ಮಾಹಿತಿ ಇರುವಲ್ಲಿ ಹೋಗಲು

ಅವರ ನಂಬಿಕೆಯನ್ನು ಅನುಕರಿಸಿ | ಎಲೀಯ

ಕೊನೆವರೆಗೂ ತಾಳಿಕೊಂಡ

ಕೊನೆವರೆಗೂ ತಾಳಿಕೊಂಡ

ರಾಜ ಅಹಾಬನ ಸಾವಿನ ಸುದ್ದಿ ಕೇಳಿ ಎಲೀಯನು ಸ್ವಲ್ಪ ಹೊತ್ತು ಯೋಚನೆ ಮಾಡಿದನು. ಅವನು ತನ್ನ ಕಣ್ಣನ್ನು ಅಗಲಿಸಿ, ಗಡ್ಡದ ಮೇಲೆ ಕೈಯಾಡಿಸುತ್ತಾ, ಯೋಚಿಸುವುದನ್ನು ಸ್ವಲ್ಪ ಚಿತ್ರಿಸಿಕೊಳ್ಳಿ. ಬಹುಶಃ, ಆ ದುಷ್ಟ ರಾಜ ತನಗೆ ವರ್ಷಾನುಗಟ್ಟಲೆ ಕೊಟ್ಟ ಕಾಟದ ಬಗ್ಗೆ ಆಗ ಅವನು ನೆನಪಿಸಿಕೊಂಡಿರಬಹುದು. ಎಲೀಯನು ಎಷ್ಟೋ ವಿಷಯಗಳನ್ನು ತಾಳಿಕೊಂಡಿದ್ದನು! ಅಹಾಬ ಮತ್ತು ರಾಣಿ ಈಜೆಬೆಲಳು ಅವನಿಗೆ ಬೆದರಿಕೆ ಹಾಕಿದ್ದರು, ಸೈನಿಕರು ಅಟ್ಟಿಸಿಕೊಂಡು ಹೋಗಿದ್ದರು ಮತ್ತು ಅವನನ್ನು ಕೊಲ್ಲಲಿಕ್ಕಿದ್ದರು. ಯೆಹೋವನ ಪ್ರವಾದಿಗಳನ್ನು ಕೊಲ್ಲಲು ಈಜೆಬೆಲಳು ಕೊಟ್ಟ ಆಜ್ಞೆಯನ್ನು ತಡೆಯಲು ರಾಜ ಯಾವ ಹೆಜ್ಜೆಯನ್ನೂ ತೆಗೆದುಕೊಳ್ಳಲಿಲ್ಲ. ದುರಾಸೆಯಿಂದ, ನಾಬೋತ ಎಂಬ ನೀತಿವಂತನಾದ ನಿರಪರಾಧಿ ಮನುಷ್ಯನನ್ನು ಮತ್ತು ಅವನ ಗಂಡು ಮಕ್ಕಳನ್ನು ಕೊಂದುಹಾಕಲು ಗಂಡ-ಹೆಂಡತಿ ಕೂಡಿ ಸಂಚು ಮಾಡಿದ್ದರು. ಇದರ ಪ್ರತಿಯಾಗಿ ಎಲೀಯನು ಅಹಾಬನ ಮೇಲೆ ಮತ್ತು ಅವನ ಇಡೀ ವಂಶದ ಮೇಲೆ ಯೆಹೋವನ ತೀರ್ಪಿನ ಸಂದೇಶ ತಿಳಿಸಿದನು. ದೇವರು ಕೊಟ್ಟ ಮಾತು ಈಗ ನೆರವೇರಿತ್ತು. ಯೆಹೋವನು ಮುಂತಿಳಿಸಿದಂತೆಯೇ ಅಹಾಬ ಸತ್ತಿದ್ದನು.—1 ಅರಸುಗಳು 18:4; 21:1-26; 22:37, 38; 2 ಅರಸುಗಳು 9:26.

ಇಷ್ಟೆಲ್ಲ ಆದರೂ, ತಾನು ತಾಳಿಕೊಳ್ಳುತ್ತಾ ಮುಂದುವರಿಯಬೇಕು ಎಂದು ಎಲೀಯನಿಗೆ ಗೊತ್ತಿತ್ತು. ಯಾಕೆಂದರೆ ಈಜೆಬೆಲಳು ಇನ್ನೂ ಬದುಕಿದ್ದಳು ಮತ್ತು ತನ್ನ ಕುಟುಂಬ ಹಾಗೂ ದೇಶದ ಮೇಲೆ ಭಯಂಕರ ಪ್ರಭಾವವನ್ನು ಬೀರುತ್ತಾ ಇದ್ದಳು. ಎಲೀಯನು ಇನ್ನೂ ಅನೇಕ ಸವಾಲುಗಳನ್ನು ಎದುರಿಸಲಿದ್ದನು. ತನ್ನ ಸಂಗಡಿಗನಾದ ಎಲೀಷನಿಗೆ ಮುಂದೆ ತನ್ನ ಸ್ಥಾನವನ್ನು ವಹಿಸಿಕೊಡಬೇಕಿತ್ತು. ಹಾಗಾಗಿ ಅವನಿಗೆ ಇನ್ನೂ ತುಂಬ ಕಲಿಸಲಿಕ್ಕಿತ್ತು. ಈಗ ಎಲೀಯನ ಕೊನೆಯ ಮೂರು ನೇಮಕಗಳಿಗೆ ನಾವು ಗಮನಕೊಡೋಣ. ಅವನ ನಂಬಿಕೆ ಅವನಿಗೆ ತಾಳಿಕೊಳ್ಳಲು ಹೇಗೆ ಸಹಾಯ ಮಾಡಿತೆಂದು ನೋಡುವಾಗ, ನಾವು ಬದುಕುತ್ತಿರುವ ಈ ಕಷ್ಟಕರ ಸಮಯಗಳಲ್ಲಿ, ನಮ್ಮ ನಂಬಿಕೆಯನ್ನು ಹೇಗೆ ಬಲಪಡಿಸಿಕೊಳ್ಳಬಹುದು ಎಂದು ಇನ್ನೂ ಚೆನ್ನಾಗಿ ತಿಳಿದುಕೊಳ್ಳೋಣ.

ಅಹಜ್ಯನಿಗೆ ಹೇಳಿದ ತೀರ್ಪು

ಅಹಜ್ಯನು, ಅಹಾಬ-ಈಜೆಬೆಲಳ ಮಗನಾಗಿದ್ದನು ಮತ್ತು ಈಗ ಇಸ್ರಾಯೇಲಿನ ರಾಜನಾಗಿದ್ದನು. ತನ್ನ ತಂದೆ-ತಾಯಿಯ ಮೂರ್ಖತನದಿಂದ ಪಾಠ ಕಲಿಯುವ ಬದಲು, ಅವರ ದುಷ್ಟ ಮಾರ್ಗವನ್ನು ಅನುಸರಿಸಿದನು. (1 ಅರಸುಗಳು 22:52) ಅವರಂತೆಯೇ, ಅಹಜ್ಯನು ಸಹ ಬಾಳನನ್ನು ಆರಾಧಿಸಿದನು. ಈ ಆರಾಧನೆ, ದೇವಾಲಯದಲ್ಲಿ ಸ್ತ್ರೀಪುರುಷರ ವೇಶ್ಯಾವಾಟಿಕೆ ಮತ್ತು ಶಿಶುಯಜ್ಞಗಳಂಥ ಕೀಳುಮಟ್ಟದ ವಿಷಯಗಳನ್ನು ಮಾಡುವಂತೆ ಜನರನ್ನು ಪ್ರೋತ್ಸಾಹಿಸುತ್ತಿತ್ತು. ಯೆಹೋವನಿಗೆ ನಿಷ್ಠೆ ತೋರಿಸದ ಈ ಜನರನ್ನು, ಅವರ ಅಸಹ್ಯಕರ ಮಾರ್ಗದಿಂದ ಅಹಜ್ಯನು ತಿರುಗಿಸಿದನಾ? ಇದನ್ನು ಮಾಡಲು, ಮೊದಲು ಅವನು ತನ್ನನ್ನು ಬದಲಾಯಿಸಿಕೊಂಡನಾ? ಮುಂದೆ ನೋಡೋಣ.

ಅಹಂಕಾರಿಯಾಗಿದ್ದ ಆ ಯೌವನಸ್ಥ ರಾಜನಿಗೆ ಒಂದು ದುರಂತ ಸಂಭವಿಸಿತು. ತನ್ನ ಮೇಲಂತಸ್ತಿನ ಕೋಣೆಯಿಂದ ಬಿದ್ದು ತುಂಬ ಏಟುಮಾಡಿಕೊಂಡನು. ತನ್ನ ಪ್ರಾಣವನ್ನೇ ಕಳಕೊಳ್ಳುವ ಸ್ಥಿತಿಯಲ್ಲಿದ್ದರೂ, ಸಹಾಯಕ್ಕಾಗಿ ಅವನು ಯೆಹೋವನ ಕಡೆಗೆ ತಿರುಗಲಿಲ್ಲ. ಬದಲಿಗೆ, ವೈರಿಗಳಾದ ಫಿಲಿಷ್ಟಿಯರ ಪಟ್ಟಣವಾಗಿದ್ದ ಎಕ್ರೋನಿಗೆ ತನ್ನ ಸೇವಕರನ್ನು ಕಳಿಸಿದನು. ಅಲ್ಲಿ ಅವರು, ಬಾಳ್ಜೆಬೂಬ ಎಂಬ ದೇವರ ಹತ್ತಿರ ಅಹಜ್ಯನು ವಾಸಿಯಾಗುತ್ತಾನಾ ಎಂದು ವಿಚಾರಿಸಬೇಕಿತ್ತು. ಯೆಹೋವನಿಗೆ ಇದು ಕೋಪ ತರಿಸಿತು. ಆದ್ದರಿಂದ, ಆತನು ಎಲೀಯನ ಬಳಿಗೆ ಒಬ್ಬ ದೇವದೂತನನ್ನು ಕಳಿಸಿ, ನಡುದಾರಿಯಲ್ಲೇ ಅಹಜ್ಯನ ಸೇವಕರನ್ನು ತಡೆಯುವಂತೆ ಹೇಳಿದನು. ಆಗ ಪ್ರವಾದಿ ಎಲೀಯನು ಅವರನ್ನು ನಿಲ್ಲಿಸಿ, ‘ಇಸ್ರಾಯೇಲಿಗೆ ದೇವರೇ ಇಲ್ಲವೇನೋ ಅನ್ನುವ ರೀತಿಯಲ್ಲಿ ನಡಕೊಳ್ಳುವ ಮೂಲಕ ಅಹಜ್ಯನು ಗಂಭೀರವಾದ ತಪ್ಪು ಮಾಡಿದ್ದಾನೆ. ಹಾಗಾಗಿ ಅವನಿಗೆ ವಾಸಿಯಾಗುವುದೇ ಇಲ್ಲ, ಹತ್ತಿದ ಮಂಚದಿಂದ ಇಳಿಯುವುದೇ ಇಲ್ಲ ಎಂದು ಯೆಹೋವನು ಹೇಳಿದ್ದಾನೆ’ ಎಂಬ ಘೋರವಾದ ಸುದ್ದಿಯನ್ನು ಹೇಳಿ ಕಳಿಸಿದನು.—2 ಅರಸುಗಳು 1:2-4.

ಇಷ್ಟಾದರೂ, ಪಶ್ಚಾತ್ತಾಪಪಡದ ಅಹಜ್ಯನು ಆ ಸೇವಕರನ್ನು, ‘ನಿಮ್ಮೆದುರಿಗೆ ಬಂದು ಹೀಗೆ ಹೇಳಿದ ಮನುಷ್ಯನು ನೋಡಲು ಹೇಗಿದ್ದನು?’ ಎಂದು ಕೇಳಿದನು. ಅವನ ಉಡುಪು ಪ್ರವಾದಿಗಳು ಸಾಮಾನ್ಯವಾಗಿ ಹಾಕುತ್ತಿದ್ದ ಸರಳವಾದ ಉಡುಪಿನ ಹಾಗೆ ಇತ್ತೆಂದು ಹೇಳಿದರು. ಅಹಜ್ಯನು ಇದನ್ನು ಕೇಳಿ, “ಆ ಮನುಷ್ಯನು . . . ಎಲೀಯನೇ ಆಗಿರಬೇಕು” ಎಂದು ತಕ್ಷಣ ಹೇಳಿದನು. (2 ಅರಸುಗಳು 1:7, 8) ಎಲೀಯನು, ಎಷ್ಟು ಸರಳ ಹಾಗೂ ಯೆಹೋವನ ಸೇವೆಗೆ ಪೂರ್ಣ ಗಮನ ಕೊಡುವ ಜೀವನ ನಡೆಸುತ್ತಿದ್ದನೆಂದರೆ, ಅವನು ಧರಿಸುತ್ತಿದ್ದ ಉಡುಪಿನ ವಿವರಣೆಯಿಂದಲೇ ಅವನು ಯಾರೆಂದು ಗುರುತಿಸಲು ಸಾಧ್ಯವಾಗುತ್ತಿತ್ತು. ಆದರೆ ಅಹಜ್ಯನಾಗಲಿ ಅವನ ತಂದೆ-ತಾಯಿಯಾಗಲಿ ಈ ರೀತಿ ಇರಲಿಲ್ಲ. ಅವರು ದುರಾಸೆ ತುಂಬಿದ ಆಡಂಬರದ ಜೀವನ ನಡೆಸುತ್ತಿದ್ದ ವ್ಯಕ್ತಿಗಳಾಗಿದ್ದರು. ಇಂದು ನಾವು ಯೇಸುವಿನ ಸಲಹೆಯಂತೆ ಸರಳವಾದ ಜೀವನ ನಡೆಸಲು ಮತ್ತು ನಮ್ಮ ಕಣ್ಣನ್ನು ಪ್ರಾಮುಖ್ಯವಾದ ವಿಷಯಗಳ ಮೇಲಿಡಲು ಎಲೀಯನ ಈ ಮಾದರಿ ಸಹಾಯಮಾಡುತ್ತದೆ.—ಮತ್ತಾಯ 6:22-24.

ಆದರೆ ಸೇಡು ತೀರಿಸಲೇಬೇಕೆಂದು ಅಹಜ್ಯನು, ಎಲೀಯನನ್ನು ತನ್ನ ಹತ್ತಿರ ಕರೆದುಕೊಂಡು ಬರುವಂತೆ ಒಬ್ಬ ನಾಯಕನನ್ನು 50 ಸೈನಿಕರ ದಂಡಿನೊಂದಿಗೆ ಕಳುಹಿಸಿದನು. ಎಲೀಯನು “ಬೆಟ್ಟದ ತುದಿಯಲ್ಲಿ ಕೂತಿರುವದನ್ನು” ಕಂಡಾಗ, * ಆ ಸೈನಿಕರ ನಾಯಕನು ಅವನಿಗೆ “ಇಳಿದು ಬಾ ಅರಸನು ನಿನ್ನನ್ನು ಕರೆಯುತ್ತಾನೆ” ಎಂದು ಸೊಕ್ಕಿನಿಂದ ಹೇಳಿದನು. ಬಹುಶಃ, ಎಲೀಯನಿಗೆ ಮುಂದೆ ಮರಣ ದಂಡನೆ ಕಾದಿತ್ತು. ಸ್ವಲ್ಪ ಚಿತ್ರಿಸಿಕೊಳ್ಳಿ! ಎಲೀಯನು ‘ದೇವರ ಮನುಷ್ಯನಾಗಿದ್ದಾನೆ’ ಎಂದು ಆ ಸೈನಿಕರಿಗೆ ತಿಳಿದಿತ್ತಾದರೂ, ಅವನನ್ನು ಗದರಿಸಬೇಕು, ಬೆದರಿಕೆ ಹಾಕಬೇಕು ಅಂತ ಅಂದುಕೊಂಡಿದ್ದರು. ಆದರೆ ಅವರು ನೆನಸಿದ್ದು ಎಷ್ಟು ತಪ್ಪಾಗಿತ್ತು! ಆ ನಾಯಕನಿಗೆ ಎಲೀಯನು, “ನಾನು ದೇವರ ಮನುಷ್ಯನಾಗಿರುವದಾದರೆ ಆಕಾಶದಿಂದ ಬೆಂಕಿಬಿದ್ದು ನಿನ್ನನ್ನೂ ನಿನ್ನ ಐವತ್ತು ಮಂದಿ ಸಿಪಾಯಿಗಳನ್ನೂ ದಹಿಸಿಬಿಡಲಿ” ಎಂದು ಹೇಳಿದನು. ಆಗ ದೇವರು ಹಾಗೇ ಮಾಡಿದನು. “ಆಕಾಶದಿಂದ ಬೆಂಕಿಬಿದ್ದು ಅವನನ್ನೂ ಅವನ ಐವತ್ತು ಮಂದಿ ಸಿಪಾಯಿಗಳನ್ನೂ ದಹಿಸಿಬಿಟ್ಟಿತು.” (2 ಅರಸುಗಳು 1:9, 10) ಯಾರಾದರೂ ತನ್ನ ಸೇವಕರೊಂದಿಗೆ ಅಗೌರವದಿಂದ ಅಥವಾ ತಾತ್ಸಾರದಿಂದ ನಡೆದುಕೊಂಡರೆ, ಯೆಹೋವನು ಅದೊಂದು ಸಣ್ಣ ವಿಷಯವೆಂದು ನೆನಸಿ ಸುಮ್ಮನಿರುವುದಿಲ್ಲ ಎಂದು ಆ ಸೈನಿಕರಿಗೆ ಬಂದ ದುಃಖಕರ ಅಂತ್ಯದಿಂದ ನಮಗೆ ಚೆನ್ನಾಗಿ ಗೊತ್ತಾಗುತ್ತದೆ.—1 ಪೂರ್ವಕಾಲವೃತ್ತಾಂತ 16:21, 22.

ಅಹಜ್ಯನು ಪುನಃ ಇನ್ನೊಬ್ಬ ನಾಯಕನೊಂದಿಗೆ 50 ಮಂದಿ ಸೈನಿಕರನ್ನು ಕಳಿಸಿದನು. ಈ ಎರಡನೇ ನಾಯಕನು ಮೊದಲನೇ ನಾಯಕನಿಗಿಂತ ಇನ್ನೂ ಒರಟಾಗಿದ್ದನು. ಆ ಸತ್ತುಹೋದ 51 ಮಂದಿಯ ಬೂದಿ ಇನ್ನೂ ಆ ಬೆಟ್ಟದಲ್ಲೇ ಇದ್ದಿರಬೇಕು. ಆದರೂ ಅವರ ಸಾವಿನಿಂದ ಈ ನಾಯಕ ಯಾವುದೇ ಪಾಠ ಕಲಿತಿರಲಿಲ್ಲ ಅನ್ನೋದಂತೂ ನಿಜ. ಅಷ್ಟೇ ಅಲ್ಲ, ತನಗಿಂತ ಮುಂಚೆ ಬಂದಿದ್ದ ನಾಯಕನಂತೆ ಇವನು ಸಹ, “ಇಳಿದು ಬಾ” ಎಂದು ಸೊಕ್ಕಿನಿಂದ ಹೇಳಿದ್ದಲ್ಲದೆ, ಅದಕ್ಕೆ “ಬೇಗನೆ” ಅಂತ ಸೇರಿಸಿ ಹೇಳಿದನು! ಎಂಥಾ ಮೂರ್ಖತನ! ಮೊದಲನೇ ಗುಂಪಿನವರ ಹಾಗೆಯೇ ಇವರು ಕೂಡ ಬೂದಿಯಾಗಿ ಹೋದರು. ರಾಜ ಈ ನಾಯಕನಿಗಿಂತ ಇನ್ನೂ ದೊಡ್ಡ ಮೂರ್ಖನಾಗಿದ್ದನು. ಸೋಲನ್ನೊಪ್ಪಿಕೊಳ್ಳದೆ, ಸೈನಿಕರ ಮೂರನೇ ದಂಡನ್ನು ಕಳಿಸಿದನು. ಒಳ್ಳೇ ವಿಷಯ ಏನೆಂದರೆ, ಈ ಮೂರನೇ ನಾಯಕನು ವಿವೇಕಿಯಾಗಿದ್ದನು. ಎಲೀಯನ ಹತ್ತಿರ ಬಂದು, ದೀನತೆಯಿಂದ ತನ್ನ ಮತ್ತು ತನ್ನ ಸೈನಿಕರ ಜೀವವನ್ನು ಉಳಿಸಲು ಬೇಡಿಕೊಂಡನು. ದೇವರ ಮನುಷ್ಯನಾಗಿದ್ದ ಎಲೀಯನು ಈ ದೀನ ನಾಯಕನೊಂದಿಗೆ ವ್ಯವಹರಿಸುವಾಗ ಯೆಹೋವನ ಕರುಣೆಯನ್ನು ಪ್ರತಿಬಿಂಬಿಸಿದನು ಅನ್ನೋದರಲ್ಲಿ ಯಾವುದೇ ಸಂದೇಹವಿಲ್ಲ. ಯೆಹೋವನ ದೂತನು ಎಲೀಯನಿಗೆ, ಈ ಸೈನಿಕರ ಜೊತೆ ಹೋಗುವಂತೆ ಹೇಳಿದನು. ಈ ಮಾತಿಗೆ ಎಲೀಯನು ವಿಧೇಯನಾದನು ಮತ್ತು ಆ ದುಷ್ಟ ರಾಜನ ಬಗ್ಗೆ ಯೆಹೋವನು ನೀಡಿದ್ದ ತೀರ್ಪನ್ನು ಪುನಃ ಹೇಳಿದನು. ದೇವರು ಹೇಳಿದ ಹಾಗೆಯೇ ಅಹಜ್ಯನು ಸತ್ತುಹೋದನು. ಅವನು ಆಳಿದ್ದು ಬರೀ ಎರಡು ವರ್ಷ.—2 ಅರಸುಗಳು 1:11-17.

ದೀನ ನಾಯಕನ ಹತ್ತಿರ ಎಲೀಯನು ಯೆಹೋವನ ಕರುಣೆಯನ್ನು ಪ್ರತಿಬಿಂಬಿಸಿದನು

ತನ್ನ ಸುತ್ತ-ಮುತ್ತಲಿದ್ದ ಜನ, ಮೊಂಡ ಹಾಗೂ ದಂಗೆಕೋರರಾಗಿದ್ದರೂ ಎಲೀಯನು ಹೇಗೆ ತಾಳಿಕೊಂಡನು? ಇಂದು ನಾವು ಸಹ ಇಂಥ ಜನರ ಮಧ್ಯೆನೇ ಜೀವಿಸುತ್ತಿದ್ದೇವೆ ಅಲ್ವಾ? ನಿಮ್ಮ ಪ್ರಿಯರಲ್ಲಿ ಒಬ್ಬರು ಯಾವಾಗಾದರೂ ನಿಮ್ಮ ಬುದ್ಧಿಮಾತಿಗೆ ಕಿವಿಗೊಡದೆ ಮೊಂಡತನದಿಂದ ಕೆಟ್ಟ ಹಾದಿ ಹಿಡಿದಿದ್ದಾರಾ? ಆಗ ನಿಮಗೆ ಬೇಜಾರಾಗಿದೆಯಾ? ಆ ರೀತಿ ಆದಾಗ, ಹೇಗೆ ತಾಳಿಕೊಳ್ಳೋದು? ಇದನ್ನು ಕಲಿಯಲು, ಸೈನಿಕರಿಗೆ ಎಲೀಯನು ಎಲ್ಲಿ ಸಿಕ್ಕಿದನು ಎಂದು ನೋಡೋಣ. ‘ಎಲೀಯನು ಬೆಟ್ಟದ ತುದಿಯಲ್ಲಿ ಕೂತಿದ್ದನು.’ ಅವನು ಅಲ್ಲಿ ಯಾಕೆ ಇದ್ದನು ಎಂದು ನಾವು ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಆದರೆ ಅವನು ಸತತವಾಗಿ ಪ್ರಾರ್ಥಿಸುವ ವ್ಯಕ್ತಿಯಾಗಿದ್ದನು ಮತ್ತು ಆ ಏಕಾಂತವಾದ ಜಾಗವು ದೇವರಿಗೆ ಹತ್ತಿರವಾಗಲು ಒಂದು ಒಳ್ಳೇ ಅವಕಾಶ ಮಾಡಿಕೊಟ್ಟಿತು ಎಂದು ಖಂಡಿತವಾಗಿ ಹೇಳಬಹುದು. (ಯಾಕೋಬ 5:16-18) ಅವನಂತೆ ನಾವೂ ಕೂಡ ದೇವರ ಜೊತೆ ಏಕಾಂತವಾಗಿ ಇರಲು ಸಮಯ ಮಾಡಿಕೊಳ್ಳಬಹುದು, ಆತನ ಹೆಸರೆತ್ತಿ ನಮ್ಮ ತೊಂದರೆಗಳನ್ನು ಮತ್ತು ಚಿಂತೆಗಳನ್ನು ಹೇಳಿಕೊಳ್ಳಬಹುದು. ಆಗ ನಮ್ಮ ಸುತ್ತ-ಮುತ್ತಲಿನ ಜನ ಹಿಂದೆ ಮುಂದೆ ಯೋಚಿಸದೆ ತಮ್ಮನ್ನು ತಾವೇ ಹಾಳು ಮಾಡಿಕೊಳ್ಳುವ ಹಾದಿ ಹಿಡಿಯುವಾಗಲೂ ನಾವು ಇನ್ನಷ್ಟು ತಾಳಿಕೊಳ್ಳಲು ಸಾಧ್ಯವಾಗುತ್ತದೆ.

ಜವಾಬ್ದಾರಿಯನ್ನು ಒಪ್ಪಿಸಿಕೊಟ್ಟನು

ಎಲೀಯನು ತನ್ನ ನೇಮಕವನ್ನು ಬಿಟ್ಟುಕೊಡುವ ಸಮಯ ಬಂದಿತ್ತು. ಅವನು ಏನು ಮಾಡಿದನು ಎಂದು ಗಮನಿಸಿ. ಅವನು ಮತ್ತು ಎಲೀಷನು ಗಿಲ್ಗಾಲಿನಿಂದ ಹೊರಡುವಾಗ, ಎಲೀಯನು ಎಲೀಷನಿಗೆ ಅಲ್ಲೇ ಉಳಿದುಕೊಳ್ಳಲು ಕೇಳಿಕೊಂಡನು. ತಾನೊಬ್ಬನೇ ಸುಮಾರು 11 ಕಿ.ಮೀ. ದೂರದಲ್ಲಿದ್ದ ಬೇತೇಲಿಗೆ ಹೋಗಿ ಬರುತ್ತೇನೆಂದು ಹೇಳಿದನು. ಅದಕ್ಕೆ ಎಲೀಷನು ದೃಢನಿಶ್ಚಯದಿಂದ, “ಯೆಹೋವನಾಣೆ, ನಿನ್ನ ಜೀವದಾಣೆ, ನಾನು ನಿನ್ನನ್ನು ಬಿಟ್ಟುಹೋಗುವದಿಲ್ಲ” ಎಂದನು. ಅವರಿಬ್ಬರು ಬೇತೇಲಿಗೆ ತಲಪಿದ ಮೇಲೆ, ಎಲೀಯನು ಎಲೀಷನಿಗೆ ತಾನು ಸುಮಾರು 22 ಕಿ.ಮೀ. ದೂರ ಇರುವ ಯೆರಿಕೋವಿಗೆ ಹೋಗಿ ಬರುತ್ತೇನೆಂದು ಹೇಳಿದನು. ಆಗಲೂ ಎಲೀಷನು ದೃಢನಿಶ್ಚಯದಿಂದ ಮುಂಚಿನಂತೆಯೇ ಹೇಳಿದನು. ಇದೇ ರೀತಿ ಮೂರನೇ ಬಾರಿಗೆ ಯೆರಿಕೋವಿನಲ್ಲಿಯೂ ನಡೆಯಿತು. ಅಲ್ಲಿಂದ ಅವರು ಸುಮಾರು 8 ಕಿ.ಮೀ. ದೂರದಲ್ಲಿದ್ದ ಯೊರ್ದನ್‌ ಹೊಳೆಯ ಕಡೆಗೆ ಹೋಗಲಿದ್ದರು. ಆಗಲೂ ಎಲೀಷನು ಎಲೀಯನಿಗೆ ದೃಢವಾಗಿ ಅಂಟಿಕೊಂಡನು, ಅವನನ್ನು ಬಿಟ್ಟು ಹೋಗಲೇ ಇಲ್ಲ!—2 ಅರಸುಗಳು 2:1-6.

ಎಲೀಷನು ತುಂಬ ಪ್ರಾಮುಖ್ಯವಾದ ಗುಣವನ್ನು ವ್ಯಕ್ತಪಡಿಸುತ್ತಿದ್ದನು—ನಿಷ್ಠಾವಂತ ಪ್ರೀತಿ. ಇದು, ರೂತಳು ನೊವೊಮಿಗೆ ತೋರಿಸಿದಂಥ ಪ್ರೀತಿ ಆಗಿತ್ತು. ನಿಷ್ಠಾವಂತ ಪ್ರೀತಿ ತೋರಿಸೋದಂದ್ರೆ ಒಂದು ವಿಷಯ ಅಥವಾ ವ್ಯಕ್ತಿಗೆ ಗಟ್ಟಿಯಾಗಿ ಅಂಟಿಕೊಂಡು ಅದನ್ನು ಬಿಡದೆ ಇರುವುದು. (ರೂತಳು 1:15, 16) ದೇವರ ಎಲ್ಲಾ ಸೇವಕರಿಗೆ ಈ ಗುಣ ಹಿಂದೆಂದಿಗಿಂತಲೂ ಈಗ ತುಂಬ ಅಗತ್ಯ. ಎಲೀಷನಿಗೆ ಅದರ ಪ್ರಾಮುಖ್ಯತೆ ಎಷ್ಟು ಚೆನ್ನಾಗಿ ಅರ್ಥ ಆಗಿತ್ತೋ ನಮಗೂ ಅಷ್ಟೇ ಚೆನ್ನಾಗಿ ಅರ್ಥ ಆಗಿದೆಯಾ?

ತನ್ನ ಯೌವನಸ್ಥ ಸಂಗಡಿಗನ ನಿಷ್ಠಾವಂತ ಪ್ರೀತಿಯು ಖಂಡಿತವಾಗಿ ಎಲೀಯನ ಮನಮುಟ್ಟಿರಬೇಕು. ಈ ನಿಷ್ಠಾವಂತ ಪ್ರೀತಿ ತೋರಿಸಿದ್ದರಿಂದಲೇ ಎಲೀಷನಿಗೆ, ಯೊರ್ದನ್‌ ಹೊಳೆಯ ದಡದಲ್ಲಿ ಎಲೀಯನು ಮಾಡಿದ ಕೊನೆಯ ಅದ್ಭುತವನ್ನು ನೋಡುವ ಸುಯೋಗ ಸಿಕ್ಕಿತು. ಯೋರ್ದನ್‌ ಹೊಳೆಯು ತುಂಬ ವೇಗವಾಗಿ ಹರಿಯುತ್ತಿತ್ತು ಮತ್ತು ಕೆಲವು ಕಡೆ ಆಳವಾಗಿತ್ತು. ದಡದಲ್ಲಿ ನಿಂತು ತನ್ನ ಕಂಬಳಿಯಿಂದ ಎಲೀಯನು ನೀರಿಗೆ ಹೊಡೆದನು. ನೀರು ಎರಡು ಭಾಗವಾಯಿತು! ಇದನ್ನು “ಪ್ರವಾದಿಮಂಡಲಿಯವರಲ್ಲಿ ಐವತ್ತು ಜನರು” ಕೂಡ ನೋಡಿದರು. (2 ಅರಸುಗಳು 2:7, 8) ಇವರು, ಇಡೀ ದೇಶದಲ್ಲಿ ಶುದ್ಧಾರಾಧನೆಯಲ್ಲಿ ಪ್ರಮುಖ ಪಾತ್ರ ವಹಿಸಲು ತರಬೇತಿ ಪಡೆಯುತ್ತಿದ್ದ ಒಂದು ಗುಂಪಿನ ಭಾಗವಾಗಿದ್ದಿರಬೇಕು. ಎಲೀಯನು, ಸಂಖ್ಯೆಯಲ್ಲಿ ಬೆಳೆಯುತ್ತಿರುವ ಈ ಗುಂಪಿಗೆ ತರಬೇತಿ ಕೊಡುವ ಕಾರ್ಯಕ್ರಮದ ಮೇಲ್ವಿಚಾರಕನಾಗಿದ್ದನೆಂದು ಕಾಣುತ್ತದೆ. ಕೆಲವು ವರ್ಷಗಳ ಹಿಂದೆ, ಇಡೀ ದೇಶದಲ್ಲಿ ತಾನೊಬ್ಬನೇ ನಂಬಿಗಸ್ತ ವ್ಯಕ್ತಿಯಾಗಿದ್ದನೆಂದು ಎಲೀಯನಿಗೆ ಅನಿಸಿತ್ತು. ಅಂದಿನಿಂದ, ಯೆಹೋವನು ತನ್ನ ಆರಾಧಕರ ಸಂಖ್ಯೆಯಲ್ಲಿ ತುಂಬ ಪ್ರಗತಿಯಾಗುವುದನ್ನು ಎಲೀಯನು ನೋಡುವಂತೆ ಮಾಡಿದನು. ಹೀಗೆ ಅವನು ತಾಳ್ಮೆ ತೋರಿಸಿದ್ದಕ್ಕಾಗಿ ಯೆಹೋವನು ಆಶೀರ್ವದಿಸಿದನು.—1 ಅರಸುಗಳು 19:10.

ಯೊರ್ದನ್‌ ಹೊಳೆಯನ್ನು ದಾಟಿದ ಮೇಲೆ, ಎಲೀಯನು ಎಲೀಷನಿಗೆ, “ನಿನ್ನನ್ನು ಬಿಟ್ಟು ಹೋಗುವ ಮೊದಲು ನಾನು ನಿನಗೋಸ್ಕರ ಏನು ಮಾಡಬೇಕನ್ನುತ್ತೀ ಹೇಳು” ಎಂದು ಕೇಳಿದನು. ವಿದಾಯ ಹೇಳುವ ಸಮಯ ಬಂದಿದೆ ಎಂದು ಎಲೀಯನಿಗೆ ಗೊತ್ತಿತ್ತು. ತನಗಿಂತ ಚಿಕ್ಕವನಾಗಿದ್ದ ಎಲೀಷನಿಗೆ ಮುಂದೆ ಸುಯೋಗಗಳು ಮತ್ತು ಪ್ರಖ್ಯಾತಿ ಸಿಗುತ್ತವಲ್ಲಾ ಎಂದು ಯೋಚಿಸಿ ಅವನು ಅಸೂಯೆ ಪಡಲಿಲ್ಲ. ಬದಲಿಗೆ, ತನ್ನಿಂದ ಏನು ಸಹಾಯ ಮಾಡಕ್ಕಾಗುತ್ತೋ ಅದನ್ನು ಮಾಡಲು ಕಾತುರದಿಂದ ಇದ್ದನು. ಎಲೀಷನು ಒಂದೇ ಒಂದು ವಿನಂತಿ ಮಾಡಿದನು. “ನಿನಗಿರುವ ಆತ್ಮದಲ್ಲಿ ನನಗೆ ಎರಡು ಪಾಲನ್ನು ಅನುಗ್ರಹಿಸು” ಎಂದನು. (2 ಅರಸುಗಳು 2:9) ಎಲೀಯನಿಗೆ ಸಿಕ್ಕಿದ ಪವಿತ್ರಾತ್ಮ ಶಕ್ತಿಯ ಎರಡು ಪಟ್ಟು ತನಗೆ ಬೇಕೆಂದು ಎಲೀಷ ಆಸೆಪಡುತ್ತಿರಲಿಲ್ಲ. ಯಾಕೆಂದರೆ, ಧರ್ಮಶಾಸ್ತ್ರದ ಪ್ರಕಾರ ಚೊಚ್ಚಲ ಮಗ ಕುಟುಂಬ-ತಲೆತನದ ಜವಾಬ್ದಾರಿಯನ್ನು ಹೊರಬೇಕಿತ್ತು. ಹಾಗಾಗಿ ಆಸ್ತಿಯಲ್ಲಿ ದೊಡ್ಡ ಪಾಲು ಅಥವಾ ಎರಡು ಪಾಲು ಆ ಮಗನಿಗೆ ಸಿಗುತ್ತಿತ್ತು. ಅದೇ ರೀತಿ ತನಗೂ ಕೊಡುವಂತೆ ಎಲೀಷ ಕೇಳಿಕೊಂಡನು. (ಧರ್ಮೋಪದೇಶಕಾಂಡ 21:17) ತಾನು ಎಲೀಯನ ಆಧ್ಯಾತ್ಮಿಕ ವಾರಸುದಾರನಾಗಿ ಕೆಲಸ ಮಾಡಬೇಕಿತ್ತು. ಹಾಗಾಗಿ, ಎಲೀಯನಿಗಿದ್ದಂಥ ಧೈರ್ಯದ ಅವಶ್ಯಕತೆ ತನಗಿದೆ ಮತ್ತು ಅದಕ್ಕೆ ಪವಿತ್ರಾತ್ಮ ಬೇಕು ಎಂದು ಸ್ಪಷ್ಟವಾಗಿ ತಿಳಿದಿದ್ದನು.

ಎಲೀಷನ ಕೋರಿಕೆಯನ್ನು ಎಲೀಯನು ದೀನತೆಯಿಂದ ಯೆಹೋವನ ಕೈಗೆ ಒಪ್ಪಿಸಿದನು. ಯೆಹೋವನು ಎಲೀಷನ ಕೋರಿಕೆಯನ್ನು ಈಡೇರಿಸಿದನಾ? ಒಂದುವೇಳೆ, ಯೆಹೋವನು ಎಲೀಯನನ್ನು ಮೇಘದೊಳಗೆ ಕರಕೊಂಡು ಹೋಗುವುದನ್ನು ನೋಡಲು ಎಲೀಷನಿಗೆ ಅನುಮತಿಸುವಲ್ಲಿ ಆ ಕೋರಿಕೆ ಈಡೇರುತ್ತಿತ್ತು. ಅವರಿಬ್ಬರು “ಮಾತಾಡುತ್ತಾ ಮುಂದೆ ಹೋಗುತ್ತಿರುವಾಗ” ಒಂದು ಆಶ್ಚರ್ಯದ ಘಟನೆ ನಡೆಯಿತು! —2 ಅರಸುಗಳು 2:10, 11.

ಎಲೀಯ-ಎಲೀಷರ ಸ್ನೇಹವು ಅವರಿಬ್ಬರಿಗೂ ಕಷ್ಟದ ಕಾಲದಲ್ಲಿ ತಾಳಿಕೊಳ್ಳಲು ಖಂಡಿತ ಸಹಾಯ ಮಾಡಿರಬೇಕು

ಆಕಾಶದಲ್ಲಿ ಒಂದು ಮೊಬ್ಬಾದ ಬೆಳಕು ಕಾಣಿಸಲು ಶುರುವಾಯಿತು. ಅದು ಹತ್ತಿರ-ಹತ್ತಿರ ಬರುತ್ತಿತ್ತು. ಸುಳಿಗಾಳಿ ರಭಸವಾಗಿ ಬೀಸಲು ಆರಂಭಿಸಿತು. ಅದು ‘ವುಷ್‌’ ಎಂದು ದೊಡ್ಡ ಸದ್ದು ಮಾಡುತ್ತಿತ್ತು. ಜೊತೆಗೆ, ಬೆಳಕಿನಿಂದ ಆವರಿಸಿದ ವಸ್ತುವೊಂದು ದಡದಡನೆ ಅವರ ಕಡೆಗೆ ಬಂತು. ಅದು ಅವರಿಬ್ಬರನ್ನು ಬೇರೆ ಬೇರೆ ದಿಕ್ಕಿಗೆ ಸರಿಯುವಂತೆ ಮಾಡಿತು. ಅದನ್ನು ನೋಡಿ ಅವರು ಬೆಚ್ಚಿ ಬೆರಗಾಗಿರಬೇಕು. ಅವರು ನೋಡಿದ್ದು ಒಂದು ರಥವಾಗಿತ್ತು. ಅದು ಬೆಂಕಿಯ ಜ್ವಾಲೆಯಿಂದ ಮಾಡಲ್ಪಟ್ಟ ಹಾಗೆ ಪ್ರಜ್ವಲಿಸುತ್ತಿತ್ತು. ತಾನು ವಿದಾಯ ಹೇಳುವ ಸಮಯ ಬಂತು ಎಂದು ಎಲೀಯನಿಗೆ ಗೊತ್ತಾಯಿತು. ಅವನು ಆ ರಥವನ್ನು ಹತ್ತಿದನಾ? ಅದರ ಬಗ್ಗೆ ವೃತ್ತಾಂತ ಏನೂ ಹೇಳುವುದಿಲ್ಲ. ಒಟ್ಟಾರೆ ಅವನಂತೂ ನೆಲದಿಂದ ಮೇಲಕ್ಕೇರಿಸಲ್ಪಟ್ಟನು ಮತ್ತು ಸುಳಿಗಾಳಿಯು ಅವನನ್ನು ತೆಗೆದುಕೊಂಡು ಹೋಯಿತು!

ಇದನ್ನೆಲ್ಲ ನೋಡಿ ಎಲೀಷನು ಭಯವಿಸ್ಮಿತನಾದನು. ಇಂಥ ಆಶ್ಚರ್ಯಕರ ಅದ್ಭುತವನ್ನು ನೋಡಿದ್ದರಿಂದ ಯೆಹೋವನು ಎಲೀಯನ ಧೈರ್ಯದ “ಎರಡು ಪಾಲನ್ನು” ಖಂಡಿತವಾಗಿ ತನಗೆ ಕೊಡುತ್ತಾನೆಂದು ಎಲೀಷನಿಗೆ ಗೊತ್ತಾಯಿತು. ಆದರೆ ದುಃಖದಲ್ಲಿದ್ದ ಎಲೀಷನಿಗೆ ಅದರ ಬಗ್ಗೆ ಯೋಚಿಸಲು ಆಗಲಿಲ್ಲ. ತನ್ನ ಪ್ರಿಯ ವೃದ್ಧ ಸ್ನೇಹಿತನು ಎಲ್ಲಿಗೆ ಹೋಗುತ್ತಿದ್ದಾನೋ ಗೊತ್ತಿರಲಿಲ್ಲ. ಅದೇನೇ ಆದರೂ ಅವನನ್ನು ಇನ್ನೊಮ್ಮೆ ನೋಡಲಿಕ್ಕಂತೂ ಆಗಲ್ಲ ಅಂತ ಯೋಚಿಸಿರಬೇಕು. ಅವನು, “ನನ್ನ ತಂದೆಯೇ, ನನ್ನ ತಂದೆಯೇ, ಇಸ್ರಾಯೇಲ್ಯರಿಗೆ ರಥರಥಾಶ್ವಗಳಾಗಿದ್ದವನೇ” ಎಂದು ಕೂಗಿದನು. ತನ್ನ ಪ್ರೀತಿಯ ಶಿಕ್ಷಕನು ಗಾಳಿಯಲ್ಲಿ ಮಾಯವಾಗುವುದನ್ನು ನೋಡಿ ಎಲೀಷನು ದುಃಖದಿಂದ ತನ್ನ ಬಟ್ಟೆಗಳನ್ನು ಹರಿದುಕೊಂಡನು.—2 ಅರಸುಗಳು 2:12.

ಎಲೀಯನು ಆಕಾಶಕ್ಕೆ ಏರಿ ಹೋದಂತೆ, ತನ್ನ ಸ್ನೇಹಿತನು ನಿರಾಶೆಯಿಂದ ಅಳುವುದನ್ನು ಕೇಳಿಸಿಕೊಂಡು ತಾನೂ ಒಂದೆರಡು ಹನಿ ಕಣ್ಣೀರಿಟ್ಟನಾ? ಏನೇ ಇರಲಿ, ಅಂಥ ಸ್ನೇಹಿತನು ಇದ್ದಿದ್ರಿಂದ ಕಷ್ಟಕಾಲದಲ್ಲಿ ತಾಳ್ಮೆಯಿಂದಿರಲು ಸಹಾಯವಾಯಿತೆಂದು ಅವನಿಗೆ ಚೆನ್ನಾಗಿ ಗೊತ್ತಿತ್ತು. ದೇವರನ್ನು ಪ್ರೀತಿಸುವ ಮತ್ತು ಆತನ ಇಷ್ಟವನ್ನು ಮಾಡಲು ಬಯಸುವ ಜನರೊಂದಿಗೆ ಸ್ನೇಹ ಬೆಳೆಸಿಕೊಂಡರೆ ನಮಗೆ ಒಳ್ಳೇದಾಗುತ್ತದೆ ಎಂದು ಎಲೀಯನ ಮಾದರಿಯಿಂದ ಕಲಿಯುತ್ತೇವೆ.

ಯೆಹೋವನು ಎಲೀಯನನ್ನು ಕರೆದುಕೊಂಡು ಹೋಗಿ ಒಂದು ಹೊಸ ನೇಮಕ ಕೊಟ್ಟನು

ಕೊನೆಯ ನೇಮಕ

ಎಲೀಯನು ಎಲ್ಲಿಗೆ ಹೋದನು? ಅವನು ದೇವರ ಹತ್ತಿರ ಸ್ವರ್ಗಕ್ಕೆ ಹೋದನು ಎಂದು ಕೆಲವು ಧರ್ಮಗಳು ಕಲಿಸುತ್ತವೆ. ಆದರೆ ಅದು ಅಸಾಧ್ಯ. ಯಾಕೆಂದರೆ ಇದಾಗಿ ಶತಮಾನಗಳ ನಂತರ ಯೇಸು ಕ್ರಿಸ್ತನು, ತನಗಿಂತ ಮುಂಚೆ ಯಾರೂ ಸ್ವರ್ಗಕ್ಕೆ ಏರಿಹೋಗಲಿಲ್ಲ ಎಂದು ಹೇಳಿದನು. (ಯೋಹಾನ 3:13) ಹಾಗಾದರೆ, “ಎಲೀಯನು ಸುಳಿಗಾಳಿಯ ಮುಖಾಂತರವಾಗಿ ಪರಲೋಕಕ್ಕೆ ಹೋದನು” ಎಂದು ಹೇಳುವಾಗ, ಇಲ್ಲಿ ಹೇಳಿರುವ ‘ಪರಲೋಕ’ ಅಂದರೇನು? (2 ಅರಸುಗಳು 2:11) ಯೆಹೋವನ ವಾಸಸ್ಥಳವನ್ನು ಮಾತ್ರವಲ್ಲ, ಮೇಘಗಳು ತೇಲಾಡುವ ಮತ್ತು ಪಕ್ಷಿಗಳು ಹಾರಾಡುವ ಭೂಮಿಯ ವಾಯುಮಂಡಲವನ್ನೂ ‘ಪರಲೋಕ’ ಎಂದು ಕೆಲವು ಬೈಬಲ್‌ ಭಾಷಾಂತರಗಳಲ್ಲಿ ಕರೆಯಲಾಗಿದೆ. (ಕೀರ್ತನೆ 147:8, NW) ಹಾಗಾದರೆ ಎಲೀಯನು ಏರಿಹೋಗಿದ್ದ ಪರಲೋಕವು ಆಕಾಶವಾಗಿತ್ತು. ಎಲೀಯನಿಗೆ ಮುಂದೆ ಏನಾಯಿತು?

ಯೆಹೋವನು ತನ್ನ ಪ್ರಿಯ ಪ್ರವಾದಿಯನ್ನು ಕರೆದುಕೊಂಡು ಹೋದಮೇಲೆ ಒಂದು ಹೊಸ ನೇಮಕ ಕೊಟ್ಟನು. ಈ ಬಾರಿ ಅವನು ಪಕ್ಕದ ರಾಜ್ಯವಾಗಿರುವ ಯೆಹೂದದಲ್ಲಿ ಕೆಲಸ ಮಾಡಬೇಕಿತ್ತು. ಅಲ್ಲಿ ಹೋಗಿ ಸುಮಾರು ಏಳು ವರ್ಷಗಳಾದ ಮೇಲೂ ಎಲೀಯನು ಅಲ್ಲೇ ಕೆಲಸ ಮಾಡುತ್ತಿದ್ದನು ಎಂದು ಬೈಬಲ್‌ ತೋರಿಸುತ್ತದೆ. ಆ ಸಮಯದಲ್ಲಿ ಯೆಹೂದವನ್ನು ದುಷ್ಟ ರಾಜ ಯೋರಾಮ ಆಳುತ್ತಿದ್ದನು. ಅವನು ಅಹಾಬ ಮತ್ತು ಈಜೆಬೆಲಳ ಮಗಳನ್ನು ಮದುವೆ ಮಾಡಿಕೊಂಡಿದ್ದನು. ಹಾಗಾಗಿ ಅವರ ಕೆಟ್ಟ ಪ್ರಭಾವ ಯೋರಾಮನ ಮೇಲೂ ಇತ್ತು. ಯೋರಾಮನ ವಿರುದ್ಧ ತೀರ್ಪಿನ ಪತ್ರವನ್ನು ಬರೆಯಲು ಯೆಹೋವನು ಎಲೀಯನಿಗೆ ಹೇಳಿದನು. ಮುಂತಿಳಿಸಲ್ಪಟ್ಟಂತೆಯೇ, ಯೋರಾಮನು ಭಯಂಕರ ರೀತಿಯಲ್ಲಿ ಸತ್ತನು. ಅದಕ್ಕಿಂತ ಕೆಟ್ಟದ್ದೇನೆಂದರೆ “ಅವನು ತೀರಿಹೋದಾಗ ಅವನನ್ನು ಯಾರೂ ಹಂಬಲಿಸಲಿಲ್ಲ” ಅಥವಾ ಅದಕ್ಕಾಗಿ ಬೇಸರಪಡಲಿಲ್ಲ ಎಂದು ವೃತ್ತಾಂತ ಹೇಳುತ್ತದೆ.—2 ಪೂರ್ವಕಾಲವೃತ್ತಾಂತ 21:12-20.

ಎಲೀಯನಿಗೂ ಆ ದುಷ್ಟ ರಾಜನಿಗೂ ಎಂಥಾ ವ್ಯತ್ಯಾಸ! ಎಲೀಯನು ಹೇಗೆ, ಯಾವಾಗ ತೀರಿಹೋದನು ಎಂದು ನಮಗೆ ಗೊತ್ತಿಲ್ಲ. ಆದರೆ ಒಂದಂತೂ ನಿಜ, ಯೋರಾಮನು ತೀರಿಹೋದಾಗ ಏನಾಯಿತೋ ಆ ರೀತಿ ಆಗಿರಲ್ಲ. ಎಲೀಯನು ಸತ್ತಾಗ ಜನರು ಖಂಡಿತ ಬೇಸರಪಟ್ಟಿರುತ್ತಾರೆ. ಉದಾಹರಣೆಗೆ, ಎಲೀಷನು ತನ್ನ ಸ್ನೇಹಿತನು ದೂರವಾದಾಗಲೇ ಬೇಸರಪಟ್ಟಿದ್ದನು. ಬೇರೆ ನಂಬಿಗಸ್ತ ಪ್ರವಾದಿಗಳಿಗೂ ಖಂಡಿತವಾಗಿ ಅದೇ ರೀತಿ ಅನಿಸಿರಬೇಕು. ಸುಮಾರು 1,000 ವರ್ಷಗಳಾದ ಮೇಲೂ ಸ್ವತಃ ಯೆಹೋವನೇ ಅವನನ್ನು ಅಮೂಲ್ಯವಾಗಿ ನೋಡಿದನು. ಹಾಗಾಗಿ ಆತನು ಆ ಪ್ರಿಯನಾದ ಪ್ರವಾದಿಯ ಚಿತ್ರಣವನ್ನು ರೂಪಾಂತರ ದರ್ಶನದಲ್ಲಿ ಬಳಸಿದನು. (ಮತ್ತಾಯ 17:1-9) ಎಲೀಯನಂತೆ ಕಷ್ಟಗಳ ಮಧ್ಯೆಯೂ ತಾಳಿಕೊಳ್ಳುವಂಥ ನಂಬಿಕೆಯನ್ನು ಬೆಳೆಸಿಕೊಳ್ಳಲು ನೀವು ಬಯಸುತ್ತೀರಾ? ಹಾಗಾದರೆ, ದೇವರನ್ನು ಪ್ರೀತಿಸುವವರೊಂದಿಗೆ ಸ್ನೇಹ ಬೆಳೆಸಿಕೊಳ್ಳುವುದನ್ನು, ಯೆಹೋವನ ಸೇವೆ ಮಾಡುವುದರ ಮೇಲೆ ಗಮನವಿಡುವುದನ್ನು ಮತ್ತು ಆಗ್ಗಿಂದಾಗ್ಗೆ ಮನಬಿಚ್ಚಿ ಪ್ರಾರ್ಥಿಸುವುದನ್ನು ಎಂದಿಗೂ ಮರೆಯಬೇಡಿ. ಹೀಗೆ, ಎಲೀಯನಂತೆ ನೀವು ಕೂಡ ಯೆಹೋವನ ಪ್ರೀತಿಯ ಹೃದಯದಲ್ಲಿ ಒಂದು ಶಾಶ್ವತ ಗೂಡನ್ನು ಪಡೆಯಿರಿ!

^ ಪ್ಯಾರ. 9 ಇಲ್ಲಿ ಹೇಳಿರುವ ಬೆಟ್ಟ ಕರ್ಮೆಲ್‌ ಬೆಟ್ಟವಾಗಿರಬಹುದು; ಕೆಲವು ವರ್ಷಗಳ ಹಿಂದೆ ದೇವರು ಎಲೀಯನಿಗೆ ಶಕ್ತಿ ಕೊಟ್ಟು ಬಾಳನ ಪ್ರವಾದಿಗಳನ್ನು ಸೋಲಿಸಿದ್ದು ಇಲ್ಲೇ ಇದ್ದಿರಬಹುದು ಎಂದು ಕೆಲವು ವಿದ್ವಾಂಸರು ಹೇಳಿದ್ದಾರೆ. ಆದರೆ ಬೈಬಲ್‌, ಇದು ಯಾವ ಬೆಟ್ಟವಾಗಿತ್ತು ಎಂದು ಹೇಳುವುದಿಲ್ಲ.