ಮಾಹಿತಿ ಇರುವಲ್ಲಿ ಹೋಗಲು

ದೇವರು ಕೊಟ್ಟ ಹತ್ತು ಆಜ್ಞೆಗಳು ಯಾವುವು?

ದೇವರು ಕೊಟ್ಟ ಹತ್ತು ಆಜ್ಞೆಗಳು ಯಾವುವು?

ಬೈಬಲ್‌ ಕೊಡೋ ಉತ್ತರ

 ಹತ್ತು ಆಜ್ಞೆಗಳು ದೇವರು ಪ್ರಾಚೀನ ಇಸ್ರಾಯೇಲ್ಯರಿಗೆ ಕೊಟ್ಟ ನಿಯಮಗಳಾಗಿದ್ದವು. ಈ ನಿಯಮಗಳನ್ನ ಹತ್ತು ಶಾಸನಗಳು ಅಂತ ಕರೀತಾರೆ. ಯಾಕಂದ್ರೆ ‘ಅಸರೆತ್‌ ಹಡೆವರಿಮ್‌’ ಅನ್ನೋ ಹೀಬ್ರು ಪದದ ಅಕ್ಷರಾರ್ಥವನ್ನ ಭಾಷಾಂತರ ಮಾಡೋದಾದ್ರೆ ಆ ಅರ್ಥ ಬರುತ್ತೆ. ಬೈಬಲಿನ ಮೊದಲ ಐದು ಪುಸ್ತಕಗಳಲ್ಲಿ (ಟೋರಾ) ಹತ್ತು ಆಜ್ಞೆಗಳು ಅನ್ನೋ ಪದನ ಮೂರು ಸಲ ನೋಡಬಹುದು. (ವಿಮೋಚನಕಾಂಡ 34:28; ಧರ್ಮೋಪದೇಶಕಾಂಡ 4:13; 10:4) ಇದನ್ನ ಗ್ರೀಕ್‌ನಲ್ಲಿ “ಡೆಕಲಾಗ್‌” ಅಂತ ಕರಿತಾರೆ ಅಂದ್ರೆ ಡೆಕ (ಹತ್ತು), ಲೋಗಸ್‌ (ಶಾಸನಗಳು).

 ದೇವರು ಈ ಹತ್ತು ಆಜ್ಞೆಗಳನ್ನ ಎರಡು ಕಲ್ಲಿನ ಹಲಿಗೆಗಳ ಮೇಲೆ ಬರೆಸಿ ತನ್ನ ಪ್ರವಾದಿಯಾದ ಮೋಶೆಗೆ ಸೀನಾಯಿ ಬೆಟ್ಟದ ಮೇಲೆ ಕೊಟ್ಟನು. (ವಿಮೋಚನಕಾಂಡ 24:12-18) ಈ ಹತ್ತು ಆಜ್ಞೆಗಳನ್ನ ವಿಮೋಚನಕಾಂಡ 20:1-17 ಮತ್ತು ಧರ್ಮೋಪದೇಶಕಾಂಡ 5:6-21 ರಲ್ಲಿ ನೋಡಬಹುದು.

 ಹತ್ತು ಆಜ್ಞೆಗಳ ಪಟ್ಟಿ

  1.  1. ಯೆಹೋವ ದೇವರನ್ನ ಮಾತ್ರ ಆರಾಧಿಸಬೇಕು.—ವಿಮೋಚನಕಾಂಡ 20:3.

  2.  2. ಮೂರ್ತಿಪೂಜೆ ಮಾಡಬಾರದು.—ವಿಮೋಚನಕಾಂಡ 20:4-6.

  3.  3. ದೇವರ ಹೆಸರನ್ನ ಅಯೋಗ್ಯವಾಗಿ ಬಳಸಬಾರದು.—ವಿಮೋಚನಕಾಂಡ 20:7.

  4.  4. ಸಬ್ಬತ್‌ ದಿನ ಆಚರಿಸಬೇಕು.—ವಿಮೋಚನಕಾಂಡ 20:8-11.

  5.  5. ಅಪ್ಪ ಅಮ್ಮನಿಗೆ ಗೌರವ ಕೊಡಬೇಕು.—ವಿಮೋಚನಕಾಂಡ 20:12.

  6.  6. ಕೊಲೆ ಮಾಡಬಾರದು.—ವಿಮೋಚನಕಾಂಡ 20:13.

  7.  7. ವ್ಯಭಿಚಾರ ಮಾಡಬಾರದು.—ವಿಮೋಚನಕಾಂಡ 20:14.

  8.  8. ಕದಿಬಾರದು.—ವಿಮೋಚನಕಾಂಡ 20:15.

  9.  9. ಸುಳ್ಳು ಸಾಕ್ಷಿ ಹೇಳಬಾರದು.—ವಿಮೋಚನಕಾಂಡ 20:16.

  10.  10. ಬೇರೆಯವರ ವಸ್ತುಗಳನ್ನ ಆಸೆ ಪಡಬಾರದು.—ವಿಮೋಚನಕಾಂಡ 20:17.

 ಹತ್ತು ಆಜ್ಞೆಗಳ ಪಟ್ಟಿ ಯಾಕೆ ಬೇರೆ ಬೇರೆ ತರ ಇದೆ?

 ಬೈಬಲ್‌ ಹತ್ತು ಆಜ್ಞೆಗಳ ಬಗ್ಗೆ ಇದೇ ಮೊದಲನೇ ಆಜ್ಞೆ, ಇದೇ ಎರಡನೇ ಆಜ್ಞೆ ಅಂತ ಹೇಳಲ್ಲ. ಹತ್ತು ಆಜ್ಞೆಗಳ ಪಟ್ಟಿಯ ಕ್ರಮದ ಬಗ್ಗೆ ಒಬ್ಬೊಬ್ಬರಿಗೆ ಒಂದೊಂದು ಅಭಿಪ್ರಾಯ ಇದೆ. ಸಾಮಾನ್ಯವಾಗಿ ಆಜ್ಞೆಗಳು ಈ ಮೇಲಿನ ಪಟ್ಟಿಯ ಕ್ರಮದಲ್ಲಿ ಇರುತ್ತೆ. ಕೆಲವರು ಇದನ್ನ ಬೇರೆ ಕ್ರಮದಲ್ಲೂ ಪಟ್ಟಿ ಮಾಡ್ತಾರೆ. ಈ ತರ ವ್ಯತ್ಯಾಸ ಇರೋದು ಮೊದಲನೇ, ಎರಡನೇ ಮತ್ತು ಕೊನೆ ಆಜ್ಞೆಯಲ್ಲಿ. a

 ಹತ್ತು ಆಜ್ಞೆಗಳ ಉದ್ದೇಶ ಏನು?

 ಹತ್ತು ಆಜ್ಞೆಗಳು ಮೋಶೆಯ ಧರ್ಮಶಾಸ್ತ್ರದ ಭಾಗ ಆಗಿತ್ತು. ಧರ್ಮಶಾಸ್ತ್ರದಲ್ಲಿ 600ಕ್ಕಿಂತ ಹೆಚ್ಚು ನಿಯಮಗಳು ಇದ್ದವು. ಇದು ದೇವರು ಪ್ರಾಚೀನ ಇಸ್ರಾಯೇಲ್‌ ಜನಾಂಗದ ಜೊತೆ ಮಾಡಿದ ಒಡಂಬಡಿಕೆ ಅಥವಾ ಒಪ್ಪಂದ ಆಗಿತ್ತು. (ವಿಮೋಚನಕಾಂಡ 34:27) ಇಸ್ರಾಯೇಲ್ಯರು ಮೋಶೆಯ ಧರ್ಮಶಾಸ್ತ್ರದ ಪ್ರಕಾರ ನಡ್ಕೊಂಡ್ರೆ ದೇವರು ಅವ್ರನ್ನ ಹೇರಳವಾಗಿ ಆಶೀರ್ವಾದ ಮಾಡ್ತೀನಿ ಅಂತ ಮಾತು ಕೊಟ್ಟಿದ್ದನು. (ಧರ್ಮೋಪದೇಶಕಾಂಡ 28:1-14) ಇಸ್ರಾಯೇಲ್ಯರನ್ನ ವಾಗ್ದಾತ್ತ ಮೆಸ್ಸೀಯ ಅಥವಾ ಕ್ರಿಸ್ತನಿಗಾಗಿ ಸಿದ್ಧ ಮಾಡೋದೇ ಈ ಆಜ್ಞೆಗಳನ್ನು ಕೊಟ್ಟ ಮುಖ್ಯ ಉದ್ದೇಶ ಆಗಿತ್ತು.—ಗಲಾತ್ಯ 3:24.

 ಕ್ರೈಸ್ತರು ಹತ್ತು ಆಜ್ಞೆಗಳನ್ನ ಪಾಲಿಸಬೇಕಾ?

 ಇಲ್ಲ. ದೇವರು ಹತ್ತು ಆಜ್ಞೆಗಳಿಂದ ಕೂಡಿರೋ ತನ್ನ ನಿಯಮನ ಪ್ರಾಚೀನ ಇಸ್ರಾಯೇಲ್ಯ ಜನಾಂಗಕ್ಕೆ ಕೊಟ್ಟನು. (ಧರ್ಮೋಪದೇಶಕಾಂಡ 5:2, 3; ಕೀರ್ತನೆ 147:19, 20) ಕ್ರೈಸ್ತರು ಮೋಶೆಯ ಧರ್ಮಶಾಸ್ತ್ರದ ಭಾಗ ಆಗಿಲ್ಲ ಮತ್ತು ಯೆಹೂದಿ ಕ್ರೈಸ್ತರು ಕೂಡ ‘ಧರ್ಮಶಾಸ್ತ್ರದಿಂದ ವಿಮುಕ್ತರಾಗಿದ್ದಾರೆ.’ (ರೋಮನ್ನರಿಗೆ 7:6) b ಮೋಶೆಯ ಧರ್ಮಶಾಸ್ತ್ರಕ್ಕೆ ಬದಲಾಗಿ “ಕ್ರಿಸ್ತನ ನಿಯಮ” ಬಂದಿದೆ. ಈ ನಿಯಮದಲ್ಲಿ ಯೇಸು ತನ್ನ ಹಿಂಬಾಲಕರಿಗೆ ಹೇಳಿದ ಎಲ್ಲಾ ವಿಷ್ಯಗಳು ಸೇರಿವೆ.—ಗಲಾತ್ಯ 6:2; ಮತ್ತಾಯ 28:19, 20.

 ಇವತ್ತು ಇದನ್ನ ಪಾಲಿಸೋದ್ರಿಂದ ಪ್ರಯೋಜ್ನ ಇದಿಯಾ?

 ಇದೆ. ಯಾಕಂದ್ರೆ ಹತ್ತು ಆಜ್ಞೆಗಳು ದೇವರ ಯೋಚನೆಯ ಬಗ್ಗೆ ತಿಳಿಸುತ್ತೆ. ಅದ್ರ ಬಗ್ಗೆ ತಿಳ್ಕೊಳ್ಳೋದ್ರಿಂದ ನಮಗೆ ತುಂಬಾ ಪ್ರಯೋಜ್ನ ಇದೆ. (2 ತಿಮೊತಿ 3:16, 17) ಈ ಹತ್ತು ಆಜ್ಞೆಗಳು ಶಾಶ್ವತವಾಗಿ ಪ್ರಯೋಜ್ನ ತರೋ ತತ್ವಗಳ ಮೇಲೆ ಆಧಾರವಾಗಿರೋದ್ರಿಂದ ಅದ್ರ ಮೇಲೆ ಪೂರ್ತಿ ಭರವಸೆ ಇಡಬಹುದು. (ಕೀರ್ತನೆ 111:7, 8) ಹೊಸ ಒಡಂಬಡಿಕೆಯ ಬೋಧನೆಗಳಿಗೆ ಈ ತತ್ವಗಳೇ ಆಧಾರ.—“ ಹೊಸ ಒಡಂಬಡಿಕೆಯಲ್ಲಿ ಇರೋ ಹತ್ತು ಆಜ್ಞೆಗಳ ತತ್ವಗಳು” ನೋಡಿ.

 ಇಡೀ ಮೋಶೆಯ ಧರ್ಮಶಾಸ್ತ್ರ ಮತ್ತು ಹತ್ತು ಆಜ್ಞೆಗಳು ಎರಡು ಪ್ರಾಮುಖ್ಯ ಆಜ್ಞೆಗಳ ಮೇಲೆ ಆಧರಿಸಿವೆ ಅಂತ ಯೇಸು ಕಲಿಸಿದನು. ಆತನು ಹೇಳಿದ್ದು, “‘ನಿನ್ನ ದೇವರಾದ ಯೆಹೋವನನ್ನು ನಿನ್ನ ಪೂರ್ಣ ಹೃದಯದಿಂದಲೂ ನಿನ್ನ ಪೂರ್ಣ ಪ್ರಾಣದಿಂದಲೂ ನಿನ್ನ ಪೂರ್ಣ ಮನಸ್ಸಿನಿಂದಲೂ ಪ್ರೀತಿಸಬೇಕು.’ ಇದೇ ಅತಿ ದೊಡ್ಡದಾದ ಮತ್ತು ಮೊದಲನೆಯ ಆಜ್ಞೆಯಾಗಿದೆ. ಇದರಂತಿರುವ ಎರಡನೆಯ ಆಜ್ಞೆಯು, ‘ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸಬೇಕು’ ಎಂಬುದೇ. ಇಡೀ ಧರ್ಮಶಾಸ್ತ್ರವೂ ಪ್ರವಾದಿಗಳ ಮಾತುಗಳೂ ಈ ಎರಡು ಆಜ್ಞೆಗಳ ಮೇಲೆ ಆಧಾರಿತವಾಗಿವೆ.” (ಮತ್ತಾಯ 22:34-40) ಇವತ್ತು ಕ್ರೈಸ್ತರು ಮೋಶೆಯ ಧರ್ಮಶಾಸ್ತ್ರದ ಕೆಳಗೆ ಇಲ್ಲದೇ ಇದ್ರೂ ದೇವರನ್ನ ಮತ್ತು ನೆರೆಯವರನ್ನ ಪ್ರೀತಿಸಬೇಕು ಅಂತ ಆಜ್ಞೆ ಕೊಡಲಾಗಿದೆ.—ಯೋಹಾನ 13:34; 1 ಯೋಹಾನ 4:20, 21.

  ಹೊಸ ಒಡಂಬಡಿಕೆಯಲ್ಲಿ ಇರೋ ಹತ್ತು ಆಜ್ಞೆಗಳ ತತ್ವಗಳು

ತತ್ವ

ಹೊಸ ಒಡಂಬಡಿಕೆಯ ರೆಫರೆನ್ಸ್‌

ಯೆಹೋವ ದೇವರನ್ನ ಮಾತ್ರ ಆರಾಧಿಸಬೇಕು

ಪ್ರಕಟನೆ 22:8, 9

ಮೂರ್ತಿಪೂಜೆ ಮಾಡಬಾರದು

1 ಕೊರಿಂಥ 10:14

ದೇವರ ಹೆಸ್ರಿಗೆ ಗೌರವ ಕೊಡಬೇಕು

ಮತ್ತಾಯ 6:9

ಕ್ರಮವಾಗಿ ದೇವರನ್ನ ಆರಾಧಿಸಬೇಕು

ಇಬ್ರಿಯ 10:24, 25

ಅಪ್ಪ ಅಮ್ಮಗೆ ಗೌರವ ಕೊಡಬೇಕು

ಎಫೆಸ 6:1, 2

ಕೊಲೆ ಮಾಡಬಾರದು

1 ಯೋಹಾನ 3:15

ವ್ಯಭಿಚಾರ ಮಾಡಬಾರದು

ಇಬ್ರಿಯ 13:4

ಕದಿಬಾರದು

ಎಫೆಸ 4:28

ಸುಳ್ಳು ಸಾಕ್ಷಿ ಹೇಳಬಾರದು

ಎಫೆಸ 4:25

ಬೇರೆಯವರ ವಸ್ತುಗಳನ್ನ ಆಸೆ ಪಡಬಾರದು

ಲೂಕ 12:15

a ಯೆಹೂದಿಗಳ ಸಂಪ್ರದಾಯದ ಪ್ರಕಾರ ಈ ಪಟ್ಟಿಯ ಕ್ರಮದಲ್ಲಿ “ವಿಮೋ[ಚನಕಾಂಡ] 20 ನೇ ಅಧ್ಯಾಯ 2 ನೇ ವಚನನ ಮೊದಲನೇ ‘ಆಜ್ಞೆ’ ಅಂತ ಹೇಳ್ತಾರೆ ಮತ್ತು ವಚನ 3-6 ರಲ್ಲಿರೋದು ಒಂದೇ ಆಜ್ಞೆ ಅಂತ ಅದನ್ನ 2 ನೇ ಆಜ್ಞೆ ಅಂತಾರೆ.” (ದ ಜ್ಯೂಯಿಷ್‌ ಎನ್‌ಸೈಕ್ಲಪೀಡಿಯ) ಆದ್ರೆ ಕ್ಯಾಥೋಲಿಕರು ವಿಮೋಚನಕಾಂಡ 20 ನೇ ಅಧ್ಯಾಯದ ವಚನ 1 ರಿಂದ 6ನ್ನ ಒಂದೇ ಆಜ್ಞೆ ಅಂತ ಹೇಳ್ತಾರೆ. ದೇವರ ಹೆಸ್ರನ್ನ ಅಯೋಗ್ಯ ಕಾರ್ಯಕ್ಕೆ ಉಪಯೋಗಿಸಬಾರದು ಅನ್ನೋದು ಅವ್ರ ಪ್ರಕಾರ 2 ನೇ ಆಜ್ಞೆ. ಆ ಪಟ್ಟಿಯಲ್ಲಿ 10 ಆಜ್ಞೆಗಳು ಇರಬೇಕು ಅನ್ನೋದಕ್ಕೋಸ್ಕರ ಹತ್ತನೇ ಆಜ್ಞೆನಾ ಎರಡು ಆಜ್ಞೆಗಳಾಗಿ ಅಂದ್ರೆ ಬೇರೆವ್ರ ಹೆಂಡತಿನಾ ಆಶಿಸಿಬಾರದು ಮತ್ತು ಬೇರೆವ್ರ ಸ್ವತ್ತುಗಳನ್ನ ಆಶಿಸಬಾರದು ಅಂತ ವಿಂಗಡಿಸಿದ್ದಾರೆ.

b ರೋಮನ್ನರಿಗೆ 7:7 ರಲ್ಲಿ ಮೋಶೆಯ ಧರ್ಮಶಾಸ್ತ್ರಕ್ಕೆ ಉದಾಹರಣೆಯಾಗಿ ಹತ್ತನೇ ಆಜ್ಞೆನ ತಿಳಿಸಲಾಗಿದೆ. ಹಾಗಾಗಿ ಹತ್ತು ಆಜ್ಞೆಗಳು ಮೋಶೆಯ ಧರ್ಮಶಾಸ್ತ್ರದ ಭಾಗವಾಗಿವೆ ಅಂತ ಗೊತ್ತಾಗುತ್ತೆ.