ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮಕ್ಕಳಿಗೆ ಶಿಸ್ತು

ಮಕ್ಕಳಿಗೆ ಶಿಸ್ತು

ಕುಟುಂಬ ಸಂತೋಷಕ್ಕೆ ಕೀಲಿಕೈಗಳು

ಮಕ್ಕಳಿಗೆ ಶಿಸ್ತು

ಜಾನ್‌: * ನನ್ನ ಅಪ್ಪ-ಅಮ್ಮ ನಾನು ಮಾಡಿದ ತಪ್ಪಿಗೆ ಶಿಕ್ಷೆಕೊಡುವ ಮೊದಲು ನಾನು ಆ ತಪ್ಪನ್ನು ಏಕೆ ಮಾಡ್ದೆ, ಯಾವ ಸನ್ನಿವೇಶದಲ್ಲಿ ಹಾಗೆ ಮಾಡ್ದೆ ಎಂಬುದನ್ನು ತಿಳಿಯಲು ಪ್ರಯತ್ನಿಸುತ್ತಿದ್ದರು. ನಾನು ನನ್ನ ಮಕ್ಕಳನ್ನು ಶಿಕ್ಷಿಸುವಾಗಲೂ ಹಾಗೆಯೇ ಮಾಡಲು ಪ್ರಯತ್ನಿಸುತ್ತೇನೆ. ಆದರೆ ನನ್ನ ಪತ್ನಿ ಆ್ಯಲಿಸನ್‌ ಬೆಳೆದುಬಂದ ಕುಟುಂಬದ ಪರಿಸ್ಥಿತಿ ಬೇರೆ. ಅವಳ ಅಪ್ಪ-ಅಮ್ಮ ವಿಚಾರಿಸದೇ ದುಡುಕಿ ಶಿಕ್ಷಿಸುತ್ತಿದ್ದರು. ಸನ್ನಿವೇಶವನ್ನು ಲೆಕ್ಕಿಸದೆ ಮಕ್ಕಳಿಗೆ ಶಿಕ್ಷೆ ಕೊಡುತ್ತಿದ್ದರು. ನನ್ನ ಪತ್ನಿ ಕೂಡ ಕೆಲವೊಮ್ಮೆ ಮಕ್ಕಳನ್ನು ಅದೇ ರೀತಿ ಕಠಿಣವಾಗಿ ಶಿಕ್ಷಿಸುತ್ತಾಳೆ ಎಂದು ನನ್ನೆಣಿಕೆ.

ಕ್ಯಾರೆಲ್‌: ನನ್ನ ತಂದೆ ನಮ್ಮನ್ನೆಲ್ಲ ಬಿಟ್ಟುಹೋದಾಗ ನನಗೆ ಕೇವಲ 5 ವರ್ಷವಾಗಿತ್ತಷ್ಟೇ. ನನ್ನ ಮೇಲೆ, ನನ್ನ ತಂಗಿಯಂದಿರ ಮೇಲೆ ಅವರಿಗೆ ಸ್ವಲ್ಪವೂ ಅಕ್ಕರೆ ಇರಲಿಲ್ಲ. ನಮ್ಮನ್ನು ಸಾಕಲು ನನ್ನ ಅಮ್ಮ ಕಷ್ಟಪಟ್ಟು ದುಡಿದರು. ನನ್ನ ತಂಗಿಯರನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ನಾನೇ ವಹಿಸಬೇಕಾಯಿತು. ನಾನೇ ತಾಯಿಯ ಪಾತ್ರವನ್ನು ವಹಿಸಿದ ಕಾರಣ ನನ್ನ ಬಾಲ್ಯದ ದಿನಗಳನ್ನು ಆನಂದಿಸಲಾಗಲಿಲ್ಲ. ಇಂದಿನ ತನಕವೂ ಅದೇ ಗಂಭೀರತೆ ನನ್ನಲ್ಲಿದೆ ಹುಡುಗಾಟವಿಲ್ಲ. ಈಗ ನನ್ನ ಮಕ್ಕಳಿಗೆ ಶಿಕ್ಷೆಕೊಡಬೇಕಾದಾಗ ನನಗೆ ತುಂಬ ವ್ಯಥೆ. ಅವರು ತಪ್ಪು ಮಾಡಿದ್ದೇಕೆ ಮತ್ತು ಆಗ ಅವರು ಯಾವ ಮನೋಸ್ಥಿತಿಯಲ್ಲಿದ್ದರು ಎಂದು ನನಗೆ ತಿಳಿಯಬೇಕು. ನನ್ನ ಪತಿ ಮಾರ್ಕ್‌ ಸಮಸ್ಯೆಯ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ. ಅವರು ಬೆಳೆದುಬಂದದ್ದು ಒಬ್ಬ ಒಳ್ಳೇ ಹಾಗೂ ಶಿಸ್ತಿನ ತಂದೆಯ ಮೇಲ್ವಿಚಾರದ ಕೆಳಗೆ. ಅವರ ತಂದೆ ತಮ್ಮ ಪತ್ನಿಯನ್ನು ನಿಷ್ಠೆಯಿಂದ ನೋಡಿಕೊಳ್ಳುತ್ತಿದ್ದರು. ನನ್ನ ಯಜಮಾನರೂ ನಮ್ಮ ಮಕ್ಕಳ ಸಮಸ್ಯೆಯನ್ನು ಬೇಗನೆ ಸರಿಪಡಿಸುತ್ತಾರೆ. ಸನ್ನಿವೇಶವನ್ನು ತೂಗಿನೋಡಿ ಚೆನ್ನಾಗಿ ವ್ಯವಹರಿಸಿ ವಿಷಯವನ್ನು ಅಲ್ಲಿಗೆ ಬಿಟ್ಟುಬಿಡುತ್ತಾರೆ.

ಜಾನ್‌, ಕ್ಯಾರೆಲ್‌ರ ಮಾತುಗಳಿಂದ ವ್ಯಕ್ತವಾಗುವುದೇನೆಂದರೆ ನೀವು ಬೆಳೆದುಬಂದ ರೀತಿಯು ನಿಮ್ಮ ಮಕ್ಕಳನ್ನು ಶಿಕ್ಷಿಸುವ ವಿಧದ ಮೇಲೆ ಮಹತ್ತರ ಪ್ರಭಾವಬೀರುತ್ತದೆ. ಗಂಡಹೆಂಡತಿಯರು ವಿವಿಧ ಕುಟುಂಬ ಹಿನ್ನೆಲೆಗಳಿಂದ ಬರುವಾಗ ಮಕ್ಕಳನ್ನು ತರಬೇತುಗೊಳಿಸುವ ವಿಷಯದಲ್ಲಿ ಅವರ ಅಭಿಪ್ರಾಯಗಳು ಭಿನ್ನವಾಗುತ್ತವೆ. ಕೆಲವೊಮ್ಮೆ ಇಂಥ ಭಿನ್ನಾಭಿಪ್ರಾಯಗಳು ಕುಟುಂಬದಲ್ಲಿ ಸಮಸ್ಯೆಗೂ ಕಾರಣವಾಗುತ್ತವೆ.

ಹೆತ್ತವರು ಆಯಾಸಗೊಂಡಿರುವಾಗಲಂತೂ ‘ಟೆನ್ಷನ್‌’ ಇನ್ನೂ ಜಾಸ್ತಿ. ನವಹೆತ್ತವರಿಗೆ ಮಕ್ಕಳ ತರಬೇತಿಯು ಪ್ರಯಾಸ ಹಾಗೂ ಮುಗಿಯದ ಕೆಲಸ ಎಂದೆನಿಸುತ್ತದೆ. ಜೋನ್‌ ಮತ್ತು ಡ್ಯಾರನ್‌ರಿಗೆ ಎರಡು ಹೆಣ್ಣುಮಕ್ಕಳಿದ್ದರು. ಜೋನ್‌ ಹೇಳುವುದು: “ನಾನು ಮಕ್ಕಳನ್ನು ಪ್ರೀತಿಸುತ್ತೇನೆ ನಿಜ. ಆದರೆ ನಾನು ಹೇಳಿದ್ದನ್ನು ಅವರು ಕೇಳುತ್ತಿರಲಿಲ್ಲ. ಹೇಳಿದ ಸಮಯಲ್ಲಿ ಮಲಗುತ್ತಿರಲಿಲ್ಲ. ನಾನು ಮಲಗಿದಾಗ ಎದ್ದು ಕೂತುಕೊಳ್ಳುತ್ತಿದ್ದರು. ಮಾತಾಡುವಾಗ ಮಧ್ಯೆ ಬಾಯಿಹಾಕುತ್ತಿದ್ದರು. ಬಟ್ಟೆ ಒಂದು ಕಡೆ, ಶೂಸ್‌ ಇನ್ನೊಂದು ಕಡೆ, ಆಟಿಕೆ ಮತ್ತೊಂದು ಕಡೆ ಇರುತ್ತಿತ್ತು, ಊಟದ ತಟ್ಟೆಗಳನ್ನು ಅಲ್ಲಲ್ಲೇ ಬಿಟ್ಟು ಹೋಗುತ್ತಿದ್ದರು.”

ಜ್ಯಾಕ್‌ನ ಹೆಂಡತಿ ತನ್ನ ಎರಡನೇ ಮಗುವಿನ ಜನನದ ನಂತರ ಪ್ರಸವದ ಖಿನ್ನತೆಯಿಂದ ಬಳಲುತ್ತಿದ್ದಳು. ಅವನು ಹೇಳುವುದು: “ಕೆಲಸದಿಂದ ಬಂದಾಗ ನಾನು ತುಂಬ ಸುಸ್ತಾಗುತ್ತಿದ್ದೆ. ಆಮೇಲೆ ಅರ್ಧ ರಾತ್ರಿ ನನ್ನ ಕೂಸಿನೊಂದಿಗೆ ಜಾಗರಣೆ. ಇದರಿಂದಾಗಿ ನನ್ನ ದೊಡ್ಡ ಮಗಳನ್ನು ಶಿಸ್ತುಗೊಳಿಸುವ ಸವಾಲು ಎದ್ದಿತು. ನಾವು ನಮ್ಮ ಕೂಸಿನ ಕಡೆ ಕೊಡುತ್ತಿದ್ದ ಹೆಚ್ಚಿನ ಗಮನದಿಂದಾಗಿ ಅವಳಿಗೆ ಅಸೂಯೆಯಾಗುತ್ತಿತ್ತು.”

ಬಳಲಿ ಸುಸ್ತಾದ ಹೆತ್ತವರು ತಮ್ಮ ಮಗುವನ್ನು ಶಿಸ್ತುಗೊಳಿಸುವ ವಿಷಯದಲ್ಲಿ ಕಾದಾಡುವಾಗ ಚಿಕ್ಕಪುಟ್ಟ ವಿಷಯಗಳೂ ದೊಡ್ಡ ದೊಡ್ಡ ಜಗಳಗಳಾಗಿ ಸ್ಫೋಟಿಸುತ್ತವೆ. ಬಗೆಹರಿಸದ ಭಿನ್ನಾಭಿಪ್ರಾಯಗಳಿಂದಾಗಿ ದಂಪತಿಯ ಮಧ್ಯೆ ಒಡಕು ಉಂಟಾಗುತ್ತದೆ. ಆಗ, ಮಗು ಹೆತ್ತವರನ್ನು ಒಬ್ಬರ ವಿರುದ್ಧ ಇನ್ನೊಬ್ಬರನ್ನು ಎತ್ತಿಕಟ್ಟಿ ತನ್ನಿಷ್ಟವನ್ನು ಸಾಧಿಸಲು ಅವಕಾಶವನ್ನು ಹುಡುಕುತ್ತದೆ. ಆದ್ದರಿಂದ ತಮ್ಮ ಮಕ್ಕಳನ್ನು ಪರಿಣಾಮಕಾರಿಯಾಗಿ ಶಿಕ್ಷಿಸುವಾಗ ದಂಪತಿ ತಮ್ಮೊಳಗೆ ಆಪ್ತಸಂಬಂಧವನ್ನು ಕಾಪಾಡಿಕೊಳ್ಳುವುದು ಪ್ರಾಮುಖ್ಯ. ಇದಕ್ಕೆ ಯಾವ ಬೈಬಲ್‌ ಮೂಲತತ್ತ್ವಗಳು ಸಹಾಯಕಾರಿ?

ಜೊತೆಯಾಗಿ ಸಮಯ ಕಳೆಯಿರಿ

ಮಕ್ಕಳು ಹುಟ್ಟುವ ಮುಂಚೆಯೇ ನಿಮ್ಮ ದಾಂಪತ್ಯವು ಸುದೃಢವಾಗಿ ನೆಲೆಗೊಂಡಿರಬೇಕು. ಮಕ್ಕಳು ಮದುವೆಯಾಗಿ ಮನೆಬಿಟ್ಟು ಹೋದ ಮೇಲೂ ನಿಮ್ಮ ಮದುವೆಯ ಬಂಧ ಸ್ಥಿರವಾಗಿಯೇ ಉಳಿಯುವಂತೆ ದೇವರು ಇಚ್ಛೈಸುತ್ತಾನೆ. ವಿವಾಹ ಬಂಧದ ಕುರಿತು ಬೈಬಲ್‌ ಅನ್ನುವುದು: “ದೇವರು ಕೂಡಿಸಿದ್ದನ್ನು ಮನುಷ್ಯರು ಅಗಲಿಸಬಾರದು.” (ಮತ್ತಾಯ 19:⁠6) ಇದಕ್ಕೆ ವ್ಯತ್ಯಾಸದಲ್ಲಿ ಅದರ ಹಿಂದಿನ ವಚನವು ಹೇಳುವುದೇನಂದರೆ, ದೇವರು ಉದ್ದೇಶಿಸಿದಂತೆ ಮಕ್ಕಳು ಕೊನೆಗೆ “ತಂದೆತಾಯಿಗಳನ್ನು ಬಿಟ್ಟು” ಅಗಲುವರು ಎಂಬದಾಗಿ. (ಮತ್ತಾಯ 19:⁠5) ನಿಜವಾಗಿಯೂ ಮಕ್ಕಳನ್ನು ಸಾಕಿಸಲಹುವುದು ವಿವಾಹದ ಒಂದು ಭಾಗವಾಗಿದೆಯೇ ಹೊರತು ಅದು ವಿವಾಹಕ್ಕೆ ಬುನಾದಿಯಲ್ಲ. ಇಲ್ಲವಾದರೆ ಮಕ್ಕಳು ಬೆಳೆದು ದೊಡ್ಡವರಾದ ಮೇಲೆ ವಿವಾಹದ ಬಂಧವು ಬಿದ್ದುಹೋಗಬಹುದು. ಹೆತ್ತವರು ತಮ್ಮ ಮಕ್ಕಳ ತರಬೇತಿಯಲ್ಲಿ ಸಮಯವನ್ನು ವ್ಯಯಿಸಬೇಕು ನಿಶ್ಚಯ. ಆದರೆ ನಿಮ್ಮ ವಿವಾಹ ಸಂಬಂಧವು ಸುಧೃಡವಾಗಿದ್ದರೆ ಮಾತ್ರ ನೀವು ಆ ತರಬೇತಿಯನ್ನು ಉತ್ತಮವಾಗಿ ನೀಡಬಲ್ಲಿರಿ ಎಂದು ನೆನಪಿಡಿರಿ.

ಮಕ್ಕಳನ್ನು ಸಾಕಿಸಲಹುವಾಗ ದಂಪತಿಗಳು ತಮ್ಮ ಸಂಬಂಧವನ್ನು ಸುದೃಢವಾಗಿರಿಸುವ ಒಂದು ವಿಧ ಯಾವುದು? ಕೇವಲ ನೀವಿಬ್ಬರೇ ಜೊತೆಯಾಗಿ ಸ್ವಲ್ಪ ಸಮಯ ಒಟ್ಟಾಗಿ ಕಳೆಯಲು ಪ್ರಯತ್ನಿಸಿ. ಹಾಗೆ ಮಾಡುವುದರಿಂದ ಕುಟುಂಬದ ಪ್ರಾಮುಖ್ಯ ವಿಷಯಗಳನ್ನು ಚರ್ಚಿಸಲು ಅವಕಾಶ ದೊರಕುವುದು ಮತ್ತು ನೀವು ಜೊತೆಯಾಗಿ ಒಬ್ಬರು ಇನ್ನೊಬ್ಬರ ಒಡನಾಟದಲ್ಲಿ ಆನಂದಿಸಬಹುದು. ಈ ರೀತಿ ದಂಪತಿಯು ಒಟ್ಟಾಗಿ ಸಮಯ ಕಳೆಯುವುದು ಸುಲಭವಲ್ಲ ನಿಜ. ಈ ಮುಂಚೆ ತಿಳಿಸಲಾದ ತಾಯಿ ಆ್ಯಲಿಸನ್‌ ಹೇಳುವುದು: “ನಾನು ನನ್ನ ಪತಿಯೊಂದಿಗೆ ಕೆಲವು ನಿಮಿಷ ಹಾಯಾಗಿರೋಣ ಎಂದು ನೆನಸುವಾಗಲೇ ಚಿಕ್ಕ ಮಗಳು ‘ನನ್ನ ಪೆನ್ಸಿಲ್‌ ಎಲ್ಲಿ’ ಎಂದು ಹೇಳುತ್ತಾ ಏನಾದರೂ ತಕರಾರು ಮಾಡಿಕೊಂಡು ಬರುತ್ತಾಳೆ.”

ಮುಂಚೆ ತಿಳಿಸಿದ ಜೋನ್‌ ಮತ್ತು ಡ್ಯಾರೆನ್‌ ತಮ್ಮಿಬ್ಬರಿಗಾಗಿ ಸಮಯವನ್ನು ಮಾಡಿಕೊಂಡರು. ಹೇಗೆಂದರೆ ತಮ್ಮ ಮಕ್ಕಳು ಇಷ್ಟೇ ಹೊತ್ತಿಗೆ ಮಲಗಬೇಕೆಂದು ನಿಯಮವನ್ನು ಹಾಕಿದ ಮೂಲಕ. “ಗೊತ್ತುಮಾಡಿದ ಸಮಯಕ್ಕೆ ‘ಲೈಟ್‌ ಆಫ್‌’ ಮಾಡುವ ಮುಂಚೆ ನಮ್ಮ ಹೆಣ್ಣುಮಕ್ಕಳು ಬೆಡ್‌ನಲ್ಲಿ ಇರಬೇಕಿತ್ತು. ಇದರಿಂದ ನನಗೆ ಮತ್ತು ಡ್ಯಾರನ್‌ಗೆ ನಿರಾತಂಕವಾಗಿ ಮಾತಾಡಲು ಸಮಯ ದೊರಕಿತು” ಎನ್ನುತ್ತಾಳೆ ಜೋನ್‌.

ತಮ್ಮ ಮಕ್ಕಳಿಗೆ ಮಲಗುವ ಕ್ರಮದ ಸಮಯವನ್ನು ಗೊತ್ತುಪಡಿಸುವ ಮೂಲಕ ದಂಪತಿಯು ತಮಗಾಗಿ ಸಮಯವನ್ನು ಮಾಡಿಕೊಳ್ಳುತ್ತಾರೆ ಮಾತ್ರವಲ್ಲ ಮಗು “ತನ್ನ ಯೋಗ್ಯತೆಗೆ ಮೀರಿ ತನ್ನನ್ನು ಭಾವಿಸಿಕೊಳ್ಳದೆ” ಇರುವಂತೆಯೂ ನೆರವಾಗುತ್ತಾರೆ. (ರೋಮಾಪುರ 12:⁠3) ಸಮಯಕ್ಕೆ ಸರಿಯಾಗಿ ಮಲಗುವ ನಿಯಮವನ್ನು ಪಾಲಿಸುವ ಮಕ್ಕಳು ಮನಗಾಣುತ್ತಾರೆ ಏನೆಂದರೆ, ತಾವು ಕುಟುಂಬದ ಒಂದು ಮುಖ್ಯ ಭಾಗವಾಗಿದ್ದೇವೆಯೇ ಹೊರತು ಕುಟುಂಬದಲ್ಲಿ ಪ್ರಮುಖರಲ್ಲ ಎಂಬುದಾಗಿ. ಅವರು ತಮ್ಮನ್ನು ಕುಟುಂಬ ರೂಢಿಗೆ ಹೊಂದಿಸಿಕೊಳ್ಳಬೇಕೇ ಹೊರತು ಅವರ ಇಚ್ಛೆಗಳಿಗೆ ಕುಟುಂಬವು ಹೊಂದಿಕೊಳ್ಳುವಂತೆ ಅಪೇಕ್ಷಿಸಬಾರದು.

ಪ್ರಯತ್ನಿಸಿ ನೋಡಿ: ಕ್ರಮದ ಬೆಡ್‌ ಟೈಮ್‌ ಅನ್ನು ಗೊತ್ತುಮಾಡಿ ಅದನ್ನು ಪಾಲಿಸುವಂತೆ ನೋಡಿಕೊಳ್ಳಿ. ಒಂದು ವೇಳೆ ನಿಮ್ಮ ಮಕ್ಕಳು ತಡವಾಗಿ ಮಲಗಲು ಏನಾದರು ನೆವ ಹೇಳುತ್ತಾ, ‘ನೀರು ಬೇಕು, ತಿಂಡಿ ಬೇಕು’ ಎಂದೇನಾದರೂ ಹೇಳಿದರೆ ಒಂದುಸಲಕ್ಕೆ ನೀವದನ್ನು ಅನುಮತಿಸಬಹುದು. ಆದರೆ ಮಗು ಇಷ್ಟಬಂದಂತೆ ಏನೆಲ್ಲಾ ಕೇಳುತ್ತಾ ಮಲಗುವ ಸಮಯವನ್ನು ಸದಾ ಮುಂದೂಡುವಂತೆ ಮಾತ್ರ ಬಿಡಬೇಡಿ. ‘ಇನ್ನೂ ಐದು ನಿಮಿಷ ಮಾತ್ರ ಬಿಡಿ’ ಎಂದು ಮಗು ಅಂಗಲಾಚುವುದಾದರೆ ನೀವು ಅನುಮತಿಸಬಹುದು. ಆದರೆ ಐದು ನಿಮಿಷಕ್ಕೆ ಅಲಾರ್ಮ್‌ ಸೆಟ್‌ ಮಾಡಿಡಿ. ಅಲಾರ್ಮ್‌ ಆದ ಕೂಡಲೇ ತಪ್ಪದೆ ಮಗುವನ್ನು ಮಲಗಿಸಿಬಿಡಿ. “ನಿಮ್ಮ ಮಾತು ಹೌದಾದರೆ ಹೌದು, ಅಲ್ಲವಾದರೆ ಅಲ್ಲ, ಎಂದಿರಲಿ.”​—⁠ಮತ್ತಾಯ 5:⁠37.

ನಿಮ್ಮ ಒಮ್ಮತ ತೋರಿಬರಲಿ

“ಮಗನೇ, ನಿನ್ನ ತಂದೆಯ ಉಪದೇಶವನ್ನು ಕೇಳು, ನಿನ್ನ ತಾಯಿಯ ಬೋಧನೆಯನ್ನು ತೊರೆಯಬೇಡ” ಎನ್ನುತ್ತದೆ ವಿವೇಕದ ನಾಣ್ಣುಡಿಯೊಂದು. (ಜ್ಞಾನೋಕ್ತಿ 1:⁠8) ಈ ಬೈಬಲ್‌ ವಚನ ಸೂಚಿಸುವಂತೆ ತಂದೆತಾಯಿ ಇಬ್ಬರಿಗೂ ಮಕ್ಕಳನ್ನು ಶಿಸ್ತುಗೊಳಿಸುವ ಹಕ್ಕಿದೆ. ಹಾಗಿದ್ದರೂ ದಂಪತಿಯ ಕುಟುಂಬ ಹಿನ್ನೆಲೆಗಳು ಒಂದೇ ಆಗಿರುವಾಗ ಸಹ ಮಕ್ಕಳನ್ನು ಶಿಸ್ತುಗೊಳಿಸುವ ಮತ್ತು ಒಂದು ನಿರ್ದಿಷ್ಟ ಸನ್ನಿವೇಶದಲ್ಲಿ ಕುಟುಂಬಕ್ಕೆ ಯಾವ ನಿಯಮ ಅನ್ವಯಿಸಬೇಕು ಎಂಬ ವಿಷಯದಲ್ಲಿ ಭಿನ್ನಾಭಿಪ್ರಾಯ ಉಂಟಾಗಬಹುದು. ಹೆತ್ತವರು ಈ ಸವಾಲನ್ನು ಹೇಗೆ ಬಗೆಹರಿಸಬೇಕು?

ಈ ಮುಂಚೆ ತಿಳಿಸಲಾದ ಜಾನ್‌ ಹೇಳುವುದು: “ನಮ್ಮಲ್ಲಿರುವ ಭಿನ್ನಾಭಿಪ್ರಾಯವನ್ನು ಮಕ್ಕಳ ಮುಂದೆ ತೋರಿಸಬಾರದು.” ಆದರೂ, ಒಮ್ಮತವನ್ನು ತೋರಿಸಿರಿ ಎಂದು ಹೇಳುವುದು ಸುಲಭ, ಮಾಡುವುದು ಕಷ್ಟ ಎಂದು ಅವನು ಒಪ್ಪಿಕೊಳ್ಳುತ್ತಾನೆ. “ಮಕ್ಕಳು ಅತಿ ಸೂಕ್ಷ್ಮಗ್ರಾಹಿಗಳು. ಭಿನ್ನಾಭಿಪ್ರಾಯವನ್ನು ಬಾಯಿಬಿಟ್ಟು ಹೇಳದಿದ್ದರೂ ನಮ್ಮ ಮುಖಭಾವದಿಂದಲೇ ನಮ್ಮ ಮಗಳು ನಮ್ಮನ್ನು ಅರ್ಥಮಾಡುತ್ತಾಳೆ” ಎನ್ನುತ್ತಾನೆ ಜಾನ್‌.

ಈ ಸವಾಲನ್ನು ಜಾನ್‌ ಮತ್ತು ಆ್ಯಲಿಸನ್‌ ಹೇಗೆ ನಿರ್ವಹಿಸುತ್ತಾರೆ? ಆ್ಯಲಿಸನ್‌ ಹೇಳುವುದು: “ನನ್ನ ಯಜಮಾನರು ನಮ್ಮ ಮಗಳನ್ನು ತಿದ್ದುವ ವಿಧಾನವನ್ನು ನಾನೇನಾದರೂ ಒಪ್ಪದಿದ್ದಲ್ಲಿ ಮಗಳ ಎದುರಲ್ಲಿ ನಾನೇನೂ ಮಾತಾಡುವುದಿಲ್ಲ. ಅವಳು ನಮ್ಮ ಭಿನ್ನಾಭಿಪ್ರಾಯವನ್ನು ದುರುಪಯೋಗಿಸಿ ತನ್ನ ಇಚ್ಛೆಗನುಸಾರ ನಡೆಯುವಂತೆ ನಾನು ಬಯಸುವುದಿಲ್ಲ. ನಮ್ಮಲ್ಲಿ ಭಿನ್ನಾಭಿಪ್ರಾಯಗಳಿವೆ ಎಂದು ಅವಳಿಗೆ ಗೊತ್ತಾಗುವಲ್ಲಿ ನಾನು ಅವಳಿಗೆ ಹೀಗೆ ಹೇಳುತ್ತೇನೆ: ‘ನಿನ್ನ ಅಪ್ಪ ಹೇಳಿದ್ದನ್ನು ಕೆಲವೊಮ್ಮೆ ನಾನು ಒಪ್ಪದಿದ್ದರೂ ಕೂಡ ನಾವೆಲ್ಲರೂ ಯೆಹೋವನ ಏರ್ಪಾಡಿಗೆ ವಿಧೇಯತೆ ತೋರಿಸಲೇಬೇಕು. ನಾನು ನಿನ್ನ ತಂದೆಯ ತಲೆತನಕ್ಕೆ ಹೇಗೆ ಸಿದ್ಧಮನಸ್ಸಿನಿಂದ ಅಧೀನಳಾಗುತ್ತೇನೋ ಹಾಗೆ ನೀನು ಸಹ ಹೆತ್ತವರಾದ ನಮ್ಮ ಅಧಿಕಾರಕ್ಕೆ ಅಧೀನಳಾಗಬೇಕು.’” (1 ಕೊರಿಂಥ 11:3; ಎಫೆಸ 6:​1-3) ಜಾನ್‌ ಹೇಳುವುದು: “ಇಡೀ ಕುಟುಂಬವು ಒಟ್ಟಾಗಿರುವಾಗ ನನ್ನ ಹೆಣ್ಣುಮಕ್ಕಳನ್ನು ತಿದ್ದಲು ಸಾಮಾನ್ಯವಾಗಿ ನಾನೇ ಮುಂದಾಗುತ್ತೇನೆ. ಒಂದುವೇಳೆ ಆ್ಯಲಿಸನ್‌ಗೆ ಆ ಸಮಸ್ಯೆಯ ಕುರಿತು ಹೆಚ್ಚು ಗೊತ್ತಿರುವಲ್ಲಿ ಅವಳೇ ಮುಂದಾಗಿ ಮಕ್ಕಳಿಗೆ ಶಿಸ್ತುಕೊಡುವಂತೆ ಬಿಡುತ್ತೇನೆ ಮತ್ತು ನಾನವಳನ್ನು ಬೆಂಬಲಿಸುತ್ತೇನೆ. ಅವಳು ಕೊಟ್ಟ ಶಿಸ್ತು ನನಗೆ ಸರಿಕಾಣದಿದ್ದಲ್ಲಿ ಅದನ್ನು ನಂತರ ಅವಳೊಂದಿಗೆ ಚರ್ಚಿಸುತ್ತೇನೆ.”

ಮಕ್ಕಳನ್ನು ತರಬೇತುಗೊಳಿಸುವ ವಿಷಯದಲ್ಲಿ ನಿಮ್ಮ ಮತ್ತು ನಿಮ್ಮ ಸಂಗಾತಿಯ ಮಧ್ಯೆ ಇರುವ ಭಿನ್ನಾಭಿಪ್ರಾಯದ ಕುರಿತು ಅಸಮಾಧಾನಗೊಳ್ಳುವುದನ್ನು ನೀವು ಹೇಗೆ ತಡೆಯಬಲ್ಲಿರಿ? ಅದರ ಪರಿಣಾಮವಾಗಿ ನಿಮ್ಮ ಮಗು ನಿಮಗೆ ಗೌರವ ಕೊಡುವುದನ್ನು ಕಡೆಗಣಿಸದಂತೆ ನೀವೇನು ಮಾಡಬಲ್ಲಿರಿ?

ಪ್ರಯತ್ನಿಸಿ ನೋಡಿ: ಮಕ್ಕಳನ್ನು ತರಬೇತುಗೊಳಿಸುವ ವಿಷಯದಲ್ಲಿ ಏಳುವ ಸವಾಲುಗಳ ಕುರಿತು ಮಾತಾಡಲು ಪ್ರತಿವಾರವೂ ಕ್ರಮವಾಗಿ ಸಮಯವನ್ನು ಬದಿಗಿಡಿರಿ. ನಿಮಗಿರಬಹುದಾದ ಯಾವುದೇ ಭಿನ್ನಾಭಿಪ್ರಾಯವನ್ನು ಮುಕ್ತವಾಗಿ ಚರ್ಚಿಸಿ. ನಿಮ್ಮ ಸಂಗಾತಿಯ ದೃಷ್ಟಿಕೋನವನ್ನು ಅರಿತುಕೊಳ್ಳಲು ಪ್ರಯತ್ನಿಸಿ. ತಂದೆತಾಯಿ ಇಬ್ಬರಿಗೂ ಮಕ್ಕಳೊಂದಿಗೆ ವೈಯಕ್ತಿಕ ಆಪ್ತಸಂಬಂಧ ಇದೆ ಎಂಬ ನಿಜತ್ವವನ್ನು ಗೌರವಿಸಿ.

ಮಕ್ಕಳ ಪರಿಪಾಲನೆ ನಿಮ್ಮನ್ನು ಇನ್ನಷ್ಟು ಹತ್ತಿರ ತರಲಿ

ಮಕ್ಕಳನ್ನು ತರಬೇತುಗೊಳಿಸುವುದು ಕಷ್ಟವೇ ಸರಿ. ಕೆಲವೊಮ್ಮೆ ಅದು ನಮ್ಮ ಪೂರಾ ಶಕ್ತಿಯನ್ನೇ ಉಡುಗಿಸಬಲ್ಲದು. ಇಂದಲ್ಲ ನಾಳೆ ನಿಮ್ಮ ಮಕ್ಕಳು ಮದುವೆಯಾಗಿ ಹೋಗುತ್ತಾರಲ್ಲಾ. ಆಗ ನೀವೂ ನಿಮ್ಮ ಬಾಳಸಂಗಾತಿಯೂ ಪುನಃ ದಂಪತಿಯೋಪಾದಿ ಆನಂದವನ್ನು ಅನುಭವಿಸುವಿರಿ. ಮಕ್ಕಳನ್ನು ಸಾಕಿಸಲಹುವಾಗ ನಿಮ್ಮ ವಿವಾಹಬಂಧವು ಬಲಗೊಳ್ಳವುದೋ ಬಲಗುಂದುವುದೋ? ಉತ್ತರವು ಪ್ರಸಂಗಿ 4:​9, 10ನ್ನು ನೀವೆಷ್ಟು ಚೆನ್ನಾಗಿ ಅನ್ವಯಿಸುವಿರೋ ಅದರ ಮೇಲೆ ಹೊಂದಿಕೊಂಡಿದೆ. ಅದು ಹೇಳುವುದು: “ಒಬ್ಬನಿಗಿಂತ ಇಬ್ಬರು ಲೇಸು; ಅವರ ಪ್ರಯಾಸಕ್ಕೆ ಒಳ್ಳೆಯ ಲಾಭ. ಒಬ್ಬನು ಬಿದ್ದರೆ ಇನ್ನೊಬ್ಬನು ಎತ್ತುವನು.”

ಹೆತ್ತವರು ಜೊತೆಜೊತೆಯಾಗಿ ಕಾರ್ಯವೆಸಗುವಾಗ ಫಲಿತಾಂಶಗಳು ತುಂಬಾ ಸಂತೃಪ್ತಿಕರವಾಗಿರಬಲ್ಲವು. ಹಿಂದೆ ತಿಳಿಸಿದ ಕ್ಯಾರೆಲ್‌ ತನ್ನ ಅನುಭವವನ್ನು ತಿಳಿಸುವುದು: “ನನ್ನ ಯಜಮಾನರಲ್ಲಿ ತುಂಬ ಸದ್ಗುಣಗಳಿದ್ದವೆಂದು ನನಗೆ ಗೊತ್ತಿತ್ತು. ಆದರೆ ನಾವು ಮಕ್ಕಳನ್ನು ಒಟ್ಟಾಗಿ ಬೆಳೆಸುವಾಗ ಅವರ ಇನ್ನೂ ಅನೇಕ ಒಳ್ಳೇ ಗುಣಗಳು ತೋರಿಬಂದಿವೆ. ನಮ್ಮ ಮಕ್ಕಳಿಗೆ ಅವರು ಕೊಟ್ಟ ಪ್ರೀತಿಯ ಪರಿಪಾಲನೆಯಿಂದ ನನಗೆ ಅವರ ಮೇಲಣ ಗೌರವ ಮತ್ತು ಪ್ರೀತಿ ಇನ್ನೂ ಹೆಚ್ಚಾಗಿದೆ.” ಆ್ಯಲಿಸನ್‌ನ ಕುರಿತು ಜಾನ್‌ ಹೇಳುವುದು: “ನನ್ನ ಪತ್ನಿಯು ಅಕ್ಕರೆಯ ಅಮ್ಮ ಆಗಿ ಒಳ್ಳೇ ಗುಣಗಳನ್ನು ಬೆಳೆಸಿಕೊಂಡದ್ದನ್ನು ಕಾಣುವಾಗ ಅವಳ ಮೇಲಿನ ಮೆಚ್ಚುಗೆ ಮತ್ತು ಪ್ರೀತಿ ಇನ್ನಷ್ಟೂ ಆಳವಾಗಿದೆ.”

ಮಕ್ಕಳ ಪರಿಪಾಲನಾ ವರ್ಷಗಳಲ್ಲಿ ನೀವಿಬ್ಬರೂ ಒಟ್ಟಿಗೆ ಸಮಯ ಕಳೆದು ಜೊತೆಜೊತೆಯಾಗಿ ಕೆಲಸಮಾಡುವಲ್ಲಿ ನಿಮ್ಮ ಮಕ್ಕಳು ದೊಡ್ಡವರಾದಂತೆ ನಿಮ್ಮ ವಿವಾಹವೂ ಬಲಗೊಂಡು ಸುದೃಢವಾಗುವುದು. ಮಕ್ಕಳಿಗೆ ನೀವಿಡಬಹುದಾದ ಉತ್ತಮ ಮಾದರಿ ಬೇರೆ ಯಾವುದಿದೆ? (w09 2/1)

[ಪಾದಟಿಪ್ಪಣಿ]

^ ಪ್ಯಾರ. 3 ಹೆಸರುಗಳು ಬದಲಾಗಿವೆ.

ಕೇಳಿಕೊಳ್ಳಿ . . .

▪ ಮಕ್ಕಳ ಹೊರತು ಕೇವಲ ನಾವಿಬ್ಬರೇ ಜೊತೆಯಾಗಿ ವಾರದಲ್ಲಿ ಎಷ್ಟು ಸಮಯವನ್ನು ಒಟ್ಟಿಗೆ ಕಳೆಯುತ್ತೇವೆ?

▪ ನಮ್ಮ ಮಕ್ಕಳನ್ನು ಶಿಸ್ತುಗೊಳಿಸುವಾಗ ನನ್ನ ಸಂಗಾತಿಯನ್ನು ನಾನು ಹೇಗೆ ಬೆಂಬಲಿಸುತ್ತೇನೆ?