ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮಕ್ಕಳು ನಿಮ್ಮ ಧರ್ಮವನ್ನು ಪ್ರಶ್ನಿಸಿದಾಗ . . .

ಮಕ್ಕಳು ನಿಮ್ಮ ಧರ್ಮವನ್ನು ಪ್ರಶ್ನಿಸಿದಾಗ . . .

ಸುಖ ಸಂಸಾರಕ್ಕೆ ಸೂತ್ರಗಳು

ಮಕ್ಕಳು ನಿಮ್ಮ ಧರ್ಮವನ್ನು ಪ್ರಶ್ನಿಸಿದಾಗ . . .

ಹೆಚ್ಚಿನ ಮಕ್ಕಳು ದೊಡ್ಡವರಾದ ನಂತರವೂ ಹೆತ್ತವರ ಧರ್ಮವನ್ನು ಪಾಲಿಸುತ್ತಾರೆ. (2 ತಿಮೊಥೆಯ 3:14) ಆದರೆ ಕೆಲವರು ಹಾಗೆ ಮಾಡುವುದಿಲ್ಲ. ನಿಮ್ಮ ಮಕ್ಕಳು ನಿಮ್ಮ ಧರ್ಮದ ಬಗ್ಗೆ ಪ್ರಶ್ನಿಸತೊಡಗಿದರೆ. . . ? ಇಂಥ ಸವಾಲನ್ನು ಯೆಹೋವನ ಸಾಕ್ಷಿಗಳು ಹೇಗೆ ಎದುರಿಸುತ್ತಾರೆಂದು ಈ ಲೇಖನ ತಿಳಿಸುತ್ತದೆ.

“ನನ್ನ ಅಪ್ಪಅಮ್ಮನ ಧರ್ಮ ನಂಗೆ ಇಷ್ಟ ಇಲ್ಲ. ನಾನದನ್ನು ಪಾಲಿಸಲ್ಲ.”—ಕ್ಯಾರಲಿನ್‌, 18. *

ನಿಮ್ಮ ಧರ್ಮ ದೇವರ ಬಗ್ಗೆ ಸತ್ಯವನ್ನೇ ಕಲಿಸುತ್ತದೆಂದು ನಿಮಗೆ ಖಂಡಿತವಾಗಿ ತಿಳಿದಿದೆ. ಬೈಬಲ್‌ ಕಲಿಸುವ ಜೀವನ ರೀತಿ ಅತ್ಯುತ್ತಮವಾಗಿದೆ ಎಂದೂ ನೀವು ನಂಬುತ್ತೀರಿ. ಸಹಜವಾಗಿಯೇ ನಿಮ್ಮ ಮಕ್ಕಳಲ್ಲಿಯೂ ಅದೇ ಮೌಲ್ಯಗಳನ್ನು ಬೇರೂರಿಸಲು ಪ್ರಯತ್ನಿಸುತ್ತೀರಿ. (ಧರ್ಮೋಪದೇಶಕಾಂಡ 6:6, 7) ಆದರೆ ನಿಮ್ಮ ಮಗ * ಹದಿಹರೆಯದವನಾದಾಗ ಆಧ್ಯಾತ್ಮಿಕ ವಿಷಯಗಳಲ್ಲಿ ಆಸಕ್ತಿ ಕಳೆದುಕೊಂಡರೆ ಆಗೇನು? ಚಿಕ್ಕ ಹುಡುಗನಿದ್ದಾಗ ನಿಮ್ಮ ಧರ್ಮವನ್ನು ಮರುಪ್ರಶ್ನಿಸದೆ ಪಾಲಿಸುತ್ತಿದ್ದ ಅವನು ಈಗ ಅದನ್ನು ಪ್ರಶ್ನಿಸಲಾರಂಭಿಸಿದರೆ ಏನು ಮಾಡುವಿರಿ?—ಗಲಾತ್ಯ 5:7.

ಹೆತ್ತವರಾಗಿ ನೀವು ನಿಮ್ಮ ಕ್ರೈಸ್ತ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸಲಿಲ್ಲ ಎಂದು ನೊಂದುಕೊಳ್ಳಬೇಡಿ. ನಿಮ್ಮ ಮಗ ಹಾಗೆ ಮಾಡಲು ಬೇರೆ ಅನೇಕ ಕಾರಣಗಳಿರಬಹುದು. ಅವನ್ನು ಮುಂದೆ ಚರ್ಚಿಸಲಿದ್ದೇವೆ. ನೆನಪಿಡಿ, ಅವನ ಪ್ರಶ್ನೆಗಳಿಗೆ ಹೇಗೆ ಉತ್ತರಿಸುತ್ತೀರಿ ಎಂಬುದು ಮುಖ್ಯ. ಇದರ ಮೇಲೆ ಹೊಂದಿಕೊಂಡು ಒಂದೇ ಅವನು ನಿಮ್ಮ ಧರ್ಮವನ್ನು ಪಾಲಿಸುವನು ಇಲ್ಲವೆ ಬಿಟ್ಟುಹೋಗುವನು. ಅವನೊಂದಿಗೆ ಕಣಕ್ಕಿಳಿಯಬೇಡಿ. ಹಾಗೆ ಮಾಡಿದರೆ ನಿಮಗೇ ಕಷ್ಟ. ಕೊನೆಗೆ ನೀವೇ ಸೋಲಬಹುದು.—ಕೊಲೊಸ್ಸೆ 3:21.

ಇಂಥ ಸನ್ನಿವೇಶದಲ್ಲಿ ಅಪೊಸ್ತಲ ಪೌಲನ ಬುದ್ಧಿಮಾತಿಗನುಸಾರ ನಡೆಯುವುದು ಉತ್ತಮ. ಅವನಂದದ್ದು “ಕರ್ತನ ದಾಸನು ಜಗಳವಾಡದೆ ಎಲ್ಲರೊಂದಿಗೆ ಕೋಮಲಭಾವದಿಂದಿರಬೇಕು; ಅವನು ಬೋಧಿಸಲು ಅರ್ಹನೂ ಕೇಡನ್ನು ಅನುಭವಿಸುತ್ತಿರುವಾಗ ತಾಳಿಕೊಳ್ಳುವವನೂ” ಆಗಿರಬೇಕು. (2 ತಿಮೊಥೆಯ 2:24) ಹದಿಹರೆಯದ ಮಗ ನಿಮ್ಮ ಧರ್ಮವನ್ನು ಪ್ರಶ್ನಿಸಿದಾಗ ನೀವು ಉತ್ತರ ಕೊಡುವ ರೀತಿಯಿಂದ “ಬೋಧಿಸಲು ಅರ್ಹ”ರೆಂದು ತೋರಿಸಿಕೊಡಿ. ಹೇಗೆ?

ಕಾರಣ ಯೋಚಿಸಿ

ಮಗ ನಿಮ್ಮ ಧರ್ಮವನ್ನು ಪ್ರಶ್ನಿಸಲು ಕಾರಣವೇನು ಎಂದು ಮೊದಲು ಯೋಚಿಸಿ. ಉದಾಹರಣೆಗೆ:

ಕ್ರೈಸ್ತ ಸಭೆಯಲ್ಲಿ ತನಗೆ ಫ್ರೆಂಡ್ಸ್‌ ಇಲ್ಲ ಎಂದು ಅವನಿಗನಿಸುತ್ತದಾ? “ನಂಗೆ ಫ್ರೆಂಡ್ಸ್‌ ಬೇಕಾಗಿದ್ರು. ಹಾಗಾಗಿ ಸ್ಕೂಲಲ್ಲಿ ಅನೇಕರನ್ನು ಫ್ರೆಂಡ್ಸ್‌ ಮಾಡ್ಕೊಂಡೆ. ದೇವರ ಸ್ನೇಹ ಬೆಳೆಸಲು ಇದು ಅನೇಕ ವರ್ಷಗಳ ವರೆಗೆ ಅಡ್ಡಿಯಾಗಿತ್ತು. ಕೆಟ್ಟ ಸಹವಾಸವೇ ನಾನು ಆಧ್ಯಾತ್ಮಿಕ ವಿಷ್ಯಗಳಲ್ಲಿ ಆಸಕ್ತಿ ಕಳಕೊಳ್ಳಲು ಮುಖ್ಯ ಕಾರಣವಾಯ್ತು. ಈಗ ಅದನ್ನೆಲ್ಲ ನೆನಸಿದ್ರೆ ಬೇಸರವಾಗ್ತದೆ.”—ಲನೋರ್‌, 19.

ತನ್ನ ಧರ್ಮದ ಬಗ್ಗೆ ಇತರರ ಬಳಿ ಮಾತಾಡಲು ಅವನಿಗೆ ಆತ್ಮವಿಶ್ವಾಸದ ಕೊರತೆ ಇದೆಯಾ? “ಶಾಲೆಯಲ್ಲಿ ನನ್ನ ನಂಬಿಕೆಗಳ ಬಗ್ಗೆ ಸಹಪಾಠಿಗಳೊಂದಿಗೆ ಮಾತಾಡುತ್ತಿರಲಿಲ್ಲ. ಅವರು ನನ್ನನ್ನು ಚುಡಾಯಿಸಬಹುದು, ‘ಬೈಬಲ್‌ ಹುಚ್ಚ’ ಎಂದು ಗೇಲಿಮಾಡಬಹುದು ಎಂಬ ಭಯ. ಯಾರಾದರೂ ಸ್ವಲ್ಪ ಭಿನ್ನವಾಗಿದ್ದರೆ ಅವರನ್ನು ದೂರವಿಡುತ್ತಿದ್ದರು. ನನಗೆ ಹಾಗೆ ಮಾಡಬಾರದು ಅಂತ ಧರ್ಮದ ಬಗ್ಗೆ ಮಾತಾಡಲು ಅಂಜುತ್ತಿದ್ದೆ.”—ರಾಮೋನ್‌, 23.

ಬೈಬಲ್‌ ತತ್ವಗಳಿಗೆ ತಕ್ಕಂತೆ ಜೀವಿಸಲು ತನ್ನಿಂದಾಗದು ಎಂಬ ಭಯ ಅವನಿಗಿದೆಯಾ? “ಶಾಶ್ವತ ಜೀವನದ ಬಗ್ಗೆ ಬೈಬಲ್‌ ಹೇಳ್ತದೆ ನಿಜ. ಆದರೆ ಅದನ್ನು ಗಳಿಸುವುದು ಸುಲಭವಲ್ಲ ಅಂತ ನನಗನಿಸುತ್ತದೆ. ಅನೇಕ ಮೆಟ್ಟಲುಗಳ ಸಾಲನ್ನು ಏರಿದಷ್ಟೇ ಕಷ್ಟ. ನಾನಂತೂ ಒಂದು ಮೆಟ್ಟಲನ್ನು ಸಹ ಹತ್ತಿಲ್ಲ. ಅಷ್ಟೇಕೆ, ಇನ್ನೂ ಆ ಮೆಟ್ಟಲುಗಳ ಹತ್ರನೂ ಬಂದಿಲ್ಲ. ಅದನ್ನು ಹತ್ತಲು ನನ್ನಿಂದಾಗದು ಎಂಬ ಭಯದಿಂದ ನನ್ನ ಧರ್ಮವನ್ನೇ ಬಿಟ್ಟುಬಿಡಲು ಯೋಚಿಸಿದ್ದೇನೆ.”—ರನೇ, 16.

ಮಾತಾಡಿ ತಿಳುಕೊಳ್ಳಿ

ನಿಮ್ಮ ಮಗನ ವಿಷಯದಲ್ಲೇನು? ಅವನು ನಿಮ್ಮ ಧರ್ಮವನ್ನು ಪ್ರಶ್ನಿಸಲು ಕಾರಣವೇನಿರಬಹುದು? ಇದನ್ನು ತಿಳುಕೊಳ್ಳುವ ಉತ್ತಮ ವಿಧ ಅವನೊಂದಿಗೆ ನೇರವಾಗಿ ಮಾತಾಡುವುದು. ಆದರೆ ಮಾತು ಜಗಳಕ್ಕೆ ತಿರುಗದಿರಲಿ. ಯಾಕೋಬ 1:19ರ ಬುದ್ಧಿವಾದವನ್ನು ಅನುಸರಿಸಿ. “ಕಿವಿಗೊಡುವುದರಲ್ಲಿ ಶೀಘ್ರನೂ ಮಾತಾಡುವುದರಲ್ಲಿ ದುಡುಕದವನೂ ಕೋಪಿಸುವುದರಲ್ಲಿ ನಿಧಾನಿಯೂ ಆಗಿರಬೇಕು.” ತಾಳ್ಮೆ ಕಳಕೊಳ್ಳಬೇಡಿ. ಹೊರಗಿನವರೊಂದಿಗೆ ಮಾತಾಡುವಾಗ ಹೇಗೋ ಹಾಗೆಯೇ ‘ದೀರ್ಘ ಸಹನೆ ಮತ್ತು ಬೋಧಿಸುವ ಕಲೆಯನ್ನು’ ಬಳಸಿ ಮಗನೊಂದಿಗೂ ಮಾತಾಡಿ.—2 ತಿಮೊಥೆಯ 4:2.

ಉದಾಹರಣೆಗೆ, ನಿಮ್ಮ ಮಗನಿಗೆ ಸಭಾ ಕೂಟಗಳಿಗೆ ಬರಲು ಇಷ್ಟವಿಲ್ಲ ಎಂದೆಣಿಸಿ. ಕಾರಣಗಳೇನೆಂದೂ ಯಾಕೆ ಅವನಿಗೆ ಹಾಗನಿಸುತ್ತಿದೆಂದೂ ಕಂಡುಹಿಡಿಯಲು ಪ್ರಯತ್ನಿಸಿ. ಆದರೆ ತಾಳ್ಮೆಯಿಂದ. ಈ ಕೆಳಗಿನ ಸನ್ನಿವೇಶ ಗಮನಿಸಿ. ಇಲ್ಲಿ ತಿಳಿಸಿರುವ ರೀತಿಯಲ್ಲಿ ಮಾತಾಡಿದರೆ ಪ್ರಯೋಜನವೇ ಇಲ್ಲ.

ಮಗ: ನಂಗೆ ಮೀಟಿಂಗ್‌ಗೆ ಬರ್ಲಿಕ್ಕೆ ಇಷ್ಟ ಇಲ್ಲ. ಇನ್ನು ಮುಂದೆ ಬರಲ್ಲ.

ತಂದೆ: [ಸಿಟ್ಟಿನಿಂದ ] ಬರ್ಲಿಕ್ಕೆ ಇಷ್ಟ ಇಲ್ವಾ? ಏನ್‌ ಹೇಳ್ತಾ ಇದ್ದೀಯ ನೀನು?

ಮಗ: ಅಲ್ಲಿ ಬೋರ್‌ ಆಗ್ತದೆ ನಂಗೆ.

ತಂದೆ: ಅಂದ್ರೆ ದೇವರು ನಿನಗೆ ಇಷ್ಟ ಇಲ್ಲ, ಬೋರ್‌ ಅಂತ ತಾನೇ ನಿನ್ನ ಮಾತಿನರ್ಥ. ನಿಂಗೆ ಏನ್‌ ಬೇಕಾದ್ರು ಅನಿಸಲಿ ನಾನೇನು ತಲೆಕೆಡಿಸ್ಕೊಳ್ಳಲ್ಲ. ನೀನು ಈ ಮನೇಲಿ ಇರೋ ತನಕ ಮೀಟಿಂಗ್‌ಗೆ ಬರ್ಲೇಬೇಕು. ಅಷ್ಟೇ!!

ಹೆತ್ತವರು ಮಕ್ಕಳಿಗೆ ಕಲಿಸಬೇಕು, ಮಕ್ಕಳು ಹೆತ್ತವರ ಮಾತು ಕೇಳಬೇಕು ಎನ್ನುವುದು ದೇವರ ಆಜ್ಞೆ. (ಎಫೆಸ 6:1) ಆದರೆ ನೀವು ಕೂಟಗಳಿಗೆ ಹೋಗುತ್ತೀರಿ ಎಂದ ಮಾತ್ರಕ್ಕೆ ನಿಮ್ಮ ಮಗನೂ ಕಣ್ಮುಚ್ಚಿ ನಿಮ್ಮನ್ನು ಅನುಕರಿಸುವುದು ನಿಮಗೂ ಮನಸ್ಸಿಲ್ಲ ಅಲ್ಲವೆ? ಅವನದನ್ನು ಸ್ವಇಷ್ಟದಿಂದ ಮಾಡಬೇಕೆಂಬುದು ನಿಮ್ಮ ಆಸೆ. ಹಾಗಾಗಿ ಈ ನಿಟ್ಟಿನಲ್ಲಿ ಅವನಿಗೆ ಸಹಾಯ ಮಾಡಿ.

ಸಹಾಯ ಮಾಡುವ ಒಂದು ಅತ್ಯುತ್ತಮ ವಿಧ, ಅವನು ಯಾಕೆ ಹಾಗೆ ಹೇಳುತ್ತಾನೆ ಎಂಬುದನ್ನು ಯೋಚಿಸಿ ತಿಳಿದುಕೊಳ್ಳುವುದೇ. ಮೇಲೆ ತಿಳಿಸಿದ ಸನ್ನಿವೇಶಕ್ಕೆ ಈ ವಿಧವನ್ನು ಅಳವಡಿಸಿ ನೋಡಿ.

ಮಗ: ನಂಗೆ ಮೀಟಿಂಗ್‌ಗೆ ಬರ್ಲಿಕ್ಕೆ ಇಷ್ಟ ಇಲ್ಲ. ಇನ್ನು ಮುಂದೆ ಬರಲ್ಲ.

ತಂದೆ: [ಶಾಂತವಾಗಿ] ನಿಂಗೆ ಯಾಕೆ ಹಾಗನಿಸುತ್ತೆ?

ಮಗ: ಅಲ್ಲಿ ಬೋರ್‌ ಆಗ್ತದೆ ನಂಗೆ.

ತಂದೆ: ಒಂದು-ಎರಡು ತಾಸು ಕೂತಲ್ಲೇ ಕೂತಿರುವುದೆಂದರೆ ಬೋರ್‌ ಆಗ್ಬಹುದು. ನೀನು ಹೇಳ್ಬಹುದಾ ನಿಂಗೆ ಯಾಕೆ ಬೋರ್‌ ಆಗ್ತದೆ?

ಮಗ: ನನ್ಗೊತ್ತಿಲ್ಲ. ಮೀಟಿಂಗ್‌ ಹೋದಾಗೆಲ್ಲ ‘ಇಲ್ಲಿಗೆ ಬರಬಾರ್ದಿತ್ತು, ಬೇರೆಲ್ಲಾದ್ರು ಹೋಗ್ಬೇಕಿತ್ತು’ ಅಂತ ಅನಿಸ್ತಿರುತ್ತದೆ.

ತಂದೆ: ನಿನ್ನ ಫ್ರೆಂಡ್ಸ್‌ಗೂ ಹಾಗೇ ಅನ್ಸುತ್ತಾ?

ಮಗ: ಅದೇ ಸಮಸ್ಯೆ. ನನ್ಗೀಗ ಫ್ರೆಂಡ್ಸೇ ಇಲ್ಲ. ಯಾವತ್ತು ನನ್ನ ಆ ಬೆಸ್ಟ್‌ ಫ್ರೆಂಡ್‌ ಬೇರೆ ಕಡೆ ಹೋದ್ನೊ ಅವತ್ತಿಂದ ಮಾತಾಡಕ್ಕೆ ಯಾರೂ ಇಲ್ಲ. ಬೇರೆಲ್ಲರಿಗೂ ಫ್ರೆಂಡ್ಸ್‌ ಇದ್ದಾರೆ, ಖುಷಿಯಿಂದಿದ್ದಾರೆ. ನನಗೆ ಮಾತ್ರ ಯಾರೂ ಇಲ್ಲ!

ಮೇಲಿನ ಸನ್ನಿವೇಶದಲ್ಲಿ ತಂದೆ ತನ್ನ ಮಗನ ಮನಸ್ಸಿನಲ್ಲಿದ್ದ ಭಾವನೆಗಳನ್ನು ಹೊರಸೆಳೆವ ರೀತಿಯಲ್ಲಿ ಮಾತಾಡಿದ. ಒಂಟಿತನದ ಭಾವನೆಯೇ ಅವನನ್ನು ಕಾಡುತ್ತಿದ್ದ ಸಮಸ್ಯೆ ಎಂದು ತಿಳಿದುಕೊಂಡ. ಅಷ್ಟೇ ಅಲ್ಲ, ಮಗನ ಭರವಸೆಯನ್ನು ಗಿಟ್ಟಿಸಿಕೊಂಡ. ಹೀಗೆ ಮುಂದೆ ಯಾವಾಗ ಬೇಕಾದರೂ ಮಗ ತನ್ನ ಬಳಿ ಬಂದು ಬಿಚ್ಚುಮನಸ್ಸಿನಿಂದ ಮಾತಾಡುವಂತೆ ಸಂವಾದ ದ್ವಾರವನ್ನೂ ತೆರೆದಿಟ್ಟ.— “ತಾಳ್ಮೆ ತೋರಿಸಿ!” ಎಂಬ ಚೌಕ ನೋಡಿ.

ದೇವರ ಸ್ನೇಹಿತರಾಗದಂತೆ ತಡೆಯುವ ಸವಾಲುಗಳು ಏಳಬಹುದು. ಅವುಗಳಿಗೆ ಹೆದರಿ ಓಡದೆ, ನಿಂತು ಎದುರಿಸಿದಾಗ ಮಾತ್ರ ತಮ್ಮ ಬಗ್ಗೆಯೂ ತಮ್ಮ ಧರ್ಮದ ಬಗ್ಗೆಯೂ ಹೆಮ್ಮೆ ಅನಿಸುತ್ತದೆಂದು ಅನೇಕ ಯುವಕರು ಸಮಯದಾಟಿದಂತೆ ತಿಳುಕೊಳ್ಳುವರು. ಮೇಲೆ ತಿಳಿಸಿದ ರಾಮೋನ್‌ಗೂ ಹೀಗೆಯೇ ಆಯಿತು. ತಾನೊಬ್ಬ ಯೆಹೋವನ ಸಾಕ್ಷಿ ಎಂದು ಸ್ಕೂಲಲ್ಲಿ ಹೇಳಲು ಅಂಜುತ್ತಿದ್ದ ಅವನು ತನ್ನ ಧರ್ಮದ ಬಗ್ಗೆ ಮಾತಾಡುವುದು ನೆನಸಿದಷ್ಟು ಕಷ್ಟ ಅಲ್ಲ, ಬೇರೆಯವರು ಗೇಲಿಮಾಡಿದರೂ ಮಾತಾಡಬಲ್ಲೆ ಎಂದು ಕ್ರಮೇಣ ತಿಳಿದ. ಅವನನ್ನುವುದು:

“ಒಮ್ಮೆ ಸ್ಕೂಲಲ್ಲಿ ಒಬ್ಬ ಹುಡುಗ ನನ್ನ ಧರ್ಮದ ಬಗ್ಗೆ ಗೇಲಿಮಾಡುತ್ತಿದ್ದ. ನನಗೆ ಏನು ಮಾಡುವುದೆಂದು ತೋಚಲಿಲ್ಲ, ಭಯ ಆಯ್ತು. ಇಡೀ ಕ್ಲಾಸೇ ಕೇಳಿಸಿಕೊಳ್ಳುತ್ತಿತ್ತು. ಆಗ ತಿರುಗಿ ನಾನವನಿಗೆ ಪ್ರಶ್ನೆ ಹಾಕಿದೆ. ಅವನ ಧರ್ಮದ ಬಗ್ಗೆ ಕೇಳಿದೆ. ಏನು ಆಶ್ಚರ್ಯ ಗೊತ್ತಾ?! ನನಗಿಂತ ಅವನಿಗೇ ಹೆಚ್ಚು ಭಯ ಆಯ್ತು. ಆಗ ನನಗೆ ಗೊತ್ತಾಯಿತು ಹೆಚ್ಚಿನ ಯುವಕರಿಗೆ ತಮ್ಮದೇ ಆದ ಧರ್ಮ, ಧಾರ್ಮಿಕ ನಂಬಿಕೆ ಎಲ್ಲ ಇದ್ರೂ ಅದರ ಬಗ್ಗೆ ಅವರಿಗೇನೂ ಗೊತ್ತಿಲ್ಲ. ಅವರಿಗೆ ಹೋಲಿಸಿದರೆ ನಾನೆಷ್ಟೋ ಪರವಾಗಿಲ್ಲ, ನನ್ನ ಧಾರ್ಮಿಕ ನಂಬಿಕೆಗಳನ್ನು ವಿವರಿಸಬಲ್ಲೆ. ನಿಜ ಹೇಳಬೇಕೆಂದರೆ ಧರ್ಮದ ವಿಷಯ ಮಾತಾಡಲು ನಾನಲ್ಲ ನನ್ನ ಸಹಪಾಠಿಗಳು ಅಂಜಬೇಕು!”

ಪ್ರಯತ್ನಿಸಿ ನೋಡಿ: ನಿಮ್ಮ ಮಗನ ಮನಸ್ಸಿನಲ್ಲಿ ಇರುವುದನ್ನು ಹೊರಸೆಳೆಯುವ ಉದ್ದೇಶದಿಂದ ಹೀಗೆ ಕೇಳಿ. ಯೆಹೋವನ ಸಾಕ್ಷಿಯಾಗಿರುವುದರ ಬಗ್ಗೆ ನಿನಗೆ ಹೇಗನಿಸುತ್ತದೆ? ಅದರ ಪ್ರಯೋಜನಗಳೇನು? ಸವಾಲುಗಳೇನು? ಸವಾಲುಗಳಿಗಿಂತ ಪ್ರಯೋಜನಗಳು ಹೆಚ್ಚೆಂದು ಅನಿಸುತ್ತದಾ? ಯಾಕೆ? (ಮಾರ್ಕ 10:29, 30) ತನ್ನ ಅನಿಸಿಕೆಗಳನ್ನು ಒಂದು ಹಾಳೆಯಲ್ಲಿ ಬರೆಯುವಂತೆ ಹೇಳಿ. ಹಾಳೆಯ ಬಲಬದಿಯಲ್ಲಿ ಪ್ರಯೋಜನಗಳು, ಎಡಬದಿಯಲ್ಲಿ ಸವಾಲುಗಳನ್ನು ಪಟ್ಟಿಮಾಡಲಿ. ಬರೆದದ್ದನ್ನು ನೋಡಿದಾಗ ತನ್ನ ಸಮಸ್ಯೆ ಏನು, ಬಗೆಹರಿಸುವುದು ಹೇಗೆ ಎಂದು ಅವನಿಗೇ ತಿಳಿಯಬಹುದು.

ಹದಿಹರೆಯದವರ “ವಿವೇಚನಾಶಕ್ತಿ”

ಹೆತ್ತವರಿಗೂ ತಜ್ಞರಿಗೂ ತಿಳಿದಿರುವಂತೆ ಚಿಕ್ಕ ಮಕ್ಕಳು ಯೋಚಿಸುವುದಕ್ಕೂ ಹದಿಹರೆಯದವರು ಯೋಚಿಸುವುದಕ್ಕೂ ಬಹಳಷ್ಟು ವ್ಯತ್ಯಾಸವಿದೆ. (1 ಕೊರಿಂಥ 13:11) ಚಿಕ್ಕ ಮಕ್ಕಳಿಗೆ ಒಂದು ವಿಷಯ ಸರಿ ಇಲ್ಲವೆ ತಪ್ಪು ಎಂದು ಹೇಳಿದರೆ ಸಾಕು ಅದನ್ನು ಒಪ್ಪಿಕೊಳ್ಳುತ್ತಾರೆ. ಉದಾಹರಣೆಗೆ, ಎಲ್ಲವನ್ನು ಸೃಷ್ಟಿಸಿದ್ದು ದೇವರು ಎಂದು ಹೇಳಿದ ಕೂಡಲೆ ಸ್ವೀಕರಿಸುತ್ತಾರೆ. (ಆದಿಕಾಂಡ 1:1) ಹದಿಹರೆಯದವರು ಹಾಗಲ್ಲ. ಅವರ ಮನಸ್ಸಿನಲ್ಲಿ ಹಲವಾರು ಪ್ರಶ್ನೆಗಳು ಧುತ್ತೆಂದು ಏಳುತ್ತವೆ: ‘ದೇವರಿದ್ದಾನೆಂದು ಹೇಗೆ ಗೊತ್ತು? ದೇವರಿದ್ದರೆ, ಅದೂ ಪ್ರೀತಿ ಆತನ ಮುಖ್ಯ ಗುಣವಾಗಿದ್ದರೆ ಭೂಮಿಯಲ್ಲೇಕೆ ಇಷ್ಟೊಂದು ತೊಂದರೆಗಳು? ದೇವರಿಗೆ ಆದಿ ಇಲ್ಲ ಅಂತ ಹೇಳಿದ್ರೆ ಅದು ಹೇಗೆ?’—ಕೀರ್ತನೆ 90:2.

ನಿಮ್ಮ ಮಗ ಈ ಪ್ರಶ್ನೆಗಳನ್ನು ಕೇಳುವಾಗ ಅವನು ಆಧ್ಯಾತ್ಮಿಕವಾಗಿ ಹಿಂದೆ ಸರಿಯುತ್ತಿದ್ದಾನೆ ಎಂದು ನಿಮಗನಿಸಬಹುದು. ಆದರೆ ನಿಜ ಸಂಗತಿ ಏನೆಂದರೆ ಇದು ಅವನ ಆಧ್ಯಾತ್ಮಿಕ ಪ್ರಗತಿಯ ಸೂಚನೆಯಾಗಿದೆ. ಪ್ರಶ್ನೆ ಕೇಳುತ್ತಾನೆಂದರೆ ಅವನು ಯೋಚಿಸುತ್ತಿದ್ದಾನೆ, ಆಧ್ಯಾತ್ಮಿಕವಾಗಿ ಬೆಳೆಯುತ್ತಿದ್ದಾನೆ ಎಂದರ್ಥ.—ಅಪೊಸ್ತಲರ ಕಾರ್ಯಗಳು 17:2, 3.

ಅಷ್ಟೇ ಅಲ್ಲ, ನಿಮ್ಮ ಮಗ ತನ್ನ “ವಿವೇಚನಾಶಕ್ತಿ” ಉಪಯೋಗಿಸಲು ಕಲಿಯುತ್ತಿದ್ದಾನೆ. (ರೋಮನ್ನರಿಗೆ 12:1, 2) ಬೈಬಲ್‌ ಸತ್ಯಗಳ ‘ಅಗಲ ಉದ್ದ ಎತ್ತರ ಮತ್ತು ಆಳವನ್ನು’ ಗ್ರಹಿಸಲು ಪ್ರಯತ್ನಿಸುತ್ತಿದ್ದಾನೆ. ಚಿಕ್ಕವನಿದ್ದಾಗ ಅವನಿಗೆ ಆ ಸಾಮರ್ಥ್ಯವಿರಲಿಲ್ಲ. (ಎಫೆಸ 3:18) ಹಾಗಾಗಿ ನಿಮ್ಮ ಮಗನಿಗೆ ತನ್ನ ಧಾರ್ಮಿಕ ನಂಬಿಕೆಗಳ ಬಗ್ಗೆ ವಿವೇಚಿಸಲು, ಆಳವಾಗಿ ಯೋಚಿಸಲು ಈಗ ಹೆಚ್ಚಿನ ಸಹಾಯ ಅಗತ್ಯ. ಸಹಾಯಮಾಡಿದರೆ ಆತನಿಗೆ ತನ್ನ ಧಾರ್ಮಿಕ ನಂಬಿಕೆಗಳ ಬಗ್ಗೆ ಯಾವುದೇ ಸಂಶಯ ಉಳಿಯದು.—ಜ್ಞಾನೋಕ್ತಿ 14:15; ಅಪೊಸ್ತಲರ ಕಾರ್ಯಗಳು 17:11.

ಪ್ರಯತ್ನಿಸಿ ನೋಡಿ: ನಂಬಿಕೆಗೆ ಸಂಬಂಧಪಟ್ಟ ಮೂಲಭೂತ ವಿಷಯಗಳನ್ನು ನಿಮ್ಮ ಮಗನೊಂದಿಗೆ ಮಾತಾಡಿ. ಇಂಥ ವಿಷಯಗಳಿಗೆ ನೀವಾಗಲಿ ಅವನಾಗಲಿ ಅಷ್ಟೊಂದು ಗಮನಕೊಟ್ಟಿರಲಿಕ್ಕಿಲ್ಲ. ಉದಾಹರಣೆಗೆ, ಈ ಪ್ರಶ್ನೆಗಳನ್ನು ಅವನು ತನಗೇ ಕೇಳಿಕೊಳ್ಳುವಂತೆ ಉತ್ತೇಜಿಸಿ. ‘ದೇವರಿದ್ದಾನೆಂದು ನಾನು ನಂಬಲು ಕಾರಣವೇನು? ದೇವರಿಗೆ ನನ್ನ ಬಗ್ಗೆ ಕಳಕಳಿ ಇದೆ ಎನ್ನುವುದಕ್ಕೆ ನಾನು ಯಾವ ಪುರಾವೆಯನ್ನು ಕಂಡಿದ್ದೇನೆ? ದೇವರ ನಿಯಮಗಳು ನನ್ನ ಒಳಿತಿಗಾಗಿವೆ ಎಂದು ನಂಬಲು ನನಗೆ ಯಾವ ಕಾರಣಗಳಿವೆ?’ ನಿಮ್ಮ ಅಭಿಪ್ರಾಯಗಳನ್ನು ಅವನ ಮೇಲೆ ಹೇರಬೇಡಿ. ಅವನಾಗಿಯೇ ಯೋಚಿಸಿ ಮನದಟ್ಟು ಮಾಡಿಕೊಳ್ಳಲಿ. ಆಗ ತನ್ನ ಧರ್ಮದಲ್ಲಿ ಅವನಿಗೆ ನಂಬಿಕೆ ಹೆಚ್ಚಾಗುತ್ತದೆ.

‘ನಂಬುವಂತೆ ಒಡಂಬಡಿಸಿ’

ತಿಮೊಥೆಯನು ಶೈಶವದಿಂದಲೇ ಪವಿತ್ರ ಬರಹಗಳನ್ನು ತಿಳಿದುಕೊಂಡಿದ್ದ ಎಂದು ಬೈಬಲ್‌ ಹೇಳುತ್ತದೆ. ಹಾಗಿದ್ದರೂ “ಕಲಿತ ವಿಷಯಗಳಲ್ಲಿಯೂ ನಂಬುವಂತೆ ಒಡಂಬಡಿಸಲ್ಪಟ್ಟ [ಮನಗಾಣಿಸಲ್ಪಟ್ಟ] ವಿಷಯಗಳಲ್ಲಿಯೂ ಮುಂದುವರಿಯುತ್ತಾ ಇರು” ಎಂದು ಯುವ ತಿಮೊಥೆಯನನ್ನು ಅಪೊಸ್ತಲ ಪೌಲ ಉತ್ತೇಜಿಸಿದನು. (2 ತಿಮೊಥೆಯ 3:14, 15) ನೀವೂ ನಿಮ್ಮ ಮಗನಿಗೆ ಹುಟ್ಟಿನಿಂದಲೇ ಬೈಬಲ್‌ ಮಟ್ಟಗಳನ್ನು ಕಲಿಸಿರಬಹುದು. ಈಗ ನೀವು ಅವನಿಗೆ ಮನಗಾಣಿಸಬೇಕು. ಕಲಿತ ವಿಷಯ ನಿಜ ಎಂದು ಆಗ ಅವನಿಗೇ ಖಚಿತವಾಗುವುದು.

ಯುವ ಜನರ ಪ್ರಶ್ನೆಗಳು—ಕಾರ್ಯಸಾಧಕ ಉತ್ತರಗಳು, ಸಂಪುಟ 1 (ಇಂಗ್ಲಿಷ್‌) ಪುಸ್ತಕ ತಿಳಿಸುವುದು: “ಹದಿಪ್ರಾಯದ ಮಗ ನಿಮ್ಮೊಂದಿಗೆ ಇರುವ ತನಕ ನಿಮ್ಮ ಆಧ್ಯಾತ್ಮಿಕ ದಿನಚರಿಯನ್ನು ಅವನೂ ಪಾಲಿಸಬೇಕೆಂದು ಹೇಳುವ ಹಕ್ಕು ನಿಮಗಿದೆ. ಆದರೆ ನಿಮ್ಮ ಗುರಿ ಅವನು ಅದನ್ನು ಯಾಂತ್ರಿಕವಾಗಿ ಮಾಡುತ್ತಾ ಹೋಗಬೇಕೆಂದಲ್ಲ, ಬದಲಾಗಿ ಅವನಿಗೆ ದೇವರ ಮೇಲೆ ಪ್ರೀತಿ ಹುಟ್ಟಬೇಕೆಂದೇ.” ಈ ಗುರಿಯನ್ನು ಮನಸ್ಸಿನಲ್ಲಿಟ್ಟರೆ ನಿಮ್ಮ ಮಗನಿಗೆ ಕ್ರೈಸ್ತ ‘ನಂಬಿಕೆಯಲ್ಲಿ ಸ್ಥಿರನಾಗುವಂತೆ’ ಸಹಾಯಮಾಡುವಿರಿ. ಆಗ ಅದು ಬರೀ ನಿಮ್ಮ ಜೀವನರೀತಿ ಆಗಿರದೆ ಅವನ ಜೀವನರೀತಿಯೂ ಆಗುವುದು. *1 ಪೇತ್ರ 5:9. (w12-E 02/01)

[ಪಾದಟಿಪ್ಪಣಿಗಳು]

^ ಪ್ಯಾರ. 4 ಈ ಲೇಖನದಲ್ಲಿ ಕೆಲವು ಹೆಸರುಗಳನ್ನು ಬದಲಿಸಲಾಗಿದೆ.

^ ಪ್ಯಾರ. 5 ಬರವಣಿಗೆಯ ಸರಳತೆಗಾಗಿ ಈ ಲೇಖನದಲ್ಲಿ ಹದಿಹರೆಯದವ/ಮಗ ಎಂದು ಬರೆಯಲಾಗಿದೆ. ಹಾಗಿದ್ದರೂ ಇಲ್ಲಿರುವ ತತ್ವಗಳು ಹುಡುಗಿಯರಿಗೂ ಅನ್ವಯ.

^ ಪ್ಯಾರ. 40 ಹೆಚ್ಚಿನ ಮಾಹಿತಿಗಾಗಿ ಅಕ್ಟೋಬರ್‌-ಡಿಸೆಂಬರ್‌ 2009ರ ಕಾವಲಿನಬುರುಜು ಪುಟ 10-12 ಮತ್ತು ಅಕ್ಟೋಬರ್‌-ಡಿಸೆಂಬರ್‌ 2011ರ ಎಚ್ಚರ! ಪುಟ 16-19 ಓದಿ.

ನಿಮ್ಮನ್ನೇ ಕೇಳಿಕೊಳ್ಳಿ . . .

▪ ನನ್ನ ಧಾರ್ಮಿಕ ನಂಬಿಕೆಗಳನ್ನು ನನ್ನ ಮಗ ಪ್ರಶ್ನಿಸುವಾಗ ಹೇಗೆ ಪ್ರತಿಕ್ರಿಯಿಸುತ್ತೇನೆ?

▪ ಈ ಲೇಖನದಲ್ಲಿ ಕೊಟ್ಟಿರುವ ಸಲಹೆ ಅನ್ವಯಿಸಿ ನಾನು ಪ್ರತಿಕ್ರಿಯಿಸುವ ವಿಧವನ್ನು ಹೇಗೆ ಉತ್ತಮಗೊಳಿಸಬಲ್ಲೆ?

[ಪುಟ 23ರಲ್ಲಿರುವ ಚೌಕ]

ತಲೆಕೆಡಿಸುತ್ತಾರಾ?

ಮಿಥ್ಯ: ತಾವು ಪಾಲಿಸುವ ಧರ್ಮವನ್ನು ತಮ್ಮ ಮಕ್ಕಳೂ ಪಾಲಿಸಬೇಕೆಂದು ಯೆಹೋವನ ಸಾಕ್ಷಿಗಳು ಒತ್ತಾಯಿಸುತ್ತಾರೆ.

ಸತ್ಯ: ಬೈಬಲ್‌ ಆಜ್ಞೆಗೆ ವಿಧೇಯತೆಯಲ್ಲಿ ಸಾಕ್ಷಿಗಳು ತಮ್ಮ ಮಕ್ಕಳಲ್ಲಿ ದೇವರ ಮೇಲಣ ಪ್ರೀತಿ ಬೆಳೆಸಲು ಪ್ರಯತ್ನಿಸುತ್ತಾರೆ. (ಎಫೆಸ 6:4) ಆದರೂ ಮಗ/ಮಗಳು ಪ್ರಾಪ್ತವಯಸ್ಸಿಗೆ ಬಂದಾಗ ಆರಾಧನೆಯ ವಿಷಯದಲ್ಲಿ ತಾವೇ ನಿರ್ಣಯ ತೆಗೆದುಕೊಳ್ಳುವಂತೆ ಬಿಡುತ್ತಾರೆ.—ರೋಮನ್ನರಿಗೆ 14:12; ಗಲಾತ್ಯ 6:5.

[ಪುಟ 24ರಲ್ಲಿರುವ ಚೌಕ/ಚಿತ್ರ]

 ತಾಳ್ಮೆ ತೋರಿಸಿ!

ಹದಿಹರೆಯದವರೊಂದಿಗೆ ಮಾತಾಡಲು ತುಂಬ ತಾಳ್ಮೆ ಅಗತ್ಯ. ಅದು ಸಾರ್ಥಕ. ಆಗ ನಿಮ್ಮ ಮೇಲೆ ಅವರ ಭರವಸೆ ಹೆಚ್ಚುತ್ತದೆ. ಹದಿಹರೆಯದ ಹುಡುಗಿಯೊಬ್ಬಳು ಹೇಳಿದ್ದು: “ಒಂದು ರಾತ್ರಿ ಡ್ಯಾಡಿ ಜೊತೆ ಮಾತಾಡುವಾಗ ನನಗೆ ಸೋಶಿಯಲ್‌ ನೆಟ್‌ವರ್ಕ್‌ ಪೇಜ್‌ ಇರೋ ವಿಷಯ, ಒಬ್ಬ ಬಾಯ್‌ಫ್ರೆಂಡ್‌ ಇರೋ ವಿಷಯ ಹೇಳಿದೆ. ಅವನ ಜೊತೆ ಓಡಿಹೋಗಬೇಕಂತ ನೆನಸಿದ್ದೆ ಎಂದು ತಿಳಿಸಿದೆ. ಡ್ಯಾಡಿ ತಾಳ್ಮೆಯಿಂದ ನಾನು ಹೇಳಿದ್ದನ್ನೆಲ್ಲ ಕೇಳಿ, ಸಿಟ್ಟುಗೊಳ್ಳದೆ ಶಾಂತವಾಗಿ ಮಾತಾಡಿದ್ರು. ಬೇರೆ ಯಾರ ಡ್ಯಾಡಿಯೂ ಇಷ್ಟು ತಾಳ್ಮೆಯಿಂದ ಕೇಳ್ತಿರಲಿಲ್ಲವೇನೊ. ಅದೂ ಆ ಹುಡುಗನಿಗೆ ಕಿಸ್‌ ಕೊಟ್ಟಿದ್ದೆ, ಮೆಸೇಜ್‌ ಮಾಡ್ತಾ ಇದ್ದೇನೆ ಎಂದಾಗಲೂ ಅವರು ಕಿರಿಚಾಡಲಿಲ್ಲ. ನನ್ನ ಡ್ಯಾಡಿ ಬಳಿ ಏನ್ಬೇಕಾದ್ರೂ ಹೇಳ್ಕೋಬಹುದು. ಅವರು ನಿಜವಾಗಲೂ ನನ್ನನ್ನು ತಿದ್ದಿ ಸಹಾಯಮಾಡಲು ಬಯಸ್ತಾರೆ ಅಂತ ನನಗೆ ಗೊತ್ತು.”

[ಪುಟ 25ರಲ್ಲಿರುವ ಚೌಕ]

ವಯಸ್ಕ ಮಾರ್ಗದರ್ಶಕರ ಮೌಲ್ಯ

ಕುಟುಂಬದವರಿಗಿಂತ ಬೇರೆಯವರ ಮಾತನ್ನು ಕೆಲವೊಮ್ಮೆ ಯುವಜನರು ಬೇಗನೆ ಸ್ವೀಕರಿಸುತ್ತಾರೆ. ನಿಮ್ಮ ಮಗ/ಮಗಳಿಗೆ ಸ್ಫೂರ್ತಿಯಾಗಿರಬಲ್ಲ ಆಧ್ಯಾತ್ಮಿಕ ವ್ಯಕ್ತಿಯಾಗಿರುವ ಸಹೋದರ/ಸಹೋದರಿಯ ಪರಿಚಯ ನಿಮಗಿದೆಯಾ? ಅವರು ನಿಮ್ಮ ಮಗ/ಮಗಳ ಜೊತೆ ಸಮಯ ಕಳೆಯಲು ಏರ್ಪಾಡು ಮಾಡಬಾರದೇಕೆ? ಇದರ ಉದ್ದೇಶ ಹೆತ್ತವರಾದ ನಿಮ್ಮ ಆಧ್ಯಾತ್ಮಿಕ ಜವಾಬ್ದಾರಿಯಿಂದ ಕೈತೊಳೆದುಕೊಳ್ಳುವುದಲ್ಲ. ತಿಮೊಥೆಯನನ್ನು ನೆನಪಿಸಿಕೊಳ್ಳಿ. ಅಪೊಸ್ತಲ ಪೌಲನಿಂದ ತಿಮೊಥೆಯನು ಅನೇಕ ವಿಷಯಗಳನ್ನು ಕಲಿತನು. ಅಂತೆಯೇ ಪೌಲನಿಗೆ ತಿಮೊಥೆಯನು ಒಡನಾಡಿ ಆಗಿದ್ದದರಿಂದ ತುಂಬ ಸಹಾಯವಾಯಿತು.—ಫಿಲಿಪ್ಪಿ 2:20, 22.