇ ಅದರಿಂದ ತೆಗೆದುಹಾಕಿದ್ದಾರೆ! ಇಡೀ ಬೈಬಲಿನಿಂದನೇ ತೆಗೆದು ಗಾಳಿಗೆ ತೂರಿಬಿಟ್ಟಿದ್ದಾರೆ!

     ಆದರೆ ನೂತನ ಲೋಕ ಭಾಷಾಂತರವನ್ನು ತೆಗೆದುಕೊಂಡರೆ ದೇವರ ಹೆಸರು ಮೂಲ ಪ್ರತಿಗಳಲ್ಲಿ ಎಲ್ಲೆಲ್ಲಿ ಇತ್ತೋ ಅಲ್ಲೆಲ್ಲ ಅಂದರೆ ಸಾವಿರಾರು ಕಡೆಗಳಲ್ಲಿ ದೇವರ ಹೆಸರಿದೆ. ಇದನ್ನು ಹೊರತಂದಿರುವ ಸಮಿತಿಯ ಜನರ ಹೆಸರನ್ನು ಎಲ್ಲಿಯೂ ಕೊಡಲಾಗಿಲ್ಲ.

  •   ನಿಖರತೆ. ಎಲ್ಲ ಬೈಬಲ್‌ ಭಾಷಾಂತರಕಾರರು ಬೈಬಲಿನ ಸಂದೇಶವನ್ನು ಮೂಲ ಪ್ರತಿಯಲ್ಲಿ ಇದ್ದ ಹಾಗೇ ಸರಿಯಾಗಿ ಅನುವಾದಿಸಿದ್ದಾರೆ ಎಂದು ಹೇಳಲು ಆಗಲ್ಲ. ಉದಾಹರಣೆಗೆ, ಒಂದು ಬೈಬಲ್‌ನಲ್ಲಿ ಮತ್ತಾಯ 7:13ನ್ನು ಹೀಗೆ ಭಾಷಾಂತರಿಸಿದೆ: “ಇಕ್ಕಟ್ಟಾದ ಬಾಗಲಿನಿಂದ ಹೋಗಿ, ಯಾಕೆಂದರೆ ನರಕಕ್ಕೆ ಹೋಗುವ ದಾರಿ ತುಂಬ ವಿಶಾಲವಾಗಿದೆ ಮತ್ತು ಅದರಲ್ಲಿ ಹೋಗುವುದು ತುಂಬ ಸುಲಭ.” ಆದರೆ ಮೂಲ ಭಾಷೆಯಲ್ಲಿ “ನಾಶನ” ಎಂದು ಹೇಳಿದೆ ಹೊರತು “ನರಕ” ಎಂದು ಹೇಳಿಲ್ಲ. ಬಹುಶಃ ಆ ಭಾಷಾಂತರಕಾರರು ಕೆಟ್ಟವರೆಲ್ಲ ನರಕದಲ್ಲಿ ಚಿತ್ರಹಿಂಸೆ ಅನುಭವಿಸುತ್ತಾರೆಂದು ನಂಬಿದ್ದರಿಂದ “ನರಕ” ಎಂದು ಅನುವಾದ ಮಾಡಿರಬೇಕು. ಆದರೆ ಬೈಬಲಿನಲ್ಲಿ ನರಕ ಇದೆ ಎಂದು ಎಲ್ಲೂ ಹೇಳಿಲ್ಲ. ಹಾಗಾಗಿ ನೂತನ ಲೋಕ ಭಾಷಾಂತರದಲ್ಲಿ ಆ ವಚನವನ್ನು ನಿಖರವಾಗಿ ಹೀಗೆ ಅನುವಾದಿಸಿದೆ: “ಇಕ್ಕಟ್ಟಾದ ಬಾಗಿಲಿನ ಮೂಲಕ ಒಳಗೆ ಹೋಗಿರಿ; ಏಕೆಂದರೆ ನಾಶನಕ್ಕೆ ನಡಿಸುವ ದಾರಿಯು ಅಗಲವಾಗಿಯೂ ವಿಶಾಲವಾಗಿಯೂ ಇದೆ.”

  •   ಸ್ಪಷ್ಟತೆ. ಒಳ್ಳೇ ಭಾಷಾಂತರ ಕೇವಲ ನಿಖರವಾಗಿದ್ದರೆ ಸಾಕಾಗಲ್ಲ, ಸ್ಪಷ್ಟವಾಗಿಯೂ ಇರಬೇಕು. ಓದಿದ ತಕ್ಷಣ ಅರ್ಥ ಆಗಬೇಕು. ಉದಾಹರಣೆಗೆ ಗಮನಿಸಿ, ರೋಮನ್ನರಿಗೆ 12:11ರಲ್ಲಿ ಅಪೊಸ್ತಲ ಪೌಲ “ಆತ್ಮ ಕುದಿಯಲಿ” ಎಂಬ ಗ್ರೀಕ್‌ ಭಾಷೆಯ ನುಡಿಗಟ್ಟನ್ನು ಬಳಸಿದ್ದಾನೆ. ಕನ್ನಡದಲ್ಲಿ ಭಾಷಾಂತರ ಮಾಡುವಾಗ ಇದನ್ನೇ ಬಳಸಿದರೆ ಏನು ಅರ್ಥ ಆಗುತ್ತೆ! ಹಾಗಾಗಿ ನೂತನ ಲೋಕ ಭಾಷಾಂತರ ಎಲ್ಲರಿಗೆ ಅರ್ಥವಾಗಲಿ ಎಂದು “ಪವಿತ್ರಾತ್ಮದಿಂದ ಪ್ರಜ್ವಲಿಸಿರಿ” ಎಂದು ಅನುವಾದಿಸಿದೆ.

 ನೂತನ ಲೋಕ ಭಾಷಾಂತರದಲ್ಲಿ ದೇವರ ಹೆಸರಿದೆ, ನಿಖರವಾಗಿದೆ ಹಾಗೂ ಸ್ಪಷ್ಟವಾಗಿದೆ. ಇದಿಷ್ಟೇ ಅಲ್ಲ, ಇನ್ನೊಂದು ವಿಶೇಷತೆ ಕೂಡ ಇದೆ. ಏನಂದರೆ ಇದನ್ನು ಯಾರೂ ದುಡ್ಡಿಗಾಗಿ ಮಾರಾಟ ಮಾಡಲ್ಲ. ಹಾಗಾಗಿ ಇಂದು ಲಕ್ಷಾಂತರ ಜನರು ಬೈಬಲನ್ನು ಓದುವಂತಾಗಿದೆ ಅದೂ ಅವರ ಸ್ವಂತ ಭಾಷೆಯಲ್ಲಿ. ಬೈಬಲನ್ನು ಖರೀದಿಸಲು ಹಣವಿಲ್ಲದ ಜನರು ಕೂಡ ಈ ಬೈಬಲನ್ನು ಪಡೆದುಕೊಳ್ಳುವಂತಾಗಿದೆ.