ಮಾಹಿತಿ ಇರುವಲ್ಲಿ ಹೋಗಲು

ಬದುಕು ಬದಲಾದ ವಿಧ

“ಬೀದಿಪಾಲಾಗಿತ್ತು ನನ್ನ ಬದುಕು”

“ಬೀದಿಪಾಲಾಗಿತ್ತು ನನ್ನ ಬದುಕು”
  • ಜನನ: 1955

  • ದೇಶ: ಸ್ಪೇನ್‌

  • ಹಿಂದೆ: ಮದ್ಯ ಮತ್ತು ಡ್ರಗ್ಸ್‌ ವ್ಯಸನಿ, ಹಿಂಸಾತ್ಮಕ ವ್ಯಕ್ತಿ

ಹಿನ್ನಲೆ

 ಕೆಲವರು ತಮ್ಮ ಕಹಿ ಅನುಭವಗಳಿಂದ ಪಾಠ ಕಲಿಯಲು ತುಂಬ ಸಮಯ ತಗೊಳ್ಳುತ್ತಾರೆ. ನಾನೂ ಹಂಗಿದ್ದೆ. ಸ್ಪೇನಿನ ಎರಡನೇ ದೊಡ್ಡ ನಗರವಾದ ಬಾರ್ಸಲೋನದಲ್ಲಿ ನಾನು ಹುಟ್ಟಿ ಬೆಳೆದೆ. ನಮ್ಮ ಕುಟುಂಬ ನಗರಕ್ಕೆ ಹತ್ತಿರದಲ್ಲೇ ಇರುವ ಸಮುದ್ರತೀರದ ಸೊಮೊರೊರ್ಸ್ಟ್‌ರೋ ಎಂಬಲ್ಲಿ ವಾಸಿಸುತ್ತಿತ್ತು. ಸೊಮೊರೊರ್ಸ್ಟ್‌ರೋ ಡ್ರಗ್ಸ್‌ ವ್ಯಾಪಾರ ಮತ್ತು ಅಪರಾಧಗಳಿಗೆ ಹೆಸರುವಾಸಿಯಾಗಿತ್ತು.

 ನನ್ನ ತಂದೆ ತಾಯಿಗೆ ಒಂಭತ್ತು ಜನ ಮಕ್ಕಳು. ನಾನೇ ದೊಡ್ಡವನು. ನಾವು ತುಂಬ ಬಡವರಾದ್ರಿಂದ ನನ್ನ ತಂದೆ ನನ್ನನ್ನು ಅಲ್ಲಿದ್ದ ಟೆನ್ನಿಸ್‌ ಕ್ಲಬ್‌ನಲ್ಲಿ ಚಂಡು ಎತ್ತಿ ಕೊಡುವ ಕೆಲಸಕ್ಕೆ ಕಳಿಸಿದರು. ಆಗ ನನಗೆ ಬರೀ ಹತ್ತು ವರ್ಷ ಮತ್ತು ದಿನಕ್ಕೆ ಹತ್ತು ಗಂಟೆ ಕೆಲಸ ಮಾಡುತ್ತಿದ್ದೆ. ಹಾಗಾಗಿ ನನ್ನ ವಯಸ್ಸಿನ ಬೇರೆ ಮಕ್ಕಳಂತೆ ಶಾಲೆಗೆ ಹೋಗಲು ಆಗುತ್ತಿರಲಿಲ್ಲ. 14 ವರ್ಷದವನಾದಾಗ, ನಾನು ಒಂದು ಲೋಹದ ಅಂಗಡಿಯಲ್ಲಿ ಮಶೀನ್‌ ಆಪರೇಟರಾಗಿ ಕೆಲಸ ಮಾಡುತ್ತಿದ್ದೆ.

1975ರಲ್ಲಿ, ನಾನು ಉತ್ತರ ಸ್ಪೇನ್‌ನಲ್ಲಿ ಹೊರದೇಶ ಸೇನಾದಳಕ್ಕೆ ಸೇರಿಕೊಂಡೆ ಮತ್ತು ಅಲ್ಲಿನ ನಿರ್ದಿಷ್ಟ ಯೂನಿಫಾರ್ಮ್‌ ಧರಿಸಿದೆ

 1975ರಲ್ಲಿ, ಮಿಲಿಟರಿ ಸೇವೆಗೆ ನನ್ನನ್ನು ಕರೆದರು. ಸ್ಪೇನಿನಲ್ಲಿ ಅದು ಆಗ ಖಡ್ಡಾಯವಾಗಿತ್ತು. ನಂಗೂ ನನ್ನ ಜೀವನದಲ್ಲಿ ಏನಾದರೂ ಸಾಹಸದ ಕೆಲಸ ಮಾಡಬೇಕು ಅಂತ ಇತ್ತು. ಹಾಗಾಗಿ ಉತ್ತರ ಆಫ್ರಿಕದ ಮೆಲಿಲ್ಲದಲ್ಲಿ, ಸ್ಪೇನಿನ ಹೊರದೇಶ ಸೇನಾದಳಕ್ಕೆ ಸ್ವಯಂಸೇವಕನಾಗಿ ನಾನು ಸೇರಿಕೊಂಡೆ. ಅಲ್ಲಿ ಡ್ರಗ್ಸ್‌ ಮತ್ತು ಮದ್ಯಪಾನ ಸೇವನೆಯ ಹೊಲಸಾದ ಚಟಕ್ಕೆ ನಾನು ಕೈಹಾಕಿದೆ.

 ನಾನು ಸೇನಾದಳವನ್ನು ಬಿಟ್ಟ ಮೇಲೆ, ಬಾರ್ಸಲೋನಕ್ಕೆ ಹಿಂದಿರುಗಿದೆ. ಅಲ್ಲಿ ಒಂದು ರೌಡಿ ಗ್ಯಾಂಗ್‌ ಆರಂಭಿಸಿದೆ. ನಾವು ಮನಸ್ಸಿಗೆ ಬಂದಿದ್ದೆಲ್ಲಾ ಕದಿಯುತ್ತಿದ್ವಿ. ಕಳ್ಳತನ ಮಾಡಿರೋ ವಸ್ತುಗಳನ್ನು ಮಾರಿ ಡ್ರಗ್ಸ್‌ ತಗೊಳ್ತಿದ್ವಿ. ಎಲ್‌ಎಸ್‌ಡಿ ಮತ್ತು ಅಂಫೆಟಮೀನ್ಸ್‌ ಎಂಬ ಡ್ರಗ್ಸ್‌ಗಳನ್ನು ತಗೊಳ್ಳೋಕೆ ಶುರು ಮಾಡಿದೆ. ಸೆಕ್ಸ್‌, ಕುಡಿತ ಮತ್ತು ಜೂಜಾಟದಲ್ಲಿ ಮುಳುಗಿ ಹೋದೆ. ಈ ಪೋಲಿ ಜೀವನದಿಂದ ಇನ್ನು ಹೆಚ್ಚೆಚ್ಚು ಹಿಂಸಾತ್ಮಕ ವ್ಯಕ್ತಿಯಾದೆ. ನಾನು ಯಾವಾಗಲೂ ಒಂದು ಚಾಕು, ಕೊಡಲಿ ಅಥವಾ ಮಚ್ಚನ್ನು ಇಟ್ಟುಕೊಂಡಿರುತ್ತಿದ್ದೆ. ಅದನ್ನು ಉಪಯೋಗಿಸಲಿಕ್ಕೆ ಹಿಂದೆ ಮುಂದೆ ನೋಡುತ್ತಿರಲಿಲ್ಲ.

 ಒಂದ್ಸಾರಿ, ನಾನು ಮತ್ತು ನನ್ನ ಗ್ಯಾಂಗ್‌ ಒಂದು ಕಾರನ್ನು ಕಳವು ಮಾಡಿದಾಗ ಪೊಲೀಸರು ಬೆನ್ನಟ್ಟಿಸಿಕೊಂಡು ಬಂದರು. ಸಿನಿಮಾದಲ್ಲಿ ನೋಡೋ ತರ ಇತ್ತು. ಕಾರನ್ನು ಸುಮಾರು 30 ಕಿಲೋಮೀಟರ್‌ ದೂರ ಕೊಂಡೊಯ್ದ ಮೇಲೆ ಪೊಲೀಸರು ನಮ್ಮ ಮೇಲೆ ಗುಂಡು ಹಾರಿಸಲು ಶುರು ಮಾಡಿದರು. ಕಡೆಗೆ ನಮ್ಮ ಚಾಲಕನು ಗಾಡಿಯನ್ನು ಒಂದು ಕಡೆ ಗುದ್ದಿಬಿಟ್ಟನು ಮತ್ತು ನಾವಲ್ಲೆರೂ ಅಲ್ಲಿಂದ ಓಡಿಹೋದ್ವಿ. ನನ್ನ ಅಪ್ಪನಿಗೆ ಇದು ಗೊತ್ತಾದಾಗ, ಎಲ್ಲಾ ಅಪ್ಪಂದಿರು ಮಾಡುವಂತೆ ನನ್ನನ್ನ ಮನೆಯಿಂದ ಹೊರಗೆ ಹಾಕಿದರು.

 ನಂತರದ ಐದು ವರ್ಷಗಳು ಬೀದಿಪಾಲಾಗಿತ್ತು ನನ್ನ ಬದುಕು. ನಾನು ಅಂಗಡಿ ಬಾಗಿಲಲ್ಲಿ, ಲಾರಿಗಳಲ್ಲಿ, ಸ್ಮಶಾನದಲ್ಲಿ, ಮತ್ತು ಪಾರ್ಕಿನ ಬೆಂಚ್‌ ಮೇಲೆ ಮಲಗುತ್ತಿದ್ದೆ. ಸ್ವಲ್ಪ ದಿನಗಳು ನಾನು ಗುಹೆಯಲ್ಲೂ ಇದ್ದೆ. ನನ್ನ ಜೀವನಕ್ಕೆ ಯಾವ ಉದ್ದೇಶವೂ ಇರಲಿಲ್ಲ. ನಾನು ಬದುಕಿದ್ದೀನಾ ಸತ್ತಿದ್ದೀನಾ ಅನ್ನೋ ಯೋಚನೆನೇ ಇರುತ್ತಿರಲಿಲ್ಲ. ನಾನು ಡ್ರಗ್ಸ್‌ನ ಮತ್ತಲ್ಲಿ ನನ್ನ ಕೈಗಳನ್ನೆಲ್ಲ ಕುಯ್ದುಕೊಂಡಿದ್ದು ಈಗಲೂ ನೆನಪಿದೆ. ಅದರ ಕಲೆಗಳು ಇವತ್ತಿನ ವರೆಗೂ ಇದೆ.

ನನ್ನ ಬದುಕನ್ನೇ ಬದಲಾಯಿಸಿತು ಬೈಬಲ್‌

 ನನಗೆ 28 ವರ್ಷ ಇದ್ದಾಗ, ನನ್ನ ತಾಯಿ ನನ್ನನ್ನು ಹುಡುಕಿಕೊಂಡು ಬಂದರು. ಮನೆಗೆ ವಾಪಸ್ಸು ಬಾ ಅಂತ ಕೇಳಿಕೊಂಡರು. ನಾನದಕ್ಕೆ ಒಪ್ಪಿಕೊಂಡೆ, ನನ್ನ ಜೀವ್ನನ ಸರಿಪಡಿಸಿಕೊಳ್ಳುತ್ತೀನಿ ಎಂದು ಮಾತು ಕೊಟ್ಟೆ. ಆದರೆ ಅಷ್ಟು ಬೇಗ ಆ ಮಾತಿನಂತೆ ನಡೆಯಲು ನನ್ನಿಂದಾಗಲಿಲ್ಲ.

 ಒಂದು ದಿನ ಮಧ್ಯಾಹ್ನ, ಇಬ್ಬರು ಯೆಹೋವನ ಸಾಕ್ಷಿಗಳು ನಮ್ಮ ಮನೆ ಬಾಗಿಲಿಗೆ ಬಂದರು. ನಾನು ಅವರು ಹೇಳೋದನ್ನು ಕೇಳಿಸಿಕೊಳ್ಳುವಾಗ ನನ್ನ ತಂದೆ, ಬಾಗಿಲನ್ನು ಬೀಸಿ ಅವರ ಮುಖಕ್ಕೆ ಮುಚ್ಚು ಅಂತ ಒಳಗಿಂದ ಕಿರಿಚಿ ಹೇಳಿದರು. ಯಾರಾದರೂ ಆರ್ಡರ್‌ ಮಾಡಿದರೆ ನಂಗೆ ಒಂಚೂರು ಇಷ್ಟ ಆಗುತ್ತಿರಲಿಲ್ಲ. ಹಾಗಾಗಿ ಅಪ್ಪನ ಮಾತನ್ನು ಲಕ್ಷ್ಯಕ್ಕೆ ತೊಗೊಳ್ಳಿಲ್ಲ. ಬಾಗಿಲಲ್ಲಿ ನಿಂತಿದ್ದವರು ಮೂರು ಚಿಕ್ಕ ಪುಸ್ತಕಗಳನ್ನು ತೋರಿಸಿದರು. ನಾನು ಖುಷಿಯಿಂದ ಪುಸ್ತಕಗಳನ್ನು ತೊಗೊಂಡೆ. ಅವರು ಎಲ್ಲಿ ಕೂಟ ನಡೆಸುತ್ತಾರೆ ಅಂತ ಕೇಳಿದೆ. ಕೆಲವು ದಿನಗಳಾದ ಮೇಲೆ ರಾಜ್ಯ ಸಭಾಗೃಹದ ಮುಂದೆ ಬಂದು ನಿಂತಿದ್ದೆ.

 ಅಲ್ಲಿ ನಾನು ಗಮನಿಸಿದ ಮೊದಲನೇ ವಿಷಯ—ಎಲ್ಲರೂ ಹಾಕಿದ್ದ ಸಭ್ಯವಾದ ಬಟ್ಟೆ. ನಾನು ನೋಡಿದ್ರೆ ಉದ್ದುದ್ದ ಕೂದಲು, ದಾಡಿ ಬಿಟ್ಟುಕೊಂಡು ಚಿಂದಿಪಂದಿ ಬಟ್ಟೆ ಹಾಕಿಕೊಂಡಿದ್ದೆ. ನನ್ನಂಥವನು ಇಲ್ಲಿಗೆ ಸೇರಲ್ಲ ಅಂತ ಸ್ಪಷ್ಟವಾಗಿ ಗೊತ್ತಾಗುತ್ತಿತ್ತು. ಹಾಗಾಗಿ ನಾನು ಹೊರಗಡೆನೇ ನಿಂತುಕೊಂಡೆ. ಮುಂಚೆ ನನ್ನ ಜೊತೆ ಗ್ಯಾಂಗ್‌ನಲ್ಲಿ ಇದ್ದ ಒಬ್ಬನನ್ನು ಅಲ್ಲಿ ನೋಡಿ ನಂಗೆ ಆಶ್ಚರ್ಯ ಆಯ್ತು. ಅವನ ಹೆಸರು ವಾನ್‌. ಅವನು ಸಂಪೂರ್ಣ ಬದಲಾಗಿದ್ದ, ಸೂಟು ಹಾಕಿಕೊಂಡು ಬಂದಿದ್ದ. ಅವನು ಒಂದು ವರ್ಷ ಹಿಂದೆನೇ ಯೆಹೋವನ ಸಾಕ್ಷಿಯಾಗಿದ್ದನಂತೆ. ಅವನನ್ನು ಅಲ್ಲಿ ನೋಡಿದಾಗ ಒಳಗೆ ಹೋಗಿ ಕೂಟಕ್ಕೆ ಹಾಜರಾಗಲು ಬೇಕಾದ ಧೈರ್ಯ ಸಿಕ್ಕಿತು. ಆವಾಗಿಂದ ನನ್ನ ಜೀವನ ಬದಲಾಗಲು ಶುರುವಾಯಿತು.

 ಬೈಬಲಿನಿಂದ ದೇವರ ಬಗ್ಗೆ ಕಲಿಯಲು ನಾನು ಒಪ್ಪಿಕೊಂಡೆ. ದೇವರ ಒಪ್ಪಿಗೆಯನ್ನು ಪಡೆಯಬೇಕಾದರೆ ನನ್ನ ಹಿಂಸಾತ್ಮಕ ಸ್ವಭಾವ ಮತ್ತು ಅನೈತಿಕ ಜೀವನ ರೀತಿಯನ್ನು ಬಿಟ್ಟುಬಿಡಬೇಕಂತ ಕೂಡಲೇ ಅರ್ಥಮಾಡಿಕೊಂಡೆ. ಆ ಬದಲಾವಣೆಗಳನ್ನು ಮಾಡಿಕೊಳ್ಳೋದು ಸುಲಭವಾಗಿರಲಿಲ್ಲ. ಯೆಹೋವ ದೇವರನ್ನು ಮೆಚ್ಚಿಸಬೇಕಾದರೆ ನಾನು ‘ನನ್ನ ಮನಸ್ಸನ್ನು ಮಾರ್ಪಡಿಸಿ ನವೀಕರಿಸಿಕೊಳ್ಳಬೇಕು’ ಅಂತ ಕಲಿತೆ. (ರೋಮನ್ನರಿಗೆ 12:2) ದೇವರು ನನಗೆ ತೋರಿಸುತ್ತಿರುವ ಕರುಣೆ ನನ್ನ ಮನಮುಟ್ಟಿತು. ನಾನು ಎಷ್ಟೋ ತಪ್ಪುಗಳು ಮಾಡಿದ್ದರೂ, ಸರಿಯಾಗಿ ನಡಕೊಳ್ಳುವಂತೆ ದೇವರು ನನಗೆ ಇನ್ನೊಂದು ಅವಕಾಶ ಕೊಡುತ್ತಿದ್ದಾನೆಂದು ಅನಿಸುತ್ತಿತ್ತು. ಯೆಹೋವ ದೇವರ ಬಗ್ಗೆ ನಾನು ಕಲಿತ ವಿಷಯ ನನ್ನ ಹೃದಯದ ಆಳಕ್ಕೆ ಸೇರಿತು. ನನ್ನ ಬಗ್ಗೆ ಕಾಳಜಿ ಮಾಡುವ ಒಬ್ಬ ಸೃಷ್ಟಿಕರ್ತನಿದ್ದಾನೆಂದು ನನಗೆ ಸ್ಪಷ್ಟವಾಗಿ ಅರ್ಥವಾಯಿತು.—1 ಪೇತ್ರ 5:6, 7.

 ಇದು ಬದಲಾವಣೆಗಳನ್ನು ಮಾಡಿಕೊಳ್ಳುವಂತೆ ನನ್ನನ್ನು ಪ್ರೇರೇಪಿಸಿತು. ಉದಾಹರಣೆಗೆ, ತಂಬಾಕು ಸೇವನೆ ದೇವರಿಗೆ ಇಷ್ಟವಿಲ್ಲವೆಂದು ಬೈಬಲ್‌ ಪಾಠದಲ್ಲಿ ಕಲಿತಾಗ, ‘ನಾನು ಪ್ರತಿಯೊಂದು ವಿಧದಲ್ಲಿ ಶುಚಿಯಾಗಿ, ಯಾವುದೇ ಕಲ್ಮಶವಿಲ್ಲದೆ ಇರಬೇಕು ಅಂತ ಯೆಹೋವ ದೇವರು ಬಯಸುತ್ತಿದ್ದಾರೆ ಅಂದಮೇಲೆ, ಈ ಸಿಗರೇಟುಗಳನ್ನು ಎಸೆಯಲೇಬೇಕು,’ ಅಂತ ಅಂದುಕೊಂಡೆ. (2 ಕೊರಿಂಥ 7:1) ಅವನ್ನು ಕಸಕ್ಕೆ ಎಸೆದೇಬಿಟ್ಟೆ!

 ಡ್ರಗ್ಸ್‌ ಮಾರುವುದನ್ನು, ಸೇವಿಸುವುದನ್ನು ಸಹ ನಿಲ್ಲಿಸಬೇಕಿತ್ತು. ಅದಕ್ಕೆ ಇನ್ನಷ್ಟು ಸಮಯ ಮತ್ತು ಪ್ರಯತ್ನವನ್ನು ಹಾಕಬೇಕಾಯಿತು. ಆ ಗುರಿ ತಲುಪಲು ನಾನು ನನ್ನ ಹಳೇ ಸ್ನೇಹಿತರನ್ನು ಬಿಡಲೇಬೇಕು ಅಂತ ತಿಳುಕೊಂಡೆ. ನನ್ನ ಮೇಲೆ ಅವರು ಬೀರುತ್ತಿದ್ದ ಪ್ರಭಾವದಿಂದ ಆಧ್ಯಾತ್ಮಿಕವಾಗಿ ಬೆಳೆಯಲು ಅಡ್ಡಿಯಾಗುತ್ತಿತ್ತು. ಸಮಯ ಹೋದಂತೆ ನಾನು ದೇವರ ಮೇಲೆ ಮತ್ತು ಸಭೆಯಲ್ಲಿ ನನಗೆ ಸಿಕ್ಕ ಹೊಸ ಸ್ನೇಹಿತರ ಸಹಾಯದ ಮೇಲೆ ಹೆಚ್ಚು ಅವಲಂಬಿಸಲು ಶುರು ಮಾಡಿದೆ. ಅವರು ತೋರಿಸಿದಂಥ ಪ್ರೀತಿ, ಕಾಳಜಿ ಮತ್ತು ಹಿತಚಿಂತನೆಯನ್ನು ನಾನು ಯಾವತ್ತೂ ಅನುಭವಿಸಿರಲಿಲ್ಲ. ತಿಂಗಳುಗಳು ಕಳೆದಂತೆ ಕೊನೆಗೂ ಡ್ರಗ್ಸ್‌ನ ಸೆರೆಯಿಂದ ಹೊರಬಂದು ‘ಹೊಸ ವ್ಯಕ್ತಿತ್ವವನ್ನು ಧರಿಸಿಕೊಂಡೆ.’ (ಎಫೆಸ 4:24) ಇದು ದೇವರ ಒಪ್ಪಿಗೆಯನ್ನು ಪಡೆಯಲು ನನಗೆ ಸಹಾಯ ಮಾಡಿತು. 1985ರ ಆಗಸ್ಟ್‌ನಲ್ಲಿ ನಾನು ದೀಕ್ಷಾಸ್ನಾನ ಪಡೆದುಕೊಂಡು ಒಬ್ಬ ಯೆಹೋವನ ಸಾಕ್ಷಿಯಾದೆ.

ಸಿಕ್ಕಿದ ಪ್ರಯೋಜನಗಳು

 ಬೈಬಲ್‌ ನನಗೆ ಒಂದು ಹೊಸ ಬದುಕನ್ನೇ ಕೊಟ್ಟಿತು. ಅದು, ನನ್ನ ದೇಹವನ್ನು ಮತ್ತು ನನ್ನ ಸ್ವಗೌರವವನ್ನು ಹಾಳು ಮಾಡುತ್ತಿದ್ದ ಕೆಟ್ಟ ಜೀವನ ರೀತಿಯಿಂದ ನನ್ನನ್ನು ಬಿಡಿಸಿತು. ನಿಜ ಹೇಳಬೇಕೆಂದರೆ, ನನ್ನ 30 ಹಳೇ ಸ್ನೇಹಿತರು ಯುವ ಪ್ರಾಯದಲ್ಲೇ ಏಡ್ಸ್‌ ಅಥವಾ ಡ್ರಗ್ಸ್‌ಗೆ ಸಂಬಂಧಿತ ಕಾಯಿಲೆಗಳಿಗೆ ತುತ್ತಾಗಿ ತೀರಿಹೋದರು. ಆದರೆ, ನಾನು ದೇವರಿಗೆ ಆಭಾರಿಯಾಗಿದ್ದೇನೆ ಯಾಕೆಂದರೆ, ಬೈಬಲ್‌ ತತ್ವಗಳನ್ನು ಪಾಲಿಸಿದ್ದರಿಂದ ಅಂಥ ದುಃಖಕರ ಪರಿಣಾಮಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಾಯಿತು.

 ಹಿಂದೆ ನಾನು ಹಿಂಸಾತ್ಮಕ ವ್ಯಕ್ತಿಯಾಗಿ ಕತ್ತಿ ಕೊಡಲಿಗಳನ್ನು ಇಟ್ಟುಕೊಂಡು ತಿರುಗುತ್ತಿದ್ದೆ. ಆ ಹಳೇ ಕಾಲ ಮುಗಿದು ಹೋಗಿದೆ. ಈಗ, ನಾನು ಬೈಬಲನ್ನು ಇಟ್ಟುಕೊಂಡು ಜನರಿಗೆ ಸಹಾಯ ಮಾಡುತ್ತೀನಿ. ಈ ರೀತಿ ನಾನು ಬದಲಾಗ್ತೀನಿ ಅಂತ ಅಂದುಕೊಂಡೇ ಇರಲಿಲ್ಲ. ಇಂದು ನಾನು ಮತ್ತು ನನ್ನ ಹೆಂಡತಿ ಯೆಹೋವನ ಸಾಕ್ಷಿಗಳಾಗಿ ಪೂರ್ಣ ಸಮಯದ ಸೇವೆಯನ್ನು ಮಾಡುತ್ತಿದ್ದೇವೆ.

 ನನ್ನ ಹೆತ್ತವರು ಯೆಹೋವನ ಸಾಕ್ಷಿಗಳಾಗಲಿಲ್ಲ, ಆದರೆ ನಾನು ಬೈಬಲ್‌ ಬಗ್ಗೆ ಕಲಿತ್ತಿದ್ದರಿಂದ, ನನಗೆ ಸಿಕ್ಕಿದ ಪ್ರಯೋಜನಗಳನ್ನು ಅವರು ಗಣ್ಯಮಾಡಿದರು. ಅಷ್ಟೇ ಅಲ್ಲ, ತನ್ನ ಜೊತೆ ಕೆಲಸ ಮಾಡುವವರೊಂದಿಗೆ ಸಾಕ್ಷಿಗಳ ಪಕ್ಷ ವಹಿಸಿ ನನ್ನ ತಂದೆ ಮಾತಾಡಿದರು! ಇದರಿಂದ ಒಂದಂತೂ ಗೊತ್ತಾಗುತ್ತೆ, ನನ್ನ ಬದಲಾವಣೆಗೆ ನನ್ನ ಹೊಸ ನಂಬಿಕೆನೇ ಕಾರಣ ಎಂದು ನನ್ನ ತಂದೆ ತಾಯಿಗೆ ಚೆನ್ನಾಗಿ ಅರ್ಥ ಆಗಿದೆ. ನಾನು ಬೈಬಲನ್ನು ಬೇಗ ಕಲಿತ್ತಿದ್ದರೆ ಇನ್ನೂ ಚೆನ್ನಾಗಿ ಇರುತ್ತಿತ್ತು ಅಂತ ನನ್ನ ತಾಯಿ ತುಂಬ ಸಲ ಹೇಳಿದ್ದಾರೆ. ಅವರು ಹೇಳಿದ್ದು ಸರಿನೇ.

 ಡ್ರಗ್ಸ್‌ ಮತ್ತು ಕೆಟ್ಟ ಚಟಗಳಿಂದ ಸಂತೋಷ ಕಂಡುಕೊಳ್ಳೋದು ಅಸಾಧ್ಯ ಅಂತ ನನ್ನ ಜೀವನ ನನಗೆ ಕಲಿಸಿದೆ. ದೇವರ ವಾಕ್ಯದಲ್ಲಿರುವ ಬೋಧನೆಗಳು ನನ್ನ ಜೀವ್ನಾನ ನಿಜಕ್ಕೂ ಕಾಪಾಡಿದೆ. ಈ ಬೋಧನೆಗಳನ್ನು ಬೇರೆಯವರಿಗೆ ಕಲಿಸೋದ್ರಿಂದ ನನಗೆ ನಿಜ ಸಂತೋಷ, ಸಂತೃಪ್ತಿ ಸಿಗುತ್ತಿದೆ.