ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಿಮ್ಮ ಮಕ್ಕಳಲ್ಲಿ ನೈತಿಕ ಮೌಲ್ಯಗಳನ್ನು ನಾಟಿಸಿರಿ

ನಿಮ್ಮ ಮಕ್ಕಳಲ್ಲಿ ನೈತಿಕ ಮೌಲ್ಯಗಳನ್ನು ನಾಟಿಸಿರಿ

ಕುಟುಂಬ ಸಂತೋಷಕ್ಕೆ ಕೀಲಿಕೈ

ನಿಮ್ಮ ಮಕ್ಕಳಲ್ಲಿ ನೈತಿಕ ಮೌಲ್ಯಗಳನ್ನು ನಾಟಿಸಿರಿ

ಲಾಯ್ಡಾ * ಎಂಬ ಹೆಸರಿನ ಮೆಕ್ಸಿಕೊದ ತಾಯಿಯೊಬ್ಬಳು ಹೇಳುವುದು: “ಸ್ಕೂಲುಗಳಲ್ಲಿ ಕಾಂಡೊಮ್‌ಗಳನ್ನು ಹಂಚಲಾಗುತ್ತದೆ. ಆದ್ದರಿಂದ ಸೆಕ್ಸ್‌ನಲ್ಲಿ ತೊಡಗಿದರೆ ತಪ್ಪೇನಿಲ್ಲ, ಸುರಕ್ಷೆಗಾಗಿ ಕಾಂಡೊಮ್‌ ಬಳಸಬೇಕು ಅಷ್ಟೇ ಎಂದು ಹದಿಹರೆಯದವರು ನೆನಸುತ್ತಾರೆ.”

ನೊಬುಕೊ ಎಂಬ ಹೆಸರಿನ ಜಪಾನಿನ ತಾಯಿಯೊಬ್ಬಳು ಹೇಳುವುದು: “‘ನಿನ್ನ ಗರ್ಲ್‌ಫ್ರೆಂಡ್‌ ಜೊತೆ ಒಂಟಿಯಾಗಿದ್ದರೆ ಏನು ಮಾಡುವಿ?’ ಎಂದು ನನ್ನ ಮಗನಿಗೆ ಕೇಳಿದೆ. ಅದಕ್ಕವನು ‘ಗೊತ್ತಿಲ್ಲ’ ಎಂದುಬಿಟ್ಟ.”

ನಿಮ್ಮ ಮಗ ಇಲ್ಲವೆ ಮಗಳು ಮಗುವಾಗಿದ್ದು ಪುಟ್ಟಪುಟ್ಟ ಹೆಜ್ಜೆಯಿಟ್ಟು ನಡೆಯಲಾರಂಭಿಸಿದಾಗ ಅವರ ಸುರಕ್ಷತೆಗಾಗಿ ನಿಮ್ಮ ಮನೆಯಲ್ಲಿ ಎಷ್ಟೆಲ್ಲ ವಿಷಯಗಳನ್ನು ಮಾಡಿದ್ದಿರಿ, ಯೋಚಿಸಿ. ಬಹುಶಃ ಸ್ವಿಚ್‌ಬೋರ್ಡುಗಳನ್ನು ಮುಚ್ಚಿಟ್ಟಿದ್ದಿರಿ, ಚೂಪಾದ ವಸ್ತುಗಳು ಕೈಗೆಟುಕದ ಹಾಗೆ ಇಟ್ಟಿದ್ದಿರಿ, ಬಾಗಿಲುಗಳಿಗೆ ಅಡ್ಡಗಟ್ಟು ಹಾಕಿದ್ದಿರಿ. ಇಷ್ಟೆಲ್ಲ ಮಾಡಿದ್ದು ನಿಮ್ಮ ಕಂದನ ಸುರಕ್ಷತೆಗಾಗಿ ಅಲ್ಲವೇ?

ಈಗ ಹದಿಹರೆಯದವರಾಗಿರುವ ಅವರನ್ನು ಅಷ್ಟೇ ಸುಲಭವಾಗಿ ಸುರಕ್ಷಿತರಾಗಿಡಲು ಸಾಧ್ಯವಿರುತ್ತಿದ್ದಲ್ಲಿ ಎಷ್ಟು ಚೆನ್ನಾಗಿರುತ್ತಿತ್ತು! ಈಗಂತೂ ನಿಮಗಿರುವ ಚಿಂತೆಗಳು ಇನ್ನಷ್ಟು ಗಂಭೀರ: ‘ನನ್ನ ಮಗ ಅಶ್ಲೀಲ ಚಿತ್ರಗಳನ್ನು ನೋಡುತ್ತಿದ್ದಾನೋ?’ ‘ಮಗಳು ಮೊಬೈಲ್‌ ಮೂಲಕ ಇತರರಿಗೆ ತನ್ನ ಅಶ್ಲೀಲ ಫೋಟೋಗಳನ್ನು ಕಳುಹಿಸುತ್ತಿದ್ದಾಳೊ?’ ಎಲ್ಲಕ್ಕಿಂತ ಹೆಚ್ಚು ದಿಗಿಲುಗೊಳಿಸುವ ಪ್ರಶ್ನೆಯೇನೆಂದರೆ: ‘ನನ್ನ ಹದಿಹರೆಯದ ಮಕ್ಕಳು ಸೆಕ್ಸ್‌ನಲ್ಲಿ ತೊಡಗಿದ್ದಾರೊ?’

ಪೂರ್ಣ ನಿಯಂತ್ರಣ ಸಮಸ್ಯೆಗೆ ಪರಿಹಾರವಲ್ಲ

ಕೆಲವು ಹೆತ್ತವರು ಸಿ.ಐ.ಡಿ. ಥರ 24 ತಾಸೂ ತಮ್ಮ ಮಕ್ಕಳ ಪ್ರತಿಯೊಂದು ಚಲನವಲನದ ಮೇಲೆ ಕಣ್ಣಿಡುತ್ತಾರೆ. ಆದರೆ ತಾವು ಈ ರೀತಿ ಮಾಡಿದ್ದೇ ಮಕ್ಕಳು ತಪ್ಪಾದ ಕೆಲಸಗಳನ್ನು ಗುಟ್ಟಾಗಿ ಮಾಡಲು ಕಾರಣವಾಗಿದೆಯೆಂದು ಆಮೇಲೆ ಹೆಚ್ಚಿನ ಹೆತ್ತವರಿಗೆ ಗೊತ್ತಾಗಿದೆ. ಹೆತ್ತವರು ಯಾವುದನ್ನು ತಡೆಗಟ್ಟಲು ಪ್ರಯತ್ನಿಸುತ್ತಿದ್ದರೊ ಅದನ್ನೇ ಗುಟ್ಟಾಗಿ ನಡೆಸುವುದರಲ್ಲಿ ಮಗ ಇಲ್ಲವೆ ಮಗಳು ನಿಸ್ಸೀಮರಾಗಿರುತ್ತಾರೆ.

ಹಾಗಾದರೆ ಪೂರ್ಣ ನಿಯಂತ್ರಣ ಸಮಸ್ಯೆಗೆ ಪರಿಹಾರವಲ್ಲ ಎಂಬುದು ಸ್ಪಷ್ಟ. ತನ್ನ ಸೃಷ್ಟಿಜೀವಿಗಳು ತನಗೆ ವಿಧೇಯರಾಗುವಂತೆ ಸ್ವತಃ ಯೆಹೋವ ದೇವರೇ ಈ ವಿಧಾನ ಬಳಸುವುದಿಲ್ಲ. ಆದ್ದರಿಂದ ಹೆತ್ತವರಾದ ನೀವೂ ಹಾಗೆ ಮಾಡಬಾರದು. (ಧರ್ಮೋಪದೇಶಕಾಂಡ 30:19) ಹಾಗಾದರೆ ಹದಿಹರೆಯದ ನಿಮ್ಮ ಮಕ್ಕಳು ವಿವೇಕಯುತ ನೈತಿಕ ನಿರ್ಣಯಗಳನ್ನು ಮಾಡಲು ಹೇಗೆ ನೆರವಾಗಬಲ್ಲಿರಿ?ಜ್ಞಾನೋಕ್ತಿ 27:11.

ನಿಮ್ಮ ಮಕ್ಕಳೊಂದಿಗೆ ಸತತವಾಗಿ ಚರ್ಚೆಗಳನ್ನು ನಡೆಸುವುದು ಒಂದು ಮುಖ್ಯ ವಿಧಾನ. ಇದನ್ನು ಎಳವೆಯಿಂದಲೇ ಆರಂಭಿಸಿ. * (ಜ್ಞಾನೋಕ್ತಿ 22:6) ಅವರು ತರುಣಾವಸ್ಥೆಗೆ ಕಾಲಿಟ್ಟಾಗಲೂ ಚರ್ಚೆಗಳನ್ನು ಮುಂದುವರಿಸಿ. ನಿಮ್ಮ ಹದಿಹರೆಯದವರಿಗೆ ಭರವಸಾರ್ಹ ಮಾಹಿತಿಯನ್ನು ಪ್ರಮುಖವಾಗಿ ಹೆತ್ತವರಾದ ನೀವು ಕೊಡಬೇಕು. “ಸೆಕ್ಸ್‌ ಬಗ್ಗೆ ಮಾಹಿತಿಯನ್ನು ಹೆತ್ತವರ ಬದಲು ನಮ್ಮ ಸ್ನೇಹಿತರಿಂದ ನಾವು ಪಡೆಯಲಿಚ್ಛಿಸುತ್ತೇವೆ ಎಂದು ಜನರು ಎಣಿಸುತ್ತಾರೆ. ಆದರೆ ನಿಜವೇನೆಂದರೆ ಆ ಮಾಹಿತಿಯನ್ನು ನಮ್ಮ ಹೆತ್ತವರೇ ಕೊಡುವಾಗ ನಾವದಕ್ಕೆ ಹೆಚ್ಚು ಮಹತ್ವ ಕೊಡುತ್ತೇವೆ. ಅವರೇನು ಹೇಳುತ್ತಾರೊ ಅದರಲ್ಲಿ ನಮಗೆ ಭರವಸೆಯಿದೆ” ಎನ್ನುತ್ತಾಳೆ ಬ್ರಿಟನಿನ ಅಲೀಷಾ.

ಒಳ್ಳೇ ಮೌಲ್ಯಗಳು ಅಗತ್ಯ

ಗರ್ಭಧಾರಣೆ, ಮಗುವಿನ ಜನನ ಆಗುವುದು ಹೇಗೆಂಬ ನಿಜಾಂಶಗಳನ್ನು ಬೆಳೆಯುತ್ತಾ ಬರುವ ನಿಮ್ಮ ಮಕ್ಕಳಿಗೆ ತಿಳಿಸಿದರೆ ಸಾಲದು. ಅವರಿಗೆ ಸೆಕ್ಸ್‌ ಬಗ್ಗೆ ಹೆಚ್ಚಿನ ಮಾರ್ಗದರ್ಶನವನ್ನೂ ಕೊಡಬೇಕು. ‘ಸರಿ ಮತ್ತು ತಪ್ಪಿನ ಭೇದವನ್ನು ತಿಳಿಯಲಿಕ್ಕಾಗಿ ಅವರ ಗ್ರಹಣ ಶಕ್ತಿಗಳೂ ತರಬೇತುಹೊಂದಿರಬೇಕು.’ (ಇಬ್ರಿಯ 5:14) ಚುಟುಕಾಗಿ ಹೇಳುವುದಾದರೆ ಅವರಿಗೆ ಮೌಲ್ಯಗಳು ಅಗತ್ಯ. ಅಂದರೆ ಯೋಗ್ಯವಾದ ಲೈಂಗಿಕ ನಡತೆ ಯಾವುದೆಂಬುದರ ಬಗ್ಗೆ ಅವರಿಗೆ ಬಲವಾದ ಅಭಿಪ್ರಾಯಗಳಿರಬೇಕು ಮತ್ತು ಅವುಗಳಿಗನುಸಾರ ಅವರು ಜೀವಿಸಲೂ ಬೇಕು. ಹದಿಹರೆಯದ ನಿಮ್ಮ ಮಕ್ಕಳಲ್ಲಿ ಇಂಥ ಒಳ್ಳೇ ಮೌಲ್ಯಗಳನ್ನು ಹೇಗೆ ನಾಟಿಸುವಿರಿ?

ಮೊದಲಾಗಿ ನಿಮ್ಮ ಮೌಲ್ಯಗಳನ್ನು ಅವರೊಂದಿಗೆ ಚರ್ಚಿಸಿರಿ. ಉದಾಹರಣೆಗೆ ಹಾದರ, ಅಂದರೆ ಅವಿವಾಹಿತ ಗಂಡುಹೆಣ್ಣು ಲೈಂಗಿಕ ಸಂಬಂಧದಲ್ಲಿ ತೊಡಗುವುದು ತಪ್ಪೆಂದು ನೀವು ಬಲವಾಗಿ ನಂಬುತ್ತಿರಬಹುದು. (1 ಥೆಸಲೊನೀಕ 4:3) ನಿಮ್ಮ ಈ ನಿಲುವಿನ ಬಗ್ಗೆ ನಿಮ್ಮ ಮಕ್ಕಳಿಗೆ ತಿಳಿದಿರಬಹುದು. ನಿಮ್ಮ ಈ ನಂಬಿಕೆಗಳಿಗೆ ಆಧಾರಕೊಡುವ ಬೈಬಲ್‌ ವಚನಗಳನ್ನು ಅವರು ಹೇಳಲೂ ಶಕ್ತರಾಗಿರಬಹುದು. ಪ್ರಶ್ನೆ ಕೇಳಲ್ಪಟ್ಟಲ್ಲಿ, ವಿವಾಹಪೂರ್ವ ಸೆಕ್ಸ್‌ ತಪ್ಪೆಂದು ಅವರು ತಟ್ಟನೆ ಉತ್ತರಿಸಲೂಬಹುದು.

ಆದರೆ ಅಷ್ಟೇ ಸಾಲದು. ಸೆಕ್ಸ್‌ ಸ್ಮಾರ್ಟ್‌ ಎಂಬ ಪುಸ್ತಕ ಹೇಳುವಂತೆ ಕೆಲವು ಯುವಜನರು, ಸೆಕ್ಸ್‌ ಬಗ್ಗೆ ತಮ್ಮ ಹೆತ್ತವರ ನಂಬಿಕೆಗಳನ್ನು ಒಪ್ಪುತ್ತೇವೆಂದು ಬಾಯುಪಚಾರಕ್ಕಾಗಿ ಹೇಳುತ್ತಾರೆ. ಆದರೆ “ತಮ್ಮ ಸ್ವಂತ ಅಭಿಪ್ರಾಯ ತಾಳುವಷ್ಟು ನಿಶ್ಚಿತಭಾವ ಅವರಿಗಿರುವುದಿಲ್ಲ. ಅನಿರೀಕ್ಷಿತ ಸನ್ನಿವೇಶ ಎದುರಾದಾಗ, ಯಾವ ನಡತೆ ಸರಿ ಯಾವುದು ತಪ್ಪೆಂಬ ಬಿಕ್ಕಟ್ಟಿಗೊಳಗಾಗಿ ಗಲಿಬಿಲಿಗೊಂಡು ಸಮಸ್ಯೆಯಲ್ಲಿ ಸಿಕ್ಕಿಬೀಳುತ್ತಾರೆ” ಎನ್ನುತ್ತದೆ ಆ ಪುಸ್ತಕ. ಮೌಲ್ಯಗಳು ಅತ್ಯಾವಶ್ಯಕ ಎನ್ನುವುದು ಈ ಕಾರಣಕ್ಕಾಗಿಯೇ. ಅವನ್ನು ಗಳಿಸುವಂತೆ ನಿಮ್ಮ ಹದಿಹರೆಯದವನಿಗೆ/ಳಿಗೆ ಹೇಗೆ ನೆರವಾಗಬಲ್ಲಿರಿ?

ನಿಮ್ಮ ಮೌಲ್ಯಗಳೇನೆಂದು ಸ್ಪಷ್ಟವಾಗಿ ಹೇಳಿ: ವಿವಾಹ ಮುಂಚೆ ಸೆಕ್ಸ್‌ನಲ್ಲಿ ತೊಡಗಬಾರದೆಂದು ನೀವು ನಂಬುತ್ತೀರೋ? ಹಾಗಿದ್ದರೆ ಅದನ್ನು ನಿಮ್ಮ ಹದಿಹರೆಯದವನಿ/ಳಿಗೆ ಸ್ಪಷ್ಟವಾಗಿ, ಆಗಿಂದಾಗ್ಗೆ ಹೇಳಿ. ಸೆಕ್ಸ್‌ ಬಗ್ಗೆ ಮಕ್ಕಳೊಂದಿಗೆ ಮಾತಾಡುವುದರ ಕುರಿತ ಪುಸ್ತಕವೊಂದು ಹೇಳುವುದು: ಅವಿವಾಹಿತ “ಹದಿಹರೆಯದವರ ಸಂಭೋಗ ತಪ್ಪೆಂದು ಎಲ್ಲಿ ಹೆತ್ತವರು ಕಟ್ಟುನಿಟ್ಟಾಗಿ ಹೇಳುತ್ತಾರೊ ಅಂಥ ಕುಟುಂಬಗಳ ಹದಿಹರೆಯದವರು ಪ್ರಾಪ್ತವಯಸ್ಸಿಗೆ ಮುಂಚೆ ಲೈಂಗಿಕ ಕೃತ್ಯದಲ್ಲಿ ತೊಡಗದಿರುವ ಸಾಧ್ಯತೆ ಹೆಚ್ಚು” ಎಂದು ಸಂಶೋಧನೆಗಳಿಂದ ತಿಳಿದುಬಂದಿದೆ.

ಈ ಹಿಂದೆ ತಿಳಿಸಲಾದಂತೆ, ನಿಮಗಿರುವ ಮೌಲ್ಯಗಳೇನೆಂದು ನಿಮ್ಮ ಮಕ್ಕಳಿಗೆ ಬರೇ ತಿಳಿಸಿದಲ್ಲಿ ಅವರದನ್ನು ಪಾಲಿಸುವರೆಂಬ ಖಾತ್ರಿಯಿಲ್ಲ ನಿಜ. ಹಾಗಿದ್ದರೂ ಕುಟುಂಬದಲ್ಲಿ ದೃಢವಾದ ಮೌಲ್ಯಗಳಿದ್ದರೆ ಮಕ್ಕಳಿಗೆ ತಮ್ಮ ಸ್ವಂತ ಮೌಲ್ಯಗಳನ್ನಿಡಲು ಒಂದು ಬುನಾದಿ ಸಿಗುತ್ತದೆ. ಅನೇಕ ಯುವಜನರು ತಮ್ಮ ಹದಿಪ್ರಾಯದಲ್ಲಿ ಹೆತ್ತವರ ಮೌಲ್ಯಗಳನ್ನು ಪಾಲಿಸದಂತೆ ತೋರಿದರೂ ಕಾಲಾನಂತರ ಅವುಗಳನ್ನು ಮೈಗೂಡಿಸಿಕೊಳ್ಳುತ್ತಾರೆಂದು ಅಧ್ಯಯನಗಳು ತೋರಿಸುತ್ತವೆ.

ಪ್ರಯತ್ನಿಸಿ ನೋಡಿ: ವಾರ್ತೆಗಳಲ್ಲಿ ವರದಿಯಾದ ಸುದ್ದಿಯನ್ನು ಬಳಸಿ ನಿಮ್ಮ ಹದಿಹರೆಯದವನೊಂದಿಗೆ ಚರ್ಚೆಯನ್ನು ಶುರುಮಾಡುತ್ತಾ ನಿಮ್ಮ ಮೌಲ್ಯಗಳನ್ನು ಅವರಿಗೆ ತಿಳಿಸಿ. ಉದಾಹರಣೆಗೆ, ಸೆಕ್ಸ್‌ಗೆ ಸಂಬಂಧಿಸಿದ ಅಪರಾಧದ ವರದಿಯಿದ್ದಲ್ಲಿ ನೀವು ಹೀಗನ್ನಬಹುದು: “ಈ ರೀತಿ ಕೆಲವು ಪುರುಷರು ತಮ್ಮ ಕಾಮತೃಪ್ತಿಗಾಗಿ ಸ್ತ್ರೀಯರನ್ನು ದುರುಪಯೋಗಿಸುವುದು ನಿಜವಾಗಿ ಅಸಹ್ಯಕರ. ಇಂಥ ದುರಾಲೋಚನೆ ಅವರಿಗೆ ಎಲ್ಲಿಂದ ಬರುತ್ತದೆಂದು ನೆನಸುತ್ತೀ?”

ಸೆಕ್ಸ್‌ ಕುರಿತ ಪೂರ್ಣ ಸತ್ಯ ಕಲಿಸಿ. ಎಚ್ಚರಿಕೆಗಳು ಅತ್ಯಗತ್ಯ. (1 ಕೊರಿಂಥ 6:18; ಯಾಕೋಬ 1:14, 15) ಆದರೆ ಬೈಬಲ್‌ ಸೆಕ್ಸ್‌ ಅನ್ನು ಮುಖ್ಯವಾಗಿ ದೇವರ ಕೊಡುಗೆಯಾಗಿ ಚಿತ್ರಿಸುತ್ತದೆ, ಸೈತಾನನ ಪಾಶವಾಗಿ ಅಲ್ಲ. (ಜ್ಞಾನೋಕ್ತಿ 5:18, 19; ಪರಮ ಗೀತ 1:2) ನೀವು ಹದಿಹರೆಯದ ನಿಮ್ಮ ಮಕ್ಕಳಿಗೆ ಬರೇ ಅದರ ಅಪಾಯಗಳ ಕುರಿತೇ ತಿಳಿಸಿದರೆ, ಅವರು ಸೆಕ್ಸ್‌ ಬಗ್ಗೆ ವಕ್ರವಾದ, ಶಾಸ್ತ್ರಾಧಾರಿತವಲ್ಲದ ದೃಷ್ಟಿಕೋನ ತಾಳಾರು. ಫ್ರಾನ್ಸ್‌ ದೇಶದ ಕೊರೀನಾ ಎಂಬ ಯುವತಿ ಹೇಳಿದ್ದು: “ನನ್ನ ಹೆತ್ತವರು ಯಾವಾಗಲೂ ಲೈಂಗಿಕ ಅನೈತಿಕತೆಯ ಬಗ್ಗೆ ಎಚ್ಚರಿಸುತ್ತಾ ಇರುತ್ತಿದ್ದರು. ಇದರಿಂದಾಗಿ ಲೈಂಗಿಕ ಸಂಬಂಧಗಳ ಬಗ್ಗೆ ನನ್ನಲ್ಲಿ ನಕಾರಾತ್ಮಕ ಮನೋಭಾವ ಬೆಳೆಯಿತು.”

ನಿಮ್ಮ ಮಕ್ಕಳಿಗೆ ಸೆಕ್ಸ್‌ ಕುರಿತ ಪೂರ್ಣ ಸತ್ಯ ತಿಳಿದಿರುವಂತೆ ನೋಡಿಕೊಳ್ಳಿ. ಮೆಕ್ಸಿಕೊದಲ್ಲಿರುವ ನಾಡಿಯ ಎಂಬ ಹೆಸರಿನ ತಾಯಿ ಹೇಳಿದ್ದು: “ಸೆಕ್ಸ್‌ನಲ್ಲಿ ತಪ್ಪೇನಿಲ್ಲ, ಅದು ಸ್ವಾಭಾವಿಕ, ಯೆಹೋವ ದೇವರೇ ಅದನ್ನು ಮಾನವರ ಆನಂದಕ್ಕಾಗಿ ಕೊಟ್ಟನೆಂಬದನ್ನು ನನ್ನ ಹದಿಹರೆಯದ ಮಕ್ಕಳಿಗೆ ಹೇಳಲು ಯಾವಾಗಲೂ ಪ್ರಯತ್ನಿಸಿದ್ದೇನೆ. ಆದರೆ ಅದನ್ನು ವಿವಾಹದ ಚೌಕಟ್ಟಿನೊಳಗೆ ಮಾತ್ರ ಆನಂದಿಸಬೇಕು, ನಾವದನ್ನು ಬಳಸುವ ವಿಧದ ಮೇಲೆ ಹೊಂದಿಕೊಂಡು ಸುಖ ಇಲ್ಲವೇ ದುಃಖ ಸಿಗುವುದೆಂದು ಅವರಿಗೆ ಹೇಳಿಕೊಟ್ಟಿದ್ದೇನೆ.”

ಪ್ರಯತ್ನಿಸಿ ನೋಡಿ: ಮುಂದಿನ ಸಲ ನಿಮ್ಮ ಹದಿಹರೆಯದ ಮಕ್ಕಳೊಂದಿಗೆ ಸೆಕ್ಸ್‌ ಕುರಿತು ಮಾತಾಡುವಾಗ ನಿಮ್ಮ ಚರ್ಚೆ ಸಕಾರಾತ್ಮಕವಾಗಿ ಕೊನೆಗೊಳ್ಳಲಿ. ಸೆಕ್ಸ್‌ ಎಂಬುದು ದೇವರ ಅದ್ಭುತ ಕೊಡುಗೆಯೆಂದು ಕಲಿಸಲು ಹೆದರಬೇಡಿ. ಅದನ್ನು ಅವರು ಭವಿಷ್ಯದಲ್ಲಿ ವಿವಾಹಿತರಾಗಿ ಆನಂದಿಸಬಹುದೆಂದು ಕಲಿಸಿ. ಆ ತನಕ ನಿಮ್ಮ ಹದಿಹರೆಯದ ಮಕ್ಕಳು ದೇವರ ಮಟ್ಟಗಳಿಗೆ ಅಂಟಿಕೊಳ್ಳುವರೆಂಬ ಭರವಸೆ ನಿಮಗಿದೆಯೆಂದು ಅವರಿಗೆ ಹೇಳಿ.

ಪರಿಣಾಮಗಳನ್ನು ತೂಗಿನೋಡಲು ಹದಿಹರೆಯದವರಿಗೆ ನೆರವಾಗಿ: ಹದಿಹರೆಯದವರು ತಮ್ಮ ಬದುಕಿನ ಯಾವುದೇ ಕ್ಷೇತ್ರದಲ್ಲಿ ಒಳ್ಳೇ ನಿರ್ಣಯಗಳನ್ನು ಮಾಡಬೇಕಾದರೆ ತಮ್ಮ ಮುಂದಿರುವ ಆಯ್ಕೆಗಳಾವವು ಎಂಬುದನ್ನು ಗುರುತಿಸಿ, ಪ್ರತಿಯೊಂದು ಆಯ್ಕೆಯ ಸಾಧಕಬಾಧಕಗಳೇನೆಂದು ತೂಗಿನೋಡ ಶಕ್ತರಾಗಿರಬೇಕು. ಸರಿ ಯಾವುದು, ತಪ್ಪು ಯಾವುದೆಂದು ಅವರಿಗೆ ತಿಳಿದರಷ್ಟೇ ಸಾಕೆಂದು ನೆನಸಬೇಡಿ. ಆಸ್ಟ್ರೇಲಿಯದ ಏಮಾ ಎಂಬ ಕ್ರೈಸ್ತ ಮಹಿಳೆ ಹೇಳುವುದು: “ಯೌವನದಲ್ಲಿ ನಾನು ಮಾಡಿದ ತಪ್ಪುಗಳ ಬಗ್ಗೆ ನೆನಸುವಾಗ, ದೇವರ ಮಟ್ಟಗಳ ಜ್ಞಾನವಿದ್ದ ಮಾತ್ರಕ್ಕೆ ನಾವದನ್ನು ನಿಜವಾಗಿ ನಂಬುತ್ತೇವೆಂದು ಅರ್ಥವಲ್ಲ ಎಂದು ನನಗೆ ಗೊತ್ತಾಗಿದೆ. ಆ ಮಟ್ಟಗಳ ಪ್ರಯೋಜನಗಳನ್ನೂ, ಅವುಗಳನ್ನು ಉಲ್ಲಂಘಿಸುವುದರ ಪರಿಣಾಮಗಳನ್ನೂ ಅರ್ಥಮಾಡಿಕೊಳ್ಳುವುದು ಅತ್ಯಾವಶ್ಯಕ.”

ಈ ವಿಷಯದಲ್ಲಿ ಬೈಬಲ್‌ ಖಂಡಿತ ಸಹಾಯಮಾಡಬಲ್ಲದು. ಏಕೆಂದರೆ ಅದರಲ್ಲಿರುವ ಅನೇಕ ಆಜ್ಞೆಗಳ ಜೊತೆಗೆ ತಪ್ಪನ್ನು ಮಾಡುವುದರ ದುಷ್ಪರಿಣಾಮಗಳನ್ನು ತಿಳಿಸುವ ವಾಕ್ಯಗಳೂ ಇವೆ. ಉದಾಹರಣೆಗೆ, ಜ್ಞಾನೋಕ್ತಿ 5:8, 9 (ಪರಿಶುದ್ಧ ಬೈಬಲ್‌ *) ಯೌವನಸ್ಥರು ಹಾದರ ಮಾಡಬಾರದೆಂದು ಹೇಳುತ್ತದೆ. ಮಾಡಿದಲ್ಲಿ ‘ನಿಮ್ಮ ಮೇಲೆ ಜನರಿಗಿರುವ ಗೌರವವನ್ನು ಕಳೆದುಕೊಳ್ಳುವಿರಿ’ ಎಂದೂ ಹೇಳುತ್ತದೆ. ಈ ವಚನ ತೋರಿಸುವಂತೆ ವಿವಾಹಪೂರ್ವ ಲೈಂಗಿಕತೆಯಲ್ಲಿ ತೊಡಗುವವರು ತಮ್ಮ ನೈತಿಕ ಮಟ್ಟಗಳನ್ನು ಉಲ್ಲಂಘಿಸುತ್ತಾರೆ, ದೇವರೊಂದಿಗಿನ ತಮ್ಮ ಸಂಬಂಧವನ್ನು ಕೆಡಿಸುತ್ತಾರೆ ಹಾಗೂ ಸ್ವಗೌರವಕ್ಕೆ ಧಕ್ಕೆ ತರುತ್ತಾರೆ. ಅಲ್ಲದೆ ಇಂಥವರನ್ನು ವಿವಾಹವಾಗಲು ಸದ್ಗುಣಿ ವ್ಯಕ್ತಿಗಳು ಹಿಂದೇಟುಹಾಕುತ್ತಾರೆ. ದೇವರ ನಿಯಮಗಳನ್ನು ತಿರಸ್ಕರಿಸುವುದರಿಂದ ಬರುವ ಶಾರೀರಿಕ, ಭಾವನಾತ್ಮಕ, ಆಧ್ಯಾತ್ಮಿಕ ಅಪಾಯಗಳ ಕುರಿತು ಹದಿಹರೆಯದ ನಿಮ್ಮ ಮಕ್ಕಳು ಮನನ ಮಾಡುವಾಗ, ಆ ನಿಯಮಗಳನ್ನು ಪಾಲಿಸುವಂತೆ ಅವರು ಮಾಡಿದ ಗಟ್ಟಿಮನಸ್ಸು ಇನ್ನಷ್ಟು ಬಲಗೊಳ್ಳುವುದು.

ಪ್ರಯತ್ನಿಸಿ ನೋಡಿ: ದೇವರ ಮಟ್ಟಗಳನ್ನು ಪಾಲಿಸುವುದು ಎಷ್ಟು ವಿವೇಕಯುತ ಎಂಬುದನ್ನು ನಿಮ್ಮ ಹದಿಹರೆಯದ ಮಕ್ಕಳು ಗ್ರಹಿಸುವಂತೆ ನೆರವಾಗಲು ದೃಷ್ಟಾಂತಗಳನ್ನು ಬಳಸಿ. ಉದಾಹರಣೆಗೆ ನೀವು ಹೀಗನ್ನಬಹುದು: “ಅಡಿಗೆಯ ಬೆಂಕಿ ಒಳ್ಳೇದು, ಆದರೆ ಕಾಡ್ಗಿಚ್ಚು ಕೆಟ್ಟದ್ದು. ಇವೆರಡರ ನಡುವಿನ ವ್ಯತ್ಯಾಸವೇನು ಹೇಳು? ನಿನ್ನ ಉತ್ತರ, ದೇವರು ಸೆಕ್ಸ್‌ ಬಗ್ಗೆ ಇಟ್ಟಿರುವ ಮೇರೆಗಳಿಗೆ ಹೇಗೆ ಅನ್ವಯಿಸುತ್ತದೆ?” ಜ್ಞಾನೋಕ್ತಿ 5:3-14ರ ವೃತ್ತಾಂತ ಬಳಸಿ ನಿಮ್ಮ ಹದಿಹರೆಯದ ಮಕ್ಕಳಿಗೆ ಹಾದರದ ಹಾನಿಕರ ಪರಿಣಾಮಗಳೇನೆಂದು ಅರ್ಥಮಾಡಿಕೊಳ್ಳಲು ಸಹಾಯಮಾಡಿ.

ಜಪಾನಿನ 18 ವರ್ಷದ ಯುವಕ ಟಾಕಾವ್‌ ಅನ್ನುವುದು: “ಸರಿಯಾದದ್ದನ್ನೇ ಮಾಡಬೇಕೆಂದು ನನಗೆ ಗೊತ್ತು. ಆದರೆ ನನ್ನಲ್ಲಿ ಶರೀರದಾಶೆಗಳ ವಿರುದ್ಧ ಯಾವಾಗಲೂ ಹೋರಾಟ ನಡೆಯುತ್ತಿರುತ್ತದೆ.” ಹೀಗನಿಸುವ ಯುವಜನರಿಗೆ ತಮ್ಮಂತೆ ಬೇರೆಯವರೂ ಇದ್ದಾರೆಂದು ತಿಳಿದು ಸ್ವಲ್ಪ ನೆಮ್ಮದಿಯಾದೀತು. ಕ್ರೈಸ್ತ ಕಟ್ಟಾಳು ಆಗಿದ್ದ ಅಪೊಸ್ತಲ ಪೌಲನು ಸಹ ತನ್ನ ಕುರಿತು ಹೀಗೆ ಒಪ್ಪಿಕೊಂಡನು: “ನಾನು ಒಳ್ಳೇದನ್ನು ಮಾಡಲು ಬಯಸುವುದಾದರೂ ಕೆಟ್ಟದ್ದೇ ನನ್ನಲ್ಲಿ ಇದೆ.”—ರೋಮನ್ನರಿಗೆ 7:21.

ಶರೀರದಾಶೆಗಳ ವಿರುದ್ಧ ಅಂಥ ಹೋರಾಟ ಕೆಟ್ಟದ್ದಲ್ಲವೆಂದು ಹದಿಹರೆಯದವರು ಗ್ರಹಿಸತಕ್ಕದ್ದು. ಅದು ಅವರಿಗೆ, ತಾವು ಯಾವ ವಿಧದ ವ್ಯಕ್ತಿಯಾಗಬೇಕೆಂದು ಯೋಚಿಸುವಂತೆ ಮಾಡಬಲ್ಲದು. ‘ನನ್ನ ಬದುಕನ್ನು ನಾನು ಹತೋಟಿಯಲ್ಲಿಟ್ಟು, ನೈತಿಕ ಮಟ್ಟಗಳನ್ನು ಎತ್ತಿಹಿಡಿಯುವ, ದೇವರೊಂದಿಗಿನ ಒಳ್ಳೇ ಸಂಬಂಧವಿರುವ ವ್ಯಕ್ತಿಯೆಂಬ ಹೆಸರನ್ನು ಮಾಡಲಿಚ್ಛಿಸುತ್ತೇನೋ ಅಥವಾ ಸ್ವಂತ ಆಸೆಗಳಿಗೆ ಅಡಿಯಾಳು ಎಂಬ ಹೆಸರನ್ನು ಮಾಡಲಿಚ್ಛಿಸುತ್ತೇನೊ?’ ಎಂಬ ಪ್ರಶ್ನೆಗೆ ವಿವೇಕಭರಿತ ಉತ್ತರಕೊಡಲು ಅದು ನಿಮ್ಮ ಹದಿಹರೆಯದ ಮಕ್ಕಳಿಗೆ ನೆರವಾಗುವುದು. ಇದಕ್ಕಾಗಿ ಅವರಿಗೆ ಒಳ್ಳೇ ನೈತಿಕ ಮೌಲ್ಯಗಳಿರಬೇಕು. (w11-E 02/01)

[ಪಾದಟಿಪ್ಪಣಿಗಳು]

^ ಪ್ಯಾರ. 3 ಈ ಲೇಖನದಲ್ಲಿ ಕೆಲವು ಹೆಸರುಗಳನ್ನು ಬದಲಿಸಲಾಗಿದೆ.

^ ಪ್ಯಾರ. 10 ಸೆಕ್ಸ್‌ ಬಗ್ಗೆ ನಿಮ್ಮ ಮಕ್ಕಳೊಂದಿಗೆ ಮಾತುಕತೆ ಆರಂಭಿಸುವುದು ಮತ್ತು ಅವರ ವಯಸ್ಸಿಗೆ ತಕ್ಕಂಥ ಮಾಹಿತಿ ಕೊಡುವುದು ಹೇಗೆಂಬ ಸಲಹೆಗಳಿಗಾಗಿ ಏಪ್ರಿಲ್‌-ಜೂನ್‌ 2011ರ ಕಾವಲಿನಬುರುಜು ಪುಟ 20-22 ನೋಡಿ.

^ ಪ್ಯಾರ. 22 Taken from the HOLY BIBLE: Kannada EASY-TO-READ VERSION © 1997 by World Bible Translation Center, Inc. and used by permission.

ಕೇಳಿಕೊಳ್ಳಿ . . .

ನನ್ನ ಹದಿಹರೆಯದ ಮಕ್ಕಳಿಗೆ ದೃಢ ನೈತಿಕ ಮೌಲ್ಯಗಳಿವೆಯೆಂದು ನನಗೆ ಹೇಗೆ ಗೊತ್ತಾಗುತ್ತಿದೆ?

ಸೆಕ್ಸ್‌ ಕುರಿತು ಹದಿಹರೆಯದ ನನ್ನ ಮಕ್ಕಳೊಂದಿಗೆ ಮಾತಾಡುವಾಗ ಯಾವ ಚಿತ್ರಣ ಕೊಡುತ್ತೇನೆ—ಅದು ದೇವರ ಕೊಡುಗೆಯೆಂದೊ ಸೈತಾನನ ಪಾಶವೆಂದೊ?

[ಪುಟ 27ರಲ್ಲಿರುವ ಚೌಕ]

ಬೈಬಲು ಸರ್ವಕಾಲಕ್ಕೂ ಉಪಯುಕ್ತ

“ಲೈಂಗಿಕ ನಡವಳಿಕೆಯ ಕುರಿತ ಬೈಬಲಿನ ಉಪದೇಶ ಹಿಂದೆಯೂ ಈಗಲೂ ಉಪಯುಕ್ತವಾಗಿದೆ. ಪ್ರಾಪ್ತ ವಯಸ್ಸಿಗೆ ಮುಂಚೆ ಲೈಂಗಿಕ ಕ್ರಿಯೆಗಳಲ್ಲಿ ತೊಡಗಿ ಗಂಭೀರ ಭಾವನಾತ್ಮಕ ಪರಿಣಾಮಗಳನ್ನು ಕೊಯ್ಯುತ್ತಿರುವ ಹಾಗೂ ವಿವಾಹಬಾಹಿರ ಗರ್ಭಧಾರಣೆಗಳು, ಏಡ್ಸ್‌ ಮತ್ತು ಇತರ ರತಿರವಾನಿತ ರೋಗಗಳಿಗೆ ತುತ್ತಾಗುತ್ತಿರುವ ಹದಿಹರೆಯದವರ ಸಂಖ್ಯೆ ಅಧಿಕವಾಗುವ ಈ ದಿನಗಳಲ್ಲಿ, ಮದುವೆಯಾಗುವ ತನಕ ಸೆಕ್ಸ್‌ ಮಾಡಬಾರದೆಂಬ ಬೈಬಲಿನ ಬುದ್ಧಿವಾದವು . . . ಅತ್ಯಂತ ಪ್ರಸಕ್ತ, ‘ಸುರಕ್ಷಿತ ಸೆಕ್ಸ್‌’ನ ಒಂದೇ ದಾರಿ ಹಾಗೂ ಪರಿಣಾಮಕಾರಿ.”—ಹದಿಹರೆಯದವರಿಗೆ ಪ್ರೀತಿ ತೋರಿಸಿ ತರ್ಕ ಬಳಸಿ ಬೆಳೆಸುವುದು (ಇಂಗ್ಲಿಷ್‌).