ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮುಖಪುಟ ಲೇಖನ | ಬೈಬಲಿನಿಂದ ಪ್ರಯೋಜನ ಪಡೆಯಿರಿ

ಬೈಬಲನ್ನು ಏಕೆ ಓದಬೇಕು?

ಬೈಬಲನ್ನು ಏಕೆ ಓದಬೇಕು?

“ಬೈಬಲ್‌ ಓದಿದ್ರೆ ಅರ್ಥ ಆಗಲ್ಲ ಅಂತ ನಾನು ಅಂದ್ಕೊಂಡಿದ್ದೆ.”—ಜೂವೀ

“ಅದು ತುಂಬ ಬೋರಿಂಗ್‌ ಆಗಿರುತ್ತೆ ಅಂತ ಅಂದ್ಕೊಂಡಿದ್ದೆ.”—ಕ್ವೀನೀ

“ಬೈಬಲಿನ ಗಾತ್ರ ನೋಡಿದ ತಕ್ಷಣ ಅದನ್ನ ಓದಬೇಕು ಅನ್ನೋ ಆಸೆನೇ ಹೊರಟೋಯ್ತು.”—ಎಝೆಕ್ಯೆಲ್‌

ನೀವು ಯಾವತ್ತಾದರೂ ಬೈಬಲನ್ನು ಓದಬೇಕು ಅಂದ್ಕೊಂಡು ಕೊನೆಗೆ ಮೇಲೆ ಹೇಳಿರೋ ರೀತಿ ಯೋಚಿಸಿ ಓದೋದನ್ನೇ ಕೈಬಿಟ್ಟಿದ್ದೀರಾ? ತುಂಬ ಜನರಿಗೆ ಅದನ್ನ ಓದೋದಂದ್ರೆ ಇಷ್ಟ ಆಗಲ್ಲ. ಆದರೆ ನಿಮ್ಮ ಜೀವನದಲ್ಲಿ ಸಂತೋಷ, ನೆಮ್ಮದಿ ತರುವ ವಿಷಯ ಬೈಬಲಿನಲ್ಲಿದೆ ಅಂತ ಗೊತ್ತಾದ್ರೆ, ಆಗ ಅದನ್ನು ಓದ್ತೀರಾ? ಬೈಬಲ್‌ ಓದೋದನ್ನು ಆಸಕ್ತಿಕರವಾಗಿ ಮಾಡುವುದು ಹೇಗೆ ಅಂತ ಗೊತ್ತಾದ್ರೆ, ನೀವು ಬೈಬಲಿನಲ್ಲಿ ಏನಿದೆ ಅಂತ ತಿಳಿದುಕೊಳ್ಳಲು ಇಷ್ಟಪಡ್ತೀರಾ?

ಬೈಬಲ್‌ ಓದಲು ಆರಂಭಿಸಿದ ಮೇಲೆ ಕೆಲವರಿಗೆ ಏನು ಅನಿಸಿದೆ ಅಂತ ಅವರ ಮಾತುಗಳಲ್ಲೇ ಕೇಳಿ:

ಹೆಚ್ಚು ಕಡಿಮೆ 20ವರ್ಷದ ಎಝೆಕ್ಯೆಲ್‌ ಹೀಗೆ ಹೇಳುತ್ತಾನೆ, “ಎಲ್ಲಿಗೆ ಹೋಗ್ಬೇಕು ಅಂತ ಗೊತ್ತು ಗುರಿ ಇಲ್ಲದೆ ಕಾರ್‌ ಓಡಿಸುವವನ ಹಾಗೆ ನಾನಿದ್ದೆ. ಆದರೆ ಬೈಬಲನ್ನು ಓದೋಕೆ ಶುರುಮಾಡಿದ ಮೇಲೆ ಜೀವನಕ್ಕೊಂದು ಗುರಿ, ಅರ್ಥ ಸಿಕ್ತು. ನಮ್ಮ ಜೀವನಕ್ಕೆ ಬೇಕಾದ ಸಲಹೆಗಳು ಅದರಲ್ಲಿವೆ.”

ಅದೇ ವಯಸ್ಸಿನ ಫ್ರೀಡಾ ಹೀಗೆ ಹೇಳುತ್ತಾಳೆ, “ಮೊದಲು ನನಗೆ ತುಂಬ ಬೇಗ ಕೋಪ ಬರ್ತಿತ್ತು. ಬೈಬಲ್‌ ಓದೋದ್ರಿಂದ ಈಗ ನನ್ನ ಭಾವನೆಗಳನ್ನ ಹಿಡಿತದಲ್ಲಿಡೋಕೆ ಕಲ್ತಿದ್ದೀನಿ. ಇದ್ರಿಂದ ಎಲ್ಲರ ಜೊತೆ ಚೆನ್ನಾಗಿ ಇರೋಕೆ ಸಾಧ್ಯವಾಗಿದೆ. ನಂಗೀಗ ತುಂಬ ಫ್ರೆಂಡ್ಸ್‌ ಇದ್ದಾರೆ.”

50 ವರ್ಷದ ಯೂನಿಸ್‌ ಎಂಬವರು ಹೀಗನ್ನುತ್ತಾರೆ, “ಕೆಟ್ಟ ಅಭ್ಯಾಸಗಳನ್ನು ಬಿಟ್ಟು, ಒಳ್ಳೇ ವ್ಯಕ್ತಿಯಾಗಲು ಇದು ನನಗೆ ಸಹಾಯ ಮಾಡಿದೆ.”

ಇವರಿಗೆ ಮತ್ತು ಇವರಂಥ ಲಕ್ಷಾಂತರ ಜನರಿಗೆ ಬೈಬಲ್‌ ಓದುವುದರಿಂದ ಹೆಚ್ಚು ಸಂತೋಷದ ಜೀವನ ನಡೆಸಲು ಸಾಧ್ಯವಾಗಿದೆ. ನಿಮಗೂ ಸಾಧ್ಯವಾಗುತ್ತದೆ. (ಯೆಶಾಯ 48:17, 18) ಇದರ ಸಹಾಯದಿಂದ (1) ಒಳ್ಳೇ ನಿರ್ಣಯ ಮಾಡಬಹುದು, (2) ಒಳ್ಳೇ ಸ್ನೇಹಿತರನ್ನು ಮಾಡಿಕೊಳ್ಳಬಹುದು, (3) ಒತ್ತಡವನ್ನು ನಿಭಾಯಿಸಬಹುದು, (4) ಎಲ್ಲಕ್ಕಿಂತ ಹೆಚ್ಚಾಗಿ ದೇವರ ಬಗ್ಗೆ ಸತ್ಯವನ್ನು ತಿಳಿದುಕೊಳ್ಳಬಹುದು. ಹೀಗೆ ಬೈಬಲಿನಿಂದ ನಮಗೆ ಅನೇಕ ಪ್ರಯೋಜನಗಳಿವೆ. ಬೈಬಲನ್ನು ಬರೆಸಿರುವುದು ದೇವರೇ. ಆದ್ದರಿಂದ ಅದನ್ನು ಪಾಲಿಸುವುದರಿಂದ ನಿಮಗೆ ಯಾವ ಕೇಡೂ ಆಗುವುದಿಲ್ಲ. ಕಾರಣ ದೇವರು ಯಾವತ್ತೂ ಕೆಟ್ಟ ಸಲಹೆ ಕೊಡುವುದಿಲ್ಲ.

ಆದ್ದರಿಂದ ಬೈಬಲನ್ನು ಓದುವುದು ತುಂಬ ಪ್ರಾಮುಖ್ಯ. ನಿಮಗೆ ಬೈಬಲ್‌ ಓದುವುದು ಸುಲಭವಾಗಲು ಮತ್ತು ಇಷ್ಟವಾಗಲು ಸಹಾಯ ಮಾಡುವ ಕೆಲವು ವಿಷಯಗಳು ಮುಂದಿನ ಲೇಖದಲ್ಲಿವೆ.