ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಉತ್ತಮ ಯೋಜನೆಗೆ ಉತ್ತಮ ಪ್ರತಿಫಲ

ಉತ್ತಮ ಯೋಜನೆಗೆ ಉತ್ತಮ ಪ್ರತಿಫಲ

ಉತ್ತಮ ಯೋಜನೆಗೆ ಉತ್ತಮ ಪ್ರತಿಫಲ

ಮಾರೀಯಾ ಈಸಾಬೆಲ್‌ ಹುರುಪಿನ ಪ್ರಚಾರಕಳು. ಈ ಬಾಲಕಿ ಇರುವುದು ದಕ್ಷಿಣ ಅಮೆರಿಕದ ಚಿಲಿ ದೇಶದ ಸ್ಯಾನ್‌ ಬರ್ನಾರ್ಡೊ ನಗರದಲ್ಲಿ. ಅವಳು ಮತ್ತು ಅವಳ ಅಪ್ಪಅಮ್ಮ, ಅಕ್ಕ ಅಲ್ಲಿನ ಮಪೂಚೀ ಜನಾಂಗಕ್ಕೆ ಸೇರಿದವರು. ಆ ಜನಾಂಗದ ಭಾಷೆ ಮಪೂಚೀ. ಅದನ್ನು ಮಾಪೂಡೂಂಗೂನ್‌ ಭಾಷೆ ಎಂದು ಕೂಡ ಕರೆಯುತ್ತಾರೆ. ಆ ಭಾಷೆಯಲ್ಲಿ ಅಲ್ಲಿ ಸಭೆ ಸ್ಥಾಪಿಸಲು ಪ್ರಯತ್ನ ನಡೆಸಲಾಗುತ್ತಿತ್ತು. ಅದಕ್ಕೆ ಹುಮ್ಮಸ್ಸಿನಿಂದ ಬೆಂಬಲ ಕೊಡುತ್ತಿದ್ದ ಕುಟುಂಬವಿದು.

ಕ್ರಿಸ್ತನ ಮರಣದ ಸ್ಮರಣೆಯನ್ನು ಮಾಪೂಡೂಂಗೂನ್‌ ಭಾಷೆಯಲ್ಲಿ ಆಚರಿಸಲಾಗುವುದು ಎಂದು ಪ್ರಕಟಿಸಲಾಯಿತು. ಮಾತ್ರವಲ್ಲ ಅದಕ್ಕಾಗಿ ಆ ಭಾಷೆಯಲ್ಲಿ 2,000 ಆಮಂತ್ರಣ ಪತ್ರಗಳನ್ನೂ ಮುದ್ರಿಸಲಾಗಿದೆ ಎಂದು ತಿಳಿಸಲಾಯಿತು. ಇದನ್ನು ಮಾರೀಯಾ ಕೇಳಿದೊಡನೆ ಆಮಂತ್ರಣ ಪತ್ರಗಳನ್ನು ವಿತರಿಸಲು ತಾನು ಏನು ಮಾಡಬಹುದೆಂದು ಯೋಚಿಸತೊಡಗಿದಳು. ಯುವಸಾಕ್ಷಿಗಳು ಸಹಪಾಠಿಗಳಿಗೆ, ಶಿಕ್ಷಕರಿಗೆ ಸಾಕ್ಷಿನೀಡಿ ಒಳ್ಳೇ ಫಲಿತಾಂಶ ಪಡೆದ ಅನುಭವಗಳನ್ನು ಜ್ಞಾಪಿಸಿಕೊಂಡಳು. ತಾನೇನು ಮಾಡಬಹುದು ಎಂಬ ಕುರಿತು ಹೆತ್ತವರೊಂದಿಗೆ ಮಾತಾಡಿದಳು. ಶಾಲೆಯಲ್ಲಿ ಆಮಂತ್ರಣ ಪತ್ರಗಳನ್ನು ಹಂಚಲು ಏನಾದರೂ ಯೋಜನೆ ಮಾಡುವಂತೆ ಮಾರೀಯಾಗೆ ಕುಟುಂಬದವರು ಹೇಳಿದರು. ಅವಳು ಯಾವ ಯೋಜನೆ ಮಾಡಿದಳು?

ಮೊದಲು ಶಾಲೆಯ ಆಡಳಿತಾಧಿಕಾರಿಗಳ ಬಳಿ ಹೋಗಿ ಒಂದು ಆಮಂತ್ರಣವನ್ನು ಶಾಲೆಯ ಮುಖ್ಯ ಪ್ರವೇಶದ್ವಾರದ ಬಳಿ ಅಂಟಿಸಲು ಅನುಮತಿ ಕೋರಿದಳು. ಅವರು ಅನುಮತಿ ಕೊಟ್ಟದ್ದು ಮಾತ್ರವಲ್ಲ ಅವಳು ಹಾಗೆ ಮಾಡಲು ಯೋಚಿಸಿದ್ದಕ್ಕಾಗಿ ಪ್ರಶಂಸಿಸಿದರು. ಅಷ್ಟೇ ಅಲ್ಲ, ಒಂದು ದಿನ ಬೆಳಗ್ಗೆ ಶಾಲೆಯ ಪ್ರಾಂಶುಪಾಲರು ಧ್ವನಿವರ್ಧಕದ ಮೂಲಕ ಇಡೀ ಶಾಲೆಗೆ ಈ ಆಮಂತ್ರಣದ ಕುರಿತು ಪ್ರಕಟನೆ ಮಾಡಿದರು!!

ಅನಂತರ ಮಾರೀಯಾ ಈಸಾಬೆಲ್‌ ಎಲ್ಲ ತರಗತಿಗಳಿಗೆ ಹೋಗಿ ಆಮಂತ್ರಣ ಕೊಡಲು ಅನುಮತಿ ಕೇಳಿದಳು. ಪ್ರತಿ ತರಗತಿಯಲ್ಲಿ ಅಧ್ಯಾಪಕರ ಅನುಮತಿ ಪಡೆದು ಮಪೂಚೀ ಜನಾಂಗಕ್ಕೆ ಸೇರಿದ ವಿದ್ಯಾರ್ಥಿಗಳು ಯಾರಿದ್ದಾರೆಂದು ಕೇಳಿದಳು. ಅವಳು ಹೇಳುವುದು: “ಮಪೂಚೀ ವಿದ್ಯಾರ್ಥಿಗಳು ಇಡೀ ಶಾಲೆಯಲ್ಲಿ ಹತ್ತೋ ಹದಿನೈದೋ ಮಂದಿ ಇರಬಹುದು ಅಂದುಕೊಂಡಿದ್ದೆ. ಆದರೆ ಅಲ್ಲಿ ನೋಡಿದ್ರೆ ನಾನು ನೆನಸಿದ್ದಕ್ಕಿಂತ ಎಷ್ಟೋ ಹೆಚ್ಚು ಮಂದಿ ಇದ್ದರು. ನಾನು ಒಟ್ಟು 150 ಆಮಂತ್ರಣ ಪತ್ರಗಳನ್ನು ಕೊಟ್ಟೆ!”

“ಯಾರೋ ದೊಡ್ಡವರು ಇರಬಹುದು ಎಂದುಕೊಂಡಿದ್ದರು”

ಶಾಲೆಯ ಮುಖ್ಯ ದ್ವಾರದ ಬಳಿ ಅಂಟಿಸಿದ್ದ ಆಮಂತ್ರಣ ಪತ್ರವನ್ನು ನೋಡಿ ಮಹಿಳೆಯೊಬ್ಬರು ಹೆಚ್ಚು ಮಾಹಿತಿ ಪಡೆಯಲು ಬಯಸಿದರು. ಅವರನ್ನು ಮಾರೀಯಾಳ ಹತ್ತಿರ ಕರೆತರಲಾಯಿತು. 10 ವರ್ಷದ ಈ ಪುಟ್ಟ ಹುಡುಗಿಯನ್ನು ಕಂಡು ಅವರಿಗೆ ಆಶ್ಚರ್ಯವೋ ಆಶ್ಚರ್ಯ! “ಯಾರೋ ದೊಡ್ಡವರು ಇರಬಹುದು ಎಂದು ಆ ಮಹಿಳೆ ಅಂದುಕೊಂಡಿದ್ದರು” ಎಂದು ನಗುತ್ತಾ ಹೇಳುತ್ತಾಳೆ ಮಾರೀಯಾ ಈಸಾಬೆಲ್‌. ಆಕೆಗೆ ಆಮಂತ್ರಣ ಪತ್ರ ಕೊಟ್ಟು ಸ್ವಲ್ಪ ವಿವರವನ್ನು ತಿಳಿಸಿದ ಬಳಿಕ ಮಾರೀಯಾ ಅವರ ವಿಳಾಸವನ್ನು ಪಡೆದುಕೊಂಡಳು. ದೇವರ ರಾಜ್ಯದ ಕುರಿತು ಹೆಚ್ಚು ತಿಳಿಸಲು ತಾನು ತನ್ನ ತಂದೆತಾಯಿ ಜೊತೆ ಬರುವುದಾಗಿ ಹೇಳಿದಳು. ಮಾಪೂಡೂಂಗೂನ್‌ ಭಾಷಾ ಕ್ಷೇತ್ರದಲ್ಲಿ ಸೇವೆ ಮಾಡುತ್ತಿದ್ದ ಪ್ರಚಾರಕರಿಗೆ ಕ್ರಿಸ್ತನ ಮರಣದ ಸ್ಮರಣೆಯ ದಿನ ಒಂದು ಆಶ್ಚರ್ಯ ಕಾದಿತ್ತು. ಈ ಮಹಿಳೆ ಹಾಗೂ ಇನ್ನೂ 26 ಮಂದಿ ಆಸಕ್ತ ಮಪೂಚೀ ಜನರು ಸ್ಮರಣೆಗೆ ಹಾಜರಾದರು. 20 ಮಂದಿ ಪ್ರಚಾರಕರಿದ್ದ ಆ ಗುಂಪು ಈಗ ಒಂದು ಸಭೆಯಾಗಿ ಹೆಚ್ಚು ಅಭಿವೃದ್ಧಿ ಕಾಣುತ್ತಿದೆ!

ನೀವು ಚಿಕ್ಕವರಾಗಿರಲಿ ದೊಡ್ಡವರಾಗಿರಲಿ ನೀವು ಸಹ ಮಾರೀಯಾ ಈಸಾಬೆಲ್‌ಳಂತೆಯೇ ಮಾಡಬಹುದಲ್ಲವೆ? ಕ್ರಿಸ್ತನ ಮರಣದ ಸ್ಮರಣೆಗೆ, ಸಾರ್ವಜನಿಕ ಭಾಷಣಕ್ಕೆ, ಜಿಲ್ಲಾ ಅಧಿವೇಶನಕ್ಕೆ ನಿಮ್ಮ ಸಹಪಾಠಿಗಳನ್ನು ಅಥವಾ ಸಹೋದ್ಯೋಗಿಗಳನ್ನು ಆಮಂತ್ರಿಸಲು ಮೊದಲ ಹೆಜ್ಜೆ ತಕ್ಕೊಳ್ಳಿ. ಹೀಗೆ ಮಾಡಿದವರ ಅನುಭವಗಳನ್ನು ನಮ್ಮ ಸಾಹಿತ್ಯದಲ್ಲಿ ಹುಡುಕಿ ಓದಿ. ನೀವು ಹೇಗೆ ಯೋಜನೆ ಮಾಡಬಹುದೆಂದು ಇದರಿಂದ ತಿಳಿದುಕೊಳ್ಳುವಿರಿ. ಧೈರ್ಯದಿಂದ ಮಾತಾಡಲು ಪವಿತ್ರಾತ್ಮ ಶಕ್ತಿ ಕೊಡುವಂತೆ ಯೆಹೋವನಲ್ಲಿ ಪ್ರಾರ್ಥಿಸಿ. (ಲೂಕ 11:13) ನಿಮ್ಮ ಉತ್ತಮ ಯೋಜನೆಗೆ ಉತ್ತಮ ಪ್ರತಿಫಲ ಸಿಗುವುದು. ಅದು ನಿಮಗೆ ಆಶ್ಚರ್ಯ ತರುವುದು ಮಾತ್ರವಲ್ಲ ಉತ್ತೇಜನವನ್ನೂ ತುಂಬುವುದು.

[ಪುಟ 32ರಲ್ಲಿರುವ ಚಿತ್ರ]

ಉತ್ತಮ ಯೋಜನೆಗೆ ಉತ್ತಮ ಪ್ರತಿಫಲ