ಮಾಹಿತಿ ಇರುವಲ್ಲಿ ಹೋಗಲು

ಉಪವಾಸ ಮಾಡೋದು ಸರಿನಾ ತಪ್ಪಾ?

ಉಪವಾಸ ಮಾಡೋದು ಸರಿನಾ ತಪ್ಪಾ?

ಬೈಬಲ್‌ ಕೊಡೋ ಉತ್ತರ

 ಬೈಬಲ್‌ ಕಾಲದಲ್ಲಿ ಕೆಲವ್ರು ಉಪವಾಸ ಮಾಡ್ತಿದ್ರು. ಸರಿಯಾದ ಉದ್ದೇಶದಿಂದ ಉಪವಾಸ ಮಾಡ್ತಿದ್ರೆ ದೇವರು ಅದನ್ನ ಇಷ್ಟಪಡ್ತಿದ್ರು, ಆದ್ರೆ ತಪ್ಪಾದ ಉದ್ದೇಶಗಳಿಗಾಗಿ ಮಾಡ್ತಿದ್ರೆ ಇಷ್ಟಪಡ್ತಿರಲಿಲ್ಲ. ಬೈಬಲ್‌ ಉಪವಾಸ ಮಾಡಬೇಕು ಅಂತನೂ ಹೇಳಲ್ಲ, ಬೇಡ ಅಂತನೂ ಹೇಳಲ್ಲ.

ಬೈಬಲ್‌ ಕಾಲದಲ್ಲಿ ಯಾವ ಕಾರಣಕ್ಕೋಸ್ಕರ ಉಪವಾಸ ಮಾಡ್ತಿದ್ರು?

  •   ದೇವರ ಸಹಾಯ ಮತ್ತು ಮಾರ್ಗದರ್ಶನ ಪಡೆಯುವಾಗ. ಇಸ್ರಾಯೇಲ್ಯರು ಯೆರೂಸಲೇಮಿಗೆ ದೇವರನ್ನು ಆರಾಧಿಸೋಕೆ ಹೋಗುವಾಗ ಉಪವಾಸ ಮಾಡ್ತಿದ್ರು. ಹೀಗೆ ತಮಗೆ ದೇವರ ಸಹಾಯದ ಅಗತ್ಯ ಇದೆ ಅಂತ ತೋರಿಸ್ತಿದ್ರು. (ಎಜ್ರ 8:21-23) ಪೌಲ ಮತ್ತು ಬಾರ್ನಬ ಸಭೆಯಲ್ಲಿ ಹಿರಿಯರನ್ನು ಆರಿಸುವಾಗ ಕೆಲವು ಸಲ ಉಪವಾಸ ಮಾಡಿದ್ರು.—ಅಪೊಸ್ತಲರ ಕಾರ್ಯ 14:23.

  •   ದೇವರ ಉದ್ದೇಶಕ್ಕೆ ಗಮನ ಕೊಡುವಾಗ. ಯೇಸು ದೀಕ್ಷಾಸ್ನಾನ ಆದ ಮೇಲೆ ದೇವ್ರ ಚಿತ್ತ ಮಾಡೋಕೆ 40 ದಿನ ಉಪವಾಸ ಮಾಡಿದನು. ಹೀಗೆ ತಾನು ದೇವರ ಇಷ್ಟ ಮಾಡೋಕೆ ರೆಡಿ ಇದ್ದೀನಿ ಅಂತ ತೋರಿಸಿಕೊಟ್ಟನು.—ಲೂಕ 4:1, 2.

  •   ಮಾಡಿದ ತಪ್ಪಿಗೆ ಪಶ್ಚಾತ್ತಾಪ ಪಡುವಾಗ. ದೇವ್ರ ಮಾತನ್ನು ಕೇಳದ ಇಸ್ರಾಯೇಲ್ಯರಿಗೆ ಪ್ರವಾದಿ ಯೋವೇಲನ ಮೂಲಕ ದೇವರು “ಈಗಲಾದರೋ ನೀವು ಮನಃಪೂರ್ವಕವಾಗಿ ನನ್ನ ಕಡೆಗೆ ತಿರುಗಿಕೊಂಡು ಉಪವಾಸಮಾಡಿರಿ, ಅಳಿರಿ, ಗೋಳಾಡಿರಿ” ಅಂತ ಹೇಳಿದನು.—ಯೋವೇಲ 2:12-15.

  •   ದೋಷಪರಿಹಾರಕ ದಿನ ಆಚರಿಸುವಾಗ. ದೋಷಪರಿಹಾರಕ ದಿನ ಇಸ್ರಾಯೇಲ್ಯರು ಉಪವಾಸ ಮಾಡಬೇಕು ಅಂತ ದೇವ್ರು ಆಜ್ಞೆ ಕೊಟ್ಟಿದ್ದನು. a (ಯಾಜಕಕಾಂಡ 16:29-31) ಆ ಸಮಯದಲ್ಲಿ ಉಪವಾಸ ಮಾಡೋದು ಸರಿಯಾಗಿತ್ತು. ಯಾಕಂದ್ರೆ ಇಸ್ರಾಯೇಲ್ಯರು ಅಪರಿಪೂರ್ಣರು ಮತ್ತು ಅವರಿಗೆ ಕ್ಷಮೆ ಬೇಕು ಅನ್ನೋದನ್ನ ಅದು ನೆನಪು ಹುಟ್ಟಿಸ್ತಿತ್ತು.

ಜನ ಯಾವ ತಪ್ಪಾದ ಕಾರಣಗಳಿಗಾಗಿ ಉಪವಾಸ ಮಾಡ್ತಾರೆ?

  •   ಬೇರೆಯವರನ್ನ ಮೆಚ್ಚಿಸಲು. ನೀವು ಉಪವಾಸ ಮಾಡುವಾಗ ಅದು ನಿಮಗೆ ಮತ್ತು ದೇವರಿಗೆ ಮಾತ್ರ ಗೊತ್ತಿರಬೇಕು ಅಂತ ಯೇಸು ಕಲಿಸಿದನು.—ಮತ್ತಾಯ 6:16-18.

  •   ನೀತಿವಂತರು ಅಂತ ತೋರಿಸಿಕೊಳ್ಳಲು. ಉಪವಾಸ ಮಾಡೋದ್ರಿಂದ ಯಾರೂ ಬೇರೆಯವರಿಗಿಂತ ಶ್ರೇಷ್ಠರಾಗಲ್ಲ.—ಲೂಕ 18:9-14.

  •   ಬೇಕಂತ ಮಾಡಿದ ಪಾಪದ ಕ್ಷಮೆಗಾಗಿ. (ಯೆಶಾಯ 58:3, 4) ದೇವರಿಗೆ ವಿಧೇಯತೆ ತೋರಿಸಿ, ತಮ್ಮ ತಪ್ಪುಗಳಿಗೆ ನಿಜವಾದ ಪಶ್ಚಾತ್ತಾಪ ಪಟ್ಟು ಉಪವಾಸ ಮಾಡಿದವ್ರನ್ನ ಮಾತ್ರ ದೇವರು ಮೆಚ್ಚಿದ್ರು.

  •   ಧಾರ್ಮಿಕ ಆಚಾರಕ್ಕಾಗಿ. (ಯೆಶಾಯ 58:5-7) ಮಕ್ಕಳು ಅಪ್ಪ ಅಮ್ಮನನ್ನ ಮನದಾಳದಿಂದ ಪ್ರೀತಿಸಬೇಕು ಅಂತ ಇಷ್ಟಪಡ್ತಾರೆ. ಅದೇ ತರ ಯೆಹೋವ ದೇವ್ರು ಸಹ ತನ್ನ ಮಕ್ಕಳು ಕಾಟಾಚಾರಕ್ಕಲ್ಲ ಬದ್ಲಿಗೆ ಮನಸ್ಸು ಪೂರ್ತಿಯಾಗಿ ತನ್ನನ್ನ ಪ್ರೀತಿಸಬೇಕು ಅಂತ ಇಷ್ಟಪಡ್ತಾನೆ.

ಕ್ರೈಸ್ತರು ಉಪವಾಸ ಮಾಡಬೇಕಾ?

 ಇಲ್ಲ. ದೋಷಪರಿಹಾರಕ ದಿನ ಉಪವಾಸ ಮಾಡಬೇಕು ಅಂತ ದೇವರು ಇಸ್ರಾಯೇಲ್ಯರಿಗೆ ಹೇಳಿದ್ದನು. ಆದ್ರೆ ಯೇಸು ಎಲ್ಲರ ಪಾಪದ ಪರಿಹಾರಕ್ಕೋಸ್ಕರ ತನ್ನ ಪ್ರಾಣವನ್ನ ಕೊಟ್ಟ ನಂತ್ರ ದೋಷಪರಿಹಾರಕ ದಿನದ ಆಚರಣೆ ನಿಂತು ಹೋಯ್ತು. (ಇಬ್ರಿಯ 9:24-26; 1 ಪೇತ್ರ 3:18) ಕ್ರೈಸ್ತರು ಮೋಶೆಯ ಧರ್ಮಶಾಸ್ತ್ರದ ಕೆಳಗೆ ಇಲ್ಲದಿರೋದ್ರಿಂದ ಅವ್ರು ದೋಷಪರಿಹಾರಕ ದಿನವನ್ನ ಆಚರಿಸಬೇಕಾಗಿಲ್ಲ. (ರೋಮನ್ನರಿಗೆ 10:4; ಕೊಲೊಸ್ಸೆ 2:13, 14) ಆದ್ರಿಂದ ಕ್ರೈಸ್ತರು ಉಪವಾಸ ಮಾಡಬೇಕಾ ಬೇಡ್ವಾ ಅನ್ನೋದು ಅವ್ರವ್ರಿಗೆ ಬಿಟ್ಟ ವಿಷಯ.—ರೋಮನ್ನರಿಗೆ 14:1-4.

 ಉಪವಾಸ ಅನ್ನೋದು ಕ್ರೈಸ್ತರ ಆರಾಧನೆಯ ಮುಖ್ಯ ಭಾಗ ಅಲ್ಲ ಅಂತ ಅವ್ರಿಗೆ ಗೊತ್ತಿದೆ. ಉಪವಾಸ ಮಾಡಿದ್ರೆ ಖುಷಿಯಾಗಿರಬಹುದು ಅಂತ ಬೈಬಲ್‌ ಯಾವತ್ತೂ ಹೇಳಿಲ್ಲ. ನಿಜ ಕ್ರೈಸ್ತರು ಸಂತೋಷದಿಂದ ಆರಾಧನೆ ಮಾಡ್ತಾರೆ. ಯಾಕಂದ್ರೆ ಅವ್ರು, ‘ಸಂತೋಷದ ದೇವರಾದ’ ಯೆಹೋವನ ಗುಣಗಳನ್ನ ಅನುಕರಿಸ್ತಾರೆ.—1 ತಿಮೊತಿ 1:11; ಪ್ರಸಂಗಿ 3:12, 13; ಗಲಾತ್ಯ 5:22.

ಉಪವಾಸದ ಬಗ್ಗೆ ಇರೋ ತಪ್ಪಭಿಪ್ರಾಯ

 ತಪ್ಪಭಿಪ್ರಾಯ: ಯೇಸು ದೀಕ್ಷಾಸ್ನಾನ ಆದ್ಮೇಲೆ 40 ದಿನ ಉಪವಾಸ ಮಾಡಿದನು. ಅದ್ರ ನೆನಪಿಗೋಸ್ಕರ ಕ್ರೈಸ್ತರು ಉಪವಾಸ ಮಾಡಬೇಕು.

 ಸತ್ಯಾಂಶ: ಯೇಸು ಉಪವಾಸ ಮಾಡಿ ಅಂತ ಆಜ್ಞೆ ಕೊಡ್ಲಿಲ್ಲ ಮತ್ತು ಆರಂಭದಲ್ಲಿದ್ದ ಕ್ರೈಸ್ತರು ಯಾರೂ ಉಪವಾಸ ಮಾಡಿದ್ರು ಅಂತ ಬೈಬಲಿನಲ್ಲಿ ತಿಳಿಸಿಲ್ಲ. b

 ತಪ್ಪಭಿಪ್ರಾಯ: ಯೇಸುವಿನ ಮರಣವನ್ನ ಜ್ಞಾಪಿಸಿಕೊಳ್ಳೋಕಾಗಿ ಕ್ರೈಸ್ತರು ಉಪವಾಸ ಮಾಡಬೇಕು.

 ಸತ್ಯಾಂಶ: ತನ್ನ ಮರಣವನ್ನ ಸ್ಮರಿಸುವಾಗ ಉಪವಾಸ ಮಾಡಬೇಕು ಅಂತ ಯೇಸು ತನ್ನ ಶಿಷ್ಯರಿಗೆ ಆಜ್ಞೆ ಕೊಡ್ಲಿಲ್ಲ. (ಲೂಕ 22:14-18) ಯೇಸು ತನ್ನ ಸಾವಿನ ನಂತ್ರ ಶಿಷ್ಯರು ಉಪವಾಸ ಮಾಡ್ತಾರೆ ಅಂತ ಹೇಳಿದಾಗ ಅಲ್ಲಿನ ಪರಿಸ್ಥಿತಿ ಹೇಗಿರುತ್ತೆ ಅಂತ ಹೇಳ್ತಿದ್ದನೇ ಹೊರತು ಉಪವಾಸ ಮಾಡಬೇಕು ಅನ್ನೋದ್ರ ಬಗ್ಗೆ ಹೇಳ್ತಿರಲಿಲ್ಲ. (ಮತ್ತಾಯ 9:15) ಯೇಸುವಿನ ಮರಣದ ಸ್ಮರಣೆಯನ್ನ ಆಚರಿಸೋಕ್ಕಿಂತ ಮುಂಚೆ ಒಬ್ಬನಿಗೆ ಹಸಿವಾದ್ರೆ ಅವ್ನು ಮನೇಲೇ ಊಟ ಮಾಡಿಕೊಂಡು ಬರಲಿ ಅಂತ ಬೈಬಲ್‌ ಹೇಳುತ್ತೆ.—1 ಕೊರಿಂಥ 11:33, 34.

a ದೋಷಪರಿಹಾರಕ ದಿನದಲ್ಲಿ“ಪ್ರಾಣವನ್ನು ಕುಂದಿಸಿಕೊಳ್ಳಬೇಕು” ಅಂತ ದೇವರು ಇಸ್ರಾಯೇಲ್ಯರಿಗೆ ಹೇಳಿದ್ನು. (ಯಾಜಕಕಾಂಡ 16:29, 31) ಇದು ಉಪವಾಸ ಮಾಡೋದನ್ನ ಸೂಚಿಸಿರಬಹುದು. (ಯೆಶಾಯ 58:3) ಅದಕ್ಕಾಗಿ ಕಂಟೆಂಪರರಿ ಇಂಗ್ಲಿಷ್‌ ವರ್ಷನ್‌ “ನಿಮ್ಮ ಪಾಪಗಳಿಗೆ ನಿಮಗೆ ನೋವಾಗಿದೆ ಅಂತ ತೋರಿಸಲು ಊಟ ಮಾಡದೆ ಇರಬೇಕು” ಅಂತ ಹೇಳುತ್ತೆ.

b ಯೇಸು 40 ದಿನ ಉಪವಾಸ (ಲೆಂಟ್‌) ಮಾಡಿದ್ರ ಬಗ್ಗೆ ನ್ಯೂ ಕ್ಯಾಥೊಲಿಕ್‌ ಎನ್‌ಸೈಕ್ಲಪೀಡಿಯ ಹೇಳೋದು, “ಮೂರನೇ ಶತಮಾನದವರೆಗೆ ಈಸ್ಟರ್‌ಗಾಗಿ ಮಾಡುತ್ತಿದ್ದ ಉಪವಾಸ ಒಂದೆರಡು ದಿನ ಇರ್ತಿತ್ತೇ ಹೊರತು ಅದು ಒಂದು ವಾರ ಮೇಲೆ ದಾಟುತ್ತಿರಲಿಲ್ಲ . . . 40 ದಿನದ ಉಪವಾಸದ ಬಗ್ಗೆ ಮೊದ್ಲ ಬಾರಿ ಕ್ರಿಸ್ತ ಶಕ 325 ರಲ್ಲಿ ನೈಸೀಯ ಕೌನ್ಸಿಲ್‌ನ 5 ನೇ ಅಧಿಕೃತ ಪುಸ್ತಕದಲ್ಲಿ ತಿಳಿಸಲಾಗಿತ್ತು. ಆದ್ರೆ ಇಲ್ಲಿ ತಿಳಿಸಲಾಗಿರೋದು ಲೆಂಟ್‌ ಬಗ್ಗೆನಾ ಅನ್ನೋದ್ರ ಬಗ್ಗೆ ವಿದ್ವಾಂಸರಲ್ಲೇ ಗೊಂದಲ ಇದೆ.”—ಎರಡನೇ ಸಂಚಿಕೆ, ಸಂಪುಟ 8, ಪುಟ 468.