ಮಾಹಿತಿ ಇರುವಲ್ಲಿ ಹೋಗಲು

ಬದುಕು ಬದಲಾದ ವಿಧ

“ನಾನು ಬಯಸಿದ್ದೆಲ್ಲ ಸಿಕ್ತು ಅಂತ ಅಂದುಕೊಂಡಿದ್ದೆ”

“ನಾನು ಬಯಸಿದ್ದೆಲ್ಲ ಸಿಕ್ತು ಅಂತ ಅಂದುಕೊಂಡಿದ್ದೆ”
  • ಜನನ: 1962

  • ದೇಶ: ಕೆನಡ

  • ಹಿಂದೆ: ಅನೈತಿಕ ಜೀವನ

ಹಿನ್ನೆಲೆ

 ನಾನು ಹುಟ್ಟಿದ್ದು ಕೆನಡದ ಕ್ವಿಬೆಕ್‌ನ ಡೊಡ್ಡ ನಗರವಾದ ಮಾಂಟ್ರಿಯಾಲ್‌ನಲ್ಲಿ. ಅಲ್ಲಿನ ರೋಜ್ಮಾಂಟ್‌ನಲ್ಲಿ ನಾನು, ನನ್ನ ಅಕ್ಕ ಮತ್ತು ಇಬ್ಬರು ತಮ್ಮಂದಿರು ನಮ್ಮ ಪ್ರೀತಿಯ ಹೆತ್ತವರ ಪಾಲನೆಯಲ್ಲಿ ಬೆಳೆದೆವು. ನಾವು ಶಾಂತವಾದ ವಾತಾವರಣದಲ್ಲಿ ನೆಮ್ಮದಿಯ ಜೀವನ ಮಾಡಿದೆವು.

 ನನಗೆ ಚಿಕ್ಕ ವಯಸ್ಸಿನಿಂದಲೇ ಬೈಬಲ್‌ನಲ್ಲಿ ಆಸಕ್ತಿ ಇತ್ತು. ನಾನು 12 ವರ್ಷದವನಾಗಿದ್ದಾಗ ಹೊಸ ಒಡಂಬಡಿಕೆಯಲ್ಲಿ ಯೇಸುವಿನ ಜೀವನದ ಬಗ್ಗೆ ಓದಿ ಆನಂದಿಸಿದ್ದು ನನಗಿನ್ನೂ ನೆನಪಿದೆ. ಬೇರೆಯವರ ಕಡೆಗೆ ಅವನಿಗಿದ್ದ ಪ್ರೀತಿ ಮತ್ತು ಅನುಕಂಪವನ್ನು ನೋಡಿ ನಾನೂ ಅವನ ಹಾಗೆ ಆಗಬೇಕು ಅಂತ ಅನಿಸಿತ್ತು. ಆದರೆ ದುಃಖಕರವಾಗಿ ನಾನು ದೊಡ್ಡವನಾಗುತ್ತಾ ಹೋದಂತೆ ಕೆಟ್ಟ ಸಹವಾಸದಲ್ಲಿ ಬಿದ್ದಿದ್ದರಿಂದ ಆ ಗುರಿ ಕಣ್ಮರೆಯಾಗಿ ಹೋಯಿತು.

 ನನ್ನ ತಂದೆ ಸ್ಯಾಕ್ಸಫೋನ್‌ ಎಂಬ ವಾದ್ಯವನ್ನು ನುಡಿಸುತ್ತಿದ್ದರು. ಅವರು ನನಗೆ ತಮ್ಮ ಸ್ಯಾಕ್ಸಫೋನನ್ನು ಕೊಟ್ಟಿದ್ದಲ್ಲದೆ ಸಂಗೀತದ ಕಡೆಗೆ ಪ್ರೀತಿ ಮೂಡಿಸಿದರು. ಇದರಿಂದ ಸಂಗೀತವೇ ನನ್ನ ಜೀವನವಾಯಿತು. ಸಂಗೀತವನ್ನು ಎಷ್ಟು ಇಷ್ಟಪಡುತ್ತಿದ್ದೆ ಅಂದರೆ ಗಿಟಾರ್‌ ಬಾರಿಸೋದನ್ನೂ ಬೇಗ ಕಲಿತುಬಿಟ್ಟೆ. ಸ್ವಲ್ಪ ಸಮಯದಲ್ಲೇ ನಾನು ಕೆಲವು ಸ್ನೇಹಿತರ ಜೊತೆ ಕೂಡಿ ಒಂದು ರಾಕ್‌ ಬ್ಯಾಂಡನ್ನು ನಿರ್ಮಿಸಿದೆ. ಹಲವಾರು ಕಡೆ ನಾವು ನಮ್ಮ ಸಂಗೀತವನ್ನು ಪ್ರದರ್ಶಿಸಿದೆವು. ಸಂಗೀತ ಉದ್ಯಮದ ಕೆಲವು ಪ್ರಖ್ಯಾತ ನಿರ್ಮಾಪಕರು ನನ್ನನ್ನು ಗುರುತಿಸಿ, ನನ್ನೊಂದಿಗೆ ಒಪ್ಪಂದ ಮಾಡಲು ಮುಂದೆ ಬಂದರು. ನಾನು ಒಂದು ದೊಡ್ಡ ರೆಕಾರ್ಡಿಂಗ್‌ ಕಂಪನಿಯ ಜೊತೆ ಒಪ್ಪಂದ ಮಾಡಿಕೊಂಡೆ. ನನ್ನ ಸಂಗೀತ ತುಂಬ ಪ್ರಸಿದ್ಧವಾಯಿತು. ಕ್ವಿಬೆಕ್‌ನ ರೇಡಿಯೋದಲ್ಲೂ ನನ್ನ ಸಂಗೀತ ಬರುತ್ತಿತ್ತು.

 ನಾನು ಬಯಸಿದ್ದೆಲ್ಲ ಸಿಕ್ಕಿತ್ತು. ಯೌವನ ಇತ್ತು, ಪ್ರಸಿದ್ಧಿ ಇತ್ತು. ನನಗೆ ಇಷ್ಟ ಇರೋ ಕೆಲಸ ಮಾಡ್ತಾ ಬೇಕಾದಷ್ಟು ಹಣ ಮಾಡುತ್ತಿದ್ದೆ. ಹಗಲಲ್ಲಿ, ಜಿಮ್‌ಗೆ ಹೋಗುತ್ತಿದ್ದೆ, ಸಂದರ್ಶನ ಕೊಡುತ್ತಿದೆ, ಜನರಿಗೆ ಆಟೊಗ್ರಾಫ್‌ ಕೊಡಲು ಹೋಗುತ್ತಿದ್ದೆ ಮತ್ತು ಟಿ.ವಿ. ಕಾರ್ಯಕ್ರಮಗಳನ್ನೂ ಮಾಡುತ್ತಿದ್ದೆ. ರಾತ್ರಿಯಲ್ಲಿ, ಸಂಗೀತ ಪ್ರದರ್ಶನ ಮಾಡುತ್ತಿದ್ದೆ ಮತ್ತು ಪಾರ್ಟಿಗಳಿಗೆ ಹೋಗುತ್ತಿದ್ದೆ. ಅಭಿಮಾನಿಗಳನ್ನು ಮೆಚ್ಚಿಸುವ ಒತ್ತಡವನ್ನು ನಿಭಾಯಿಸಲಿಕ್ಕಾಗಿ ನಾನು ಚಿಕ್ಕ ಪ್ರಾಯದಲ್ಲೇ ಕುಡಿಯಲು ಶುರು ಮಾಡಿದೆ. ನಿಧಾನವಾಗಿ ಡ್ರಗ್ಸ್‌ ತೆಗೆದುಕೊಳ್ಳುವ ಚಟಕ್ಕೆ ಬಿದ್ದೆ. ಅಷ್ಟೇ ಅಲ್ಲ, ಹಿಂದೆ ಮುಂದೆ ಯೋಚಿಸದೆ ಇಷ್ಟಬಂದ ಹಾಗೆ ಇರುತ್ತಿದ್ದೆ ಮತ್ತು ಅನೈತಿಕ ಜೀವನ ನಡೆಸುತ್ತಿದ್ದೆ.

 ಕೆಲವರು ನನ್ನ ಜೀವನಶೈಲಿ ನೋಡಿ ಹೊಟ್ಟೆಕಿಚ್ಚು ಪಡುತ್ತಿದ್ದರು. ಯಾಕೆಂದರೆ ನಾನು ಅಷ್ಟು ಖುಷಿಯಾಗಿ ಕಾಣುತ್ತಿದ್ದೆ. ಆದರೆ ಒಳಗೊಳಗೆ ಖಾಲಿ-ಖಾಲಿ ಅನಿಸುತ್ತಿತ್ತು. ಒಬ್ಬನೇ ಇದ್ದಾಗಂತೂ ಈ ಭಾವನೆ ನನ್ನನ್ನ ಕಿತ್ತು ತಿನ್ನುತ್ತಿತ್ತು. ಬೇಸರ, ಚಿಂತೆ ನನ್ನನ್ನು ಕಾಡುತ್ತಿತ್ತು. ನಾನು ಯಶಸ್ಸಿನ ತುತ್ತತುದಿಯಲ್ಲಿದ್ದಾಗ ನನ್ನ ಇಬ್ಬರು ನಿರ್ಮಾಪಕರು ಏಡ್ಸ್‌ ರೋಗದಿಂದ ತೀರಿಹೋದರು. ಆಗ ನಾನು ತುಂಬ ದಿಗಿಲುಗೊಂಡೆ! ನನಗೆ ಸಂಗೀತ ಪ್ರಾಣವಾಗಿತ್ತು ನಿಜ, ಆದರೆ ಅದರಿಂದಾಗಿ ನಾನು ನಡೆಸುತ್ತಿದ್ದ ಜೀವನ ರೀತಿಯನ್ನು ನೆನಸಿದರೇ ಅಸಹ್ಯ ಅನಿಸಿತು.

ನನ್ನ ಬದುಕನ್ನೇ ಬದಲಾಯಿಸಿತು ಬೈಬಲ್‌

 ನನಗೆ ಇಷ್ಟೊಂದು ಯಶಸ್ಸು ಸಿಕ್ಕಿದ್ದರೂ, ಲೋಕದ ಪರಿಸ್ಥಿತಿ ತುಂಬ ಹಾಳಾಗಿದೆ ಅಂತ ಅನಿಸಿತ್ತು. ಇಷ್ಟೊಂದು ಅನ್ಯಾಯ ಯಾಕಿದೆ? ದೇವರು ಯಾಕೆ ಕೈಕಟ್ಟಿಕೊಂಡು ಸುಮ್ಮನಿದ್ದಾನೆ ಅಂತ ಯೋಚಿಸುತ್ತಿದ್ದೆ. ಉತ್ತರಕ್ಕೋಸ್ಕರ ನಾನು ದೇವರಿಗೆ ಎಷ್ಟೋ ಸಾರಿ ಪ್ರಾರ್ಥಿಸಿದ್ದೆ. ಸಂಗೀತ ಕಾರ್ಯಕ್ರಮದಿಂದ ಬಿಡುವು ಸಿಕ್ಕಿದಾಗ ನಾನು ಪುನಃ ಬೈಬಲ್‌ ಓದಲು ಶುರು ಮಾಡಿದೆ. ಓದಿದ್ದರಲ್ಲಿ ಎಷ್ಟೋ ವಿಷಯ ಅರ್ಥ ಆಗದಿದ್ದರೂ, ಲೋಕದ ಅಂತ್ಯ ಹತ್ತಿರ ಇರಬೇಕು ಅಂತ ಗೊತ್ತಾಯಿತು.

 ಯೇಸು ಒಮ್ಮೆ 40 ದಿನ ಉಪವಾಸ ಮಾಡಿದ್ದನು ಎಂದು ಬೈಬಲ್‌ ಓದುವಾಗ ತಿಳಿದುಬಂತು. (ಮತ್ತಾಯ 4:1, 2) ನಾನೂ ಅದೇ ಥರ ಮಾಡಿದರೆ ದೇವರು ನನಗೆ ಕಾಣಿಸಿಕೊಳ್ಳಬಹುದು ಅಂತ ಅಂದುಕೊಂಡೆ. ಹಾಗಾಗಿ ಉಪವಾಸ ಶುರು ಮಾಡುವುದಕ್ಕೋಸ್ಕರ ಒಂದು ದಿನ ಆಯ್ಕೆ ಮಾಡಿದೆ. ಉಪವಾಸ ಶುರು ಮಾಡುವ ಎರಡು ವಾರ ಮುಂಚೆ ಇಬ್ಬರು ಯೆಹೋವನ ಸಾಕ್ಷಿಗಳು ನನ್ನ ಮನೆಗೆ ಬಂದರು. ನಾನು ಕೂಡಲೇ ಅವರನ್ನು ಒಳಗೆ ಕರೆದೆ. ಆ ಇಬ್ಬರಲ್ಲಿ ಝಾಕ್‌ ಎಂಬವರಿಗೆ, “ನಾವು ಈ ಲೋಕದ ಕಡೆ ದಿವಸಗಳಲ್ಲಿ ಜೀವಿಸುತ್ತಿದ್ದೀವಿ ಅಂತ ಖಂಡಿತವಾಗಿ ಹೇಗೆ ಹೇಳಬಹುದು?” ಅಂತ ಕೇಳಿದೆ. ಉತ್ತರಕ್ಕಾಗಿ ಅವರು ತಮ್ಮ ಬೈಬಲನ್ನು ತೆರೆದು 2 ತಿಮೊಥೆಯ 3:1-5ನ್ನು ಓದಿದರು. ಅದಾದ ಮೇಲೆ ನಾನು ಅವರಿಗೆ ಪ್ರಶ್ನೆ ಮೇಲೆ ಪ್ರಶ್ನೆ ಕೇಳಿದೆ. ಅವರು ನನಗೆ, ನಂಬಬಹುದಾದ ತೃಪ್ತಿಕರ ಉತ್ತರಗಳನ್ನು ತಿಳಿಸಿದರು. ಅವುಗಳನ್ನು ಬೈಬಲಿನಿಂದಲೇ ತೋರಿಸಿದ್ದರು. ಉಪವಾಸ ಮಾಡುವ ಅವಶ್ಯಕತೆ ಏನಿಲ್ಲ ಎಂದು ಕೆಲವು ಭೇಟಿಗಳಾದ ಮೇಲೆ ನನಗೆ ಅರ್ಥ ಆಯಿತು.

 ಸಾಕ್ಷಿಗಳ ಜೊತೆಗೆ ಪ್ರತಿ ವಾರ ಬೈಬಲ್‌ ಕಲಿಯಲು ಶುರು ಮಾಡಿದೆ. ಸ್ವಲ್ಪ ಸಮಯವಾದ ಮೇಲೆ, ನಾನು ನನ್ನ ಉದ್ದ ಕೂದಲನ್ನು ಕತ್ತರಿಸಿದೆ. ಹತ್ತಿರದ ರಾಜ್ಯ ಸಭಾಗೃಹದಲ್ಲಿ ಎಲ್ಲಾ ಕೂಟಗಳಿಗೆ ಹಾಜರಾಗಲು ಶುರು ಮಾಡಿದೆ. ಅಲ್ಲಿ ನನ್ನನ್ನು ಪ್ರೀತಿಯಿಂದ ಆಹ್ವಾನಿಸಿದ್ದನ್ನು ನೋಡಿ ಕಡೆಗೂ ಸತ್ಯ ಸಿಕ್ಕಿತು ಅಂತ ಇನ್ನಷ್ಟು ಮನವರಿಕೆ ಆಯಿತು.

 ಬೈಬಲಿಂದ ಕಲಿತದ್ದರ ಪ್ರಕಾರ ಜೀವಿಸಬೇಕೆಂದರೆ ನಾನು ದೊಡ್ಡ-ದೊಡ್ಡ ಬದಲಾವಣೆ ಮಾಡಬೇಕಿತ್ತು. ಡ್ರಗ್ಸ್‌ ತೆಗೆದುಕೊಳ್ಳೋದನ್ನು ಮತ್ತು ಅನೈತಿಕ ಜೀವನ ರೀತಿಯನ್ನು ಬಿಡಬೇಕಿತ್ತು. ನಾನು ಯಾವಾಗಲೂ ನನ್ನ ಬಗ್ಗೆಯೇ ಯೋಚಿಸುವುದನ್ನು ಬಿಟ್ಟು ಇತರರ ಬಗ್ಗೆ ಕಾಳಜಿ ವಹಿಸಲು ಕಲಿಯಬೇಕಿತ್ತು. ನಾನೊಬ್ಬನೇ ನನ್ನ ಇಬ್ಬರು ಮಕ್ಕಳ ಭಾವನಾತ್ಮಕ ಮತ್ತು ಆಧ್ಯಾತ್ಮಿಕ ಅಗತ್ಯಗಳನ್ನು ನೋಡಿಕೊಳ್ಳಲು ಕಲಿಯಬೇಕಿತ್ತು. ಹಾಗಾಗಿ ನಾನು ಸಂಗೀತ ಕೆಲಸವನ್ನು ಬಿಟ್ಟು ಒಂದು ಕಾರ್ಖಾನೆಯಲ್ಲಿ ಕಡಿಮೆ ಸಂಬಳಕ್ಕೆ ಕೆಲಸಕ್ಕೆ ಸೇರಿದೆ.

 ಈ ಬದಲಾವಣೆಗಳನ್ನು ಮಾಡೋದು ಸುಲಭ ಆಗಿರಲಿಲ್ಲ. ನಾನು ಡ್ರಗ್ಸ್‌ ತೆಗೆದುಕೊಳ್ಳೋದನ್ನು ಬಿಡಲು ಪ್ರಯತ್ನಿಸಿದಾಗ ಆರಂಭದಲ್ಲಿ ನನ್ನ ದೇಹ ಈ ಬದಲಾವಣೆಗೆ ಹೊಂದಿಕೊಳ್ಳುವುದು ಕಷ್ಟವಾಯಿತು. ಆದ್ದರಿಂದ ಕೆಲವೊಮ್ಮೆ ನಾನು ಪುನಃ ಡ್ರಗ್ಸ್‌ ತೆಗೆದುಕೊಂಡಿದ್ದೂ ಇದೆ. (ರೋಮನ್ನರಿಗೆ 7:19, 21-24) ಅನೈತಿಕ ಜೀವನವನ್ನು ಬಿಟ್ಟಬಿಡುವುದಂತೂ ದೊಡ್ಡ ಸವಾಲೇ ಆಗಿತ್ತು. ನನ್ನ ಹೊಸ ಕೆಲಸದಲ್ಲಿ ತುಂಬ ಸುಸ್ತಾಗುತ್ತಿತ್ತು. ಸಂಬಳ ಕೂಡ ಕಡಿಮೆಯಾಗಿದ್ದರಿಂದ ನಿರುತ್ತೇಜನ ಆಗುತ್ತಿತ್ತು. ನಾನು ಸಂಗೀತಗಾರನಾಗಿದ್ದಾಗ ಎರಡೇ ಗಂಟೆಗಳಲ್ಲಿ ಗಳಿಸುತ್ತಿದ್ದ ಹಣವನ್ನು ಸಂಪಾದಿಸಲು ನನಗೆ ಮೂರು ತಿಂಗಳು ಹಿಡಿಯಿತು.

 ಈ ಕಷ್ಟಕರ ಬದಲಾವಣೆಗಳನ್ನು ಮಾಡಿಕೊಳ್ಳುವ ಪ್ರಯತ್ನ ಬಿಡದಿರಲು ಪ್ರಾರ್ಥನೆ ನನಗೆ ಸಹಾಯ ಮಾಡಿತು. ಪ್ರತಿದಿನ ಬೈಬಲ್‌ ಓದುವುದು ಸಹ ತುಂಬ ಅವಶ್ಯವಾಗಿದೆ ಎಂದು ತಿಳಿದುಬಂತು. ಕೆಲವು ಬೈಬಲ್‌ ವಚನಗಳು ನನಗೆ ಪ್ರೋತ್ಸಾಹ ನೀಡಿದವು. ಅದರಲ್ಲೊಂದು 2 ಕೊರಿಂಥ 7:1. ಈ ವಚನವು ಕ್ರೈಸ್ತರು ತಮ್ಮನ್ನು ‘ಶರೀರ ಮತ್ತು ಮನಸ್ಸಿನ ಪ್ರತಿಯೊಂದು ಕಲ್ಮಶದಿಂದ ಶುಚಿಮಾಡಿಕೊಳ್ಳುವಂತೆ’ ಪ್ರಚೋದಿಸುತ್ತದೆ. ಇನ್ನೊಂದು ವಚನ ಫಿಲಿಪ್ಪಿ 4:13. ಅದು, ನಾನು ನನ್ನ ಕೆಟ್ಟ ಚಟಗಳನ್ನು ಬಿಟ್ಟುಬಿಡಲು ಸಾಧ್ಯ ಅನ್ನುವ ಆಶ್ವಾಸನೆ ಕೊಟ್ಟಿತು. ಅದು ಹೇಳೋದು: “ನನಗೆ ಶಕ್ತಿಯನ್ನು ಕೊಡುವಾತನ ಮೂಲಕ ನಾನು ಎಲ್ಲವನ್ನು ಮಾಡಲು ಶಕ್ತನಾಗಿದ್ದೇನೆ.” ಯೆಹೋವ ದೇವರು ನನ್ನ ಪ್ರಾರ್ಥನೆಗಳಿಗೆ ಉತ್ತರ ಕೊಟ್ಟನು ಮತ್ತು ಬೈಬಲ್‌ ಸತ್ಯವನ್ನು ಅರ್ಥಮಾಡಿಕೊಂಡು ಅದರ ಪ್ರಕಾರ ಜೀವಿಸಲು ಸಹಾಯ ಮಾಡಿದನು. ಇದು, ನನ್ನನ್ನು ಆತನಿಗಾಗಿ ಜೀವಿಸುವಂತೆ ಪ್ರೇರೇಪಿಸಿತು. (1 ಪೇತ್ರ 4:1, ) ನಾನು 1997ರಲ್ಲಿ ದೀಕ್ಷಾಸ್ನಾನ ಪಡೆದು ಒಬ್ಬ ಯೆಹೋವನ ಸಾಕ್ಷಿಯಾಗಿದೆ.

ಸಿಕ್ಕಿದ ಪ್ರಯೋಜನಗಳು

 ನನ್ನ ಮುಂಚಿನ ಜೀವನ ರೀತಿಯನ್ನೇ ಮುಂದುವರಿಸಿದ್ದರೆ ಈಗ ನಾನು ಜೀವಂತವಾಗಿ ಇರುತ್ತಿರಲಿಲ್ಲ ಅನ್ನೋದು ಖಂಡಿತ. ಆದರೆ ಈಗ ನಿಜಕ್ಕೂ ಸಂತೋಷದ ಜೀವನ ನಡೆಸುತ್ತಿದ್ದೇನೆ! ನನಗೆ ಸಿಕ್ಕಿದ ಇನ್ನೊಂದು ಆಶೀರ್ವಾದ, ನನ್ನ ಪ್ರೀತಿಯ ಪತ್ನಿ ಎಲ್ವೀ. ನಾವಿಬ್ಬರೂ ಜೊತೆಯಾಗಿ ನಮ್ಮ ಹೆಚ್ಚಿನ ಸಮಯವನ್ನು ಬೇರೆಯವರಿಗೆ ಬೈಬಲನ್ನು ಕಲಿಸಲು ಉಪಯೋಗಿಸುತ್ತಿದ್ದೇವೆ. ಇದು ನನಗೆ ತುಂಬ ಆನಂದ ಮತ್ತು ಸಂತೃಪ್ತಿ ತರುತ್ತದೆ. ಯೆಹೋವನು ನನ್ನನ್ನು ತನ್ನ ಬಳಿಗೆ ಸೆಳೆದಿದ್ದಕ್ಕೆ ನಿಜಕ್ಕೂ ಕೃತಜ್ಞನಾಗಿದ್ದೇನೆ.—ಯೋಹಾನ 6:44.